ಗೀತೋಪದೇಶ -ಶ್ಲೋಕ -೮
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಶ್ಲೋಕ ..೮
ಸಂಜಯ ಉವಾಚ…
ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯ:|
ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ||
ಗುರುಗಳಾದ ದ್ರೋಣಾಚಾರ್ಯರ ಬಳಿ ದುರ್ಯೋಧನ ತನ್ನ ಮನಸ್ಸಿನ ತಲ್ಲಣ ಹೊರಹಾಕುತ್ತಿದ್ದಾನೆ…ಪಾಂಡವರ ಸೇನೆಯಲ್ಲಿ ಇರುವವರೆಲ್ಲರೂ ವೀರಾಧಿವೀರರು ಮತ್ತು ಪಾಂಡವರಿಗೆ ಜಯ ತಂದು ಕೊಡಲು ಪ್ರಾಣವನ್ನು ಪಣಕ್ಕಿಟ್ಟು ಪ್ರೀತಿಯಿಂದ ಬಂದವರು ಎಂದು ಹೇಳಿ , “ತನ್ನ ಕಡೆಯಲ್ಲೋ… ..ನೋಡಿ ಇಂತವರೆಲ್ಲಾ ಇದ್ದಾರೆ!! “ಎಂಬ ಅಭಿಪ್ರಾಯದಲ್ಲಿ ತನ್ನ ಸೇನೆಯ ಮುಂದಾಳುಗಳ ಬಗ್ಗೆ ಹೇಳುವನು .
ಹಾಗೆ ಹೇಳುವಾಗ ಮೊದಲು ಉಲ್ಲೇಖಿಸುವುದೇ ದ್ರೋಣಾಚಾರ್ಯರನ್ನು .ಇಲ್ಲಿ ಬೇಕಂತಲೇ ದುರ್ಯೋಧನ ದ್ರೋಣರ ಹೆಸರು ಹೇಳುವನು ..ಅದರಲ್ಲೂ ನೀವು “ಪಾಂಡು ಪುತ್ರರ ಆಚಾರ್ಯರು “ಎಂದೇ ಸಂಬೋಧಿಸಿ ಅವರಿಗೆ ತಾಗುವಂತೆ ಅಣಕಿಸುವನು ..ಅಂದರೆ ನೀವು ನನ್ನ ಪಕ್ಷಕ್ಕೆ ಯುದ್ಧಕ್ಕೆ ಬಂದಿದ್ದರೂ ಸಹ ಮನಸ್ಸಿನಲ್ಲಿ ಪಾಂಡವರ ಜಯವನ್ನೇ ಬಯಸುವವರು ಎಂದು ತಿಳಿದಿದೆ .. ಏಕೆಂದರೆ ಬಹಳ ಹಿಂದಿನಿಂದಲೂ ನಮ್ಮೊಳಗೆ ಜಗಳವಾದಾಗ ನೀವು ಪಾಂಡವರದ್ದೇ ಸರಿ ಎಂದು ಪ್ರತಿಪಾದನೆ ಮಾಡಿದ್ದೀರಿ.. ಇಂದು ಅನ್ನದ ಋಣಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ನಮ್ಮ ಪಕ್ಷ ಸೇರಿದ್ದೀರಿ ..ಇನ್ನು ನಿಮ್ಮಂತೆ ಭೀಷ್ಮಾಚಾರ್ಯರು ಸಹ ಮನದೊಳಗೆ ಪಾಂಡವರ ಜಯ ಬಯಸುತ್ತಾ , ಹೊರಗಿನಿಂದ ನಮಗಾಗಿ ಹೋರಾಡಲು ಬಂದವರು ಎಂಬುದೇ ದುರ್ಯೋಧನನ ಸಂಕಟ .
ಹಾಗೇ ಪರಮಾಪ್ತ ಮಿತ್ರನಾದ , ತನಗಾಗಿ ಪ್ರಾಣ ಕೊಡಬಲ್ಲ ಕರ್ಣನ ಹೆಸರನ್ನೂ ಉಲ್ಲೇಖ ಮಾಡುತ್ತಾನೆ .. ಕುಂತಿ ಬಂದು ಕರ್ಣನ ಬಳಿ “ನನ್ನ ಮಗ ನೀನು , ಈ ಪಕ್ಷಕ್ಕೆ ಬಂದುಬಿಡು” ಎಂದರೂ ಕರ್ಣ ಒಪ್ಪಲಿಲ್ಲ .. ಹಾಗೇ ಕೃಷ್ಣ ಹೋಗಿ ಕರೆದು , ನಿನಗೇ ರಾಜ್ಯ ಸಿಂಹಾಸನ ಕೊಡಿಸುವೆ ಎಂದಾಗಲೂ ದುರ್ಯೋಧನನ ಅನ್ನದ ಋಣ , ಉಪ್ಪು ತಿಂದ ಮನೆಗೆ ದ್ರೋಹ ಬಗೆಯಲಾರೆ ಎಂಬ ದಿಟ್ಟ ಕರ್ಣನನ್ನು ಹೆಸರಿಸಲೂ ಕಾರಣವಿದೆ.. ಏಕೆಂದರೆ ಯುದ್ಧದ ಆರಂಭದ ಮುನ್ನ ಕರ್ಣ ಅರ್ಜುನನನ್ನು ಹೀಯಾಳಿಸಿ ಮಾತನಾಡಿದಾಗ , ಭೀಷ್ಮರು ಕರ್ಣನನ್ನು ತರಾಟೆಗೆ ತೆಗೆದುಕೊಂಡು , “ವಿರಾಟ ರಾಜನ ಗೋಗ್ರಹಣ ಕಾಲದಲ್ಲಿ ಅರ್ಜುನ ಏಕಾಂಗಿಯಾಗಿ ಇಡೀ ಕೌರವ ಸೇನೆ ಹೊಡೆದೋಡಿಸಿದಾಗ ನಿನ್ನ ಪ್ರತಾಪ ಎಲ್ಲಿ ಹೋಗಿತ್ತು ? “ಎಂದು ಹಂಗಿಸಿದ್ದರು..ಆಗ ಕೋಪಗೊಂಡ ಕರ್ಣ , ಭೀಷ್ಮರು ಯುದ್ಧರಂಗದಲ್ಲಿ ಇರುವ ತನಕ ತಾನು ಯುದ್ಧಕ್ಕೆ ಬರುವುದಿಲ್ಲಾ ಎಂದು ಪ್ರತಿಜ್ಞೆ ಮಾಡಿಧ್ದ…ಇತ್ತ ಕರ್ಣ ಯುದ್ಧಕ್ಕೆ ಬರಲಿ ಎಂದು ಹಾರೈಸಬೇಕಾದರೆ, ಭೀಷ್ಮರ ಸಾವನ್ನು ಬಯಸಬೇಕು..ಆದರೆ ಭೀಷ್ಮಾಚಾರ್ಯರು ಇಚ್ಛಾಮರಣಿಗಳು.. ಹಾಗಾಗಿ ದುರ್ಯೋಧನನ ಪಾಲಿಗೆ ವೀರಾಧಿವೀರನಾದ ಕರ್ಣ ಇದ್ದರೂ ಲೆಕ್ಕಕ್ಕಿಲ್ಲ ಎಂಬ ಸಂಕಟ ಕಾಡುವುದು.. ಹೀಗೆ ಕೃಪಾಚಾರ್ಯ ,ವಿಕರ್ಣರನ್ನೂ ಬಲವಾಗಿ ನಂಬಿಕೊಳ್ಳಲು ಸಾಧ್ಯ ಇಲ್ಲ ಎಂಬುದೇ ದುರ್ಯೋಧನನ ಮನದ ತಲ್ಲಣಕ್ಕೆ ಕಾರಣ ..

ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





