ರಾಮಜನ್ಮ ಭೂಮಿಯಿಂದ ರಾಮರಾಜ್ಯದೆಡೆಗೆ ಸಾಗಲಿ ಭಾರತ

ಲೇಖಕರುಶ್ರೀ ರಾಜ್ ಗುಡಿ

(ಉಡುಪಿ ಟೈಮ್ಸ್ ವಿಶೇಷ ಲೇಖನ) ಸ್ವತಂತ್ರ ಭಾರತದ ಇತಿಹಾಸದಲ್ಲಿ ಸೊಮನಾಥ ಹಾಗು ವಿವೇಕಾನಂದ ಸ್ಮಾರಕ ಗಳ ನಂತರ ಅತಿ ದೊಡ್ಡ ರಾಜಕೀಯ, ಸಾಮಾಜಿಕ ಬದಲಾವಣೆಗೆ ಕಾರಣವಾದ ರಾಮ ಜನ್ಮ ಭೂಮಿ ಯಲ್ಲಿ ರಾಮ ಲಲ್ಲಾ ನ ದೇವಾಲಯಕ್ಕೆ ಇಂದು ಭೂಮಿ ಪೂಜೆ. ಭಾರತ ಸ್ವತಂತ್ರ ಆಗುವುದಕ್ಕೆ ಮುಂಚಿನಿಂದಲೂ ರಾಮ ಲಲ್ಲಾ ಮತ್ತು ಅಲ್ಲಾ ನಡುವಿನ ವಿವಾದ, ಕಳೆದ 7 ದಶಕ ಗಳಲ್ಲಿ ರಾಜಕೀಯದ ಏಳು ಬೀಳು ಗಳಿಗೆ ಕಾರಣವಾಗಿದ್ದು ಸುಳ್ಳಲ್ಲ.

ಅಫಘಾನಿಸ್ತಾನದಿಂದ ಬಂದ ಲೂಟಿಕೋರ ಘಜ್ಣಿ ಮಹಮ್ಮದ್ ದಾಳಿಯಿಂದ ನಾಶವಾಗಿದ್ದ ಸೋಮನಾಥ ನ ಶಿವ ಮಂದಿರದ ಮರು ನಿರ್ಮಾಣ ನೆಹರು ಕ್ಯಾಬಿನೆಟ್ ನ ನಿರ್ಧಾರ ದಿಂದ ಸಾಧ್ಯವಾದರೆ, ಅಯೋಧ್ಯೆಗೆ ಸುದೀರ್ಘ ರಾಜನೀತಿಕ, ಸಾಮಾಜಿಕ ಹಾಗು ನ್ಯಾಯಾಲಯ ಗಳ ಹೋರಾಟ ಅನಿವಾರ್ಯ ವಾಯಿತು.

ರಾಷ್ಟ್ರಿಯ ಸ್ವಯಂಸೇವಕ ಸಂಘದ ಆಗಿನ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್ ಮಾರ್ಗದರ್ಶನದಲ್ಲಿ ವಿಶ್ವ ಹಿಂದೂ ಪರಿಷತ್ ಅಶೋಕ್ ಸಿಂಘಾಲ್ ನೇತೃತ್ವದಲ್ಲಿ ಸಾಮಾಜಿಕ ಹೋರಾಟ ಹಾಗು ಅಡ್ವಾಣಿ ನೇತೃತ್ವದಲ್ಲಿ ರಾಜಕೀಯ ಹೋರಾಟ ಆರಂಭವಾದವು

ರಾಮಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣ ದ ಆರಂಭ, ಇವತ್ತು ರಾಜಕೀಯ ಹಾಗು ವ್ಯಕ್ತಿಗತ ಜೀವನದ ವಾನಪ್ರಸ್ಥದಲ್ಲಿ ಇರುವ ಅಡ್ವಾಣಿ ಅವರ ಮಹತ್ವದ ಗೆಲವು. ತಮ್ಮ 62 ನೇ ವಯಸ್ಸಿಗೆ 10,000 ಕಿ. ಮೀ ಯಾತ್ರೆ ಮಾಡಿ ದೇಶದ ಉದ್ದಗಲಕ್ಕೂ ನವ ರಾಜಕೀಯ ಭಾಷ್ಯ ಬರೆದ ಅಡ್ವಾಣಿ, ಸಾಧನೆ ಸಣ್ಣದಲ್ಲ. ಮೋದಿ ಅಲೆಯಲ್ಲಿ ತೇಲುತ್ತಿರುವ ಇವತ್ತಿನ ಭಕ್ತ ಗಣ ನೆನಪಿಸಿಕೊಳ್ಳಬೇಕಾದ ಸಂಗತಿಯೆಂದರೆ, ಸೋಮನಾಥ ದಿಂದ ಹೊರಟ ಅಡ್ವಾಣಿ ಅವರ ರಾಮ ರಥಯಾತ್ರೆ ಪರಿಣಾಮವೇ ಇವತ್ತು ಬಿಜೆಪಿ ದೇಶದ ಅಧಿಕಾರದ ಕೇಂದ್ರ ಬಿಂದುವಾಗಿ ಹೊರಹೊಮ್ಮಿರುವುದು. “ಸೌಗಂಧ ರಾಮ ಕಿ ಖಾತೆ ಹೆ, ಮಂದಿರ ವಹಿ ಬನಾಯೆಂಗೆ”, ಎನ್ನುವ ಅಡ್ವಾಣಿ ಅವರ ಘೋಷಣೆ ದೇಶದ ಚಿತ್ರಣ ವನ್ನೇ ಬದಲಾಯಿಸಿತು. ಕಾಂಗ್ರೆಸ್ ಮತ್ತು ಎಡ ಪಂಥೀಯ ವಿಚಾರವಾದಿಗಳನ್ನು ಈ ಚಳುವಳಿ ಮೂಲೆಗೆ ನೂಕಿದ್ದು ಮಾತ್ರವಲ್ಲದೇ, ಈಗ ತಮ್ಮ ಅಸ್ತಿತ್ವಕ್ಕೆ ಹೆಣಗಾಡುವಂತೆ ಮಾಡಿದೆ.

ದೇಶದ ಜನ ಮಾನಸ ಆಶಯವನ್ನು ಅರ್ಥ ಮಾಡಿಕೊಳ್ಳದೇ, ಜನಹಿತದ ರಾಜಕಾರಣ ಸಾಧ್ಯವಿಲ್ಲ, ಆದರೆ ಇವತ್ತಿಗೂ ಕಾಂಗ್ರೆಸ್ ಮತ್ತು ಅದರ ಛತ್ರಛಾಯೆ ಅಡಿಯಲ್ಲಿ ದಿನಕಳೆಯುತ್ತಿರುವ ಚಿಂತಕರಿಗೆ ಇದು ನಾಟಲೇ ಇಲ್ಲ. ಅಡ್ವಾಣಿ ಅವರ ರಥಯಾತ್ರೆ ಹಿಂದುತ್ವದ ಅಡಿಯಲ್ಲಿ ರಾಜಕೀಯ ಧ್ರುವಿಕರಣಕ್ಕೆ ನಾಂದಿ ಹಾಡಿದ್ದಾದರೆ, ಪ್ರಗತಿ ಶೀಲರು ರಾಮನ ಅಸ್ತಿತ್ವವನ್ನೆ ಪ್ರಶ್ನಿಸುತ್ತಾ ಕುಳಿತು ಸಮಾಜದ ಮೂಲ ನೆಲೆಯಿಂದ ದೂರ ಸರಿಯುತ್ತಾ ಹೋದರು.

ಆದರೆ ಇಡಿ ಈ ವಿವಾದದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಪಿ.ವಿ.ನರಸಿಂಹ ರಾವ್ ಪಾತ್ರ ಕೂಡ ಅಷ್ಟೆ ಮಹತ್ವವೆನಿಸುತ್ತದೆ. ರಾಮ ಜನ್ಮಸ್ಥಾನದಲ್ಲಿ ಶಿಲ್ಯಾನ್ಯಾಸಕ್ಕೆ ಅವಕಾಶ ಕಲ್ಪಿಸಿದ ರಾಜೀವ್, ತಮ್ಮ ಚುನಾವಣೆಯ ಪಾಂಚಜನ್ಯವನ್ನು ಅಯೋಧ್ಯೆ ಯಿಂದ ಊದುವ ಇರಾದೆ ಇದ್ದುರೂ, ಪ್ರಗತಿಶೀಲ ಸ್ನೇಹಿತರ ಮಾತಿಗೆ ಕಟ್ಟುಬಿದ್ದು, ಹಿಂದೆ ಸರಿಯುವಂತಾಯಿತು.


ಹಿಂದು ಮತ ರಾಜಕಾರಣಕ್ಕೆ ತಡೆ ಒಡ್ಡುವ ಮಹತ್ವದ ಅವಕಾಶವನ್ನು ಕಾಂಗ್ರೆಸ್ ಕೈ ಚಲ್ಲಿತು. 1992 ರಲ್ಲಿ ವಿವಾದಿತ ಕಟ್ಟಡ ಉರುಳುವ ಸಮಯದಲ್ಲೂ ತಡೆಯುವ ಅವಕಾಶಗಳು ಆಗಿನ ಪ್ರಧಾನಿ ನರಸಿಂಹ ರಾವ್ ಮುಂದೆ ಇತ್ತಾದರೂ, ರಾಮಭಕ್ತಿ ಅದೆನ್ನಲ್ಲವನ್ನೂ ದೂರ ಸರಿಸುವಂತೆ ಮಾಡಿದ್ದು ಮಾತ್ರ ಇತಿಹಾಸ. ಆದರೆ ಅದಾಗಲೇ ಕಾಂಗ್ರೆಸ್ ರಾಮ ಭಕ್ತ ರ ಅಲೆಯಲ್ಲಿ ಕೊಚ್ಚಿ ಹೋಗಿಯಾಗಿತ್ತು, ಬಿಜೆಪಿ ದೆಹಲಿ ದರ್ಬಾರನ ಬಾಗಿಲಲ್ಲಿ ರಾಮಲಲ್ಲಾ ನೊಂದಿಗೆ ಬಂದು ನಿಂತಿತ್ತು. ಇಷ್ಟೆಲ್ಲಾ ಆದರೂ, ಅದೇಕೋ ರಾಮಲಲ್ಲಾ, ತನ್ನ ಮಂದಿರಕ್ಕೆ ಹೋರಾಡಿದ ಛಲದಂಕ ಮಲ್ಲ ಅಡ್ವಾಣಿಗೆ ಕೃಪೆ ತೋರಲೇ ಇಲ್ಲ.


ರಾಮಜನ್ಮ ಭೂಮಿ ಆಂದೋಲನದ ನಾಯಕತ್ವ ದಿಂದ ದೂರ ಉಳಿದಿದ್ದ ವಾಜಪೇಯಿ ಬಿಜೆಪಿ ಯ ಚಹರಾ ಆಗಿಬಿಟ್ಟರು. 1998 ರ ಚುನಾವಣೆ ನಂತರ ವಾಜಪೇಯಿ ಪ್ರಭಾವಲಯ ವಿಸ್ತಾರ ವಾದಂತೆ ರಾಜಕೀಯ ಅನಿವಾರ್ಯತೆ ಗೆ ರಾಮ ಕೂಡ ಬಿಜೆಪಿ ಯ ಷೋಕೆಸ್ ನ ಭಾಗವಾಗಿ ಹೋದ. ನ್ಯಾಯಾಲಯದ ಆದೇಶ ವೇ ಅಂತಿಮ ಎಂಬ ರಾಜಕೀಯ ಹೇಳಿಕೆ, ಸಂಘ ಪರಿವಾರ ಮತ್ತು ಬಿಜೆಪಿ ನಡುವೆ ಸಾಕಷ್ಟು ಅಂತರವನ್ನು ಸೃಷ್ಟಿಮಾಡಿತ್ತು. ವಿ.ಎಚ್.ಪಿ ನಾಯಕ ಅಶೋಕ್ ಸಿಂಘಲ್ ನೇರವಾಗಿ ವಾಜಪೇಯಿಗೆ ಕುರ್ಚಿ ಖಾಲಿಕರೋ ಎಂದು ಆಗಿತ್ತು. ! ವಿವಾದ ನ್ಯಾಯಾಲಯ ದ ಅಂಗಳದಲ್ಲಿ ಬಗೆ ಹರಿದಿದ್ದು ಕೂಡ ಒಂದು ರೀತಿಯಲ್ಲಿ ಒಳ್ಳೆಯದೇ. ಧಾರ್ಮಿಕ ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯ ಆಯ್ಕೆ ಕಷ್ಟವೇ.

ಯಾವುದೇ ಚಳುವಳಿ ಮಾಡುವ ಅತಿ ದೊಡ್ದ ಕೊಡುಗೆಯೆಂದರೆ ನಾಯಕತ್ವದ ಸೃಷ್ಟಿ. ರಥಯಾತ್ರೆ ಕೂಡ ಮೋದಿ, ಮಹಾಜನ್, ಕಲ್ಯಾಣ ಸಿಂಗ್, ವಿನಯ್ ಕಟಿಯಾರ್, ಅನಂತ ಕುಮಾರ್, ಉಮಾ ಭಾರತಿ, ಸಾದ್ವಿರಿತುಂಬರಾ, ತರಹದ ಯುವ ಪಡೆಯನ್ನೇ ಕಟ್ಟಿ ನಿಲ್ಲಿಸಿದ್ದು. ಆರಂಭದಲ್ಲಿ ಜನ ಸೇರುತ್ತಾರೋ ಇಲ್ಲವೂ ಯಾತ್ರೆಗೆ ಅನ್ನುವ ಅಡ್ವಾಣಿ ದುಗುಡವನ್ನ ದೂರ ಮಾಡಿದ್ದೇ ಮೋದಿ ಯ ಮೋಡಿ. ಸೂರತ್ ನ ಸಮಾವೇಶಕ್ಕೇ 50,000 ಕ್ಕೂ ಹೆಚ್ಚು ಜನ ಸೇರಿಸಿದ ಮೋದಿ ತಮ್ಮ ಸಾಮರ್ಥ್ಯವನ್ನು ತೊರಿಸಿದ್ದರು.

ರಾಮ ಜನ್ಮ ಭೂಮಿ ತನ್ನದೇ ವಿಶೇಷ ಕಾರಣಗಳಿಂದ ಕರಾವಳಿಗೆ ಹತ್ತಿರ ವಾಗಿದೆ. ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರು ನೇರ ಆಂದೋಲನದ ನೇತೃತ್ವ ವಹಿಸಿದ್ದರೆ, ರಾಮ ಜನ್ಮ ಭೂಮಿಯ ವಿವಾದಿತ ಕಟ್ಟಡದ ತಾಲಾ ಖೊಲೋ ಮತ್ತು ನಂತರ ನಿರ್ಮಾಣಕ್ಕೆ ಅನೂಕೂಲ ಮಾಡಿ ಕೊಡುವ ಎರಡು ಘೋಷಣೆ ಹೊರಟಿದ್ದು ಉಡುಪಿಯಿಂದನೇ. ಇದಲ್ಲದೇ ವಿವಾದ ಬಗೆ ಹರಿಸಿದ ಸುಪ್ರೀಂ ಕೋರ್ಟ್ ನ ಪಂಚ ನ್ಯಾಯಮೂರ್ತಿ ಗಳಲ್ಲಿ ಒಬ್ಬರಾದ ನ್ಯಾ. ಅಬ್ದುಲ್ ಅಜೀಜ್ ದ.ಕ ಜಿಲ್ಲೆಯವರು.


ಓಕೆ, ಈಗ ಮಂದಿರ ನಿರ್ಮಾಣ ಆರಂಭವಾಗಿದೆ, ಇನ್ನೂ ದೇಶ ಬೇರೆ ವಿಷಯ ಗಳನ್ನು ಗಮನಹರಿಸುವುದು ಒಳಿತು. ಹೇಗೆ ದೇಶದ ಅಸ್ಮಿತೆಯ ಪ್ರತೀಕ ಈ ಮಂದಿರ ಅನ್ನುವುದು ಸರಕಾರದ ನಂಬಿಕೆಯೋ ಅಷ್ಟೆ ಮುಖ್ಯವಾಗಿ ಸಾಮಾಜಿಕ ಸ್ಥಿತಿಯ ಸುಧಾರಣೆ ಕೂಡ ಹೌದು. ರಾಮ ರಾಜ್ಯ ಸಾಕಾರ ಆಗ ಬೇಕಾದರೆ ಅದು ಸುಭಿಕ್ಷೆಯ ರಾಜ್ಯವಾಗಬೇಕು. ಎಲ್ಲರಿಗೂ ಅವಕಾಶಗಳ ನಿರ್ಮಾಣ ಆಗಬೇಕು. ಆರ್ಥಿಕ ಪರಿಸ್ಥಿತಿಯ ಸುಧಾರಣೆ ಯಾಗಬೇಕು. ಆರೊಗ್ಯ, ಶಿಕ್ಷಣ, ಹಾಗು ಉದ್ಯೋಗ ಸೃಷ್ಟಿ ಧ್ಯೇಯವಾಗಬೇಕು. ರಾಮ ಓರ್ವ ಯಶಸ್ವಿ ಪುರುಷ ಮತ್ತು ಒಂದು ರೋಲ್ ಮೋಡೆಲ್, ಅದಕ್ಕೆ ಆತನನ್ನು ಮರ್ಯಾದ ಪುರುಷೋತ್ತಮ ಎನ್ನುವುದು. ಅಂದರೆ, ಒಬ್ಬ ನಾಯಕ ತನ್ನ ಜನತೆಗೆ ರೊಲ್ ಮಾಡೆಲ್ ಆಗಿರಬೇಕು. ಕಪಟಿ, ಭ್ರಷ್ಟ ಆಗಬಾರದು. ಆರೋಪಗಳು ಬಂದರೆ, ಕ್ಲೀನ್ ಆಗಿ ಹೊರಬರಬೇಕು, ಇದುವೇ ರಾಮನ ಆದರ್ಶ.

ಪ್ರತಿ ಗ್ರಾಮ ಒಂದು ತಪೋಭೂಮಿ ಆಗಬೇಕು, ಪ್ರತಿಬಾಲಕ/ ಬಾಲಕಿಯರು ದೇವರ ಪ್ರತಿರೂಪಗಳಾಗಿ, ಸಮಾನತೆಯನ್ನು ಸಾಧಿಸಿದಾಗ ರಾಮರಾಜ್ಯ ಸಾಧ್ಯ, ರಾಮ ಜನ್ಮಭೂಮಿಯಿಂದ ರಾಮಾರಾಜ್ಯದ ನಿರ್ಮಾಣದ ಸಂಕಲ್ಪ ಈ ದೇಶದ್ದಾಗಲಿ, ಆಗ ಭಾರತ ವಿಶ್ವಗುರು ಆಗಲು ಸಾಧ್ಯ, ಕೇವಲ ಪ್ರತೀಕ ಗಳ ನಿರ್ಮಾಣದಿಂದಲ್ಲ.

ಶ್ರೀ ರಾಜ್ ಗುಡಿ ಸಹಾಯಕ ಪ್ರಾದ್ಯಾಪಕರು, ಸ್ಕೂಲ್ ಆಫ್ ಕಮ್ಯುನಿಕೇಷನ್ ಮಣಿಪಾಲ

Leave a Reply

Your email address will not be published. Required fields are marked *

error: Content is protected !!