ಮುಂಜಾಗ್ರತೆಯೇ ಕೊರೋನಾ ನಿಯಂತ್ರಣಕ್ಕಿರುವ ಅತಿ ದೊಡ್ಡ ಮದ್ದು: ಇದು ‘ಉಡುಪಿ ಟೈಮ್ಸ್’ ಕಳಕಳಿ

ಉಡುಪಿ : (ಉಡುಪಿ ಟೈಮ್ಸ್ ವರದಿ) ಚೀನಾದಿಂದ ಆರಂಭವಾದ ಕೋರೊನ ವೈರಸ್ ಈಗ ವಿಶ್ವವನ್ನೇ ತಲ್ಲಣಗೊಳಿಸುತ್ತದೆ. ಹಂತ ಹಂತವಾಗಿ ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದ ಜನರನ್ನು ಕೊರೋನಾ ವೈರಸ್ ತನ್ನಡೆಗೆ ಸೆಳೆಯುತ್ತಿದೆ. ಚೀನಾ, ಇಟಲಿ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ ಏರುತ್ತಿದೆ. ಮೂರು ವಾರಗಳ ಹಿಂದೆ ಕೊರೋನ ವೈರಸ್ ಇದೀಗ ಭಾರತವನ್ನು ಕೂಡ ಪ್ರವೇಶಿಸಿದೆ. ಕೇಂದ್ರ ರಾಜ್ಯ ಸರಕಾರಗಳು, ವೈದ್ಯ ಲೋಕ ಮತ್ತು ಪೊಲೀಸ್ ಇಲಾಖೆ ವಿವಿಧ ಕಡೆಗಳಲ್ಲಿ ಕಡಿವಾಣ ಹಾಕಲು ಪ್ರಯತ್ನಿಸಿದರೂ, ದೇಶದ ಜನರ ಜೀವನದಲ್ಲಿ ಕೊರೋನಾ ವೈರಸ್ ಚೆಲ್ಲಾಟವಾಡುತ್ತಿದೆ.

ದಿನೇ ದಿನೇ ಸೋಂಕಿತರ ಪಟ್ಟಿ ಬೆಳೆಯುತ್ತಾ ಇದೆ. ದೇಶದ ಕೆಲವೊಂದು ರಾಜ್ಯಗಳು ಈಗಾಗಲೇ ಸಂಪೂರ್ಣವಾಗಿ ಲಾಕ್ ಡೌನ್ ಗೊಂಡಿದೆ. ಇದೀಗ ನಮ್ಮ ರಾಜ್ಯದ ಸರದಿ. ಕೆಲವು ದಿನಗಳಿಂದ ರಾಜ್ಯದ ಕೆಲವು ಜಿಲ್ಲೆಗಳು ಲಾಕ್ ಡೌನ್ ಗೊಂಡಿದ್ದರೆ, ಇದೀಗ ನಿನ್ನೆ ರಾತ್ರಿ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರ ಆದೇಶದಂತೆ ಇಂದಿನಿಂದಲೇ ರಾಜ್ಯ ಮಾರ್ಚ್ 31 ರವರೆಗೆ ಸಂಪೂರ್ಣವಾಗಿ ಲಾಕ್ ಡೌನ್ ಗೊಳ್ಳಲಿದೆ. ಜನರ ಬದುಕಿನ ನಡುವೆ ಚೆಲ್ಲಾಟ ಆಡುತ್ತಿರುವ ಕೊರೋನಾ ವೈರಸ್ ನಿಂದ ಬಚಾವಾಗಲು ರಾಜ್ಯ ಸರಕಾರ ಬಹಳಷ್ಟು ಪ್ರಯತ್ನ ಮಾಡುತ್ತಿದೆ. ಕೆಲವು ದಿನ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ ಭಾಗವಾಗುತ್ತದೆ. ಮಾತ್ರವಲ್ಲದೆ ಸಾವಿರಾರು ಕೋಟಿ ರಾಜ್ಯದ ಬೊಕ್ಕಸಕ್ಕೆ ನಷ್ಟವೂ ಆಗಲಿದೆ. ಕರೋನಾ ವೈರಸ್ ನಿಂದ ಬಚಾವಾಗಲು ರಾಜ್ಯ ತೆಗೆದುಕೊಂಡಿರುವ ಐತಿಹಾಸಿಕ ನಿರ್ಧಾರವಿದು.

ಆತ್ಮೀಯ ಓದುಗರೇ, ರಾಜ್ಯದ ಲಾಕ್ ಡೌನ್ ನಿಂದಾಗಿ ಜನರ ನೈಜ ಜೀವನದಲ್ಲಿ ಸ್ವಲ್ಪ ಕಷ್ಟವಾಗಬಹುದು. ಆದರೆ ಈ ನಿರ್ಧಾರ ರಾಜ್ಯದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ತೆಗೆದುಕೊಂಡಿದ್ದೆ ಹೋಗಿದ್ದಲ್ಲಿ, ರಾಜ್ಯಕ್ಕೆ ಮಾರಕ ಪೀಡೆಯಿಂದ ಬಹಳಷ್ಟು ನಷ್ಟವಾಗುತ್ತಿತ್ತು ಮತ್ತು ನೂರಾರು ಸಾವು ನೋವುಗಳಗುತ್ತಿತ್ತು. ಸಾಧ್ಯವಾದಷ್ಟು ಮನೆಯಲ್ಲಿ ಇರುವುದರಿಂದ ಈ ಮಾರಕ ಪೀಡೆಯಿಂದ ಬಚಾವಾಗಬಹುದು. ನಾಳೆಯ ನೆಮ್ಮದಿಯ ಜೀವನಕ್ಕಾಗಿ ಇಂದು ನಾವು ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಲೇ ಬೇಕಾಗಿದೆ. ಜನಸಂದಣಿಯಿಂದ ದೂರವಿದ್ದಷ್ಟು ನಮ್ಮ ನಾಳಿನ ಬದುಕಿಗೆ ಒಳ್ಳೆಯದಾಗಲಿದೆ. ಸೋಷಲ್ ಮಾಧ್ಯಮದಲ್ಲಿ ಬರುವಂತಹ ಸುಳ್ಳು ಸುದ್ದಿಗಳನ್ನು ನಂಬುವ ಬದಲು, ಅಧಿಕೃತ ಸುದ್ದಿಗಳನ್ನು ಮಾಧ್ಯಮದ ಮೂಲಕ ನಂಬುವ ಪ್ರಯತ್ನ ಮಾಡಿದರೆ ಸುಲಭವಾಗಬಹುದು.

ಭಟ್ಕಳ ಮೂಲದ ವ್ಯಕ್ತಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಸೋಂಕು ದೃಢಪಟ್ಟ ಬಳಿಕವಂತೂ ಅವಿಭಜಿತ ಜಿಲ್ಲೆಯಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಶಂಕಿತ ಸೋಂಕಿನ ಪಟ್ಟಿಯಲ್ಲಿದ್ದ ಹಲವಾರು ಮಂದಿ ತಮ್ಮ ಪರೀಕ್ಷಾ ವರದಿ ನೆಗೆಟಿವ್ ಎಂದ ಕೂಡಲೇ ಮನೆಯನ್ನು ಸೇರಿಯಾಗಿದೆ. ಇನ್ನೂ ಕೂಡ ಹಲವಾರು ಮಂದಿ ತಪಾಸಣೆಗೆ ಒಳಪಡುತ್ತಿದ್ದಾರೆ.

ಹಾಗಾದರೆ ನಾವು ಏನು ಮಾಡಬೇಕು ???

ರಾಜ್ಯ ಕೇಂದ್ರ ಮತ್ತು ಮಾಧ್ಯಮದ ಮೂಲಕ ಬಹಳಷ್ಟು ಮುಂಜಾಗೃತಾ ಕ್ರಮಗಳು ಬಂದರೂ ಕೂಡ, ಜನರು ಮಾತ್ರ ಮಾಸ್ಕ್ ಹಾಕದೆ ತಿರುಗಾಡುತ್ತಿರುವುದು ತೀರಾ ಕಳವಳಕಾರಿ ವಿಷಯವಾಗಿದೆ. ವೈದ್ಯ ಲೋಕದ ಇತ್ತೀಚಿನ ವರದಿಯ ಪ್ರಕಾರ ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿದಲ್ಲಿ ಮೇ ತಿಂಗಳೊಳಗೆ ದೇಶದಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಮಂದಿ ಮೃತಪಡುವ ಸಾಧ್ಯತೆ ಇದೆ.

ಕೊರೋನಾ ವೈರಸ್ ಯಾವ ರೀತಿ ಹೊರಡುತ್ತದೆ ಮತ್ತು ಅದನ್ನು ತಡೆಗಟ್ಟಲು ಏನು ಮಾಡಬೇಕು???

ವೈರಾಣು ದೇಹ ಪ್ರವೇಶಿಸಿದ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಕನಿಷ್ಠ 2 ರಿಂದ 14 ದಿನ ಬೇಕು. ಈ ಸಮಯದಲ್ಲಿ ವೈರಾಣು ಹರಡುವ ಸಾಧ್ಯತೆ ಕಡಿಮೆ. ರೋಗ ಲಕ್ಷಣಗಳು ಅರ್ಧ ದಿನ ಮೊದಲು ವೈರಾಣು ಹರಡಲು ಶುರುವಾಗುತ್ತದೆ. ಸೊಂಕಿತನ ಸಂಪರ್ಕದಿಂದ ದೂರ ಇರೋದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಈ ಸಮಯದಲ್ಲಿ ಅತಿ ಮುಖ್ಯ. ಕೋವಿಡ್ 19 ಸೋಂಕಿಗೆ ಇಷ್ಟರವರೆಗೆ ಮದ್ದನ್ನು ಕಂಡು ಹಿಡಿಯಲಾಗಿಲ್ಲ. ಈಗಾಗಲೇ ಸಂಶೋಧನೆಗಳು ಆರಂಭವಾಗಿದೆ. ಹೊಸ ವೈರಸ್ ಆಗಿರುವುದರಿಂದ ಔಷಧ ಸಂಶೋಧನೆ ಮಾಡಲು ಸ್ವಲ್ಪ ಸಮಯವೂ ಬೇಕಾಗಬಹುದು. ವೈದ್ಯರ ಮಾಹಿತಿ ಪ್ರಕಾರ 100 ಜನರಿಗೆ ರೋಗದ ಲಕ್ಷಣ ಕಾಣಿಸಿಕೊಂಡರೆ, 80 ರಷ್ಟು ಜನ ಚಿಕಿತ್ಸೆ ಇಲ್ಲದೆ ಗುಣಮುಖರಾಗುವ ಸಾಧ್ಯತೆ ಇದೆ. ಉಳಿದ 20% ಜನರಿಗೆ ಸಪೋರ್ಟಿವ್ ಟ್ರೀಟ್ಮೆಂಟ್ ಅಗತ್ಯವಾಗಿದೆ. ಸದ್ಯ ಆಸ್ಪತ್ರೆಗಳಲ್ಲಿ ಪರೀಕ್ಷೆ ಕಿಟ್ ಗಳ ಕೊರತೆಯಿದೆ. ಸಾಮೂಹಿಕವಾಗಿ ಹೋಗುವ ಬದಲು, ತುರ್ತು ಇದ್ದವರು ಮಾತ್ರ ಪರೀಕ್ಷೆಗೆ ತೆರಳಿ. ದೂರದ ಊರುಗಳಿಂದ ಪ್ರಯಾಣಿಸುವ ಬದಲು, ಇದ್ದ ಸ್ಥಳದಲ್ಲಿ ಸ್ವಚ್ಛತೆ ಮತ್ತು ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸರಕಾರ, ಪೊಲೀಸ್ ಇಲಾಖೆ, ವೈದ್ಯಲೋಕದ ಆದೇಶವನ್ನು ಪಾಲಿಸೋಣ. ಕೊರೋನಾ ಸೋಂಕು ನಾಲ್ಕು ಹಂತಗಳಲ್ಲಿ ಹರಡುತ್ತದೆ. ಸದ್ಯ ಭಾರತ ಎರಡು ಮತ್ತು ಮೂರನೇ ಹಂತದ ಮಧ್ಯದಲ್ಲಿದೆ.

ಕೊರೊನಾಗೆ ಅದರದ್ದೇ ಆದ ಲಕ್ಷಣಗಳಿಲ್ಲ.

ಸಾಮಾನ್ಯವಾಗಿ ಶೀತ ಜ್ವರ ಕೆಮ್ಮು ಉಸಿರಾಟದ ಸಮಸ್ಯೆ ಇದರ ಲಕ್ಷಣಗಳು. ರಕ್ತ ಮತ್ತು ಗಂಟಲ ದ್ರವ ಪರೀಕ್ಷೆಯಿಂದ ಸೋಂಕು ಪತ್ತೆ ಹಚ್ಚಬಹುದು. ಒಂದು ಮಾಹಿತಿಯ ಪ್ರಕಾರ ಕರೋನಾ ವೈರಸ್ ನೂರಾರು ವರ್ಷಗಳಿಂದಲೂ ಮನುಷ್ಯನನ್ನು ಬಾಧಿಸುತ್ತಲೇ ಬಂದಿದೆ. ಆದರೆ ಈಗ ಬಂದಿರುವುದು ನೊವೆಲ್ ಕೋರೋನ. ನೊವೆಲ್ ಕೊರೋನಾ ವೈರಸ್ ಇದೇ ಮೊದಲ ಬಾರಿಗೆ ಮನುಷ್ಯನ ದೇಹ ಪ್ರವೇಶಿಸಿದೆ. ಔಷಧವೂ ಕೂಡ ಸದ್ಯ ಇರದೇ ಇರುವುದರಿಂದ ವೈರಸ್ ವಿರುದ್ಧ ಹೋರಾಡುವ ಶಕ್ತಿ ಮನುಷ್ಯನಲ್ಲಿ ಇಲ್ಲವಾಗಿದೆ.


ಸೋಂಕು ತಗುಲಿದರೆ, ಸೋಂಕು ಇನ್ನೊಬ್ಬನಿಗೆ ಹೊರಡುವುದು ಖಂಡಿತ. ವಿದೇಶದಿಂದ ಬರುವವರು ಕಡ್ಡಾಯವಾಗಿ 14 ದಿನ ಮನೆಯಲ್ಲಿ ಇರಬೇಕು. ಸೋಂಕಿತ ಅವಧಿಯಲ್ಲಿ ಹೊರಗಡೆ ತಿರುಗಾಡಿದರೆ ನೂರಾರು ಜನರಿಗೆ ಸೋಂಕು ತಗಲುವ ಅಪಾಯ ಇದೆ. ಈ ಅವಧಿಯಲ್ಲಿ ಪ್ರಯಾಣವೂ ಕೂಡ ಅತಿ ಅಪಾಯಕಾರಿ. ಅದಕ್ಕಾಗಿ ಮಾಸ್ಕ್ ಧರಿಸಿರಿ. ಹೆಚ್ಚು ಬಿಸಿನೀರನ್ನು ಕುಡಿಯಿರಿ. ಆಗಾಗ ಕೈ ಕಾಲು ಮುಖವನ್ನು ಸಾಬೂನು ಹಾಕಿ ತೊಳೆಯುತ್ತಿರಿ.


ಸೋಂಕಿತ ಲಕ್ಷಣಗಳಿದ್ದರೆ ದಯವಿಟ್ಟು ಮನೆಯಲ್ಲಿರಿ. ಆತಂಕಕ್ಕೆ ಒಳಗಾಗಬೇಡಿ. ಧೈರ್ಯದಿಂದಿರಿ. ಹೆಚ್ಚು ಜನ ಸೇರುವ ಸ್ಥಳಗಳಿಗೆ ಹೋಗಬೇಡಿ. ನಮಗೆ ಅರಿವಿಲ್ಲದಂತೆ ಮಾಡುವ ಉಗುರು ಕಚ್ಚುವುದು, ಬಾಯಿ, ಮೂಗಿಗೆ ಬೆರಳು ಹಾಕುವ ಅಭ್ಯಾಸ ಬಿಟ್ಟು ಬಿಡಿ. ಸ್ವಲ್ಪ ಜ್ವರ, ಕೆಮ್ಮು, ಶೀತ ಬಂದ ಕೂಡಲೇ ಆಸ್ಪತ್ರೆಗಳಿಗೆ ಹೋಗಬೇಡಿ. ಕೊರೋನಾ ವೈರಸ್ ಇತರರಿಗೆ ಹರಡುವುದರಿಂದ ಈ ಸಮಯದಲ್ಲಿ ಅಪಾಯ ಹೆಚ್ಚಿರುತ್ತದೆ. ವೈರಸ್ ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಬಾಯಿ ಮೂಗಿನಿಂದ ಬರುವ ವೈರಾಣು ಕೆಲ ಸಮಯ ಗಾಳಿಯಲ್ಲಿ ಇರುವ ವೈರಾಣು, ಬಳಿಕ ನೆಲದ ಮೇಲೆ ಅಥವಾ ಅಕ್ಕಪಕ್ಕದ ವಸ್ತುಗಳ ಮೇಲೆ ಬೀಳುತ್ತದೆ. ಇದರಿಂದ ವೈರಸ್ ಇರುವ ವಸ್ತುಗಳನ್ನು ಸ್ಪರ್ಶಿಸಿ ಕಣ್ಣು ಮೂಗು ಬಾಯಿ ಮುಚ್ಚಿಕೊಂಡರೆ ಸೋಂಕು ತಗಲುವ ಸಾಧ್ಯತೆ ಇದೆ. ಕೊರೋನಾ ವೈರಸ್ ಕುರಿತು ಸೋಷಿಯಲ್ ಮಾಧ್ಯಮಗಳಲ್ಲಿ ವದಂತಿಗಳ ರಾಶಿಯೆ ಬರುತ್ತಿದೆ. ಸೋಂಕಿತ ವ್ಯಕ್ತಿ ನರಳಾಡುತ್ತಿರುವ ದೃಶ್ಯ, ಕರೋನಾ ವೈರಸ್ ಗೆ ಮದ್ದು ಔಷಧಿ ಹುಡುಕಿದ್ದಾರೆ ಎಂಬ ಸುಳ್ಳು ಸುದ್ದಿಗಳು ಸೋಶಿಯಲ್ ಮಾಧ್ಯಮದಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೂ ಹರಡುತ್ತಲೇ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕಾಗಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿ ಕೊಡದೆ ಇರುವುದು ಉತ್ತಮ. ಸುಳ್ಳು ಸುದ್ದಿಗಳನ್ನು ನಂಬುವ ಬದಲು, ಮುನ್ನೆಚ್ಚರಿಕಾ ಕ್ರಮವಾಗಿ ಮನೆಯಲ್ಲಿಯೇ ಸುರಕ್ಷಿತವಾಗಿರುವುದು ಅತಿ ಉತ್ತಮ.


ಕೆಮ್ಮುವಾಗ ಸೀನುವಾಗ ಆದಷ್ಟು ಕರವಸ್ತ್ರ ಉಪಯೋಗಿಸಿಕೊಳ್ಳಿ. ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಹಾಕಿ ತಮ್ಮ ಸುರಕ್ಷತೆಗಾಗಿ. ಹೊರಗಡೆ ಅನಗತ್ಯವಾಗಿ ತಿರುಗಾಡದೇ ಆದಷ್ಟು ಮನೆಯಲ್ಲಿ ಇರುವುದು ಒಳ್ಳೆಯದು. ಸ್ಯಾನಿಟೈಸರ್ ಅನ್ನು ಅತ್ಯವಶ್ಯವಾಗಿ ಬಳಸಿಕೊಳ್ಳಿ. ದಯವಿಟ್ಟು ಮನೆಯಲ್ಲಿ ನಿಮ್ಮ ಸಮಯವನ್ನ ಕಳೆಯಿರಿ. ಕಳೆದು ಹೋದ ದಿನಕ್ಕೆ ಚಿಂತಿಸಿ ಫಲವಿಲ್ಲವೆಂಬಂತೆ ಈಗ ನಾವು ಮಾಡುವ ನಿರ್ಲ್ಯಕ್ಷ ನಮ್ಮ ಜೀವಕ್ಕೆ ಕುತ್ತು ತರುವಂತೆ ಆಗದೆ ಇರಲಿ ಎಂಬುದು ಉಡುಪಿ ಟೈಮ್ಸ್ ನ ಕಳಕಳಿ.

ಉಡುಪಿ ಟೈಮ್ಸ್ ಸಂಪಾದಕೀಯ

Leave a Reply

Your email address will not be published. Required fields are marked *

error: Content is protected !!