ಸಾಹಿತ್ಯ ಹಾಗೂ ಹಿಪ್ನೋಥೆರಪಿ ಕ್ಷೇತ್ರದಲ್ಲಿ ಮಿಂಚುತ್ತಿರುವ “ಸುಪ್ತದೀಪ್ತಿ”

ಸಂದರ್ಶನ ಹಾಗೂ ಲೇಖನ : ದಿವ್ಯ ಮಂಚಿ

ಕೆಲವು ದಿನಗಳ ಹಿಂದೆ ಹೀಗೆ ಎಲ್ಲೋ ಹಿಪ್ನೊಟೈಸ್ ಬಗ್ಗೆ ಮಾತನಾಡುವುದು ಕೇಳಿದ್ದೆ, ಅದಕ್ಕೆ ಸುತ್ತ ಇದ್ದ ಕೆಲವರು ತರಹೇವಾರಿ ಅಭಿಪ್ರಾಯ ವ್ಯಕ್ತಪಡಿಸಿದರು. ಹಿಪ್ನೊಟೈಸ್ ಮಾಡುವವರು ನಮ್ಮ ಮನಸ್ಸನ್ನು ವಶೀಕರಣ ಮಾಡುತ್ತಾರಂತೆ, ಮತ್ತೆ ನಮಗೆ ಏನು ಆದರೂ ಗೊತ್ತೇ ಆಗಲ್ಲ ಅಂತೆ -ಹೀಗೆ ಅಂತೆ ಕಂತೆಗಳ ಇನ್ನೂ ಹತ್ತು ಹಲವು ನಕಾರಾತ್ಮಕ ಅಭಿಪ್ರಾಯಗಳೇ ನನ್ನ ಕಿವಿಯ ಬಾಗಿಲನ್ನು ತಟ್ಟುತ್ತಾ ಇದ್ದವು.
ಈ ಬಗ್ಗೆ ಹಾಗೇ ಸುಮ್ಮನೆ ಯೋಚನೆ ಮಾಡುತ್ತಾ ಇದ್ದವಳು ವಾಸ್ತವದಲ್ಲಿ ಹಿಪ್ನೊಟೈಸ್, ಹಿಪ್ನೋಥೆರಪಿ ಅಂದರೇನು, ಅದರ ಉಪಯೋಗ ಏನು ಎನ್ನುವ ಹಂಬಲ ಹೆಚ್ಚಾಗಿ ಅಂತರ್ಜಾಲದ ಮೊರೆ ಹೋದಾಗ ಒಂದಿಷ್ಟು ಮಾಹಿತಿ ಸಿಕ್ಕಿತಾದರೂ ಅದನ್ನು ಬಲ್ಲವರಿಂದಲೇ ತಿಳಿದರೆ ಉತ್ತಮ ಎನ್ನಿಸಿತು. ಆಗಲೇ ಗೆಳತಿಯೊಬ್ಬರು ತುಂಬಾ ದಿನಗಳ ಹಿಂದೆ ಹೇಳಿದ ಹೆಸರೊಂದು ನೆನಪಿಗೆ ಬಂತು. ಅವರೇ ವಿದೇಶದಲ್ಲಿ ಹಿಪ್ನೋಥೆರಪಿ ಬಗ್ಗೆ ಅಧ್ಯಯನ ಮಾಡಿದ ಜ್ಯೋತಿ ಮಹಾದೇವ್.

ಇವರು ಓರ್ವ ಹಿಪ್ನೋಥೆರಪಿಸ್ಟ್. ಜೊತೆಗೆ ಕವಯತ್ರಿ ಕೂಡಾ ಹೌದು. “ಸುಪ್ತದೀಪ್ತಿ” ಇವರ ಕಾವ್ಯನಾಮ. ದಿನವೂ ಮೂಡಿ ಬರುವ ಸಾಲುಗಳು ಇವರ ಸಾಹಿತ್ಯ ಪ್ರೇಮವನ್ನು ವಿವರಿಸುತ್ತವೆ.

“ಮುಂಗಾವಲು ಬೆಂಗಾವಲು ಸಕಲ ಬಲದ ಕಣ್ಗಾವಲು ಇಲ್ಲದೆಯೂ ಧೀರತನದಿ ಸಾಗಬಲ್ಲ ನವಬೆಳಗು”
“ಬೊಗಸೆ ತುಂಬಿ ಎತ್ತಿ ಸುರಿದು ಕರಗಿ ನೆನೆದು ಕರವ ಮುಗಿದು ಮತ್ತೆ ಬನ್ನಿರೆಂದು ಕರೆದು ಪರದೆ ಎಳೆದ ಪಕ್ಷಬೆಳಗು”

ವಿವಾಹದ ಬಳಿಕ ಪತಿಯ ಉದ್ಯೋಗದ ನಿಮಿತ್ತ ವಿದೇಶಕ್ಕೆ ಪಯಣ ಬೆಳೆಸಿದರಾದರೂ ತಮ್ಮ ವಿದೇಶ ಪ್ರಯಾಣವನ್ನು ವ್ಯರ್ಥ ಮಾಡದೇ ತಮ್ಮ ಬರವಣಿಗೆ ಮೂಲಕ ಕರುನಾಡಿನ ಕಂಪನ್ನು ವಿದೇಶದಲ್ಲಿ ಪಸರಿಸಿದರು. ತಮ್ಮಲ್ಲಿದ್ದ ಬರವಣಿಗೆ ಪ್ರತಿಭೆಯನ್ನು ಸಣ್ಣ ಸಣ್ಣ ಕವನಗಳ ಮೂಲಕ ವಿದೇಶದಲ್ಲಿ ಕನ್ನಡದ ಬೆಳಕನ್ನು ಹರಿಸಿದರು. ಅಷ್ಟು ಮಾತ್ರವಲ್ಲ ವಿದೇಶದ ಪ್ರತಿಷ್ಟಿತ ಸಂಸ್ಥೆಯೊಂದರಿಂದ ಹಿಪ್ನೋಥೆರಪಿ ಕಲಿತು ಸರ್ಟಿಫೈಡ್ ಹಿಪ್ನೋಥೆರಪಿಸ್ಟ್ ಎಂಬ ಪ್ರಮಾಣ ಪತ್ರವನ್ನೂ ಪಡೆದುಕೊಂಡಿದ್ದಾರೆ. ಹಾಗೂ ಪ್ರಸ್ತುತ ತವರು ನಾಡಿನಲ್ಲಿ ಹಿಪ್ನೋಥೆರಪಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು 1966ರ ಅಕ್ಟೋಬರ್ 1ರಂದು ಕೆ.ಕೆ. ರಾವ್ ಹಾಗೂ ರಮಾದೇವಿ ಅವರ ಮಗಳಾಗಿ ಮಂಗಳೂರಿನಲ್ಲಿ ಜನಿಸಿದರು. ತಂದೆಯವರು ನೌಕರಿ ನಿಮಿತ್ತ ಊರೂರು ಸುತ್ತುತ್ತಿದ್ದು, ಬಳಿಕ ಕಾರ್ಕಳದಲ್ಲಿ ನೆಲೆಸಿದ್ದರು. 1987ರ ನವೆಂಬರ್ ನಲ್ಲಿ ಕಾರ್ಕಳದ ಮಹಾದೇವ್ ಅವರನ್ನು ವರಿಸಿದ ಇವರು ಓರ್ವ ಪುತ್ರನನ್ನು ಹೊಂದಿದ್ದಾರೆ. ಇವರ ಮಗ ಅಮೆರಿಕಾದಲ್ಲಿ ಸಾಫ್ಟ್ ವೆರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1992ರಲ್ಲಿ ಪತಿಯ ನೌಕರಿಯ ನಿಮಿತ್ತ ವಿದೇಶ ಪ್ರಯಾಣ ಬೆಳೆಸಿದ ಇವರು 2010ರಲ್ಲಿ ಹಲವು ವರುಷಗಳ ಬಳಿಕ, ತಾಯಿ ನಾಡಿಗೆ ಮರಳಿ, ಮಣಿಪಾಲದಲ್ಲಿ ನೆಲೆಸಿದ್ದಾರೆ.

ಬಾಲ್ಯದಿಂದಲೇ ಕಥೆ ಹೇಳುವ ಅಭ್ಯಾಸ ಹೊಂದಿದ್ದ ಇವರ ಸಾಹಿತ್ಯದ ಅಭಿರುಚಿಗೆ ಕನ್ನಡ ಪಂಡಿತರಾಗಿದ್ದ ಸೋದರ ಮಾವ ಬೆನ್ನುತಟ್ಟಿ ಬೆಂಬಲ ಸೂಚಿಸಿದ್ದರು. ಬಾಲ್ಯದಲ್ಲಿನ ಇವರ ಊರಿಂದೂರಿನ ಪಯಣದ ಬಗ್ಗೆ ಹೇಳುತ್ತ, ಬೇರೆ ಬೇರೆ ಊರುಗಳಲ್ಲಿ ಬಾಳಿದ ಕಾರಣ ಈ ಪಯಣ ಜೀವನವನ್ನು ತುಂಬಿಕೊಟ್ಟಿದೆ. ಜೀವನದ ಬೇರೆಬೇರೆ ಮಗ್ಗುಲುಗಳನ್ನು ಪರಿಚಯಿಸಿದೆ ಎನ್ನುತ್ತಾರೆ.

ಇವರು ಬಿ.ಎಸ್ಸಿ. ಹಾಗೂ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಪಡೆದಿದ್ದು ಸೈಕಾಲಜಿಯಲ್ಲಿ ಡಿಪ್ಲೊಮಾ ಕೂಡಾ ಮಾಡಿದ್ದಾರೆ. ಇವರು ಕ್ಯಾಲಿಫೋರ್ನಿಯಾದಲ್ಲಿ ಇದ್ದ ಅವಧಿಯಲ್ಲಿ ಲಾಸ್ ಎಂಜಲೀಸ್ ಬಳಿ ಇರುವ ಡಾ. ಜಾರ್ಜ್ ಕಪ್ಪಾಸ್ ಅವರ “ಹಿಪ್ನೋಥೆರಪಿ ಮೋಟಿವೇಟ್ ಇನ್ಸ್ಟಿಟ್ಯೂಟ್”ನಲ್ಲಿ ಆನ್ಲೈನ್ ಕ್ಲಾಸ್’ಗಳ ಮೂಲಕ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ನಗರದ ಬಳಿಯಿದ್ದ “ಹಿಪ್ನೋಥೆರಪಿ ಟ್ರೈನಿಂಗ್ ಇನ್ಸ್ಟಿಟ್ಯೂಟ್”ನಲ್ಲಿ ನೇರ ವಿದ್ಯಾರ್ಥಿಯಾಗಿ ಹಿಪ್ನೋಥೆರಪಿಯನ್ನು ಅಧ್ಯಯನ ಮಾ ಡಿದ್ದಾರೆ. ಈ ಎರಡೂ ಸಂಸ್ಥೆಗಳಿಂದಲೂ ಇವರಿಗೆ “ಸರ್ಟಿಫೈಡ್ ಹಿಪ್ನೋಥೆರಪಿಸ್ಟ್” ಎಂಬ ಪ್ರಮಾಣಪತ್ರ ಲಭಿಸಿದೆ. ಅಲ್ಲದೆ ಉಡುಪಿ ಜಿಲ್ಲೆಯಲ್ಲಿ ಹಿಪ್ನೋಥೆರಪಿ ಅಧ್ಯಯನ ಮಾಡಬೇಕು ಎಂದು ಬಂದ ಅನೇಕ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಧಾರೆ ಎರೆದಿದ್ದಾರೆ.

ಉಡುಪಿ ಟೈಮ್ಸ್’ನ ಈ ವಾರದ ವ್ಯಕ್ತಿಯಲ್ಲಿ ಜ್ಯೋತಿ ಮಹಾದೇವ್ ಅವರ ಮಾತಿನಲ್ಲಿ ಹಿಪ್ನೋಥೆರಪಿ ಬಗೆಗೆ ಒಂದಿಷ್ಟು ಮಾಹಿತಿ, ಅವರ ಅನುಭವದ ನೆನಪುಗಳನ್ನು ಅವರದ್ದೇ ಮಾತುಗಳಲ್ಲಿ ತಿಳಿಯೋಣ…

ಹಿಪ್ನೋಥೆರಪಿ ಕ್ಷೇತ್ರ:

1) ಉ.ಟೈಮ್ಸ್ : ಹಿಪ್ನೋಥೆರಪಿ ಎಂದರೇನು? ನೀವು ಈ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಕಾರಣ?

ಅತಿಥಿ : ಚಿಕಿತ್ಸೆಗಾಗಿ ಸಮ್ಮೋಹನಕ್ಕೆ ಒಳಪಡಿಸುವುದೇ ಹಿಪ್ನೋಥೆರಪಿ. ಹಿಪ್ನೋಸಿಸ್, ಹಿಪ್ನೋಟೈಸ್ ಎಂಬುದು ಥೆರಪಿಯಾಗಿ ಬಳಕೆಯಾಗುವ ಚಿಕಿತ್ಸಾ ವಿಧಾನ. ಹಿಪ್ನೋಥೆರಪಿ ಎನ್ನುವುದು ಮನಸ್ಸಿನ ಮೂಲಕ ದೇಹಕ್ಕೆ ಆಗುವಂತಹ ಯಾವುದೇ ತೊಂದರೆಗಳಿಗೆ- ಅಂದರೆ- ಸೈಕೋಸೊಮ್ಯಾಟಿಕ್ ತೊಂದರೆಗಳಿಗೆ -ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ.

ನಾವು ಅಮೆರಿಕಾದಲ್ಲಿ ಇದ್ದ ಅವಧಿಯಲ್ಲಿ, 2006ರಲ್ಲಿ ನನ್ನ ಪತಿಯ ಸ್ನೇಹಿತರೊಬ್ಬರು ಡಾ.ಮೈಕೆಲ್ ನ್ಯೂಟನ್ ಅವರ “ಜರ್ನಿ ಆಫ್ ಸೋಲ್ಸ್” ಎಂಬ ಪುಸ್ತಕವನ್ನು ನೀಡಿದರು. ಆತ್ಮಗಳ ಕುರಿತಾದ ಪುಸ್ತಕವಾಗಿತ್ತು. ಪುಸ್ತಕ ಓದಿದ ನನಗೆ ಆ ಕ್ಷೇತ್ರದಲ್ಲಿ ಆಸಕ್ತಿ ಹುಟ್ಟಿಕೊಂಡಿತು. ಅನಂತರ ಅವರದ್ದೇ ಮತ್ತೆರಡು ಪುಸ್ತಕಗಳನ್ನು ಓದಿದೆ.

ಆ ಸಮಯದಲ್ಲಿ ಅಮೆರಿಕಾದಲ್ಲಿ ಹಿಪ್ನೋಥೆರಪಿಯಲ್ಲಿ ತುಂಬಾ ಹೆಸರು ಮಾಡಿದ್ದ ಡಾ. ಬ್ರಯಾನ್ ವೈಸ್ ಅವರ ಬಗ್ಗೆ ತಿಳಿದು ಅವರು ಬರೆದ ಪುಸ್ತಕಗಳನ್ನು ಓದಿದ್ದೆ, ಜೊತೆಗೆ ಅವರ ವರ್ಕ್ ಶಾಪ್’ನಲ್ಲೂ ಭಾಗವಹಿದ್ದೆ. ಆ ನಂತರ ಹಿಪ್ನೋಥೆರಪಿ ಬಗ್ಗೆ ಆಸಕ್ತಿ ಇನ್ನಷ್ಟು ಬೆಳೆಯಿತು. ಈ ಕ್ಷೇತ್ರದ ಆಯ್ಕೆ ಪುಸ್ತಕ ಓದುವ ಅಭಿರುಚಿಯಿಂದ ಆಯಿತು ಅನ್ನಬಹುದು.

2) ಉ.ಟೈಮ್ಸ್ : ಹಿಪ್ನೋಥೆರಪಿ ಚಿಕಿತ್ಸೆ ಇತರ ಮಾನಸಿಕ ಸಮಸ್ಯೆಗಳಿಗೆ ನೀಡುವ ಚಿಕಿತ್ಸೆಗಳಿಗಿಂತ ಹೇಗೆ ಭಿನ್ನ ಮತ್ತು ಇದಕ್ಕೆ ಯಾವ ರೀತಿ ಶಿಕ್ಷಣ ಬೇಕಾಗುತ್ತದೆ?

ಅತಿಥಿ: ಮಾತ್ರೆಯಿಂದ ಮಾತ್ರವೇ ಚಿಕಿತ್ಸೆ (ಗುಣಪಡಿಸಬಹುದಾದ) ಮಾಡಬಹುದಾದ ತೀವ್ರತರವಾದ ಮಾನಸಿಕ ಸಮಸ್ಯೆಗಳಿಗೆ ಹಿಪ್ನೋಥೆರಪಿ ಸಹಕಾರಿ ಆಗುವುದಿಲ್ಲ. ಸ್ಕಿಝೋಫ್ರೇನಿಯಾನಂತಹ ಸಮಸ್ಯೆ ಹೊಂದಿರುವವರಿಗೆ ಯಾವುದೇ ವಿಚಾರಕ್ಕೆ ಸಂಬಂಧಿಸಿ ಏಕಾಗ್ರತೆ ಸಾಧಿಸಲು ತುಂಬಾ ಕಷ್ಟವಾಗುತ್ತದೆ. ಇಂತಹ ಸಮಸ್ಯೆ ಇರುವವರಿಗೆ ಔಷಧಿ ನೀಡಿ ಆರೋಗ್ಯ ಸ್ಥಿತಿ ಒಂದು ಹಂತಕ್ಕೆ ಬಂದ ನಂತರ ಹಿಪ್ನೋಥೆರಪಿ ಮೂಲಕ ಅವರ ಮನಃಸ್ಥಿತಿಯನ್ನು ಅವರ ಹಿಡಿತದಲ್ಲಿ ಇಟ್ಟುಕೊಳ್ಳುವ ಹಾಗೆ ಮಾಡಬಹುದು.
ಬೈಪೋಲಾರ್ ಡಿಸಾರ್ಡರ್, ಫೋಬಿಯಾಗಳಿಗೆ ಇದು ಸಹಕಾರಿಯಾಗುತ್ತದೆ. ಸಾಮಾನ್ಯವಾದಂತಹ ಟೆನ್ಶನ್, ಆಂಕ್ಸೈಟಿ, ಸ್ಟ್ರೆಸ್, ಏಕಾಗ್ರತೆ ಕೊರತೆ, ನೆನಪಿನ ಶಕ್ತಿ ಕೊರತೆಯಂತಹ ಸಮಸ್ಯೆಯಿಂದ ಹಿಡಿದು ದೊಡ್ಡಮಟ್ಟದ ಖಿನ್ನತೆಗೂ ಮನೋದೈಹಿಕ ಸಮಸ್ಯೆಗಳಿಗೂ ಪರಿಹಾರ ನೀಡುವಲ್ಲಿ ಇದು ಪರಿಣಾಮಕಾರಿಯಾಗುತ್ತದೆ. ಮನಸ್ಸಿಗೆ ತೀರಾ ಆಘಾತ ಉಂಟುಮಾಡುವ ಸಮಸ್ಯೆಗಳ ಪ್ರಭಾವ ದೇಹದ ಮೇಲೆ ಇರುತ್ತದೆ. ಇವುಗಳು ಸಾಮಾನ್ಯವಾಗಿ ದೈಹಿಕ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಕಂಡುಬರುವುದಿಲ್ಲ. ಆದರೂ ದೇಹದ ಯಾವುದೋ ಒಂದು ಭಾಗದಲ್ಲಿ ನೋವು, ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇಂತಹ ಮನೋದೈಹಿಕ ಸಮಸ್ಯೆಗಳಿಗೆ ಹಿಪ್ನೋಥೆರಪಿ ತುಂಬಾ ಉಪಕಾರಿಯಾಗಿದೆ. ಇದರೊಂದಿಗೆ ಎತ್ತರದ ಸ್ಥಳಕ್ಕೆ ತೆರಳಿದಾಗ, ವೇಗವಾಗಿ ನಡೆದಾಗ, ನೀರನ್ನು ಕಂಡಾಗ, ಜಿರಳೆ, ಹಲ್ಲಿ, ಜೇಡ ಮುಂತಾದ ಕೀಟಗಳನ್ನು ಕಂಡಾಗ ಉಂಟಾಗುವಂತಹ ವಿಪರೀತ ಭಯ (ಫೋಬಿಯಾ)ದ ಸಮಸ್ಯೆಗಳಿಗೆ ಹಿಪ್ನೋಥೆರಪಿ ಚಿಕಿತ್ಸೆ ಸೂಕ್ತವಾಗುತ್ತದೆ.

ಹಿಪ್ನೋಥೆರಪಿ ಕಲಿಯಲು ಬೇಕಾದ ವಿದ್ಯಾರ್ಹತೆ ಬಗ್ಗೆ ಹೇಳುವುದಾದರೆ- ಬೇಸಿಕ್ ವಿದ್ಯಾರ್ಹತೆ ಇಂತಹದ್ದೇ ಬೇಕೆಂದೇನಿಲ್ಲ. ನಾನು ಕಲಿಯುತ್ತಿದ್ದಾಗ ನನ್ನ ಜೊತೆ 36 ಜನರು ಬೇರೆ ಬೇರೆ ಕ್ಷೇತ್ರದ ಹಿನ್ನೆಲೆಯಿಂದ ಬಂದವರೂ ಇದ್ದರು. ಅಂದರೆ ಲಾಯರುಗಳು, ಡಾಕ್ಟರುಗಳು, ಇಂಜಿನಿಯರುಗಳು, ಸಿ.ಎ. ಆಗಿರುವಂಥವರೂ ಹಿಪ್ನೋಥೆರಪಿಯನ್ನು ಅಭ್ಯಾಸ ಮಾಡುತ್ತಿದ್ದರು. ನಾನೊಬ್ಬಳೇ ಗೃಹಿಣಿಯಾಗಿದ್ದೆ.

3) ಉ.ಟೈಮ್ಸ್ : ಹಿಪ್ನೋಥೆರಪಿಸ್ಟ್ ಆಗಿ ಕೆಲಸ ಮಾಡುವುದು ಎಷ್ಟು ಸವಾಲಿನ ಕೆಲಸ?

ಅತಿಥಿ: ಈ ಕ್ಷೇತ್ರದಲ್ಲಿ ಸವಾಲು ಎನ್ನುವುದು ಚಿಕಿತ್ಸೆಯನ್ನು ಅರಸಿ ಬರುವವರನ್ನು ಅವಲಂಬಿಸಿರುತ್ತದೆ. ಮಾನಸಿಕ ತೊಂದರೆಗಳನ್ನು ಜನರು ಮೂಢನಂಬಿಕೆಗೆ ಜೋಡಿಸುತ್ತಾರೆ. ಆದ್ದರಿಂದ ಅದು ಸವಾಲಿನ ಕೆಲಸವಾಗಿದೆ. ಮಾನಸಿಕ ತೊಂದರೆಗಳು ಅಥವಾ ಇನ್ನಿತರೆ ಆರೋಗ್ಯ ಸಮಸ್ಯೆಗಳನ್ನು ದೆವ್ವದ ಕಾಟ ಎಂದು ತಾಯಿತಗಳನ್ನು ಕಟ್ಟಿಸಿಕೊಳ್ಳುವುದು, ಪೂಜೆ-ಪುನಸ್ಕಾರಗಳನ್ನು ನಡೆಸುವಂತಹ ಪದ್ಧತಿಗಳು ಇಲ್ಲಿದೆ. ಹೀಗಿರುವಾಗ ಜನರ ನಂಬಿಕೆಗಳ ನಡುವೆ ಸಮಸ್ಯೆ ಏನು ಎನ್ನುವುದನ್ನು ಗುರುತಿಸುವುದು ಹಿಪ್ನೋಥೆರಪಿಸ್ಟ್’ಗೆ ಸವಾಲಿನ ಕೆಲಸವಾಗುತ್ತದೆ.

4) ಉ.ಟೈಮ್ಸ್: ಭವಿಷ್ಯದಲ್ಲಿ ಹಿಪ್ನೋಥೆರಪಿಸ್ಟ್ ಆಗಬೇಕು ಎನ್ನುವವರಿಗೆ ನಿಮ್ಮ ಸಲಹೆ ಏನು?

ಅತಿಥಿ: ಹಿಪ್ನೋಥೆರಪಿ ಕಲಿಯಬೇಕು ಹಾಗೂ ಅದರ ಚಿಕಿತ್ಸೆ ಪಡೆಯಬೇಕು ಎನ್ನುವವರಿಗೆ ಮೊದಲನೆಯದಾಗಿ ಇರಬೇಕಾದದ್ದು ಇಚ್ಚೆ. ಕುತೂಹಲಕ್ಕೆ ಕಲಿತವರು ಇದನ್ನು ವೃತ್ತಿಯಾಗಿ ಮುಂದುವರಿಸಲು ಸಾಧ್ಯವಿಲ್ಲ. ಇದರೊಂದಿಗೆ ಈ ಕ್ಷೇತ್ರದ ಬಗ್ಗೆ ಅನುಮಾನ ಇರಬಾರದು. ಹಿಪ್ನೋಥೆರಪಿಯಿಂದ ಉಪಯೋಗ ಇದೆಯೋ ಇಲ್ಲವೋ, ನನಗೆ ಇದು ಸಹಕಾರಿ ಆಗುವುದೋ ಇಲ್ಲವೋ ಎಂಬ ಭೀತಿ/ಅನುಮಾನ ಇರಬಾರದು. ನಮ್ಮಲ್ಲಿ ನಮಗೆ ಆತ್ಮವಿಶ್ವಾಸ ಇರಬೇಕು.

5) ಉ.ಟೈಮ್ಸ್ : ನೀವು ಓರ್ವ ಹಿಪ್ನೋಥೆರಪಿಸ್ಟ್ ಆಗಿ ನಿಮಗೆ ಮರೆಯಲಾಗದ ಘಟನೆ ಯಾವುದಾದರೂ ಇದೆಯೆ?

ಅತಿಥಿ: ಈ ಕ್ಷೇತ್ರದಲ್ಲಿ ಮರೆಯಲಾಗದ ಘಟನೆಗಳು ತುಂಬಾ ಇವೆ. ಇದುವರೆಗೂ ಸುಮಾರು 800ಕ್ಕೂ ಅಧಿಕ ಮಂದಿಗೆ ಥೆರಪಿ (ಚಿಕಿತ್ಸೆ) ನೀಡಿದ್ದೇನೆ. 50 ಶೇಕಡಕ್ಕೂ ಅಧಿಕ ಕೇಸುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ. ಇವುಗಳಲ್ಲಿ ಅವಿಸ್ಮರಣೀಯ ಕೇಸುಗಳು ಹಲವು. ಒಂದನ್ನಷ್ಟೇ ಉಲ್ಲೇಖಿಸುತ್ತೇನೆ:

ಒಬ್ಬರಿಗೆ ಬಾವಿಯಲ್ಲಿ ನೀರು ಸೇದುವುದು ಎಂದರೆ ತುಂಬಾ ಭಯವಾಗುತ್ತಿತ್ತು. ಕೆಲವು ವರ್ಷಗಳಿಂದ ಈ ಒಂದು ಭಯದ ಜೊತೆಗೆ ಅವರು ಬದುಕುತ್ತಿದ್ದರು. ಯಾರಿಂದಲೋ ನನ್ನ ಬಗ್ಗೆ ಮಾಹಿತಿ ಪಡೆದ ಅವರು, ನನ್ನ ಬಳಿ ಬಂದಿದ್ದರು. ಇವರಿಗೆ ನೀಡಿದ ಒಂದೇ ಒಂದು ಸೆಶನ್‍ನಲ್ಲಿ (ಮೊದಲ ಚಿಕಿತ್ಸೆಯಲ್ಲಿ) ಅವರ ಭೀತಿ ದೂರವಾಗಿ ಗುಣಮುಖರಾಗಿದ್ದರು. ಇಂತಹ ಅನೇಕ ಅನುಭವಗಳು ಈ ಕ್ಷೇತ್ರದಲ್ಲಿ ನನಗಾಗಿವೆ.

6) ಉ. ಟೈಮ್ಸ್ : ಪುನರ್ಜನ್ಮ ಪರಿಕಲ್ಪನೆ ಹಾಗೂ ನಕರಾತ್ಮಕ ಶಕ್ತಿ (ದೆವ್ವ, ಭೂತ) ಮಾನವನ ದೇಹದ ಮೇಲೆ ಪ್ರಭಾವ ಬೀರುತ್ತದೆ ಎಂಬ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಅತಿಥಿ: ಹಿಂದೂ ತತ್ತ್ವಶಾಸ್ತ್ರದ ಪ್ರಕಾರ ಪುನರ್ಜನ್ಮ ಎನ್ನುವುದು ಅಸ್ತಿತ್ವದಲ್ಲಿದೆ. ಆತ್ಮಕ್ಕೆ ಅಳಿವಿಲ್ಲ. ಒಂದು ದೇಹದಲ್ಲಿ ಹುಟ್ಟಿ ಬಂದದ್ದು ದೇಹ ಕಳಚಿ ಹೋದಮೇಲೆ ಮತ್ತೊಂದು ದೇಹವನ್ನು ಹೊಕ್ಕು ಹುಟ್ಟಿಬರುತ್ತದೆ. ನಾವು ಕರ್ಮಸಿದ್ಧಾಂತದಲ್ಲಿ ಪುನರ್ಜನ್ಮದ ತತ್ತ್ವಗಳನ್ನು ಕಟ್ಟಿ ಹಾಕುತ್ತೇವೆ. ನಮ್ಮ ಆಚಾರ-ವಿಚಾರಗಳನ್ನು ಪ್ರತಿಭೆಗಳನ್ನು ಪೂರ್ವಜನ್ಮದ ಸಂಸ್ಕಾರ ಎಂದು ಹೇಳುತ್ತೇವೆ. ಹಾಗಾಗಿ ನಮ್ಮ ಪೂರ್ವಜನ್ಮದ ಕರ್ಮದಿಂದ ನಮಗೆ ಮತ್ತೆ ಮರುಜನ್ಮ ಸಿಗುತ್ತದೆ ಎನ್ನುವುದು ಸತ್ಯವಾದ್ದು. ಕೆಲವರು ಇದನ್ನು ನಂಬುತ್ತಾರೆ ಮತ್ತೆ ಕೆಲವರು ಇದನ್ನು ನಂಬುವುದಿಲ್ಲ ಅಷ್ಟೇ.

ನಕರಾತ್ಮಕ ಶಕ್ತಿಗಳು ಮನುಷ್ಯರ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಬರೇ ಮೂಢನಂಬಿಕೆಯಲ್ಲ. ಇದನ್ನು ಅಮೆರಿಕಾದ ಸೈಕಿಯಾಟ್ರಿಸ್ಟ್ ಬರಹಗಾರರೇ ತಮ್ಮ ಪುಸ್ತಕಗಳಲ್ಲಿ ಬರೆದಿದ್ದಾರೆ. ಆದರೆ ಭಾರತದ ಕೆಲವು ಮನಃಶಾಸ್ತ್ರಜ್ಞರು ಇದನ್ನು ಒಪ್ಪಿಕೊಳ್ಳುವುದಿಲ್ಲ. ನಾವು ರೇಕೀಯನ್ನು ನಂಬುತ್ತೇವೆ. ದೇಹ-ಆತ್ಮ ಇವುಗಳನ್ನು ನಂಬುತ್ತೇವೆ. ಆದರೆ ದೆವ್ವ-ಭೂತ-ಪ್ರೇತ ಎನ್ನುವ ಪರಿಕಲ್ಪನೆಯನ್ನು ಅಲ್ಲಗಳೆಯುತ್ತೇವೆ.
ಇಲ್ಲಿ ಪ್ರೇತ ಎನ್ನುವುದು ದೇಹ ಇಲ್ಲದ ಆತ್ಮ. ಈ ದೇಹ ಇಲ್ಲದ ಆತ್ಮಗಳು ಮತ್ತೊಂದು ದೇಹವನ್ನು ಸೇರಿದಾಗ ಖಂಡಿತವಾಗಿಯೂ ಅಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಗಳಿಗೂ ಹಿಪ್ನೋಥೆರಪಿಯಲ್ಲಿ ಚಿಕಿತ್ಸೆ ಇದೆ.

7) ಉ.ಟೈಮ್ಸ್ : ಹಿಪ್ನೋಟಿಸಂ ಬಗ್ಗೆ ಋಣಾತ್ಮಕವಾದ ಅಭಿಪ್ರಾಯ ಬರಲು ಕಾರಣ ಏನು? ಯಾರನ್ನು ಬೇಕಾದರೂ ಹಿಪ್ನೊಟೈಸ್ ಮಾಡಬಹುದೆ?

ಅತಿಥಿ : ಹಿಪ್ನೋಟಿಸಂ ಅಂದರೆ- ಮಾನಸಿಕ ಸಮಸ್ಯೆಗಳಿಂದ ಹೊರಬರಲು ಬಳಸಿಕೊಳ್ಳಬಹುದಾದ, ಅಡ್ಡಪರಿಣಾಮಗಳೇ ಇಲ್ಲದ ಸೂಕ್ತ ಚಿಕಿತ್ಸಾವಿಧಾನ. ಇದರ ಜೊತೆಗೆ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು, ಆತ್ಮವಿಶ್ವಾಸ ಹೆಚ್ಚಿಸಲು ಇದು ಸಹಕಾರಿಯಾಗುತ್ತದೆ.
ಈ ಕ್ಷೇತ್ರದ ಬಗ್ಗೆ ಋಣಾತ್ಮಕವಾದ ಅಭಿಪ್ರಾಯ ಬರಲು ಕೆಲವೊಂದು ಸಿನಿಮಾಗಳು ಹಾಗೂ ಕೆಲವೊಂದು ಕಾದಂಬರಿಗಳಲ್ಲಿ ಹಿಪ್ನೋಥೆರಪಿ ಮೂಲಕ ವ್ಯಕ್ತಿಗಳನ್ನು ಸಮ್ಮೋಹನಗೊಳಿಸಿ ತಮ್ಮ ಕೆಟ್ಟ ಕಾರ್ಯಸಾಧನೆ ಮಾಡಿಸಿಕೊಳ್ಳುವ ರೀತಿಯಲ್ಲಿ ಋಣಾತ್ಮಕವಾಗಿ ಬಿಂಬಿಸಿರುವುದೇ ಕಾರಣ. ಇದರಿಂದಾಗಿಯೇ ಈ ಕ್ಷೇತ್ರದ ಬಗ್ಗೆ ಋಣಾತ್ಮಕವಾದ ಅಭಿಪ್ರಾಯಗಳು ಎಲ್ಲೆಡೆ ವ್ಯಕ್ತವಾಗಿವೆ.

ಒಬ್ಬ ವ್ಯಕ್ತಿಯನ್ನು ಸಮ್ಮೋಹನಗೊಳಿಸುವ ಬಗ್ಗೆ ಹೇಳುವುದಾದರೆ, ಯಾವುದೇ ವ್ಯಕ್ತಿಯನ್ನು ಸಂಪೂರ್ಣವಾಗಿ ಸಮ್ಮೋಹನಗೊಳಿಸಲು ಸಾಧ್ಯವಿಲ್ಲ ಎನ್ನಲಾಗುವುದಿಲ್ಲ. ಆದರೆ ಸಾರಾಸಗಟಾಗಿ ಎಲ್ಲರನ್ನೂ ಸಮ್ಮೋಹನಗೊಳಿಸಲು ಸಾಧ್ಯ ಎನ್ನುವುದೂ ಸರಿಯಲ್ಲ. ಸ್ವಂತ ಬುದ್ಧಿವಂತಿಕೆಯನ್ನು ಬಳಸಿಕೊಳ್ಳದ ವ್ಯಕ್ತಿಗಳು- ವಿವೇಚನಾ ರಹಿತ ವ್ಯಕ್ತಿಗಳು- ಸಮ್ಮೋಹನಕ್ಕೆ ಬಹುಬೇಗ ಒಳಗಾಗುತ್ತಾರೆ ಮತ್ತು ಸಮ್ಮೋಹಕರು ಹೇಳಿದಂತೆ ನಡೆಯುತ್ತಾರೆ. ಇವರಿಗೆ ಯಾವುದು ಒಳಿತು ಯಾವುದು ಕೆಡುಕು ಎನ್ನುವ ವ್ಯತ್ಯಾಸ ಇರುವುದಿಲ್ಲ. ಹಾಗಾಗಿ ಯಾರೂ ಏನೇ ಹೇಳಿದರೂ ಅದನ್ನು ಹಾಗೆಯೇ ಮಾಡಿಬಿಡುತ್ತಾರೆ. ಸ್ವಂತ ವಿವೇಚನೆ ಇಲ್ಲದ ವ್ಯಕ್ತಿಯನ್ನು ಯಾರು ಬೇಕಾದರೂ ಏನಾದರೂ ಹೇಳಿ ತಮ್ಮ ಕಾರ್ಯ ಮಾಡಿಸಿಕೊಳ್ಳಬಹುದು. ಹಾಗೇನೇ, ವಿವೇಚನೆಯುಳ್ಳ ವ್ಯಕ್ತಿಯನ್ನು ಸಂಮೋಹನಕ್ಕೆ ಒಳಪಡಿಸಬಹುದು ಅಥವಾ ಅವರು ಸಮ್ಮೋಹಿತರಾಗರು ಎನ್ನುವುದು ಕೂಡಾ ಆಧಾರ ರಹಿತವಾದದ್ದು.

8) ಉ.ಟೈಮ್ಸ್ : ಮಾನಸಿಕ ಸಮಸ್ಯೆಗಳನ್ನು ಸ್ವಯಂಪ್ರೇರಿತವಾಗಿ ಗುಣಪಡಿಸಿಕೊಳ್ಳಲು ಸಾಧ್ಯವೇ? ಈ ಥೆರಪಿಯಲ್ಲಿ ಮಕ್ಕಳಿಗೆ ಯಾವ ರೀತಿಯ ಚಿಕಿತ್ಸೆಯಿದೆ?

ಅತಿಥಿ: ಮಾನಸಿಕ ಸಮಸ್ಯೆಗಳನ್ನು ಸ್ವಯಂಪ್ರೇರಿತವಾಗಿ ಗುಣಪಡಿಸಿಕೊಳ್ಳಲು ಸಾಧ್ಯವಿದೆ ಆದರೆ ನಮಗೆ ಏನು ತೊಂದರೆ ಎನ್ನುವುದರ ಅರಿವಿರಬೇಕು. ನಮಗಾಗಿರುವ ತೊಂದರೆ ಬಗ್ಗೆ ಸರಿಯಾದ ಮಾಹಿತಿ ಇದ್ದಾಗ ಅದನ್ನು ಹೇಗೆ ಗುಣಪಡಿಸಬಹುದು ಎನ್ನುವುದನ್ನು ಅರಿತು ಸರಿಪಡಿಸಿಕೊಳ್ಳಬಹುದು. ಇಲ್ಲವಾದಲ್ಲಿ ಬೇರೆಯವರ ಸಹಾಯ ಪಡೆದುಕೊಳ್ಳಬಹುದು.

ಹಿಪ್ನೋಥೆರಪಿಯಲ್ಲಿ ಸಣ್ಣಮಕ್ಕಳು- ಅಂದರೆ ನಾಲ್ಕರಿಂದ ಆರು ವರ್ಷ ವಯಸ್ಸಿನ ಮಕ್ಕಳಿಗೂ ಥೆರಪಿ ಮಾಡುತ್ತೇವೆ. ಎಡಿಡಿ, ಎಡಿಎಚ್ ಡಿ ಸಮಸ್ಯೆ ಇರುವ ಮಕ್ಕಳಿಗೆ ಏಕಾಗ್ರತೆ ಕಡಿಮೆ ಇರುತ್ತದೆ ಇಂತಹ ಮಕ್ಕಳನ್ನು ಕೆಲವೊಂದು ಚಟುವಟಿಕೆಗಳ ಮೂಲಕ ಹಿಡಿದಿಟ್ಟುಕೊಂಡು ಅದರಲ್ಲಿ ತೊಡಗಿಸಿಕೊಂಡು ಅವರ ಮನಸನ್ನು ಫೋಕಸ್ ಮಾಡುವಂತೆ ಮಾಡಬಹುದು. ಸಮಸ್ಯೆಗಳನ್ನು ಸಣ್ಣ ಪ್ರಾಯದಲ್ಲೇ ಪತ್ತೆ ಹಚ್ಚಿ ಸೂಕ್ತ ರೀತಿಯಲ್ಲಿ ಪರಿಹಾರ ಕಂಡುಕೊಂಡರೆ ಮುಂದಾಗಬಹುದಾದ ಅನಾಹುತದ ಪ್ರಮಾಣ ಕಡಿಮೆ ಮಾಡಬಹುದು.

ಸಾಹಿತ್ಯ ಕ್ಷೇತ್ರ

9) ಉ.ಟೈಮ್ಸ್ : ನಿಮ್ಮ ಪ್ರಕಾರ ಸಾಹಿತ್ಯ ಎಂದರೇನು? ಸಾಹಿತ್ಯ ಕ್ಷೇತ್ರದ ಅಭಿರುಚಿ ಬೆಳೆದದ್ದು ಹೇಗೆ?

ಅತಿಥಿ : ಸಾಹಿತ್ಯ ಎಂದರೆ ಸ-ಹಿತ. ಅಂದರೆ ಓದಿದಾಗ ಮನಸ್ಸಿಗೆ ಖುಷಿ ನೀಡುವ, ಉಲ್ಲಾಸ ನೀಡುವ, ಮನಸ್ಸಿನ ದುಗುಡವನ್ನು ಕಡಿಮೆ ಮಾಡುವ ಬರವಣಿಗೆಯೇ ಸಾಹಿತ್ಯ. ಓದಿದಾಗ ಸಮಾಧಾನ ನೀಡುವ, ಉತ್ತಮ ಸಂದೇಶ ಕೊಡುವಂತಹ ಬರವಣಿಗೆ ಸಾಹಿತ್ಯ. ಪ್ರಸ್ತುತ ಕಾಲ ಬದಲಾದ ಹಾಗೆ ಸಾಹಿತ್ಯದ ಸ್ವರೂಪ ಉದ್ದೇಶವೂ ಬದಲಾಗಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಅಭಿರುಚಿ ಓದುವ ಹವ್ಯಾಸ ಮೊದಲೇ ನನ್ನಲ್ಲಿ ಇತ್ತು. ಓದುವ ಜೊತೆಗೆ ಬರವಣಿಗೆ ಅಭ್ಯಾಸವೂ ಹೆಚ್ಚಾಗಿತ್ತು. ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಗರದ ಪರಿಸರದಲ್ಲಿ “ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ” ಎಂಬ ಕೂಟವಿದೆ. ಆ ಕನ್ನಡ ಕೂಟದ ವಾರ್ಷಿಕ ಸಂಚಿಕೆಗಾಗಿ ಕವನ, ಕಥೆಗಳನ್ನು ಬರೆಯುತ್ತಿದ್ದೆ, ಇಲ್ಲಿಯೇ ಮೊದಲು ನನ್ನ ಕವನಗಳು ಪ್ರಕಟಗೊಂಡದ್ದು.
1996ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರು “ಅಮೆರಿಕಾ ಅಮೆರಿಕಾ” ಚಿತ್ರದ ಚಿತ್ರೀಕರಣಕ್ಕೆ ಬಂದಿದ್ದ ವೇಳೆ ಅವರು ನನ್ನ ಕವನಗಳನ್ನು ನೋಡಿ ಪುಸ್ತಕ ಬಿಡುಗಡೆ ಮಾಡುವ ಎಂದು ಹೇಳಿ ಮೊದಲ ಕವನ ಸಂಕಲನವನ್ನು ಅವರ “ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ” ಮೂಲಕ 1997ರಲ್ಲಿ ಬಿಡುಗಡೆ ಮಾಡಿದರು.

10) ಉ. ಟೈಮ್ಸ್ : ಯುವ ಬರಹಗಾರರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
ಅತಿಥಿ : ಓದು- ಶಬ್ದ ಪಾಂಡಿತ್ಯ, ಪದ ಭಂಡಾರವನ್ನು ಹೆಚ್ಚಿಸುತ್ತದೆ. ಓದುವುದು ಒಂದು ಭಾಷೆಯನ್ನು ಯಾವ ರೀತಿಯಲ್ಲೆಲ್ಲಾ ಬಳಸಬಹುದು, ಹೇಗೆಲ್ಲಾ ನುರಿಸಿಕೊಳ್ಳಬಹುದು ಎಂಬುದನ್ನು ಕಲಿಸುತ್ತದೆ. ಭಾಷೆಯನ್ನು ಬಳಸಿ ಬಳಸಿಯೇ ಬೆಳೆಸಬೇಕು, ಬೆಳೆಯಬೇಕು. ಭಾಷೆ ಬೆಳೆಸಿಕೊಳ್ಳಲು ಓದು ತುಂಬಾ ದೊಡ್ಡ ಸಾಧನವಾಗಿದೆ.
ಬೇಂದ್ರೆಯವರ “ಮಾತು ಮಾತು ಮಥಿಸಿ ಬಂತು ನಾದದ ನವನೀತಾ” ಎಂಬಂತೆ ನಾವು ಭಾಷೆಯನ್ನು ಬೆಳೆಸಿದಷ್ಟು ಅದರ ಲಯ ಸಿದ್ಧಿಸುತ್ತದೆ ಮತ್ತು ಅದರ ಅರ್ಥಗಾರಿಕೆ ಸಿದ್ಧಿಸುತ್ತದೆ. ಓದಬೇಕು, ಚೆನ್ನಾಗಿ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.

ಮತ್ತೊಂದೆಡೆ “ಓದು ಬರಹದ ಶತ್ರು” ಎಂದು ತೀನಂಶ್ರೀಯವರು ಹೇಳುತ್ತಾರೆ. “ನಮ್ಮ ಹಿರಿಯರ ಸಾಹಿತ್ಯಗಳನ್ನು ಓದುತ್ತಾ ಹೋದ ಹಾಗೆ ಒಂದು ಹಂತದಲ್ಲಿ, ‘ನಮ್ಮ ಹಿರಿಯರು ಎಲ್ಲಾ ವಿಷಯಗಳನ್ನು ಹೇಳಿದ್ದಾರೆ, ನಾನು ಹೇಳಲು ಏನಿದೆ!’ ಎನ್ನುವ ಭಾವನೆ ಮೂಡುತ್ತದೆ. ಇದು ಆದಾಗ ಓದು ಬರಹದ ಶತ್ರುವಾಗುತ್ತದೆ. ಇದರ ಅರ್ಥ ಪುಸ್ತಕಗಳನ್ನು ಓದಬಾರದು ಎಂದಲ್ಲ. ಬದಲಾಗಿ ಓದಬೇಕು, ಜೊತೆಗೆ ನಮ್ಮ ಹಿರಿಯರು ಹೇಳಿರುವ ವಿಷಯಗಳನ್ನು ನಾನು ಹೇಗೆ ಭಿನ್ನವಾಗಿ ಬರೆಯಬಹುದು ಎನ್ನುವ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. “ಮಹಾಭಾರತದಲ್ಲಿ ಇಲ್ಲದ್ದು ಪ್ರಪಂಚದಲ್ಲಿಯೇ ಇಲ್ಲ; ಪ್ರಪಂಚದಲ್ಲಿ ಇರುವುದೆಲ್ಲವೂ ಮಹಾಭಾರತದಲ್ಲಿದೆ” ಎಂಬ ಮಾತೊಂದಿದೆ. ಹಾಗೆಂದ ಮಾತ್ರಕ್ಕೆ ‘ವ್ಯಾಸರು ಬರೆದ ಮಹಾಭಾರತದಲ್ಲಿ ಎಲ್ಲ ಇದೆ, ಎಲ್ಲವನ್ನೂ ಅವರು ಹೇಳಿಯಾಗಿದೆ, ಇನ್ನೇನು ಹೇಳಲು ಬಾಕಿ ಇದೆ’ ಎಂಬ ಭಾವನೆ ಬರುತ್ತಿದ್ದರೆ ಉಳಿದ ಸಾಹಿತ್ಯಗಳು ಹುಟ್ಟಿಕೊಳ್ಳುತ್ತಿರಲಿಲ್ಲ. ಹಾಗಾಗಿ ಯುವ ಬರಹಗಾರರು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಹಾಗೂ ಅದನ್ನು ನಾನು ಹೇಗೆ ಭಿನ್ನವಾಗಿ ಹೇಳಬಲ್ಲೆ ಎಂಬುದನ್ನು ಪ್ರಶ್ನೆ ಮಾಡಿಕೊಂಡು ಬರೆಯಬೇಕು.

11) ಉ.ಟೈಮ್ಸ್ : ಯುವ ಬರಹಗಾರರ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಿಮ್ಮ ಅನುಭವ ತಿಳಿಸಿ. ಯುವ ಬರಹಗಾರರಿಗೆ ನೀವು ಕೊಡುವ ಸಲಹೆ ಏನು?
ಅತಿಥಿ : ಕನ್ನಡ ಅಳಿವಿನಂಚಿನಲ್ಲಿದೆ, ಕನ್ನಡ ಪುಸ್ತಕಗಳನ್ನು ಓದುವವರಿಲ್ಲ, ಬರೆಯುವವರಿಲ್ಲ ಎನ್ನುವ ಈ ಸಮಯದಲ್ಲಿ ಯುವ ಬರಹಗಾರರು ಬರವಣಿಗೆ ಕಡೆ ಮುಖಮಾಡಿದ್ದಾರೆ ಎನ್ನುವುದು ಖಂಡಿತವಾಗಿಯೂ ಖುಷಿ ನೀಡುತ್ತದೆ. ನನಗಿಂತ ಕಿರಿಯರು ಕನ್ನಡ ಭಾಷೆಯನ್ನು ಬಳಸಿ ಬೆಳೆಸುತ್ತಿದ್ದಾರೆ ಎನ್ನುವುದು ಸಮಾಧಾನ ನೀಡುತ್ತದೆ. ಭಾಷೆ ಉಳಿಯಬೇಕಾದರೆ ಮುಂದಿನ ತಲೆಮಾರು ಭಾಷೆಯನ್ನು ಬಳಸಿ ಬೆಳೆಸಬೇಕು. ಐಟಿ ಕ್ಷೇತ್ರದವರು ತುಂಬಾ ಜನ ಕನ್ನಡವನ್ನು ಬರೆಯುತ್ತಿದ್ದಾರೆ. ಅವರ ಅನುಭವಗಳನ್ನು ಸಾಹಿತ್ಯದಲ್ಲಿ ತರುತ್ತಿದ್ದಾರೆ. ಭಾಷೆಯ ಬೆಳವಣಿಗೆಗೆ ಅದು ಅಗತ್ಯವಾಗಿದೆ.

ನಿಮ್ಮ ಕನಸು, ತುಡಿತ ತುಮುಲಗಳ ಬಗ್ಗೆ ಗಮನ ಕೊಡಿ. ನೀವು ಯಾಕೆ ಬರೆಯಬೇಕು ಎನ್ನುವುದನ್ನು ನಿಮಗೆ ನೀವೇ ಕೇಳಿಕೊಳ್ಳಿ. ಇನ್ನೊಬ್ಬರ ಮೆಚ್ಚುಗೆ ಗಳಿಸಲು ನೀವು ಬರೆಯುತ್ತೀರೆಂದಾದರೆ ಅದನ್ನು ನಿಲ್ಲಿಸಿಬಿಡಿ. ನೀವು ಬರೆದದ್ದು ನಿಮಗೆ ಖುಷಿ ಕೊಡಬೇಕು. ಆಗ ಬೇರೆಯವರು ನಿಮ್ಮ ಬರವಣಿಗೆ ಕುರಿತಾಗಿ ನೀಡುವ ಯಾವುದೇ ನಕಾರಾತ್ಮಕ ಪ್ರತಿಕ್ರಿಯೆಗಳು ಪ್ರಾಮುಖ್ಯ ಪಡೆದುಕೊಳ್ಳುವುದಿಲ್ಲ. ನೀವು ಬರೆಯುವ ಸಾಹಿತ್ಯ ನಿಮಗೆ ಮೊದಲು ಇಷ್ಟವಾಗಬೇಕು.

12) ಉ. ಟೈಮ್ಸ್ : ನೀವು ಯಾವ ರೀತಿಯ ಸಾಹಿತ್ಯ ಇಷ್ಟ ಪಡುತ್ತೀರಿ? ನಿಮ್ಮ ಮುಂದಿನ ಕನಸಿನ ಬಗ್ಗೆ ತಿಳಿಸಬಹುದೇ.

ಅತಿಥಿ : ಸಾಮಾನ್ಯವಾಗಿ ಎಲ್ಲಾ ರೀತಿಯ ಬರಹಗಳನ್ನೂ ಇಷ್ಟ ಪಡುತ್ತೇನೆ. ಆಧ್ಯಾತ್ಮಿಕ ಹಾಗೂ ಹದವಾದ ಲಘು ಬರಹಗಳು, ನಗೆ ಬರಹಗಳು ಇಷ್ಟವಾಗುತ್ತವೆ. ಒಂದು ಓದಿಗೆ ಅರ್ಥವಾಗುವ ಕವನಗಳು ತುಂಬಾ ಇಷ್ಟವಾಗುತ್ತದೆ.
ಎಷ್ಟೋ ವಿಷಯಗಳು ನಾವು ಅಂದುಕೊಂಡಂತಾಗುವುದಿಲ್ಲ. ಹಾಗಾಗಿ ನಾನು ಯಾವುದೇ ಯೋಜನೆಗಳನ್ನು ಇಟ್ಟುಕೊಂಡಿಲ್ಲ. ಜೀವನ ಬಂದಂತೆ ನಡೆದುಕೊಂಡು ಹೋಗುವುದು ನನ್ನ ಸಿದ್ಧಾಂತ.

ಇವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ, ಹಲವನ್ನು ಸಂಪಾದಿಸಿದ್ದಾರೆ.
*ಭಾವಲಹರಿ, ಭಾವಗಾನ, ಭಾವಬಿಂಬ, ಭಾವಲೋಕ, ಅಗ್ನಿಮುಡಿ- ಕವನ ಸಂಕಲನಗಳು;
*ಭಾವಯಾನ- ಕಥೆ ಹಾಗೂ ಹರಟೆ ಸಂಕಲನ;
*ಮಿನುಗು ಮಿಂಚು- ಬೆಳಗು-ಬೈಗಿರುಳುಗಳ ಸಂದೇಶ-ಸಾಲ್ಮಿಂಚುಗಳ ವಿಶಿಷ್ಟ ಸಂಕಲನ;

  • ಇವಿಷ್ಟು ಪ್ರಕಟಗೊಂಡಿವೆ.

ಇವರು ಅಮೆರಿಕದ ಕನ್ನಡ ಸಾಹಿತ್ಯ ರಂಗ'ದ ಆಡಳಿತ ಮಂಡಳಿಯ ಸದಸ್ಯೆಯಾಗಿಯೂ 'ಕನ್ನಡ ಸಾಹಿತ್ಯ ರಂಗ' ಹಾಗೂಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ’ಗಳಿಗಾಗಿ ಶ್ರೀಗಂಧ, ಸ್ವರ್ಣಸೇತು, ಬೇರು-ಸೂರು, ಅಮೆರಿಕನ್ನಡ ಬರಹಗಾರರು, ರಂಗ-ತರಂಗ ಕೃತಿಗಳ ಸಹ-ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.

ಇದರೊಂದಿಗೆ ಸಾಹಿತ್ಯ ಲಹರಿ ವಾಟ್ಸ್ಯಾಪ್ ಬಳಗ'ವೆಂಬ ಸಮೂಹ ಮಾಧ್ಯಮ ಬಳಗವೊಂದರ ಸದಸ್ಯೆಯಾಗಿಕಬ್ಬದೊಕ್ಕಲು’ ಹಾಗೂ `ಸೂರ್ಯಕಾಂತಿ’ ಕೃತಿಗಳ ಸಂಪಾದಕರಾಗಿದ್ದಾರೆ. ಹಾಗೂ ಅನೇಕ ಶಾಲೆ-ಕಾಲೇಜುಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮನಃಸ್ವಾಸ್ಥ್ಯದ ಬಗೆಗೆ ಉಪನ್ಯಾಸಗಳನ್ನು ನೀಡಿದ್ದಾರೆ.
ಇವರ ಒಂದು ಕವನ ಸಂಕಲನ, ಒಂದು ಪ್ರಬಂಧ ಸಂಕಲನ, ಬೆಳಗಿನ ಸಾಲ್ಮಿಂಚು ಸಂದೇಶಗಳ ಸಂಕಲನವೊಂದು – ಹೀಗೆ ಮೂರು ಪುಸ್ತಕಗಳು ಮುದ್ರಣಕ್ಕಾಗಿ ಕಾಯುತ್ತಿವೆ.

ಯುವ ಪೀಳಿಗೆಗೆ ಜೀವನದ ಕುರಿತು ಕಿವಿಮಾತು ಹೇಳಿರುವ ಇವರು- “ಜೀವನದಲ್ಲಿ ಕನಸು ಬೇಕು ಆದರೆ ಕನಸೇ ಜೀವನ ಅಲ್ಲ. ನಮ್ಮ ನಾಳೆಗಳಲ್ಲಿ ಆ ಯೋಜನೆ ಒಂದು ಭಾಗವಾಗಿ ಇರಬೇಕೇ ಹೊರತು ಆ ಯೋಜನೆಯೇ ನಮ್ಮ ನಾಳೆಗಳಾಗಿರಬಾರದು. ಜೀವನದಲ್ಲಿ ಆಸೆ, ಆಕಾಂಕ್ಷೆ, ಕನಸುಗಳು ಒಳಗೊಂಡಿರಬೇಕು, ಆದರೆ ಜೀವನ ಕನಸಿಗೆ ಮಾತ್ರವೇ ಸೀಮಿತವಾಗಿರಬಾರದು. ನಮ್ಮ ಹಿರಿಯರ ಗುರುಗಳ ಜೀವನದ ಅನುಭವಗಳನ್ನು ಪಡೆದು ನಮ್ಮ ಕನಸನ್ನು ಗಟ್ಟಿಮಾಡಿಕೊಳ್ಳಬೇಕು. ನಮ್ಮ ಹಿರಿಯರ ಅನುಭವಗಳ ಮೂಲಕ ನಮ್ಮ ಸಂಸ್ಕೃತಿ ಎಂಬ ಬೇರನ್ನು ಗಟ್ಟಿಮಾಡಿಕೊಂಡಾಗ ಯಾರೂ ಕೂಡಾ ಹತಾಶರಾಗುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳಿಗೆ ಮನೆಯಲ್ಲಿ ಹಿರಿಯರಲ್ಲಿ ನಂಬಿಕೆ ಇರುವುದಿಲ್ಲ. ಮನೆಯ ಹಿರಿಯರನ್ನು ಬರೇ ತಮ್ಮ ಬೇಡಿಕೆಗಳ ಪೂರೈಕೆದಾರರಾಗಿ ನೋಡುತ್ತಾರೆ. ಮನೆಯವರು ತಮ್ಮ ಕೋರಿಕೆಗಳನ್ನು ಪೂರೈಸಲು, ತಾವು ಕೇಳಿದ್ದನ್ನು ನೀಡಲು ಮಾತ್ರ ಇರುವವರು ಎಂಬ ಭಾವನೆ ಹೊಂದಿರುತ್ತಾರೆ. ಇಂತಹ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚು. ಮನೆಯವರಲ್ಲಿ ವಿಶ್ವಾಸ ಇಲ್ಲದಾಗ ಅವರಿಗೆ ಅವರಲ್ಲಿಯೇ ವಿಶ್ವಾಸ ಇರುವುದಿಲ್ಲ. ಹಾಗಾಗಿ ನಮ್ಮ ಹಿರಿಯರು ನೀಡಿದ ಆಚಾರ, ಸಂಸ್ಕಾರಗಳು, ಬುದ್ಧಿಮಾತುಗಳನ್ನು ಗಟ್ಟಿಯಾಗಿ ಅರಿತಿದ್ದು ನಮ್ಮ ಬೇರುಗಳನ್ನು ಗಟ್ಟಿಯಾಗಿಸಿದ್ದರೆ ಎಂತಹಾ ದೊಡ್ಡ ಸಮಸ್ಯೆ ಬಂದರೂ ಮತ್ತೆ ಎದ್ದು ನಿಲ್ಲಬಲ್ಲೆ ಎನ್ನುವ ವಿಶ್ವಾಸ ಮೂಡುತ್ತದೆ. ಅದು ಯುವಪೀಳಿಗೆಯನ್ನು ತಪ್ಪುದಾರಿಯಲ್ಲಿ ನಡೆಯದಂತೆ ಎಚ್ಚರಿಸುತ್ತದೆ” ಎನ್ನುತ್ತಾರೆ.

ಇದು ಈ ವಾರದ ವ್ಯಕ್ತಿ ಕವಯತ್ರಿ , ಸಾಹಿತಿ ಹಾಗೂ ಹಿಪ್ನೋಥೆರಪಿಸ್ಟ್ ಆಗಿರುವ ಜ್ಯೋತಿ ಮಹಾದೇವ್ ಅವರ ಅನುಭವದ ಮಾತುಗಳು. ನಾ ಕಂಡಂತೆ ಇವರು ತಾಳ್ಮೆ ಸಹನೆಯ ಮೂರ್ತಿ. ಸರಳ ವ್ಯಕ್ತಿ. ಎಲ್ಲರಲ್ಲೂ ವಿನಯದಿಂದ ಮಾತನಾಡುವ ಇವರು ತಮ್ಮ ಆಪ್ತ ವಲಯದಲ್ಲಿ ಎಲ್ಲರಿಂದಲೂ ಅಪಾರವಾದ ಪ್ರೀತಿ ಗಳಿಸಿದ್ದಾರೆ.

ಸಂದರ್ಶನ ಹಾಗೂ ಲೇಖನ : ದಿವ್ಯ ಮಂಚಿ

Leave a Reply

Your email address will not be published. Required fields are marked *

error: Content is protected !!