ಮಲೆನಾಡಿನ ಕಲಾರಾಧಕ,ರಂಗ ಮಾಂತ್ರಿಕ ಎಸ್ ವಿ ರಮೇಶ್ ಬೇಗಾರ್


ಸಂದರ್ಶನ /ಲೇಖನ ನಾಗರತ್ನ ಜಿ

ಕರ್ನಾಟಕ ಇತಿಹಾಸದಲ್ಲಿ ಮಲೆನಾಡಿಗೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಕುವೆಂಪುರವರು ಮಲೆನಾಡಿನ ಅಪ್ರತಿಮ ಸಾಧಕರಲ್ಲಿ ಓರ್ವರು. ಅಲ್ಲದೇ ನಾಡಿನ ಅನೇಕ ಹೆಸರಾಂತ ಸಾಹಿತಿಗಳ ತವರೂರು ಮಲೆನಾಡು. ಶಂಕರಾಚಾರ್ಯರು ಸ್ಥಾಪಿಸಿದ ಶ್ರೀ ಶೃಂಗೇರಿ ಮಠ ಆಸ್ತಿಕರ ಪಾಲಿನ ಆರಾಧನಾ ತಾಣ. ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾದ ಮಲೆನಾಡಿನಲ್ಲಿ ವೆಂಕಟರಮಣ ಹಾಗೂ ದಾಕ್ಷಾಯಿಣಿ ಇವರ ಸುಪುತ್ರರಾಗಿ ಶೃಂಗೇರಿ ತಾಲೂಕಿನ ಬೇಗಾರು ಎಂಬಲ್ಲಿ ದಿನಾಂಕ ಡಿಸೆಂಬರ್ 20 1968 ರಂದು ಜನಿಸಿದವರು ಎಸ್. ವಿ. ರಮೇಶ್ ಬೇಗಾರರು. ಚಿಕ್ಕಂದಿನಿಂದಲೇ ಮನೆಯಲ್ಲಿ ಸಾಂಸ್ಕೃತಿಕ ವಾತಾವರಣ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನ ಕ್ಷೇತ್ರದಲ್ಲಿ ಹೊಸತೊಂದನ್ನು ಸೃಜಿಸುವ ತವಕ. ಆ ನಿಟ್ಟಿನಲ್ಲಿ ತನ್ನದೇ ಶೈಲಿಯಲ್ಲಿ ವಿಶಿಷ್ಟ, ವಿನೂತನ ರಂಗಪ್ರಯೋಗಗಳ ಮೂಲಕ ಮನೆಮಾತಾದ ಮಲೆನಾಡಿನ ಸಾಧಕ. ಕನಸುಕಂಗಳ ಈ ಯುವಕನಿಗೆ ತನ್ನ ಅತಿ ಕಿರಿಯ ವಯಸ್ಸಿನಲ್ಲಿ ಹಿರಿಯದಾದದ್ದನ್ನು ಸಾಧಿಸಿದ ಸಂತೃಪ್ತ ಭಾವ. ನಾಟಕ ರಚನೆ ಮತ್ತು ನಿರ್ದೇಶನ, ರಂಗ ಗೀತೆಗಳ ದಾಖಲೀಕರಣ, ಕಿರುತೆರೆ, ಕಾರ್ಯಕ್ರಮ ಸಂಘಟನೆಯನ್ನೊಳಗೊಂಡಂತೆ ಪ್ರತಿ ಕ್ಷೇತ್ರದಲ್ಲೂ ಪ್ರಯೋಗಶೀಲತೆಯನ್ನು ಮೆರೆದವರು. ಗಾನಗಂಧರ್ವ ಕಾಳಿಂಗ ನಾವಡರ ಅಪ್ಪಟ ಅಭಿಮಾನಿಯಾಗಿ ಯಕ್ಷಗಾನವನ್ನು ಕಾಲಮಿತಿಗೊಳಿಸಿ ಅದರ ಮೂಲ ಆಶಯಕ್ಕೆ ಧಕ್ಕೆ ಬರದಂತೆ 47 ಪೌರಾಣಿಕ ಯಕ್ಷಗಾನಗಳನ್ನು ವಿಡಿಯೋಗಳ ಮೂಲಕ ದಾಖಲೀಕರಣ ಮಾಡಿ ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ ರಮೇಶ್ ಬೇಗಾರ್ ಉಡುಪಿ ಟೈಮ್ಸ್ ವಾರದ ವ್ಯಕ್ತಿ.

ಅಲ್ಲದೇ ಯಕ್ಷಗಾನ ಆಡಿಯೋ ದಾಖಲೀಕರಣದಲ್ಲಿ 76 ಧ್ವನಿ ಸುರುಳಿಗಳ ಮೂಲಕ ಯಕ್ಷಗಾನದ ಮೌಖಿಕ ಪರಂಪರೆಯಾದ ತಾಳಮದ್ದಲೆಗಳನ್ನು ದಾಖಲಿಸಿದ್ದಾರೆ. ಒಬ್ಬ ಯಕ್ಷಗಾನ ಕಲಾವಿದನಾಗಿದ್ದುಕೊಂಡು ಹೊಸ ದೃಷ್ಟಿಕೋನದಿಂದ ಯಕ್ಷಗಾನಕ್ಕೆ ಹೊಸ ಸ್ಪರ್ಶ ನೀಡಿದವರಿವರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ. ಎ ಮಾಡಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಪ್ರಸ್ತುತ ಶ್ರೀ ಭಾರತೀ ತೀರ್ಥ ಕಲ್ಚರಲ್ ಟ್ರಸ್ಟ್ ಶೃಂಗೇರಿ ಇಲ್ಲಿ ಮ್ಯಾನೇಜಿಂಗ್ ಟ್ರಸ್ಟಿಯಾಗಿ, ಕಾಳಿಂಗ ನಾವಡ ಪ್ರತಿಷ್ಠಾನದ ಅಧ್ಯಕ್ಷರಾಗಿ, ರಂಗಮಿತ್ರರು ನಾಟಕ ತಂಡ ಶೃಂಗೇರಿ ಇದರ ಸಂಯೋಜಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿಗಳು:
1998 ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ. ಕರ್ನಾಟಕ ಬೀದಿ ನಾಟಕ ಅಕಾಡೆಮಿ ವತಿಯಿಂದ ಸಿ. ಈ. ಕೆ ರಂಗ ಪ್ರಶಸ್ತಿ, ಎಚ್ . ಎಲ್ ಸುಬ್ರಹ್ಮಣ್ಯಂ ರಂಗ ಪ್ರಶಸ್ತಿ, ಕಲಾಶ್ರೀ ರಾಜ್ಯ ಮಟ್ಟದ ಪ್ರಶಸ್ತಿ. ಶ್ರೀ ಗುರು ರಾಘವೇಂದ್ರ ಸದ್ಭಾವನಾ ಪ್ರಶಸ್ತಿ, ಕಲಾಸುಮ ಪ್ರಶಸ್ತಿ, ಚಾಮುಂಡೇಶ್ವರಿ ಪ್ರಶಸ್ತಿ, ಕತಾರ್ ದೇಶದ ಕನ್ನಡಿಗರ ಸಂಘದಿಂದ ವಸಂತೋತ್ಸವ ಪ್ರಶಸ್ತಿ, ಜೇಸೀಸ್ ನಿಂದ ಅಸಾಧಾರಣ ಪ್ರತಿಭಾವಂತ ಯುವಕ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸುವ ಸಾಧಕರೊಂದಿಗೆ ನಾವು ಮಾಲಿಕೆಯ ವರ್ಷದ ವ್ಯಕ್ತಿ ಪುರಸ್ಕಾರ. ಕತಾರ್ ನಲ್ಲಿ ವಸಂತೋತ್ಸವ ಪ್ರಶಸ್ತಿ ನೀಡಿದಾಗ ಮೊದಲ ಬಾರಿ ರಾಜಧಾನಿಯಿಂದ ಹೊರಗಿರುವ ವ್ಯಕ್ತಿಗೆ ಅದರಲ್ಲಿಯೂ ಹಳ್ಳಿಯಲ್ಲಿರುವ ವ್ಯಕ್ತಿಗೆ ದಕ್ಕಿರುವುದು ಸಂತಸದ ವಿಷಯ.

ಉ.ಟೈಮ್ಸ್: ನೀವು ಯಕ್ಷಗಾನದತ್ತ ಆಕರ್ಷಿತರಾಗಲು ಕಾರಣವೇನು?
ಅತಿಥಿ: ನಾನು ಎಂಟನೆಯ ತರಗತಿಯಲ್ಲಿರುವಾಗ ಅಣ್ಣನ ಮಾತಿನಿಂದ ಕಾಳಿಂಗ ನಾವಡರ ಮೇಲೆ ಅಭಿಮಾನ ಬೆಳೆಸಿಕೊಂಡೆ. ಹತ್ತನೆಯ ತರಗತಿಯಲ್ಲಿರುವಾಗ ಆಗುಂಬೆಯಲ್ಲಿ ಅವರ ಭಾಗವತಿಕೆಯನ್ನು ಕೇಳಿ ಅವರ ಅಭಿಮಾನಿಯಾದವನು. ನಂತರ ಅವರ ಕುರಿತಾದ ಪದ್ಯ ರಚನೆ ಮಾಡಿ ಅವರ ಸ್ನೇಹ ಹಾಗೂ ಒಡನಾಟವನ್ನು ಗಳಿಸಿಕೊಂಡೆ. ನನ್ನ ಅಣ್ಣ ಜಯಪ್ರಕಾಶ್ ನಮ್ಮೂರಿನಲ್ಲಿರುವ ಯಕ್ಷಗಾನ ಸಂಘದಲ್ಲಿ ಚಂಡೆ ಬಾರಿಸುತ್ತಿದ್ದ. ನಾನು ನಿತ್ಯವೇಷ ಮಾಡುತ್ತಿದ್ದೆ. ನನ್ನ ಚಿಕ್ಕಪ್ಪ ಒಡ್ಡೋಲಗದ ವೇಷಗಳನ್ನು ಮಾಡುತ್ತಿದ್ದರು. ಅದರಿಂದಾಗಿ ನನಗೆ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಯಿತು. ಅದೇ ಸಮಯದಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವಾಗಲೇ ಮಲೆನಾಡಿನಲ್ಲಿ ಅಂದಿನ ಪ್ರಸಿದ್ಧ ಕಲಾವಿದರಾದ ಕಾಳಿಂಗ ನಾವಡರು, ಲೀಲಾವತಿ ಬೈಪಡಿತ್ತಾಯರು, ವಾಸುದೇವ ಸಾಮಗರು, ಕುಂಬ್ಳೆ ಸುಂದರರಾಯರು, ತೀರ್ಥಹಳ್ಳಿ ಗೋಪಾಲ ಆಚಾರ್ಯರು, ರಾಮಚಂದ್ರ ಕೊಂಡದಕುಳಿಯವರು, ಗೋವಿಂದ ಭಟ್ಟರು, ರಮೇಶ ಆಚಾರ್ಯರು ಇವರನ್ನೆಲ್ಲಾ ಒಟ್ಟುಗೂಡಿಸಿ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಸಂಘಟನಾಕಾರನಾಗಿ ಯಕ್ಷಗಾನ ಕ್ಷೇತ್ರಕ್ಕೆ ನನ್ನನ್ನು ತೆರೆದುಕೊಂಡೆ. ಅಲ್ಲಿಂದ ಮುಂದೆ ಸತತ 31 ವರ್ಷಗಳಿಂದ ಯಕ್ಷಗಾನವನ್ನು ಸಂಘಟಿಸುತ್ತಾ ಮಲೆನಾಡ ಜನರಿಗೆ ಯಕ್ಷಗಾನದ ಸವಿಯನ್ನುಣಿಸುತ್ತಿದ್ದೇನೆ. ನಾನು ದ್ವಿತೀಯ ವರ್ಷದ ಪದವಿಯಲ್ಲಿರುವಾಗ ಕಲಿತ ಜನ್ನನ ‘ಯಶೋದರ ಚರಿತೆ’ಯಿಂದ ಪ್ರೇರಣೆಗೊಂಡು ನಾನೇಕೆ ಇದನ್ನು ಯಕ್ಷಗಾನ ಮಾಡಬಾರದು ಎಂಬ ಆಲೋಚನೆ ಬಂತು. ಆ ಪದ್ಯದ ಒಂದು ಕಥಾಭಾಗವನ್ನು ತೆಗೆದುಕೊಂಡು ಅಮೃತಮತಿ ಎನ್ನುವ ಕ್ಯಾಸೆಟ್ ಮಾಡಿದೆ. ಅಲ್ಲಿಂದ ಮುಂದೆ ನೂತನ ಪ್ರಯತ್ನಕ್ಕೆ ಇದು ನಾಂದಿಯಾಯಿತು. ಅದಕ್ಕೆ ಯಕ್ಷಗಾನೀಯ ಶೈಲಿಯಲ್ಲಿ ಸ್ವತಃ ಪದ್ಯ ರಚಿಸಿ ಕಾಳಿಂಗ ನಾವಡರ ಬಳಿ ಹೋದಾಗ ಅವರು ನನ್ನ ಪ್ರಯತ್ನಕ್ಕೆ ಮೆಚ್ಚಿದರೂ ಪದ್ಯ ಬರೆದದ್ದು ಸರಿಯಾಗಲಿಲ್ಲವೆಂದು ತಾವೇ ಬರೆದರು. ನಂತರ ನನ್ನ ಬಳಿ ಅದಕ್ಕೆ ಅರ್ಥ ಬರೆಯಲು ಹೇಳಿದರು.

ನಾನು ನನ್ನದೇ ಶೈಲಿಯಲ್ಲಿ ಅರ್ಥ ಬರೆದೆ. ಯಕ್ಷಗಾನದ ಹಿಮ್ಮೇಳದೊಂದಿಗೆ ನಾಟಕೀಯ ಸಂಭಾಷಣೆಯನ್ನು ಬೆರೆಸಿ ಪ್ರಯೋಗಿಸಿದ್ದೆ. ಅಲ್ಲದೇ ಕೆಲವು ಭಾವನಾತ್ಮಕ ಸನ್ನಿವೇಶಗಳಲ್ಲಿ ಹಿಂದುಗಡೆಯಿಂದ ಹಮ್ಮಿಂಗ್ ಬರುವಂತೆ ಇನ್ನೊಂದು ಹೊಸ ಪ್ರಯೋಗವನ್ನೂ ಮಾಡಿದ್ದೆ. ಬಹಳ ನಿರೀಕ್ಷೆ ಇಟ್ಟುಕೊಂಡು ಕ್ಯಾಸೆಟ್ ಬಿಡುಗಡೆ ಮಾಡಿದಾಗ ಜನರಿಂದ ನೀರಸ ಪ್ರತಿಕ್ರಿಯೆ ಬಂತು. ‘ಪ್ರಥಮ ಚುಂಬನಂ ದಂತ ಭಗ್ನಂ’ ಎಂಬಂತಾಗಿ ತುಂಬಾ ಬೇಜಾರಾಯಿತು. ಆದರೆ ಎದೆಗುಂದದೆ ಅದನ್ನು ಸವಾಲಾಗಿ ಸ್ವೀಕರಿಸಿದೆ. ಇದರಿಂದ ಪ್ರೇರಣೆಗೊಂಡ ಸುಬ್ರಹ್ಮಣ್ಯ ಧಾರೇಶ್ವರರು ಇನ್ನೊಂದು ಪ್ರಯೋಗಕ್ಕೆ ಮುಂದಾದರು. ಆಗ ನಾನು ಮತ್ತು ಧಾರೇಶ್ವರರು ಸೇರಿ ಪಾರ್ಥಿ ಸುಬ್ಬರವರ ‘ಪುತ್ರಕಾಮೇಷ್ಠಿ ಯಾಗ’ ಎನ್ನುವ ಪ್ರಸಂಗವನ್ನು ತೆಗೆದುಕೊಂಡು ‘ಸೂರ್ಯ ದೀಪ’ ಎನ್ನುವ ಪ್ರಯೋಗ ಮಾಡಿದೆವು. ಅದರಲ್ಲಿ ಕವಿನುಡಿಯನ್ನು ಉದ್ಘೋಷವಾಗಿ ಬಳಸಿಕೊಳ್ಳಲಾಯಿತು. ಅದನ್ನು ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರೇ ಹಾಡಿದರು. ಹೀಗೆ ಕಾಳಿಂಗ ನಾವಡರ ಮಾರ್ಗದರ್ಶನದೊಂದಿಗೆ ಇನ್ನೊಂದು ನೂತನ ಸಾಹಸಕ್ಕೆ ಕೈ ಹಾಕಬೇಕೆನ್ನುವಾಗ ಕಾಳಿಂಗ ನಾವಡರ ಅನಿರೀಕ್ಷಿತ ಸಾವು ಆಘಾತವನ್ನುಂಟು ಮಾಡಿತ್ತು. ಅವರ ನಿರ್ಗಮನ ಯಕ್ಷಗಾನ ಕ್ಷೇತ್ರದಲ್ಲಿ ಸ್ವಲ್ಪ ಕಾಲ ನಿರ್ವಾತವನ್ನು ಸೃಷ್ಟಿಸಿದ್ದು ಸುಳ್ಳಲ್ಲ. ಕಾಳಿಂಗ ನಾವಡರ ನಿಧನದ ನಂತರ ಅಮೃತಮತಿ ಕ್ಯಾಸೆಟ್ ದಾಖಲೆಯ ಮಾರಾಟವಾಗಿದ್ದು ಇಲ್ಲಿ ಉಲ್ಲೇಖನೀಯ. ನಾವಡರ ಮಾರ್ಗದರ್ಶನದಲ್ಲಿ ಸಾಲ್ವ ಶೃಂಗಾರ ಎನ್ನುವ ಹೊಸತೊಂದು ಪ್ರಯೋಗಕ್ಕೆ ಯೋಜನೆ ರೂಪುಗೊಂಡಿತ್ತು. ಅವರ ಕನಸನ್ನು ನನಸು ಮಾಡುವ ಸದುದ್ದೇಶದಿಂದ ನಾವಡರ ಅಭಿಲಾಷೆಯಂತೆ ಅವರೇ ನಿಗದಿಪಡಿಸಿದ ಕಲಾವಿದರನ್ನು ಬಳಸಿಕೊಂಡು ನನ್ನ ಭಾಗವತಿಕೆಲ್ಲೇ ಸಿ. ಡಿ ಮಾಡಿದೆ. ಇದೊಂದು ನನಗೆ ಹೊಸ ಅನುಭವ. ಅದಾದ ಮೇಲೆ 28 ಕ್ಕೂ ಹೆಚ್ಚು ಭಾಗವತಿಕೆ ಕ್ಯಾಸೆಟ್ ಮಾಡಿದೆ. ಅದರಲ್ಲಿ ಹೆಚ್ಚಿನವು ಹಾಸ್ಯ ಪ್ರಸಂಗಗಳಾಗಿದ್ದು ಜನಮನ ಸೂರೆಗೊಂಡಿದೆ. ಹೀಗೆ ಕ್ಯಾಸೆಟ್ ಕ್ಷೇತ್ರ ನಿಧಾನವಾಗಿ ನನ್ನ ಹಿಡಿತ ಸಾಧಿಸಿದೆ.

ಉ.ಟೈಮ್ಸ್ : ನೀವು ಕಾರ್ಯಕ್ರಮಗಳ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದೀರಿ. ಅದರ ಬಗ್ಗೆ ಸ್ವಲ್ಪ ವಿವರವಾಗಿ ಹೇಳಬಹುದೇ?
ಅತಿಥಿ : ಈ ಮೇಲೆ ಹೇಳಿದ ಎಲ್ಲಾ ಕಾರ್ಯಕ್ರಮ ಮಾಡುತ್ತಲೇ ಅದರ ಜೊತೆಗೆ ಕಾರ್ಯಕ್ರಮ ಸಂಘಟನೆಯತ್ತಲೂ ಗಮನ ಹರಿಸಿದೆ. ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಠಾನ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಆ ಸಂಸ್ಥೆಯ ವತಿಯಿಂದ ಯಕ್ಷಗಾನ, ಸಂಸ್ಮರಣೆಯಂತಹ ಹಲವಾರು ಕಾರ್ಯಕ್ರಮಗಳನ್ನು ಮಾಡಿದೆವು. ನಂತರ ಅದರಲ್ಲಿ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿವಿಧ ಸಾಂಸ್ಕೃತಿಕ ಮಜಲುಗಳನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆವು. ಹಾಗೆಯೇ ಈ ಸಂಸ್ಥೆಯ ವತಿಯಿಂದ ಪ್ರತಿ ವರ್ಷ ಯುವ ಭಾಗವತರಿಗೆ ಪ್ರಶಸ್ತಿ ನೀಡಿ ಸಂಮಾನಿಸಿ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ. ಜೊತೆಗೆ ಮಲೆನಾಡಿನ ಪ್ರಸಿದ್ಧ ಕಲಾವಿದರಾದ ಮರಿಯಪ್ಪಾಚಾರ್ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆ ಮಾಡಿ ಮಲೆನಾಡಿನ ಕಲಾವಿದರಿಗೆ ಅವರ ಹೆಸರಲ್ಲಿ ಪ್ರಶಸ್ತಿ ನೀಡುತ್ತಾ ಬರುತ್ತಿದ್ದೇವೆ.

ಇಷ್ಟೆಲ್ಲಾ ಮಾಡಿದರೂ ಕಲಾವಿದರಿಗಾಗಿ ಇನ್ನೂ ಏನೇನೋ ಮಾಡಬೇಕೆನ್ನುವ ತುಡಿತವಿತ್ತು. ಆ ಕುರಿತು ಯೋಚಿಸುವಾಗ ನಮ್ಮ ಮಲೆನಾಡಿನಲ್ಲಿ ಅನೇಕ ಕಲಾವಿದರಿದ್ದರೂ ಅವರೆಲ್ಲಾ ಸಂಘಟನಾತ್ಮಕವಾಗಿ ಒಂದಾಗಿರಲಿಲ್ಲ. ಅವರೆಲ್ಲರನ್ನೂ ಒಟ್ಟುಗೂಡಿಸಬೇಕು, ಅವರಿಗಾಗಿ ಏನಾದರೂ ಮಾಡಬೇಕು ಎನ್ನು ದೃಷ್ಟಿಯಿಂದ 1991-1992 ರಲ್ಲಿ ‘ಮಲೆನಾಡು ಯಕ್ಷ ಕಲಾವಿದರ ಸಮಾವೇಶ’ ಯಶಸ್ವಿಯಾಗಿ ಮಾಡಿದೆವು. 2012 ರಲ್ಲಿ ನಾನು ಮುರಳೀ ಕಡೆಕಾರ್ ಅವರ ನೇತೃತ್ವದಲ್ಲಿ ಅಕಾಡೆಮಿಯ ವತಿಯಿಂದ ಮಲೆನಾಡಿನ ಸುತ್ತಮುತ್ತಲಿನ ತಾಲೂಕುಗಳನ್ನೊಳಗೊಂಡು ‘ಒಳ ಮಲೆನಾಡು ಯಕ್ಷ ವೀಕ್ಷಣಾ’ ಎಂಬ ಬಹಳ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆಯನ್ನೂ ಮಾಡಿದೆವು. ಮಲೆನಾಡಿನ ಯಕ್ಷಗಾನ ಕೇತ್ರದಲ್ಲಿ ಇದೊಂದು ಹೊಸ ಮೈಲಿಗಲ್ಲು ಎಂದೇ ಹೇಳಬಹುದು. ಇದರ ಪರಿಣಾಮವಾಗಿ ಹಲವು ಕಲಾವಿದರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸಿಕ್ಕಿತು. ಅಲ್ಲದೇ ಯಕ್ಷಗಾನ ಕ್ಷೇತ್ರದಲ್ಲಿ ನನ್ನ ನಿರಂತರ ಕಾರ್ಯ ಹಾಗೂ ಅವಿರತ ಶ್ರಮದ ಫಲಶ್ರುತಿ ಎಂಬಂತೆ 2012 ಯಕ್ಷಗಾನ ಅಕಾಡೆಮಿ ಸದಸ್ಯನಾಗಿ ನೇಮಕಗೊಂಡೆ. ಮಲೆನಾಡು ಪ್ರಾಂತ್ಯದಿಂದ ಯಕ್ಷಗಾನ ಅಕಾಡೆಮಿಗೆ ಆಯ್ಕೆಯಾದ ಮೊದಲ ವ್ಯಕ್ತಿ ನಾನು ಎನ್ನಲು ನನಗೆ ಬಹಳ ಹೆಮ್ಮೆ ಎನಿಸುತ್ತದೆ. ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಮೇಲೆ ನಾನು ನನ್ನ ಚಟುವಟಿಕೆಗಳ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಣೆ ಮಾಡಿ ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅವುಗಳಲ್ಲೊಂದು ನಾವಡರು ತೀರಿ ಹೋಗಿ 20 ವರ್ಷ ಆದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಮಾಡಿ ಅವರ ಕುರಿತಾದ ಸಾಕ್ಷಚಿತ್ರ ಮಾಡಿದೆ. ಆ ಸಾಕ್ಷ್ಯಚಿತ್ರ ಇಂದಿಗೂ ಮಾರ್ಕೆಟಲ್ಲಿದೆ.

ಉ.ಟೈಮ್ಸ್ : ದೂರದರ್ಶನದ ವಾಹಿನಿಯಲ್ಲಿ ಯಕ್ಷಗಾನದ ಪ್ರಸಂಗಗಳು ಪ್ರಸಾರವಾಗಿದ್ದರ ಬಗ್ಗೆ ಮಾಹಿತಿ ನೀಡಬಹುದೇ?
ಅತಿಥಿ : ಯಕ್ಷಪ್ರಪಂಚ ಎನ್ನುವ ಹೆಸರಲ್ಲಿ ಯಕ್ಷಗಾನದ ಬೇರೆಬೇರೆ ಪ್ರಸಂಗಗಳು ಚಂದನವಾಹಿನಿಯಲ್ಲಿ 26 ಕಂತಿನಲ್ಲಿ ಧಾರಾವಾಹಿ ರೂಪದಲ್ಲಿ ಪ್ರಸಾರವಾಗಿತ್ತು.

ಉ.ಟೈಮ್ಸ್ : ಯಕ್ಷಗಾನದ ಇತ್ತೀಚಿನ ಬೆಳವಣಿಗೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಅತಿಥಿ : ಹೊಸ ಕಲಾವಿದರಿಗೆ ಹಳೆ ಪ್ರಸಂಗಗಳ ನಡೆ ತಿಳಿದಿಲ್ಲ. ಇವತ್ತಿನ ಕಲಾವಿದರು ಅವರದ್ದೇ ಆದ ಶೈಲಿ ಕೊಡಲು ಸೋಲುತ್ತಿದ್ದಾರೆ. ಶಂಭು ಹೆಗಡೆ, ಚಿಟ್ಟಾಣಿ, ಕಣ್ಣಿಮನೆ, ಯಾಕ್ಟರ್ ಜೋಷಿ ಅವರು ಅವರದ್ದೇ ಆದ ಛಾಪನ್ನು ಮೂಡಿಸಿದಂತೆ ಈಗಿನವರಿಗೆ ಮೂಡಿಸಲು ಆಗಿಲ್ಲ. ಯುವ ಜನಾಂಗ ಇಂತಹ ಹಿಂದಿನ ಕಲಾವಿದರ ಅನುಕರಣೆಯಲ್ಲಿ ತೊಡಗಿವೆ. ಆದರೆ ಇದಕ್ಕೆ ಅಪವಾದವಾಗಿ ಕೆಲವು ಕಲಾವಿದರು ಸೃಜನಶೀಲರಾಗಿದ್ದಾರೆ. ಏನಾದರೂ ಮಾಡಬೇಕೆನ್ನುವ ಹಸಿವಿರುವ ಕೆಲವು ಮಂದಿಯಿದ್ದಾರೆ. ಕಲಾವಿದರಲ್ಲಿ ಅಧ್ಯಯನಶೀಲತೆ ಕಡಿಮೆಯಾಗಿದೆ. ಪ್ರದರ್ಶನದ ಬಾಹುಳ್ಯದಿಂದ ಅಧ್ಯಯನಕ್ಕೆ ತೊಂದರೆಯಾಗಿದೆ ಎನ್ನುವುದು ನನ್ನ ಅಭಿಪ್ರಾಯ.

ಉ.ಟೈಮ್ಸ್ : ನೀವು ಕಾಳಿಂಗ ನಾವಡರ ಅಪ್ಪಟ ಅಭಿಮಾನಿ. ಆದರೆ ಕಾಳಿಂಗ ನಾವಡರು ಯಕ್ಷಗಾನದಲ್ಲಿ ತಂದ ಬದಲಾವಣೆ ಎಷ್ಟರ ಮಟ್ಟಿಗೆ ಯಕ್ಷಗಾನಕ್ಕೆ ಪೂರಕ?
ಅತಿಥಿ :ಕಾಳಿಂಗ ನಾವಡರು ಮೂರು ಭಾಗವತರಿಂದ ಪ್ರಭಾವಿತರಾಗಿರುವುದೇ ಈ ವಿನೂತನ ಪ್ರಯೋಗಕ್ಕೆ ಕಾರಣವಾಯಿತು. ಅವರ ತಂದೆ ರಾಮಚಂದ್ರ ನಾವಡರು ಅವರಿಂದ ಕುಂಜಾಲು ಶೈಲಿಯ ಭಾಗವತಿಕೆಯನ್ನು ಅಭ್ಯಸಿಸಿದರು. ಗುರುಗಳಾದ ನಾರ್ಣಪ್ಪ ಉಪ್ಪೂರರಿಂದ ಮಾರ್ವಿ ಶೈಲಿಯನ್ನು ಕಲಿತರು. ಮಾರ್ವಿ ಶೈಲಿಯು ಲಘು ಲಹರಿಯಲ್ಲಿ ಹೇಳುವ ಪದ್ಯವಾಗಿದ್ದು ಇದು ಕುಣಿತಕ್ಕೆ, ಅಭಿನಯಕ್ಕೆ ಸೂಕ್ತವಾಗಿದೆ. ಅಲ್ಲದೇ ಅವರ ಮೇಲೇ ಕಡತೋಕ ಮಂಜುನಾಥ ಭಾಗವತರ ಪ್ರಭಾವ. ಇವರಿಂದ ಸ್ವರ ತೆಗೆಯುವುದು ಹೇಗೆ ಎಂಬುದನ್ನು ಕಲಿತರು. ಇದೆಲ್ಲದರ ಮಿಲನವೇ ಕಾಳಿಂಗ ನಾವಡರ ಶೈಲಿ.
ಇದು ಯಕ್ಷಗಾನಕ್ಕೆ ಮಾರಕವೇ? ಖಂಡಿತಾ ಇಲ್ಲ. ಆ ಕಾಲಕ್ಕೆ ಅದು ಸೂಕ್ತವಾಗಿರದಿದ್ದರೂ ಈಗ ಅದು ಪರಂಪರೆಯಾಗಿದೆ. ಈಗಿನ ಹಲವಾರು ಭಾಗವತರು ಅವರನ್ನು ಅನುಕರಿಸುತ್ತಿದ್ದಾರೆ. ಅಲ್ಲದೇ ಅವರದ್ದೇ ಆದ ರೀತಿಯಲ್ಲಿ ಬದಲಾವಣೆ ಮಾಡುತ್ತಿದ್ದಾರೆ. ಆದರೂ ಅವರು ಮರೆಯಾಗಿ 2 ದಶಕಗಳ ನಂತರವೂ ಅವರನ್ನು ಅನುಕರಿಸುವವರು ಇದ್ದಾರೆಂದರೆ ಅದರಲ್ಲಿ ಏನೋ ಸೆಳೆತ ಇದೆ ಎಂದೇ ಅರ್ಥ.
ಉ.ಟೈಮ್ಸ್ : ಯಕ್ಷಗಾನದಲ್ಲಿ ತಿಟ್ಟುಗಳ ಬೇಧವಿಲ್ಲದೆ ಎಲ್ಲವೂ ಸಮ್ಮಿಳಿತಗೊಳ್ಳುತ್ತಿದೆ. ಅಲ್ಲದೇ ಬೇರೆ ಬೇರೆ ಕಲೆಯ ಪ್ರವೇಶವಾಗಿದೆ. ಇದು ಸರಿಯೇ?
ಅತಿಥಿ :ಉತ್ತರ ಕನ್ನಡದಲ್ಲಿ ಲಾಲಿತ್ಯ ನೃತ್ಯವನ್ನು ಕಾಣಬಹುದು, ತೆಂಕಿನಲ್ಲಿ ಅಬ್ಬರದ ತಾಳ. ನಡುತಿಟ್ಟಲ್ಲಿ ಪ್ರತ್ಯೇಕ ಗತ್ತಿನ ಹೆಜ್ಜೆಗಳಿವೆ, ಬಹುಶಃ ಇದು ಜನರನ್ನು ಸೆಳೆಯುವಲ್ಲಿ ವಿಫಲವಾಗಿದ್ದರಿಂದ ಈ ರೀತಿ ಬದಲಾವಣೆಗಳು ಬಂದಿರಬಹುದು. ಮತ್ತೆ ಕಲಾವಿದರು ಯಾವುದರ ಪ್ರಭಾವ ಹೆಚ್ಚಿರುತ್ತದೋ ಅದನ್ನು ಅನುಕರಣೆ ಮಾಡುತ್ತಾರೆ. ಅದರಿಂದ ಜನಪ್ರಿಯತೆ ಗಳಿಸುವುದು ಸುಲಭ.

ಕಾಳಿಂಗ ನಾವಡರು ಮೂರು ಭಾಗವತರಿಂದ ಪ್ರಭಾವಿತರಾಗಿರುವುದೇ ಈ ವಿನೂತನ ಪ್ರಯೋಗಕ್ಕೆ ಕಾರಣವಾಯಿತು. ಅವರ ತಂದೆ ರಾಮಚಂದ್ರ ನಾವಡರು ಅವರಿಂದ ಕುಂಜಾಲು ಶೈಲಿಯ ಭಾಗವತಿಕೆಯನ್ನು ಅಭ್ಯಸಿಸಿದರು. ಗುರುಗಳಾದ ನಾರ್ಣಪ್ಪ ಉಪ್ಪೂರರಿಂದ ಮಾರ್ವಿ ಶೈಲಿಯನ್ನು ಕಲಿತರು. ಮಾರ್ವಿ ಶೈಲಿಯು ಲಘು ಲಹರಿಯಲ್ಲಿ ಹೇಳುವ ಪದ್ಯವಾಗಿದ್ದು ಇದು ಕುಣಿತಕ್ಕೆ, ಅಭಿನಯಕ್ಕೆ ಸೂಕ್ತವಾಗಿದೆ. ಅಲ್ಲದೇ ಅವರ ಮೇಲೇ ಕಡತೋಕ ಮಂಜುನಾಥ ಭಾಗವತರ ಪ್ರಭಾವ. ಇವರಿಂದ ಸ್ವರ ತೆಗೆಯುವುದು ಹೇಗೆ ಎಂಬುದನ್ನು ಕಲಿತರು. ಇದೆಲ್ಲದರ ಮಿಲನವೇ ಕಾಳಿಂಗ ನಾವಡರ ಶೈಲಿ.
ಇದು ಯಕ್ಷಗಾನಕ್ಕೆ ಮಾರಕವೇ? ಖಂಡಿತಾ ಇಲ್ಲ. ಆ ಕಾಲಕ್ಕೆ ಅದು ಸೂಕ್ತವಾಗಿರದಿದ್ದರೂ ಈಗ ಅದು ಪರಂಪರೆಯಾಗಿದೆ. ಈಗಿನ ಹಲವಾರು ಭಾಗವತರು ಅವರನ್ನು ಅನುಕರಿಸುತ್ತಿದ್ದಾರೆ. ಅಲ್ಲದೇ ಅವರದ್ದೇ ಆದ ರೀತಿಯಲ್ಲಿ ಬದಲಾವಣೆ ಮಾಡುತ್ತಿದ್ದಾರೆ. ಆದರೂ ಅವರು ಮರೆಯಾಗಿ 2 ದಶಕಗಳ ನಂತರವೂ ಅವರನ್ನು ಅನುಕರಿಸುವವರು ಇದ್ದಾರೆಂದರೆ ಅದರಲ್ಲಿ ಏನೋ ಸೆಳೆತ ಇದೆ ಎಂದೇ ಅರ್ಥ.
ಉ.ಟೈಮ್ಸ್ : ಯಕ್ಷಗಾನದಲ್ಲಿ ತಿಟ್ಟುಗಳ ಬೇಧವಿಲ್ಲದೆ ಎಲ್ಲವೂ ಸಮ್ಮಿಳಿತಗೊಳ್ಳುತ್ತಿದೆ. ಅಲ್ಲದೇ ಬೇರೆ ಬೇರೆ ಕಲೆಯ ಪ್ರವೇಶವಾಗಿದೆ. ಇದು ಸರಿಯೇ?
ಅತಿಥಿ :ಉತ್ತರ ಕನ್ನಡದಲ್ಲಿ ಲಾಲಿತ್ಯ ನೃತ್ಯವನ್ನು ಕಾಣಬಹುದು, ತೆಂಕಿನಲ್ಲಿ ಅಬ್ಬರದ ತಾಳ. ನಡುತಿಟ್ಟಲ್ಲಿ ಪ್ರತ್ಯೇಕ ಗತ್ತಿನ ಹೆಜ್ಜೆಗಳಿವೆ, ಬಹುಶಃ ಇದು ಜನರನ್ನು ಸೆಳೆಯುವಲ್ಲಿ ವಿಫಲವಾಗಿದ್ದರಿಂದ ಈ ರೀತಿ ಬದಲಾವಣೆಗಳು ಬಂದಿರಬಹುದು. ಮತ್ತೆ ಕಲಾವಿದರು ಯಾವುದರ ಪ್ರಭಾವ ಹೆಚ್ಚಿರುತ್ತದೋ ಅದನ್ನು ಅನುಕರಣೆ ಮಾಡುತ್ತಾರೆ. ಅದರಿಂದ ಜನಪ್ರಿಯತೆ ಗಳಿಸುವುದು ಸುಲಭ.

ಇಂದಿನ ಹೆಚ್ಚಿನ ಕಲಾವಿದರಲ್ಲಿ ಬದ್ಧತೆ ಕಡಿಮೆಯಾಗಿದೆ. ಜನಪ್ರಿಯತೆಗಾಗಿ ಏನೇನೋ ಗಿಮಿಕ್ಗಳು ಆರಂಭವಾಗಿದೆ ಎನ್ನುವ ಮಾತು ಕಲಾ ವಲಯದಲ್ಲಿ ಕೇಳಿ ಬರುತ್ತಿದೆ. ಹೀಗೆ ಜನಪ್ರಿಯತೆಗಾಗಿ ಕಲೆಯ ಮೂಲತತ್ವಕ್ಕೆ ಧಕ್ಕೆ ತರುವುದು ತರವೇ?
ಜನಪ್ರಿಯತೆ ಮೇಲೆ ಇಂದಿನ ಪ್ರಪಂಚ ನಿಂತಿದೆ. ಕಲಾವಿದರಿಗೆ ಹೊಟ್ಟೆಪಾಡು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿಂತ ನೀರಾಗಿದ್ದರೆ ಅಂತಹ ವ್ಯಕ್ತಿಗೆ ಬೆಲೆ ಇರುವುದಿಲ್ಲ. ಏನೋ ಒಂದು ಹೊಸತನ್ನು ನೀಡಿದಾಗಲೇ ವ್ಯಕ್ತಿಗೂ ಬೆಲೆ, ವೃತ್ತಿಗೂ ಬೆಲೆ. ಹಾಗಾಗಿ ಇಂತಹುದ್ದೆಲ್ಲ ಅನಿವಾರ್ಯ. ಆದರೆ ಮೇಳದ ಯಜಮಾನರು, ಕಾರ್ಯಕ್ರಮದ, ಆಯೋಜಕರು, ಸಂಘಟಕರು, ವ್ಯವಸ್ಥಾಪಕರು ಕೊನೆ ಪಕ್ಷ ಒಂದು ಪ್ರಸಂಗವನ್ನಾದರೂ ನಡುತಿಟ್ಟಿನ ಪರಂಪರೆಯಲ್ಲಿ ಆಡಬೇಕೆಂಬ ನಿಯಮ ಜಾರಿಗೆ ತಂದರೆ, ಕಲಾವಿದರ ಮೇಲೆ ಒತ್ತಡ ಹೇರಿದರೆ ಪರಂಪರೆ ಉಳಿಯಬಹುದೇನೋ. ಆ ನಿಟ್ಟಿನಲ್ಲಿ ನಾನೂ ಹಲವು ಪ್ರಯೋಗವನ್ನು ಮಾಡಿದ್ದೆ. ಈಗಿನ ಹಲವು ಕಲಾವಿದರಿಗೆ ಸಂಪ್ರದಾಯದ ಕುಣಿತ ಗೊತ್ತಿದೆ. ಅದನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು.

ಉ.ಟೈಮ್ಸ್ :ಯಕ್ಷಗಾನದ ಪರಂಪರೆ ಉಳಿಸುವಲ್ಲಿ ಹವ್ಯಾಸಿ ಕಲಾವಿದರ ಜವಾಬ್ದಾರಿಗಳೇನು?
ಅತಿಥಿ :ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಹವ್ಯಾಸಿಗಳ ಜವಾಬ್ದಾರಿ ಬಹಳವಿದೆ. ಯಕ್ಷಗಾನಕ್ಕೆ ರಂಗಾಯಣ ತರ ಒಂದು ಸಂಸ್ಥೆ ಬೇಕು. ಇಂತಹ ಸಂಸ್ಥೆಗಳು ಆಯಾ ಪ್ರದೇಶದಲ್ಲಿ ಸ್ಥಾಪನೆಯಾಗಿ ಅಲ್ಲಿನ ತಿಟ್ಟು, ಮಟ್ಟು, ಸಂಪ್ರದಾಯ, ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಈ ರೀತಿ ಸಂಸ್ಥೆ ಬೇಕೆನ್ನುವುದು ನನ್ನ ಪ್ರಬಲವಾದ ಬೇಡಿಕೆ. ಈ ಕುರಿತು ಸಚಿವರಾದ ಸಿ. ಟಿ ರವಿ ಇವರಲ್ಲಿ ಮಾತನಾಡಿದ್ದೇನೆ.

ಉ.ಟೈಮ್ಸ್ : ನೀವು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದವರು. ಯಕ್ಷಗಾನ ಅಕಾಡೆಮಿಯ ಜವಾಬ್ದಾರಿ, ಕರ್ತವ್ಯ, ಸವಾಲುಗಳೇನು? ಇಂತಹ ಅಪಸವ್ಯಗಳನ್ನು ನಿಯಂತ್ರಿಸುಲ್ಲಿ ಅದರ ಅಧಿಕಾರ ವ್ಯಾಪ್ತಿಯೇನು?
ಅತಿಥಿ :ಯಕ್ಷಗಾನ ಅಕಾಡೆಮಿಯೆನ್ನುವುದು ವಿದ್ವತ್ ಮಂಡಳಿ, ಅದಕ್ಕೆ ಯುಕ್ಷಗಾನ ಪ್ರದರ್ಶನವನ್ನು ನಿಯಂತ್ರಿಸುವ ಹಕ್ಕಿಲ್ಲ, ಆದರೆ ಯಕ್ಷಗಾನವನ್ನು ಪ್ರಚಾರ ಮಾಡುವುದು, ಯಕ್ಷಗಾನದ ಸ್ವರೂಪವನ್ನು ಅಭಿವೃದ್ಧಿ ಪಡಿಸುವುದು, ಜನರಿಗೆ ತಲುಪಿಸುವುದು, ಯುವ ಪೀಳಿಗೆಯನ್ನು ಯಕ್ಷಗಾನದತ್ತ ಆಕರ್ಷಿಸುವುದು. ವಿಚಾರ ಸಂಕಿರಣ ಮಾಡುವುದು. ಜನರ ಫೀಡ್ ಬ್ಯಾಕನ್ನು ಆಧರಿಸಿ ಪ್ರತಿಕ್ರಿಯೆ ನೀಡುವುದು. ಯಕ್ಷಗಾನ ಅಕಾಡೆಮಿಯ ವ್ಯಾಪ್ತಿಗೆ ಬರುತ್ತದೆ. ಆದರೆ ಇಂದು ವ್ಯಾಪಾರೀಕರಣ ಆಗಿರುವುದರಿಂದ ಇಂತಹ ಅಪಸವ್ಯಗಳಾಗುತ್ತಿವೆ. ಇಂತಹ ಅಪಸವ್ಯವನ್ನು ತಡೆಯುವ ಕಾನೂನು ಬದ್ಧ ಅಧಿಕಾರ ಅಕಾಡೆಮಿಗಿಲ್ಲ. ಆದರೆ ಅಗತ್ಯವಿದ್ದಾಗ ನಾವು ನಮ್ಮ ಅನಿಸಿಕೆ, ಅಭಿಪ್ರಾಯ ವ್ಯಕ್ತಪಡಿಸಿ ಖಂಡಿಸಿದ್ದಿದೆ. ಪರಸ್ಪರ ಸಹಕಾರದೊಂದಿಗೆ ಅಪಸವ್ಯವನ್ನು ತಡೆಗಟ್ಟಲು ಸಾಧ್ಯ.

ಉ.ಟೈಮ್ಸ್ : ಯಕ್ಷಗಾನದಲ್ಲಿ ಹೆಚ್ಚಿನ ಪ್ರಸಂಗಗಳು ಮೂಲೆಗುಂಪಾಗಿವೆ ಯಾಕೆ?
ಅತಿಥಿ :ಯಕ್ಷಗಾನ ಎನ್ನುವುದು ಆಕರ್ಷಣೆಯ ಮೇಲೆ ನಿಂತಿದೆ. ಹಾಸ್ಯ, ಕುಣಿತ, ಮಾತು ಎಲ್ಲವೂ ಮಿಳಿತವಾಗಿರುತ್ತದೆ. ಯಾವ ಪ್ರಸಂಗ ಹೆಚ್ಚು ಮನೋರಂಜನೆಯನ್ನು ನೀಡುತ್ತದೆಯೋ ಅಂತಹ ಪ್ರಸಂಗಗಳು ಚಾಲ್ತಿಯಲ್ಲಿರುತ್ತದೆ.

ಉ.ಟೈಮ್ಸ್ :ಹಾಸ್ಯಪಾತ್ರಗಳ ಸಂಭಾಷಣೆಯಲ್ಲಿ ಆಂಗ್ಲ ಭಾಷಾ ಪದಪ್ರಯೋಗ ಎಷ್ಟು ಸರಿ?
ಅತಿಥಿ :ಹಿಂದಿನ ಕಲಾವಿದರು ಬೇರೆ ಬೇರೆ ಭಾಷೆಯನ್ನು ಹಾಸ್ಯದಲ್ಲಿ ಬಳಸುತ್ತಿದ್ದರು. ಈಗಿನ ಕಲಾವಿದರು ಹಾಸ್ಯದಲ್ಲಿ ಹೊಸತನ್ನು ಕೊಡುವುದಕ್ಕಾಗಿ ಆಂಗ್ಲ ಪದ ಬಳಸುತ್ತಾರೆ. ಅದರಲ್ಲಿ ತಪ್ಪೇನಿಲ್ಲ.

ಇವಿಷ್ಟು ಎಸ್. ವಿ. ರಮೇಶ್ ಬೇಗಾರರ ಅಭಿಪ್ರಾಯಗಳು ಮಡದಿ ಭಾಗ್ಯಶ್ರೀ ಇವರು ಆದರ್ಶ ಗೃಹಿಣಿಯಾಗಿದ್ದು ಪತಿಯ ಕಾರ್ಯದಲ್ಲಿ ಸಹಕರಿಸುತ್ತಾ ಬೆನ್ನೆಲುಬಾಗಿದ್ದಾರೆ. ಮಗಳು ನಾಗಶ್ರೀ ಪ್ರಥಮ ವರ್ಷದ ಪದವಿ ಓದುತ್ತಿದ್ದು ಭರತನಾಟ್ಯದ ಕುರಿತು ಹೆಚ್ಚಿನ ಅಧ್ಯಯನದಲ್ಲಿ ನಿರತಳಾಗಿದ್ದಾಳೆ. ಮಗ ಸ್ಕಂದ ಶಂಕರ ಐದನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಇಬ್ಬರು ಮಕ್ಕಳೂ ಯಕ್ಷಗಾನ ಮತ್ತು ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಸ್. ವಿ. ರಮೇಶ್ ಬೇಗಾರರಿಗೆ ಶುಭವನ್ನು ಹಾರೈಸುತ್ತೇನೆ.

ಸಂದರ್ಶನ /ಲೇಖನ ನಾಗರತ್ನ ಜಿ

Leave a Reply

Your email address will not be published. Required fields are marked *

error: Content is protected !!