“ರಂಗ ಪಯಣದಲ್ಲಿ” ಅಭಿನಯದ “ಸಾತ್ವಿಕ”ತೆ ಮೆರೆದ ಅಭಿನೇತ್ರಿ: ನಯನ ಸೂಡ

ಸಂದರ್ಶನ ಹಾಗೂ ಬರಹ: ದಿವ್ಯ ಮಂಚಿ

ಮಾರ್ಚ್ 8 ಬಂದಾಕ್ಷಣ ಎಲ್ಲರ ಮೊಬೈಲ್ ನಲ್ಲಿ ವಾಟ್ಸಪ್ ಸ್ಟೇಟಸ್ ಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಮಹಿಳಾ ದಿನಾಚರಣೆಯ ಶುಭಾಶಯದ ಸಂದೇಶಗಳು, ಹಾರೈಕೆಗಳು, ಸಾಲು ಸಾಲು ಹೊಗಳಿಕೆಯ ಬರಹಗಳು ಕಾಣಸಿಗುತ್ತದೆ. ಆದರೆ ಇಲ್ಲಿ ಮೂಡುವ ಪ್ರಶ್ನೆ ಮಹಿಳೆಯರಿಗೆ ಗೌರವಿಸಲು, ಅವರ ಸೇವೆಯನ್ನು ನೆನಪಿಸಿಕೊಳ್ಳಲು ಈ ಒಂದು ದಿನ ಸಾಕೇ…..

ಮಹಿಳೆಗೆ ನೀಡುವ ಗೌರವ ಕೇವಲ ದಿನಾಚರಣೆಗೆ ಸಿಮೀತವಾಗಿರದೇ ಅದು ವರ್ಷವಿಡೀ ಚಾಲ್ತಿಯಲ್ಲಿರಬೇಕು. ಮಹಿಳೆಯರನ್ನು ಗೌರವಿಸುವ ಮನೋಭಾವ ಪ್ರತಿಯೊಬ್ಬರಲ್ಲಿ ಇರಬೇಕು.

ವಾರದ ವ್ಯಕ್ತಿಯಲ್ಲಿ ಮಹಿಳಾದಿನಾಚರಣೆ ಬಗ್ಗೆ ಯಾಕೆ ಪ್ರಸ್ತಾಪಿಸಲು ಕಾರಣ ಇಂದಿನ ನಮ್ಮ ಅತಿಥಿ ಮಹಿಳಾ ಸಶಕ್ತಿಕರಣಕ್ಕೆ ಹೊಸ ಭಾಷ್ಯ ಬರೆದವರು. ಮಹಿಳಾ ಸಬಲೀಕರಣವನ್ನು ಸಾಕಾರಗೊಳಿಸಲು ಇವರು ಆಯ್ಕೆ ಮಾಡಿಕೊಂಡಿದ್ದು ರಂಗಭೂಮಿ. ಈ ಮೂಲಕ ಮಹಿಳೆಯ ಸಮಸ್ಯೆಗಳನ್ನು ಎತ್ತಿ ಹಿಡಿದವರು.

ರಂಗಭೂಮಿ (ಥಿಯೇಟರ್) ಎನ್ನುವುದು ಒಂದು ಪ್ರದೇಶದ, ಜನಸಮುದಾಯದ ಬದುಕಿನ ಸಾಂಸ್ಕೃತಿಕ, ರಾಜಕೀಯ, ಇತಿಹಾಸದೊಂದಿಗೆ, ಸಾಹಿತ್ಯ ಕೃತಿಯಾಗಿ , ರಂಗಮಂಚದಲ್ಲಿ ನಾಟಕವಾಗಿ, ರೂಪಕವಾಗಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರ. ಈ ಕಲಾಕ್ಷೇತ್ರವು ಮಹಿಳೆಯರ ಮೆಲಾಗುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ಹಾಗೂ ಅನೇಕ ಕಡೆಗಳಲ್ಲಿ ಮಹಿಳೆಯರ ಮೇಲಾಗುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಇರುವ ಸಶಕ್ತ ಮಾಧ್ಯಮ.

ನಾಟಕದ ಮೂಲಕ ಮಹಿಳೆಯರ ಸಮಸ್ಯೆಗಳ ವಿರುದ್ಧ ಧ್ವನಿಯಾಗುತ್ತ ಎಲ್ಲೆಡೆ ಪ್ರಸಿದ್ಧಿ ಪಡೆದಿರುವ ರಂಗಭೂಮಿ ಕಲಾವಿದೆ ನಯನಾ ಸೂಡ ಉಡುಪಿ ಟೈಮ್ಸ್ “ವಾರದ ವ್ಯಕ್ತಿ”.

1988ರ ಜು.31 ರಂದು ಇವರ ಜನನ, ಹುಟ್ಟಿದ್ದು ಶಿವಮೊಗ್ಗದಲ್ಲಿಯಾದರೂ ಮೂಲತಃ ಕಾರ್ಕಳ ಹೆಬ್ರಿಯವರು. ತಾಯಿ ಮಮತಾ ಜೆ ಶೆಟ್ಟಿ ಅವರ ಪುತ್ರಿಯಾದ ಇವರು ಬಾಲ್ಯದಲ್ಲಿಯೇ ಪ್ರತಿಭಾವಂತೆ. ಒಂದನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಸರಕಾರಿ ಶಾಲೆಯಲ್ಲಿ ಕಲಿತು. ಬಳಿಕ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಹಿಳಾ ಮತ್ತು ಅಧ್ಯಯನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕಲಿತಿದ್ದಾರೆ. ಪ್ರಸ್ತುತ ವಿಜಯಪುರದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಸಿದ್ದ ಜಾನಪದ ಗಾಯಕ ರಾಜ್ ಗುರು ಅವರನ್ನು 2014 ರ ಫೆ.6 ರಂದು ವಿವಾಹವಾದ ಇವರು ಇಂದು ಪತಿ ಹಾಗೂ ಒಂದು ಮುದ್ದಾದ ಹೆಣ್ಣು ಮಗುವಿನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಇವರು ಬಾಲ್ಯದಲ್ಲಿ ನೃತ್ಯದ ಕುರಿತು ವಿಶೇಷ ಆಸಕ್ತಿ ಹೊಂಡಿದ್ದು, ಲೀಲಾವತಿ ಉಪಾದ್ಯಾಯ ಅವರಿಂದ ಭರತನಾಟ್ಯವನ್ನು ಕಲಿತಿದ್ದಾರೆ. ಇವರು ಬಾಲ್ಯದಲ್ಲಿ ಎಷ್ಟೋಂದು ಪ್ರತಿಭಾವಂತೆ ಎನ್ನುವುದಕ್ಕೆ, 5 ನೇ ತರಗತಿಯ ಪುಟ್ಟ ಬಾಲಕಿಯಾದ ಸಂದರ್ಭದಲ್ಲಿ 10 ನೇ ತರಗತಿಯ ಮಕ್ಕಳಿಗೆ ನೃತ್ಯ ಸಂಯೋಜನೆ ಮಾಡುತ್ತಿದ್ದೂದೇ ಸಾಕ್ಷಿ.

ನಾಟಕ ರಂಗದ ಪ್ರವೇಶದ ಬಳಿಕ ಬೇರೆ ಬೇರೆ ರಾಜ್ಯಗಳಲ್ಲಿ ನಾಟಕ ಪ್ರದರ್ಶನ ನೀಡಿದ್ದಾರೆ. ಯಾವುದೇ ನಿರ್ಧಿಷ್ಟ ಪಾತ್ರಕ್ಕೆ ಸೀಮಿತಗೊಳ್ಳದೆ ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುವ ಕಲಾವಿದೆ ಇವರು. ನಾಟಕವೇ ನನ್ನ ಉಸಿರು ರಂಗಭೂಮಿಯೇ ನನ್ನ ಬದುಕು ಎನ್ನುವ ಇವರು ತಮ್ಮದೇ ಸ್ವಂತ “ರಂಗ ಪಯಣ” ಎಂಬ ನಾಟಕ ತಂಡವನ್ನು ಕಟ್ಟಿಕೊಂಡಿದ್ದಾರೆ. ಮಹಿಳಾ ಪ್ರಧಾನ ನಾಟಕಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳುವುದು ಇವರ ತಂಡದ ವಿಶೇಷತೆ.
ಇವರ ರಂಗ ಪಯಣದ ಅನುಭವವನ್ನು ಇವರ ಮಾತಿನಲ್ಲೇ ಓದಿ ತಿಳಿಯೋಣ

1. ಉ.ಟೈಮ್ಸ್: ನಿಮಗೆ ನಾಟಕ ರಂಗದ ಆಸಕ್ತಿ ಬೆಳೆದದ್ದು ಹೇಗೆ…?

ಅತಿಥಿ : ಬಾಲ್ಯದಲ್ಲಿ ನನಗೆ ನಾಟಕಕ್ಕಿಂತಲೂ ನೃತ್ಯ ಅಂದರೆ ಎಲ್ಲಿಲ್ಲದ ಪ್ರೀತಿ. ನಾನು ಕಲಿತದ್ದು ಸರಕಾರಿ ಶಾಲೆಯಲ್ಲಿ, ಸರಕಾರಿ ಶಾಲೆ ಎಂದರೆ ಅದು ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಯಾವತ್ತಿದ್ದರೂ ಒಂದು ಹೆಜ್ಜೆ ಮುಂದೆನೇ. ಆಗ ನಾನು ಕಲಿಯುತ್ತಿದ್ದ ಶಾಲೆಯಲ್ಲಿ ಆಗಸ್ಟ್ 15 ರಂದು ನಡೆಯುವ ನೃತ್ಯ ಸ್ಪರ್ಧೆ ಗೆ ತಯಾರಿ ನಡೆಯುತ್ತಿತ್ತು. ಆ ನೃತ್ಯದಲ್ಲಿ ಆರಂಭದಲ್ಲಿ ಒಂದು ಬದಿಯಲ್ಲಿ ನಿಲ್ಲುತ್ತಿದ್ದ ನನಗೆ ಅದೃಷ್ಟ ಖುಲಾಯಿಸಿದಂತೆ ಮುಂದಿನ ಸಾಲಿನಲ್ಲಿ ನಿಲ್ಲುವ ಅವಕಾಶ ನನ್ನದಾಯಿತು. ಅದು ನನ್ನ ಮೊದಲ ನೃತ್ಯ ಕಾರ್ಯಕ್ರಮವಾದರೂ ರಂಗ ಭೂಮಿ ಕ್ಷೇತ್ರದ ಪ್ರವೇಶದ ಮೊದಲನೇ ಮೆಟ್ಟಿಲು ಏರಲು ಸಹಕಾರಿಯಾಗಿತ್ತು.
ಈ ನೃತ್ಯದ ಹಾವ ಭಾವ ನೋಡಿ ಸಿ.ಲಕ್ಷ್ಮಣ್ ( ನನ್ನ ನಾಟಕ ಗುರು) ಅವರು ನನ್ನ ಬಳಿ ನಾಟಕದಲ್ಲಿ ಅಬಿನಯಿಸುವ ಆಸಕ್ತಿ ಇದೆಯೇ ಎಂದು ಕೇಳಿದರು. ಈ ಮೂಲಕ ನನ್ನ ನಾಟಕ ಗುರು ಸಿ ಲಕ್ಷ್ಮಣ ಅವರ “ರಂಗ ಕಹಳೆ” ತಂಡದ ಮೂಲಕ ನನ್ನ ನಾಟಕ ರಂಗ ಪ್ರವೇಶವಾಯಿತು. ಆ ನಂತರ ಅನೇಕ ನಾಟಕಗಳಲ್ಲಿ ಅಬಿನಯಿಸಲು ಆರಂಭಿಸಿದೆ. ಹಲವು ಸಮಯದ ಬಳಿಕ ನಾನು ಮೊದಲ ಬಾರಿಗೆ ಬಸವಣ್ಣ ನವರ ಜೀವನ ಚರಿತ್ರೆ ಆಧಾರಿತ “ಕಾರಣಿಕ ಶಿಶು” ನಾಟಕದಲ್ಲಿ ಬಣ್ಣ ಹಚ್ಚಿ ಅಭಿನಯಿಸಲು ಆರಂಭಿಸಿದೆ. ಆರಂಭದಲ್ಲಿ ಸಣ್ಣ ಸಣ್ಣ ಪಾತ್ರಗಳಾದ ಮೇಳದಂತಹ ಪಾತ್ರದಲ್ಲಿ ಅಭಿನಯಿಸಿ ನಂತರ ಪೂರ್ಣ ಪ್ರಯಾಣದ ಮುಖ್ಯಭೂಮಿಕೆಯ ಪಾತ್ರದಲ್ಲಿ ಅಭಿನಯಿಸಲು ಆರಂಭಿಸಿದೆ. ಹೀಗೆ ನನ್ನ ನಾಟಕ ರಂಗದ ಪಯಣ ಆರಂಭಗೊಂಡಿತು.

2. ಉ.ಟೈಮ್ಸ್ : “ರಂಗಭೂಮಿ” ಕೇವಲ ಮನರಂಜನೆಗಲ್ಲ ಅದು ಸಮಾಜದ ಸ್ವಾಸ್ಥ್ಯ ಕಾಪಾಡುವ ಮಾಧ್ಯಮ ನಿಮ್ಮ ಅಭಿಪ್ರಾಯ?

ಅತಿಥಿ : ಸಮಾಜದಲ್ಲಿ ಸಮಸ್ಯೆಗಳು ಇದೆ ಅಂತ ಗೊತ್ತಾದಾಗಲೇ ನಾಟಕ ರಂಗ ಹುಟ್ಟಿಕೊಂಡದ್ದು. ಸಮಾಜವನ್ನು ತಿದ್ದಲು ಹುಟ್ಟಿಕೊಂಡದ್ದು ನಾಟಕ ರಂಗ. ಸಾರಾ ಅಬೂಬಕ್ಕರ್ ಅವರ “ಚಂದ್ರಗಿರಿಯ ತೀರದಲ್ಲಿ” ಕಾದಂಬರಿ ಓದುವಾಗ ಮಹಿಳೆಯರ ಮೇಲಾಗುವ ದೌರ್ಜನ್ಯದ ಬಗ್ಗೆ ತಿಳಿದು ಇಷ್ಟೊಂದು ಕ್ರೂರವಾಗಿ ಇರುತ್ತಾರ ಜನ ಅಂದುಕೊಳ್ಳುತ್ತಿದ್ದೆ. ಹೆಣ್ಣು ಮಕ್ಕಳ ಮೇಲೆ ಹೇರಲಾಗುವ ನಿರ್ಬಂಧಗಳ ಬಗ್ಗೆ ತಿಳಿಯುವಾಗ ಪ್ರತೀ ಬಾರಿ ಹೆಣ್ಣು ಮಕ್ಕಳು ಮಾತ್ರ ಯಾಕೆ ಇಂಥಹ ಪೀಡನೆಗೆ ಒಳಗಾಗುತ್ತಾರೆ ಎನ್ನುವ ಪ್ರಶ್ನೆ ಉದ್ಭವವಾಗುತ್ತಿತ್ತು. ಅಲ್ಲದೆ ಮಹಿಳೆ ಬೆಳೆಯಬಾರದು ಎಂಬ ಕಾರಣಕ್ಕೆ ಆಕೆಯನ್ನು ಸಮಾಜದಲ್ಲಿ ಯಾವ ರೀತಿ ಕುಗ್ಗಿಸುತ್ತಾರೆ ಎನ್ನುವುದನ್ನು ಬಹಳ ಹತ್ತಿರದಿಂದ ನೋಡಿದ್ದೆ. ಆಗೆಲ್ಲಾ ನನಗೆ ಸಮಾಜಕ್ಕೆ ಏನೋ ಹೇಳಬೇಕಿದೆ. ಏನೋ ಬದಲಾವಣೆ ತರಬೇಕಿದೆ ಎನ್ನಿಸಿತ್ತು. ಈ ವೇಳೆಮಹಿಳೆಯರ ಮೇಲಾಗುವ ದೌರ್ಜನ್ಯ ಗಳನ್ನು, ಮಹಿಳೆಯರ ಸಮಸ್ಯೆಗಳನ್ನು,
ನೋವುಗಳನ್ನು ಸಮಾಜ ಮುಂದೆ ತರುವ ನಾಟಕಗಳು ಆಗಬೇಕು ಅನ್ನಿಸಿತ್ತು. ಆದ್ದರಿಂದ ನಾಟಕ ರಂಗ ಸಮಾಜದ ಸಮಸ್ಯೆಗಳ ವಿರುದ್ಧ ಧ್ವನಿಯಾಗಲು, ತಪ್ಪುಗಳನ್ನು ತಿದ್ದಲು ಹಾಗೂ ಸಮಾಜದಲ್ಲಿ ಬದಲಾವಣೆ ತರಲು ಒಂದು ಸಶಕ್ತ ಮಾಧ್ಯಮ ವಾಗಿದೆ ಹಾಗೂ ಮುಂದಿನ ದಿನಗಳಲ್ಲಿಯೂ ಸಮಾಜದ ಕೆಡುಕುಗಳನ್ನು ತಿದ್ದುವ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನ ಗೊಳ್ಳಬೇಕು ಎನ್ನುವುದು ನನ್ನ ಆಶಯ.

3. ಉ.ಟೈಮ್ಸ್ : ರಂಗಭೂಮಿ ಕ್ಷೇತ್ರದಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು ಅದನ್ನು ನಿಭಾಸುವ ಬಗೆ?…

ಅತಿಥಿ : ನನಗೆ ರಂಗಭೂವಿಯಲ್ಲಿ ಯಾವುದೇ ಸಮಸ್ಯೆಗಳು ಅಡ್ಡಿಯಾಗಿಲ್ಲ, ಬೇರೆ ಬೇರೆ ತಂಡದೊಂದಿಗೆ ಕೆಲಸ ಮಾಡುವಾಗ ಆರೋಗ್ಯಕರವಾದ ಸ್ಪರ್ಧೆಗಳು ಇರುತ್ತಿತ್ತು. ಆದರೆ ಸಮಾನ್ಯವಾಗಿ ಮಹಿಳೆಯರಿಗೆ ಆಗುವಂತಹ ಸಮಸ್ಯೆ ಅಂತ ಬಂದಾಗ ನಾಟಕ ಮಾಡುವವರು ತಡ ರಾತ್ರಿ ರಿಹರ್ಸಲ್‍ನಲ್ಲಿ ಬಾಗವಹಿಸಬೇಕಾಗುತ್ತದೆ. ಮಹಿಳೆಯರ ಮೇಲಾಗುವ ಮಾನಸಿಕ ದೌರ್ಜನ್ಯಗಳು, ಪ್ರತಿಭೆ ಇದ್ದರೂ ಬೆಳೆಯಲು ಅವಕಾಶ ನೀಡದೇ ಇರುವುದು. ಕುಟುಂಬದ ಜಂಜಾಟದಲ್ಲಿ ಕನಸುಗಳನ್ನು ಮರೆಯುವಂತ ಪರಿಸ್ಥಿತಿಗಳು. ನಾಟಕಗಳು ಎಂದರೆ ಮೂಗು ಮುರಿಯುವ ಜನರು, ರಂಗ ಕಲೆಯ ಜ್ಞಾನ ಇಲ್ಲದ ಜನರು ನಮ್ಮನ್ನು ಕುಗ್ಗಿಸುತ್ತಾರೆ. ಆದ್ದರಿಂದ ಇವರೆಲ್ಲರ ಇಲ್ಲ ಸಲ್ಲದ ಮಾತುಗಳನ್ನು ಕೇಳಬೇಕಾಗುತ್ತದೆ. ಮಹಿಳೆಯರು ಈ ಎಲ್ಲಾ ಟೀಕೆ, ಪ್ರತಿಕ್ರಿಯೆಗಳಿಗೆ ಕಿವಿಕೊಡದೆ ತಾವು ಅಂದುಕೊಂಡದ್ದನ್ನು ಸಾಧಿಸುವತ್ತ ಮುನ್ನುಗ್ಗಬೇಕು. ಹಾಗೂ ಮಹಿಳೆ ನಿರ್ಬಂಧಗಳಿಗೆ ಸೀಮಿತವಾಗದೆ ಸ್ವತಂತ್ರವಾಗಿ ಬದುಕುವಂತಾಗಬೇಕು.

4. ಉ.ಟೈಮ್ಸ್ : ಬಾಲ್ಯದಲ್ಲಿನ ರಂಗ ಪ್ರವೇಶದ ಪಯಣದ ಅನುಭವ? ಮತ್ತೂ ನೀವು ಮುನ್ನಡೆಸುತ್ತಿರುವ ಸಾತ್ವಿಕ ಮತ್ತು ರಂಗಪಯಣದ ಬಗ್ಗೆ ನಿಮ್ಮ ಮಾತು

ಅತಿಥಿ : ಆಗಿನ ರಂಗ ಭೂಮಿಯ ಅನುಭವಕ್ಕೂ ಈಗಿನ ರಂಗ ಭೂಮಿಯ ಪಯಣಕ್ಕೂ ತುಂಬಾ ವ್ಯತ್ಯಾಸ ಇದೆ. ಆಗ ಈಗಿನಂತೆ ಆರೋಗ್ಯಕರವಲ್ಲದ ಮತ್ತೂ ಯಾವುದೇ ರೀತಿಯ ಸ್ಪರ್ಧೆ ಗಳು ಇರುತ್ತಿರಲಿಲ್ಲ. ನಾವು ಬಾಲ್ಯದಲ್ಲಿ ಇದ್ದಾಗ ನಾಟಕ ರಂಗ ತುಂಬಾ ಸುಂದರವಾಗಿತ್ತು. ಆ ಜೀವನ ತುಂಬಾ ಖುಷಿ ಕೊಡುವಂತದ್ದಾಗಿತ್ತು. ಅಲ್ಲಿ ಬರೇ ನಾಟಕದಲ್ಲಿ ಪಾತ್ರಗಳ ಅಭಿನಯ ಮಾತ್ರ ಹೇಳಿ ಕೊಡುತ್ತಿರಲಿಲ್ಲ ಬದಲಾಗಿ ನಾಟಕ ಕ್ಷೇತ್ರಕ್ಕೆ ಪೂರಕವಾಗುವಂತಹ ವೇದಿಕೆ ಸಜ್ಜುಗೊಳಿಸುವುದು, ಸಂಗೀತ, ಮೇಕಪ್ ಮಾಡುವುದು, ಪ್ರಾಪರ್ಟಿಸ್ ಗಳನ್ನು ತಯಾರಿಸುವ ವಿಧಾನಗಳನ್ನು ಕಲಿಸಿಕೊಡುತ್ತಿದ್ದರು. ಎಲ್ಲರೂ ಶಾಲೆಗಳಲ್ಲಿ ತರಗತಿಗಳಲ್ಲಿ ಕಲಿಯುವ ಪಾಠವನ್ನು ನಾನು ತರಗತಿಗೂ ಮೊದಲೇ ಪಾತ್ರವಾಗಿ ಕಲಿಯುತ್ತಿದ್ದೆ. ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ,ಕುವೆಂಪು, ಸಂಗೊಳ್ಳಿ ರಾಯಣ್ಣ ಹೀಗೆ ಮೊದಲಾದ ಮಹಾನ್ ವ್ಯಕ್ತಿಗಳ ಪಾತ್ರ ಗಳ ಬಗ್ಗೆ ಪಾತ್ರವಾಗಿ ತಿಳಿದುಕೊಳ್ಳುತ್ತಿದ್ದೆ. ನಾಟಕ ಪ್ರದರ್ಶನಕ್ಕೆ ಹೋಗುವ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದರು ಇದರಿಂದ 15 ವರ್ಷಗಳಲ್ಲಿ ಕಲಿಯುವ ಕಲಿಕೆಯನ್ನು 8-9 ವರ್ಷಗಳಲ್ಲಿ ಕಲಿಯುವ ಅವಕಾಶ ಸಿಗುತ್ತಿತ್ತು. ನಮಗೆ ಆಗ ದೊಡ್ಡ ದೊಡ್ಡ ವ್ಯಕ್ತಿಗಳ ನಾಟಕಗಳನ್ನು ಕಲಿಕೆಯ ದೃಷ್ಟಿಯಿಂದ ತೋರಿಸುತ್ತಿದ್ದರು. ಇದು ನಮಗೆ ಕಲಿಗೆಗೂ ಪೂರಕವಾಗುತ್ತಿತ್ತು.

ನಾವು ರಂಗ ಪಯಣ ವನ್ನು 2009 ರ ಜು.31 ರಂದು ಕಟ್ಟಿದ್ದೆವು. ಅದೇ ಅವಧಿಯಲ್ಲಿ ಮೇ.21 ರಂದು ನನ್ನ ಪತಿ ರಾಜ್‍ಗುರು “ಸಾತ್ವಿಕ” ಎಂಬ ತಂಡ ಕಟ್ಟಿದ್ದರು. ನಂತರ ನಾವು 2014 ರಲ್ಲಿ ವಿವಾಹವಾದ ಬಳಿಕ ಸಾತ್ವಿಕ ಮತ್ತು ರಂಗಪಯಣವನ್ನು ಜೊತೆ ಜೊತೆಯಾಗಿ ನಡೆಸಿಕೊಂಡು ಬಂದಿರುತ್ತಿದ್ದೇವೆ. ಇದೀಗ ರಂಗಪಯಣಕ್ಕೆ 12 ವರ್ಷ ತುಂಬಿದೆ ಈ ಅವಧಿಯಲ್ಲಿ ಅದೆಷ್ಟೋ ಸೋಲು- ಗೆಲುವು, ಕಷ್ಟಗಳು, ಅವಮಾನಗಳನ್ನು ಸಹಿಸಿದ್ದೇವೆ. ನಮ್ಮ ತಂಡದ ಮೂಲಕ ಹೊಸ ಹೊಸ ಪ್ರಯತ್ನ ಗಳು, ಶಿಬಿರಗಳನ್ನು, ಪ್ರಯೋಗಾತ್ಮಕ ನಾಟಕಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ.

5. ಉ.ಟೈಮ್ಸ್ : ನಿಮ್ಮ ಪ್ರಕಾರ ಸಂಘಟನೆ ಎಷ್ಟು ಸವಾಲಿನ ಕೆಲಸ?

ಅತಿಥಿ : ಸಂಘಟನೆ ತುಂಬಾ ಕಷ್ಟ ಮತ್ತು ಜವಬ್ದಾರಿಯುತ ಕೆಲಸ. ನಾನು ನಾಟಕವನ್ನು ಎಷ್ಟು ಪ್ರೀತಿಸುತ್ತೇನೋ ಸಂಘಟನೆ ಯನ್ನೂ ಅಷ್ಟೇ ಇಷ್ಟಪಡುತ್ತೇನೆ. ಸಂಘಟನೆ ಒಂದು ದೊಡ್ಡ ಸವಾಲು 60 ಕ್ಕೂ ಅಧಿಕ ಯುವ ಕಲಾವಿದರು ಅದರಲ್ಲೂ 20 ರಿಂದ 25 ರ ವರೆಗೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗ ಬೇಕು. ಅವರನ್ನು ಸುರಕ್ಷಿತ ವಾಗಿ ಅವರವರ ಮನೆಗಳಿಗೆ ತಲುಪಿಸಬೇಕು. ನಾಟಕ ಮಾಡುವ ಸಮಯದಲ್ಲಿ ಸಂಘಕರು ಹೇಳಿದ ಸಮಯಕ್ಕೆ ಸರಿಯಾಗಿ ನಾಟಕ ಪ್ರದರ್ಶನಗೊಳ್ಳುವಂತೆ ನೋಡಿಕೊಳ್ಳಬೇಕು. ನಾಟಕ ಮಾಡುವವರಿಗೆ ನೀಡಿರುವ ಕೋಣೆ, ಅವರಿಗೆ ಸೂಕ್ತವಾದ ಸೌಲಭ್ಯ ಸಿಕ್ಕಿದೆಯಾ, ಹೆಣ್ಣು ಮಕ್ಕಳ ವೇಷ ಭೂಷಣಕ್ಕೆ ನೀಡಿರುವ ಕೋಣೆಯಲ್ಲಿ ಅವರು ಸುರಕ್ಷಿತರಾಗಿದ್ದಾರಾ? ಎನ್ನುವುದನ್ನು ಗಮನಿಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಆದರೆ ನನ್ನ ತಂಡದಲ್ಲಿ ಇದುವರೆಗೆ ಯಾವುದೇ ಆಯಾಮದಲ್ಲೂ ಸಮಸ್ಯೆಗಳು ಎದುರಾಗಿರಲಿಲ್ಲ.

6. ಉ.ಟೈಮ್ಸ್ : “ಗುಲಾಬಿ ಗ್ಯಾಂಗ್” ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಳ್ಳಬಹುದೇ?…

ಅತಿಥಿ : ಬುಂಡೆಲ್ಕಾಡ್‍ನ ಸಂಪತ್ ಪಾಲ್ ಎಂಬ ಹೋರಾಟಗಾರ್ತಿಯ ಜೀವನಾಧಾರಿತ ಕಥೆಯೇ “ಗುಲಾಬಿ ಗ್ಯಾಂಗ್”.ಇದು ರಂಗಭೂಮಿ ಯಲ್ಲಿ ಒಂದು ಹೊಸ ಮೈಲಿಗಲ್ಲಾಗಿದೆ. ಸಂಪತ್ ಪಾಲ್ ಅವರು ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಸಿಡಿದೆದ್ದು ಸಮಾಜದಲ್ಲಿ ಮಹಿಳೆಯರನ್ನು ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತಾರೆ ಅವರ ಜೀವನ ಕತೆ ಅದೆಷ್ಟೋ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿತ್ತು. ಹಾಗಾಗಿ ಇವರ ಜೀವನಾಧಾರಿತ “ಗುಲಾಬಿ ಗ್ಯಾಂಗ್” ಎಂಬ ನಾಟಕವನ್ನು ಕಟ್ಟಿದೆವು. “ಗುಲಾಬಿ ಗ್ಯಾಂಗ್” ಎನ್ನುವುದು ಮಹಿಳೆಯರನ್ನು ಮತ್ತಷ್ಟು ಶಶಕ್ತರನ್ನಾಗಿ ಮಾಡಿ. ಮಹಿಳೆಯರಲ್ಲಿ ಶಕ್ತಿ ತುಂಬಿ ಅವರಿಗೆ ಸ್ಪೂರ್ತಿ ನೀಡುವ ನಾಟಕ. ಎಲ್ಲಾ ವರ್ಗದವರು ಇಷ್ಟಪಡುವಂತಹ ನಾಟಕ ಇದು. ಒಂದು ವರ್ಗದ ಜನರಲ್ಲಿ ಹೆಣ್ಣು ಮಕ್ಕಳು ನಾಟಕ ನೋಡಿದರೆ ಎಲ್ಲಿ ಬದಲಾಗುತ್ತಾರೋ, ಕೆಟ್ಟ ಕಟ್ಟು ಪಾಡುಗಳನ್ನು ಮೀರಿ ಬೆಳೆಯುತ್ತರೋ ಎಂಬ ಭಯ ಹುಟ್ಟಿಸಿದ ನಾಟಕ “ಗುಲಾಬಿ ಗ್ಯಾಂಗ್”. ಮಹಿಳೆಯರಿಗೆ ತಮ್ಮ ಮೇಲಾಗುತ್ತಿರುವ ದೌರ್ಜನ್ಯ ದ ವಿರುದ್ಧ ಧ್ವನಿ ಎತ್ತಬೇಕು ಎಂಬ ಸ್ಪೂರ್ತಿ ತುಂಬಲು ಆರಂಭಿಸಿದ್ದೇ “ಗುಲಾಬಿ ಗ್ಯಾಂಗ್”.

6. ಉ.ಟೈಮ್ಸ್ : ರಂಗಭೂಮಿಯಲ್ಲಿ ಅಭಿನಯದ ಜೊತೆಗೆ ರಂಗ ವೇದಿಕೆಗೆ ಸಂಬಂಧಿಸಿದ ಇತರ ಕೆಲಸಗಳನ್ನು ಅರಿತಿರುವುದು ಎಷ್ಟು ಮುಖ್ಯ..?

ಅತಿಥಿ : ರಂಗಭೂಮಿಯಲ್ಲಿ ನಾಟಕ ಪ್ರದರ್ಶನ ಆಗಬೇಕು ಎನ್ನುವಾಗ ಯಾವುದೇ ಒಂದು ವಿಭಾಗ ಇಲ್ಲ ಅಥವಾ ತಡವಾಯಿತು ಎಂದಾಗ ನಾಟಕ ಪ್ರದರ್ಶನವನ್ನು ನಿಲ್ಲಿಸುವುದು ಅಥವಾ ನಿದಾನಿಸುವುದು ಸರಿಯಲ್ಲ ಹಾಗಾಗಿ ಕಲಾವಿದರಿಗೆ ತಾವು ನಿಲ್ಲುವ ವೇದಿಕೆ ಬಗ್ಗೆ ಸಂಪೂರ್ಣ ಜ್ಞಾನ ಇರಬೇಕು. ವೇದಿಕೆ, ತಂತ್ರಜ್ಞಾನ, ಪ್ರಾಪರ್ಟಿಸ್ ಬಗ್ಗೆ ಮಾಹಿತಿ ಇರಬೇಕು.
ಒಬ್ಬ ಕಲಾವಿದ ಅಭಿನಯದ ಜೊತೆಗೆ ಸೆಟ್ ಹಾಕುವುದು, ಸಂಗೀತ, ಲೈಟಿಂಗ್, ಮೇಕಪ್, ವಸ್ತ್ರ ವಿನ್ಯಾಸ ಈ ಎಲ್ಲಾ ಕೆಲಸಗಳನ್ನು ಅರಿತುಕೊಂಡಿದ್ದಾಗ ಆತ ಇತರರಿಗೆ ಅವಲಂಬಿತವಾಗಿರುವುದು ಕಡಿಮೆ ಆಗುತ್ತದೆ. ಒಂದು ನಾಟಕದಲ್ಲಿ ಯಾವುದೇ ಒಂದು ವಿಭಾಗದವರು ( ಲೈಟಿಂಗ್, ಪ್ರಾಪರ್ಟಿಸ್) ಇಲ್ಲ ಎಂದರೂ ನಾಟಕವನ್ನು ನಿಭಾಯಿಸುವ ಧೈರ್ಯ, ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ರಂಗಭೂವಿಯ ಈ ಎಲ್ಲಾ ಆಯಾಮಗಳನ್ನು ಕಲಿತರೆ ಒಬ್ಬ ನಟ ಅಥವಾ ನಟಿ ಪರಿಪೂರ್ಣ ಕಲಾವಿದರಾಗುತ್ತಾರೆ.

7. ಉ.ಟೈಮ್ಸ್ : ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಆದರೂ ಮಹಿಳೆಯರ ಮೇಲಾಗುವ ದೌರ್ಜನ್ಯಗಳು ಕಡಿಮೆಯಾಗಿಲ್ಲ ಏನು ಹೇಳುತ್ತೀರ?


ಅತಿಥಿ : ದೇಶ ಇಷ್ಟೊಂದು ಅಭಿವೃದ್ಧಿ ಹೊಂದುತ್ತಿರುವ ಇಂತಹ ಸಂದರ್ಭದಲ್ಲಿ ಈಗಲೂ ಮಹಿಳೆ ಮೇಲೆ ಶೋಷಣೆಗಳು ನಡೆಯುತ್ತಿದೆ ಎಂದರೆ ಅದು ನಮ್ಮ ದುರದೃಷ್ಟಾನೆ. ಇದಕ್ಕೆಲ್ಲ ನೈತಿಕ ಶಿಕ್ಷಣದ ಕೊರತೆಯೇ ಕಾರಣ. ಒಬ್ಬ ವ್ಯಕ್ತಿ (ಸ್ತ್ರೀ ಅಥವಾ ಪುರುಷ) ತಾನು ಮನೆಯ ಪರಿಸರದಲ್ಲಿ ಬೆಳೆಯುತ್ತಾ ಸಾಮಾಜಿಕವಾಗಿ ಸಮಾಜದಲ್ಲಿ ಇದ್ದು ಕಲಿಯುವ ಪ್ರಕ್ರಿಯೆಯ ಶಿಕ್ಷಣ ಇಲ್ಲವಾಗಿದೆ. ಯಾರೇ ಆದರೂ ಬದಲಾವಣೆಯೊಂದಿಗೆ ಒಗ್ಗಿಕೊಳ್ಳದೇ ತನ್ನದೇ ಒಂದು ಸೀಮಿತ ವ್ಯಾಪ್ತಿಯಲ್ಲಿ ಬದುಕುವವರು ಯಾವತ್ತೂ ಬದಲಾಗುವುದಿಲ್ಲ. ಸಮಾಜದಲ್ಲಿ ಬೆಳವಣಿಗೆಗೆ ಪೂರಕವಾಗುವ ನೈತಿಕ ಶಿಕ್ಷಣ ಸಿಗದಿದ್ದಾಗ ಆ ವ್ಯಕ್ತಿ ದಾರಿ ತಪ್ಪುತ್ತಾರೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ? ಎಂಬಂತೆ ಒಂದು ಹಂತದ ವ್ಯಾಪ್ತಿಯ ಸುಳಿಗೆ ಸಿಲುಕಿದ ಮೇಲೆ ಯಾರೇ ಆದರೂ ಬದಲಾಗುವುದಿಲ್ಲ. ಉತ್ತಮ ಕಲಿಕೆಗೆ ತುಂಬಾ ಹಾದಿಗಳು ಇವೆ ಆದರೆ ಈ ಉತ್ತಮ ಆಲೋಚನೆಗಳ ಮಾರ್ಗದಲ್ಲಿ ಕರೆದುಕೊಂಡು ಹೋಗುವ ದಾರಿ ಸಿಗುತ್ತಿಲ್ಲ. ಈ ದಿಸೆಯಲ್ಲಿ ಕರೆದುಕೊಂಡು ಹೋಗುವ ಅನಿವಾರ್ಯತೆ ಇದೆ. ಈ ಕೆಲಸ ಬಾಲ್ಯದಿಂದಲೇ ಆಗಬೇಕಿದೆ.

8. ಉ.ಟೈಮ್ಸ್ : ಲಾಕ್ಡೌನ್ ನ ಅವಧಿಯಲ್ಲಿ ಅವಧಿಯಲ್ಲಿ ರಂಗಭೂಮಿ ಎದುರಿಸಿದ ಸವಾಲುಗಳು?


ಅತಿಥಿ : ರಂಗ ಕಲಾವಿದರು ಕಲೆಯನ್ನು ಬದುಕಿನ ಭಾಗವಾಗಿ ಜೀವಿಸುವವರು. ಜನರ ನಡುವೆಯೇ ಬದುಕುವ ಕಲಾವಿದರಿಗೆ ಲಾಕ್ಡೌನ್ ನ ಅವಧಿಯಲ್ಲಿ ಮನೆಯಲ್ಲೇ ಕಟ್ಡಿಹಾಕಿದಂತಾಗಿ ದುಡಿಮೆ ಇಲ್ಲವಾಗಿತ್ತು. ಕಲಾವಿದರಿಗೆ ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಮನೆಯಲ್ಲೇ ಉಳಿಯುವುದು ಅನಿವಾರ್ಯವಾಗಿತ್ತು. ಎಷ್ಟೇ ಕಾರ್ಯಕ್ರಮಗಳನ್ನು ಮಾಡಿದ್ದರೂ ಇದೀಗ ಮತ್ತೆ ಶೂನ್ಯ ದಿಂದ ಆರಂಭಿಸಬೇಕಾಗಿದೆ. ಕಲಾವಿದರು ಕೆಲಸ ಇಲ್ಲದೆ ತಮ್ಮ ತವರೂರಿಗೆ ಮರಳಿದ್ದಾರೆ . ನಾಟಕಗಳು ನಡೆಯುತ್ತಿಲ್ಲ. ತಂಡಗಳು ಮುಚ್ಚಿ ಹೋಗಿವೆ. ಮಕ್ಕಳ ಶಾಲೆಯ ಫೀಸ್, ದಿನನಿತ್ಯದ ಅಗತ್ಯತೆಗಳಿಗೂ ಪರದಾಡುವಂತಾಗಿದೆ. ಕಳೆದ ವರ್ಷ ಮೆಡಿಸಿನ್ ಕಿಟ್ ಗಳನ್ನು ನೀಡಲು ಓಡಾಡಿದ್ದೆವು. ಆದರೆ ಈ ವರ್ಷ ಇನ್ನೂ ಕಷ್ಟವಾಗಿದೆ. ಆದರೂ ಮತ್ತೆ ಹೊಸ ಪ್ರಯತ್ನದೊಂದಿಗೆ ಬದುಕು ಆರಂಭಿಸುವ ಆಶಾಕಿರಣದೊಂದಿಗೆ ಕಾಯುತ್ತಿದ್ದೇವೆ.

9 ಉ.ಟೈಮ್ಸ್ : ಅಕಾಡೆಮಿ ಮತ್ತು ಸರಕಾರದ ಸಹಕಾರ ಹೇಗಿತ್ತು ?

ಅತಿಥಿ : ಸರಕಾರ ಕಳೆದ ವರ್ಷ ಕಲಾವಿದರಿಗೆ 2,000 ಮತ್ತು ಈ ವರ್ಷ 3000 ರೂ ಘೋಷಣೆ ಮಾಡಿದೆ. ಆದರೆ 30-35 ವರ್ಷದೊಳಗಿನ ಕಲಾವಿದರಿಗೆ ಈ ಪರಿಹಾರದ ಮೊತ್ತ ಸಿಕ್ಕಿಲ್ಲ. ಸರಕಾರ ಒಂದಿಷ್ಟು ಹಣವನ್ನು ಘೋಷಣೆ ಮಾಡಿ ಒಂದಷ್ಟು ನಾಟಕೋತ್ಸವಗಳನ್ನು, ಮೈಸೂರು ದಸರ, ಹಂಪಿ ಉತ್ಸವದಂತಹ ಸಾಂಸ್ಕೃತಿಕ ಪರಂಪರೆಯನ್ನು ಮೆರೆಯುವ ಉತ್ಸವಗಳನ್ನು ಮಾಡಿದರೆ ಈ ಉತ್ಸವಗಳಲ್ಲಿ ನಾಟಕ ಕಲಾವಿದರಿಗೆ ತಮ್ಮ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ಭಾಗವಹಿಸಲು ಅವಕಾಶ ನೀಡಿದರೆ ಕಲಾವಿದರಿಗೆ ಸಹಕಾರಿ ಆಗಲಿದೆ. ಸರಕಾರ ರಂಗ ಭೂಮಿ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸಿ ಇಂತಹದ್ದೊಂದು ಕಾರ್ಯಕ್ರಮ ಮಾಡುವ ನಿರೀಕ್ಷೆಯಲ್ಲಿ ಇದ್ದೇವೆ.

10. ಉ.ಟೈಮ್ಸ್: ನಿಮ್ಮ ನಾಟಕ ಕ್ಷೇತ್ರದ ಆಯ್ಕೆಗೆ ಮನೆಯವರ ಸಹಕಾರ ಹೇಗಿತ್ತು..?

ಅತಿಥಿ : ಆರಂಭದಲ್ಲಿ, ನನ್ನ ನಾಟಕ ಹವ್ಯಾಸವನ್ನು ಬಿಡಿಸಬೇಕು ಎಂಬ ಕಾರಣಕ್ಕೆ ಮನೆಯಲ್ಲಿ ನನ್ನನ್ನು ಟ್ಯೂಶನ್ ಕ್ಲಾಸ್ ಗೆ ಸೇರಿಸಿದ್ದರು. ಆದರೆ ನನ್ನಲ್ಲಿ ನಾಟಕ ಕ್ಷೇತ್ರ ಎನ್ನುವುವಂತದ್ದು ಎಷ್ಟು ಆವರಿಸಿತ್ತು ಎಂದರೆ ಟ್ಯೂಶನ್ ಕ್ಲಾಸ್ ನಲ್ಲಿಯೇ ಒಂದು ನಾಟಕ ತಂಡವನ್ನು ಕಟ್ಟಿಕೊಂಡಿದ್ದೆ ನಾನು. ನನ್ನ ವೈವಾಹಿಕ ಜೀವನದ ಬಗ್ಗೆ ತಿಳಿಸುದಾದರೆ ನನ್ನ ಪತಿ ರಂಗಭೂಮಿ ಯಲ್ಲಿ ಇದ್ದು ಜೀವಿಸುತ್ತಿರುವವರು. ಇಬ್ಬರಿಗೂ ರಂಗಭೂಮಿಯೇ ಬದುಕು. ನಮಗೆ ಇದೊಂದು ಬಣ್ಣದ ಬದುಕು. ನಾವಿಬ್ಬರೂ ಬದಕನ್ನು ಪ್ರೀತಿಸುತ್ತೇವೆ. ಎಲ್ಲಾ ಸಂದರ್ಭಗಳಲ್ಲಿಯೂ ನನಗೆ ಮಾರ್ಗದರ್ಶನ ನೀಡಿ ಸಲಹೆ ನೀಡುತ್ತಾರೆ, ನನ್ನನ್ನು ತಿದ್ದುತ್ತಾರೆ. ಇರುವ ಲೈಫ್ ನ ಖುಷಿ ಖುಷಿ ಯಾಗಿ ಕಳೆಯಬೇಕು ಎನ್ನುವವರು ನಾವು

11. ಉ.ಟೈಮ್ಸ್ : ರಂಗಭೂಮಿಯ ಅನುಭವ ಅಭಿನಯ ಕ್ಷೇತ್ರಕ್ಕೆ ಅಡಿಪಾಯ ನೀಡುತ್ತದೆ.?

ಅತಿಥಿ : ಪ್ರತಿಯೊಂದು ಅಭಿನಯ ಕ್ಷೇತ್ರವೂ ಅದರದ್ದೇ ಆದ ವಿಶೇಷತೆ ಹೊಂದಿರುತ್ತದೆ. ಪರಿಪೂರ್ಣತೆ ಎನ್ನುವಂತದ್ದು ಎಲ್ಲಾ ಕ್ಷೇತ್ರದಲ್ಲಿ ಇರುತ್ತದೆ ಅದು ಹಿರಿತೆರೆ ಆಗಿರಬಹುದು, ಕಿರುತೆರೆ ಆಗಿರಬಹುದು ಅಥವಾ ನಾಟಕ ಕ್ಷೇತ್ರವೇ ಆಗಿರಬಹುದು. ಆದರೆ ಅಭಿನಯ ಕ್ಷೇತ್ರದಲ್ಲಿ ರಂಗಭೂಮಿ ಕಲಾವಿದರಿಗೆ ಹೆಚ್ಚಿನ ಪ್ರಾಶ್ಯಸ್ತ್ಯ ಅಥವಾ ರಂಗಭೂಮಿ ಅಭಿನಯಕ್ಕೆ ಅಡಿಪಾಯ ಹಾಕಿಕೊಡುತ್ತದೆ ಎಂದು ಯಾಕೆ ಹೇಳುತ್ತಾರೆ ಅಂದರೆ ರಂಗಭೂಮಿ ಯಲ್ಲಿ ಕಲಾವಿದರು ಪಳಗಿರುತ್ತಾರೆ. ಇಲ್ಲಿ ಅಭಿನಯದ ಜೊತೆಗೆ ಎಲ್ಲಾ ತರಬೇತಿ ನೀಡುವುದರಿಂದ ಒಬ್ಬ ನಟ ಅಥವಾ ನಟಿ ಪರಿಪೂರ್ಣ ಕಲಾವಿದರಾಗಿರುತ್ತಾರೆ. ಇದು ಒಂದು ಉತ್ತಮ ವೇದಿಕೆಯನ್ನು ರೂಪಿಸುತ್ತದೆ. ಇಲ್ಲಿ ನಟನೆ ಅಚ್ಚುಕಟ್ಟಾಗಿ ಮೂಡಿ ಬರುತ್ತದೆ.

12. ಉ.ಟೈಮ್ಸ್ : ಒಬ್ಬ ಸ್ತ್ರೀ, ಪುರುಷರ ವೇಷಧರಿಸಿ ಅಭಿನಯಿಸುವುದು ಎಷ್ಟು ಕಷ್ಟ.. ನಿಮ್ಮ ಅನುಭವ ?

ಅತಿಥಿ : ಬಾಲ್ಯದಲ್ಲಿ ಹೆಚ್ಚಾಗಿ ನಾನಗೆ ಗಂಡಿನ ವೇಷಗಳೇ ಸಿಗುತ್ತಿದ್ದವು. ಬಾಲ್ಯದಲ್ಲಿ ಗಂಡಿನ ವೇಷ ಧರಿಸುವಾಗ ಅಂತಹ ಸಮಸ್ಯೆ ಆಗಿರಲಿಲ್ಲ. ಕಾರಣ ಅಗ ನನಗೆ ಪಾತ್ರ ಮುಖ್ಯವಾಗಿತ್ತೇ ವಿನಹ ಅದು ಗಂಡು ಹೆಣ್ಣು ಎಂಬುದಲ್ಲ. ಆದರೆ ಕೆಲವೊಂದು ಪಾತ್ರಗಳ ವೇಷಗಳು ಮಾಡುವಾಗ ಪುರುಷರ ಹಾವ ಭಾವ ,ದೇಹ ಭಾಷೆ, ಪುರುಷರ ಮ್ಯಾನರಿಸಮ್ ನ ಸ್ವಲ್ಪ ಸಮಸ್ಯೆ ಆಗುತ್ತಿತ್ತು.

13 ಉ.ಟೈಮ್ಸ್ : ಅತೀ ಹೆಚ್ಚು ಪ್ರದರ್ಶನಗೊಂಡ ನಿಮ್ಮ ನಾಟಗಳು
ಅತಿಥಿ : ನಮ್ಮ ತಂಡದಲ್ಲಿ 3 ನಾಟಕಗಳು ಅತೀ ಹೆಚ್ಚು ಪ್ರದರ್ಶನ ಗೊಂಡಿದೆ. ಈ ಪೈಕಿ “ಗುಲಾಬಿ ಗ್ಯಾಂಗ್” 60 ಬಾರಿ ಪ್ರದರ್ಶನ ಕಂಡಿದೆ. “ಚಂದ್ರಗಿರಿ ತೀರದಲ್ಲಿ” 40 ಬಾರಿ ಹಾಗೂ ಭೂಮಿ 50 ಬಾರಿ ಪ್ರದರ್ಶನ ಕಂಡಿದೆ.

14, ಉ.ಟೈಮ್ಸ್ : ಊರಿನಿಂದ ಬೆಂಗಳೂರಿನ ಪಯಣ

ಅತಿಥಿ : ಅಜ್ಜನ ಹೋಟೆಲ್ ಉದ್ಯಮದ ನಿಮಿತ್ತ ಊರಿನಿಂದ ಬೆಂಗಳೂರಿಗೆ ಪಯಣ ಬೆಳೆಸಿದ್ದೆವು. ನಾಟಕ ನನ್ನ ಜೀವನದ ಒಂದು ಬಾಗವಾಗಿತ್ತು. ಹಾಗಾಗಿ ನನಗೆ ಎಲ್ಲರಂತೆ ಅಜ್ಜಿ ಮನೆ, ಊರಿಗೆ ಹೋಗುವುದು ಇವುಗಳಲ್ಲೆಲ್ಲಾ ಆಸಕ್ತಿ ಇರಲಿಲ್ಲ ಹಾಗೊಂದು ವೇಳೆ ಅಜ್ಜಿ ಮನೆಗೆ ಬಂದರೂ ನಾಟಕದ ರಿಹರ್ಸಲ್ ತಪ್ಪಿಹೋಯಿತಲ್ಲಾ ಎನ್ನುವ ಭಾವನೆ ಕಾಡಲಾರಂಭಿಸುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಹಳ್ಳಿಯ ಆಚಾರ ವಿಚಾರಗಳು ಇಷ್ಟವಾಗುತ್ತಾ ಹೋದವು. ಅಲ್ಲಿನ ಸಂಸ್ಕೃತಿಗಳೊಂದಿಗೆ ಬೆರೆಯಲು ಆರಂಭಿಸಿದೆ ಇದು ನನ್ನ ಚಂದ್ರಗಿರಿಯ ತೀರದಲ್ಲಿ ನಾಟಕ ಕಟ್ಟಲು ಸಹಕಾರಿಯಾಗಿತ್ತು. ನಾಟಕದಲ್ಲಿ ಹಳ್ಳಿಯ ಸಾಂಸ್ಕೃತಿಕ ಸೊಗಡನ್ನು ಅಳವಡಿಸಲು ತುಂಬಾ ಸಹಕಾರಿಯಾಯಿತು.

15. ಉ.ಟೈಮ್ಸ್ : ಯುವ ಪೀಳಿಗೆ ರಂಗಭೂಮಿ ಕಡೆಗೆ ಆಕರ್ಷಣೆ ಆಗುತ್ತಿದ್ದೆ ಎನ್ನುತ್ತೀರಾ ?

ಅತಿಥಿ : ಖಂಡಿತವಾಗಿಯೂ ಯುವ ಜನರು ನಾಟಕದ ಕುರಿತಾಗಿ ಒಲವು ಹೊಂದಿದ್ದಾರೆ. ಈಗಲೂ ಜನ ನಾಟಕವನ್ನು ಇಷ್ಟಪಡುತ್ತಾರೆ. ಕಲೆ ಪ್ರದರ್ಶನ ಕ್ಕೆ ಬೇರೆ ಬೇರೆ ಆಯ್ಕೆ ಗಳಿದ್ದರೂ ನಾಟಕ ತುಂಬಾ ನೈಜವಾದದ್ದು ಹಾಗೂ ಹತ್ತಿರವಾದದ್ದು. ಯುವ ಪೀಳಿಗೆ ನಾಟಕದ ಕಡೆಗೆ ಒಲವು ತೋರುತ್ತಿರುವುದರಿಂದಲೇ ರಾಜ್ಯದಲ್ಲಿ ಹೊಸ ಹೊಸ ತಂಡಗಳು ಹುಟ್ಟಿ ಕೊಳ್ಳುತ್ತಿವೆ. ಹೊಸ ಹೊಸ ಪ್ರಯತ್ನಗಳು ನಡೆಯುತ್ತಿದೆ.

16. ಉ.ಟೈಮ್ಸ್ : ಅಭಿವೃದ್ಧಿ ಹೊಂದುತ್ತಿರುವ ಆಧುನಿಕ ಸಾಮಜಿಕ ಜಾಲತಾಣಗಳು ಹಾಗೂ ತಂತ್ರಜ್ಞಾನದ ಮಾದ್ಯಮಗಳು ರಂಗಭೂಮಿ ಮೇಲೆ ಪರಿಣಾಮ ಬೀರುತ್ತಿದೆಯೇ..?

ಅತಿಥಿ : ಯಾವುದೇ ಮಾಧ್ಯಮಗಳು ನಾಟಕ ರಂಗದ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ. ಎಲ್ಲಾ ಮಾಧ್ಯಮ ಗಳು ಸಿನೆಮಾ, ಸಮಾಜಿಕ ಜಾಲತಾಣಗಳು, ವೆಬ್ಸೈಟ್ ಗಳು ಯಾವುದೇ ಆದರೂ ಅದು ಅದರ ಪಾಡಿಗೆ ಇದೆ. ಅದು ನಾಟಕ ರಂಗದ ಮೇಲೆ ಪ್ರಭಾವ ಬೀರುತ್ತದೆ ಎನಿಸುವುದಿಲ್ಲ. ನಾಟಕ ರಂಗವು ತನ್ನ ಪಾಡಿಗೆ ತನ್ನ ವರ್ಚಸ್ಸು ಉಳಿಸಿಕೊಂಡಿದೆ. ಇನ್ಯಾವುದೇ ಬೃಹತ್ತಾದ ಮಾಧ್ಯಮ ಬಂದರೂ ನಾಟಕ ರಂಗ ತನ್ನ ಅಸ್ಥಿತ್ವವನ್ನು ಹಾಗೇ ಉಳಿಸಿ ಕೊಳ್ಳಲಿದೆ ಎನ್ನುವುದು ನನ್ನ ಅಭಿಪ್ರಾಯ

17. ಉ.ಟೈಮ್ಸ್ : ಒಬ್ಬ ಉತ್ತಮ ಕಲಾವಿದರಿಗೆ ಇರಬೇಕಾದ ಗುಣಗಳು ಯಾವುದು?
ಅತಿಥಿ : ಯಾವುದೇ ವ್ಯಕ್ತಿಗೆ ನೀನು ಹೀಗೆ ಇರಬೇಕು ಎನ್ನುವುದು ಸರಿಯಲ್ಲ ಆದರೆ ಕಲಾವಿದನಾದವ ಸಾತ್ವಿಕತೆಯ ಭಾವ ಹೊಂದಿದ್ದರೆ ಅವನೊಬ್ಬ ಉತ್ತಮ ಕಲಾವಿದನಾಗುತ್ತಾನೆ. ಎಲ್ಲವನ್ನೂ ಜೊತೆಗೆ ಕರೆದುಕೊಂಡು ಹೋಗುವ ಅಂತಹಕರಣದ ಗುಣ ಇರಬೇಕು. ಸಾತ್ವಿಕತೆ ಇದ್ದಾಗ ಯಾವುದೇ ಪಾತ್ರ ಮಾಡಿದರೂ ಅಹಂ ಇರುವುದಿಲ್ಲ. ಹಾಗಾಗಿ ಕಲಾವಿದನಿಗೆ ಸಾತ್ವಿಕತೆ, ಅಂತಹಕರಣದ ಗುಣ ಮುಖ್ಯ ಹಾಗೂ ಉತ್ತಮವಾಗಿರುತ್ತದೆ.

18. ಉ.ಟೈಮ್ಸ್ : ಯುವ ಕಲಾವಿದರಿಗೆ ನಿಮ್ಮ ಸಲಹೆಗಳು ?

ಅತಿಥಿ :ಯಾರೇ ಆದರೂ ತಾನೊಬ್ಬ ನಟ ಅಥವಾ ನಟಿ ಆಗಬೇಕು ಎನ್ನುತ್ತಾ ರಂಗಭೂಮಿ ಕ್ಷೇತ್ರಕ್ಕೆ ಬರಬಾರದು ತಾನೊಬ್ಬ ಕಲಾವಿದನಾಗಬೇಕು ಎಂದು ಬರಬೇಕು. ರಂಗ ಭೂಮಿಯಲ್ಲಿ ಯಾವುದೇ ಭೇಧ ಇರುವುದಿಲ್ಲ ಹಾಗಾಗಿ ಸಲಹೆ ಎನ್ನುವುದಕ್ಕಿಂತ ಎಲ್ಲರೂ ಜೊತೆಯಾಗಿ ಸಾಗೋಣ ಜೊತೆಗೆ ಬೆಳೆಯೋಣ ಕುವೆಂಪು ಅವರ ಮಾತಿನಂತೆ ಎಲ್ಲರೂ ವಿಶ್ವಮಾನವರಾಗೋಣ ಎಂಬ ಆಶಯ ಅಷ್ಟೇ.

19. ಉ.ಟೈಮ್ಸ್ : ನಿಮ್ಮಿಷ್ಟದ ನಾಟಕಕಾರರು ಹಾಗೂ ಇಷ್ಟದ ನಾಟಕ ?

ಅತಿಥಿ : ಯಾವುದೇ ಒಬ್ಬ ನಿರ್ದಿಷ್ಟ ನಾಟಕಕಾರ(ನಾಟಕ ನಿರ್ದೇಶಕರು), ಅಥವಾ ನಾಟಕ ಇಷ್ಟ ಅಂತ ಹೇಳುವುದು ತುಂಬಾ ಕಷ್ಟ. ಎಲ್ಲಾ ನಾಟಕ ರಚನಾಕಾರರ ನಾಟಕಗಳು ಅವರದ್ದೇ ಆದ ವಿಶೇಷ ಶೈಲಿಯಲ್ಲಿ ಇರುತ್ತದೆ. ಎಲ್ಲವೂ ಕಲಿಕೆಗೆ ಪೂರಕವಾಗಿರುತ್ತದೆ. ಹಾಗಾಗಿ ಎಲ್ಲವೂ ಇಷ್ಟವಾಗುತ್ತದೆ.
ನಾನು ಜೊತೆಯಾಗಿ ಕೆಲಸ ಮಾಡಿದ ಎಲ್ಲಾ ನಿರ್ದೇಶಕರುಗಳೂ ನನಗೆ ಗುರುಗಳೇ ನಾನು ನೋಡಿದ ಎಲ್ಲಾ ನಾಟಕಗಗಳೂ ಇಷ್ಟವೇ. ಆದರೆ ಬಾಲ್ಯದಲ್ಲಿ ನಾನು ಅಭಿನಯ ಮಾಡಿದ ಕುವೆಂಪು ಅವರ “ನನ್ನ ಗೋಪಾಲ” ನಾಟಕ ತುಂಬಾ ಇಷ್ಟವಾಗಿದೆ.

20. ಉ.ಟೈಮ್ಸ್ : ಒಂದು ನಾಟಕ ತಂಡದಲ್ಲಿ ನಾಟಕದ ಥೀಮ್ ಜೊತೆಗೆ ಇತರ ಅಂಶಗಳೂ ಮುಖ್ಯವಾಗುತ್ತದೆಯೇ?.

ಅತಿಥಿ : ಖಂಡಿತವಾಗಿಯೂ ಹೌದು, ಕೆಲವೊಂದು ಬಾರಿ ಪ್ರಾಯೋಗಿಕವಾಗಿ ನಾಟಕಗಳನ್ನು ಮಾಡುತ್ತೇವೆ ಅದು ಯಶಸ್ವಿ ಆಗಿದೆ ಆದರೆ ಜನರ ಮನ ಮುಟ್ಟುವಂತಹ ಅದರಲ್ಲೂ ನಾಟಕಗಳು ಜನರ ಆಳ ಮನಸ್ಸನ್ನು ಮುಟ್ಟಬೇಕಾದರೆ ಅದಕ್ಕೆ ಪೂರಕವಾದ ಇತರ ಅಂಶಗಳಾದ ಸಂಗೀತ, ವೇಷ ಭೂಷಣ, ಕಲಾವಿದರ ಅಭಿನಯ, ಲೈಟಿಂಗ್ಸ್, ಪ್ರಾಪರ್ಟಿಸ್‍ಗಳು ತುಂಬಾನೇ ಅಗತ್ಯವಾಗಿರುತ್ತದೆ. ಅದು ಸೂಕ್ತ ಕೂಡಾ ಒಳ್ಳೆದು ಕೂಡಾ.

21. ಉ.ಟೈಮ್ಸ್ : ರಂಗ ಭೂಮಿಯಿಂದ ನೀವು ಪಡೆದದ್ದು?

ಅತಿಥಿ : ರಂಗಭೂಮಿ ನನಗೆ ಬದುಕುವುದನ್ನು ಕಲಿಸಿಕೊಟ್ಟಿದೆ. ಜೀವಿಸುವುದನ್ನು ಕಲಿಸಿಕೊಟ್ಟಿದೆ. 2016 ರಲ್ಲಿ ಒಂದು ಹಂತದಲ್ಲಿ ಇನ್ನೇನು ನನ್ನಿಂದ ಏನು ಸಾಧ್ಯ ಇಲ್ಲ ಎಂದು ಭರವಸೆ ಕಳೆದುಕೊಂಡಿದ್ದೆ. ಆಗ ರಂಗಭೂಮಿ ನನಗೆ ಆಮ್ಲಜನಕ ದಂತೆ ಸಹಕಾರಿಯಾಗಿತ್ತು. ನಾನು ಮತ್ತೆ ಹೊಸ ಭರವಸೆಗಳೊಂದಿಗೆ ನಾಟಕಗಳನ್ನು ಮಾಡಲಾರಂಬಿಸಿದಾಗ ಹೊಸ ಹೊಸ ಉತ್ಸಾಹ ಗಳು ಜೀವನದಲ್ಲಿ ಪಡೆದುಕೊಂಡೆ.ಇದು ಸಾಧ್ಯ ಆಗಿದ್ದು ರಂಗ ಭೂಮಿಯಿಂದಲೇ. ಇದರ ಜೊತೆಗೆ ಬೇರೆಯವರನ್ನು ಪ್ರೀತಿಸಬೇಕು ಎನ್ನುವುದನ್ನು ಕಲಿಸಿಕೊಟ್ಟಿದೆ. ಎಷ್ಟೇ ಕಷ್ಟ ಬಂದರೂ ಬದುಕುವ ಆತ್ಮವಿಶ್ವಾಸ ತಂದು ಕೊಟ್ಟಿದೆ. ರಂಗಭೂಮಿ ನಾನು ತಿನ್ನುವ ಅನ್ನ ಕೊನೆ ವರೆಗೂ ರಂಗಭೂಮಿ ನನ್ನ ಉಸಿರು ನನ್ನ ಬದುಕು.

22. ಉ.ಟೈಮ್ಸ್ : ಮಹಿಳೆಯರು ಇಬ್ಬಗೆಯ ಪಾತ್ರದ ಬಗ್ಗೆ ಏನು ಹೇಳುತ್ತೀರಾ ?

ಅತಿಥಿ : ಮನೆ ಕಚೇರಿ ಎನ್ನುತ್ತಾ ಇಬ್ಬಗೆಯ ಪಾತ್ರ ಮಾಡುವ ಮಹಿಳೆಯರು ನಿಜವಾಗಿಯೂ ಜಗತ್ತಿನ ಅದ್ಬುತ ಶಕ್ತಿ. ನಾನೂ ಹೆಣ್ಣಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ

23. ಉ.ಟೈಮ್ಸ್ : ಪ್ರಶಸ್ತಿಗಳು, ಸನ್ಮಾನಗಳು ನಿಮ್ಮನ್ನು ಅರಸಿ ಬಂದಾಗ ?
ಅತಿಥಿ : ನನಗೆ ಜನರ ಚಪ್ಪಾಳೆಯೇ ನಿಜವಾದ ಬಿರುದು ಪ್ರಶಸ್ತಿಗಳು ನಾನು ಮಾಡಿದ ನಾಟಕಗಳೇ ನನಗೆ ಅವಾರ್ಡ್‍ಗಳು. ನಾನು ಕಟ್ಟಿದ ನಾಟಕಗಳಿಂದ ಪ್ರೇರಿತರಾಗಿ ಪೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದಾಗ ಆ ಖುಷಿ ದೊಡ್ಡ ದೊಡ್ಡ ಪ್ರಶಸ್ತಿಗಳಿಗೆ ಸರಿಸಮವಾಗಿರುತ್ತಿತ್ತು.

24. ಉ.ಟೈಮ್ಸ್ : ನಿಮ್ಮ ಜೀವನದ ಮರೆಯಲಾಗದ ಘಟನೆ?

ಅತಿಥಿ : ನನ್ನ ಜೀವನದಲ್ಲಿ ಮರೆಯಲಾಗದ ಘಟನೆಗಳು ತುಂಬಾ ಇವೆ. ಅವುಗಳ ಪೈಕಿ ಬಾಲ್ಯದಲ್ಲಿ ದೆಹಲಿಯಲ್ಲಿ ನಡೆದ ಒಂದು ರಾಷ್ಟ್ರೀಯ ಮಟ್ಟದ ನಾಟಕ ಸ್ಪರ್ಧೆ ಯಲ್ಲಿ ನಾನು ಮಾಡಿದ ಸಣ್ಣ ಪಾತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದ್ದು ಎಂದೆಂದಿಗೂ ನಾನು ಮರೆಯಲು ಸಾಧ್ಯವಿಲ್ಲ. ನಂತರ ನಾನು ಮಾಡಿದ ಚಂದ್ರಗಿರಿ ತೀರದಲ್ಲಿ ನಾಟಕಕ್ಕೆ ಸಿಕ್ಕ ಪ್ರತಿಕ್ರಿಯೆ. 2015 ರಲ್ಲಿ ಮೊದಲ ನಾಟಕ ನಿರ್ದೇಶನದ ಸಮಯದಲ್ಲಿ ತುಂಬಾ ನರ್ವಸ್ ಆಗಿದ್ದೆ ಆಗ ಪ್ರದರ್ಶನದ ವೇಳೆ ಸಭಾಂಗಣದ ಹೊರಗೆ ಗಲಾಟೆ ಕೇಳುತ್ತಿತ್ತು. ಏನು ಅಂತ ಕೇಳಿದಾಗ ಟಿಕೆಟ್ ಖಾಲಿ ಆಗಿದೆ ಎಂದೂ ಜನ ಗಲಾಟೆ ಮಾಡುತ್ತಿದ್ದಾರೆ ಅಂತ ಹೇಳಿದ್ದ ಅಲ್ಲಿನ ಹುಡುಗ. ಆಗ ಒಂದು ಕ್ಷಣ ಕಣ್ಣಲ್ಲಿ ನೀರು ಬಂದು ಬಿಟ್ಟಿತ್ತು. 300 ಸೀಟ್ ಇತ್ತು ಎಲ್ಲವೂ ಖಾಲಿಯಾಗಿತ್ತು. ನೋಡಿದರೆ ಮತ್ತೂ 500 ಕ್ಕೂ ಅಧಿಕ ಜನ ಕಾಯುತ್ತಿದ್ದರು. ನನಗೆ ನಂಬಲಿಕ್ಕೆ ಸಾಧ್ಯ ಆಗಿರಲಿಲ್ಲ. ಆ ಕ್ಷಣ ಹೆಚ್ಚು ದುಡ್ಡು ಬಂದಿದೆ ಎನ್ನುವುದಕ್ಕಿಂತ ನಾಟಕವನ್ನು ಅಷ್ಟೋಂದು ಮಂದಿ ಪ್ರೀತಿಸುತ್ತಾರಲ್ಲ ಅಂತ ಖುಷಿ ಆಯ್ತು. ನಾಟಕ ನೋಡಿದ ಅನೇಕರು ಅದರಿಂದ ಪ್ರೇರಿತರಾಗಿ ಪ್ರತಿಕ್ರಿಯೆ ನೀಡಿದಾಗ ಜೀವನ ಸಾರ್ಥಕ ಅನ್ನಿಸುತ್ತಿತ್ತು.

25. ಉ.ಟೈಮ್ಸ್ : ಪ್ರತಿಯೊಂದು ನಾಟಕಕ್ಕೂ ಪ್ರತೀ ಬಾರಿ ಹೊಸ ತಯಾರಿ ಅಗತ್ಯ ಎನ್ನುತ್ತಾರೆ ನಿಮ್ಮ ಅಭಿಪ್ರಾಯ?

ಅತಿಥಿ : ಖಂಡಿತವಾಗಿಯೂ ಹೌದು ಒಂದೊಂದು ಪಾತ್ರಗಳೂ ಭಿನ್ನವಾಗಿರುತ್ತದೆ. ಆಗ ಪ್ರತಿಯೊಂದು ನಾಟಕ ಆರಂಬಿಸುವಾಗಲೂ ಶೂನ್ಯದಿಂದ ಆರಂಭಿಸಬೇಕಾಗುತ್ತದೆ. ರಂಗ ಭೂಮಿ ಗ್ಲಾಮರ್ ಅಲ್ಲ ಅದು ಶಿಸ್ತನ್ನು , ಡೆಡಿಕೇಶನ್‍ನ್ನು ಕೇಳುತ್ತದೆ. ಹಾಗೂ ಹೊಸ ಹೊಸ ಕಲಿಕೆಗೆ ಅವಕಾಶ ನೀಡುತ್ತದೆ.

26 ಉ.ಟೈಮ್ಸ್ : ರಂಗ ಭೂಮಿಯ ಪಯಣದಲ್ಲಿ ನಿಮಗೆ ಕಷ್ಟ ಎನ್ನಿಸಿದ್ದು,?

ಅತಿಥಿ : ರಂಗ ಪಯಣ ಆರಂಭಿಸುವುದಕ್ಕೂ ಮುನ್ನ 40 ನಾಟಕ ತಂಡಗಳ ಜೊತೆ ಕೆಲಸ ಮಾಡಿದ್ದೆ. ಆಗೆಲ್ಲಾ ತಿಂಗಳಲ್ಲಿ 20 ದಿನ ನಾಟಕ ಇರುತ್ತಿತ್ತು. ಆಗ ಎಲ್ಲಿ ಒಂದು ನಾಟಕದ ಡೈಲಾಗ್ ನ್ನು ಇನ್ನೊಂದು ನಾಟಕಕ್ಕೆ ಹೇಳುತ್ತೇನೋ ಎನ್ನುವ ಭಯ ಆಗುತ್ತಿತ್ತು. ಈ 40 ತಂಡಗಳು ನನ್ನು ಪೋಷಿಸಿದೆ ಆ ತಂಡಗಳಿಗೆ ನಾನು ಸದಾ ಕೃತಜ್ಞಳಾಗಿರುತ್ತೇನೆ.

ನಯನ ಸೂಡರವರು ರಂಗ ಭೂಮಿ ಸೇವೆ ಜೊತೆಗೆ ರಾಜ್ಯ ಮಟ್ಟದ ಆಶುಭಾಷಣ ಚರ್ಚಾ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದ ಡಿಬೇಟರ್ ಆಗಿ ಭಾಗವಹಿಸಿದ್ದಾರೆ. ಅಲ್ಲದೆ ಹರಿಕತೆ ಕಲಿತಿದ್ದು ಹರಿಕತೆಯ ಸ್ಪರ್ಧೆ ಗಳಲ್ಲಿಯೂ ಭಾಗವಹಿಸುತ್ತಿದ್ದರು.
ಇವರ ರಂಗಭೂಮಿ ಕ್ಷೇತ್ರದ ಅಭೂತ ಪೂರ್ವ ಸಾಧನೆ ಹಾಗೂ ಇವರ ನಟನೆಗೆ ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿ. ಸುವರ್ಣ ಮತ್ತು ಕನ್ನಡ ಪ್ರಭಾದ ವತಿಯಿಂದ ಮಹಿಳಾ ಸಾಧಕಿ ಎಂಬ ಪ್ರಶಸ್ತಿಗಳು ಹಾಗೂ ಗೌರವಗಳು ಸಿಕ್ಕಿದೆ. ಅಲ್ಲದೆ ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿದೆ. ಅಲ್ಲದೆ ಇವರಿಗೆ ಅತ್ಯುತಮ ಬಾಲ ನಟನ ಪ್ರಶಸ್ತಿಯೂ ಲಭಿಸಿವೆ.

ಇವರು ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳನ್ನ ನೀಡಿದ್ದಾರೆ. ಇವರು ಹಲವಾರು ನಾಟಕಗಳ ನಿರ್ದೇಶನ ಕೂಡ ಮಾಡಿದ್ದಾರೆ. ನಾಟಕಕ್ಕೆ ಸೆಟ್ ಹಾಕುವುದು, ಮೇಕಪ್ ಮಾಡುವುದು, ವಸ್ತ್ರ ವಿನ್ಯಾಸ ಮಾಡುವುದು ಹೀಗೆ ರಂಗಭೂಮಿಯ ಹಲವಾರು ಕೆಲಸಗಳನ್ನು ಇವರೇ ಮಾಡುತ್ತಾರೆ.

ರಂಗಭೂಮಿ ಎಂಬ ಮಹಾ ಸಾಗರದಲ್ಲಿ “ರಂಗ ಪಯಣ” ಎಂಬ ದೋಣಿಯಲ್ಲಿ ಸಾಗುತ್ತಿರುವ ಇವರ ಪಯಣದಲ್ಲಿ ಇನ್ನಷ್ಟು ಯಶಸ್ಸು ಸಿಗುವಂತಾಗಲಿ ಎಂಬುದು ಉಡುಪಿ ಟೈಮ್ಸ್ ನ ಶುಭ ಹಾರೈಕೆ.

Leave a Reply

Your email address will not be published.

error: Content is protected !!