ಭಗವದ್ಗೀತೆಯ ಶ್ಲೋಕಾರ್ಥ-೩೦

ಪ್ರಥಮೋಧ್ಯಾಯ:

ಅರ್ಜುನ ವಿಷಾದಯೋಗ

ಅರ್ಜುನ ಉವಾಚ

ಶ್ಲೋಕ..೩೦

ಗಾಂಡೀವಂ ಸ್ರಂಸತೇ ಹಸ್ತಾತ್ ತ್ವಕ್ ಚೈವ ಪರಿದಹ್ಯತೇ |
ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವಚ ಮೇ ಮನ:||

ಅತಿ ಉತ್ಸಾಹದಿಂದ ದುಷ್ಟ ಕೂಟದವರನ್ನು ಸದೆಬಡಿಯುವೆನೆಂದು ಬಂದ ಅರ್ಜುನ ಈಗ ಕೃಷ್ಣನ ಮುಂದೆ ,ತನ್ನ ದೇಹ ಕಂಪಿಸುತ್ತಿದೆ.. ಶರೀರದಲ್ಲಿ ಅವಯವಗಳು ಕುಸಿಯುತ್ತಿದೆ ಎಂದು ಸಂಕಟ ಪಡುತ್ತಿದ್ದಾನೆ .. ಅಷ್ಟೇ ಅಲ್ಲದೆ ” ತನ್ನ ಕೈಯಿಂದ ಗಾಂಡೀವ ಧನುಸ್ಸು ಜಾರಿ ಹೋಗುತ್ತಿದೆ ..ಚರ್ಮವು ಉರಿಯುತ್ತಿದೆ .. ರಥದಲ್ಲಿ ನಿಲ್ಲಲೂ ಸಹ ನನಗೆ ಶಕ್ತಿ ಇಲ್ಲದಂತಿದೆ. ಮನಸ್ಸು ದೇಹ ಎರಡೂ ಸಹ ನನ್ನ ಅಂಕೆಯಲ್ಲಿ ಇಲ್ಲದೇ ನನಗೆ ನಾನೇ ಸೋಲುತ್ತಿದ್ದೇನೆ. ಹಾಗೆ ಮನಸ್ಸಿನಲ್ಲಿ ವಿಸ್ಮೃತಿ ಉಂಟಾಗುತ್ತಿದೆ..”..ಎಂದು ಕೃಷ್ಣನ ಬಳಿ ತನ್ನ ಅಂತರಂಗದ ತುಮುಲ ಹೊರಹಾಕುತ್ತಿದ್ದಾನೆ..ಇಲ್ಲಿ ಅತಿ ಆತ್ಮವಿಶ್ವಾಸದಿಂದ ಬಂದಿದ್ದ ಅರ್ಜುನ ಹೀಗಾಡಲು ಕಾರಣವೇ ನನ್ನವರು ಎಂಬ ಮಮಕಾರ .. ಯಾವಾಗ ಮನುಷ್ಯ ತನ್ನವರು ಎಂಬ ಅಂತಃಕರಣದಲ್ಲಿ ಸಿಲುಕುವನೋ,ಆಗ ತನ್ನಿಂತಾನೇ ಮನಸ್ಸಿನ ಮತ್ತು ದೇಹದ ಮೇಲೆ ನಿಯಂತ್ರಣ ಕಳೆದುಕೊಳ್ಳುವನು..ಇಲ್ಲಿ ಮನಸ್ಸಿನ ಭಾವನೆ ದೇಹದ ಮೇಲೆ ಹೇಗೆಲ್ಲ ಪ್ರಭಾವ ಬೀರುತ್ತದೆ ಎಂದು ಕಾಣಬಹುದು…ಅಲ್ಲಿಯವರೆಗೆ ಇರದ ಕರುಣೆ ,ಯಾವಾಗ ಅವನ ಮನಸ್ಸನ್ನು ಹೊಕ್ಕಿತೋ,ಆಗ ತನ್ನವರ ಮೇಲೆ ಅನುಕಂಪ ಮೂಡಿತು..ಅದು ಶರೀರ ಮನಸ್ಸಿನ ಮೇಲೆ ಪ್ರಭಾವ ಬೀರಿತು ..
ಉದಾಹರಣೆಗೆ ದಾರಿಯಲ್ಲಿ ನಡೆದು ಹೋಗುವಾಗ ಅಪಘಾತವಾದ ಸುದ್ಧಿ ಕೇಳಿದೆವೆಂದು ಕೊಳ್ಳೋಣ..ಒಬ್ಬ ಹುಡುಗ ಬೈಕಿನಲ್ಲಿ ಬಂದವನು ಇನ್ನೊಂದು ಗಾಡಿಗೆ ತಾಗಿ ಬಿದ್ದಿರುವನೆಂದು ತಿಳಿದಾಗ , “ಈಗಿನ ಮಕ್ಕಳಿಗೆ ಹೇಳೋರು ಕೇಳೋರು ಯಾರಿಲ್ಲಾ..ಮಜಾ ಮಾಡೋದೊಂದೇ ಗೊತ್ತು.”.ಹಾಗೇ ಹೀಗೆ ಅಂತ ಹೇಳುವ ಮನಸ್ಸು .. ಒಂದೊಮ್ಮೆ ಅಪಘಾತ ಆಗಿ ಬಿದ್ದಿರುವುದು ತನ್ನ ಮಗನೇ ಎಂದು ತಿಳಿದಾಗ ಹೇಗೆ ವರ್ತಿಸುವುದು ?? ಅರ್ಜುನನ ರೀತಿ ದೇಹ ಕಂಪಿಸಿ , ಹಿಡಿದಿರುವ ವಸ್ತು ಜಾರಿ ಕೆಳಗೆ ಬೀಳುತ್ತದೆ,ನಿಲ್ಲಲೂ ಸಹ ಶಕ್ತಿ ಸಾಲದೇ ಕುಗ್ಗುವಂತೆ ಅರ್ಜುನನ ಸ್ಥಿತಿಯಂತೆಯೇ ನಮ್ಮ ಪರಿಸ್ಥಿತಿ….ಈ ಸ್ಥಿತಿಗೆ ಕಾರಣ ತನ್ನ ಮಗ ಎಂಬ ಮಮಕಾರ ..ಹಾಗೇ ಲೋಕಾರೂಢಿಯಲ್ಲಿ ನಾವು ಎಲ್ಲೋ ಯಾರಿಗೋ ಸಾವು ಸಂಭವಿಸಿದಾಗ , ಅಯ್ಯೋ ಪಾಪ ಎಂದು ಮರುಗುತ್ತೇವೆ..ಆದರೆ ನಮ್ಮ ಅತಿ ಆತ್ಮೀಯರಿಗೆ ಏನಾದರೂ ಆದಾಗ ಅರ್ಜುನನಂತೆ ದುಃಖ ಪಡುತ್ತೇವೆ..ಇದೇ ಮಾನಸಿಕ ಸ್ಥಿತಿಗೆ ಕೃಷ್ಣ ಮುಂದೆ ಚಿಕಿತ್ಸೆ ನೀಡಲಿದ್ದಾನೆ ..

ಧನ್ಯವಾದಗಳು 🙏

✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!