ಭಗವದ್ಗೀತೆಯ ಶ್ಲೋಕಾರ್ಥ- ಅರ್ಜುನ ವಿಷಾದಯೋಗ…

ಪ್ರಥಮೋಧ್ಯಾಯ:

ಶ್ಲೋಕ ..೧೦

ಸಂಜಯ ಉವಾಚ…

ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್|
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್||

ದುರ್ಯೋಧನ ತನ್ನ ಗುರುಗಳಾದ ದ್ರೋಣಾಚಾರ್ಯರ ಬಳಿ ಮನಸ್ಸಿನ ಒಳಗಿನ ತನ್ನ ತುಮುಲವನ್ನು ವ್ಯಕ್ತ ಪಡಿಸುತ್ತಿದ್ದಾನೆ ..ನೇರವಾಗಿ ಹೇಳದೇ , ಸುತ್ತಿ ಬಳಸಿ ಕೊಂಕು ಮಾತಿನಿಂದ , ತನ್ನ ಬಳಿ ಇರುವ ವೀರರು ಪಾಂಡವ ಪಕ್ಷಪಾತಿಗಳಾಗಿ , ಒತ್ತಡದಿಂದ ತನ್ನ ಪರವಾಗಿ ಯುದ್ದಕ್ಕೆ ಬಂದಿದ್ದಾರೆ. ಇಂತವರನ್ನು ನಂಬಿ ಗೆಲುವಿನ ನಿರೀಕ್ಷೆಯಲ್ಲಿ ಇರಲಾಗವುದೇ?? ಎಂಬುದು ಅವನ ಅಳಲು ..ಅವನ ಗೊಂದಲ ಈ ಶ್ಲೋಕದಲ್ಲಿ ಮತ್ತಷ್ಟು ಕಂಡು ಬರುತ್ತದೆ.. ದ್ರೋಣರ ಬಳಿ ಹೇಳುತ್ತಾನೆ.. “ಆಚಾರ್ಯರೇ , ಭೀಷ್ಮಾಚಾರ್ಯರಿಂದ ರಕ್ಷಿಸಲ್ಪಟ್ಟ ನಮ್ಮ ಆ ಸೈನ್ಯವು ಅಪರಿಮಿತವಾಗಿದೆ … ಎಲ್ಲಾ ರೀತಿಯಲ್ಲೂ ಬಹಳ ದೊಡ್ಡದಾಗಿ , ಲೆಕ್ಕವಿಲ್ಲದಷ್ಟಿದೆ ..ಆದರೆ ಭೀಮನಿಂದ ರಕ್ಷಿಸಲ್ಪಟ್ಟ ಪಾಂಡವರ ಈ ಸೇನೆ ಬಹಳ ಚಿಕ್ಕದು ,ಪರಿಮಿತವಾಗಿದೆ ಅಂದರೆ ಗೆಲ್ಲಲು ಸುಲಭವಾಗಿದೆ .”.ಇಲ್ಲಿ ದುರ್ಯೋಧನನ ಮಾತನ್ನು ಗಮನಿಸಿದಾಗ ,ಅವನು ಗೊಂದಲದಲ್ಲಿರುವುದು ತಿಳಿದು ಬರುತ್ತದೆ.. ಏಕೆಂದರೆ” ತನ್ನ ಈ ಸೇನೆ ” ದೊಡ್ಡದು ಎನ್ನುವ ಬದಲು ಆ ಸೇನೆ ಎನ್ನುತ್ತಿದ್ದಾನೆ ..ಹಾಗೇ ಭೀಮನಿಂದ ರಕ್ಷಿಸಲ್ಪಟ್ಟ “ಆ ಸೇನೆ “ಅನ್ನುವ ಬದಲು ಈ ಸೇನೆ ಎಂದು ಹೇಳುತ್ತಾ , ತನ್ನ ಸೈನ್ಯ ಕೈ ತಪ್ಪಿ ಹೋಗುತ್ತಿದೆ ಎಂಬ ಭಯದಲ್ಲಿದ್ದಾನೆ ..ಏಕೆಂದರೆ ಇಲ್ಲಿರುವ ವೀರರು ಮನದಲ್ಲಿ ಪಾಂಡವರ ಜಯ ಬಯಸಿ, ಹೊರಗಿನಿಂದ, ಒಲ್ಲದ ಮನಸ್ಸಿನಿಂದ ತನ್ನ ಪರ ಹೋರಾಟಕ್ಕೆ ನಿಂತಿದ್ದಾರೆ ಎಂಬುದು ತಿಳಿದಿದೆ . ಭೀಮನಿಂದ ರಕ್ಷಿಸಲ್ಪಟ್ಟ ಸೈನ್ಯ ಕೇವಲ ಏಳು ಅಕ್ಷೋಹಿಣಿ ಆದರೂ ಅದು ನಮ್ಮ ಹನ್ನೊಂದು ಅಕ್ಷೋಹಿಣಿ ಸೇನೆಯನ್ನು ಸೋಲಿಸಲು ಸಮರ್ಥವಿದೆ ಎಂಬ ಅರ್ಥವನ್ನೂ ಇಲ್ಲಿ ಕಾಣುತ್ತೇವೆ .. ಹಾಗಾಗಿ ಇಂದು ದುರ್ಯೋಧನ ಸೋಲಿನ ಭೀತಿಯಿಂದ ಕಂಗೆಟ್ಟು ಗೊಂದಲ ಗೊಂಡಿದ್ದಾನೆ.

ಸುನೀತಾ ಉಡುಪ ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!