ಗೀತೋಪದೇಶ-ಅರ್ಜುನ ವಿಷಾದಯೋಗ ,ಶ್ಲೋಕ ೪

ಪ್ರಥಮೋಧ್ಯಾಯ:

ಅರ್ಜುನ ವಿಷಾದಯೋಗ

ಶ್ಲೋಕ ..೪

ಸಂಜಯ ಉವಾಚ…ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾ ಯುಧಿ |
ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥ:||

ಪುಷ್ಪದಲ್ಲಿರುವ ಮಕರಂದದಂತೆ ಮಹಾಭಾರತ ಮಹಾಕಾವ್ಯದಲ್ಲಿ ಭಗವದ್ಗೀತೆ ಮಹತ್ವಪೂರ್ಣವಾಗಿದೆ .. ಭಗವದ್ಗೀತೆಯ ವಿವರಣೆಯನ್ನು ಹುಟ್ಟು ಕುರುಡನಾದ ಧೃತರಾಷ್ಟ್ರನಿಗೆ ದಿವ್ಯ ದೃಷ್ಟಿ ಉಳ್ಳ ಸಂಜಯ ನೀಡುತ್ತಿದ್ದಾನೆ .. ವೇದವ್ಯಾಸರು ಧೃತರಾಷ್ಟ್ರನಿಗೆ ದಿವ್ಯ ದೃಷ್ಟಿ ಕೊಡುವೆ ಎಂದಾಗ ಧೃತರಾಷ್ಟ್ರ , ತನಗೆ ಯುದ್ಧರಂಗದಲ್ಲಿ ನಡೆಯುವುದನ್ನು ನೋಡುವ ಇಚ್ಛೆಯಿಲ್ಲ..ಅದರ ವರದಿ ಕೇಳಿದರೆ ಸಾಕೆಂದನು..ಏಕೆಂದರೆ ಅವನಿಗೆ ತಿಳಿದಿದೆ..ತಾನು ಪುತ್ರ ವ್ಯಾಮೋಹದಿಂದ ಅಧರ್ಮದ ಹಾದಿಯಲ್ಲಿರುವೆ ಎಂದು .. ಆದ್ದರಿಂದಲೇ ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಏನು ನಡೆದಿದೆ ಎಂದು ಕೇಳಿದನು ..ಹಾಗೇ ಮಗನ ವ್ಯಾಮೋಹದಲ್ಲಿ ಮುಳುಗಿದ ಮನಸ್ಸು , ಮಮಕಾರದಿಂದ ತನ್ನವರಾದ ಕೌರವರು ಮತ್ತು ಪಾಂಡವರು ಏನು ಮಾಡಿದರೆಂದು ಕೇಳುವಂತೆ ಪ್ರೇರೆಪಿಸುತ್ತದೆ .. ಭಗವದ್ಗೀತೆ ಆರಂಭ ಹೀಗೆ ಆಗಿರಲು ಕಾರಣ ,ನಾವೂ ಸಹ ಸಂಸಾರದಲ್ಲಿ ಮೋಹ , ಮಮಕಾರದಲ್ಲಿ ಮುಳುಗಿರುತ್ತೇವೆ ಮತ್ತು ಧರ್ಮದ ವಿಚಾರದಲ್ಲಿ ಧೃತರಾಷ್ಟ್ರನಂತೆ ಕುರುಡಾಗುತ್ತೇವೆ .. ಭಗವದ್ಗೀತೆಯ ಉಪದೇಶದಿಂದ ಧರ್ಮದ ಹಾದಿ ಯಾವುದೆಂದು ನಿಖರವಾಗಿ ತಿಳಿಯಲು ಸಾಧ್ಯ ಆಗುವುದು .

  ಯುದ್ಧದ  ವಿವರಣೆ ನೀಡಲು ಮತ್ತು ಗೀತೆಯನ್ನು  ಯಥಾವತ್ತಾಗಿ ವಿವರಿಸಲು  ವ್ಯಾಸರು ದೊಡ್ಡ ದೊಡ್ಡ ಋಷಿಮುನಿಗಳನ್ನು ದಿವ್ಯ ದೃಷ್ಟಿಗೆ ಆರಿಸಿಕೊಳ್ಳದೇ ಸಾಮಾನ್ಯ ಸಾರಥಿಯನ್ನು ಆಯ್ದುಕೊಂಡರು ..ಸಾರಥಿ ಸಂಜಯ ನಿಷ್ಠಾವಂತ ..ಸಾರಥಿಯಾದವನು ತನ್ನ ಪ್ರಾಣ ಲೆಕ್ಕಿಸದೇ ಒಡೆಯನ ರಕ್ಷಣೆ ಮಾಡುವ ಜವಾಬ್ದಾರಿ ಹೊತ್ತವನಾದ್ದರಿಂದ , ಕೃಷ್ಣನ ಪ್ರತಿ ಭಕ್ತಿ ಉಳ್ಳವನಾದ್ದರಿಂದ ಸಂಜಯನೇ ಸರಿಯಾದ ಆಯ್ಕೆಯಾಗಿದ್ದನು.  

ಇನ್ನು ಗೀತೆಯ ಆರಂಭದಲ್ಲಿ ದುರ್ಯೋಧನ ಗೊಂದಲಗೊಂಡಿದ್ದಾನೆ..ಕಾರಣವೂ ಸಹಜವೇ.. ಏಕೆಂದರೆ ಅಜ್ಜನಾದ ಭೀಷ್ಮಾಚಾರ್ಯರು, ಗುರು ದ್ರೋಣಾಚಾರ್ಯರು ಹೊರಗಿನಿಂದ ತನ್ನ ಪಕ್ಷಕ್ಕೆ ನಿಂತವರಾದರೂ ಅಂತರಂಗದಲ್ಲಿ ರಂಗನ ಭಕ್ತರು ..ಪಾಂಡವ ಪಕ್ಷಪಾತಿಗಳೆಂಬುದು ಅವನಿಗೂ ತಿಳಿದಿತ್ತು.. ಹಾಗಾಗಿ ತನ್ನ ಸೋಲಿಗೆ ಇವರೇ ಕಾರಣರಾಗಬಹುದೆಂಬ ಭಯ , ಆತಂಕದಲ್ಲಿ ದ್ರೋಣಾಚಾರ್ಯರ ಬಳಿ ಬಂದು ಪಾಂಡವರ ಸೇನೆಯನ್ನು ,ಅವರ ವ್ಯೂಹ ರಚನೆಯನ್ನು ನೋಡಿ ಎಂದು ಹೇಳುತ್ತಿದ್ದಾನೆ .. ಪಾಂಡವರ ಕಡೆ ಹೋರಾಡಲು ,ಅವರ ಮೇಲಿನ ಪ್ರೀತಿ ಅಭಿಮಾನದಿಂದ ಎಂತೆಂತಹ ಅತಿರಥ ಮಹಾರಥರು ಬಂದಿದ್ದಾರೆಂದೂ ಉಲ್ಲೇಖಿಸುತ್ತಿದ್ದಾನೆ..ಪಾಂಡವರ ಕಡೆ ಇರುವ ಎಲ್ಲಾ ಶೂರರು ಭೀಮಾರ್ಜುನರಿಗೆ ಸಮನಾದವರು ..ಯುಯುಧಾನ, ವಿರಾಟ , ದ್ರುಪದ ಮುಂತಾದವರೆಲ್ಲಾ ಹಿರಿಯರಾದರೂ ಸಹ ಶ್ರೇಷ್ಠ ಬಿಲ್ಲುಗಾರ ರಾಗಿದ್ದಾರೆ. ಎಂದು ತಿಳಿಸುತ್ತಿದ್ದಾನೆ..

ಧನ್ಯವಾದಗಳು 🙏

✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!