ಮಹಾಮಾರಿ ಕೊರೋನಾ ವೈರಸ್ಸನ್ನು ನಾವೇ ಮನೆ ಬಾಗಿಲಿಗೆ ಕರೆತರಲು ಸಿದ್ಧಗೊಂಡಿದ್ದೇವೆಯೇ…?

ಪ್ರಸ್ತುತ ನಾವೆಲ್ಲರೂ ನೋಡುತ್ತಿರುವಾಗ ಎಲ್ಲರಿಗೂ ಹೀಗೆಯೇ ಅನಿಸುತ್ತಿದೆ… ಚೀನಾ ದೇಶದಲ್ಲಿ ಹೆಚ್ಚು ಕಮ್ಮಿ ಎರಡು ತಿಂಗಳುಗಳ ಹಿಂದೆ ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೋನಾ ವೈರಸ್ ಪ್ರತ್ಯಕ್ಷ ಗೊಂಡಿತು. ಕೇವಲ ಚೀನಾದ ಜನರನ್ನು ಮಾತ್ರವಲ್ಲದೇ ವಿಶ್ವವನ್ನೇ ತಲ್ಲಣಗೊಳಿಸಿದ್ದು ಈ ಮಹಾಮಾರಿ. ಚೀನಾ ದೇಶದಿಂದ ಹಿಡಿದು ಬಹುತೇಕ ನೂರಕ್ಕೂ ಅಧಿಕ ದೇಶಗಳಿಗೆ ವಿಸ್ತರಿಸಿರುವ ಈ ವೈರಸ್, ಬಹುತೇಕ ಮೂರು ವಾರಗಳ ಹಿಂದೆ ನಮ್ಮ ದೇಶಕ್ಕೂ ಕಾಲಿಟ್ಟಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕೋರೊನ ವೈರಸ್ ಸೋಂಕಿತರು ದಿನದಿನಕ್ಕೆ ಹೆಚ್ಚಾಗುತ್ತಿದ್ದು, ಬಹಳಷ್ಟು ಸಾವು ನೋವಾಗುತ್ತಿದೆ. ಇದೀಗ ಭಾರತದ ಸರದಿ.


ನಾವು ಮಾಡಿದ್ದನ್ನು ನಾವು ತಿನ್ನುತ್ತೇವೆ ಎಂದು ಹಿರಿಯರು ಹೇಳಿದ್ದನ್ನು ನಾವೆಲ್ಲರೂ ಕೇಳಿದ್ದೇವೆ. ಪ್ರಸ್ತುತ ಅದೇ ಮಾತು ಈಗ ಎಲ್ಲರ ಕಿವಿಯಲ್ಲೂ ಕೇಳಿಸುತ್ತಿರಬಹುದು. ಪ್ರಕೃತಿ ನಾಶವಾಗುತ್ತದೆ.. ನಾಶವಾಗುತ್ತದೆ, ಪ್ರಕೃತಿಗೆ ಭೂಮಾತೆಗೆ ಜನರಿಂದ ನೋವಾಗುತ್ತಿದೆ ಎಂದು ಹಲವಾರು ಬಾರಿ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕೇಳಿ ಕೇಳಿ ಸಾಕಾಗಿದೆ. ಆದರೆ ಯಾವತ್ತೂ ನಾವು ಇದನ್ನು ಸೀರಿಯಸ್ಸಾಗಿ ಕಿವಿಗೆ ಹಾಕಿಕೊಂಡಿರಲಿಲ್ಲ. ಜಾತಿ ಧರ್ಮ ರಾಜಕೀಯ ಪಕ್ಷಗಳ ಅಮಲು ನಮ್ಮೆಲ್ಲರ ಮನಸ್ಸಿನಲ್ಲಿ ವಿಷವೇರಿ ಆಗಿತ್ತು. ಮಾತೆತ್ತಿದ್ದರೆ ಸಾಕು ಅವನು ಆ ಜಾತಿ, ಇವನು ಈ ಜಾತಿ, ಮೇಲ್ಜಾತಿ ಕೀಳುಜಾತಿ, ಆ ರಾಜಕೀಯ ಪಕ್ಷ, ಈ ರಾಜಕೀಯ ಪಕ್ಷ ಎಂಬಂತೆ ನಾವು ಮಾತನಾಡುತ್ತಿದ್ದೆವು. (ಇದು ಯಾರಿಗೂ ವೈಯಕ್ತಿಕವಾಗಿ ಅಲ್ಲ. ವೈಯಕ್ತಿಕವಾಗಿ ತೆಗೆದುಕೊಳ್ಳದೆ, ಪ್ರಕೃತಿ ಮಾತೆಗೆ ಗೌರವ ಕೊಡುವುದರೊಂದಿಗೆ, ಈ ಮಹಾಮಾರಿಯನ್ನು ದೂರ ಸರಿಸೋಣ). ಆದರೆ ಹಲವಾರು ಬಾರಿ ಸಹಿಸಿಕೊಂಡಿರುವ ಭೂಮಾತೆ ಈಗ ಸಿಟ್ಟುಗೊಂಡಿದ್ದಾಳೆ. ವಿಶ್ವವನ್ನೇ ಮಹಾಮಾರಿಯಿಂದ ತಲ್ಲಣಗೊಳಿಸಿದ್ದಾಳೆ. ಭವಿಷ್ಯ, ನಾಳೆ ಏನಾಗುತ್ತದೆ, ನಾನೇ ಸೈತಾನನನ್ನು ಬಿಡಿಸುತ್ತೇನೆ, ಅದು ಮಾಡುತ್ತೇನೆ. ಇದು ಮಾಡುತ್ತೇನೆ ಎಂದ ಅವರೆಲ್ಲರೂ ಈಗ ಮೂಲೆ ಸೇರಿಕೊಂಡಿದ್ದಾರೆ. *ಕೋರೊನ ವೈರಸ್ ಬಂದ ಬಳಿಕ ದಿನೆ ದಿನೆ ಸಾವು ನೋವಿನ ಮತ್ತು ಸೋಂಕಿತರ ಲೆಕ್ಕಾಚಾರವಷ್ಟೇ ಬರುತ್ತಿದೆ.


ಚೀನಾ ಸಹಿತ ಹಲವಾರು ದೇಶಗಳಿಗೆ ಈ ವೈರಸ್ ಆಗಮನ ಗೊಂಡ ಬಳಿಕ ನಮ್ಮ ದೇಶ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ನಮಗೇನೂ ಆಗಲಾರದು.. ಅಥವಾ ಆ ವೈರಸ್ಸಿಗೆ ಮದ್ದು ಆದಷ್ಟು ಬೇಗ ಸಿಗುತ್ತದೆ ಎಂಬ ಭರವಸೆಯಿಂದ ಕಾಲ ಕಳೆಯುತ್ತಿದ್ದೆವು ಏನೋ.. ಆದರೆ ಸ್ವಲ್ಪ ತಡವಾದರೂ ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರಕಾರ ಎಲ್ಲ ಇಲಾಖೆಗಳು ಕೋರೊನ ವೈರಸ್ಸನ್ನು ಎದುರಿಸಲು ಸಿದ್ಧವಾಗಿದ್ದಾರೆ.
*ಹಾಗಾದರೆ ನಾವು ಮಾಡಬೇಕಾದದ್ದು ಏನು???*ಕೇಂದ್ರ ಸರಕಾರ ರಾಜ್ಯ ಸರಕಾರ ವಿವಿಧ ಇಲಾಖೆಗಳು ಕೋರೊನ ಎಂಬ ಮಹಾಮಾರಿಯನ್ನು ನಾಶ ಮಾಡಲು ಬಹಳಷ್ಟು ಪ್ರಯತ್ನವನ್ನು ಮಾಡುತ್ತಿದ್ದಾರೆ. ಇವರ ಪ್ರಯತ್ನಕ್ಕೆ ನಾವು ಕೈ ಜೋಡಿಸ ಬೇಕು. ಇಲ್ಲದೇ ಹೋದರೆ ನಮ್ಮ ದೇಶ ಭೂಪಟದಿಂದಲೇ ನಾಶವಾಗಬಹುದು. ಬಹಳಷ್ಟು ಮಹಾ ಮಾರಿಗಳು ವಿಶ್ವವನ್ನೇ ತಲ್ಲಣಗೊಳಿಸಿದೆ. ಆದರೆ ಕೋರೋನ ಎಂಬ ವೈರಸ್ ಇಷ್ಟರವರೆಗೆ ಅಗದ್ದನ್ನ ಮಾಡಿ ತೋರಿಸಿದೆ. ಕೇಂದ್ರ ಸರಕಾರ ರಾಜ್ಯ ಸರಕಾರ ಮಾಡುತ್ತಿರುವ ಸಿದ್ಧತೆಗಳು, ಪೊಲೀಸ್ ಇಲಾಖೆ, ವೈದ್ಯಲೋಕ ಏನೆಲ್ಲ ಪ್ರಯತ್ನ ಮಾಡುತ್ತಿದೆ. ಅವರ ಪ್ರಯತ್ನಕ್ಕೆ ನಾವು ಕೂಡ ಜೊತೆಯಾಗಬೇಕು. ಅವರ ಮಾತುಗಳನ್ನು ಕೇಳಬೇಕು.

ಸೋಷಿಯಲ್ ಮಾಧ್ಯಮಗಳಲ್ಲಿ ಬರುವಂತಹ ಸುಳ್ಳು ಸುದ್ದಿಯನ್ನು ಓದುವುದರ ಬದಲು ಮಾಧ್ಯಮದಲ್ಲಿ ಬರುವಂತಹ ವರದಿಗಳನ್ನು ಓದಿ. ಬಹುತೇಕ ಈ ವರದಿ ಅಥವಾ ಪ್ರಕಟಣೆಗಳು ರಾಜ್ಯ ಕೇಂದ್ರ ಅಥವಾ ವೈದ್ಯ ಲೋಕದಿಂದ ಬರುವಂತಹ ವರದಿಗಳು.
ಸುಳ್ಳು ಸುದ್ದಿಗಳನ್ನು ಹಬ್ಬಿಸುವವರೆ, ದಯವಿಟ್ಟು ಇಂತಹ ಸಂದರ್ಭದಲ್ಲಿ ನೀವು ಸ್ವಲ್ಪ ಮೃದು ಧೋರಣೆಯನ್ನು ತಾಳಿ. ನಿಮ್ಮ ಸುಳ್ಳು ಸುದ್ದಿಗಳಿಂದ ಹಲವಾರು ಬಾರಿ ನೀವು ಜಯ ಗಳಿಸಿರಬಹುದು. ಆದರೆ ಇಂಥ ಸಂದರ್ಭದಲ್ಲಿ ನೀವು ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳಿಂದ ನಾಳೆ ನಿಮ್ಮ ಕುಟುಂಬವೂ ನಾಶವಾಗಬಹುದು. ಅದಕ್ಕಾಗಿ ದಯವಿಟ್ಟು ಸುಳ್ಳು ಸುದ್ದಿ, ಎಡಿಟ್ ಪೋಸ್ಟ್ ಗಳನ್ನು ಯಾರಿಗೂ ಕಳಿಸಬೇಡಿ.


ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ ಜನತಾ ಕರ್ಫ್ಯೂ ಅನ್ನು  ಜಾರಿಗೊಳಿಸಿದ್ದರು. ಆದರೆ ಈ ಜನತಾ ಕರ್ಫ್ಯೂ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದೇ ದೊಡ್ಡ ಸವಾಲು. ಕರ್ಫ್ಯೂ ಎಂದರೆ ಮನೆಯಿಂದ ಹೊರಗೆ ಬರಬಾರದ ಪರಿಸ್ಥಿತಿ. ಆದರೆ ನಿನ್ನೆ ಬಹಳಷ್ಟು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಐದು ಗಂಟೆಗೆ ಯಂತೂ ವಿಜಯೋತ್ಸವ ಎಂಬಂತೆ ಕೆಲ ಕಡೆ ನಡೆಸಲಾಯಿತು. ಆದರೆ ನಿಜವಾಗಿಯೂ ಕೆಲವೊಂದು ಮನೆಗಳಲ್ಲಿ ನಡೆದಂತಹ ಚಪ್ಪಾಳೆ ತಟ್ಟುವ ಶಬ್ದ ನಿಜಕ್ಕೂ ಅದ್ಭುತವಾದದು. ಜನರನ್ನು ಸ್ವಲ್ಪ ಮಟ್ಟಿಗಾದರೂ ಕಡಿವಾಣ ಹಾಕಲು ಪ್ರಯತ್ನಿಸಿದ ಪ್ರಧಾನಿ ಮತ್ತು ತಂಡಕ್ಕೆ ಕೃತಜ್ಞತೆಗಳು.


ಏನೇ ಇರಲಿ ಸ್ನೇಹಿತರೇ, ಸಮಯ ಮೀರಿ ಹೋಗುತ್ತಿದೆ. ಪ್ರಮುಖವಾದ ಮೂರನೇ ವಾರದಲ್ಲಿ ನಾವಿದ್ದೇವೆ. ಈ ವಾರ ಬಹಳಷ್ಟು “ಡೇಂಜರ್  ಝೋನ್”. ಮುಂದಿನ ಒಂದು ವಾರ ಅಥವಾ ಹದಿನೈದು ದಿನಗಳನ್ನು ನಾವು ಯಾವ ರೀತಿ ಲಘುವಾಗಿ ತೆಗೆದುಕೊಳ್ಳುತ್ತೇವೆಯೊ, ಅದೆಲ್ಲವೂ ನಮ್ಮ ನಮ್ಮ ಜೀವನಕ್ಕೆ, ನಮ್ಮ ದೇಶಕ್ಕೆ, ನಮ್ಮ ಊರಿಗೆ ಅತಿ ಮಾರಕವಾಗುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸತ್ಯ ಸುದ್ದಿಗಳನ್ನು ನಾವು ನಂಬುವುದಕ್ಕಿಂತ ಜಾಸ್ತಿ, ಸೋಷಿಯಲ್ ಮೀಡಿಯಾಗಳಲ್ಲಿ ಬರುವಂತಹ ನಕಲಿ ಮತ್ತು ಸುಳ್ಳು ಸುದ್ದಿಗಳನ್ನು ಹೆಚ್ಚು ನಂಬುವ ಪರಿಸ್ಥಿತಿಯಾಗಿದೆ. ಸಂಬಂಧಪಟ್ಟ ಇಲಾಖೆಗಳು ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಹಲವು ಬಾರಿ ವಿವಿಧ ರೂಪಗಳಲ್ಲಿ ಹೇಳಿದರೂ ಕೂಡ, ಅವಿದ್ಯಾವಂತರಿಗಿಂತ ವಿದ್ಯಾವಂತರೇ ಇದನ್ನು ಹೆಚ್ಚು ನಂಬುತ್ತಿದ್ದಾರೆ ಎಂಬುದು ನಿಜಕ್ಕೂ ನೋವಿನ ಸಂಗತಿ. ಈಗಾಗಲೇ ನಮ್ಮ ಕರ್ನಾಟಕದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯ ಕೇಂದ್ರ ಸರಕಾರ ಅಥವಾ ವಿವಿಧ ಇಲಾಖೆಗಳನ್ನು ನಾವು ದೂರುತ್ತೇವೆ. ಆದರೆ ಅವರು ಮಾಡುತ್ತಿರುವಂತಹ ಕೆಲಸ ನಮ್ಮ ಕಣ್ಣಿಗೆ ಕಾಣದಿದ್ದರೂ, ವಿವಿಧ ಹಂತದಲ್ಲಿ ಅವರಿಗೆ ದೂರುತ್ತೇವೆ. ರಾಜಕೀಯ ಚುನಾವಣೆ ಸಂದರ್ಭದಲ್ಲಿ ಮಾತ್ರ ಇರಬೇಕೆ ವಿನಃ, ಅದರಲ್ಲೂ ಇಂತಹ ಕಠಿಣ ಸಂದರ್ಭದಲ್ಲಿ ರಾಜಕೀಯದ ಮಾತು ಬರಬಾರದು. ಈ ಮಹಾಮಾರಿ ವೈರಸ್ ನೀನು ಯಾವ ಜಾತಿ, ನೀನು ಯಾವ ಪಕ್ಷ ದವರೆಂದು ಕೇಳಿಬರುವುದಿಲ್ಲ. ಸಮಪಾಲು ಸಮಬಾಳು ಎಂಬಂತೆ ಎಲ್ಲರ ಬಳಿಯೂ ಬರುತ್ತದೆ ನೆನಪಿರಲಿ..


ಕೊನೆಯದಾಗಿ ಸ್ನೇಹಿತರೆ, ದಿನ ಕಳೆದಂತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಬಹಳಷ್ಟು ಜಾಗೃತಿ ನೀಡುವಂತಹ ಕಾರ್ಯಕ್ರಮಗಳು ನಡೆದರೂ ಕೂಡ, ಜನ ಜಾಗೃತಗೊಳ್ಳುತ್ತಿಲ್ಲ. ಸ್ವಲ್ಪ ಕಷ್ಟವಾಗಬಹುದು. ಆದರೆ ಈ ಕಷ್ಟವನ್ನು ಸಹಿಸಿಕೊಳ್ಳಲೇಬೇಕು. ಸಹಿಸಿಕೊಳ್ಳದೆ ಹೋದರೆ ಈ ಜೀವನವೆಂಬುದು ಈ ಭೂಮಿಯಲ್ಲಿ ನೆನಪು ಮಾತ್ರ ಉಳಿಯುತ್ತದೆ. ಕೆಲವರು ಹೇಳುವುದಿದೆ ಸಾವು ಇಂದಲ್ಲ ನಾಳೆ ಬಂದೇ ಬರುತ್ತದೆ. ಸಾವಿಗೆ ಸಿದ್ಧರಾಗಿ ಇರೋಣ ಅಂತ. ಹೌದು ಸ್ವಾಮಿ.. ಸಾವು ಬಂದೇ ಬರುತ್ತದೆ ಅದು ಖಚಿತ. ಆದರೆ ಈ ಸಾವು ಬಂದರೆ ಕೊನೆಗೆ ಯಾರೂ ನೋಡದಂಥ ಯಾರೂ ಮುಟ್ಟದಂತೆ ಸಾವು ಸ್ವಾಮಿ. ಇದರಲ್ಲೂ ತಮಾಷೆ ಅಥವಾ ನಾನೇ ಬುದ್ಧಿವಂತ ಅಂತ ಯೋಚನೆ ಮಾಡೋದು ಬಿಟ್ಟು ಬಿಡಿ. 


ನಮ್ಮ ನೆಮ್ಮದಿಯ ಜೀವನ ಕ್ಕೋಸ್ಕರ ವೈದ್ಯರು, ನರ್ಸ್ ಗಳು ಮತ್ತು ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುವ ನೌಕರರು ತಮ್ಮ ಕುಟುಂಬವನ್ನೆಲ್ಲ ಮರೆತು ನಮಗಾಗಿ ಹೋರಾಟ ಮಾಡುತ್ತಿದ್ದಾರೆ. ಇಷ್ಟರವರೆಗೆ ಕೊರೊನ ಸೋಂಕಿತರಿಗೆ ಆಸ್ಪತ್ರೆಗೆ ಹೋಗುವ ಭಾಗ್ಯ ಸಿಕ್ಕಿದೆ. ದಿನ ಕಳೆದಂತೆ ಸೋಂಕಿತರ ಸಂಖ್ಯೆ ಹೆಚ್ಚಾದರೆ ಆಸ್ಪತ್ರೆಯ ಬಾಗಿಲು ಕೂಡ ಮುಚ್ಚುತ್ತದೆ. ಸ್ವಲ್ಪ ಯೋಚಿಸಿ.. ತಿರುಗಾಡುವುದನ್ನು ಸ್ವಲ್ಪ ಸಮಯ ನಿಲ್ಲಿಸಿ. ಮನೆಯಿಂದ ಹೊರಗೆ ಬರಬೇಡಿ.. ಹೆಚ್ಚು ಕಮ್ಮಿ ಹತ್ತರಿಂದ ಹದಿನೈದು ದಿನ ನಾವು ನಮ್ಮ ಮನೆಯನ್ನು ಬಿಟ್ಟು ಹೊರಗಡೆ ಬರದೇ ಹೋದರೆ, ಮುಂದಿನ ಹಲವಾರು ವರ್ಷಗಳ ಕಾಲ ನಮ್ಮ ಕುಟುಂಬದೊಂದಿಗೆ ನಮ್ಮ ಮಕ್ಕಳೊಂದಿಗೆ, ನಮ್ಮ ಸ್ನೇಹಿತರೊಂದಿಗೆ ಇತಿಹಾಸದ ಪುಟಗಳಲ್ಲಿ ಸೇರಿಸುವಂತಹ ಜೀವನವನ್ನು ಮಾಡಬಹುದಾಗಿದೆ. ಅದಕ್ಕಾಗಿ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡಬೇಡಿ ಬಂಧುಗಳೇ. ನಿಮ್ಮ ಜೀವನ ನಿಮಗೆ ಬೇಡವಾಗಿರಬಹುದು. ಆದರೆ ನಿಮ್ಮ ಜೀವನದಿಂದ ಮತ್ತೊಬ್ಬರ ಜೀವನ ಹಾಳು ಮಾಡಲು ದಯವಿಟ್ಟು ಪ್ರಯತ್ನಿಸಬೇಡಿ.


ಕೊನೆಗೆ, ಒಮ್ಮೆ ಹಿಂದಿನ ದಿನಗಳನ್ನು ಯೋಚಿಸಿ.. ಯಾವತ್ತಾದರೂ ನಮ್ಮ ಊರಿನಲ್ಲಿರುವ ದೇವಸ್ಥಾನಗಳು, ಮಸೀದಿಗಳು, ಚರ್ಚುಗಳ ಬಾಗಿಲು ಮುಚ್ಚಿದ ನೆನಪು ಇದೆಯಾ ??? ಹೆಚ್ಚು ಕಮ್ಮಿ ಒಂದು, ತಪ್ಪಿದರೆ ಎರಡು ದಿನ ಇದ್ದಿರಬಹುದು. ಆದರೆ ಹತ್ತಕ್ಕೂ ಅಧಿಕ ದಿನ ಈ ದೇವಾಲಯಗಳು ಬಂದ್ ಆಗಿದ್ದನ್ನು ಯಾವತ್ತಾದರೂ ನೋಡಿದ್ದೀರಾ???* ಅದಕ್ಕಾಗಿ ಸ್ನೇಹಿತರೇ, ಪ್ರಕೃತಿ ಕಣ್ಣೀರಿಡುತ್ತಿದ್ದಾಳೆ.. ಮತ್ತೆ ಮಾಡಿದ ತಪ್ಪು ಮಾಡದೇ ಇರೋಣ.. ಪ್ರಕೃತಿ ಮಾತೆಗೆ ಗೌರವ ನೀಡಿ.. ಎಲ್ಲರಿಗೂ ಒಳ್ಳೆಯದಾಗಲಿ…
ಕೊರೋನಾ ವೈರಸ್ ಎಂಬ ಮಹಾಮಾರಿ ವಿಶ್ವದಿಂದಲೇ ದೂರವಾಗಲಿ. ನಮ್ಮ ದೇಶದಲ್ಲಿ ಕೋರೋನ ವೈರಸ್ಸಿನ ವಿರುದ್ಧ ಹೋರಾಟ ಮಾಡುತ್ತಿರುವ ಎಲ್ಲಾ ವೈದ್ಯರುಗಳಿಗೆ, ನರ್ಸ್ ಗಳಿಗೆ ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗಕ್ಕೆ ಮತ್ತು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕೋಟಿ ಕೋಟಿ ನಮನಗಳು. ನೀವು ಇಂದಿನ ಪರಿಸ್ಥಿತಿಯಲ್ಲಿ ನಮಗೆ ಕಣ್ಣಿಗೆ ಕಾಣುವ ನಿಜವಾದ ದೇವರುಗಳು. ನಿಮ್ಮಲ್ಲಿಯೇ ನಾವು ದೇವರನ್ನು ನೋಡುತ್ತಿದ್ದೇವೆ.

Leave a Reply

Your email address will not be published. Required fields are marked *

error: Content is protected !!