ಗೀತೋಪದೇಶ -ಶ್ಲೋಕ -೫
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಶ್ಲೋಕ ..೫, ಸಂಜಯ ಉವಾಚ…
ಧೃಷ್ಟಕೇತುಶ್ಚೇಕಿತಾನ: ಕಾಶಿ ರಾಜಶ್ಚ ವೀರ್ಯವಾನ್|
ಪುರುಜಿತ್ಕುಂತಿ ಭೋಜಶ್ಚ ಶೈಬ್ಯಶ್ಚ ನರಪುಂಗವ||
ಭಗವದ್ಗೀತೆ ಆರಂಭ ಆಗುವುದೇ ದೃಷ್ಟಿಹೀನನಾದ ಧೃತರಾಷ್ಟ್ರನಿಂದ !! ಹಾಗೇ ಗೀತೆಯನ್ನು ನಿರೂಪಣೆ ಮಾಡುವವನು ದಿವ್ಯ ದೃಷ್ಟಿ ಪಡೆದಂತಹ ಸಾಮಾನ್ಯ ಸಾರಥಿಯಾದ ಸಂಜಯ... ವೇದವ್ಯಾಸರು ವೇದ ಉಪನಿಷತ್ ಸಾರವಾದ ಭಗವದ್ಗೀತೆಯನ್ನು ಹೀಗೇ ಆರಂಭಿಸಲು ಕಾರಣ ..ಯಾರು ಧರ್ಮದ ವಿಷಯದಲ್ಲಿ ಕುರುಡಾಗಿರುವರೋ , ಅಜ್ಞಾನದಿಂದ ಇರುವರೋ ಅವರಿಗೆ ಗೀತೆಯೇ ದಿವ್ಯ ದೃಷ್ಟಿ... ಗೀತೆಯಲ್ಲಿ ಕೃಷ್ಣ ಅರ್ಜುನನ ಪ್ರಶ್ನೆಗಳಿಗೆ ಉತ್ತರ ನೀಡುವ ನೆಪದಲ್ಲಿ ಸಾಮಾನ್ಯ ಜನರನ್ನೂ ಸಹ ಧರ್ಮದ ಮಾರ್ಗದಲ್ಲಿ ಮುನ್ನೆಡೆಸುವನು..ಗೀತೆಯ ಚಿಂತನೆ ಮಾಡುವುದೆಂದರೆ ನಾರಾಯಣನಾದ ಕೃಷ್ಣ ಪರಮಾತ್ಮನೊಡನೆ ನರರಾದ ಮಾನವರ ಸಂವಾದ ..ನಮಗೆ ನಿತ್ಯ ಬದುಕಿನಲ್ಲಿ ಏನೆಲ್ಲಾ ಜಿಜ್ಞಾಸೆ ಮೂಡುವುದೋ , ಅದಕ್ಕೆ ಉತ್ತರವನ್ನು ಪರಮಾತ್ಮ ಗೀತೆಯ ಮೂಲಕ ಹೇಳುತ್ತಾನೆ .. ಹಾಗಾಗಿ ಗೀತಾ ಚಿಂತನೆ ಸಕಲರಿಗೂ ,ಸರ್ವ ಕಾಲಕ್ಕೂ ಜೀವನದುದ್ದಕ್ಕೂ ಬೇಕಾದ ಉಪಾಸನೆ .. ಭಗವದ್ಗೀತೆ ಅಧರ್ಮದ ಹಾದಿಯಲ್ಲಿ ಸಾಗುವ ಕುರುಡ ರಾಜನ ಪುತ್ರ ವ್ಯಾಮೋಹದ ಮಮಕಾರದಿಂದ ಆರಂಭ ಆಗುವುದು .. ಧೃತರಾಷ್ಟ್ರ ಪುತ್ರನ ಮಮಕಾರದಲ್ಲಿ ಸಿಲುಕಿ ಅಧರ್ಮದ ದಾರಿಯಲ್ಲಿದ್ದಾನೆ..ಆದರೆ ಅವನಿಗೆ ನಿಜಕ್ಕೂ ಧರ್ಮದ ಮೇಲೆ ಆಸಕ್ತಿ ಇದೆ .. ಹಾಗಾಗಿ ಸದಾ ಕಾಲ ವಿದುರನ ಮಾತನ್ನು, ಸಲಹೆಯನ್ನು ಕೇಳುವನು ..ಆದರೆ ಅನುಷ್ಠಾನ ಮಾಡಲು ಪುತ್ರ ವ್ಯಾಮೋಹ ಬಿಡುತ್ತಿಲ್ಲಾ ಅಷ್ಟೇ...ಹಾಗೇ ಗೀತೆಯ ಮುಂದಿನ ಶ್ಲೋಕದಲ್ಲಿ ದೂರ್ಯೋಧನನ ಮನಸ್ಸಿನ ಗೊಂದಲ ಕಂಡು ಬರುವುದು .. ದುರ್ಯೋಧನ ಪಾಂಡವರ ಸೇನೆಯ ಅತಿರಥ ಮಹಾರಥರ ಪರಿಚಯ ಮಾಡುತ್ತಾ ದ್ರೋಣಾಚಾರ್ಯರ ಬಳಿ ತನ್ನ ತುಮುಲವನ್ನು ಹೊರಹಾಕುತ್ತಿದ್ದಾನೆ ..ಅವರೆಲ್ಲರೂ ಕಾರಣಾಂತರದಿಂದಲೇ ಪಾಂಡವರ ಪಕ್ಷ ಸೇರಿದರು..ಇಲ್ಲದೇ ಹೋಗಿದ್ದರೆ ತನ್ನ ಕಡೆ ಬರುತ್ತಿದ್ದರು ಎಂದು ಸಂಕಟ ತೋಡಿಕೊಳ್ಳುತ್ತಿದ್ದಾನೆ . ಹಾಗೇ ಯುದ್ಧ ಆರಂಭ ಆಗುವ ಮೊದಲು ದುರ್ಯೋಧನ ವಿನಯವಂತನಾಗಿ ದ್ರೋಣರ ಬಳಿ ತನ್ನ ಪಕ್ಷ ಸೇರುವಂತೆ ಕಾಲಿಗೆರಗಿ ಬಂದು , ಈಗ ಗುರು ಎಂಬುದನ್ನೂ ಮರೆತು ರಾಜನಾಗಿ ದ್ರೋಣಾಚಾರ್ಯರ ಬಳಿ ನಂಜಿನ ಮಾತುಗಳನ್ನಾಡುತ್ತಿದ್ದಾನೆ..
ದುರ್ಯೋಧನ ಇಲ್ಲಿ ದ್ರೋಣರಿಗೆ ” ನಿಮ್ಮ ಶಿಷ್ಯನೇ ಆದ ದ್ರುಪದನ ಮಗ ವ್ಯೂಹಾಕಾರವಾಗಿ ರಚಿಸಿದ ಪಾಂಡವರ ಸೇನೆಯನ್ನು ನೋಡಿರಿ ” ಎಂದು ಆಜ್ಞೆ ಮಾಡುತ್ತಾ ತನ್ನ ದುರ್ವರ್ತನೆ ತೋರುತ್ತಿದ್ದಾನೆ..ಅಂದರೆ ಇಲ್ಲಿ ದುರ್ಯೋಧನ ಬೇಕೆಂತಲೇ ದ್ರೋಣನಿಗೆ ಕುಟುಕುತ್ತಿದ್ದಾನೆ .. ಏಕೆಂದರೆ ದ್ರುಪದ ಮತ್ತು ದ್ರೋಣರು ಒಂದು ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದು, ನಂತರ ಬದ್ಧ ವೈರಿಗಳಾದವರು ..ದ್ರುಪದ ಯಜ್ಞ ಮಾಡಿ ದ್ರೋಣರನ್ನು ಕೊಲ್ಲುವ ಮಗ ಹುಟ್ಟಬೇಕೆಂದು ಕೇಳಿಕೊಂಡಾಗ ಹುಟ್ಟಿದವನೇ ಧೃಷ್ಟದ್ಯುಮ್ನ..ಆದಾಗ್ಯೂ ದೃಷ್ಟದ್ಯುಮ್ನ ಶಸ್ತ್ರ ವಿದ್ಯೆ ಕಲಿಯಬೇಕೆಂದು ಬಂದಾಗ ,ದ್ರೋಣರು ದ್ವೇಷ ಸಾಧಿಸದೇ , ತನ್ನನ್ನೇ ಕೊಲ್ಲುವವನಾದರೂ ಅವನಿಗೆ ವಿದ್ಯೆ ಕಲಿಸಿದ ಮಹಾತ್ಮರು .. ಹಾಗಾಗಿ ದುರ್ಯೋಧನ ಹಿಂದಿನದ್ದನ್ನು ನೆನಪಿಸಿ , ಬೇಕೆಂದೇ ದ್ರೋಣರ ಮನಸ್ಸು ಘಾಸಿಗೊಳಿಸಲು ,ನಿಮ್ಮದೇ ಶಿಷ್ಯನಿಂದ ರಚಿತವಾದ ಸೇನೆ ನೋಡಿರಿ ಎನ್ನುವನು .ಹಾಗೇ ಎದುರಾಳಿ ಪಕ್ಷದಲ್ಲಿರುವ ಅತಿರಥ ಮಹಾರಥರ ಹೆಸರನ್ನು ಹೇಳಿ ಅವರೆಲ್ಲರೂ ಭೀಮಾರ್ಜುನರಿಗೆ ಸಮಬಲರು ಎಂದು ಹೇಳುತ್ತಿದ್ದಾನೆ. ಈ ಶ್ಲೋಕದಲ್ಲಿ ಎದುರಾಳಿ ಪಕ್ಷದಲ್ಲಿರುವ ಧೃಷ್ಟಕೇತು , ಚೇಕಿತಾನ , ಪರಾಕ್ರಮಿಯಾದ ಕಾಶಿರಾಜ, ಪುರುಜಿತ್ತು, ಕುಂತಿಭೋಜ, ಮನುಷ್ಯರಲ್ಲೇ ಶ್ರೇಷ್ಠನಾದ ಶೈಬ್ಯ ಮುಂತಾದ ಶೂರರನ್ನು ನೋಡಿ ಎಂದು ದುರ್ಯೋಧನ ದ್ರೋಣರ ಬಳಿ ವ್ಯಂಗ್ಯವಾಡುತ್ತಾನೆ ..ಏಕೆಂದರೆ ದುರ್ಯೋಧನನ ಮನಸ್ಸು ರಾಡಿಯಾಗಿದೆ. ಹೊಟ್ಟೆಕಿಚ್ಚು, ಅಧಿಕಾರ ಲಾಲಸೆ , ಕ್ರೋಧ ,ಲೋಭ ಮುಂತಾದ ಗುಣಗಳ ಪ್ರಭಾವದಿಂದ ನಲುಗಿದ್ದಾನೆ ..ಮನಸ್ಸು ಗೊಂದಲದ ಗೂಡಾಗಿದೆ .

✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





