ಪ್ರಥಮೋಧ್ಯಾಯ: ಅರ್ಜುನ ವಿಷಾದಯೋಗ-ಶ್ಲೋಕ -೬..

ಸಂಜಯ ಉವಾಚ…ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚವೀರ್ಯವಾನ್|
ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾ:||

ಭಗವದ್ಗೀತೆಯ ಆರಂಭದಲ್ಲಿ ದುರ್ಯೋಧನನ ಮನಸ್ಸಿನ ತುಮುಲವನ್ನು ವೇದವ್ಯಾಸರು ತೋರಿಸಿದ್ದಾರೆ .. ಅವನ ಮನಸ್ಸು ಗೊಂದಲಗೊಂಡಿದೆ ಎಂಬುದು ಅವನ ಮಾತಿನಿಂದಲೇ ತಿಳಿಯುತ್ತದೆ.. ದ್ರೋಣರ ಬಳಿ , ಪಾಂಡವ ಪಕ್ಷದ ಶೂರರ ಬಗ್ಗೆ ಹೇಳುವಾಗ , ” ಅಲ್ಲಿರುವ “ಪಾಂಡವರ ಸೇನೆಯಲ್ಲಿ ಎಂದು ಉಲ್ಲೇಖಿಸುವ ಬದಲು “ಇಲ್ಲಿರುವ” ಎಂಬ ಪದದ ಪ್ರಯೋಗ ಮಾಡಿ, ಎದುರಾಳಿ ಪಕ್ಷದ ವೀರಾಧಿವೀರರ ಹೆಸರು ಹೇಳುವ ಬದಲು ಅತ್ಯಂತ ಹಿರಿಯ ಮತ್ತು ಕಿರಿಯರ ಹೆಸರನ್ನೇ ಉಲ್ಲೇಖಿಸುತ್ತಿದ್ದಾನೆ..ಏಕೆಂದರೆ ಪಾಂಡವರ ಸೇನೆಯಲ್ಲಿ ಅವರ ಮೇಲಿನ ಪ್ರೀತಿ ಹಾಗೂ ಅಭಿಮಾನದಿಂದ ಮುದುಕರೂ , ಚಿಕ್ಕವರು ಸಹ ಅವರಿಗೆ ಗೆಲುವನ್ನು ತಂದು ಕೊಡಲು ಹೋರಾಟಕ್ಕೆ ನಿಂತಿದ್ದಾರೆ ..ತನ್ನ ಪಕ್ಷದಲ್ಲಿ ಇರುವವರು ತನ್ನ ಮೇಲಿನ ಭೀತಿ ಹಾಗೂ ಒತ್ತಾಯಕ್ಕೆ ಮಣಿದು ಸಾಯಲು ಬಂದವರು ಎಂಬುದು ಅವನ ಮನದ ತಲ್ಲಣವಾಗಿದೆ ..ಅಲ್ಲದೇ ಅವನು ಹೆಸರಿಸುವ ಕೆಲವು ಮಂದಿ ,ತನ್ನ ಪಕ್ಷಕ್ಕೆ ಬರಬೇಕಾದವರು , ಆದರೂ ಕೃಷ್ಣನಿಂದಾಗಿ , ಸಂಬಂಧದಿಂದಾಗಿ ಪಾಂಡವರ ಪಕ್ಷ ಸೇರಿದರು ಎಂಬ ಅಸಮಾಧಾನ ಸಹ ವ್ಯಕ್ತ ಪಡಿಸುತ್ತಾನೆ..

ದುರ್ಯೋಧನ ಮೇಲೆ ಉಲ್ಲೇಖಿಸಿದ ವೀರರಲ್ಲಿ ದ್ರುಪದ , ವಿರಾಟ, ಕಾಶಿರಾಜ ಮುಂತಾದವರು ತುಂಬಾ ವಯಸ್ಸಾದವರು , ಅಭಿಮನ್ಯು ದ್ರೌಪದಿಯ ಮಕ್ಕಳು ಇನ್ನೂ ಎಳೆಯರು.. ಅಂದರೆ ಪಾಂಡವರ ಪಕ್ಷದಲ್ಲಿ ಹಿರಿಕಿರಿಯರೆಲ್ಲರೂ ಅವರ ಮೇಲಿನ ಪ್ರೀತಿಯಿಂದ ಪಾಂಡವರಿಗೆ ಜಯ ತಂದು ಕೊಡಲು ಬಂದವರು ..ಹಿರಿಯರಾದರೂ ಸಹ ಅವರೆಲ್ಲಾ ಭೀಮಾರ್ಜುನರಿಗೆ ಸಮನಾದ ಬಲವಂತರು.. ಶ್ರೇಷ್ಠ ಬಿಲ್ಲುಗಾರರು ಎಂಬುದು ಅವನ ತಳಮಳಕ್ಕೆ ಕಾರಣ .. ಶಿಶುಪಾಲನ ಮಗನಾದ ಧೃಷ್ಟಕೇತು ಕೃಷ್ಣನಿಂದಾಗಿ ಪಾಂಡವರ ಕಡೆಗೆ ಹೋಗಿದ್ದ…ಹಾಗೇ ಯಾದವ ವೀರರಾದ ಚೇಕಿತಾನ ಮತ್ತು ಸಾತ್ಯಕಿ , ಬಲರಾಮ ಯುದ್ಧಕ್ಕೆ ಬಾರದೇ ಇದ್ದುದರಿಂದ ಪಾಂಡವ ಸೇನೆ ಸೇರಿದರು .ದ್ರುಪದನ ಮಗಳು ದ್ರೌಪದಿ ಪಾಂಡವರ ಮಡದಿಯಾದ್ದರಿಂದ ದ್ರುಪದ ಅಳಿಯನ ಪರ ಬಂದ, ಹಾಗೇ ಕಾಶೀರಾಜನ ಮಗಳು ಭೀಮನ ಮಡದಿಯಾದ್ದರಿಂದ ಅವನೂ ಅಳಿಯನಿಗಾಗಿ ಬಂದಿದ್ದಾನೆ . ಇವರೆಲ್ಲರೂ ಪಾಂಡವರನ್ನು ತಮ್ಮವರೆಂದು ತಿಳಿದು ಯುದ್ಧಕ್ಕೆ ಬಂದಿದ್ದಾರೆ ಹೊರತು ಯಾವುದೇ ಒತ್ತಡದಿಂದ ಬಂದವರಲ್ಲಾ ಎಂಬುದು ದುರ್ಯೋಧನನ ಅಳಲು.

ಇನ್ನು ಮಹಾ ಪರಾಕ್ರಮಿಗಳೂ ಮತ್ತು ವೀರ್ಯವಂತರಾದ ದ್ರುಪದನ ಮಕ್ಕಳು ಯುಧಾಮನ್ಯು ಮತ್ತು ಉತ್ತಮೌಜ ಕೂಡ ಪಾಂಡವರ ಕಡೆ ಯುದ್ಧಕ್ಕೆ ನಿಂತಿದ್ದಾರೆ . ಹಾಗೇ ಸುಭದ್ರೆಯ ಮಗ ಅಭಿಮನ್ಯು ,ದ್ರೌಪದಿಯ ಐದು ಮಕ್ಕಳೂ ಸೇರಿ ಪಾಂಡವರ ಕಡೆ ಇರುವ ಎಲ್ಲರೂ ಮಹಾರಥರಾಗಿದ್ದಾರೆ ಎಂದು ದ್ರೋಣರ ಬಳಿ ದುರ್ಯೋಧನ ತನ್ನ ಸೇನೆಯ ಬಗ್ಗೆ ಆತ್ಮ ವಿಶ್ವಾಸದಿಂದ ಹೇಳುವುದನ್ನು ಬಿಟ್ಟು ಎದುರಾಳಿ ಪಕ್ಷವನ್ನು ಹೊಗಳುತ್ತಿದ್ದಾನೆ..ಇದರಿಂದ ಅವನೂ ಸಹ ಗೊಂದಲದಲ್ಲಿರುವುದು ತಿಳಿದು ಬರುತ್ತದೆ.. ಅವನು ಪಾಂಡವರ ಕಡೆಯ ವೀರಾಧಿವೀರರ ಪಟ್ಟಿ ಹೇಳುವಾಗ ನಿಜವಾದ ವೀರರನ್ನು ಬಿಟ್ಟು ಮುದುಕರು ಯುವಕರನ್ನು ಉಲ್ಲೇಖ ಮಾಡುತ್ತಾ , ಇವರನ್ನೂ ಸಹ ಕಡೆಗಣಿಸುವಂತಿಲ್ಲಾ, ಅವರೂ ಅತಿರಥರೆಂದು ತಿಳಿಸುತ್ತಿದ್ದಾನೆ.. ಮುಂದೆ ತನ್ನ ಕಡೆಯ ವೀರರು ಬಗ್ಗೆ ಹೇಳುವನು . ಏನೆಂದು ನಾಳೆ ನೋಡೋಣ 🙏

ಸುನಿತಾ ಉಡುಪ, ಜನ್ನಾಡಿ -ಬಿದ್ಕಲಕಟ್ಟೆ

Leave a Reply

Your email address will not be published. Required fields are marked *

error: Content is protected !!