ಉಸಿರೆಲ್ಲಾ ಕನ್ನಡವೆನ್ನುವ ಕನ್ನಡದ ಸಂತ: ನೀಲಾವರ ಸುರೇಂದ್ರ ಅಡಿಗ

ಎದೆಯ ಬಗೆದರೂ ಇರಲಿ ಕನ್ನಡ
ಹೃದರ ಬಡಿದರೂ ಬರಲಿ ಕನ್ನಡ
ಗರ್ವದಿಂದ ಹೇಳು ನನ್ನ ಭಾಷೆ ಕನ್ನಡ
ಹೆಮ್ಮೆಯಿಂದ ಹೇಳು ನಾನು ಕನ್ನಡಿಗ

“ಕನ್ನಡ” ಭಾರತದ ಪುರಾತನವಾದ ದ್ರಾವಿಡ ಭಾಷೆಗಳಲ್ಲಿ ಒಂದು. ಕನ್ನಡ ಅಂದಾಕ್ಷಣ ನಮಗೆ ಪಂಪ, ಕುವೆಂಪು, ದಾರಾ ಬೇಂದ್ರೆ, ಕಾರಂತರು ಹೀಗೆ ಕನ್ನಡ ನಾಡು ನುಡಿ ಸಂಸ್ಕೃತಿ ಪರಂಪರೆಯನ್ನು ತಮ್ಮದೇ ಅದ ವಿಶಿಷ್ಟ ಶೈಲಿಯಲ್ಲಿ ಕಟ್ಟಿಕೊಟ್ಟವರ ಹೆಸರುಗಳು ನೆನಪಿಗೆ ಬರುತ್ತದೆ. ಇವರು ರಚಿಸಿದ ಕನ್ನಡ ಕವನ ,ಕಾವ್ಯ, ಕಥೆಗಳ ಕಂಪನ್ನು ಈಗಿನ ಪೀಳಿಗೆಗೆ ಮುಟ್ಟಿಸುವಲ್ಲಿ ಅನೇಕರು ಶ್ರಮಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನಮ್ಮ ಹಿರಿಯರ ಸಾಹಿತ್ಯಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೈದೀವಿಗೆ ಯಾಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಇದಕ್ಕಾಗಿಯೇ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾ ಸಾಹಿತ್ಯ ಪರಿಷತ್‍ನ್ನು ರಚಿಸಿ ಜಿಲ್ಲೆಯಲ್ಲಿ ಕನ್ನಡವನ್ನು ಬಳಸಿ,ಬೆಳೆಸುವ ಕಾರ್ಯ ನಡೆಯುತ್ತಿದೆ.

ಅದೇ ರೀತಿ ಉಡುಪಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಯಶಸ್ವಿಯಾಗಿ 9 ವರ್ಷಗಳ ಕಾಲ ಪರಿಷತ್ತಿನ ಅಧ್ಯಕ್ಷರಾಗಿ ಜಿಲ್ಲೆಯಾದ್ಯಂತ ವಿಶಿಷ್ಟ, ವಿನೂತನ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕನ್ನಡ ಭಾಷೆ ಹಾಗೂ ಕನ್ನಡದ ಸಾಹಿತ್ಯದ ಪಸರಿಸುವುಕೆಗೆ ಶ್ರಮಿಸುತ್ತಿದ್ದಾರೆ ನೀಲಾವರ ಸುರೇಂದ್ರ ಅಡಿಗರು.

60 ರ ಸಂಭ್ರಮದಲ್ಲಿರುವ ಅಡಿಗರ ಕನ್ನಡ ಪ್ರೇಮ, ಕನ್ನಡ ಭಾಷಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದನ್ನು ಕಂಡರೆ ಚಿರಯುವಕನಂತೆ ಕಾಣುತ್ತಾರೆ. ಇವರು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯದ ದಾಖಲೀಕರಣಕ್ಕೆ ಹೊಷ ಭಾಷ್ಯ ಬರೆದವರು. ಯಾರನ್ನಾದರೂ ಕನ್ನಡದ ಅಭಿಮಾನಿಯಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದ್ದಾರೆ. ಸರಳ ಸ್ವಭಾವ ಚುರುಕಿನ ವ್ಯಕ್ತಿತ್ವದ ಇವರು. ಬಿಳಿ ವಸ್ತ್ರಗಳನ್ನು ತೊಟ್ಟು ,ಹೆಗಲ ಮೇಲೆ ಕನ್ನಡ ಬಾವುಟದ ಬಣ್ಣದ ಶಾಲು ಹಾಕಿಕೊಂಡು ಹೊರಟರೆಂದರೆ ಅದೆಂತಹ ಭಾಷಣವೇ ಆಗಲಿ ಹರಳು ಹುರಿದಂತೆ ಕನ್ನಡ ಮಾತನಾಡುವ ಅಡಿಗರಿಗೆ ಅಡಿಗರೇ ಸಾಟಿ. ಅವರ ಮಾತಿನಲ್ಲೇ ಕನ್ನಡದ ಜೇನಿನ ಸಿಹಿ ತುಂಬಿದೆ ಎಂದರೂ ತಪ್ಪಾಗಲಾರದು. ಇವರ ಜೊತೆ ಕನ್ನಡ ಭಾಷೆಯ ಹಿರಿಮೆಯ ಕುರಿತು ಮಾತನಾಡಲು ಕೂತರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಇವರ ಜೊತೆಗಿನ ಮಾತು ಒಂದು ಗ್ರಂಥಾಲಯವನ್ನು ಓದಿ ಮುಗಿಸಿದ ಅನುಭವ ಸಿಗುವಂತಹದ್ದು. ಶಿಕ್ಷಣ ವೃತ್ತಿಯನ್ನು ಅತ್ಯಂತ ಖುಷಿಯಿಂದ ನಿಭಾಯಿಸಿದವರು ಇವರು, ಇವರ ಕನ್ನಡ ಪ್ರೇಮವನ್ನು ಇವರು ಬರೆದ ಸಾಲುಗಳೇ ಸಾರುತ್ತದೆ.


ನನ್ನ ದೇಹ ನಾಡಿನುಡಿ ರಕ್ತವೆಲ್ಲಾ ಕನ್ನಡ,
ಶ್ವಾಸಕೋಶ ನಾಳದ ದನಿ ಉಸಿರೆಲ್ಲಾ ಕನ್ನಡ

ಎಂತಹ ಅದ್ಬುತ ಸಾಲುಗಳು ಅಲ್ಲವೇ. ಇವರು ಕನ್ನಡವನ್ನು ಉಸಿರಾಗಿಸಿರುವ. ಇವರು 1961ರ ನ.21 ರಂದು ಎನ್ ಅನಂತ ಅಡಿಗ ಹಾಗೂ ಯಶೋದಮ್ಮ ದಂಪತಿಗಳ ಪುತ್ರನಾಗಿ ಉಡುಪಿಯ ನೀಲಾವರದಲ್ಲಿ ಜನಿಸಿದರು. ಕನ್ನಡ ಭಾಷೆಯಲ್ಲಿ ಎಂ.ಎ ಪದವಿ ಹೊಂದಿದ್ದು,ಕನ್ನಡ ರತ್ನ,ಕನ್ನಡ,ಗಮಕ ಜ್ಯೂನಿಯರ್ ಗ್ರೇಡ್ ಅಭ್ಯಾಸವನ್ನೂ ಮಾಡಿರುತ್ತಾರೆ. ಸುನಂದ ಅವರನ್ನು ವರಿಸಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಕುಂದಾಪುರ ವಲಯದ ತೆಕ್ಕಟ್ಟೆಯ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದಾರೆ. ಇದರೊಂದಿಗೆ 2012 ರಿಂದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಎರಡು ಅವಧಿಗೆ ಯಶಸ್ವಿಯಾಗಿ 9 ವರ್ಷಗಳ ಸೇವೆ ಸಲ್ಲಿಸಿದ್ದಾರೆ.

ಶಿಕ್ಷಣ, ಸಾಹಿತ್ಯ, ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಇವರು, 60 ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಇದೀಗ ಇವರ 2 ಮಹಾಕಾವ್ಯ ಬಿಡುಗಡೆಗೆ ಸಿದ್ದವಾಗಿದೆ, ಇವರ ಒಂದು ಮಹಾಕಾವ್ಯ ಲಾಕ್‍ಡೌನ್ ನ ಅವಧಿಯ ಜೀವನ ಕ್ರಮವನ್ನು ಆಧರಿಸಿದ್ದಾಗಿದೆ. ಇವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಾಗುವುದಕ್ಕೂ ಪೂರ್ವದಲ್ಲಿ ದೊಡ್ಡ ಬಳ್ಳಾಪುರದಲ್ಲಿ ಅಲ್ಲಿನ ತಾಲೂಕಿನ ಸಾಹಿತ್ಯ ಪರಿಷತ್‍ನ ಅಧ್ಯಕ್ಷನಾಗಿದ್ದರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿಯಾಗಿದ್ದರು.

ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಸಾಹಿತಿಯಾಗಿರುವ ಜೊತೆಗೆ ಉತ್ತಮ ವಾಗ್ಮಿಯೂ ಹೌದು. ಸಂಘಟಕರಾಗಿ ನಾಡಿನಾದ್ಯಂತ ಶಿಕ್ಷಕರಿಗೆ, ಸಹೃದಯರಿಗೆ ಚಿರಪರಿಚಿತರು. ಇವರ ‘ಕಿಟ್ಟಜ್ಜಿ ಮತ್ತು ಹವಿಸ್ಸು ಪಾತ್ರೆ’ ಪುಸ್ತಕ ಹತ್ತು ವರ್ಷಗಳ ಕಾಲ ಐಸಿಎಸ್‍ಇ ಶಾಲೆಯ ಹತ್ತನೆಯ ತರಗತಿಗೆ ಪಠ್ಯಪುಸ್ತಕವಾಗಿತ್ತು. ಬೋಧನೆ ಮತ್ತು ಕಲಿಕೆಯ ಸಾಮಗ್ರಿ ‘ಹೊಸ ದಿಶೆಯ ಬೆಳಕು’ ಕೃತಿಯನ್ನು ಶಿಕ್ಷಕರಾಗಿ ಸಿದ್ಧಪಡಿಸಿದ್ದಾರೆ. ‘ನಾಕ್ಕೊಂದ್ಲಿದಿ ನಾಲ್ಕು’ ಮುಕ್ತ ಚೌಪದಿಗಳ ಧ್ವನಿಸಾಂದ್ರಿಕೆ ಕೆದ್ಲಾಯರ ಸಂಗೀತ ಸಂಯೋಜನೆಯಲ್ಲಿ ಹೊರಬಂದಿದೆ. ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮುಖ್ಯ ಉದ್ದೇಶವೇ ನಾಡು ನುಡಿ ಸಾಹಿತ್ಯ,ಸಂಸ್ಕೃತಿ, ಜನಪದದ ಸಂರಕ್ಷಣೆ. ಈ ದಿಶೆಯಲ್ಲಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಕೆಲಸ ಮಾಡಿರುವವರು ನಿಲಾವರ ಸುರೇಂದ್ರ ಅಡಿಗರು. ಪ್ರಸ್ತುತ 60ರ ಸಂಭ್ರಮದಲ್ಲಿರುವ ನಿಲಾವರ ಸುರೇಂದ್ರ ಅಡಿಗ ಅವರ ವೃತ್ತಿ ಜೀವನದ ಸವಿನೆನಪಿನ ಸಣ್ಣ ಪರಿಚಯ ಉಡುಪಿ ಟೈಮ್ಸ್ ವಾರದ ವ್ಯಕ್ತಿಯಾಗಿ

1) ಉ.ಟೈಮ್ಸ್ : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ನಿಮ್ಮ ಅನುಭವದ ನೆನಪಿನ ಬುತ್ತಿ ನಮ್ಮ ಓದುಗರಿಗಾಗಿ?
ಅತಿಥಿ: ಬೆಂಗಳೂರಿನಿಂದ ಊರಿಗೆ ಬಂದು 16 ವರ್ಷ ಆಯಿತು. ಮೊದಲಿನಿಂದಲೂ ಸಾಹಿತ್ಯ ಮತ್ತು ಸಂಘಟನೆಯಲ್ಲಿ ತನ್ನನ್ನು ನಾನು ತೊಡಗಿಸಿಕೊಂಡವನು. ಪತ್ನಿಗೆ ಅನಾರೋಗ್ಯದ ನಿಮಿತ್ತ ಉಡುಪಿಗೆ ಬಂದ ಮೇಲೆ ಇಲ್ಲಿನ ಸಾಹಿತ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂಬ ಆಸಕ್ತಿ ಇತ್ತು. ಹರಿಕೃಷ್ಣ ಪುನರೂರು ಅವರು ಬೆಂಗಳೂರಿನಲ್ಲಿ ರಾಜ್ಯಾದ್ಯಕ್ಷರಾಗಿದ್ದಾಗ ನಾನು ಅಲ್ಲಿ ತಾಲೂಕು ಅಧ್ಯಕ್ಷನಾಗಿದ್ದೆ. ಉಪ್ಪುಂದ ಚಂದ್ರಶೇಖರ ಹೊಳ್ಳ ಹಾಗು ಎ ಎಸ್ ಏನ್ ಹೆಬ್ಬಾರ್ ಅವರ ಪರಿಚಯವಾಗಿತ್ತು. ಅವರ ಬಳಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷನಾಗಬೇಕು ಎಂಬ ಹಂಬಲ ತೋರ್ಪಡಿಸಿದಾಗ ಉತ್ತಮರೀತಿಯಲ್ಲಿ ಬೆಂಬಲನೀಡಿ ಸಹಕರಿಸಿದರು. ನಂತರ ಚುನಾವಣೆ ಸ್ಪರ್ಧಿಸಿ 2012 ರಲ್ಲಿ ಸಾಹಿತ್ಯ ಪರಿಷತ್‍ನ ಅಧ್ಯಕ್ಷನಾಗಿ ಆಯ್ಕೆಯಾದೆ. ಮೊದಲ ಅವಧಿಯಲ್ಲಿ 3 ವರ್ಷ, ಎರಡನೇ ಅವಧಿಯಲ್ಲಿ 5 ವರ್ಷಗಳ ಅವಧಿಗೆ ಒಟ್ಟು 9 ವರ್ಷಗಳ ಅವಧಿಯಲ್ಲಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೆವು. ಅವುಗಳಲ್ಲಿ ಶಾಲೆಯತ್ತ ಸಾಹಿತ್ಯ, ಕವಿ ಕೃತಿ ಸಂಸ್ಕೃತಿ ಎಂಬ ವಿನೂತನ ಕಾರ್ಯಕ್ರವೂ ಒಂದು. ಇದು ಪಂಪನಿಂದ ಹಿಡಿದು ಕುವೆಂಪುವರೆಗೆ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಕಾವ್ಯದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ವಾಚನ ಮತ್ತು ವ್ಯಾಖ್ಯಾನ ಮಾಡುವ ವಿಶೀಷ್ಠವಾದ ಕಾರ್ಯಕ್ರಮವಾಗಿದೆ.

ಇದರ ನೂರಾರು ಕಾರ್ಯಕ್ರಮಗಳು ನಡೆದಿವೆ. ಮತ್ತೊಂದು “ಹಿರಿಯರೆಡೆಗೆ ನಮ್ಮ ನಡಿಗೆ” ಎನ್ನುವುದು ವಿಶಿಷ್ಟ ಕಾರ್ಯಕ್ರಮ. ಇದರ ಮೂಲಕ 117 ಮಂದಿ ಹಿರಿಯರನ್ನು ಅವರ ಮನೆಗೆ ಹೋಗಿ ಗೌರವಿಸಿ ಅವರ ಅನುಭವಗಳನ್ನು ದಾಖಲಿಸಿದ್ದೇವೆ. ಅದನ್ನು ಪುಸ್ತಕ ರೂಪದಲ್ಲಿ ಹೊರತರುವ ಚಿಂತನೆಯೂ ಹೊಂದಿದ್ದೇವೆ. ಈ ಎರಡೂ ಅವಧಿಯಲ್ಲಿ ಬೇರೆ ಬೇರೆ ರೀತಿಯ 52 ಸಮ್ಮೇಳನ ಗಳನ್ನು ಮಾಡಿದ್ದೇವೆ. ಶಾಲೆಯ ಸಾಹಿತ್ಯ ಸಮ್ಮೇಳನ, ಹೋಬಳಿ ಸಮ್ಮೇಳನ, ಗ್ರಾಮ ಸಮ್ಮೇಳನ, ತಾಲೂಕು ಸಮ್ಮೇಳನ, ಜಿಲ್ಲಾ ಸಮ್ಮೇಳನ ,ಮಹಿಳಾ ಸಮ್ಮೇಳನ, ಯಕ್ಷಗಾನ ಸಾಹಿತ್ಯ ಸಮ್ಮೇಳನ, ಮಕ್ಕಳ ಸಾಹಿತ್ಯ ಸಮ್ಮೇಳನ ಹೀಗೆ ಎಲ್ಲಾ ಹಂತಗಳಲ್ಲೂ ಸಮ್ಮೇಳನಗಳನ್ನು ಮಾಡಿದ್ದೇವೆ.

ಈ ಸಮ್ಮೇಳನಗಳ ಮೂಲಕ ಒಂದಷ್ಟು ಹಿರಿಯ, ಕಿರಿಯ ಸಾಹಿತ್ಯಾಸಕ್ತಿ ಹೊಂದಿದವರಿಗೆ ವೇದಿಕೆ ಕಲ್ಪಿಸಿಕೊಟ್ಟಂತಾಗಿತ್ತು. ಈ ಮೂಲಕ ಸುಮಾರು 780 ಕ್ಕೂ ಅಧಿಕ ಮಂದಿ ಸಾಧಕರನ್ನು ಗುರುತಿಸಿ ಗೌರವಿಸಿರುವ ಬಗ್ಗೆ ಸ್ವಲ್ಪ ಮಟ್ಟಿನ ತೃಪ್ತಿ ಇದೆ. ಇದರ ಜೊತೆಗೆ ಪ್ರತೀ ಸಮ್ಮೇಳನದಲ್ಲಿ ಎರಡು ಅಥವಾ ಮೂರು ಸಂಘ ಸಂಸ್ಥೆಗಳನ್ನು ಗೌರವಿಸುತ್ತಿದ್ದೇವೆ. ಹೀಗಾಗಿ ಇಲ್ಲಿನ ಕನ್ನಡ ನಾಡು ನುಡಿ ಸಂಸ್ಕøತಿ, ಸಾಹಿತ್ಯಕ್ಕೆ ಸಂಬಂಧ ಪಟ್ಟ ಹಾಗೆ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳನ್ನು ಗೌರವಿಸಿರುವ ಬಗ್ಗೆಯೂ ಅಲ್ಪ ಸ್ವಲ್ಪ ತೃಪ್ತಿ ಇದೆ. ಹಾಗೂ ವಿಚಾರ ಸಂಕೀರ್ಣಗಳು, ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದರ ಜೊತೆಗೆ ಉಪ್ಪಂಗಳ ರಾಮ ಭಟ್ಟರು ಅಕಳಂಕ ಪ್ರಶಸ್ತಿಯನ್ನು ನೀಡುತ್ತಿದ್ದರು. ಕಳೆದ 5 ವರ್ಷಗಳಿಂದ ಅವರು 1ಲಕ್ಷ ರೂ ದತ್ತಿ ನಿಧಿಯನ್ನು ನೀಡಿ ಅದರಲ್ಲಿ ಬರುವ ಬಡ್ಡಿಯಿಂದ ಓರ್ವ ಸಾಹಿತಿಗೆ ಪ್ರಶಸ್ತಿ ನೀಡಿ ಎಂದಿದ್ದು, ಅದರಂತೆ ಕಳೆದ 5 ವರ್ಷದಿಂದ “ಅಕಳಂಕ” ಪ್ರಶಸ್ತಿಯನ್ನು ಸಾಹಿತ್ಯ ಪರಿಷತ್ ನಲ್ಲಿ ನೀಡುತ್ತಿದ್ದೇವೆ. ನನ್ನ ಅವಧಿಯಲ್ಲಿ ಮೊದಲು 6 ದತ್ತಿ ಗಳು ಇದ್ದವು ಈಗ 13 ದತ್ತಿಗಲಿದ್ದು, ಈ ಪೈಕಿ ಕುಂದಾಪುರದ ಭಾಷೆ ಬಗ್ಗೆ ಪ್ರಕಾಶಕರು 50,000 ರೂ ಗಳ ದತ್ತಿ , ವಸಂತಿ ಶೆಟ್ಟಿ ಬ್ರಹ್ಮಾವರ ಅವರು 2 ದತ್ತಿಗಳನ್ನು ಇಟ್ಟಿದ್ದಾರೆ. ಒಂದು ಭವಾನಿ ಶೆಟ್ಟಿ ಅವರು ಕೃಷ್ಣಯ್ಯ ಶೆಟ್ಟಿ ಹೆಸರಿನಲ್ಲಿ 1,00,000 ರೂ ದತ್ತಿ, ಇದರ ಜೊತೆಗೆ ರತ್ನಾವತಿ ಎನ್ನುವ ಶಿಕ್ಷಕ ರೊಬ್ಬರು ಶಿಕ್ಷಕರಿಗೋಸ್ಕರ ಕಾರ್ಯಕ್ರಮ ಮಾಡಿ ಎಂದು 25, 000 ದತ್ತಿ ಇಟ್ಟಿದ್ದಾರೆ. ಶಿಕ್ಷಣ ತಜ್ಞ ಮಹಬಲೇಶ ರಾಯರು 25,000 ರೂ, ಸುರಾಲು ನಾರಾಯಣ ಮಡಿ ಯವರು 90,000 ರೂ ನ 3 ದತ್ತಿಗಳನ್ನು ಇಟ್ಟಿದ್ದಾರೆ. ಇದರಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ತಿಂಗಳಿಗೊಂದು ಕಾರ್ಯಕ್ರಮವನ್ನು ನಿರಂತರ ವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿದೆ. ಮತ್ತು ಸಾದ್ಯವಾದಷ್ಟು ಕನ್ನಡ ಪರ ಚಟುವಟಿಕೆಗಳನ್ನು ಸಕ್ರಿಯವಾಗಿ ಭಾಗವಹಿಸಿದ್ದೇವೆ. ಕನ್ನಡ, ನಾಡು, ನುಡಿಗೆ ಧಕ್ಕೆ ಬಂದಾಗ ಸರಕಾರಿ ನೌಕರ ಆಗಿದ್ದರೂ ಕೂಡಾ ಕನ್ನಡ ಪರವಾಗಿ ಹೋರಾಟ ಮಾಡಿರುವ ಬಗ್ಗೆ ತೃಪ್ತಿ ಇದೆ.

ನನ್ನ ಅಧಿಕಾರದ ಅವಧಿಯಲ್ಲಿ ತುಂಬಾ ಜನರ ಪರಿಚಯವಾಗಿದೆ. ಪ್ರಸ್ತುತ 7 ತಾಲೂಕು ಇರುವುದರಿಂದ ಕನಿಷ್ಟ ಒಂದೊಂದು ತಾಲೂಕಿನಿಂದ ಸಮಿತಿಯಲ್ಲಿ 20 ಜನ ಎಂದರೂ 140 ಕ್ಕೂ ಅಧಿಕ ಮಂದಿಯ ಕಾರ್ಯಪಡೆ ಇದೆ. ಜಿಲ್ಲಾ ಕಾರ್ಯಪಡೆ ಸೇರಿದರೆ 200 ಕ್ಕೂ ಹೆಚ್ಚು ಕಾರ್ಯಪಡೆ ಕಟ್ಟುವಷ್ಟು ಬೆಂಬಲವಿದೆ. ಇವುಗಳನ್ನೆಲ್ಲಾ ನೋಡಿದಾಗ ಖುಷಿಯ ಜೊತೆಗೆ ಆತ್ಮ ಸಂತೋಷವೂ ಆಗುತ್ತದೆ.

2) ಉ.ಟೈಮ್ಸ್ : ನಿಮ್ಮ ಕನಸಿನ “ಹಿರಿಯರೆಡೆಗೆ ಸಾಹಿತ್ಯದ ನಡಿಗೆ” ಕಾರ್ಯಕ್ರಮದ ಬಗ್ಗೆ ತಿಳಿಸಿ

ಅತಿಥಿ : ಶೀಕ್ಷಕರಾಗಿ ನಾವು ಪಠ್ಯದಲ್ಲಿ ಬರುವ ಕವಿಗಳು ಸಾಹಿತಿಗಳ ಬಗ್ಗೆ ಪಾಠ ಮಾಡುತ್ತೇವೆ. ಆದರೆ ನಮ್ಮ ಊರಿನ ಕವಿಗಳ, ಸಾಹಿತಿಗಳ ಬಗ್ಗೆ ತಿಳಿಸುವುದು ಯಾರು ಎನ್ನುವುದು ಮುಖ್ಯ. ಹಾಗಾಗಿ ಇಲ್ಲಿ 2 ರೀತಿಯ ಕಾರ್ಯಕ್ರಮಗಳನ್ನು ಮಾಡಿದೆವು, ಅದರಲ್ಲಿ ಒಂದು “ಶಾಲೆಯತ್ತ ಸಾಹಿತ್ಯ” ಶಾಲೆಗೆ ಸಾಹಿತಿಗಳನ್ನು ಕರೆದುಕೊಂಡು ಹೋಗಿ ಮುಂಚಿತವಾಗಿ ಅವರು ಮಕ್ಕಳಿಗೆ ಪುಸ್ತಕಗಳನ್ನು ನೀಡಿ, ಮಕ್ಕಳು ಆ ಪುಸ್ತಕವನ್ನು ಓದಿ ಸಾಹಿತಿಯ ಎದುರೇ ಪ್ರತಿಕ್ರಿಯೆ ನೀಡುವಂತದ್ದು. ಮತ್ತೊಂದು ಸಾಹಿತಿಗಳು ಅಲ್ಲದವರು ಮತ್ತು ಸಾಹಿತಿಗಳು ನಾಡು. ನುಡಿ, ಸಾಹಿತ್ಯ, ಸಂಸ್ಕೃತಿ ಕನ್ನಡದ ಕೆಲಸ ಮಾಡಿದವರು ಅದೆಷ್ಟೋ ಮಂದಿ ಹಿರಿಯರಿದ್ದಾರೆ. ಅಂತಹ ಹಿರಿಯರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ 117 ಮಂದಿ ಹಿರಿಯರನ್ನು ಅವರ ಮನೆಗೆ ಹೋಗಿ ಗೌರವಿಸಿದ್ದೆವು. ಇವರಲ್ಲಿ 12 ಕ್ಕೂ ಅಧಿಕ ಮಂದಿ 100 ವರ್ಷದ ಸಮೀಪ ಇದ್ದವರು. ಇದ್ದಂತಹ ಹಿರಿಯರನ್ನು ಗೌರವಿಸಿದ್ದು ಹಾಗೂ ಅವರ ಮಾತುಗಳನ್ನು ಕೇಳಿ ನಮ್ಮ ಬಾಲ್ಯದ ನೆನಪುಗಳು ಮರಕಳಿಸಿ ಖುಷಿ ನೀಡಿತ್ತು. ಇವರ ಆದರ್ಶಗಳು, ಅವರ ಸೇವೆ ಮುಂದಿನ ಪೀಳಿಗೆಗೆ ತಿಳಿಯಬೇಕು ಮತ್ತು ಅದು ಪ್ರೇರಣೆ ನೀಡಬೇಕು.

ಎಷ್ಟೋ ಈಗಿನ ಮಕ್ಕಳಿಗೆ ನಮ್ಮ ಹಿರಿಯರ ಪರಿಶ್ರಮ, ಕಷ್ಟದ ಬಗ್ಗೆ ಅರಿವಿಲ್ಲ. ಹಾಗಾಗಿ, ಎರಡು ತಲೆಮಾರಿನ ಹಿಂದಿನ ಹಿರಿಯರ ಬದುಕು ಹೇಗಿತ್ತು ನಮ್ಮ ಊರಿನ ರೀತಿ ರಿವಾಜು ಹೇಗಿತ್ತು ಎನ್ನುವುದು ತಿಳಿಯಬೇಕು ಅವರ ಪರಂಪರೆ ,ಆದರ್ಶಗಳು ಮುಂದುವರೆ ಯಬೇಕಾಗಿದೆ. ಸಂಸ್ಕೃತಿ ಉತ್ಕ್ರಷ್ಟತೆ ಎಂದರೆ ಉತ್ತಮ ಅಂಶಗಳನ್ನು ಪಡೆಯುವುದು, ಅನಾವಶ್ಯಕವಾದದನ್ನು ತ್ಯಜಿಸುವುದು, ಆದರೆ ಈಗ ಪರಿಸ್ಥಿತಿ ತಿರುಗಿನಿಂತಂತಿದೆ. ಉತ್ತಮ ಅಂಶಗಳು ಮುಂದಿನ ಪೀಳಿಗೆಗೆ ವರ್ಗ ಆಗಬೇಕು ಎನ್ನುವುದು. ಈ ಕಾರ್ಯಕ್ರಮದ ಆಶಯ. ಇದರೊಂದಿಗೆ ಕನ್ನಡ ಸಾಹಿತ್ಯಕ್ಕಾಗಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಕೃಷಿಕರು, ಶಿಕ್ಷಕರು, 40 ವರ್ಷಕ್ಕೂ ಅಧಿಕ ವರ್ಷಗಳ ಕಾಲ ಸಮಾಜಮುಖಿಯಾಗಿ ಕೆಲಸಮಾಡುತ್ತಿರುವ ಪೌರಕಾರ್ಮಿಕರನ್ನು ಗುರುತಿಸಿ ಸನ್ಮಾನ ಮಾಡಿದ್ದೇವೆ.

3) ಉ.ಟೈಮ್ಸ್ : ಮಕ್ಕಳಿಗಾಗಿ ನಡೆಸಿದ ಕಾರ್ಯಕ್ರಮಗಳ ಬಗ್ಗೆ ತಿಳಿಸಿ

ಅತಿಥಿ : “ಶಾಲೆಯತ್ತ ಸಾಹಿತ್ಯ ಸಮ್ಮೇಳನ” ಇದು ಶಾಲೆಗಳಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳು. ಈ ಸಾಹಿತ್ಯ ಸಮ್ಮೇಳನದಲ್ಲಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಸಮ್ಮೇಳನದ ಅಧ್ಯಕ್ಷರಾಗಿರುತ್ತಾರೆ. ಅಲ್ಲಿ ಕಥೆ, ಕವನಗಳನ್ನು ಬರೆಯುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರಲ್ಲೇ ಉದ್ಘಾಟನೆ, ಅವರಲ್ಲೇ ಸಮರೋಪ ಹೀಗೆ ಸಾಹಿತ್ಯ ಸಮ್ಮೇಶನದ ದೃಶ್ಯವನ್ನು ಶಾಲೆಗಳಲ್ಲಿ ಮರುಸೃಷ್ಟಿಸುವ ಕಾರ್ಯಕ್ರಮದ ಪರಕಲ್ಪನೆ ಇದಾಗಿದೆ. ಇದು ಕೋಟ ವಿವೇಕಾನಂದ ಬಾಲಕೀಯರ ಪ್ರೌಢ ಶಾಲೆ, ಕುದಿ ಶಾಲೆ ಹಾಗೂ ಉಡುಪಿಯ ಕಡಿಯಾಳಿ ಶಾಲೆಯಲ್ಲಿ ನಡೆದಿದೆ.

ಇದರೊಂದಿಗೆ ಮಕ್ಕಳ ತಾಲೂಕು ಸಾಹಿತ್ಯ ಸಮ್ಮೇಳನ, 3 ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಕಾಪು ಮತ್ತು ಕೋಟ, ಹಾಗೂ ಕಾರಂತ ಥೀಂಪಾರ್ಕ್ ನಲ್ಲಿ ನಡೆಸಲಾಯಿತು. ಇದರೊಂದಿಗೆ ಈ ಸಮ್ಮೇಳನದಲ್ಲಿ ಗೋಷ್ಠಿಯೊಂದರಲ್ಲಿ ಮಕ್ಕಳಿಗೆ ನಾನು ಓದಿದ ಪುಸ್ತಕ ಎಂಬ ಕಾರ್ಯಕ್ರಮ ಮಾಡಲಾಗುತ್ತಿದ್ದು, ಕಳೆದ ವರ್ಷ ನಡೆದ 7 ಸಾಹಿತ್ಯ ಸಮ್ಮೇಳನದಲ್ಲಿ 44 ಮಕ್ಕಳು ಈ ವಿಭಾಗದಲ್ಲಿ ಮಾತನಾಡಲು ಅವಕಾಶ ಪಡೆದುಕೊಂಡಿದ್ದರು. ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿನಬೇಕು ಎಂಬ ಕಾರಣಕ್ಕಾಗಿ. ಉಪೇಂದ್ರ ಸ್ವಾಮಿಜಿಯವರು 110 ಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಓದುವ ಸಂಸ್ಕೃತಿ ಬಗ್ಗೆ ತಿಳುವಳಿಕೆ ಮೂಡಿಸಿರುವುದು ಹಾಗೂ ಶ್ರೀಕೃಷ್ಣ ಆಯಿತಾಣರು 800ಕ್ಕೂ ಅಧಿಕ ಪ್ರೌಢ ಶಾಲೆಗಳಿಗೆ ತೆರಳಿ ಪಠ್ಯಾಧಾರಿತ ವಿಷಯಗಳ ಕಾರ್ಯಕ್ರಮ ಮಾಡಿದ್ದಾರೆ. ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವಂತಹ , ಬೆಳೆಸುವಂತಹ ನಿಟ್ಟಿನಲ್ಲಿ ಒಂದಷ್ಟು ಕೆಲಸಗಳು ಆಗಿದೆ.

ಇದರ ಜೊತೆಗೆ ಮಕ್ಕಳಿಗೆ ಬರವಣಿಗೆಗೆ ಪ್ರೇರಣೆ ನೀಡಬೇಕು ಎಂಬ ಕಾರಣದಿಂದ ಪ್ರತೀ ವರ್ಷ ಮೇ ತಿಂಗಳು 25, 26, 27 ಕಾರಂತ ಥೀಮ್ ಪಾರ್ಕಿನಲ್ಲಿ ವಿಚಾರ ಸಂಕೀರ್ಣಗಳನ್ನು ,ಕಾವ್ಯ ಕಮ್ಮಟಗಳು, ವಿಮರ್ಷ ಕಮ್ಮಟ, ಕಥಾ ಕಮ್ಮಟ, ಬೇಸಿಗೆ ಶಿಬಿರ ಗಳನ್ನು ಮಾಡಿದ್ದೇವೆ ಮತ್ತು “ಯುವ ಧ್ವನಿ” ಎಂಬ ಮಕ್ಕಳು ಬರೆದ ಕವನಗಳನ್ನು ಪುಸ್ತಕರೂಪ ನೀಡಲಾಗಿದೆ. ಹಾಗೂ ಕಾರ್ಕಳದಲ್ಲಿ ಪ್ರಭಾಕರ ಶೆಟ್ಟಿ ಅವರು ನಡೆಸುತ್ತಿದ್ದ

“ಕನ್ನಡ ಡಿಂಡಿಮ” ಹೆಸರಿನ ಕಾರ್ಯಕ್ರಮದಲ್ಲಿ ಪ್ರತೀ ಶಾಲೆಗಳಿಗೆ ಹೋಗಿ ಕಾರ್ಯಕ್ರಮ ಮಾಡುವ ಮೂಲಕ ಕವನಗಳನ್ನು ರಚಿಸುವ ಸ್ಪರ್ಧೇ ಮಡುತ್ತಿದ್ದರು. ಈ ಸ್ಪರ್ಧೆಯಲ್ಲಿ ಸಂಗ್ರಹವಾಗುವ ಉತ್ತಮ ಕವನಗಳನ್ನು ಆಯ್ಕೆ ಮಾಡಿ ಪುಸ್ತಕ ರೂಪದಲ್ಲಿ ಹೊರತಂದಿದ್ದೇವೆ.

4) ಉ.ಟೈಮ್ಸ್ : ಮಕ್ಕಳ (ವಿದ್ಯಾರ್ಥಿಗಳ) ಸರ್ವತೋಮುಖ ಬೆಳವಣಿಗೆಗೆ ಸಾಹಿತ್ಯದ ಅಭಿರುಚಿ ಹೇಗೆ ಸಹಕಾರಿಯಾಗುತ್ತದೆ.
ಅತಿಥಿ: ಮಾಹಿತಿ ವರ್ಗಾವಣೆ ಭೋಧನೆ ಅಲ್ಲ. ಈಗಿನ ಪೋಷಕರ ತಿಳುವಳಿಕೆ ಹೇಗಿದೆ ಅಂದರೆ ತಮ್ಮ ಮಗ ಅಥವಾ ಮಗಳು 100 ಕ್ಕೆ 100 ಅಂಕ ಗಳಿಸಿದರೆ ಮಾತ್ರ ಬುದ್ದಿವಂತ ಅನ್ನುವಂತಹ ಭ್ರಮೆಗೆ ಒಳಗಾಗಿದ್ದಾರೆ. ಅದನ್ನು ಹೊರತುಪಡಿಸಬೇಕು. ಮಗು ಓದಿದ, ಕೇಳಿದ, ಆಲಿಸಿದ ನಂತರ ಏನು ಏಕೆ?, ಹೇಗೆ?,ಹಾಗಾಗದಿದ್ದರೆ? ವರೆಗೆ, ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲ್ಯ ಬಂದರೆ ಅದು ಜ್ಞಾನಕಟ್ಟುವ ಕೆಲಸವಾಗುತ್ತದೆ. ಹಾಗಾಗಿ ಸಾಹಿತ್ಯದ ಆಸಕ್ತಿ ಓದಿದ್ದನ್ನು ಏನು, ಏಕೆ, ಹೇಗೆ ಎಂಬ ವಿಚಾರಗಳ ಕುರಿತು ತಾರ್ಕಿಕವಾಗಿ ಯೋಚಿಸಿ ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಗುರುತಿಸುವ ಗುಣ ಬರುವಂತೆ ಮಾಡುತ್ತದೆ. ಅದು ಶಿಕ್ಷಣದ ಗುರಿ ಆಗಬೇಕು. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವ ಮೂಲಕ ಉತ್ತರ ಗಳನನ್ನು ಕಂಡುಕೊಳ್ಳಬೇಕು ಈ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು. ಸಾಹಿತ್ಯದ ಪ್ರೇರಣೆ ಮಕ್ಕಳ ಕಲಿಕೆ ಮತ್ತು ಓದುವಿಕೆ ಸಹಕಾರಿಯಾಗಿದೆ ಮತ್ತು ಮಕ್ಕಳಲ್ಲಿ ಜ್ಞಾನ ವೃದ್ಧಿಯಾಗುತ್ತದೆ. ಸಾಂಸ್ಕೃತಿಕವಾಗಿ ಮುಂದುವರಿದ ಮಕ್ಕಳು ಕಲಿಕೆಯಲ್ಲೂ ಮುಂದುವರೆದಿರುತ್ತಾರೆ(ಕೆಲವರನ್ನು ಹೊರತು ಪಡಿಸಿ).

5) ಉ.ಟೈಮ್ಸ್ : ಸಾಹಿತ್ಯ ಲೋಕದಲ್ಲಿ ಆಗಿರುವಂತಹ ಬದಲಾಣೆ ಏನು ಮತ್ತು ಆ ಬದಲಾವಣೆ ಯಾಕಾಗಿ?
ಅತಿಥಿ: ತಾಂತ್ರಿಕತೆ ಬದಲಾಗುತ್ತಾ ಹೋದ ಹಾಗೆ ಅದಕ್ಕೆ ಹೊಂದಿಕೊಳ್ಳುವಂತಹ ರಚನೆಗಳು ಆಗಬೇಕಾಗಿದೆ. ಪುಸ್ತಕ ಓದುಗರ ಸಂಖ್ಯೆ ಕಡಿಮೆ ಆಗಿದೆ ಎಂದೆನಿಸುವುದಿಲ್ಲ. ಆದರೆ ಪ್ರಸ್ತುತ ಓದುವ ಶೈಲಿ ಬದಲಾಗಿದೆ, ಪುಸ್ತಕಗಳು ಅಂತರ್ಜಾಲದಲ್ಲಿ ದೊರೆಯುವುದರಿಂದ ಅದರಲ್ಲಿ ಓದುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಕೆಲವೊಂದು ಬಾರಿ ಉತ್ತಮ ಪುಸ್ತಕಗಳು ಪುಸ್ತಕ ರೂಪದಲ್ಲಿ ಜನಸಾಮಾನ್ಯರಿಗೆ ತಲುಪದಿದ್ದರೂ ಅಂತರ್ಜಾಲದ ಮೂಲಕ ವಿದ್ಯಾವಂತರಿಗೆ ತಲುಪುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳಲ್ಲಿ ಹೊಂದಾಣಿಕೆ ಬರುವ ಸಾಧ್ಯತೆ ಇರಬಹುದು.

ಇದರೊಂದಿಗೆ ಬರವಣಿಗೆ ರೂಪದಲ್ಲೂ ಬದಲಾವಣೆಗಳಾಗಿದೆ. ಹಳೆ ಗನ್ನಡ, ನಡುಗನ್ನಡ , ಆಧುನಿಕ ಕನ್ನಡ ಮತ್ತು ಬೇರೆ ಬೇರೆ ಭಾಷೆಗಳಲ್ಲಿ ಬಂದಿರುವ ಸಾಹಿತ್ಯಗಳು ಕನ್ನಡಕ್ಕೆ ಅನುವಾದ ಆದಾಗ ಅದು ಒಂದು ರೀತಿಯ ಬದಲಾವಣೆಗೆ ಕಾರಣವಾಗ ಬಹುದು. ನಡುಗನ್ನಡದಲ್ಲಿ ಏಳೆಂಟು ವಾಕ್ಯಗಳ ನಂತರ ಪೂರ್ಣ ವಿರಾಮ ಬರುತ್ತಿತ್ತು. ಆದರೆ ಈಗಿನ ಬರವಣಿಗೆಯಲ್ಲಿ ಸಣ್ಣ ಸಣ್ಣ ವಾಕ್ಯಗಳು , ಸರಳವಾದ ಕನ್ನಡ ಬಳಕ ಹೆಚ್ಚು ಪ್ರಸಿದ್ಧಿ ಪೆಡೆದಿದೆ. ಇದು ಆಂಗ್ಲ ಭಾಷೆಯ ಬಾಷಾಂತರದ ಪ್ರಭಾವ ಇರಬಹುದು. 1921ರಲ್ಲಿ ಇಂಗ್ರೀಷ್ ಗೀತೆಗಳು, ಪುಸ್ತಕಗಳು ಕನ್ನಡ ಕ್ಕೆ ಅನುವಾದ ಆದ ನಂತರ ನಮ್ಮ ಬರವಣಿಗೆಯ ಶೈಲಿ ಕೂಡಾ ವ್ಯತ್ಯಾಸವಾಯಿತು.

6) ಉ.ಟೈಮ್ಸ್ : ಕನ್ನಡ ಭವನದ ಭವನ ಬಗ್ಗೆ ತಿಳಿಸಿ?
ಅತಿಥಿ: ಕನ್ನಡ ಭವನ ಆಗಬೇಕಾಗಿದೆ. ಸರಕಾರದಿಂದ 11.5 ಸೆಂಟ್ಸ್ ಜಾಗ ನಿಗದಿಪಡಿಸಲಾಗಿದೆ. ಕನ್ನಡ ಭವನದ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ಪ್ರಕ್ರಿಯೆ ಗಳು ಈಗಾಗಲೆ ಆಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಭವನ ನಿರ್ಮಾಣ ಗೊಳ್ಳಲಿದೆ. ಆ ಮೂಲಕ ನಿತ್ಯ ನಿರಂತರ ಕನ್ನಡ ಚಟುವಟಿಕೆಗಳು ನಡೆಯುತ್ತವೆ.

7) ಉ.ಟೈಮ್ಸ್ : ಸಮ್ಮೇಳನದ ಅಥವಾ ಕಾರ್ಯಕ್ರಮಗಳ ದಾಖಲೀಕರಣದ ಮಹತ್ವ?

ಅತಿಥಿ: ದಾಖಲೀಕರಣದಿಂದ ಯಾವುದೇ ವಿಷಯಕ್ಕೆ ಸಂಬಂಧಿಸಿದ ವಿಚಾರಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿದೆ. ಮಾತಿಗೆ ಅಕ್ಷರಗಳು ಜೀವ ತುಂಬುತ್ತದೆ. ಯಾವುದೇ ಸಾಹಿತ್ಯ ಸಮ್ಮೇಳನ, ಅಥವಾ ಕಾರ್ಯಕ್ರಮ ನಡೆದಿದೆ ಎನ್ನುವುದಕ್ಕೆ ಪುರಾವೆ ನೀಡುವುದೇ ದಾಖಲೀಕರಣ.

8) ಉ.ಟೈಮ್ಸ್ : ಅನ್ಲೈನ್ ಶಿಕ್ಷಣದ ಹೆಸರಲ್ಲಿ ಮಕ್ಕಳು ಸಾಮಾಜಿಕ ಜಾಲತಾಣಕ್ಕೆ ಮೊರೆ ಹೋಗುತ್ತಿರುವುದು ಶಿಕ್ಷಣದ ಮೇಲೆ ಮತ್ತು ಮಕ್ಕಳ ಭವಿಷ್ಯದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಇದಕ್ಕೆ ಪರಿಹಾರ ಏನು ?
ಅತಿಥಿ: ಆನ್ಲೈನ್ ತರಗತಿ ಸಂದರ್ಭದಲ್ಲಿ ಮೊಬೈಲ್ ಬಳಸುವ ಸಂದರ್ಭದಲ್ಲಿ ಮಕ್ಕಳ ಬಳಿ ಪೋಷಕರು ಇರುವಿಕೆ ಮೂಲಕ ತಾಯಿಯೇ ಮೊದಲ ಗುರು ಎಂಬಂತೆ ಮಕ್ಕಳಿಗೆ ಸೂಕ್ತವಾದ ಮಾರ್ಗದರ್ಶನ ನೀಡಿದರೆ ಧನಾತ್ಮಕ ವಾಗಿ ಪರಿಣಾಮ ಬೀರಬಹುದು. ಮಕ್ಕಳ ಕೈಗೆ ಮೊಬೈಲ್ ಗಳನ್ನು ನೀಡಿ ಅವರ ಪಾಡಿಗೆ ಬಿಟ್ಟರೆ ಮಕ್ಕಳು ಖಂಡಿತವಾಗಿಯೂ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ. ಶಿಕ್ಷಕನಾದವನೂ ಶಾಲಾ ತರಗತಿ ಕೊಠಡಿಯಲ್ಲಿ ಶಿಸ್ತಿನಿಂದ ಪಾಠ ಪಾಡುವ ಮೂಲಕ ಮಕ್ಕಳನ್ನು ಹಿಡಿದಿಟ್ಟುಕೊಂಡು ಮಕ್ಕಳನ್ನು ಓದಿನಕಡೆ ಗಮನ ಹರಿಸುವಂತೆ ಮಾಡಬಯಹು. ಇದರೊಂದಿಗೆ ಶಿಕ್ಷಕ ಮಕ್ಕಳೊಂದಿಗೆ ಮಕ್ಕಳಾಗಿ, ಮಕ್ಕಳು ಶಿಕ್ಷಕನಾಗಿ ಹಾಗೂ ಮನೆಯಲ್ಲಿ ತಾಯಿ ಮಗುವಿನೊಂದಿಗೆ ಮಗುವಾಗಿ ಮಗು ತಾಯಿಯಾಗಿ ಈ ರೀತಿಯ ವಾತಾರಣ ವಿದ್ದಾಗ ಯಾವುದೇ ತಂತ್ರಜ್ಞಾನ (ಮೊಬೈಲ್,ಅಂತರ್ಜಾಲ) ದುರುಪಯೋಗವಾಗುವುದಿಲ್ಲ. ಜೊತೆಗೆ ಉತ್ತಮ ಶಿಕ್ಷಣ ಲಭ್ಯವಾಗಲು ಸಾಧ್ಯವಾಗುತ್ತದೆ. ಯಾವುದನ್ನೇ ಆದರೂ ಕೆಟ್ಟದ್ದು ಒಳ್ಳೆಯದ್ದು ಎಂದು ಹೇಳುವ ಬದಲು ಯಾವ ರೀತಿ ಉಪಯೋಗಿಸುತ್ತೇವೆ ಎಂಬುದರ ಮೂಲಕ ಅದರ ಪ್ರಯೋಗ ನಿರ್ಧಾರವಾಗಬೇಕು.

9) ಉ.ಟೈಮ್ಸ್ : ಯುವ ಬರಹಗಾರರಿಗೆ ಸಾಮಾಜಿಕ ಜಾಲತಾಣ ಒಂದು ವೇದಿಕೆಯಾಗುತ್ತಿದೆ, ಯುವಕರು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಇದರ ಬಗ್ಗೆ ನೀವೇನು ಹೇಳುತ್ತೀರಾ..?
ಅತಿಥಿ: ಬರವಣಿಗೆಯನ್ನು ಪುಸ್ತಕ ರೂಪದಲ್ಲಿ ಬರೆಯುವವರು ಕಡಿಮೆ ಆಗಿದ್ದಾರೆ ಎನ್ನುವ ಮಾತು ಇದೆ. ಆದರೆ ಅದು ಹಾಗಲ್ಲ. ಈಗಲೂ ಮಹಾ ಕಾವ್ಯಗಳನ್ನು ಬರೆಯುವವರು ಇದ್ದಾರೆ. ಡಾ.ಪ್ರದೀಪ್ ಕುಮಾರ್ ಹೆಬ್ರಿ 12 ಮಹಾ ಕಾವ್ಯ ಬರೆದ ಕನ್ನಡ ಏಕೈಕವ್ಯಕ್ತಿ. ಯುವ ಬರಹಗಾರರು ಸಾಮಾಜಿಕ ಜಾಲ ತಾಣಗಳ ಮೂಲಕ ತಮ್ಮ ಅನುಭವಗಳನ್ನು ಸಣ್ಣಸಣ್ಣದಾಗಿ ವ್ಯಕ್ತಪಡಿಸುತ್ತಾರೆ. ಎಷ್ಟೋ ಮಂದಿ ಜಾಲತಾಣಗಳ ಮೂಲಕ ತಮ್ಮ ಬರವಣಿಗೆಯಿಂದ ನೆಲೆಯನ್ನು ಕಂಡುಕೊಂಡಿದ್ದಾರೆ. ಕೆಲವರಿಗೆ ಮಾತ್ರ ತಮ್ಮ ಬರವಣಿಗೆಗೆ ಎಷ್ಟು ಜನ ಮೆಚ್ಚಿಕೊಂಡರು ಹಾಗೂ ಎಷ್ಟು ಜನ ಅದನ್ನು ಹಂಚಿಕೊಂಡರು ಎನ್ನುವುದನ್ನೇ ಯೋಚನೆ ಮಾಡುತ್ತಾರೆ. ತನ್ನ ಬರವಣಿಗೆಯ ನ್ನು ಮೆಚ್ಚುಗೆಗಳ ಮೂಲಕ ಅರ್ಥೈಸುವುದಲ್ಲ. ಜಾಲತಾಣಗಳ ಮೂಲಕ ಬರೆಯುವ ಬರವಣಿಗೆ ಗುಣಮಟ್ಟತೆಯನ್ನು ಅಳೆಯುವ ಬದಲು ಅಭ್ಯಾಸಕ್ಕೆ ಒಂದು ಮಾಧ್ಯಮವಾಗಿ ಜಾಲತಾಣಗಳನ್ನು ಆಶ್ರಯ ಪಡೆಯುವುದು ಉತ್ತಮ. ಜಾಲತಾಣಗಳ ಮೂಲಕ ಅನೇಕರು ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡಿದ್ದಾರೆ. ಎಂಬುದು ಸಂತೋಷದ ವಿಷಯ ಹಾಗಾಗಿ ಈ ಬಗ್ಗೆ ಧನಾತ್ಮಕವಾಗಿ ಚಿಂತಿತನೆ ನಡೆಸುವುದು ಉತ್ತಮ

10) ಉ.ಟೈಮ್ಸ್ : ಓರ್ವ ಉತ್ತಮ ಶಿಕ್ಷಕ, ಸಾಹಿತಿಯಾಗಿ ಯುವ ಪೀಳಿಗೆಗೆ ನಿಮ್ಮ ಸಂದೇಶವೇನು?
ಅತಿಥಿ: ಸಕಾರಾತ್ಮಕವಾಗಿ ಯೋಚಿಸಬೇಕು, ಇನ್ನೊಬ್ಬರನ್ನು ಟೀಕಿಸುವ ಬದಲು, ಸಾಧ್ಯವಾದ್ಯಷ್ಟು ಇನ್ನೊಬ್ಬರಿಗೆ ಸಹಕಾರ ನೀಡುವ ಮನೋ ಭೂಮಿಕೆಯನ್ನು ಬೆಳೆಸಿಕೊಳ್ಳಬೇಕು. ಗುರು ಹಿರಿಯರನ್ನು ಗೌರವಿಸುವುದು, ವಿನಯದಿಂದ ವರ್ತಿಸುವ ಗುಣ ಬೆಳೆಸಿಕೊಳ್ಳುವುದು, ಯೋಚನೆ ಮಾಡಿ ಸಮಾಜಕ್ಕೆ ತನ್ನಿಂದ ಎಷ್ಟು ಒಳಿತು ಮಾಡಲು ಸಾದ್ಯ ಎಂಬುದ ಬಗ್ಗೆ ಯೋಚಿಸಿಕೊಂಡು ಆ ಪ್ರಯತ್ನದಲ್ಲಿ ಮುಂದುವರೆಯುವುದು. ಇನ್ನೊಬ್ಬರಿಗೆ ಉಪದೇಶ ಮಾಡವ ಬದಲು ತಾವೇ ಕಾರ್ಯಪ್ರವೃತ್ತರಾಗುವುದು ಕ್ಷೇಮ

ಇದು ಕನ್ನಡ ಪ್ರೇಮಿ ನೀಲಾವರ ಸುರೇಂದ್ರ ಅಡಿಗರ ಮನದಾಳದ ಮಾತು. ಇವರ ಕನ್ನಡ ಸಾಹಿತ್ಯದ ಸೇವೆಯನ್ನು ಗುರುತಿಸಿ ಕನ್ನಡ ಕಟ್ಟಾಳು’,ಡಾ. ರಾಧಾಕೃಷ್ಣನ್’, `ಜಿ. ಪಿ. ರಾಜರತ್ನಂ’ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ರಾಜ್ಯಮಟ್ಟದ ಅತ್ಯುತ್ತಮ ಕನ್ನಡ ಭಾಷಾ ಬೋಧಕ ಪ್ರಶಸ್ತಿಗೆ ಪಾತ್ರರಾಗಿರುವ ಇವರಿಗೆ 2018ರಲ್ಲಿ ರಾಜ್ಯ ಸರಕಾರ ‘ವಿಶೇಷ ಶಿಕ್ಷಕ ರಾಜ್ಯಪ್ರಶಸ್ತಿ’ ನೀಡಿ ಗೌರವಿಸಿದೆ. ಇವರ ಕನ್ನಡ ಸಾಹಿತ್ಯದ ಸಾಧನೆ,ಸೇವೆ ಹೀಗೆ ಮುಂದುವರೆಯಲಿ ಇನ್ನಷ್ಟು ಪುರಸ್ಕಾರಗಳು ಇವರ ಮಡಿಲು ಸೇರಲಿ ಎಂಬುದು ಉಡುಪಿ ಟೈಮ್ಸ್ ನ ಆಶಯ.

ಸಂದರ್ಶನ : ಅಕ್ಷತಾ ಗಿರೀಶ್
ಲೇಖನ : ದಿವ್ಯ ಮಂಚಿ

Leave a Reply

Your email address will not be published.

error: Content is protected !!