ಭಗವದ್ಗೀತೆಯ ಶ್ಲೋಕಾರ್ಥ-೩೩
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಅರ್ಜುನ ಉವಾಚ
ಶ್ಲೋಕ….೩೩
ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾ: ಸುಖಾನಿ ಚ |
ತ ಇಮೇವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಧನಾನಿ ಚ||
ಅರ್ಜುನ ಕೃಷ್ಣನ ಬಳಿ ತನಗೆ ಯುದ್ಧ ಮಾಡುವ ಆಕಾಂಕ್ಷೆ ಇಲ್ಲದುದಕ್ಕಾಗಿ ಹಲವಾರು ನೆಪಗಳನ್ನು ಹೇಳುತ್ತಿದ್ದಾನೆ …ಯಾವಾಗ ಮನಸ್ಸಿಗೆ ಇಷ್ಟ ಇರುವುದಿಲ್ಲವೋ.., ಆತಂಕ ಒತ್ತಡದಲ್ಲಿ ಮನಸ್ಸು ಇರುವುದೋ ಆಗ ಏನೇ ಘಟಿಸಿದರೂ ಅಪಶಕುನದಂತೆ ಭಾಸವಾಗುವುದು. ಶಾಲೆಗೆ ಹೋಗಲು ಇಷ್ಟ ಇಲ್ಲದೆ ಮಗು ಹೇಗೆ ಸುಳ್ಳು ಕಾರಣವನ್ನು ಹೇಳುವುದೋ ,ಹಾಗೇ ಅರ್ಜುನ ಏನೇನೋ ನೆಪಗಳನ್ನು ಹೇಳಿ ,, ಯುದ್ಧ ಮಾಡಲಾರೇ ಎನ್ನುವನು. ಎಲ್ಲದಕ್ಕೂ ಮೂಲ ಕಾರಣ ” ನಾನು” ಎಂಬ ಅಹಂಕಾರ, “ನನ್ನದು” ಎಂಬ ಮಮಕಾರ .. ಇದರಿಂದಲೇ ಮನುಷ್ಯನ ಮನಸ್ಸು ಸಹ ಹಾಳಾಗಿ ಬೌದ್ಧಿಕವಾದ ದಿವಾಳಿತನ ಉಂಟಾಗುವಂತೆ ಮಾಡುವುದು..
ಮೇಲುನೋಟಕ್ಕೆ ಇಲ್ಲಿ ಅರ್ಜುನನ ಮಾತು ತಪ್ಪೆಂದು ಹೇಳಲು ಸಾಧ್ಯವಿಲ್ಲ ..ತಮ್ಮವರನ್ನೇ ಕೊಂದು ಸಿಗುವಂತಹ ಶ್ರೇಯಸ್ಸು ಮನಸ್ಸಿಗೆ ಹಿತ ಕೊಡುವುದಿಲ್ಲ ..ಆದರೆ ಧರ್ಮ ಏನು ಹೇಳುವುದು?? ಅದನ್ನೂ ಯೋಚಿಸಬೇಕಲ್ಲವೇ!! ಅಧರ್ಮದ ಹಾದಿಯಲ್ಲಿ ಸಾಗಿ ದುಷ್ಟತನ ತೋರುವ ಯಾರೇ ಆದರೂ ಅವರನ್ನು ನಾಶ ಮಾಡಿ, ಧರ್ಮ ಸಂಸ್ಥಾಪನೆ ಮಾಡುವುದು ಕ್ಷತ್ರಿಯನ ಕರ್ತವ್ಯ..ಆದರೆ ಇಲ್ಲಿ ಅರ್ಜುನ ಮೋಹಕ್ಕೆ ಸಿಲುಕಿ ,ತನ್ನ ಕರ್ತವ್ಯ ಮರೆಯುತ್ತಿದ್ದಾನೆ..ಇನ್ನೂ ಯುದ್ಧವೇ ಆರಂಭವಾಗಿಲ್ಲಾ ..ಆದರೂ ಎಲ್ಲವೂ ತನ್ನಿಂದಲೇ ಆಗುವುದು , ತಾನೇ ಎಲ್ಲರನ್ನೂ ಕೊಲ್ಲುವವನು ಎಂಬ ಭ್ರಮೆಯಲ್ಲಿದ್ದಾನೆ .. ಹಾಗಾಗಿ ವೈರಾಗ್ಯದ ಮಾತುಗಳನ್ನು ಆಡುತ್ತಾ,ತನಗೆ ಯುದ್ಧ ,ರಾಜ್ಯ , ಗೆಲುವು ಯಾವುದೂ ಬೇಡ ಎನ್ನುತ್ತಿದ್ದಾನೆ .ಕೇವಲ ಸುಖ ಭೋಗಕ್ಕೆ ತಾನು ಯುದ್ಧ ಮಾಡುವುದೆಂಬ ಭ್ರಾಂತಿ ಅವನಲ್ಲಿದೆ .ಆದರೆ ಕೃಷ್ಣ ಅವತರಿಸಿರುವುದು ..ಧರ್ಮ ಸಂಸ್ಥಾಪನೆಗಾಗಿ ಮತ್ತು ಪಾಂಡವರ ಕಡೆ ಧರ್ಮ ಇರುವುದರಿಂದಲೇ ಅವರನ್ನು ರಕ್ಷಿಸಲು ಮುಂದಾಗಿರುವುದು .. ಆದರೆ ಅರ್ಜುನ ,ತಾನು ಕ್ಷತ್ರಿಯನಾಗಿ ಹುಟ್ಟಿದ್ದೇಕೆ ಎಂಬುದನ್ನೇ ಮರೆತು ವೈರಾಗ್ಯದ ಮಾತುಗಳನ್ನಾಡುತ್ತಿದ್ದಾನೆ .. ಹಾಗೇ ಇನ್ನೂ ಸೋಲು ಗೆಲುವು..ಯಾವುದೂ ಖಾತ್ರಿ ಇಲ್ಲದ ಸಂದರ್ಭದಲ್ಲಿ ಅರ್ಜುನ ತಾನು ಗೆದ್ದವನಂತೆ ಮಾತನಾಡುತ್ತಿದ್ದಾನೆ.
ಯಾರಿಗಾಗಿ ತಾನು ರಾಜ್ಯವನ್ನು, ಸಿಂಹಾಸನವನ್ನು ಬಯಸಿದ್ದನೋ,ಅವರೇ ಇಂದು ಹೋರಾಡಲು ತನ್ನೆದುರು ನಿಂತಿದ್ದಾರೆ .ಅವರೆಲ್ಲರೂ ತಮ್ಮ ಆಸ್ತಿಪಾಸ್ತಿಯ ಆಸೆಬಿಟ್ಟು , ತಮ್ಮ ಪ್ರಾಣವನ್ನೂ ಕೊಡಲು ಸಿದ್ಧರಿದ್ದು ,ಹೋರಾಡಲು ಬಂದು ನಿಂತಿದ್ದಾರೆ . ಇಲ್ಲಿ ಅರ್ಜುನನ ಮನದ ಭಾವನೆ ಗಮನಿಸಿದಾಗ ತಿಳಿಯುವುದು ..ಅವನು ಇನ್ನೊಬ್ಬರಿಗಾಗಿ ಯುದ್ಧ ಮಾಡಲು ಬಂದಿದ್ದಾನೆ ಹೊರತು ತನಗಾಗಿ ಅಲ್ಲ..ಯಾರಿಗಾಗಿ ಯುದ್ಧ??ನಾಳೆ ನೋಡೋಣ 🙏
✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





