ಸಾಹಿತ್ಯಲೋಕದಲ್ಲಿ‌ ಮೀನುಗುತ್ತಿರುವ ಆದಶ೯ ಶಿಕ್ಷಕಿ‌ ವಾಸಂತಿ ಅಂಬಲ್ಪಾಡಿ


ಸಂದರ್ಶನ /ಬರಹ : ದಿವ್ಯ ಮಂಚಿ

“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ಮಾತಿನಂತೆ, ಶಿಕ್ಷಕಿ ಆಗಬೇಕು ಎಂಬ ಮಹದಾಸೆಯಿಂದ ಒಬ್ಬ ಯುವತಿ ಅದಕ್ಕೆ ಪೂರಕವಾದ ಶಿಕ್ಷಣ  ಮುಗಿಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಅದೃಷ್ಟವೋ ಆಥವಾ ಆ ಯುವತಿಯ ಶ್ರಮದ ಫಲವೂ ಗೊತ್ತಿಲ್ಲ ಫಲಿತಾಂಶ ಬರುವ ಮೊದಲೇ ಉಡುಪಿಯ ಕಾಲೇಜೊಂದರಲ್ಲಿ ತಾತ್ಕಾಲಿಕವಾಗಿ ಶಿಕ್ಷಕಿಯಾಗುವ ಅವಕಾಶ ಸಿಕ್ಕಿತು. ಆದರೆ 1999 ಅವಧಿಯಲ್ಲಿ ಶಾಲಾ/ಕಾಲೇಜು ಕೊಠಡಿಯಲ್ಲಿ ವಿದ್ಯಾರ್ಥಿಗಳನ್ನು ನಿಯಂತ್ರಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅದರಲ್ಲೂ ಸಹದ್ಯೋಗಿ  ಯೊಬ್ಬರು ವಿದ್ಯಾರ್ಥಿಗಳ ತರಲೆ ತಂಟೆಗಳ ಬಗ್ಗೆ ಮೊದಲೇ ಎಚ್ಚರಿಸಿದ್ದರು. ಮೊದಲ ಬಾರಿ ತರಗತಿಗೆ ಅಡಿಯಿಟ್ಟವರಿಗೆ ತಮ್ಮೆದುರು ಕಪ್ಪುಹಲಗೆ ಕಾಣಿಸಿತು. ತಮ್ಮ ಮುದ್ದಾದ ಕೈಗಳಿಂದ ಆ ಹಲಗೆಯ ಮೇಲೆ ಬಿಳಿ ಅಕ್ಷರದಲ್ಲಿ” ಅರಿತರೆ ವಿದ್ಯಾರ್ಥಿ ಮರೆತರೆ ಹುಡುಗ”ಎಂದು ಬರೆದು ತಮ್ಮ ಪಾಠ ಆರಂಭಿಸಿಯೇ ಬಿಟ್ಟರು. ಅದೇನು ಪವಾಡವೋ ಏನೋ ಒಬ್ಬನೇ ಒಬ್ಬ ವಿದ್ಯಾರ್ಥಿ ತುಟಿಪಿಟಿಕ್ ಅನ್ನದೇ ತರಗತಿಯಲ್ಲಿ ಆ ಶಿಕ್ಷಕಿಯ ಪಾಠವನ್ನು ಆಲಿಸಿದ್ದರು. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾದರು.

ನಾವು ಯಾರ ಬಗ್ಗೆ ಹೇಳುತ್ತಿದ್ದೇವೆ ಅಂತ ಅನ್ಕೋತ್ತಿದ್ದಿರಾ. ಇವರು ನಮ್ಮ”ವಾರದ ವ್ಯಕ್ತಿ” ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಕೇಂದ್ರ ಸಾಹಿತ್ಯ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷೆ, ಸಾಹಿತಿ, ಶಿಕ್ಷಕಿ ಹೀಗೆ ವೃತ್ತಿ ಪ್ರವೃತ್ತಿ ಎರಡರಲ್ಲೂ ಮೇಳೈಸುತ್ತಿರುವ ವಾಸಂತಿ ಅಂಬಲಪಾಡಿ.

ಉಡುಪಿಯ ದಿ.ಬೋಜ ಪೂಜಾರಿ ಹಾಗೂ ದಿ.ಸರಸ್ವತಿ ಅವರ ಪುತ್ರಿಯಾದ ಇವರು ಮಧ್ಯಮ ವರ್ಗದ ಕೂಡು ಕುಟುಂಬದಲ್ಲಿ ಎಲ್ಲರ ಪ್ರೀತಿ ಗಳಿಸುತ್ತಾ ತಮ್ಮ ಬಾಲ್ಯವನ್ನು ಕಳೆದಿರುವವರು. ಉಡುಪಿಯ ಅಂಬಲಪಾಡಿ ಸಮೀಪದ ಕಿದಿಯೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ. ಸರಕಾರಿ ಬಾಲಕೀಯರ ಪಿಯು ಕಾಲೇಜಿನಲ್ಲಿ ಪಿಯುಸಿ ಹಾಗೂ ಎಂಜಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತ್ತಕೋತ್ತರ ಪದವಿ ಹಾಗೂ ಬಿಎಡ್, ಎಂಎಡ್ ಶಿಕ್ಷಣವನ್ನೂ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಉಡುಪಿಯ ಛಾಯಾಚಿತ್ರಕಾರರಾದ ಗಣೇಶ್ ಕಲ್ಯಾಣಪುರ ಅವರೊಂದಿಗೆ ಸಂಸಾರದ ದೋಣಿಯನ್ನ ಏರಿದ ಇವರಿಗೆ, ಇಬ್ಬರು ಗಂಡು ಮಕ್ಕಳು. ಪ್ರಸ್ತುತ ಉಡುಪಿಯ ದೊಡ್ಡಣಗುಡ್ಡೆಯಲ್ಲಿ ನೆಲೆಸಿದ್ದಾರೆ. ಹಾಗೂ ಉಡುಪಿಯ ಸೈಂಟ್ ಸಿಸಿಲಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿಯಾಗಿದ್ದ ಸಮಯದಲ್ಲೇ ಸಾಹಿತ್ಯದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಇವರು ಎಂ.ಜಿ.ಎಂ ಕಾಲೇಜಿನಲ್ಲಿ ತೃತೀಯ ಬಿ.ಕಾಂ ನಲ್ಲಿರುವಾಗ ಕುಂದಾಪುರ ದ ಬಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು ಹಾಗೂ ವಿದ್ಯಾರ್ಥಿ ದೆಸೆಯಲ್ಲಿರುವಾಗ  ಅವಿಭಜಿತ ದ.ಕ ಜಿಲ್ಲೆಯ ವಿದ್ಯಾರ್ಥಿ ಸಾಹಿತ್ಯ ವೇದಿಕೆಯ  ಕಾರ್ಯದರ್ಶಿಯಾಗಿದ್ದರು.

ಇವರು ಈ ವರೆಗೆ ಹಕ್ಕಿಯ ಮೊದಲ ಹಾಡು (ಕವನ ಸಂಕಲನ), ತಾರೆಗಳ ಪಿಸು ಮಾತು (ಕವನ ಸಂಕಲನ), ಉಯ್ಯಾಲೆ (ಕಥಾ ಸಂಕಲನ), ನಾ ಕಂಡ ಜಗವು ಇಂತಿಹುದಯ್ಯಾ (ಆಧುನಿಕ ವಚನಗಳು), ಇರ್ನೂದೆದ ಒಂಜಿ ನೋಟು( ತುಳು ಕಥಾ ಸಂಕಲನ),  ನನ್ನಮ್ಮ ನಿನ್ನಮ್ಮನಂತಲ್ಲ (ಕವನ ಸಂಕಲನ) ಗಳನ್ನು ಬರೆದಿದ್ದಾರೆ. ಸದ್ಯ ಬಡತನದಲ್ಲಿ ಅರಳಿದ ಚಿಗುರುಗಳು ಎಂಬ ನೈಜ ಕತೆ ಆಧಾರಿತ ಬರಹವೊಂದು ಸಿದ್ಧಗೊಳ್ಳುತ್ತಿದೆ. ಮತ್ತೊಂದು ವಿಶೇಷತೆ ಎಂದರೆ ಉಡುಪಿಯಲ್ಲಿ ಆಧುನಿಕ ವಚನಗಳನ್ನು ಬರೆಯುವವರು ಯಾರಾದರೂ ಇದ್ದಾರೆಯೇ ಎಂದು ಕೇಳಿದರೆ ಮೊದಲು ನೆನಪಿಗೆ ಬರುವುದೇ ವಾಸಂತಿ ಅಂಬಲಪಾಡಿ ಅವರ ಹೆಸರು.

ಅವರ ಜೀವನ ಪಯಣದ ನೆನಪಿನ ಅನುಭವವನ್ನು ಅವರ ಮಾತಿನ ಮೂಲಕ ಇಲ್ಲಿ ಭಟ್ಟಿ ಇಳಿಸುವ ಪ್ರಯತ್ನವನ್ನು ಮಾಡಿದ್ದೇವೆ. ಉಡುಪಿ ಟೈಮ್ಸ್ ವಾಸಂತಿ ಅವರೊಂದಿಗೆ ನಡೆಸಿದ ಸಂದರ್ಶನದ ತುಣುಕು ಇಲ್ಲಿದೆ.

ಸಾಹಿತ್ಯ ಕ್ಷೇತ್ರ….

ಉ.ಟೈಮ್ಸ್: ಸಾಹಿತ್ಯದ ಅಭಿರುಚಿ ನಿಮ್ಮಲ್ಲಿ ಬೆಳೆದದ್ದು ಹೇಗೆ..?

ಅತಿಥಿ : ನಮ್ಮ ಕುಟುಂಬದಲ್ಲಿ ಯಾರೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಲ್ಲ. ಹಾಗಾಗಿ ಸಾಹಿತ್ಯದ ಅಭಿರುಚಿ ನನ್ನ ಪಾಲಿಗೆ ದೈವ ಪ್ರೇರಣೆ ಅಂತಾನೇ ಹೇಳಬಹುದು.
  ಹೀಗೆ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವಾಗ ನೆನಪಿಗೆ ಬರುತ್ತಿದ್ದ ಸಾಲುಗಳನ್ನು ಹಾಗೇ ಪುಸ್ತಕದಲ್ಲಿ ಗೀಚುತ್ತಿದೆ.
ಒಂದೊಮ್ಮೆ ತರಗತಿಯಲ್ಲಿ ಕನ್ನಡ ಶಿಕ್ಷಕಿ ಯಾರಿಗಾದರೂ ಬರವಣಿಗೆಯಲ್ಲಿ ಆಸಕ್ತಿ ಇದೇಯೇ? ಎಂದಾಗ ನನ್ನ ನೆನಪಿಗೆ ಬರುತ್ತಿದ್ದ ಸಾಲುಗಳ ಸಂಗ್ರಹದ ಪುಸ್ತಕ ವನ್ನು ಅವರ ಮುಂದಿಟ್ಟೆ. ಅವರು ನನ್ನ ಬರವಣಿಗೆ ನೋಡಿ ಈ ಹವ್ಯಾಸವನ್ನು ಹೀಗೆ ಮುಂದುವರೆಸು ಉತ್ತಮ ಭವಿಷ್ಯ ವಿದೆ ಎಂದು ಬೆನ್ನು ತಟ್ಟಿದರು. ಇಲ್ಲಿಂದ ನನ್ನ ಸಾಹಿತ್ಯಾಭಿರುಚಿಯ ಪಯಣ ಬಲ ಪಡೆದುಕೊಂಡಿತು.

ಉ.ಟೈಮ್ಸ್: ಬರವಣಿಗೆಯ ಆರಂಭಿಕ ದಿನಗಳ ನೆನಪನ್ನು ನಮ್ಮ ಬಳಿ ಹಂಚಿಕೊಳ್ಳಬಹುದೆ..?

ಅತಿಥಿ: ಕನ್ನಡ ಶಿಕ್ಷಕಿಯ ಪ್ರೋತ್ಸಾಹದಿಂದ ಕಥೆ/ಕವನ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದೆ. ಹೀಗೆ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ನಾನು ಬರೆದ “ಆ ಕಣ್ಣು” ಎಂಬ ಕಥೆಗೆ ತೃತೀಯ ಬಹುಮಾನ ಬಂದಿತ್ತು. ಆಗ ನನಗೆ 100 ರೂ ಬಹುಮಾನ ಸಿಕ್ಕಿತ್ತು. ಆ ಬಹುಮಾನಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಬಳಿಕ ನಾನು ಬರೆದ “ನನ್ನ ಹುಡುಗಿ” ಎಂಬ ಕವನಕ್ಕೆ ಮೊದಲ ಬಹುಮಾನ ಒಲಿದು ಬಂದಿತ್ತು.

ನನಗೆ ಇನ್ನೂ ನೆನಪಿದೆ ನಾನು ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿದ್ದ ಸಮಯದಲ್ಲಿ 1992ರಲ್ಲಿ ಆಗಿನ ಅವಿಭಜಿತ ದ.ಕ ಜಿಲ್ಲೆಯಲ್ಲಿ ನಡೆದ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಮೊದಲ ಬಾರಿಗೆ ಕವನ ವಾಚನ ಮಾಡಿದ್ದೆ.  

ಬಳಿಕ ಕರಾವಳಿಯ ಲೇಖಕಿ, ವಾಚಕೀಯರ ಸಂಘದ ಕವನ ಸಂಕಲನದ ಕೃತಿಯಲ್ಲಿ ನಾನು ಬರೆದ ” ಕಾಣೆಯಾಗಿದ್ದಾಳೆ ಪ್ರೀತಿ” ಎಂಬ ಕವನ ಮೊದಲ ಬಾರಿಗೆ ಪ್ರಕಟಗೊಂಡಿತ್ತು.

ಉ.ಟೈಮ್ಸ್: ಮೊದಲ ಪುಸ್ತಕ ಮುದ್ರಣದ ಸವಿ ನೆನಪು?

ಅತಿಥಿ: ಆರಂಭದಲ್ಲಿ ಮುಜುಗರದಿಂದ ನಾನು ಬರೆಯುತ್ತಿದ್ದ ಬರವಣಿಗೆಯನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಪಿಯುಸಿ ನಂತರ 5 ವರ್ಷಗಳ ಕಾಲ ಬರೆದ ಬರವಣಿಗೆ ಮತ್ತು ನನ್ನ ಪ್ರತಿಭೆಗೆ ಉಡುಪಿ ಯ ಎಂಜಿಎಂ ಕಾಲೇಜು ಉತ್ತಮ ವೇದಿಕೆಯಾಯಿತು. ಬಳಿಕ ಅನ್ವೇಣಾ ಸಾಹಿತ್ಯ ಸಂಘಟನೆ ಮತ್ತು ಮಂಗಳ ಕಲಾ ಸಾಹಿತ್ಯ ವೇದಿಕೆಯ ಪ್ರೇರಣೆಯಿಂದ ನನ್ನ ಮೊದಲ ಕೃತಿ” ಹಕ್ಕಿಯ ಮೊದಲ ಹಾಡು” ಅನಾವರಣ ಗೊಂಡಿತು.
1997ರಲ್ಲಿ ಅಂಬಲಪಾಡಿ ದೇವಾಲಯದ ವೇದಿಕೆಯಲ್ಲಿ ಅಣ್ಣಾಜಿ ಬಳ್ಳಾಲ್ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಅದು ನನ್ನ ಪಾಲಿಗೆ ತುಂಬಾ ಸಂತೋಷದ ಕ್ಷಣ.

ಉ.ಟೈಮ್ಸ್: ನಿಮ್ಮ ಬರವಣಿಗೆಯ ವಸ್ತು ವಿಷಯಗಳ ಆಯ್ಕೆ?

ಅತಿಥಿ : ನಾನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಆಧುನಿಕ ವಚನಗಳನ್ನು ಬರೆಯುತ್ತೇನೆ. ಹಾಗೂ ವೈಚಾರಿಕ ಅಂಶಗಳನ್ನು ಹೆಚ್ಚಾಗಿ ಆಯ್ದುಕೊಳ್ಳುವುದು ನನ್ನ ಆಧ್ಯತೆ. ಉಳಿದಂತೆ ನನ್ನ ಬರವಣಿಗೆ ಮೂಲಕ ಸಮಾಜದಲ್ಲಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡುತ್ತೇನೆ.

ಉ.ಟೈಮ್ಸ್: ಸಾಮಾಜಿಕ ಜಾಲತಾಣಗಳಲ್ಲಿ, ಆನ್ಲೈನ್ ಆಪ್ ಗಳಮೂಲಕ ಬರವಣಿಗೆ ಪ್ರಕಟಿಸುವ ಬಗ್ಗೆ ನಿಮ್ಮ ಅಭಿಪ್ರಾಯ?
ಅತಿಥಿ : ಆನ್ಲೈನ್ ಆ್ಯಪ್‍ಗಳು ಅಥವಾ ಸಾಮಾಜಿಕ ಜಾಲತಾಣಗಳು ಯುವ ಬರಹಗಾರರಿಗೆ ಉತ್ತಮ ವೇದಿಕೆಯಾಗಿದೆ. ಆದರೆ
ಪತ್ರಿಕೆ, ನಿಯತಕಾಲಿಕಗಳಲ್ಲಿ ಪ್ರಕಟಗೊಳ್ಳುವ ಬರವಣಿಗೆಗಳಿಗೆ ಓದುಗರ ಬಳಗ ಹೆಚ್ಚಾಗಿರುತ್ತದೆ ಮತ್ತು ಅದು ಮಹತ್ವವನ್ನೂ ಹೊಂದಿರುತ್ತದೆ. ಹೆಸರಾಂತ ಸಾಹಿತಿಗಳು ಗುರುತಿಸಿ ಕೊಂಡಿದ್ದೂ ಇದೇ ರೀತಿ. ಆದರೆ ಸಾಮಾಜಿಕ ಜಾಲತಾಣಗಳ ಬರವಣಿಗೆಗೆ ಸೀಮಿತ ಓದುಗರ ಬಳಗ ಹೊಂದಿರುತ್ತದೆ .

ಉ.ಟೈಮ್ಸ್: ಯುವ ಸಾಹಿತಿಗಳಿಗೆ ನಿಮ್ಮ ಸಲಹೆ?

ಅತಿಥಿ : ಈಗ ಪ್ರತಿಯೊಬ್ಬರೂ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಆದರೆ ಬರೆಯುವ ಅನೇಕ ಯುವ ಬರಹಗಾರರಲ್ಲಿ ಓದುವ ಹವ್ಯಾಸ ಇಲ್ಲದಿರುವುದು ಕಂಡು ಬರುತ್ತಿದೆ. ಹಾಗಾಗಿ ಬರೆಯುವವರು ಮೊದಲು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು.
ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಬರವಣಿಗೆಯನ್ನು ಬರೆಯಬೇಕು. ಸಮಾಜದ ಹುಳುಕುಗಳನ್ನು ಎತ್ತಿ ಹಿಡಿಯುವ ಕೆಲಸಮಾಡಬೇಕು.

ಉ.ಟೈಮ್ಸ್ : ಉಡುಪಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಬಂದ ಕ್ಷಣ?

ಅತಿಥಿ : ಪ್ರಶಸ್ತಿ ಘೋಷಣೆ ಆದಾಗ ತುಂಬಾ ಖುಷಿಯಾಗಿತ್ತು. ಅದರ ಜೊತೆಗೆ ನಾನು ಕಾರ್ಯ ನಿರ್ವಹಿಸುತ್ತಿರುವ ಉಡುಪಿಯ ಸೈಂಟ್ ಸಿಸಿಲಿ ಕಾಲೇಜಿಗೆ ಆಗ ಶತಮಾನೋತ್ಸವದ ಸಂಭ್ರಮ ಬೇರೆ. ಶಾಲೆಯಲ್ಲಿ ಅದ್ದೂರಿಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಅಂದು ವಾರ್ಷಿಕೋತ್ಸವ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದೆ. ಆಗಾ ಶಾಲಾ ಆಡಳಿತ ಮಂಡಳಿ ನನಗೆ ರಾಜೋತ್ಸವ ಪ್ರಶಸ್ತಿ ಬಂದಿರುವ ವಿಚಾರವನ್ನು ತುಂಬಿದ ಸಭೆಯಲ್ಲಿ ಪ್ರಸ್ತಾಪಿಸಿ ಅಭಿನಂದನೆ ಸಲ್ಲಿಸಿದರು. ಆ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಉ.ಟೈಮ್ಸ್: ನಿಮ್ಮ ಇಷ್ಟದ ಬರಹಗಾರರು ಮತ್ತು ನೀವು ಇಷ್ಟಪಟ್ಟ ಅವರ ಕೃತಿ
ಅತಿಥಿ : ನೇಮಿಚಂದ್ರ – ಬದುಕು ಬದಲಿಸಬಹುದು
ಎ.ಆರ್ ಮಣಿಕಾಂತ್ ಅವರ ಮನಸು ಮಾತಾಡಿತು, ಅಪ್ಪ ಎಂದರೆ ಆಕಾಶ, ಅಮ್ಮ ಹೇಳಿದ ಎಂಟು ಸುಳ್ಳುಗಳು

ಉ.ಟೈಮ್ಸ್: ನೀವು ಬರೆದ ಕೃತಿಗಳಲ್ಲಿ ನಿಮಗೆ ತುಂಬಾ ಇಷ್ಟವಾದ ಕೃತಿ
ಅತಿಥಿ : ಇತ್ತೀಚೆಗೆ ಬಿಡುಗಡೆಗೊಂಡ ತುಳು ಕಥೆ “ಇರ್ನೂದೆದ ಒಂಜಿ ನೋಟು” ತುಂಬಾ ಖುಷಿ ಕೊಟ್ಟಿದೆ. ಎಲ್ಲರೂ ಈ ಕಥೆಯ ಮೂಲಕವೇ ನನ್ನನ್ನು ಇತ್ತೀಚಿನ ದಿನಗಳಲ್ಲಿ ಗುರುತಿಸುತ್ತಾರೆ.

ಉ.ಟೈಮ್ಸ್: ನಿಮ್ಮ ಅಭಿರುಚಿಗೆ ಕುಟುಂಬದ ಸಹಕಾರ ಹೇಗಿತ್ತು.
ಅತಿಥಿ : ಮನೆಯಲ್ಲಿ ಎಲ್ಲರೂ ಉತ್ತಮ ಸಹಕಾರ ನೀಡುತ್ತಾರೆ. ಆದರೆ ಯಾರೂ ಕೂಡಾ ಅಭಿರುಚಿಯ ಜೊತೆಗೆ ಕುಟುಂಬದ ಜವಾಬ್ದಾರಿ  ಯನ್ನು ಮರೆಯಬಾರದು.

ಉ.ಟೈಮ್ಸ್: ಯಾವ ಮಾದರಿಯ ಸಾಹಿತ್ಯದ ಬಗೆ ನೀವು ಹೆಚ್ಚು ಇಷ್ಟಪಡುತ್ತೀರಿ?.

ಅತಿಥಿ: ನಾವು ಗಂಭೀರ ವಿಚಾರಗಳ ಬಗ್ಗೆ ಬರವಣಿಗೆಗಳನ್ನು ಬರೆದರೂ. ಒಬ್ಬ ಓದುಗಳಾಗಿ ಹಾಸ್ಯ ಭರಿತ ಸಾಹಿತ್ಯಗಳು ಹೆಚ್ಚು ಇಷ್ಟ ಪಡುತ್ತೇನೆ.

ಉ.ಟೈಮ್ಸ್: ನೀವು ಓರ್ವ ಓದುಗರಾಗಿ ನಿಮ್ಮ ನೆಚ್ಚಿನ ಸಾಹಿತಿ ಯಾರು ಯಾಕೆ?

ಅತಿಥಿ: ಜಯಂತ್ ಕಾಯ್ಕಿಣಿ ಅವರು ನನ್ನ ನೆಚ್ಚಿನ ಸಾಹಿತಿ ಕಾರಣ ಅವರ ಬರವಣಿಗೆಯ ಶೈಲಿ ಇಷ್ಟವಾಗುತ್ತದೆ.

ಶಿಕ್ಷಣ ಕ್ಷೇತ್ರ…

ಉ.ಟೈಮ್ಸ್: ಶಿಕ್ಷಣ ಕ್ಷೇತ್ರದ ಆಯ್ಕೆ ಹೇಗೆ

ಅತಿಥಿ: ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಶಿಕ್ಷಕರು ನಮಗೆ ಪಾಠ ಮಾಡುವಾಗ ನಾನೂ ಒಮ್ಮೆಯಾದರೂ ಶಿಕ್ಷಕಿಯಾಗಿ ಪಾಠ ಮಾಡಬೇಕು ಎಂಬ ಹಂಬಲ ಹುಟ್ಟಿಕೊಂಡಿತ್ತು. ನಂತರದ ದಿನಗಳಲ್ಲಿ ಅದಕ್ಕೆ ಬೇಕಾದ ಶಿಕ್ಷಣ ಪಡೆದೆ. ಈ ಕ್ಷೇತ್ರದ ಅವಕಾಶಗಳೂ ನನ್ನನ್ನು ಹುಡುಕಿಕೊಂಡು ಬಂದಿದ್ದವು. ಹಾಗೇ ಶಿಕ್ಷಕಿಯಾಗಿ ವೃತ್ತಿ ಜೀವನವನ್ನು ಮುಂದುವರೆಸಿದೆ.

ಉ.ಟೈಮ್ಸ್: ನಿಮ್ಮ ಬೋಧನೆಯ ತತ್ವಗಳು ಯಾವುವು..?

ಅತಿಥಿ: ಒಬ್ಬ ಶಿಕ್ಷಕಿ ಅಥವಾ ಶಿಕ್ಷಕರಾದವರು  ಸ್ವತಃ ತಾವೂ ಆಸಕ್ತಿಯಿಂದ ವಿದ್ಯಾರ್ಥಿಗಳಲ್ಲಿ ಪಠ್ಯದ ಕುರಿತು ಆಸಕ್ತಿ ಹುಟ್ಟಿಸುವಂತೆ ಪಾಠ ಮಾಡಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿಯೂ ಕಲಿಕೆಯ ಕುರಿತಾಗಿ ಒಲವು ಹೆಚ್ಚಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ.
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ತುಂಬಾ ಅಗತ್ಯ. ಹಾಗಾಗಿ ಪಾಠದ ನಡುವೆ ವಿದ್ಯಾರ್ಥಿಗಳಿಗೆ ಸಾಧಕರ ಕಥೆ ಹೇಳುವುದು. ವಿದ್ಯಾರ್ಥಿಗಳನ್ನು ಸಮಾಜಕ್ಕೆ ಉತ್ತಮ ಪ್ರಜೆಯಾಗಿ ಪರಿಚಯಿಸುವ ದೃಷ್ಟಿಯಿಂದ ಪೂರಕವಾದ ಶೈಕ್ಷಣಿಕ ವಾತಾವರಣ ಕಲ್ಪಿಸಬೇಕು ಎಂಬುದು ನನ್ನ ತತ್ವ.

ಉ.ಟೈಮ್ಸ್: ಪ್ರಸ್ತುತ ವಿದ್ಯಾರ್ಥಿಗಳಿಗೆ ಯಾವ ರೀತಿ ಶಿಕ್ಷಣ ಅಗತ್ಯವಿದೆ..?

ಅತಿಥಿ : ಈಗಿನ ಆಧುನಿಕ ಸಮಾಜದಲ್ಲಿ ತಂತ್ರಜ್ಞಾನ ತುಂಬಾ ಅಭಿವೃದ್ಧಿ ಹೊಂದಿದೆ. ವಿದ್ಯಾರ್ಥಿಗಳು ಈ ತಂತ್ರಜ್ಞಾನ ದಲ್ಲಿ ಮುಳುಗಿ ಹೋಗಿದ್ದಾರೆ. ಈಗಿನ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣದ ಅಗತ್ಯ ತಂಬಾ ಇದೆ. ವಿದ್ಯಾರ್ಥಿಗಳು ಸಮಾಜದಲ್ಲಿ ಹೇಗೆ ವರ್ತಿಸಬೇಕು?, ಯಾವ ರೀತಿ ಭವಿಷ್ಯ ವನ್ನು ರೂಪಿಸಬೇಕು? ಎಂಬುದನ್ನು ತಿಳಿಯಪಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣ ಅದೂ ಮೌಲ್ಯಯುತವಾದ ಶಿಕ್ಷಣ ಬೇಕೇ ಬೇಕು.

ಉ.ಟೈಮ್ಸ್: ಆನ್ಲೈನ್ ಶಿಕ್ಷಣ ಮತ್ತು ಸಾಂಪ್ರದಾಯಿಕ ಶಿಕ್ಷಣ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು..?

ಅತಿಥಿ : ಆನ್ಲೈನ್ ಶಿಕ್ಷಣದಲ್ಲಿ ಮಕ್ಕಳು  ಶಾಲೆಗಳಲ್ಲಿ ಅವರ ಬೆಳವಣಿಗೆಗೆ ಸಿಗುವ ಪೂರಕ ವಾತಾವರಣದಿಂದ ವಂಚಿತರಾಗುತ್ತಿದ್ದಾರೆ. ಸಹಪಾಠಿಗಳ ಜೊತೆಗಿನ ಒಡನಾಟ, ಆಟ-ಪಾಠ, ಮಾಹಿತಿಗಳ ವಿನಿಮಯ, ಪರಸ್ಪರ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯ ಮರೆಯಾಗಿದೆ. ಆನ್ಲೈನ್ ಕ್ಲಾಸ್‍ನ ಮೂಲಕ ಶೀಕ್ಷಣ ಎನ್ನುವುದು ಯಾಂತ್ರೀಕೃತ ವಾಗಿಬಿಟ್ಟಿದೆ.
 ಇಲ್ಲಿ ಏನಿದ್ದರು ಶಿಕ್ಷಕರಿಗೆ ತರಗತಿಗಳನ್ನು ಮುಗಿಸುವ ತರಾತುರಿ, ಮಕ್ಕಳಿಗೆ  ವಾರ್ಷಿಕ  ಪರೀಕ್ಷೆ ಬರೆಯುವುದು, ಉತ್ತಮ ಅಂಕ ಗಳಿಸುವುದು ಇಷ್ಟಕ್ಕೆ ಸೀಮಿತವಾಗಿದೆ. ಹಾಗಾಗಿ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪರಿಪೂರ್ಣ ಸಾಂಪ್ರದಾಯಿಕ ಶಿಕ್ಷಣವೇ ಉತ್ತಮ ಎನ್ನುವುದು ನನ್ನ ವಾದ.

ಉ.ಟೈಮ್ಸ್: ಈಗಿನ ವಿದ್ಯಾರ್ಥಿಗಳಿಗೆ ನಿಮ್ಮ ಸಲಹೆ?

ಅತಿಥಿ : ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಅಗತ್ಯವಿದೆಯಾದರೂ ಹೆಚ್ಚಿನ ಮಕ್ಕಳು ಅನಗತ್ಯವಾಗಿ ಮೊಬೈಲ್ ಬಳಕೆಯ ಚಟಕ್ಕೆ ಬಲಿಯಾಗುತ್ತಿದ್ದಾರೆ. ಉತ್ತಮ ಉದ್ದೇಶಕ್ಕಾಗಿ ಬಳಕೆಯಾಗಬೇಕಾಗಿದ್ದ ಮೊಬೈಲ್‍ಗಳು ದುರ್ಬಳಕೆಯಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಜೀವನ ಹಾಳಾಗುತ್ತಿದೆ.
ಹಾಗಾಗಿ ವಿದ್ಯಾರ್ಥಿಗಳಿಗೆ ಒಂದು ಕಿವಿ ಮಾತು “ಮೊಬೈಲ್ ಬಳಸಿ ಆದರೆ ಅದು ನಿಮ್ಮ ಶಿಕ್ಷಣಕ್ಕೆ, ಕಲಿಕೆಗೆ ಪೂರಕವಾಗಿರಲಿ. ಉತ್ತಮ ಉದ್ದೇಶಗಳಿಗೆ ಮೊಬೈಲ್ ಬಳಕೆಮಾಡಿ, ಅನಗತ್ಯ ವಿಷಯಗಳಿಗೆ ಮೊಬೈಲ್ ದುರ್ಬಳಕೆ ಮಾಡಬೇಡಿ.
ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಅದರಲ್ಲಿನ ಉತ್ತಮ ವಿಚಾರಗಳನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಿ
ಯಾವುದೇ ಸೋಲಿಗೆ ಕುಗ್ಗ ಬೇಡಿ ಕಲಿಯುವವನಿಗೆ/ಸಾಧಿಸುವವನಿಗೆ ನಿರಂತರ ಅವಕಾಶಗಳು ಇದ್ದೇ ಇರುತ್ತದೆ.

ಉ.ಟೈಮ್ಸ್ : ನಿಮ್ಮ ಜೀವನದ ಪಯಣವನ್ನು ಪುಸ್ತಕ ರೂಪದಲ್ಲಿ ಹೊರತಂದರೆ ಅದಕ್ಕೆ ಏನು ಹೆಸರು ಕೊಡಲು ಬಯಸುತ್ತೀರ..?
ಅತಿಥಿ : ನನ್ನ ಚಿತ್ತದಲಿ ಅಚ್ಚೊತ್ತಿರುವ ನನ್ನದೇ  ಜೀವನದ ಏಳು ಬೀಳು ಪಯಣವನ್ನು ಪುಸ್ತಕರೂಪದಲ್ಲಿ ತರುವುದಾದರೆ ಅದಕ್ಕೆ  “ಚಿತ್ತ ಬಿಂಬ” ಎಂಬ ಹೆಸರು ಸೂಕ್ತವಾಗಿದೆ.

ನಾ ಕಂಡಂತೆ ಇವರದ್ದು ಸರಳ ಸ್ವಭಾವ, ವಿನಯದಿಂದ ಕೂಡಿದ ಮಾತನ್ನೊಳಗೊಂಡ ವ್ಯಕ್ತಿತ್ವ. ಇವರ ಬರಹಗಳೇ ಇವರ ಮಾತುಗಳು. ಇವರ ಸಾಹಿತ್ಯ ಕ್ಷೇತ್ರದ ಸಾಧನೆಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನದ ಕಾವ್ಯ ಚೂಡಾಮಣಿ ರತ್ನ ಪ್ರಶಸ್ತಿ, ಡಾ. ದೊಡ್ಡ ರಂಗೇ ಗೌಡ ಕಾವ್ಯ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದ್ದಾರೆ. ಅಲ್ಲದೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿದ್ದಾರೆ.

 ಇವರ ಸಾಹಿತ್ಯ ಲೋಕದ ಸಾಧನೆಗೆ ಅನೇಕ ವಾಹಿನಿಗಳು ಇವರನ್ನು ಗುರುತಿಸಿ ಗೌರವಿಸಿದೆ. ಇವರು ಓರ್ವ ಸಾಹಿತಿ ಆಗಿರುವ ಜೊತೆಗೆ ಉತ್ತಮ ನಿರೂಪಕಿಯೂ ಆಗಿದ್ದು, ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯ ಕ್ರಮ ನಿರೂಪಣೆ ಮಾಡಿದ್ದಾರೆ.
 ಹಾಗೂ ಅನೇಕ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಬಾಗವಹಿಸಿದ್ದಾರೆ. ಹಾಗೂ ಚರ್ಚಾಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಮಂಗಳೂರಿನ ಆಕಾಶವಾಣಿಯಲ್ಲಿ ಇವರ ಕಥೆ, ಕವನ, ಭಾಷಣಗಳು ಪ್ರಸಾರ ಗೊಂಡಿವೆ. ವಿಜಯ ಕರ್ನಾಟಕ, ಉದಯವಾಣಿ ಸೇರಿದಂತೆ ಮೊದಲಾದ ಹೆಸರಾಂತ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿದೆ.

ಮಂಗಳೂರಿನ ಖಾಸಗಿ ವಾಹಿನಿ ನಡೆಸಿದ ತುಳು ಕವನ ಸ್ಪರ್ಧೆಯಲ್ಲಿ ಇವರ “ಕರಿನ ಕಾಲ” ಎಂಬ ಕವಿತೆ ಅತಿ ಹೆಚ್ಚು ವೀಕ್ಷಕರು ಮತ್ತು ಅತಿ ಹೆಚ್ಚು ಮೆಚ್ಚುಗೆ ವಿಭಾಗದಲ್ಲಿ ಪ್ರಥಮ ಬಹುಮಾನ  ಮತ್ತು ಅದೇ ಕವನ ಕಾವ್ಯ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದೆ. ಕೇಂದ್ರ ಸಾಹಿತ್ಯ ವೇದಿಕೆ ಬೆಂಗಳೂರು ಇವರು ನಡೆಸಿದ ರಾಜ್ಯ ಮಟ್ಟದ ಆಧುನಿಕ ವಚನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದುಕೊಂಡಿದೆ.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ. ಬಂಟ್ವಾಳದ ಒಡಿಯೂರಿನಲ್ಲಿ ನಡೆದ  ತುಳು ಸಾಹಿತ್ಯ ಸಮ್ಮೇಳನ, ಉಡುಪಿಯ ರಾಜಾಂಗಣದಲ್ಲಿ ನಡೆದ ಶಿಕ್ಷಕ ಸಾಹಿತ್ಯ ಸಮ್ಮೇಳನ,ಕೋಟದ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆದ ಕವಿಗೋಷ್ಠಿ, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅನೇಕ ಸಾಹಿತ್ಯ ಸಮ್ಮೇಳನ ಹೀಗೆ ಹಲವಾರು ಕಡೆಗಳಲ್ಲಿ ನಡೆದ ಕಥಾಗೋಷ್ಠಿ ಹಾಗೂ ಕವಿಗೋಷ್ಠಿಯಲ್ಲಿ ಕಥೆ ಹಾಗೂ ಕವನ ವಾಚನ ಮಾಡಿದ್ದಾರೆ.

ಹಿಂದೆ ವಾಸಂತಿಯವರಂತಹ ಗುರು ಮುಂದೆ ಗುರಿ ಇದ್ದರೆ ಎಂತಹ ವಿದ್ಯಾರ್ಥಿಯಾದರು ಸಾಧನೆ ಮಾಡಲು ಸಾಧ್ಯ.

Leave a Reply

Your email address will not be published. Required fields are marked *

error: Content is protected !!