ಗೀತೋಪದೇಶ -ಶ್ಲೋಕ -೯
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಶ್ಲೋಕ..೯
ಸಂಜಯ ಉವಾಚ
ಅನ್ಯೇ ಚ ಬಹವ: ಶೂರಾ ಮದರ್ಥೇ ತ್ಯಕ್ತ ಜೀವಿಕಾ|
ನಾನಾ ಶಸ್ತ್ರ ಪ್ರಹರಣಾ: ಸರ್ವೇ ಯುದ್ಧ ವಿಶಾರದಾ: ||
ದುರ್ಯೋಧನ ಗುರುಗಳಾದ ದ್ರೋಣಾಚಾರ್ಯರಿಗೆ ತನ್ನ ಸೇನೆಯಲ್ಲಿ ವಿಶಿಷ್ಟರಾದ ನಾಯಕರ ಉಲ್ಲೇಖ ಮಾಡುವಾಗ , ಮನದೊಳಗೆ ಒಂದು ಉದಾಸೀನ ಭಾವ ಇಟ್ಟು ಹೇಳುವನು ..ಅಂದರೆ ಅವರೆಲ್ಲರೂ ವೀರಾಧಿ ವೀರರಾದರೂ ಒಂದಲ್ಲ ಒಂದು ರೀತಿಯಲ್ಲಿ ತನಗೆ ಜಯ ತಂದು ಕೊಡಲು ವಿಫಲರು ಎಂಬರ್ಥದಲ್ಲಿ ಅಂತಹ ವಿಶೇಷ ಎನಿಸಿದವರ ಹೆಸರನ್ನೇ ಹೇಳುತ್ತಿದ್ದಾನೆ .. ದ್ರೋಣಾಚಾರ್ಯರು ಕೌರವ ಸೇನೆ ಸೇರಲು ಕಾರಣ ಪುತ್ರ ವ್ಯಾಮೋಹ…ಅವರ ಮಗ ಅಶ್ವತ್ಥಾಮ ಪ್ರಾಮಾಣಿಕವಾಗಿ ಮನಸ್ಸಿಟ್ಟು ದುರ್ಯೋಧನನ ಪಕ್ಷ ಸೇರಿದವನು ..ದ್ರೋಣರು ಮಗನ ವಿರುದ್ನ ಹೋರಾಡಲಾಗದೇ ಒಲ್ಲದ ಮನಸ್ಸಿಂದ ,ಅಧರ್ಮ ಎಂದು ತಿಳಿದಿದ್ದರೂ ಸಹ ಕೌರವ ಪಕ್ಷಕ್ಕೆ ಬಂದವರು ..ದ್ರೋಣರು ಬಂದರೆಂದು ಅವರ ತಂಗಿಯ ಗಂಡನಾದ ಕೃಪಾಚಾರ್ಯರು ಸಹ ಬಂದಿದ್ದರಿಂದ ದುರ್ಯೋಧನ ಅವರನ್ನೂ ಉಲ್ಲೇಖಿಸುವನು ..ಇವರಿಬ್ಬರೊಂದಿಗೆ ಅನ್ನದ ಋಣ ತೀರಿಸಲು, ಕುರು ವಂಶದ ಸಿಂಹಾಸನದ ರಕ್ಷಣೆಯ ಭಾರ ಹೊತ್ತ ಭೀಷ್ಮರು ಸಹ ಈ ಪಕ್ಷಕ್ಕೆ ಬಂದರು .. ಒಟ್ಟಿನಲ್ಲಿ ಎಲ್ಲರೂ ಕಟ್ಟಿಗೆ ಸಿಲುಕಿ ಬಂದವರೇ ಹೊರತು , ನಿಜವಾಗಿ ತನಗೆ ಜಯ ತಂದು ಕೊಡಲು ಬಂದವರಲ್ಲಾ ಎಂಬುದು ಅವನ ಅಳಲು ..
ಇನ್ನು ಅಶ್ವತ್ಥಾಮ ತನಗೆ ಜಯ ಸಿಗಲಿ ಎಂದು ಹಾರೈಸಿ ಬಂದರೂ ಸಹ ,ತನ್ನ ದುಡುಕು ಸ್ವಭಾವದಿಂದ ,ಯಾವಾಗ ಕೈ ಕೊಟ್ಟು ಹೋಗುವನೆಂಬ ಆತಂಕ ..ಯಾಕೆಂದರೆ ಪರಾಕ್ರಮಿ ಆದರೂ ಸ್ಥಿರ ಬುದ್ಧಿ ಇಲ್ಲದ ,ಚಂಚಲ ಸ್ವಭಾವದ ಕಾರಣ ತಪ್ಪು ನಿರ್ಧಾರ ಮಾಡುವ ಅವನು ಒಮ್ಮೆ ಕೃಷ್ಣನ ಬಳಿ ಹೋಗಿ , “ನೀನು ಇರುವ ತನಕ ಪಾಂಡವರನ್ನು ಕೊಲ್ಲಲು ಆಗುವುದಿಲ್ಲ.. ಹಾಗಾಗಿ ನಿನ್ನ ಸುದರ್ಶನ ಚಕ್ರ ಕೊಡು,ಅದರಿಂದ ನಿನ್ನನ್ನು ಕೊಲ್ಲುವೆ” ಎಂದು ಕೃಷ್ಣನನ್ನೇ ಕೇಳಿದ್ದ … ಅಶ್ವತ್ಥಾಮನಿಗೆ ಕೃಷ್ಣ “ಸುದರ್ಶನ ಚಕ್ರ ಶಸ್ತ್ರಾಗಾರದಲ್ಲಿದೆ , ಸಾಮರ್ಥ್ಯ ಇದ್ದರೆ ತೆಗೆದು ಕೋ” ಎಂದಾಗ ..ಅದನ್ನು ಅಲುಗಿಸಲೂ ಆಗದೇ ಓಡಿ ಬಂದಿದ್ದ ..ಇಂತಹ ವಿಚಿತ್ರ ವ್ಯಕ್ತಿಯ ಬಗ್ಗೆ ನಂಬಿಕೆ ಇಡುವುದೂ ಕಷ್ಟ ..ಯಾವಾಗ ಯುದ್ಧರಂಗದಿಂದ ಪಲಾಯನ ಮಾಡುವನೆಂದು ಹೇಳಲು ಸಾಧ್ಯವಿಲ್ಲ. ಹೀಗೆ ತನ್ನ ಕಡೆಯಲ್ಲಿ ಇರುವವರೆಲ್ಲಾ ಇಂತಹವರೇ !! ಮನಸ್ಸೊಂದು ಕಡೆ ಇಟ್ಟವರು ! ಮನಸ್ಸೇ ಸರಿ ಇಲ್ಲದವರು ಎಂಬುದು ದುರ್ಯೋಧನನ ಮನದ ಸಂಕಟಕ್ಕೆ ಕಾರಣ .
ಇನ್ನು ತಮ್ಮಂದಿರ ಪೈಕಿ ಯಾರ ಹೆಸರನ್ನೂ ಹೇಳದೇ , ವಿಕರ್ಣನ ಹೆಸರು ಉಲ್ಲೇಖಿಸಲು ಕಾರಣ ಅವನೂ ಸಹ ಕೆಲವೊಮ್ಮೆ ತನ್ನ ಸ್ವಾರ್ಥಕ್ಕೆ ಪಕ್ಷ ಬದಲಾಯಿಸುವವನು… ದ್ರೌಪದಿ ವಸ್ತ್ರಾಪಹರಣ ಸಮಯದಲ್ಲಿ ತಮ್ಮ ವಿರುದ್ಧ ತಪ್ಪೆಂದು ಧ್ವನಿ ಎತ್ತಿ , ತಾನು ಒಳ್ಳೆಯನೆಂದು ತೋರಿಸುವ ಬುದ್ಧಿ ಇರುವವನಾದ್ದರಿಂದ , ದುರ್ಯೋಧನನಿಗೆ ಅಳುಕಿತ್ತು. ಇನ್ನು ಸೋಮದತ್ತನ ಮಗ ಭೂರಿಶ್ರವಸ್ಸು ಕೂಡ ಪಾಂಡವರ ಪಕ್ಷಪಾತಿ ..ಅವನ ಅಜ್ಜ ಬಾಹ್ಲೀಕ ರಾಜ ಭೀಮನಿಂದಲೇ ಮರಣಿಸಬೇಕೆಂದು ಕೌರವ ಪಕ್ಷಕ್ಕೆ ಬಂದವನು ..ಅಜ್ಜ ಕೌರವರ ಕಡೆ ಬಂದಿದ್ದಕ್ಕೆ ಮೊಮ್ಮಗ ಬಂದನೇ ಹೊರತು ತನಗಾಗಿ ಬಂದವನಲ್ಲಾ ಎಂಬುದು ದುರ್ಯೋಧನನ ಮನಸ್ಸಿಗೆ ತಿಳಿದಿತ್ತು..ಇವರೆಲ್ಲರೂ ತನ್ನ ಮೇಲಿನ ಪ್ರೀತಿಯಿಂದ ಯುದ್ಧಕ್ಕೆ ಬಾರದೇ, ಹತಾಶೆ ಮನೋಭಾವದಿಂದಲೇ ಬಂದಿದ್ದಾರೆ ..” ಆಚಾರ್ಯರೇ , ಇವರಷ್ಟೇ ಅಲ್ಲದೇ ಇನ್ನೂ ಹಲವಾರು ಶೂರಾಧಿಶೂರರು ನಮ್ಮ ಪಕ್ಷದಲ್ಲಿ ಇದ್ದಾರೆ ..ಅವರೆಲ್ಲರೂ ನನಗಾಗಿ ತಮ್ಮ ಪ್ರಾಣವನ್ನು ಕೊಡಲು ಸಹ ಸಿದ್ಧರಿದ್ದಾರೆ” ಎಂದು ಹೇಳುವಾಗ ಅಲ್ಲಿಯೂ ಕೊಂಕು ಮಾತಿನಲ್ಲೇ ಹೇಳುತ್ತಾನೆ..”ಅವರೆಲ್ಲ ಯುದ್ಧ ಮಾಡಿ ನನ್ನನ್ನು ಗೆಲ್ಲಿಸಲು ಬಂದವರಲ್ಲಾ.. ನನಗಾಗಿ ಪ್ರಾಣ ಬಿಡಲೆಂದೇ ಬಂದವರು” ಎಂಬ ಕುಹಕ ಅವನ ಮಾತಿನಲ್ಲಿ ಎದ್ದು ತೋರುತ್ತಿದೆ.

ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





