ಸದ್ವೃತ್ತ ಪಾಲನೆ ಈ ಕ್ಷಣದ ತುರ್ತು

ಡಾ.ಬುಡ್ನಾರು ವಿನಯಚಂದ್ರ ಶೆಟ್ಟಿ

ಲಾಭಾನಾಂ ಶ್ರೇಯಃ ಆರೋಗ್ಯಮ್:  ಹಿಂದೆಂದೂ ಕಂಡು ಕೇಳರಿಯದ ಭಯದ ಛಾಯೆಯಲ್ಲಿ ಜಗತ್ತು ನಲುಗುತ್ತಿದೆ. ದೂರದ ವುಹಾನ್ ನಗರದ ಹಸಿ ಮಾರುಕಟ್ಟೆಯ ಕೊಳಕು ಕ್ಷೇತ್ರದಲ್ಲಿ ಹುಟ್ಟಿ ಜಾಗತಿಕವಾಗಿ ವ್ಯಾಪಿಸುತ್ತಿರುವ ವೈರಾಣು ಮನುಕುಲದ ನಿದ್ದೆಗೆಡಿಸಿದ್ದು, ತಾನು ಬಲಿಪಡೆದ ಜನರ ಸಂಖ್ಯೆಯಿಂದ.ಕೊರೊನಾ ವೈರಾಣು ಹೊಸತಲ್ಲ ಆದರೆ ಈಗ ಸುಧಾರಿತ ಸಂರಚನೆಯಲ್ಲಿ ನೋವೆಲ್ ಕೊರೊನಾ ಎಂಬ ಕೋವಿಡ್-19 ಹೊಸ ರೂಪದಲ್ಲಿ ಬಲಿಷ್ಠವಾಗಿ ಹೊರಹೊಮ್ಮಿದೆ..

ವುಹಾನ್ ಮಾರುಕಟ್ಟೆ

‘ಪ್ರತ್ಯಕ್ಷಮಲ್ಪಮ್, ಅನಲ್ಪಮ್ ಅಪ್ರತ್ಯಕ್ಷಮ್’… ಪಾಂಚಭೌತಿಕ ಪ್ರಪಂಚದಲ್ಲಿ ಇಂದ್ರೀಯಜನ್ಯವಾಗಿರುವುದು ಸ್ವಲ್ಪ ಮಾತ್ರ, ಆದರೆ ಕಣ್ಣಿಗೆ ಕಾಣದ್ದು ಅಗಾಧ-ಅಗಣಿತ, ಅನೂಹ್ಯ-ಆಚಿಂತ್ಯ. ಇದಕ್ಕೆ ತಾಜಾ ಉದಾಹರಣೆ ಇಂದು ವಿಜೃಂಭಿಸುತ್ತಿರುವ ಕೊರೊನಾ. ಕಣ್ಣಿಗೆ ಕಾಣದ್ದು ಇಲ್ಲವೇ ಇಲ್ಲ ಎಂದು ವಿತ್ತಂಡವಾದ ಮಂಡಿಸುತ್ತಾ ಅಶೌಚ-ಅನೀತಿ ಬದುಕಿನಲ್ಲಿ ವಿಕೃತಾನಂದ ಹೊಂದುವ ನಾವು ನಮಗರಿವಿಲ್ಲದೆ ನಮ್ಮ ಉಳಿತಾಯ ಖಾತೆಯಲ್ಲಿ ಸಂಚಯವಾಗುವ ಕರ್ಮಫಲದ ಬಗ್ಗೆ ಮೂಢರಾಗಿರುತ್ತೇವೆ.


 ಸೋಂಕಿನ ಬಗ್ಗೆ, ಅದು ಹರಡುವ ಬಗ್ಗೆ ಈಗಾಗಲೇ ಉಂಟುಮಾಡಿದ ಹಾನಿ, ಹುಟ್ಟುಹಾಕಿದ ಭಯ,ತಡೆಗಟ್ಟುವ ವಿಧಿವಿಧಾನ,ಸರಕಾರ ತೆಗೆದುಕೊಂಡ ಉಪಕ್ರಮಗಳು.. ಹೀಗೆ ಎಲ್ಲವೂ ನಮ್ಮ ಮಾದ್ಯಮ ಮುಖದಲ್ಲಿ ಈಗಾಗಲೇ ಸಾಕಷ್ಟು ಹೊಮ್ಮಿದೆ. ಕೊರೊನಾ ಅಂದರೆ ಇದು;ಹೀಗೆ;ಪರಿಣಾಮ ಇಂಥದ್ದೇ; ವ್ಯಾಪಿಸುವ ಮಾಧ್ಯಮ ಈ ತೆರ;ಚಿಕಿತ್ಸಾ ಪರಿಕ್ರಮಗಳು, ಪರೀಕ್ಷಾ ವಿಧಿ ವಿಧಾನಗಳು…. ಎಲ್ಲವುಗಳ ಅರಿವು ನಮಗಾಗಿದೆ.

ಸೋಂಕಿನ ಬಗ್ಗೆ, ಅದು ಹರಡುವ ಬಗ್ಗೆ ಈಗಾಗಲೇ ಉಂಟುಮಾಡಿದ ಹಾನಿ, ಹುಟ್ಟುಹಾಕಿದ ಭಯ,ತಡೆಗಟ್ಟುವ ವಿಧಿವಿಧಾನ,ಸರಕಾರ ತೆಗೆದುಕೊಂಡ ಉಪಕ್ರಮಗಳು.. ಹೀಗೆ ಎಲ್ಲವೂ ನಮ್ಮ ಮಾದ್ಯಮ ಮುಖದಲ್ಲಿ ಈಗಾಗಲೇ ಸಾಕಷ್ಟು ಹೊಮ್ಮಿದೆ.

ಕೊರೊನಾ ಅಂದರೆ ಇದು; ಹೀಗೆ; ಪರಿಣಾಮ ಇಂಥದ್ದೇ; ವ್ಯಾಪಿಸುವ ಮಾಧ್ಯಮ ಈ ತೆರ; ಚಿಕಿತ್ಸಾ ಪರಿಕ್ರಮಗಳು, ಪರೀಕ್ಷಾ ವಿಧಿ ವಿಧಾನಗಳು…. ಎಲ್ಲವುಗಳ ಅರಿವು ಈ ಹೊತ್ತಿಗೆ ನಮಗಾಗಿದೆ.ಒಬ್ಬ ವೈದ್ಯಕೀಯ ವಿದ್ಯಾರ್ಥಿ ಕಲಿಯುವುದಕ್ಕಿಂತ ಹೆಚ್ಚಿನ ಜ್ಞಾನ ಕೊರೊನಾದ ಬಗ್ಗೆ ಜನಸಾಮಾನ್ಯರಲ್ಲಿ ಉಂಟಾಗಿದೆ.

ಚೋದ್ಯ ಎಂದರೆ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ ವರ್ತಿಸುತ್ತಿದ್ದೇವೆ.ಎಲ್ಲವೂ ಗೊತ್ತಿದ್ದೂ ಮೂರ್ಖರಂತೆ ವ್ಯವಹರಿಸತೊಡಗಿದ್ದೇವೆ. ನನಗೆ ಬರುವುದಿಲ್ಲ ಎನ್ನುವ ಉಡಾಫೆಯೋ, ನನಗೆ ರೋಗನಿರೋಧಕ ಶಕ್ತಿ ಹೆಚ್ಚಿದ್ದು ಏನೂ ಆಗುವುದಿಲ್ಲ ಎನ್ನುವ ಅಹಂಭಾವವೋ, ದೇವರು ತಯಾರು ಮಾಡಿದ ವೈರಸ್, ಅವನಿಗೆ ಗೊತ್ತು, ಯಾರನ್ನು ಕೊಂಡುಹೋಗಬೇಕೆನ್ನುವುದು ಎಂದೆನ್ನುವ ಮೌಢ್ಯವೋ, ಪಕ್ಕದ ನಾಡಿನಲ್ಲಾದ ಸರಣಿ ಸಾವಿನ ಮೆರವಣಿಗೆ ಕಂಡೂ ದಿವ್ಯ ನಿರ್ಲಕ್ಷವೋ, ವ್ಯಕ್ತಿಗತವಾಗಿ ರೂಢಿಸಿಕೊಂಡುಬಂದ ಉದಾಸೀನತೆಯ ಜಾಡ್ಯವೋ….ಇನ್ನೂ ಈ ಸಾಂಕ್ರಾಮಿಕ ಮಹಾಮಾರಿಯ ತೀವ್ರತೆಯ ಅರಿವು ನಮಗಾಗುತ್ತಿಲ್ಲ.


“ನಿದಾನ ಪರಿವರ್ಜನಮೇವ ಚಿಕಿತ್ಸಾ” ಎನ್ನುವ ಆಯುರ್ವೇದ, ವ್ಯಾಧಿಕಾರಕವಾದ ಕಾರಣವನ್ನು ದೂರವಿಡು, ಅದೇ ಚಿಕಿತ್ಸೆ ಎಂದಿದೆ. ಇಷ್ಟು ಸರಳ ಸುಲಭ ಪರಿಹಾರೋಪಾಯ ನಮ್ಮ ಕೈಯಲ್ಲಿರುವಾಗ ಕೊರೊನಾದ ಆಕ್ರಮಣದಿಂದ ಪಾರಾಗಬಹುದಲ್ಲವೇ?..
ಕೊರೊನಾ ಸೋಂಕು ಹರಡುವ ಹಲವು ಮಾದ್ಯಮಗಳಿಂದ ದೂರವಿರುವುದು, ಸಾಮಾಜಿಕಅಂತರ ಕಾಪಾಡುವುದು,ಸೋಂಕು ತಗಲಿದವರ ಸಂಪರ್ಕದಿಂದ ಅಂತರ ಕಾಯ್ದುಕೊಳ್ಳುವುದು, ಜನನಿಬಿಡ ಪ್ರದೇಶಗಳಲ್ಲಿ ವ್ಯವಹರಿಸುವುದನ್ನು ಬಿಡುವುದು,ವೈಯಕ್ತಿಕವಾಗಿ ಮಾಸ್ಕ್ ಉಪಯೋಗಿಸುವುದರ ಜೊತೆ ನಿರಂತರ ಶುಚಿತ್ವ ಕಾಪಿಟ್ಟುಕೊಳ್ಳುವುದು, ಮುಖ್ಯವಾಗಿ ಹಿತವೂ-ಪರಿಚಿತವೂ, ಕ್ಷೇಮವೂ-ಸೌಖ್ಯವೂ ಆದ ನಮ್ಮ ಮನೆಯಲ್ಲಿರುವುದು ಅಪೇಕ್ಷಣೀಯ ಮಾತ್ರವಲ್ಲ ತುರ್ತು ಅಗತ್ಯ.

ರೋಗದ ಪ್ರಭಾವ-ಪ್ರಸಾರದ ಕಾಲಾವಧಿಯವರೆಗೆ ನಮಗೆ ನಾವೇ ನಿಬಂಧನೆ ವಿಧಿಸಿಕೊಂಡು ನಮ್ಮನ್ನು ಹೊರ ಸಂಪರ್ಕಕ್ಕೆ ಒಡ್ಡದೆ,ಹೊರ ಸಂಪರ್ಕದಿಂದ ನಾವು ಬಳಲದೆ ಗ್ರಹವಿಶ್ರಾಂತದಲ್ಲಿರುವುದು ಅರ್ಧ ಯುದ್ಧ ಗೆದ್ದಂತೆ. ವೈರಾಣುಗಳಿಗೆ ತಮ್ಮದೇ ಆದ ಸಕ್ಷಮ ಜೀವಿತಾವಧಿ ಇದ್ದು ನಂತರ ತನ್ನಿಂತಾನೇ ತನ್ನೆಲ್ಲಾ ಪ್ರಭಾವ ಕಳೆದುಕೊಂಡು ನಾಶವಾಗುತ್ತದೆ.

ದಿನ-ಸಾಯಂ-ರಾತ್ರಿಚರ್ಯೆ, ಋತುಚರ್ಯೆ, ಆಹಾರ ವಿಧಿ ವಿಶೇಷಾಯತನ ,ಭಾಹ್ಯ-ಅಭ್ಯಂತರ ಶೌಚ, ವೇಗಧಾರಣ-ಉದೀರಣ,ಆಚಾರ ರಸಾಯನ,ಸದ್ವೃತ್ತ… ಹೀಗೆ ಭರತ ಖಂಡದ ಉದಾತ್ತ ಜೀವನ ಪದ್ದತಿ, ಆಚಾರ್ಯ ಪ್ರಣೀತ ವಿಧಿ-ನಿಷೇಧಗಳು ಇಂದು ಹೆಚ್ಚು ಹೆಚ್ಚು ಪ್ರಸ್ತುತವೆನಿಸುತ್ತಿದೆ. ನಾವು ನಮ್ಮ ಆರೋಗ್ಯದ ಜೊತೆಜೊತೆಗೆ ಸಾಮಾಜಿಕ ಮತ್ತು ಸಾಮುದಾಯಿಕ ಸ್ವಾಸ್ಥ್ಯವನ್ನು ಕಾಪಿಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ.ಸರಕಾರದ ಆದೇಶಗಳನ್ನು ಪಾಲಿಸೋಣ,ಮನೆಯಲ್ಲಿದ್ದು ಕ್ಷೀಪ್ರಗತಿಯಲ್ಲಿ ಪಸರಿಸುತ್ತಿರುವ ಕೊರೊನಾ ತಡೆಗಟ್ಟೋಣ, ಸಂದಿಗ್ದ ಕಾಲದಲ್ಲಿ ನಮ್ಮಿಂದಾದ ಸಹಾಯ ಮಾಡೋಣ,ವದಂತಿ-ಅತಿರಂಜಿತ ವಿಷಯಗಳಿಂದ ದೂರವಿರೋಣ, ವಾಸ್ತವದ ವಿದ್ಯಮಾನದಲ್ಲಿ ವಿಚಾರವಂತರಾಗಿ ಬದುಕೋಣ. ಶ್ರೀ ಧನ್ವಂತರಿಯ ಶ್ರೀರಕ್ಷೆಗಾಗಿ ಪ್ರಾರ್ಥಿಸೋಣ.

ಲೇಖಕರುಡಾ.ಬುಡ್ನಾರು ವಿನಯಚಂದ್ರ ಶೆಟ್ಟಿ,
ನಿರ್ದೇಶಕರು, ಕ್ಷೇಮಧಾಮ ಆಯುರ್ವೇದ ಆಸ್ಪತ್ರೆ, ಬ್ರಹ್ಮಾವರ,ಉಡುಪಿ

Leave a Reply

Your email address will not be published. Required fields are marked *

error: Content is protected !!