“ನನ್ನ ಸ್ನೇಹಿತ ಸ್ನೇಹ ಜೀವಿ, ಅವರ ಮರಣ ನಮ್ಮನ್ನು ಕಂಗೆಡಿಸಿದೆ ” ಫುರ್ಟಾಡೋ ಗೆಳೆಯರ ಕಣ್ಣೀರು

ಲೇಖನ- ಸ್ಟೀವನ್ ಕುಲಾಸೊ , ಉದ್ಯಾವರ

(ಉಡುಪಿ ಟೈಮ್ಸ್ ವಿಶೇಷ ವರದಿ ) : “ನನ್ನ ಗೆಳೆಯ ಸ್ನೇಹ ಜೀವಿ, ಅನೇಕ ಗೆಳೆಯರ ಬಳಗ ಅವರ ಜೊತೆ ಇತ್ತು. ಸದಾ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ವ್ಯಕ್ತಿ.ಅವರ ಅಕಾಲಿಕ ದುರ್ಮರಣ ನಮ್ಮನ್ನು ಕಂಗೆಡಿಸಿದೆ” ಎಂದು, ಇಂದು ಬೆಳ್ಳಗೆ ಸಾಸ್ತಾನ ಬೇಕರಿ ತಿನಿಸು ತಯಾರಿಸುವ ಓವನ್ ಸ್ಪೋಟದಲ್ಲಿ ದಾರುಣ ಮರಣವನ್ನಪ್ಪಿದ್ದ ರುಚಿ ಪ್ರೊಡಕ್ಟ್ಸ್ ಇದರ ಮಾಲಿಕ ರೋಬರ್ಟ್ ಫುಟಾರ್ಡೋ (58) ಅವರ ಅಪ್ತ ಸ್ನೇಹಿತ ಜೊಸ್ಸಿ ಬಾಂಜ್ ತಮ್ಮ ನೋವನ್ನು ‘ಉಡುಪಿ ಟೈಮ್ಸ್‘ ಜೊತೆ   ಹಂಚಿಕೊಂಡಿದ್ದಾರೆ.


ಇಂದು ಬೆಳ್ಳಗೆ ಸಾಸ್ತಾನದ ಮಾಬುಕಳ ಬಸ್ಸು ನಿಲ್ದಾಣ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ‘ಫುಟಾರ್ಡೋ ಫುಡ್ ಫ್ಯಾಕ್ಟರಿ’ಯಲ್ಲಿ ನಡೆದ ಬೇಕರಿ ತಿನಿಸು ತಯಾರಿಸುವ ಓವನ್ ಸ್ಪೋಟದಲ್ಲಿ ದಾರುಣವಾಗಿ ಮರಣವನಪ್ಪಿದ್ದ ರೋಬರ್ಟ್ ಫುಟಾರ್ಡೋ, ಅನೇಕ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡವರು. ತಮ್ಮ ಹಿರಿಯ ಸಹೋದರ ಬೇಕರಿ ಉತ್ಪನ್ನಗಳ ಕೆಲಸ ಮಾಡುತ್ತಿದ್ದುದರಿಂದ ಪ್ರೇರಣೆ ಪಡೆದ ರೋಬರ್ಟ್, ಸುಮಾರು 35 ವರ್ಷಗಳ ಹಿಂದೆ ‘ರುಚಿ ಪ್ರೊಡಕ್ಟ್ಸ್’ ಎಂಬ ಸಂಸ್ಥೆಯನ್ನ ಹುಟ್ಟು ಹಾಕಿದ್ದರು. ಬೇಕರಿ ಉತ್ಪನ್ನಗಳಿಗೆ ಹೆಸರು ವಾಸಿಯಾಗಿದ್ದ ಇವರ ಸಂಸ್ಥೆ ಉಡುಪಿ, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ ಹೀಗೆ ಅನೇಕ ಕಡೆಗಳಲ್ಲಿ ತಮ್ಮ ಬೇಕರಿ ಉತ್ಪನ್ನಗಳನ್ನು ಅಂಗಡಿ, ಮಾಲ್ ಗಳಲ್ಲಿ ಮಾರಾಟ ಮಾಡುತ್ತಿದ್ದರು. ಕೇಕ್, ಬಟರ್, ಬ್ರೆಡ್ ಸಹಿತ ಅನೇಕ ಬೇಕರಿ ಉತ್ಪನ್ನಗಳಿಗೆ ಹೆಸರುವಾಸಿಯಾಗಿದ್ದ ‘ರುಚಿ’ ಸಂಸ್ಥೆಯನ್ನು ಗ್ರಾಹಕರ ಮೆಚ್ಚುಗೆಗೆ ತರುವಲ್ಲಿ ರೋಬರ್ಟ್ ಪಾತ್ರ ಅತ್ಯಂತ ಹೆಚ್ಚು.

ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡವರು: ಸಂಘ ಸಂಸ್ಥೆಗಳ ಮೂಲಕ ಗುರುತಿಸಿಕೊಂಡ ರೋಬರ್ಟ್, ಚಿಕ್ಕದಿನಿಂದಲೇ ನಾಯಕತ್ವದ ಗುಣವುಳ್ಳವರು. ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ)ನ ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಅತ್ಯಂತ ಯಶಸ್ವಿಯಾಗಿ ಮುನ್ನೆಡೆಸಿದ ಕೀರ್ತಿ ಇವರದು. ಕೆಥೋಲಿಕ್ ಸಭಾ ಕುಂದಾಪುರ ವಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು,ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ‘ಅಮ್ಚೊ ಯುವಕ್’ ಪುಸ್ತಕದ ಸಂಪಾದಕರಾಗಿ ಯುವಕರ ಪ್ರೀತಿಗೆ ಪಾತ್ರರಾದ ಕೀರ್ತಿ ರೋಬರ್ಟ್ ರವರದು.  ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು ಇದರ ಸದಸ್ಯರಾಗಿ, ಲಯನ್ಸ್ ಪ್ರಾಂತೀಯ ಅಧ್ಯಕ್ಷರಾಗಿ ಮತ್ತು ವಿವಿಧ ಪ್ರಮುಖ ಹುದ್ದೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು ನಡೆಸುತ್ತಿರುವ ‘ಕಣ್ಣಿನ ಆಸ್ಪತ್ರೆ ಕೋಟಾ’ ಇದರ ಟ್ರಸ್ಟ್ ನ ಉತ್ಸಾಹಿ ಸದಸ್ಯರಾಗಿದ್ದರು. ಕವನ ಬರಹಗಾರರಾಗಿರುವ ಇವರು ಉತ್ತಮ ನಾಟಕಕಾರರು ಆಗಿದ್ದರು. ಇವರ ನಿರ್ದೇಶನದ “ಪರ್ದಾ ಪಾಟ್ಲಿ ಸುರಿ”, “ಪಾಶಾಂಚಿ ದೊರಿ” ಎಂಬ ನಾಟಕ ಕಲಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು ಮಾತ್ರವಲ್ಲದೆ ರಾಜ್ಯಮಟ್ಟದ ಕೊಂಕಣಿ ನಾಟಕ ಸ್ಪರ್ಧೆಯಲ್ಲೂ ನಾಟಕ ಪ್ರದರ್ಶಿಸಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು.

ಉಡುಪಿ ಜಿಲ್ಲಾ ಬೇಕರಿ ಉತ್ಪನ್ನಗಳ ಸಂಘ ಇದರ ಅಧ್ಯಕ್ಷರಾಗಿ, ಕರಾವಳಿ ಕ್ರಿಶ್ಚನ್ ಚೇಂಬರ್ ಇದರ ಪದಾಧಿಕಾರಿ ಮಾತ್ರವಲ್ಲದೆ, ಸಂತ ಅಂತೋನಿ ದೇವಾಲಯ ಸಾಸ್ತಾನ ಇದರ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಹಿತ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ಮುನ್ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಐಸಿವೈಎಂ ಸಾಸ್ತಾನ ಘಟಕದ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಸಲಹೆಗಾರರಾಗಿರುವ ರೋಬರ್ಟ್ ಯಶಸ್ವಿ ಸಂಘಟಕ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ, ಬಳಿಕ ಚೇತನ ಹೈಸ್ಕೂಲ್ ಎಸ್ಎಂಎಸ್ ಕಾಲೇಜು ಬ್ರಹ್ಮಾವರ ದಲ್ಲಿ ನಡೆಸಿ, ಬಿಎ ವಿದ್ಯಾಭ್ಯಾಸವನ್ನು ಪಿಪಿಸಿ ಕಾಲೇಜು ಉಡುಪಿಯಲ್ಲಿ ನಡೆಸಿದ್ದರು. ಜೊತೆಗೆ ಮಾಸ್ಟರ್ ಡಿಗ್ರಿ ಇನ್ ಧಾರವಾಡ ಇನ್ಸಿಟ್ಯೂಟ್ ಮುಗಿಸಿದ್ದಾರೆ.


 ದಿ. ಆ್ಯಂಟನಿ ಮತ್ತು ದಿ. ರೆಮೀಡಿಯಾ ಪುರ್ಟಾಡೊ ರವರ ಎಂಟು ಮಕ್ಕಳಲ್ಲಿ, 5ನೆಯವರಾಗಿರುವ ಇವರು, ಶಿಕ್ಷಕಿಯಾಗಿ ಪ್ರಸ್ತುತ ಸೇವಾ ನಿವೃತ್ತಿ ಪಡೆದಿರುವ ಪತ್ನಿ ಪ್ರಮೀಳಾ ಫುರ್ಟಾಡೋ ರವರನ್ನು ದಾಂಪತ್ಯ ಜೀವನದಲ್ಲಿ ಸ್ವೀಕರಿಸಿದ್ದರು. 3 ಹೆಣ್ಣು ಮಕ್ಕಳಲ್ಲಿ ಪ್ರಥಮ ಪುತ್ರಿ ರಶ್ಮಿ ವಿದೇಶದಲ್ಲಿದ್ದು, ದ್ವಿತೀಯ ಪುತ್ರಿ ಡಾ. ರೋಶ್ನಿ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂರನೇ ಮಗಳು ರವೀನಾ ಇತ್ತೀಚೆಗಷ್ಟೇ ಎಂ.ಬಿ.ಎ.ಮುಗಿಸಿದ್ದಾರೆ.


ರೋಬೋರ್ಟ್ ಪುರ್ಟಾಡೊ ಅವರು ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇಂದು ಬೆಳಿಗ್ಗೆ ತನ್ನ ಉದ್ಯಮವನ್ನು ಆರಂಭಿಸುವ ಸಮಯದಲ್ಲಿ ಓವೆನ್ ಸ್ಫೋಟದಲ್ಲಿ ದುರ್ಮರಣಕ್ಕೀಡಾಗಿರುವ ರೋಬರ್ಟ್, ಅಪಾರ ಸ್ನೇಹಿತರು ಮತ್ತು ಬಂಧು ಬಳಗದವರನ್ನು ಆಗಲಿದ್ದಾರೆ.

ಲೇಖನ- ಸ್ಟೀವನ್ ಕುಲಾಸೊ , ಉದ್ಯಾವರ

Leave a Reply

Your email address will not be published. Required fields are marked *

error: Content is protected !!