ಗೀತೋಪದೇಶ-ಶ್ಲೋಕ -೭

ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಶ್ಲೋಕ ..೭
ಸಂಜಯ ಉವಾಚ…

ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ನಿಬೋಧ ದ್ವಿಜೋತ್ತಮ|
ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ||

ದುರ್ಯೋಧನ ತನ್ನ ಗುರುಗಳಾದ ದ್ರೋಣಾಚಾರ್ಯರ ಬಳಿ ಬಂದು ಪಾಂಡವರ ಸೇನೆಯ ವೀರರ ಬಗ್ಗೆ ಹೊಗಳಿ , ತನ್ನ ಸೇನೆಯ ಬಗ್ಗೆ ಹೇಳುತ್ತಿದ್ದಾನೆ ..ಈ ಶ್ಲೋಕದಲ್ಲಿ ಮೇಲುನೋಟದ ಅರ್ಥ ದುರ್ಯೋಧನ ಹೇಳುವ ಹಾಗೆ , ತಮ್ಮ ಪಕ್ಷದಲ್ಲಿಯೂ ಸಹ ಯಾರೆಲ್ಲಾ ವಿಶಿಷ್ಟ ನಾಯಕರಿದ್ದಾರೆ ತಿಳಿಸುವೆ ಕೇಳಿ ಎಂದು ಆಚಾರ್ಯರ ಬಳಿ ಹೇಳುತ್ತಾನೆ ..ಆದರೆ ದುರ್ಯೋಧನ ಹೀಗೆ ಹೇಳುವಾಗ ಅವನ ಮನಸ್ಸಿನಲ್ಲಿ ದುಗುಡವಿದೆ ..ಆದ್ದರಿಂದ ತನ್ನ ಪಕ್ಷದಲ್ಲಿಯೂ “ಇಂತವರೆಲ್ಲಾ ವೀರರಿದ್ದಾರೆ ನೋಡೀ” ಎಂದು ಒಬ್ಬೊಬ್ಬರ ಹೆಸರನ್ನು ಒಂದು ರೀತಿಯ ಅಸಮಾಧಾನದಿಂದಲೇ ಹೇಳುತ್ತಾನೆ..ಅವನು ದ್ರೋಣರಿಗೆ, ” ಹೇ ಬ್ರಾಹ್ಮಣ ಶ್ರೇಷ್ಠರೇ , ನಮ್ಮ ಕಡೆಯ ವಿಶಿಷ್ಟ ವೀರರ ಬಗ್ಗೆ ನಿಮಗೆ ತಿಳಿದಿರಲಿ ಎಂದು ಅವರ ಬಗ್ಗೆ ಹೇಳುವೆ ” ‌ಎಂದು ದುರ್ಯೋಧನ ಉಲ್ಲೇಖಿಸುವುದು ದುಶ್ಯಾಸನ, ಶಕುನಿ,ಕರ್ಣ , ಜಯದ್ರಥ ಮುಂತಾದವರನ್ನಲ್ಲಾ ..ಬದಲಿಗೆ ಯಾರೆಲ್ಲಾ ತನ್ನ ಪಕ್ಷದಲ್ಲಿ ಇದ್ದೂ ಇಲ್ಲದಂತೆ , ಒಂದು ರೀತಿಯಲ್ಲಿ “ಆಟಕ್ಕುಂಟು ಲೆಕ್ಕಕ್ಕಿಲ್ಲ” ಎಂಬಂತಿರುವ ವೀರರ ಹೆಸರನ್ನೇ ಹೇಳುತ್ತಾನೆ ..ಇದರಿಂದ ಅವನ ಮನಸ್ಸು ಗೊಂದಲ ಗೊಂಡಿದೆ ಎಂದು ತಿಳಿಯುವುದು ..

ಇಲ್ಲಿ ದುರ್ಯೋಧನನ ಮನದ ಭಾವ ಹೇಗಿದೆಯೆಂದರೆ ಎದುರಾಳಿ ಪಕ್ಷದಲ್ಲಿರುವ ಎಲ್ಲರೂ ಮಹಾ ವೀರರು ..ಆದರೆ ನಮ್ಮ ಪಕ್ಷದಲ್ಲಿರುವವರೋ ಬರೀ ಇಂತವರೇ. ಎಂಬ ನಕಾರಾತ್ಮಕ ಭಾವ ಎದ್ದು ತೋರಿ ಅವರ ಬಗ್ಗೆ ದ್ರೋಣರಿಗೆ ಹೇಳುವನು .. ಭಗವದ್ಗೀತೆಯನ್ನು ದೊಡ್ಡ ಮನಃಶಾಸ್ತ್ರದ ಗ್ರಂಥ ಎಂದು ಸಹ ಹೇಳುವರು .ಯಾಕೆಂದರೆ ಇಂದಿಗೂ ಸಹ ನಿತ್ಯ ಬದುಕಿನಲ್ಲಿ ನಾವು ಕೆಲವೊಮ್ಮೆ ದುರ್ಯೋಧನನಂತೆ ಮಾತನಾಡುತ್ತೇವೆ ..ನಮಗೂ ಹೋರಾಡುವ ಸಮಯ ಬಂದರೆ ಹೀಗೆ ಹೇಳುತ್ತೇವೆ. .ಮನಸ್ಸು ಗೊಂದಲದ ಗೂಡಾದಾಗ ಏನು ಮಾತನಾಡುತ್ತೇವೆ ಎಂಬ ಅರಿವಿಲ್ಲದೇ ಉದ್ದಟತನ ತೋರುತ್ತೇವೆ. ಹಾಗಾಗಿ ಮುಂದೆ ಕೃಷ್ಣ “ಕ್ಷೇತ್ರ “ಯಾವುದು ಎಂಬ ಪ್ರಶ್ನೆಗೆ ದೇಹವೇ ಕ್ಷೇತ್ರ ಎಂದು ಹೇಳುವನು .ಗೀತೆಯ ಆರಂವೂ” ಧರ್ಮಕ್ಷೇತ್ರೇ ಕುರುಕ್ಷೇತ್ರೇ ” ಎಂದಿದೆ ..ಧರ್ಮಕ್ಷೇತ್ರವಾದ ನಮ್ಮ ದೇಹದಲ್ಲಿ ಅಂದರೆ ನಮ್ಮೊಳಗೇ ಕೌರವನ ಚಿಂತನೆ ಮತ್ತು ಪಾಂಡವರ ಚಿಂತನೆಯ ನಡುವೆ ಯುದ್ಧ ನಡೆಯುತ್ತಿರುತ್ತದೆ..ಆಗ ಕೃಷ್ಣನನ್ನು ಸಾರಥಿಯಾಗಿಸಿಕೊಂಡರೆ ಧರ್ಮದ ಹಾದಿಯಲ್ಲಿ ನಡೆಯಲು ಪ್ರೇರಣೆ ದೊರೆಯುವುದು ..ಹೇಗೆ ಕೌರವರ ವಿರುದ್ಧ ಪಾಂಡವರಿಗೆ ಕೃಷ್ಣ ಜಯ ತಂದು ಕೊಟ್ಟನೋ ,ಹಾಗೇ ನಮ್ಮೊಳಗೂ ಪಾಂಡವರೆಂಬ ಒಳ್ಳೆಯತನಕ್ಕೆ ಜಯ ದೊರೆಯುವುದು ..ಇಲ್ಲಿ ದುರ್ಯೋಧನ ಗೊಂದಲಕ್ಕೀಡಾಗಿ ತನ್ನಷ್ಟಕ್ಕೆ ತಾನೇ ಏನೇನೋ ಬಡಬಡಾಯಿಸಿ ಸುಮ್ಮನಾದ..ಆದರೆ ಮುಂದೆ ಅರ್ಜುನ ಸಹ ಗೊಂದಲಕ್ಕೀಡಾಗುವ ಸಮಯ ಬರುವುದು ..ಆಗ ಅರ್ಜುನ ಕೃಷ್ಣನಿಗೆ ಶರಣಾದ . ಹಾಗಾಗಿ ಅವನ ಗೊಂದಲ ದೂರವಾಗಿ ಉದ್ಧಾರವಾದ ..ಇದುವೇ ಗೀತೆಯ ಮಹಾತ್ಮೆ ..ನಾವೂ ಸಹ ಕೃಷ್ಣನನ್ನೇ ಸಾರಥಿಯಾಗಿಸಿಕೊಳ್ಳೋಣ .

ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!