ಬಡಗುತಿಟ್ಟು ಯಕ್ಷ ಆಕಾಶದ ಕೋಲ್ಮಿಂಚು – ರಮೇಶ್ ಬೇಲ್ತೂರು

ಲೇಖನ ಹಾಗೂ ಸಂದರ್ಶನ: ನಾಗರತ್ನ .ಜಿ .ಹೇರ್ಳೆ

(ಉಡುಪಿ ಟೈಮ್ಸ್ ) :ಬಡಗುತಿಟ್ಟು ಯಕ್ಷಗಾನ ಕ್ಷೇತ್ರ ಅನೇಕ ಸುಪ್ರಸಿದ್ಧ ಪುಂಡು ವೇಷಧಾರಿಗಳನ್ನು ನೋಡಿದೆ. ಅವರೆಲ್ಲರೂ ಒಂದೊಂದು ರೀತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಜನಮಾನಸದಲ್ಲಿ ನೆಲೆಯಾದವರು. ಹಾಗೆಯೇ ಅವರಲ್ಲಿ ಕೆಲವರು ಹಲವಾರು ವರ್ಷಗಳ ಕಾಲ ಚಾಲ್ತಿಯಲ್ಲಿದ್ದು ಸುದೀರ್ಘ ಕಾಲ ಯಕ್ಷಮಾತೆಯ ಸೇವೆಯನ್ನು ಮಾಡಿದವರು. ಅಂತಹವರಲ್ಲಿ ಸತತ 53 ವರ್ಷಗಳ ಕಾಲ ಯಕ್ಷಗಾನ ಮೇಳದಲ್ಲಿ ವೃತ್ತಿ ತಿರುಗಾಟ ಮಾಡಿದ, ತನ್ನ ಮಿಂಚಿನ ನಾಟ್ಯವೈಖರಿ, ಉತ್ತಮ ಲಯ, ವಿಶಿಷ್ಟ ರಂಗನಡೆ, ಚುರುಕಿನ ಮಾತಿನ ಧಾಟಿಯಿಂದ ಬಡಗುತಿಟ್ಟು ಯಕ್ಷರಂಗವನ್ನು ಮೋಡಿ ಮಾಡಿದ ಓರ್ವ ಅಪೂರ್ವ ಪುಂಡುವೇಷಧಾರಿ ರಮೇಶ್ ಬೇಲ್ತೂರು ಉಡುಪಿ ಟೈಮ್ಸ್ ವಾರದ ವ್ಯಕ್ತಿ.

 • ಉ.ಟೈಮ್ಸ್: ನಿಮ್ಮ ಬಾಲ್ಯ ಹಾಗೂ ತಂದೆ ತಾಯಿ ಬಗ್ಗೆ ನಮಗೆ ತಿಳಿಸಿಕೊಡ್ತೀರಾ?

ಅತಿಥಿ :ನನ್ನ ತಂದೆ ರಾಮ ನಾಯ್ಕ ಮತ್ತುತಾಯಿ ರುಕ್ಕು ದಂಪತಿಗಳ ಮೂರನೆಯ ಪುತ್ರನಾಗಿ ಜನಿಸಿದ ನಾನು ಐದನೆಯ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದೇನೆ. ನಂತರ ಓದನ್ನು ಅರ್ಧಕ್ಕೇ ನಿಲ್ಲಿಸಿ ಊರಿನಲ್ಲಿ ನಡೆಯುತ್ತಿರುವ ಯಕ್ಷಗಾನವನ್ನು ಕುತೂಹಲದ ಕಣ್ಣುಗಳಿಂದ ವೀಕ್ಷಿಸುತ್ತಾ ಅಲ್ಲಿ ಬರುವ ಬಣ್ಣ ಬಣ್ಣದ ಪಾತ್ರಗಳಿಗೆ ಮರುಳಾಗಿ ಯಕ್ಷಗಾನದತ್ತ ಆಕರ್ಷಿತನಾದೆ . ಯಕ್ಷಗಾನದ ಗೀಳು ಅಧಿಕವಾದಾಗ ಮನೆಯವರಿಗೆ ಹೇಳದೇ ಯಕ್ಷಗಾನ ಮೇಳವನ್ನು ಸೇರಿಯೇಬಿಟ್ಟೆ. ನಂತರ ಆ ಕ್ಷೇತ್ರವನ್ನೇ ವೃತ್ತಿಯನ್ನಾಗಿ ಆರಿಸಿಕೊಂಡೆ. ಸತತ 53 ವರ್ಷಗಳ ಕಾಲ ವಿವಿಧ ಮೇಳದಲ್ಲಿ ತಿರುಗಾಟ ಮಾಡಿ ಯಕ್ಷಮಾತೆಯ ಸೇವೆ ಮಾಡಿದೆ. ನಂತರ ತರುವಾಯ ಮೇಳದಿಂದ ನಿವೃತ್ತಿ ಹೊಂದಿ ವಿಶ್ರಾಂತ ಜೀವನ ಈಗ ನಡೆಸುತ್ತಿದ್ದೇನೆ. ಆದರೆ 2018ರಿಂದ ಸೌಕೂರು ಮೇಳದ ಯಜಮಾನರಾದ ಕಿಶನ್ ಹೆಗ್ಡೆಯವರ ಆಭಿಮಾನದ ಮಾತಿಗೆ ಕಟ್ಟುಬಿದ್ದು ಮತ್ತೆ ಬಣ್ಣ ಹಚ್ಚಬೇಕಾಗಿ ಬಂತು.

 • ಉ ಟೈಮ್ಸ್ : ಯಕ್ಷಗಾನ ಕ್ಷೇತ್ರದಲ್ಲಿ ಹೆಸರು ಮಾಡಿದ ನಿಮಗೆ ಕಲಿಸಿದ ಗುರುಗಳಾರು?

ಅತಿಥಿ: ಪ್ರಥಮವಾಗಿ ನಾನು ನಾಟ್ಯಾಭ್ಯಾಸವನ್ನು ಗುರು ದಿವಂಗತ ಹೇರಂಜಾಲು ವೆಂಕಟರಮಣ ಗಾಣಿಗರಲ್ಲಿ ಅಭ್ಯಸಿಸಿದೆ. ಆದರೆ ನನಗೆ ವೇಷ ಮಾಡಲು ವಿದ್ಯುಕ್ತವಾಗಿ ತರಬೇತಿ ನೀಡಿದವರು ಬಡಗುತಿಟ್ಟು ಯಕ್ಷರಂಗದ ದಶಾವತಾರಿ ಗುರು ದಿವಂಗತ ವೀರಭದ್ರ ನಾಯ್ಕರು. ಅಲ್ಲದೇ ದಿವಂಗತ ಶಿರಿಯಾರ ಮಂಜು ನಾಯ್ಕರೂ ಕೂಡಾ ನನ್ನನ್ನು ತಿದ್ದಿ ತೀಡಿದವರಲ್ಲಿ ಓರ್ವರಾಗಿದ್ದಾರೆ. ಆದರೂ ನಾನು ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಲು ಮುಖ್ಯ ಕಾರಣ ಆ ಕಾಲದಲ್ಲಿ ಬಣ್ಣದ ವೇಷದಿಂದ ಪ್ರಖ್ಯಾತರಾಗಿದ್ದ ಬೇಲ್ತೂರು ರಾಮ ಬಳೆಗಾರರು. ಅವರನ್ನು ನಾನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತಿದ್ದೇನೆ. ಇದರೊಂದಿಗೆ ಕಡಲತೀರದ ಭಾರ್ಗವ ಖ್ಯಾತಿಯ ಡಾ. ಕೋಟ ಶಿವರಾಮ ಕಾರಂತರ ಮಾರ್ಗದರ್ಶನದಲ್ಲಿ ಹೆಚ್ಚಿನ ರಂಗ ಪ್ರಾವೀಣ್ಯತೆಯನ್ನು ಪಡೆದೆ. ಇಂತಹ ಯಕ್ಷಗಾನ ಕಂಡ ಅದ್ವೀತೀಯರನ್ನು ಗುರುಗಳಾಗಿ ಪಡೆದದ್ದು ನನ್ನ ಭಾಗ್ಯವೇ ಸರಿ.

 • ಉ.ಟೈಮ್ಸ್: ಸರ್ ನಿಮ್ಮ ಯಕ್ಷಪಯಣದ ಹಾದಿಯನ್ನೊಮ್ಮೆ ಮೆಲುಕು ಹಾಕಬಹುದೇ?

ಅತಿಥಿ :ನಾನು ಮೊದಲು ಮಾರಣಕಟ್ಟೆ ಮೇಳ ಸೇರಿ ಅಲ್ಲಿ 7 ವರ್ಷ ವೇಷ ಮಾಡಿದೆ. ಹಾಗೆ ಮಾಡುತ್ತಾ ಯಕ್ಷಗಾನದ ನಡೆ, ಲಯ, ಹೆಜ್ಜೆ, ಮಾತುಗಾರಿಕೆ ಎಲ್ಲದರಲ್ಲಿಯೂ ಪಳಗುತ್ತಾ ಹೋದೆ. ನಂತರ ಸಾಲಿಗ್ರಾಮ ಮೇಳದಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಅಲ್ಲಿಯೂ ಒಂದಷ್ಟು ಹೊಸತನವನ್ನು ಮೈಗೂಡಿಸಿಕೊಂಡೆ. ನಂತರ ಮಂದಾರ್ತಿಯಲ್ಲಿ 4 ವರ್ಷ, ಸೌಕೂರು ಮೇಳದಲ್ಲಿ 5 ವರ್ಷ, ಬಗ್ವಾಡಿ ಮೇಳದಲ್ಲಿ ಯಜಮಾನಿಕೆ ಸಹಿತ 8 ವರ್ಷ, ಕಮಲಶಿಲೆ 5 ವರ್ಷ, ಕಳುವಾಡಿ 1 ವರ್ಷ, ಅಮೃತೇಶ್ವರಿ 2 ವರ್ಷ, ಮಡಾಮಕ್ಕಿ 4 ವರ್ಷ, ಆಜ್ರಿ 7 ವರ್ಷ ಹೀಗೆ ಮೊದಲಾದ ಮೇಳಗಳಲ್ಲಿ ಪ್ರಮುಖ ವೇಷಧಾರಿಯಾಗಿ ಅನೇಕ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದೇನೆ.

 • ಉ.ಟೈಮ್ಸ್: ನೀವು ಪುಂಡುವೇಷಧಾರಿಯಾಗಿ ಪ್ರಸಿದ್ಧಿ ಗಳಿಸಿದವರು. ನಿಮ್ಮ ಯಾವ ಪುಂಡು ವೇಷಗಳನ್ನು ನಿಮ್ಮ ಅಭಿಮಾನಿಗಳು ಇಷ್ಟ ಪಡುತ್ತಿದ್ದರು? ಈ ವೇಷ ಹೊರತು ಪಡಿಸಿ ಮತ್ತಾವ ಪಾತ್ರ ನಿಮಗಿಷ್ಟ?.

ಅತಿಥಿ : ನನ್ನ ಅಭಿಮಾನಿಗಳಿಗೆ ನನ್ನೆಲ್ಲಾ ಪಾತ್ರವೂ ಇಷ್ಟವೇ. ಆದರೆ ನನ್ನ ಬಭ್ರುವಾಹನ, ಅಭಿಮನ್ಯು, ವೃಷಸೇನ ಪಾತ್ರವನ್ನು ಹೆಚ್ಚು ಇಷ್ಟಪಡುತ್ತಿದ್ದರು. ನಾನು ಹೆಚ್ಚಿನ ಪ್ರಸಂಗದಲ್ಲಿ ಸಾತ್ವಿಕವಾದ ಕೃಷ್ಣನ ಪಾತ್ರವನ್ನೂ ಮಾಡಿದ್ದೇನೆ. ಅದನ್ನು ಜನರು ತುಂಬಾ ಮೆಚ್ಚಿಕೊಳ್ಳುತ್ತಿದ್ದರು. ಅಲ್ಲದೇ ಬಾಲ ಪರುಶುರಾಮನ ವೇಷದಲ್ಲಿಯೂ ಪ್ರಸಿದ್ಧಿ ಹೊಂದಿದ್ದೇನೆ.

 • ಉ.ಟೈಮ್ಸ್: ನಿಮ್ಮ ಜೋಡಾಟದ ಅನುಭವ ಹೇಗಿತ್ತು?

ಅತಿಥಿ : ಜೋಡಾಟ ಅಂದರೆ ಏನೋ ಒಂದು ತರ ಸ್ಪರ್ಧಾ ಮನೋಭಾವನೆ. ಇಲ್ಲಿ ಮಾತುಗಾರಿಕೆಗೆ ಹೆಚ್ಚು ಪ್ರಾಶಸ್ತ್ಯ ಇಲ್ಲ. ನೃತ್ಯವೂ ಕೂಡಾ ಸಂತೃಪ್ತಿದಾಯಕ ಅಲ್ಲ. ಆದರೂ ಆಯಾ ಕಲಾವಿದರ, ಮೇಳದ ಅಭಿಮಾನಿಗಳ ಪ್ರೋತ್ಸಾಹ ರಂಗ ಇನ್ನಷ್ಟು ಕಳೆಗಟ್ಟುವ ಹಾಗೆ ಆಗುತ್ತಿತ್ತು. ಕಲಾವಿದರಲ್ಲೂ ಪೈಪೋಟಿ ಭಾವ. ಎದುರಿನ ಪಾತ್ರಧಾರಿಗಿಂತ ನಾನೇ ಚೆನ್ನಾಗಿ ಪಾತ್ರ ನಿರ್ವಹಿಸಬೇಕು, ಗೆಲ್ಲಬೇಕು. ಅದಕ್ಕಾಗಿ ನಾವು ಒಂದಷ್ಟು ಹೊಸತನ್ನು ಮಾಡಬೇಕು ಮತ್ತು ಭಿನ್ನವಾಗಿ ಮಾಡಬೇಕು. ಯಾರೂ ಸೋಲುವುದಕ್ಕೆ ತಯಾರಿಲ್ಲದಾಗ ತೀರ್ಪುಗಾರರ ತೀರ್ಪಿಗೆ ನಮ್ರತೆಯಿಂದ ತಲೆಬಾಗುತ್ತಿದ್ದೆವು. ಜೋಡಾಟದಲ್ಲಿ ಭಾಗವಹಿಸಿದ್ದು ನನ್ನ ಬದುಕಿನಲ್ಲಿ ಇಂದಿಗೂ ನೆನಪಿಟ್ಟುಕೊಳ್ಳುವಂತಹ ಘಟನೆಗಳಲ್ಲೊಂದು. ನಾನು ಇದರಲ್ಲಿ ಲವ-ಕುಶ, ಮೈಂದ-ದ್ವಿವಿದ, ಅಭಿಮನ್ಯು ಹೀಗೆ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದೇನೆ.

 • ಉ. ಟೈಮ್ಸ್ :ನಿಮ್ಮ ಕಾಲದಲ್ಲಿದ್ದ ಯಾರೆಲ್ಲಾ ಪ್ರಸಿದ್ಧ ಭಾಗವತರ ಹಿಮ್ಮೇಳಕ್ಕೆ ಹೆಜ್ಜೆ ಹಾಕಿದ್ದೀರಿ?

ಅತಿಥಿ :ಶ್ರೇಷ್ಠ ಭಾಗವತರುಗಳಾದ ದಿವಂಗತ ನಾರ್ಣಪ್ಪ ಉಪ್ಪೂರರು, ದಿವಂಗತ ಮುದ್ದೂರು ಭಾಗವತರು, ದಿವಂಗತ ಮರವಂತೆ ನರಸಿಂಹ ದಾಸರು, ದಿವಂಗತ ಶ್ರೀನಿವಾಸದಾಸರು, ದಿವಂಗತ ರಾಮಚಂದ್ರ ನಾವಡರು, ದಿವಂಗತ ಕಾಳಿಂಗ ನಾವಡರು… ಮೊದಲಾದವರ ಸಮರ್ಥರ ಹಿಮ್ಮೇಳಕ್ಕೆ ನಾನು ನಾಟ್ಯ ಮಾಡಿದ್ದೇನೆ ಎನ್ನುವುದೇ ಹೆಮ್ಮೆಯ ವಿಚಾರ.

 • ಉ. ಟೈಮ್ಸ್: ಕೂಡಾಟದ ವೈಶಿಷ್ಟ್ಯವೇನು?

ಅತಿಥಿ : ಇಲ್ಲಿ ಒಂದು ಪ್ರಸಂಗದ ವೇಷವನ್ನು ಎರಡೂ ಮೇಳದ ಸಮರ್ಥ ಕಲಾವಿದರಿಗೆ ಹಂಚಿಕೊಡುತ್ತಾರೆ. ಕಲಾವಿದರಲ್ಲಿ ಹೊಂದಾಣಿಕೆ ಮನೋಭಾವ ಬೆಳೆಯುತ್ತದೆ. ಹೊಸ ಕಲಾವಿದರು, ಅವರ ಹೊಸತನದ ಪರಿಚಯವಾಗುತ್ತದೆ.

 • ಉ. ಟೈಮ್ಸ್: ಒಬ್ಬ ಪ್ರಮುಖ ವೇಷಧಾರಿ ಸಣ್ಣ ಪಾತ್ರ ಮಾಡಲು ಒಪ್ಪುವರೇ?

ಅತಿಥಿ: ಪಾತ್ರಗಳಲ್ಲಿ ಸಣ್ಣದು ದೊಡ್ಡದು ಎಂಬ ಬೇಧ ಭಾವ ಇಲ್ಲ. ಕಲಾವಿದ ಸಮರ್ಥನಾದರೆ ಸಣ್ಣ ಪಾತ್ರವನ್ನೂ ಚೆನ್ನಾಗಿ ನಿಭಾಯಿಸಿ ಅದು ಅಚ್ಚಳಿಯದ ಹಾಗೆ ಉಳಿಯುವಂತೆ ಮಾಡಬಲ್ಲ. ಪಾತ್ರ ಸಣ್ಣದಾದರು ಅದಕ್ಕೊಂದು ಔಚಿತ್ಯ ಇರುತ್ತದೆ. ಅದನ್ನರಿತು ಮಾಡಬೇಕು. ಆ ಪಾತ್ರ ಇಲ್ಲದಿದ್ದರೆ ಪ್ರಸಂಗಕ್ಕೆ ಅರ್ಥವೇ ಇರುವುದಿಲ್ಲ. ಇನ್ನು ಈ ಕುರಿತು ತಿಳುವಳಿಕೆ ಇಲ್ಲದ ಕಲಾವಿದರು ಮಾತ್ರ ಆ ಕುರಿತು ಚಕಾರ ಎತ್ತುತ್ತಾರೆ. ಸಣ್ಣದನ್ನೂ ದೊಡ್ಡದಾಗಿ ಮಾಡುವ ಯೋಗ್ಯತೆ ಉಳ್ಳ ಕಲಾವಿದರು ಚೆನ್ನಾಗಿ ತಮ್ಮ ಪಾತ್ರ ಪೋಷಣೆ ಮಾಡಿ ಎಲ್ಲರಿಂದ ಭೇಷ್ ಎನಿಸಿಕೊಳ್ಳುತ್ತಾರೆ.

 • ಉ. ಟೈಮ್ಸ್ :ನೀವೊಬ್ಬ ಪ್ರಸಿದ್ಧ ಪುಂಡುವೇಷಧಾರಿಯಾಗಿ ಗುರುತಿಸಿಕೊಂಡಿದ್ದೀರಿ. ಎರಡನೆಯ ವೇಷ ಮಾಡುವ ಪ್ರಯತ್ನ ಮಾಡಲಿಲ್ಲವೇ?

ಅತಿಥಿ : ಮಾಡಿದ್ದೇನೆ. ಆದರೆ ಯಾವುದೇ ವೇಷಕ್ಕಾದರೂ ಅಂಗ, ಆಳ್ತನ ಮುಖ್ಯವಾಗುತ್ತದೆ. ನನ್ನಲ್ಲಿ ಎರಡನೇ ವೇಷಕ್ಕೆ ಬೇಕಾದ ಆಳ್ತನವಿಲ್ಲ. ನಾನು ಆ ವೇಷ ಮಾಡಿದರೆ ವೇಷ ತುಂಬಿ ಬರುವುದಿಲ್ಲ. ಅದಕ್ಕಾಗಿ ನಾನು ಆ ವೇಷ ಮಾಡುವುದು ಕಡಿಮೆ. ಅನಿವಾರ್ಯ ಸಂದರ್ಭ ಬಂದಾಗ ಭದ್ರಸೇನ, ಭೀಷ್ಮ, ಕರ್ಣ ಮುಂತಾದ ವೇಷ ಮಾಡಿದ್ದೇನೆ. ಆದರೆ ಯಾವುದೆ ಪಾತ್ರ ಮಾಡಿದರೂ ಅದಕ್ಕೆ ಕಲಾವಿದ ನ್ಯಾಯ ಒದಗಿಸಬೇಕು. ಅದು ಸಾಧ್ಯವಾಗದಿದ್ದರೆ ಅಂತಹ ವೇಷ ಆತ ಮಾಡಬಾರದು.

 • ಉ.ಟೈಮ್ಸ್: ಅಭಿಮಾನಿಗಳು ನಿಮಗೊಂದಷ್ಟು ಬಿರುದು ನೀಡಿದ್ದಾರಲ್ಲಾ ಆ ಕುರಿತು ಏನನ್ನಿಸುತ್ತೆ?

ಅತಿಥಿ: ಅವರ ಅಭಿಮಾನಕ್ಕೆ ನಾನು ಸದಾ ಚಿರಋಣಿ. ಸಂತೋಷವಾಗುತ್ತದೆ. ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿದ್ದೇನೆ. ಯಾವುದೇ ಬಿರುದಿಗಾಗಲೀ, ಪ್ರಶಸ್ತಿಗಾಗಲೀ ಎಂದೂ ನಾನು ಆಸೆ ಪಟ್ಟವನಲ್ಲ. ಆದರೆ ಜನರು ಅದನ್ನು ಗುರುತಿಸಿ ಗೌರವಿಸಿದ್ದಾರೆಂಬ ಸಮಾಧಾನವಿದೆ.

 • ಉ.ಟೈಮ್ಸ್: ನೀವು ಇತ್ತೀಚೆಗೆ ಮತ್ತೆ ರಂಗಕ್ಕೆ ಬಂದಿದ್ದೀರಿ ಕಾರಣವೇನು?

ಅತಿಥಿ :ನಾನು ಮೊದಲು ಸೌಕೂರು ಮೇಳದಲ್ಲಿ ವೇಷ ಮಾಡಿದ್ದೆ. ಆಗ ಮೇಳದ ಯಜಮಾನರಾದ ಕಿಶನ್ ಹೆಗ್ಡೆಯವರಿಗೆ ನನ್ನ ಬಗ್ಗೆ ವಿಶೇಷ ಅಭಿಮಾನ ಇತ್ತು. ಈಗಲೂ ಅದೇ ಅಭಿಮಾನದಿಂದ ಕರೆದರು. ಮೊದಲು ಒಪ್ಪಲಿಲ್ಲ. ನಂತರ ನೀವು ದಿನಾ ವೇಷ ಮಾಡದಿದ್ದರೂ ಅಡ್ಡಿಲ್ಲ. ನೀವು ಮೇಳದಲ್ಲಿ ಇದ್ದರೆ ನನಗೂ ಸಮಾಧಾನ, ಕಲಾವಿದರಿಗೂ ಸ್ಪೂರ್ತಿ ಎಂದು ಪ್ರೀತಿಯಿಂದ ಕೇಳಿಕೊಂಡಾಗ ಇಲ್ಲ ಎನ್ನಲಾಗಲಿಲ್ಲ. ಹಾಗಾಗಿ ಕಳೆದ ವರ್ಷದಿಂದ ಪುನಃ ರಂಗವೇರಿ ವೇಷಮಾಡುತ್ತಿದ್ದೇನೆ.

 • ಉ.ಟೈಮ್ಸ್ : ನಿಮ್ಮ ವಿದೇಶ ಪ್ರವಾಸದ ಅನುಭವ ಹೇಗಿತ್ತು? ಯಾವೆಲ್ಲಾ ದೇಶಕ್ಕೆ ಹೋಗಿದ್ದೀರಿ?

ಅತಿಥಿ :ನಾನು ಅಮೇರಿಕಾ, ಇಸ್ರೇಲ್, ಕೆನಡಾ, ಜರ್ಮನಿ, ಹಾಂಕಾಂಗ್ ದೇಶಗಳಿಗೆ ಹೋಗಿದ್ದೆ. ಅಲ್ಲಿನ ಜನರಿಗೆ ನಮ್ಮ ಯಕ್ಷಗಾನವೆಂದರೆ ಬಹಳ ಇಷ್ಟ. ನಮ್ಮನ್ನು ದೇವರಂತೆ ಕಾಣುತ್ತಾರೆ. ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ನನಗೂ ಈ ಕುರಿತು ಹೆಮ್ಮೆ ಇದೆ. ಇಲ್ಲಿ ನಾನು ಮಾರ್ತಾ ಆಸ್ಟೆನ್ ಅವರನ್ನು ನೆನಪಿಸಿಕೊಳ್ಳಬೇಕು. ಅವರು ಅಮೇರಿಕಾದಿಂದ ಇಲ್ಲಿಗೆ ಬಂದು ಡಾ. ಶಿವರಾಮ ಕಾರಂತರ ಬಳಿ ನಾಟ್ಯ ಕಲಿತರು. ಚಂಡೆಯನ್ನೂ ಅಭ್ಯಸಿಸಿ ವೇಷ ಮಾಡಿದರು. ಯಕ್ಷಗಾನದ ಕುರಿತು ಸಂಶೋಧನೆ ಮಾಡಿದರು. ಅವರೇ ನಮ್ಮನ್ನೆಲ್ಲಾ ವಿದೇಶಕ್ಕೆ ಕರೆಸಿಕೊಂಡು ಪ್ರದರ್ಶನಕ್ಕೆ ಅವಕಾಶವನ್ನೂ ಮಾಡಿಕೊಟ್ಟರು. ಆ ಮೂಲಕ ನಮ್ಮ ಕರಾವಳಿಯ ಕಂಪನ್ನು ಹೊರದೇಶದಲ್ಲೂ ಪಸರಿಸಿದ ಕೀರ್ತಿ ಅವರದು. ಅವರಿಗೆ ನಾನೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.

 • ಉ.ಟೈಮ್ಸ್ : ಕಲಾ ವಿಮರ್ಶೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಹಾಗೂ ಮಹಿಳಾ ಯಕ್ಷಗಾನದ ಬಗ್ಗೆಯೇ ನಿಮ್ಮ ಅನಿಸಿಕೆ?

ಅತಿಥಿ : ಕಲಾವಿದನ ಯೋಗ್ಯತೆಯನ್ನು ಆಯಾ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಕಲಾವಿಮರ್ಶಕರು ಅಳೆಯಬೇಕು, ಮತ್ತು ಆ ವಿಮರ್ಶೆಯನ್ನು ಕಲಾವಿದರು ತುಂಬು ಹೃದಯದಿಂದ ಸ್ವಾಗತಿಸಬೇಕು. ಕಲಾವಿಮರ್ಶಕರು ಒಂದು ಕಲೆ ಅದರ ಚೌಕಟ್ಟಿನಲ್ಲಿಯೆ ಇರುವಂತೆ ನೋಡಿಕೊಳ್ಳುತ್ತಾರೆ. ಕಲಾವಿಮರ್ಶೆ ಇಲ್ಲದೇ ಹೋದರೆ ಆ ಕಲೆಗೆ ಗಂಡಾಂತರವಿದೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. ಇನ್ನೂ ಮಹಿಳೆಯರು ಯಕ್ಷಗಾನವನ್ನು ಪ್ರವೇಶಿಸಿದುದರ ಬಗೆಗೆ ಸಂತಸವಿದೆ. ಮನೆಯೇ ಮೊದಲ ಪಾಠಶಾಲೆ, ಜನನಿ ತಾ ಮೊದಲ ಗುರು ಎಂಬಂತೆ ಓರ್ವ ಮಹಿಳೆ ಯಕ್ಷಗಾನವನ್ನು ಅಭ್ಯಸಿಸಿದರೆ ಆಕೆಗೆ ಜನಿಸುವ ಮಗುವಿಗೆ ಕಲಾ ಸಂಸ್ಕಾರವಿರುತ್ತದೆ. ಆ ಮಗುವಿಗೆ ತಾಯಿಯೇ ಯಕ್ಷಗಾನದ ಗುರು ಆಗಬಹುದು. ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ.

 • ಉ. ಟೈಮ್ಸ್ : ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದ ಹೊಣೆ ಯಾರದ್ದು?

ಅತಿಥಿ :ಯಕ್ಷಗಾನ ಸನಾತನ ಕಲೆ. ಈ ಕಲೆಯನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರದ್ದು. ಸಂಪ್ರದಾಯದ ಚೌಕಟ್ಟಿನೊಳಗೆ ಪ್ರಯೋಗಗಳನ್ನು ಮಾಡಿ, ಕ್ರಿಯಾಶಿಲತೆಯನ್ನು ಮೆರೆಯಬಹುದು. ಪರಂಪರೆಗೆ ಧಕ್ಕೆ ತಾರದ ರೀತಿಯಲ್ಲಿ ಸೃಜನಶೀಲತೆಯಿಂದ ಯುವಜನತೆ ತಮ್ಮನ್ನು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಬೇಕು.

ಇವರ ಪ್ರತಿಭೆಯನ್ನು ಗುರುತಿಸಿ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ, ಶಿರಿಯಾರ ಮಂಜು ನಾಯ್ಕ ಪ್ರಶಸ್ತಿ, ಕಲಾರಂಗ ಪ್ರಶಸ್ತಿ, ಮೊಗವೀರ ಸಮಾಜದ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಒಲಿದಿವೆ. ಅಲ್ಲದೇ ಡಾ. ಜಿ ಶಂಕರ್ ಸಂಸ್ಥೆಯಿಂದ ಸಂಮಾನದ ಜೊತೆಗೆ ಹಲವು ಸಂಘ-ಸಂಸ್ಥೆಗಳು ಇವರನ್ನು ಸಂಮಾನಿಸುವ ಮೂಲಕ ಇವರ ಪ್ರತಿಭೆಯನ್ನು ಗೌರವಿಸಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಸಂಸ್ಥೆಯೂ ರಮೇಶ ಬೇಲ್ತೂರರ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದಾರೆ
ಮುತ್ತು ಎಂಬಾಕೆಯನ್ನು ವರಿಸಿರುವ ಶ್ರೀ ರಮೇಶ ಬೇಲ್ತೂರು ದಂಪತಿಗಳಿಗೆ ಪ್ರೇಮ, ನಾಗರತ್ನ, ಪ್ರಮೋದಿನಿ ಎನ್ನುವ ಮೂವರು ಹೆಣ್ಣುಮಕ್ಕಳು. ತನ್ನ ಯಶಸ್ಸಿನಲ್ಲಿ ಕುಟುಂಬದ ಸಂಪೂರ್ಣ ಸಹಕಾರವಿದ್ದುದನ್ನು ಮನಸಾ ನೆನೆಯುತ್ತಾರೆ.
ಯಕ್ಷಮಾತೆಯ ಸೇವೆ ಮಾಡುವ ಭಾಗ್ಯ ಇನ್ನಷ್ಟು ಒಲಿದು ಬರಲಿ ಎಂಬ ಹಾರೈಕೆ ನಮ್ಮದು .

ಲೇಖನ ಹಾಗೂ ಸಂದರ್ಶನ: ನಾಗರತ್ನ ಜಿ ಹೇರ್ಳೆ

Leave a Reply

Your email address will not be published.

error: Content is protected !!