ರಂಗಭೂಮಿಯ ಆಗಸದಲ್ಲಿ ಮಿಂಚುತ್ತಿರುವ ಪೌರ್ಣಮಿ :ಉಡುಪಿ ಟೈಮ್ಸ್ ವಾರದ ವ್ಯಕ್ತಿ ಪೂರ್ಣಿಮಾ ಸುರೇಶ್


ಸಂದರ್ಶನ/ ಲೇಖಕಿ : ದಿವ್ಯ
ಮಂಚಿ.

ವಾರದ ವ್ಯಕ್ತಿ ಬಗ್ಗೆ ಯೋಚನೆ ಮಾಡುತ್ತಿದ್ದಾಗ ಈ ಬಾರಿ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವ್ಯಕ್ತಿಯನ್ನು ಸಂದರ್ಶಿಸಿದರೆ ಹೇಗೆ ಎನ್ನುವ ಆಲೋಚನೆ ಬಂತು. ಆಗಲೇ ನಮ್ಮವರೇ ಒಬ್ಬರು ಪೂರ್ಣಿಮಾ ಸುರೇಶ್ ಎಂಬ ಹೆಸರು ಸೂಚಿಸಿದರು. ನನಗೂ ಈ ಹೆಸರೇನೂ ಅಪರಿಚಿತವಲ್ಲ. ಪೂರ್ಣಿಮಾ ಸುರೇಶ್ ಎಲ್ಲರಿಗೂ ಚಿರಪರಿಚಿತರೇ. ನನಗೂ ಒಂದೆರಡು ಭಾರಿ ಭೇಟಿ ಮಾಡಿರುವ ಪರಿಚಯ. ಅವರು ವಿವಿಧ ಕ್ಷೇತ್ರದಲ್ಲಿ ತೊಡಗಿಕೊಂಡು ಮಹಿಳೆ ಸಾಧಿಸುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲೂ ಸಾದಿಸಬಹುದು ಎನ್ನುವುದನ್ನು ತೋರಿಸಿಕೊಟ್ಟವರಲ್ಲಿ ಒಬ್ಬರು. ಹಾಗಾಗಿ ಅವರೇ ಸೂಕ್ತ ಅನ್ನಿಸಿತು. ಈ ವಾರದದ ಮಹಿಳಾ ದಿನಾಚರಣೆ ವಿಶೇಷವಾಗಿ ವಾರದ ವ್ಯಕ್ತಿಯಲ್ಲಿ ರಂಗ ಕಲಾವಿದೆ ಪೂರ್ಣಿಮಾ ಸುರೇಶ್ ಅವರ ಸಾಧನೆಯ ಪುಟಗಳನ್ನೂ ತೆರೆದಿಡುವ ಪ್ರಯತ್ನ ನಮ್ಮ ಉಡುಪಿ ಟೈಮ್ಸ್ ನಿಂದ ಮಾಡಿದ್ದೇವೆ.
ಇವರಿಗೆ ಬರೇ ರಂಗ ಕಲಾವಿದೆ ಎಂದರೆ ಅದು ಸರಿಹೋಗುವುದಿಲ್ಲ ಯಾಕೆಂದರೆ ಇವರದ್ದು ರಂಗ ಕ್ಷೇತ್ರ ಮಾತ್ರವಲ್ಲ. ಈ ಮೊದಲೇ ಹೇಳಿರುವಂತೆ ಇವರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡವರು. ಇವರು ಓರ್ವ ಲೇಖಕಿ, ರಂಗ ಕಲಾವಿದೆ, ಚಲನಚಿತ್ರ ಕಲಾವಿದೆ, ಸಮಾಜ ಸೇವಕಿ, ಉದ್ಯಮಿ, ಉಪನ್ಯಾಸಕಿ ಹಾಗೂ ನಿರೂಪಕಿಯೂ ಹೌದು

ಇವರು ಹುಟ್ಟಿದ್ದು ಬೆಳೆದದ್ದು ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ. ಪಿಯುಸಿ ವರೆಗೆ ಅಲ್ಲಿಯೇ ಶಿಕ್ಷಣ ಮುಗಿಸಿದ ನಂತರ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಬಳಿಕ ಓಪನ್ ಯುನಿವರ್ಸಿಟಿ ಯಲ್ಲಿ ಕನ್ನಡ ಎಂ.ಎ ಹಾಗೂ ಧಾರವಾಡ ಯುನಿವರ್ಸಿಟಿ ಯಲ್ಲಿ ಪತ್ರಿಕೋದ್ಯಮ ಎಂ.ಎ ಪದವಿ ಪಡೆದಿದ್ದಾರೆ.
ಹಿರಿಯಡ್ಕ ದಲ್ಲಿ ಶಾರದ ಅವರ ಮಗಳಾಗಿ ಜನಿಸಿದ ಅವರು ಮಾವ ಸದಾನಂದ ನಾಯಕ್ ಅವರ ಆರೈಕೆಯಲ್ಲಿ ಬೆಳೆದಿದ್ದಾರೆ. ಅಂಜು ಸ್ವಭಾವದ ಪೂರ್ಣಿಮಾ ಸುರೇಶ್ ಅವರ ವ್ಯಕ್ತಿತ್ವ ವಿಕಸನ ರೂಪಿಸಿದ್ದೇ ಅಜ್ಜ ಅಜ್ಜಿ, ಪೂರ್ಣಿಮಾ ಸುರೇಶ್ ಅವರನ್ನು ಇಂದು ಸಮಾಜ ವಿವಿಧ ಕ್ಷೇತ್ರದಲ್ಲಿ ಗುರುತಿಸುತ್ತಿದ್ದೆ ಎಂದರೆ ಅಲ್ಲಿ ನನ್ನ ಅಜ್ಜ ಅಜ್ಜಿಯ ಪಾತ್ರ ಮಹತ್ವದ್ದು ಎನ್ನುತ್ತಾರೆ ಅವರು.
ಉಡುಪಿ ಜಿಲ್ಲೆಯ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿರುವ ಕುಯಿಲಾಡಿ ಸುರೇಶ್ ನಾಯಕ್ ಅವರ ಧರ್ಮಪತ್ನಿಯಾಗಿ 1995 ರ ನವೆಂಬರ್ 5 ರಂದು ವಿವಾಹವಾಗಿದ್ದರು. ಇಂದು ಇವರಿಬ್ಬರ ದಾಂಪತ್ಯಕ್ಕೆ ಅಮೋಘ ಎಂಬ ಒಬ್ಬ ಮಗ ಇದ್ದಾನೆ.

ಈ ವಾರದ ವಿಶೇಷ ಸಂದರ್ಶನದಲ್ಲಿ ಪೂರ್ಣಿಮಾ ಸುರೇಶ್ ಅವರ ಮಾತುಗಳು

ಉ.ಟೈಮ್ಸ್ : ಮಹಿಳೆ ಎಂದರೆ ನಿಮ್ಮ ವಾಖ್ಯಾನದಲ್ಲಿ ಹೇಗೆ ವಿವರಿಸುತ್ತೀರಾ?

ಅತಿಥಿ : ಮಹಿಳೆ ಎಂದರೆ ಅದೊಂದು ಅದ್ಬುತ ಶಕ್ತಿ. ಅದಮ್ಯ ಚೈತನ್ಯ ಶಕ್ತಿ ಎಲ್ಲವನ್ನೂ ಹೊಂದಿರುವವಳು ಹೆಣ್ಣು. ಹೆಣ್ಣಿಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ದೇವರು ಎಲ್ಲಾ ಕಡೆ ಬರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹೆಣ್ಣನ್ನು ಸೃಷ್ಟಿಸಿದ್ದಾನೆ.
ಹೆಣ್ಣನ್ನು ಅತ್ಯಂತ ಶ್ರೇಷ್ಠ ಹಾಗೂ ನಾವು ಮೇಲ್ದರ್ಜೆಯಲ್ಲಿ ನೋಡುತ್ತೇವೆ. ಪ್ರತಿಯೊಂದು ದಿನವೂ ಮಹಿಳಾ ದಿನವೇ. ಮಹಿಳೆ ಇಲ್ಲದ ದಿನ ಊಹಿಸಲೂ ಸಾಧ್ಯವಿಲ್ಲ. ದಿನಾ ಬೆಳಿಗ್ಗೆ ಒಂದು ಮನೆಯಲ್ಲಿ ಮಹಿಳೆ ಏಳದಿದ್ದರೆ ಆ ಮನೆಯೇ ಏಳುವುದಿಲ್ಲ.
ಆಕೆ ಮಾನಸಿಕವಾಗಿ ಸದೃಢಳಾಗಿದ್ದಾಳೆ ಆದರೆ ದೈಹಿಕವಾಗಿ ಮೃದುವಾಗಿದ್ದಾಳೆ. ಹೆಣ್ಣು ಸೃಷ್ಠಿಸುವವಳು, ಈ ನೆಲೆಯಲ್ಲಿ ಹೆಣ್ಣು ದೈಹಿಕವಾಗಿ ಮೃದುವಾಗಿದ್ದಾಳೆ. ಅವಳ ದೈಹಿಕ ರಚನೆಯೇ ಹಾಗಿದೆ. ಆರಂಭದಿಂದಲೂ ಮಹಿಳೆ ದೈಹಿಕ ಹಾಗೂ ಮಾನಸಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ.
ಹೆಣ್ಣು ತನ್ನ ಹಕ್ಕಿಗಾಗಿ ಹೋರಾಡಿದ ಹೋರಾಟದ ಒಂದು ತುಣುಕೇ ಮಹಿಳಾ ದಿನಾಚರಣೆ. ಈ ಹೋರಾಟ ಚರಿತ್ರೆ ನೋಡುತ್ತಾ ಬಂದರೆ ಯಾವ ಯಾವ ಕಾಲಕ್ಕೆ ಯಾವ ರೀತಿ ಮಹಿಳೆ ದಮನಿಸಲ್ಪಡುತ್ತಿದ್ದಳು, ಆರಂಭದಲ್ಲಿ ತನ್ನ ಮೇಲಾಗುತ್ತಿರುವ ದೌರ್ಜನ್ಯವನ್ನು ಸಹಿಸುತ್ತಾ ಸಹಿಸುತ್ತಾ ಬಂದ ಮಹಿಳೆ ಕ್ರಮೇಣ ಪ್ರತಿಭಟಿಸಲಾರಂಭಿಸಿದಳು. ಈ ಪ್ರತಿಭಟಿಸಿದೂದರ ಸಾಂಕೇತಿಕವಾಗಿ ಈ ಮಹಿಳಾ ದಿನಾಚರಣೆಯನ್ನು ಆಚರಿಸುತ್ತೇವೆ. ಆಯಾ ಕಾಲದ ಸಾಮಾಜಿಕ ಪರಿಸ್ಥಿತಿಯಿಂದಾಗಿ ಹೆಣ್ಣನ್ನು ಅದುಮಿಡಲಾಗುತ್ತಿದೆ. ಅವಳ ಚೈತನ್ಯವನ್ನು ಹೊರ ಬರಲು ಅವಕಾಶವನ್ನೇ ನೀಡಲಾಗುತ್ತಿಲ್ಲ. ಎಲ್ಲವನ್ನೂ ಮೀರಿ ಹೆಣ್ಣು ಬೆಳೆಯುತ್ತಾಳೆ ಎಂಬ ಅಂಜಿಕೆ ಯಿಂದಲೋ ಏನೋ ಹೆಣ್ಣನ್ನು ಕಟ್ಟುಪಾಡುಗಳ ಹೆಸರಿನಲ್ಲಿ ದೊಡ್ಡ ಶಕ್ತಿಯನ್ನು ಶೀಶೆಯಲ್ಲಿ ಕೂಡಿಟ್ಟಹಾಗೆ ಹೆಣ್ಣಿನ ಶಕ್ತಿಯನ್ನು ಕೂಡಿಡಲಾಗಿದೆ.

ಉ.ಟೈಮ್ಸ್: ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ತೊಡಗಿಕೊಳ್ಳುವಿಕೆ ಬಗ್ಗೆ ನಿಮ್ಮ ಅಭಿಪ್ರಾಯ?

ಅತಿಥಿ: ಆರಂಭಿಕ ಪರಿಸ್ಥಿತಿಗೆ ಹೋಲಿಸಿದರೆ ಈಗ ಮಹಿಳೆಯರಿಗೆ ಅವಕಾಶಗಳು ಹೆಚ್ಚಿದೆ. ಆದರೆ ಮಹಿಳೆಯರ ಹಾದಿ ಪುರುಷರಷ್ಟು ರಾಜ ಮಾರ್ಗವಲ್ಲ. ಮಹಿಳೆಯರಿಗೆ ಜೀವನದಲ್ಲಿ ತಿರಸ್ಕಾರ, ವಿರೋಧ, ಅಡ್ಡಿ, ಅಡೆತಡೆಗಳೆಂಬ ಕಲ್ಲು ಮುಳ್ಳಿನ ಹಾದಿಗಳೇ ಇತ್ತು. ಅದನ್ನು ಆಕೆಯೇ ಸರಿಪಡಿಸಿಕೊಂಡು ದಾರಿ ಮಾಡಿಕೊಂಡು ಮುಂದಕ್ಕೆ ನಡೆದಿದ್ದು. ಸಾಮಾನ್ಯವಾಗಿ ಹೊರಗಿನ ಸಮಾಜ ನೋಡುವಾಗ ಸುಂದವಾಗಿಯೇ ಕಾಣುತ್ತದೆ. ಆದರೆ ಪ್ರತಿಯೊಬ್ಬರ ಹಾದಿಯಲ್ಲೂ ಕಲ್ಲು ಮುಳ್ಳುಗಳು ಇದ್ದೇ ಇರುತ್ತದೆ. ನಮ್ಮ ಮುಂದೆ ಇರುವ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದು ಮುಖ್ಯ . ಪ್ರತಿಯೊಬ್ಬ ಹೆಣ್ಣಿನಲ್ಲಿಯೂ ಸಮಸ್ಯೆಯನ್ನು ಎದುರಿಸುವ ಶಕ್ತಿ ಇದೆ ಆದರೆ ಕೆಲವರು ಅದನ್ನು ಉಪಯೋಗಿಸುತ್ತಿಲ್ಲ.
ಬಹಳಷ್ಟು ಹೆಣ್ಣು ಮಕ್ಕಳಲ್ಲಿ ಹೊರ ಪ್ರಪಂಚಕ್ಕೆ ಬರಲು ಅಂಜಿಕೆ ಇರುತ್ತದೆ. ಹಾಗಾಗಿ ಮೊದಲು ಹೆಣ್ಣು ತಾನು ಹಾಗೂ ತನ್ನಲ್ಲಿರುವ ಪ್ರತಿಭೆಯನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲರಿಗೋಸ್ಕರ ಬದುಕುವ ನಾವು ಸ್ವಲ್ಪ ನಮಗೋಸ್ಕರ ಬದುಕಲು ಅವಕಾಶ ನೀಡಬೇಕು. ಅದಕ್ಕಾಗಿ ಮಾನವೀಯ ಸಂಬಂಧಗಳನ್ನು ಗೆಲ್ಲಬೇಕು. ಆದರೆ ಸಂಬಂಧಗಳನ್ನು ಹೋರಾಟ ಮಾಡಿ ಗೆಲ್ಲುವಂತಹದ್ದಲ್ಲ. ಅದನ್ನು ಪ್ರೀತಿ ಹಾಗೂ ಸೌಮ್ಯಗತಿಯಿಂದಲೇ ಗೆಲ್ಲ ಬೇಕು. ಸಮಸ್ಯೆ ನಿಭಾಯಿಸುವ ಚಾಕಚಕ್ಯತೆಯನ್ನು ಹೆಣ್ಣು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬುದ್ದಿ ಮತ್ತು ಭಾವ ಎರಡನ್ನೂ ಜೊತೆಯಾಗಿ ಇಟ್ಟು ಯೋಚನೆ ಮಾಡಬೇಕು

ಉ.ಟೈಮ್ಸ್ :ಆದುನಿಕ ಸಮಾಜದಲ್ಲಿ ಮಹಿಳೆ ಈಗಲೂ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತಳಾಗಿಲ್ಲ ಇದರ ಬಗ್ಗೆ ನಿಮ್ಮ ಅಭಿಪ್ರಾಯ?

ಅತಿಥಿ : ಸಮಾಜದಲ್ಲಿ ಈಗಲೂ ಮಹಿಳೆ ದ್ವಿತೀಯ ದರ್ಜೆಯ ಪ್ರಜೆಯೇ ಆಗಿದ್ದಾಳೆ. ಮೊದಲ ಸ್ಥಾನಕ್ಕೆ ಮಹಿಳೆ ಇನ್ನೂ ಬಂದಿಲ್ಲ. ಅವಕಾಶಗಳು ಇದೆ. ಈಗಾಗಲೇ ಹಲವಾರು ಕ್ಷೇತ್ರದಲ್ಲಿ ತನ್ನನ್ನು ತಾನು ಮಹಿಳೆ ತೊಡಗಿಸಿಕೊಂಡಿದ್ದಾಳೆ. ರಾಜಕೀಯವಾಗಿ, ಅಂತರಿಕ್ಷದಲ್ಲಿ, ಸಂಗೀತ, ಕ್ರೀಡೆ, ಸಾಹಿತ್ಯ ಹೀಗೆ ಅನೇಕ ಕ್ಷೇತ್ರಗಳಲ್ಲಿ ಮಹಿಳೆ ಸಾದಿಸಿದ್ದಾರೆ. ಆದರೆ ಶೇಕಡವಾರು ನೋಡುವಾಗ ಸಾಧನೆಯ ಹಾದಿಯಲ್ಲಿ ಮಹಿಳೆಯರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದೂ ನೋಡಬೇಕು. ಹಾಗೇ ನೋಡುವಾಗ ನಾವು ಈಗಲೂ ಸಮಸ್ಯೆಯನ್ನು ಎದುರಿಸುತ್ತಲೇ ಇದ್ದೇವೆ. ಇದಕ್ಕೆ ಪರಿಹಾರ ಅಂದ್ರೆ ಹೆಣ್ಣು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಆರ್ಥಿಕ ಸ್ವಾವಲಂಬನೆ ಪ್ರತಿಯೊಂದು ಹೆಣ್ಣಿಗೂ ಶಿಕ್ತಿ ತುಂಬುತ್ತದೆ. ಆರ್ಥಿಕವಾಗಿ ನೀವು ಬೇರೆಯವರನ್ನು ಅವಲಂಬಿಸಿದ್ದರೆ ಅದು ಸಹಜವಾಗಿ ಮಹಿಳೆಗೆ ಸಿಗುವ ಅವಕಾಶಗಳಿಗೆ ತಡೆಯಾಗಿರುತ್ತದೆ. ಆದ್ದರಿಂದ ಆರ್ಥಿಕ ಸ್ವಾವಲಂಬಣೆ ಹೆಣ್ಣಿಗೆ ತನ್ನ ಹವ್ಯಾಸ, ಅಭಿರುಚಿಗಳನ್ನು ಬೆಳೆಸಿಕೊಳ್ಳಲು ಸಿಗುವ ಸುಂದರವಾದ ಅವಕಾಶವಾಗಿದೆ.

ಹೆಣ್ಣಿಗೆ ಮೀಸಲಾತಿ ಇದ್ದರೆ ಮಾತ್ರ ಅವಕಾಶ ನೀಡುತ್ತಾರೆ ಇಲ್ಲವಾದಲ್ಲಿ ಅವಳಿಗೆ ಯವುದೇ ಅವಕಾಶ ನೀಡಲು ಸಮಾಜ ಬಿಡುವುದಿಲ್ಲ. ಮಹಿಳೆ ಪುರುಷರು ಸರಿಸಮಾನರು ಎನ್ನುವವರೆಗೆ ಮೀಸಲಾತಿ ಬೇಕು. ನಿಮ್ಮ ಧ್ವನಿಯನ್ನು ಅದುಮಿಡದೆ ನಿಮ್ಮಷ್ಟೇ ಗಟ್ಟಿಯಾಗಿ ಹೇಳಿಕೊಂಡು ಗಂಡು ಹೆಣ್ಣು ಒಂದೆ ರಥದ ಗಾಲಿ ಎನ್ನುವ ಮಾತು ಅನುಭವಕ್ಕೆ ಬರುವವರೆಗೆ ಮೀಸಲಾತಿ ಬೇಕು.

ಉ.ಟೈಮ್ಸ್ : ಯುವ ಜನತೆಗೆ ನಿಮ್ಮ ಸಲಹೆ , ಸಂದೇಶ?

ಅತಿಥಿ : ಬಹುತೇಕ ಪಾಲಕರು ಮಕ್ಕಳನ್ನು ಅತೀಯಾದ ಕಾಳಜಿಯಿಂದ ಸೇಫರ್ ಝೋನ್ ನಲ್ಲಿ ಬೆಳೆಸುತ್ತಾರೆ. ಮಕ್ಕಳಿಗೆ ಕಷ್ಟ ಎನ್ನುವುದೇ ತಿಳಿಯದ ಹಾಗೆ ನೋಡಿಕೊಳ್ಳುತ್ತಾರೆ. ಇದರಿಂದ ಮಕ್ಕಳು ಅತೀ ಸೂಕ್ಷ್ಮರಾಗುತ್ತಿದ್ದಾರೆ. ಹಾಗೂ ಸಣ್ಣ ಪುಟ್ಟ ವಿಚಾರಗಳೂ ಅವರ ಮನಸ್ಸನ್ನು ಘಾಸಿ ಮಾಡುತ್ತದೆ. ಮಕ್ಕಳು (ಯುವಜನತೆ) ತಾವೇ ರೂಪಿಸಿದ ಸಣ್ಣ ಜಗತ್ತನ್ನೇ ಪ್ರಪಂಚ ಎಂದುಕೊಳ್ಳುತ್ತಾರೆ ಇದರಿಂದ ಎಲ್ಲೋ ಸ್ವಲ್ಪ ವ್ಯತ್ಯಾಸ ಆದರೂ ಅದನ್ನು ಮಾನಸಿಕವಾಗಿ ತಡೆದು ಕೊಳ್ಳುವ ಶಕ್ತಿ ಅವರಿಗಿರುವುದಿಲ್ಲ.

ನಾವು(ಪೋಷಕರು) ಮಕ್ಕಳು ಆಟ ಆಡಿ ಎಲ್ಲಿ ನೋವು ಮಾಡಿಕೊಳ್ಳುತ್ತಾರೋ ಏನೋ ಎಂಬ ಭಯದಿಂದ ಅವರನ್ನು ಅವರ ಇಚ್ಚೆಗೆ ವಿರುದ್ಧ ವಾಗಿ ಕಟ್ಡಿಹಾಕುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಮಕ್ಕಳೆಲ್ಲಾ ಬಿದ್ದರೂ ಅವರೇ ಮೇಲೆ ಎದ್ದು ಬರುತ್ತಿದ್ದರು. ಅದು ಆಂತರಿಕವಾಗಿ ಅವರನ್ನು ಗಟ್ಟಿ ಮಾಡುತ್ತಿತ್ತು. ಹಿಂದೆಲ್ಲ ಕೂಡು ಕುಟುಂಬದಲ್ಲಿ ಸಂಬಂಧಿಕರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಈಗ ಜೀವನ ಯಾಂತ್ರೀಕೃತ ವಾಗಿದೆ. ಈಗ ನಾವು ಭಾವನೆಗಳನ್ನು ಯಂತ್ರಗಳೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ನಮ್ಮ ಮನಸ್ಸು ನಿರಾಳರಾದಷ್ಟು ಯಾವುದೇ ವಿಚಾರ ಮನಸ್ಸಿನಲ್ಲಿ ಉಳಿದುಕೊಳ್ಳುವುದಿಲ್ಲ. ಮಕ್ಕಳನ್ನು ಮಾನಸಿಕವಾಗಿ ಗಟ್ಟಿಗೊಳಿಸಿ. ಸಾಮಾಜಿಕ ಸಮಸ್ಯೆ ಗಳಿಂದ ತಮ್ಮನ್ನು ರಕ್ಷಣೆ ಮಾಡುವುದನ್ನು ಕಳುಹಿಸಿಕೊಡಿ. ಹೊರಗಿನ ಜಗತ್ತನ್ನು ಆ ಜಗತ್ತಿನಲ್ಲಿ ಬದುಕನ್ನು ಎದುರಿಸಲು ಕಲಿಸಿಕೊಡಿ. ಅವರನ್ನು ಮಾನಸಿಕ ವಾಗಿ ಗಟ್ಟಿಯಾಗಿ ತಯಾರು ಮಾಡಿ.

ಉ. ಟೈಮ್ಸ್: ನಿಮ್ಮ ನಾಟಕ ರಂಗದ ಅನುಭವ ತಿಳಿಸುವಿರಾ ?

ಅತಿಥಿ: ನಾಟಕ ರಂಗ ತುಂಬಾ ಅನುಭವಗಳನ್ನು ನೀಡಿದೆ. ಮೊದಲ ಹೇಮಂತ ನಾಟಕದಿಂದ ಸಿರಿ ವರೆಗೆ ನಾನು ಕಲಿತದ್ದು ಅಪಾರ.
ಒಬ್ಬ ಕಲಾವಿದನಿಗೆ ತನ್ನ ಹೆಸರಿನ ಬದಲು ತಾನು ಅಭಿನಯಿಸಿದ ಪಾತ್ರದ ಹೆಸರಿನ ಮೂಲಕನೇ ಗುರುತಿಸಿಕೊಳ್ಳುವುದು ಹೆಮ್ಮೆಯ ವಿಚಾರ. ಹಾಗೆ ಆದಾಗ ಆ ಕಲಾವಿದ ಮಾಡಿದ ಪಾತ್ರ ಜನರ ಮನಸ್ಸು ಮುಟ್ಟಿದೆ ಎಂದಾಗುತ್ತದೆ. ನಾಟಕ ರಂಗದಲ್ಲಿ ನನಗೆ ಆ ಅನುಭವ ಆಗಿದೆ. ನನ್ನನ್ನು ಅನೇಕ ಕಡೆ ಸಿರಿ ಎಂದೇ ಗುರುತಿಸುತ್ತಾರೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ.
ರಂಗ ಭೂಮಿ ಉಡುಪಿ ಸಂಸ್ಥೆಯಿಂದ ನಾಟಕ ರಂಗಕ್ಕೆ ಪಾದಾರ್ಪಣೆ ಮಾಡಿದೆ. “ಕಮ್ಮಾರನ ಚಾಲಾಕಿ ಹೆಂಡತಿ” ಎಂಬ ನಾಟಕದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದೆ. ಒಂದಷ್ಟು ಏಳು ಬೀಳುಗಳನ್ನೂ ಅನುಭವಸಿದ್ದೇನೆ ಇದೆಲ್ಲದರ ಹೊರತಾಗಿ ರಂಗಕಲೆ ನನಗೆ ತುಂಬಾ ಉತ್ತಮ ಅನುಭವಗಳನ್ನು ನೀಡಿದೆ.

ಉ.ಟೈಮ್ಸ್ : ನಿಮ್ಮ ಸಿನೆಮಾ ರಂಗದ ಪಯಣದ ಬಗ್ಗೆ ತಿಳಿಸಿ ?

ಅತಿಥಿ : ಅಭಿನಯ ಎನ್ನುವುದು ದೊಡ್ಡ ಸಾಗರ. ಇಲ್ಲಿ ಬಹಳಷ್ಟು ಕಲಿತುಕೊಂಡಿದ್ದೇನೆ. ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಮೊದಲ ಬಾರಿಗೆ ದೊಡ್ಡ ತೆರೆ ಮೇಲೆ ಕಾಣಿಸಿಕೊಳ್ಳುವ ಅವಕಾಶ ನೀಡಿದರು. ಅವರ “ಗುಲಾಬಿ ಟ್ಯಾಕೀಸ್” ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಲನಚಿತ್ರ ಕ್ಷೇತ್ರದ ಪ್ರವೇಶ ಮಾಡಿದೆ.
ಕಲಾತ್ಮಕವಾದ ಸಿನೆಮಾಗಳು ನನಗೆ ನನ್ನ ಆಲೋಚನೆಗಳಿಗೆ ಸರಿಯಾಗಿ ಹೊಂದಿಕೊಳ್ಳುವುದರಿಂದ ಕಲಾತ್ಮಕ ಚಿತ್ರಗಳಲ್ಲಿಯೇ ನಟಿಸಿದೆ. ನಂತರದ ದಿನಗಳಲ್ಲಿ ಬಿ. ಸುರೇಶ್ ಅವರು, ಅವರ ಸಿನೇಮಾಗಳಲ್ಲಿ ಅವಕಾಶ ನೀಡಿದರು. ಜಿ ಮೂರ್ತಿ ಎನ್ನುವ ನಿರ್ದೇಶಕರು ಅವರ “ಶಂಕರ ಪುಣ್ಯಕೋಟಿ” ಎಂಬ ಸಿನೆಮಾಕ್ಕೆ ವಿನಯ ಪ್ರಸಾದ್ ಹಾಗೂ ಶರತ್ ಬಾಬು ಅವರ ಜೊತೆ ಮುಖ್ಯವಾದ ಪಾತ್ರದಲ್ಲಿ ನಟಿಸುವಂತಹ ಅವಕಾಶ ಮಾಡಿಕೊಟ್ಟಿದ್ದರು. ಆ ಸಿನೆಮಾಕ್ಕೆ ರಾಜ್ಯ ಪ್ರಶಸ್ತಿ ಕೂಡಾ ಬಂದಿತ್ತು. ತುಳು ಚಿತ್ರರಂಗದ ದಿಗ್ಗಜರು ಇರುವಂತಹ ಚಲನಚಿತ್ರದಲ್ಲಿ ನಾನು ನಟಿಸಿದ್ದು ಹೆಮ್ಮೆ ಅನಿಸುತ್ತದೆ ಹಾಗೂ ತುಂಬಾ ಖುಷಿ ಕೊಟ್ಟಿದೆ.

ಉ.ಟೈಮ್ಸ್: ನಿಮಗೆ ನಿಮ್ಮ ಸಾಧನೆ ಯ ಹಾದಿಯಲ್ಲಿ ಎದುರಾದ ಸಮಸ್ಯೆ ಗಳು ಹಾಗೂ ಬಗೆಹರಿಸಿಕೊಂಡ ಬಗೆ?

ಅತಿಥಿ :ನಮ್ಮ ಜೀವನದಲ್ಲಿಯೂ ತುಂಬಾ ಸಮಸ್ಯೆ ಎದುರಾಗಿದೆ. ಓರ್ವ ಮಹಿಳೆಯಾಗಿಯೂ ಹಾಗೂ ಸಾಮಾಜಿಕವಾಗಿಯೂ ಸಮಸ್ಯೆಗಳು ಎದುರಾಗಿದೆ. ನನ್ನ ಹಾದಿಯನ್ನು ತಡೆಯುವಂತಹ ಘಟನೆಗಳೂ ನಡೆದಿದೆ. ಈಗೆಲ್ಲಾ ಅದು ಬರೀಯ ಘಟನೆಗಳು ಅಷ್ಟೇ. ಆದರೆ ಆಗ ಅವು ಬದುಕಿನ ಬಹು ಕಷ್ಟದ ದಿನಗಳು ಅನ್ನಿಸಿದ್ದವು. ಆಗ ಎದುರಿಸಬೇಕು ಎನ್ನುವ ಛಲದಿಂದ ಹೋರಾಡಿದೆ. ನನ್ನ ಆತ್ಮಶಕ್ತಿ ನನ್ನನ್ನೂ ಬೆಳೆಯುವಂತೆ ಮಾಡಿದೆ. ಆದ್ದರಿಂದ ಪ್ರತಿಯೊಬ್ಬರೂ ಕಷ್ಟ ಬಂದಾಗ ಕುಗ್ಗದೆ ಹೋರಾಡುವ ಛಲ ಬೆಳೆಸಿಕೊಳ್ಳಬೇಕು.

ಉ.ಟೈಮ್ಸ್ : ಪೂರ್ಣಿಮಾ ಟ್ರಾವೆಲ್ಸ್ ಹಾಗೂ ಅಮೋಘ ರಿ. ಸಂಸ್ಥೆ ಮೂಲಕ ಸಮಾಜಮುಖಿ ಕಾರ್ಯ ನಡೆಸುತ್ತಿದ್ದೀರ ಇರದ ಬಗ್ಗೆ ತಿಳಿಸಿ?

ಅಮೋಘ ರಿ. 2010 ರಲ್ಲಿ ಆರಂಭವಾಯಿತು. ಅದೊಂದು ಬದುಕಿನ ಆಕಸ್ಮಿಕ ತಿರುವು ಅಂತಲೇ ಹೇಳಬಹುದು ಜೆಸಿ ಸಂಸ್ಥೆಯಲ್ಲಿ ಘಟಕ ಅಧ್ಯಕ್ಷೆಯಾಗಿದ್ದ ಸಮಯದಲ್ಲಿ ಒಂದಿಷ್ಟು ಕಾರ್ಯಕ್ರಮಗಳನ್ನು ಮಾಡಬೇಕಿತ್ತು. ಈ ಸಂದರ್ಭದಲ್ಲಿ ನಾಟಕ ರಂಗದಲ್ಲಿ ತೊಡಗಿಕೊಂಡಾಗ ನಾಟಕ ನಿರ್ದೇಶಕ ಕಾಸರಗೋಡು ಚಿನ್ನಾರ್ ಅವರು ಉಡುಪಿಗೆ ಬಂದು ಕೊಂಕಣಿಯಲ್ಲಿ ನಾಟಕ ಮಾಡುವ ಎಂದು ತಿಳಿಸಿದ್ದರು. ಮಾತೃಭಾಷೆ ಕೊಂಕಣಿ ಆಗಿದ್ದರಿಂದ ನಾನೂ ಆಗಬಹುದು ಎಂದು ಖುಷಿಯಿಂದ ಒಪ್ಪಿಕೊಂಡೆ. ಆದರೆ ಆಗ ನಮ್ಮ ನಾಟಕ ಪ್ರದರ್ಶನಕ್ಕೆ ಒಂದು ಸಂಸ್ಥೆ(ಬ್ಯಾನರ್) ಬೇಕಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅಮೋಘ ರಿ. ಆರಂಭಗೊಂಡಿತು. ಬಳಿಕ ಎರಡು ಕಿರು ನಾಟಕಗಳನ್ನು ಮಾಡಿದ್ದೆವು. 24 ಪ್ರದರ್ಶನಗಳನ್ನು ನೀಡಿದ್ದೆವು.
ಈ ಸಂಸ್ಥೆ ಮೂಲಕ ಜೆಸಿ ಯ ಸದಸ್ಯರನ್ನು ಸೇರಿಸಿಕೊಂಡು ನಾಟಕ ಮಾಡಿದೆ. ಗ್ರಾಮಿಣ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿ ಏನು ಮಾಡಬಹುದು ಎನ್ನುವುದನ್ನು ನೋಡಿ ಕೊಂಡು, ಅಲ್ಲಿ ಸ್ವಚ್ಛ ಭಾರತ ಕಾರ್ಯಕ್ರಮ ಕೈಗೊಂಡೆವು. ಹಿರಿಯಡ್ಕದಲ್ಲಿ ಉಚಿತ ಮೆಡಿಕಲ್ ಕ್ಯಾಂಪ್ ಗಳನ್ನು ಮಾಡಿದೆವು. ಅಲ್ಲಿ ಹೆಣ್ಣು ಮಕ್ಕಳ ಸಮಸ್ಯೆ ಕುರಿತು ಮಾಹಿತಿ, ಆರೋಗ್ಯದ ಮಾಹಿತಿ ನೀಡುವ ಮೂಲಕ ಸಾಮಾಜಿಕ ಕಾರ್ಯದಲ್ಲಿ  ತೊಡಗಿಕೊಂಡೆವು.
ಕೆಎಂ ಸಿ ಮಣಿಪಾಲದ ಸಹಕಾರದೊಂದಿಗೆ 30 ವೈದ್ಯರನ್ನೊಳಗೊಂಡ ಉಚಿತ ಆರೋಗ್ಯ ತಪಸಣಾ ಶಿಬಿರ ಮಾಡಿದ್ದೆವು. ಈ ಕ್ಯಾಂಪ್ ಮೂಲಕ ಸುಮಾರು 500 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಎಲ್ಲಾ ರೀತಿಯ ಆರೋಗ್ಯ ತಪಾಸಣೆ ನಡೆಸಿದ್ದೆವು. ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿತ್ತು. ಉಚಿತ ಔಷಧಿ ವಿತರಣೆ ಮಾಡಿದ್ದೆವು.

ಉ.ಟೈಮ್ಸ್ : ನಿರೂಪಕಿಯಾಗಿ ಮಹಿಳೆಯ ಪರವಾದ ಕಾರ್ಯಕ್ರಮಗಳನ್ನು ನಡೆಸಿದ ಅನುಭವ ?

ಅತಿಥಿ : ಇದು 2010 ರಲ್ಲಿ ಸಿಕ್ಕಂತಹ ಅವಕಾಶ. ಇದಕ್ಕೆ ಉಡುಪಿ ಚಾನೆಲ್ ಗೆ ಧನ್ಯವಾದ ತಿಳಿಸಬೇಕು. ಆಕಸ್ಮಿಕವಾಗಿ ತಾತ್ಕಾಲಿಕವಾಗಿ ಮಾಡಿದ್ದ ಯಾವುದೋ ಒಂದು ಕಾರ್ಯಕ್ರಮವನ್ನು ಕಂಡು ಉಡುಪಿ ಚಾನೆಲ್‌ನ ನಿರ್ದೇಶಕರು ನನ್ನ ಬಳಿ ಕಾರ್ಯಕ್ರಮ ನಿರ್ವಹಿಸುವ ಬಗ್ಗೆ ಕೇಳಿಕೊಂಡರು. ಬಳಿಕ ಅವರ ಸಲಹೆ ಮೇರೆಗೆ ಬಹಳಷ್ಟು ಮಹಿಳಾ ಪರವಾದ ಕಾರ್ಯಕ್ರಮಗಳನ್ನು ನೀಡಿದ್ದೆ. ಈ ಕಾರ್ಯಕ್ರಮದ ಮೂಲಕ ಒಂದಷ್ಟು ಜನರ ಪರಿಚಯ ಸಮಾಜಕ್ಕೆ ಆಗಿದೆ ಎಂಬೂದೆ ನನಗೆ ಖುಷಿ

ಉ. ಟೈಮ್ಸ್ :ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಅನುಭವ?

ಮಹಿಳಾ ದಿನಾಚರಣೆ ಅಂದಾಗ ನನಗೆ ನವೆಂಬರ್ 1 ರ ಕನ್ನಡ ರಾಜೋತ್ಸವ ದಿನಾಚರಣೆ ನೆನಪಾಗುತ್ತದೆ. ಯಾಕೆಂದರೆ ನವೆಂಬರ್ ಬಂದಾಗ ನಾವು ಏಕಾಏಕಿ ಕನ್ನಡದ ಬಗ್ಗೆ ಜಾಗೃತರಾಗುತ್ತೇವೆ , ಕನ್ನಡದ ಬಗ್ಗೆ ಮಾತನಾಡುತ್ತೇವೆ. ಮಾರ್ಚ್ ಬಂದಾಗ ಕೂಡಾ ಅದೇ ರೀತಿ ನಾವು ಮಾಡುತ್ತೇವೆ. ಮಹಿಳಾ ದಿನದ ಕಾರ್ಯಕ್ರಮದ ಬಗ್ಗೆ ಆಲೋಚನೆ ಮಾಡುತ್ತೇವೆ.

ಉ.ಟೈಮ್ಸ್ : ಉದ್ಯಮಿಯಾಗಿ ನಿಮ್ಮ ಅನುಭವ ?

ಆರಂಭದಲ್ಲಿ ಅಂಜುಬುರುಕ ತನದ ಸ್ವಭಾವದವಳಾಗಿದ್ದ ನನಗೆ ಉದ್ಯಮ ಕ್ಷೇತ್ರದಲ್ಲಿ ಬೆಳೆಯುವಂತೆ ನನ್ನ ಪತಿಯು ಪ್ರೋತ್ಸಾಹ ನೀಡಿದರು. ಪತಿಯ ಸಲಹೆಯಂತೆ ನಾನು ಅವರ ಕೆಲಸಗಳಲ್ಲಿ ಕೈಜೋಡಿಸಿ ಅವರ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದೆ.
ಇದರ ಜೊತೆಗೆ ಪೂರ್ಣಿಮಾ ಟ್ರಾವೆಲ್ಸ್ ಎನ್ನುವ ಉದ್ಯಮವನ್ನೂ ಆರಂಭಿಸಿದೆ. ಇಡೀ ದೇಶವನ್ನು ಸುತ್ತಿದೆ. ಈ ಹಾದಿಯಲ್ಲಿ ತುಂಬಾ ಕಷ್ಟ ನಷ್ಟಗಳು ಎದುಯರಾಗಿದ್ದವು. ಪ್ಯಾಕೆಜ್ ಟೂರ್ ಆಗಿದ್ದರಿಂದ ಬರುವ ಪ್ರತಿಯೊಬ್ಬ ಟೂರಿಸ್ಟ್‌ಗಳ ಭಿನ್ನವಾದ ಸ್ವಭಾವಕ್ಕೆ ಹೊಂದಿಕೊಂಡು, ಅವರಿಗೆ ತೊಂದರೆಗಳು ಆಗದಂತೆ ಅವರೊಂದಿಗೆ ಇರಬೇಕಾಗಿತ್ತು. ಆದರೆ ಯಾವುದೇ ಕೆಲಸವನ್ನು ಕಷ್ಟ ಎಂದು ಭಾವಿಸದೆ ಇಷ್ಟ ಎಂದು ಪ್ರೀತಿಸಲು ಆರಂಭಿಸಿದಾಗ ಅದು ಸುಲಭವಾಗುತ್ತದೆ ಎಂಬುದನ್ನೂ ಅರಿತುಕೊಂಡೆ.

ಉ.ಟೈಮ್ಸ್ ಪೂರ್ಣಿಮಾ ಸುರೇಶ್ ಅವರ ಮುಂದಿನ ಕನಸು?

ಅತಿಥಿ : ಕನಸುಗಳು ತುಂಬಾ ಇದೆ. ಈ ನಿಟ್ಟಿನಲ್ಲಿ ಆಗುವುದಿಲ್ಲ ಎನ್ನುವುದಕ್ಕೆ ಕಾರಣಗಳನ್ನು ನೀಡುವ ನಾವು ಆಗುತ್ತದೆ ಎನ್ನುವುದಕ್ಕೂ ಕಾರಣಗಳನ್ನು ಹುಡುಕಿಕೊಳ್ಳಬೇಕು. ತುಂಬಾ ಉತ್ತಮ ಸಿನೆಮಾಗಳನ್ನು ಮಾಡಬೇಕು, ಮಹಿಳಾ ಪರವಾದ ಸಿನೆಮಾಗಳನ್ನು ಮಾಡಬೇಕು, ಬಹಳಷ್ಟು ಬರೆಯಬೇಕು. ಜಡತ್ವ ಕಳಚಿಕೊಳ್ಳಬೇಕು. ಅಮೋಘ ರಿ ನ್ನು ಯಶಸ್ವಿಯಾಗಿ ಮುನ್ನಡೆಸಬೇಕು. ಉತ್ತಮ ನಾಟಕಗಳನ್ನು ಮಾಡಬೇಕು ಎಂಬೂದೇ ನನ್ನ ಮುಂದಿನ ಕನಸು.

ಉ.ಟೈಮ್ಸ್ : ಮಹಿಳೆಯರಿಗೆ ನಿಮ್ಮ ಸಂದೇಶ ?

ಪ್ರತಿಯೊಬ್ಬ ಹೆಣ್ಣು ಮಕ್ಕಳು(ಸ್ತ್ರೀಯರು) ಕೂಡಾ ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಿ. ಮತ್ತು ನಿಮ್ಮಲ್ಲಿರುವ ಶಕ್ತಿಗೆ ನೀವೇ ವೇದಿಕೆ ಕಲ್ಪಿಸಿ. ಒಂದಷ್ಟು ನಿಮ್ಮ ಆಸಕ್ತಿಯ ಕೆಲಸಗಳನ್ನು ಮಾಡಿ. ಇರುವ ಒಂದು ಜೀವನವನ್ನು ಸುಂದರಗೊಳಿಸಲು ಏನೆಲ್ಲಾ ಸಾಧ್ಯತೆ ಇದೆಯೋ ಅದನ್ನು ಮಾಡಿ. ನಿಮ್ಮಲ್ಲಿರುವ ಅಭಿರುಚಿ, ಹವ್ಯಾಸಗಳಿಗೆ ಒಂದಷ್ಟು ಪುಷ್ಟಿ ನೀಡಿ. ಆಗ ಅದು ನಿಮ್ಮ ಒಳಗಣ್ಣು ಅರಳಿಸುತ್ತದೆ. ನಿಮ್ಮ ಬದುಕು ಸುಂದರವಾಗಿರುತ್ತದೆ.
ಇವರು ರಂಗ ಕಲಾವಿದೆಯಾಗಿ ಅನೇಕ ನಾಟಕಗಳಲ್ಲಿ, ಚಲನ ಚಿತ್ರ ಕಲಾವಿದೆಯಾಗಿ ಅನೇಕ ಕಲಾತ್ಮಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಉದ್ಯಮಿಯಾಗಿ ಪತಿಯ ಉದ್ಯಮಕ್ಕೆ ಸಹಕಾರ ನೀಡುವ ಜೊತೆಗೆ ಪೂರ್ಣಿಮಾ ಟ್ರಾವೆಲ್ಸ್ ಎಂಬ ಪ್ಯಾಕೆಜ್ ಟೂರ್ ಸಂಸ್ಥೆಯನ್ನು ನಡೆಸಿದ್ದಾರೆ. ಹಾಗೂ ಅಮೋಘ ರಿ. ಎಂಬ ಸಂಸ್ಥೆಯ ಮೂಲಕ ಕಲಾವಿದರನ್ನು ಬೆಳೆಸುವ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಟಿವಿ ನಿರೂಪಕಿಯಾಗಿ ಮಹಿಳೆಯರ ಪರವಾದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮಾತ್ರವಲ್ಲದೆ ಓರ್ವ ಶಿಕ್ಷಕಿಯಾಗಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಒಂದು ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ ವಿಶ್ವ ಹಿಂದೂ ಪರಿಷತ್ ನ ಉಡುಪಿ ಜಿಲ್ಲಾ ಮಾತೃಶ್ರೀ ಪ್ರಮುಖ್ ಆಗಿಯೂ ತೊಡಗಿಕೊಂಡಿದ್ದಾರೆ.
ಮಾತ್ರವಲ್ಲದೆ ಇವರು ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿದ್ದಾರೆ. ಧಾರವಾಹಿಗಳಲ್ಲೂ ಅಭಿನಯಿಸಿರುವ ಇವರು  ಆಕಾಶವಾಣಿ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಇವರು ಬರೆದ 7 ಪುಸ್ತಕಗಳು ಬಿಡುಗಡೆಯಾಗಿದ್ದು ಅವುಗಳ ಪೈಕಿ 4 ಕವನ ಸಂಕಲವಾಗಿದೆ. ಇತ್ತೀಚೆಗೆ ಬಿಡುಗಡೆಗೊಂಡ “ಮದ್ಯಮಾವತಿ” ಇವರ ನಾಲ್ಕನೇ ಸಂಕಲನವಾಗಿದೆ.
ಪೂರ್ಣಿಮಾ ಸುರೇಶ್ ಅವರು ಇದುವರೆಗೂ 2 ಕೊಂಕಣಿ ಚಿತ್ರಗಳಲ್ಲಿ, ಅನೇಕ ಕನ್ನಡ ಹಾಗೂ ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. ಸಣ್ಣ ಪಾತ್ರಗಳಿಂದ ಹಿಡಿದು ಪ್ರಮುಖ ಪಾತ್ರಗಳನ್ನು ಮಾಡಿರುವ ಇವರು ತುಳು ಚಿತ್ರರಂಗದ ದಿಗ್ಗಜರ ಜೊತೆ ಅಭಿನಯಿಸಿದ್ದಾರೆ.  ಅವರು ಅರವಿಂದ ಬೋಳಾರ್, ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್ ಮೊದಲಾದವರ ಜೊತೆ ನಟಿಸಿದ್ದಾರೆ. ಅದಲ್ಲೂ ಅರವಿಂದ್ ಬೋಳಾರ್ ಅವರ ಜೊತೆ 4 ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇವರು ಅಭಿನಯಿಸಿದ “ಅಂತು” ಎಂಬ ಕೊಂಕಣಿ ಚಿತ್ರದ ಪಾತ್ರಕ್ಕೆ “ಬೆಸ್ಟ್ ಸಪೋರ್ಟಿಂಗ್ ಆಕ್ಟರ್” ಪ್ರಶಸ್ತಿ ಲಭಿಸಿದೆ. ಇದರ ಜೊತೆಗೆ ಇತ್ತೀಚೆಗೆ ಇವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಜಿಹಾದ್ ಚಿತ್ರ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಹಾಗೂ ಇವರ ಅಭಿನಯ ಮೆಚ್ಚುಗೆಗೆ ಪಾತ್ರವಾಗಿತ್ತು.
ಇವರ ತಮ್ಮನ್ನು ತಾವು ತೊಡಗಿಸಿಕೊಂಡ ಕ್ಷೇತ್ರಗಳನ್ನು ಅವಲೋಕಿಸಿದರೆ ಒಬ್ಬ ಸ್ತ್ರೀ ಹೇಗೆ ಯಾವೆಲ್ಲಾ ಕ್ಷೇತ್ರದಲ್ಲಿ ತನ್ನ ಹೆಜ್ಜೆ ಗುರುತನ್ನು ಸ್ಥಾಪಿಸಬಹುದು ಎಂಬುದು ತಿಳಿಯುತ್ತದೆ. ಇವರ ಈ ಅನುಭವಗಳು ಇತರ ಯುವತಿಯರಿಗೂ ಪ್ರೇರಣೆ ಹಾಗೂ ಸ್ಪೂರ್ತಿದಾಯಕವಾಗಿದೆ. ಇವರ ಸೇವೆ ಹಾಗೂ ಕನಸುಗಳು ಮುಂದಿನ ದಿನಗಳಲ್ಲಿ ನನಸಾಗಲಿ ಹಾಗೂ ಇತರರಿಗೆ ಮಾದರಿಯಾಗಲಿ ಎಂಬುದು “ಉಡುಪಿ ಟೈಮ್ಸ್” ನ ಆಶಯ

Leave a Reply

Your email address will not be published. Required fields are marked *

error: Content is protected !!