ಕಾನನ – ಶಿಖರ ರೋದನ

ಲೇಖಕರು: ದಿನೇಶ್ ಹೊಳ್ಳ

ಭೂಕುಸಿತ ಆಗದಂತೆ ತಡೆಯುವುದು ಹೇಗೆ ? ಎಂದು ಪ್ರತೀ ವರುಷ ಭೂಕುಸಿತ ಆದಾಗ ಪ್ರಶ್ನೆಗಳು ಹುಟ್ಟುತ್ತವೆ. ಉತ್ತರ ಕೆಳುವಷ್ಟರಲ್ಲಿ ದುರಂತ ಮುಗಿದು ಹೋಗಿರುತ್ತದೆ. ಉತ್ತರದ ಬಗ್ಗೆ ನಮ್ಮ ಜನ ಪ್ರತಿನಿಧಿಗಳು ಆಸಕ್ತಿ ವಹಿಸುವುದಿಲ್ಲ, ಜನರಿಗೂ ಆಸಕ್ತಿ ಇದ್ದಂಗಿಲ್ಲ, ಭೂಕುಸಿತ, ಜಲ ಪ್ರವಾಹ ಆದ ಸಂತ್ರಸ್ಥ ರೇ ಸುಮ್ಮನಿರುತ್ತಾರೆ ಅಂದ ಮೇಲೆ ಉತ್ತರ ಯಾರಿಗೆ ಬೇಕು ? ಪ್ರಶ್ನೆ…ಪ್ರಶ್ನೆ ಆಗಿಯೇ ಉಳಿಯುತ್ತವೆ.


ಭೂಕುಸಿತ ಆಗದಂತೆ ಒಂದೇ ಪರಿಹಾರ. ಅದೇನೆಂದರೆ ಪಶ್ಚಿಮ ಘಟ್ಟದ ನದೀಮೂಲದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಇರುವ ಮಳೆ ನೀರನ್ನು ಇಂಗಿಸಿಕೊಳ್ಳುವ ಹುಲ್ಲುಗಾವಲು ಪ್ರದೇಶವನ್ನು ಮತ್ತು ಮಳೆ ನೀರನ್ನು ಹಿಡಿದಿಟ್ಟು ಕೊಂಡು  ಶೇಖರಣೆ ಮಾಡಿ ನದಿಗಳಿಗೆ ವರ್ಷ ಪೂರ್ತಿ ನೀರು ಸರಬರಾಜು ಮಾಡುವ ಶೋಲಾ ಅಡವಿಯನ್ನು ಅದರ ಪಾಡಿಗೆ ಬಿಟ್ಟು ಬಿಡಲಿ, ಅಲ್ಲಿ ಯಾವುದೇ ಮಾನವ ಚಟುವಟಿಕೆಗಳಿಗೆ , ‘ ಅಭಿವೃದ್ದಿ ‘ ಎಂಬ ನೆಪದ ಅಸಂಬದ್ಧ ಯೋಜನೆಗಳಿಗೆ ಅವಕಾಶ ಕೊಡದೇ ಇದ್ದರೆ ಖಂಡಿತಾ ಭೂಕುಸಿತ, ಜಲ ಪ್ರವಾಹ, ಬರಗಾಲ, ಚಂಡ ಮಾರುತ ..ಇಂತಹ ಯಾವುದೇ ಪ್ರಾಕೃತಿಕ ದುರಂತಗಳು ಮಾಯವಾಗಿ ಬಿಡುತ್ತವೆ. ಪಶ್ಚಿಮ ಘಟ್ಟದ ಮೇಲ್ಮೈ ಪದರದ ಹುಲ್ಲುಗಾವಲು ಮನುಜರ ಶರೀರಕ್ಕೆ ಚರ್ಮ ಹೇಗೆ ರಕ್ಷಣೆ ಯೊ ಅದೇ ರೀತಿ ಹುಲ್ಲುಗಾವಲು ಪಶ್ಚಿಮ ಘಟ್ಟದ ಗಿರಿ, ಶಿಖರಗಳಿಗೆ ರಕ್ಷಣಾ ಹೊದಿಕೆ. ಮಳೆ ಗಾಲದಲ್ಲಿ ಈ ಹುಲ್ಲುಗಾವಲಿನ ಮೇಲೆ ಬಿದ್ದ ಮಳೆ ನೀರು ಮೇಲ್ಮೈ ಪದರದಲ್ಲಿ ಜಾರಿ ಕಣಿವೆ, ಕಂದರಗಳ ಕಡೆ ಹೋಗುತ್ತವೆ. ಒಳಮೈ ಪದರದಲ್ಲಿ ಅಂದರೆ ಬೆಟ್ಟಗಳ ಒಳಗೆ ಇರುವ ಜಲ ನಾಡಿಗಳಲ್ಲಿ ಇಳಿದು ಶೋಲಾ ಅಡವಿಯ ಶಿಲಾ ಪದರಗಳ ಒಳಗೆ ಸೇರುತ್ತವೆ. ಇಲ್ಲಿ ಶೇಖರಣೆ ಆದ ನೀರು ಮನೆ ಮೇಲೆ ಇರುವ ಟ್ಯಾಂಕ್ ನಲ್ಲಿ ಶೇಖರಣೆ ಆದ ಹಾಗೆ. ಇಲ್ಲಿ ಶೇಖರಣೆ ಆದ ನೀರು ಮಳೆ ಕಡಿಮೆ ಆಗುತ್ತಿದ್ದಂತೆ ಹಂತ, ಹಂತವಾಗಿ ಅಂದ್ರೆ ಈ ಮಳೆಗಾಲ ಮುಗಿದು ಇನ್ನೊಂದು ಮಳೆ ಗಾಲ ಆರಂಭ ಆಗುವವರೆಗೆ ಹೊಳೆಗೆ ನೀರು ಸರಬರಾಜು ಮಾಡುತ್ತವೆ. ಈ ಹೊಳೆ ನೀರು ಸಾಗರ ಸಂಗಮ ಆಗಿ ಮತ್ತೆ ಮೋಡ, ಆವಿ ಆಗಿ ಮಳೆಯಾಗಿ ವಾಪಾಸು ಪಶ್ಚಿಮ ಘಟ್ಟ ಸೇರುತ್ತದೆ, ಇಲ್ಲಿ ವ್ಯರ್ಥ ನೀರು ಅಂತ ಯಾವುದೂ ಇಲ್ಲ ಎಲ್ಲಾ ಸಮರ್ಥ ನೀರು. ಇದು ಪಶ್ಚಿಮ ಘಟ್ಟದ ಒಂದು ಸೂಕ್ಷ್ಮ ಜೈವಿಕ ವ್ಯವಸ್ಥೆ ಮತ್ತು ನಿಸರ್ಗ ನಿಯಮ. ಈ ನಿಯಮದ ಮೇಲೆ ಹಕ್ಕು ಸಾಧಿಸಲು ಯಾರಿಗೂ ಅವಕಾಶ ಇಲ್ಲ. ಆದರೆ ಕಳೆದ 15 ವರ್ಷಗಳಿಂದ ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಮಾನವ ಹಸ್ತಕ್ಷೇಪ ಹೆಚ್ಚಾಗುತ್ತಾ ನಿಸರ್ಗ ವ್ಯವಸ್ಥೆಯನ್ನು ಕೆಡಿಸುತ್ತಾ ಬಂದಿರುವುದರಿಂದ ಈ ಭೂಕುಸಿತ, ಜಲ ಸ್ಫೋಟ, ಪ್ರವಾಹ, ಬರಗಾಲ …ಇತ್ಯಾದಿ ಆಗುತ್ತಾ ಇರುತ್ತವೆ.ಪಶ್ಚಿಮ ಘಟ್ಟದ ಈ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಒತ್ತುವರಿ, ಅಕ್ರಮ ರೆಸಾರ್ಟ್, ಜಲ ವಿದ್ಯುತ್ ಯೋಜನೆ, ಗಣಿಗಾರಿಕೆ…ಇಂತಹ ಪರಿಸರ ಮಾರಕ ಯೋಚನೆಗಳು ಹೆಚ್ಚಾಗುತ್ತಾ ಬಂದಾಗ ಪ್ರಕೃತಿ ಮಾತೆಯ ರೋದನ ಕೇಳುವವರಿಲ್ಲದೆ ಅದರ ಪ್ರತಿರೋಧ, ಪ್ರತೀಕಾರ… ಪರಿಣಾಮವೇ ಈ ದುರಂತಗಳು.ನದೀ ಮೂಲ ಇರುವ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರತೀ ಚಿಕ್ಕ ತೊರೆ, ಒರತೆ ಕೂಡಾ ತುಂಬಾ ಪ್ರಾಮುಖ್ಯ ವಾದದ್ದು.

ಅರಣ್ಯ ದ ಹುಲ್ಲು ಮತ್ತೆ ನೀರು ಇಂಗಿತ ಆಗುವ ಪ್ರದೇಶಗಳಲ್ಲಿ ಕೃತಕ ತೋಡು, ಸಹಜ ನೀರ ಹರಿವಿನ ಬಲಾತ್ಕಾರದ ಬದಲಾವಣೆ, ರಸ್ತೆ, ಕಟ್ಟಡ, ಕಾಂಕ್ರೀಟು, ಮಣ್ಣಿನ ಸವಕಳಿ, ಹುಲ್ಲು, ಮಳೆಕಾಡಿನ ಮೇಲೆ ನಿರಂತರ ಕಾಡ್ಗಿಚ್ಚು, ಎತ್ತಿನ ಹೊಳೆ ಬಲವಂತದ ತಿರುವು ಯೋಜನೆ, ಎತ್ತಿನ ಹೊಳೆ ಯೋಜನೆಯ ವ್ಯಾಪ್ತಿ ಪ್ರದೇಶದಲ್ಲಿ ಬೆಟ್ಟ ಕೊರೆದು, ಡೈನಮೈಟ್ ಸಿಡಿಸಿ ಛಿದ್ರ ಗೊಳಿಸಿದ್ದು….ಇವೆಲ್ಲಾ ಕಾರಣದಿಂದ ಹುಲ್ಲುಗಾವಲು ಒಳಗೆ ಇರುವ ಜಲನಾಡಿಗಳಲ್ಲಿ ಸಹಜ ನೀರು ಹರಿಯದೇ ಅದರ ಧಾರಣಾ ಶಕ್ತಿಗಿಂತ ಹೆಚ್ಚು ನೀರು ಜೊತೆಗೆ ಕಲ್ಲು, ಮಣ್ಣು, ಕೆಸರು ರಾಡಿ ತುಂಬಿದಾಗ ಜಲ ನಾಡಿಗಳು ಸ್ಫೋಟ ಗೊಳ್ಳುತ್ತವೇ, ಆಗ ಬೆಟ್ಟ ಒಡೆದು ನೀರಿನ ಅಲೆ ಸುನಾಮಿ ಅಲೆಯಂತೆ ಶೋಲಾ ಅರಣ್ಯದ ಮೇಲೆ ಧುಮುಕಿ ದಾಗ ಅಡವಿಯ ಬ್ರಹತ್ ಮರ, ಗಿಡ, ಕಲ್ಲು, ಮಣ್ಣು ತನ್ನ ತೀರ್ವ ವೇಗ ದಲ್ಲೀ ಕೆಳಗಡೆ ಸುರಿದಾಗ ಭೂಕುಸಿತ ಉಂಟಾಗುತ್ತದೆ. ಇಂತಹ ದುರಂತಗಳು ಆದಾಗ ಭೂಗರ್ಭ ಇಲಾಖೆಯಿಂದ ಒಂದು ಸಮರ್ಪಕ ಅಧ್ಯಯನ ವರದಿ ಆಗಿ ಸಮೀಕ್ಷೆ, ತನಿಖೆ ಆಗಿ ಮುಂದೆ ಈ ರೀತಿ ಆಗದಂತೆ ಕಾನೂನು ಕ್ರಮ ಕೈ ಗೊಳ್ಳಬೇಕು. ಆರಂಭದಲ್ಲಿ ಮಡಿಕೇರಿ ಭೂಕುಸಿತ ಆದಾಗ ‘ ಇನ್ನು ಮುಂದೆ ಅಡವಿ ಒಳಗೆ ಇರುವ ಪ್ರದೇಶದಲ್ಲಿ ಭೂ ಪರಿವರ್ತನೆ ಆಗಲು ರೀತಿ, ನಿಯಮಾವಳಿ ಬದಲಾವಣೆ ಅಂತ ಸರಕಾರದ ಆರ್ಡರ್ ಆಗಿತ್ತು ಆದರೆ ಕಾರ್ಯರೂಪಕ್ಕೆ ಬರಲೇ ಇಲ್ಲ. ಮತ್ತೆ ಮತ್ತೆ ಭೂಕುಸಿತ, ಪ್ರವಾಹ, ದುರಂತ…ಈ ರೀತಿ ಪದೇ ಪದೇ ಭೂಕುಸಿತ ಆದರೆ ಅಲ್ಲಿ ಉಗಮ ಆಗುವ ಹೊಳೆಗಳು ಕ್ರಮೇಣ ಬರಿದಾಗಿ ನೀರಿನ ಸಮಸ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು. ಅಂದರೆ ನೀರಿನ ಕ್ಯಾಚ್ ಮೆಂಟ್ ಪ್ರದೇಶ ಕಡಿಮೆ ಆಗುತ್ತಾ ಮಳೆ ನೀರನ್ನು ಹಿಡಿದಿಟ್ಟು ಕೊಳ್ಳುವ ಇಳುವರಿ ಪ್ರದೇಶ ಬರಿದಾಗಿ ಹೊಳೆ ಬದಕಲಾಗುತ್ತವೆ. ದುರಂತ ಆಗದಂತೆ ಯೆಚ್ಚರ ವಹಿಸಬೇಕಾದ ಜನ ಪ್ರತಿನಿಧಿಗಳು ಮತ್ತು ಜನತೆ ಮೌನವಾಗಿ ಇದ್ದಾರೆ ಎಂದರೆ ಇದಕೆ ಅಂತ್ಯ ವಿಲ್ಲ. ಜನಪ್ರತಿನಿಧಿ ಗಳಿಗೆ ಒಳಗೊಳಗೇ ಇಂತಹ ದುರಂತಗಳು ಕುಷಿಯೇ..ಯಾಕೆಂದರೆ ಪರಿಹಾರ ನೆಪದಲ್ಲಿ ಒಂದಷ್ಟು ಕೋಟಿ ಲೂಟಿ… !ಪಶ್ಚಿಮಘಟ್ಟ ಅಂದರೆ ದಕ್ಷಿಣ ಭಾರತದ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ. ಪಶ್ಚಿಮ ಘಟ್ಟದಿಂದ ನಾವೆಷ್ಟು ಉಪಯುಕ್ತತೆಯನ್ನು ಪಡೆದು ಕೊಂಡಿದ್ದೇವೆ..ಪಶ್ಚಿಮ ಘಟ್ಟ ನಾಶ ಆದರೆ ನಾವೆಷ್ಟು ತೊಂದರೆಗೆ ಒಳಗಾಗಬಹುದು ಎಂಬುದನ್ನು ಅರಿತು ಕೊಂಡು ನಮ್ಮ ಮಕ್ಕಳಿಗೂ ಇದರ ಜ್ಞಾನ ಹರಿಸಿಕೊಂಡು ಬದುಕು ಕಟ್ಟಿ ಕೊಂಡರೆ ಭವಿಷ್ಯದಲ್ಲಿ ಸ್ವಲ್ಪ ನೆಮ್ಮದಿಯ ದಿನಗಳನ್ನು ಕಳೆಯಬಹುದು. ಇನ್ನೂ ನಾವು ಮೌನವಾಗಿಯೇ ಇಂತಹ ದುರಂತಗಳನ್ನು ನೋಡುತ್ತಾ ಕುಳಿತುಕೊಂಡರೆ ಭವಿಷ್ಯದಲ್ಲಿ ಇನ್ನಷ್ಟು ಆಗಲಿರುವ ಪ್ರಾಕೃತಿಕ ದುರಂತಗಳಿಗೆ ನಾವೇ ಆಹ್ವಾನ ನೀಡಿ ಆಮಂತ್ರಿಸಿದಂತೆ ಆಗಬಹುದು. ಯೋಚಿಸಬೇಕಾದದ್ದು ನಾವು.., ನೀವು…ಎಲ್ಲರೂ…

ಲೇಖಕರು: ದಿನೇಶ್ ಹೊಳ್ಳ.

Leave a Reply

Your email address will not be published. Required fields are marked *

error: Content is protected !!