ಭಗವದ್ಗೀತೆಯ ಶ್ಲೋಕಾರ್ಥ-೨೮
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
..
ಸಂಜಯ ಉವಾಚ…
ಕೃಪಯಾ ಪರಯಾವಿಷ್ಟೋ ವಿಷೀದನ್ನಿದಮಬ್ರವೀತ್
ಅರ್ಜುನ ಉವಾಚ
ದೃಷ್ಟ್ವೇದಂ ಸ್ವಜನಂ ಕೃಷ್ಣ ಯುಯುತ್ಸುಂಸಮುಪಸ್ಥಿತಮ್
ಅರ್ಜುನ ಇದುವರೆಗೂ ಬಹಳ ಉತ್ಸಾಹದಿಂದ, ಯುದ್ಧೊನ್ಮಾದದಿಂದ ಕೂಡಿದವನಾಗಿ, ದುಷ್ಟ ದುರ್ಯೋಧನನ ಸಹಾಯಕ್ಕೂ ಬಂದ ಅಧರ್ಮಿಗಳನ್ನು ನೋಡಬೇಕೆಂದು ಉದ್ಗರಿಸಿದ್ದ. ಎರಡೂ ಸೇನೆಯ ಮಧ್ಯೆ ರಥವನ್ನು ನಿಲ್ಲಿಸಲು ತಾನೇ ಕೃಷ್ಣನಿಗೆ ಆದೇಶಿಸಿದ್ದ..ಅದೂ ಅಲ್ಲದೇ ತನ್ನ ಗಾಂಡೀವ ಧನುಸ್ಸನ್ನು ಎತ್ತಿ ಹಿಡಿದು ಅಧರ್ಮಿಗಳ ವಿರುದ್ಧ ಹೋರಾಟಕ್ಕೆ ಬಹಳ ಉತ್ಸಾಹದಿಂದ ಇದ್ದಿದ್ದ ಅರ್ಜುನ , ಯಾವಾಗ ತನ್ನ ಎದುರು ಅಜ್ಜನಾದ ಭೀಷ್ಮಾಚಾರ್ಯರು, ವಿದ್ಯೆ ಕಲಿಸಿದ ಗುರು ದ್ರೋಣ , ಕೃಪಾಚಾರ್ಯರನ್ನು , ತನ್ನ ಸೋದರರು ,ಮಿತ್ರರು , ಹಿತೈಷಿಗಳು, ಸೋದರ ಮಾವಂದಿರು , ಏನೂ ತಪ್ಪು ಮಾಡದ ಸೈನಿಕರನ್ನು ನೋಡಿದನೋ, ಆಗ ಅವನ ಮನಸ್ಸಿನಲ್ಲಿ ಭಾವ ವಿಕಾರ ಆರಂಭವಾಯಿತು . ಮಮಕಾರದಿಂದಾಗಿ ಮನದ ದ್ವೇಷ ಭಾವ , ಕನಿಕರಕ್ಕೆ ತಿರುಗಿ , ಅವನ ಮನೋಭಾವವನ್ನೇ ಬದಲಿಸಿತು. ಹಾಗಾದರೆ ಅರ್ಜುನನಿಗೆ ಮೊದಲೇ ತಿಳಿದಿಲ್ಲವೇ?? ಯುದ್ಧದ ಆರಂಭದಲ್ಲಿ ತನ್ನವರ ಜೊತೆಗೆ ಹೋರಾಡಬೇಕೆಂದು ಗೊತ್ತಿದ್ದೂ,ಈಗ ಹೀಗೆ ಕರುಣೆಯಿಂದ ದುಃಖ ಪಡಲು ಕಾರಣ ,ಅವನು ಧರ್ಮರಾಯನ ಧರ್ಮದ ಪಕ್ಷವನ್ನೂ ಬಿಟ್ಟು ಮಧ್ಯೆ ನಿಂತಿದ್ದಾನೆ .ಅತ್ತ ದುರ್ಯೋಧನನ ದುಷ್ಟ ಪಕ್ಷದಲ್ಲೂ ನಿಂತಿರದ ಕಾರಣ , ಮನಸ್ಸು ಸಹ ಧರ್ಮಾಧರ್ಮಗಳ ವಿವೇಚನೆ ಕಳೆದುಕೊಂಡು ಗೊಂದಲ ಗೊಂಡಿದೆ..ನಮಗೂ ಅಷ್ಟೇ.. ಬದುಕಿನಲ್ಲಿ ಇಂತಹ ಸನ್ನಿವೇಶ ಹಲವಾರು ಬಾರಿ ಎದುರಾಗುವುದಿದೆ . ಅದಕ್ಕೇ ಗೀತೆಯನ್ನು ಮನಃಶಾಸ್ತ್ರದ ಗ್ರಂಥ ಎಂದೂ , ಕೃಷ್ಣ ಒಬ್ಬ ಶ್ರೇಷ್ಠ ಮನಃಶಾಸ್ತ್ರಜ್ಞ ಎಂದೂ ಹೇಳುವುದು. ಇಷ್ಟರ ತನಕ ಅರ್ಜುನನ ಯೋಚನೆಯೇ ಬೇರೆಯಾಗಿತ್ತು..ಇನ್ನು ಮುಂದೆ ಅವನ ಭಾವನೆಯೇ ಬೇರೆಯಾಗುವುದು ..ಕಾರಣ ..ತನ್ನವರೆಂಬ ಮಮಕಾರ ..ರಾಜನಾದವನು ಧರ್ಮದ ಪರ ನಿಂತಾಗ , ಹೀಗೆ ತನ್ನವರೆಂಬ ಮೋಹಕ್ಕೆ ಸಿಲುಕಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಸೋಲಬಾರದು..ಆದರೆ ಅರ್ಜುನ ತನ್ನವರನ್ನು ನೋಡಿ ಕನಿಕರ ಪಟ್ಟು ,ಕೃಪೆಯಿಟ್ಟು ದುಃಖ ಪಡುತ್ತಿದ್ದಾನೆ ..ಇನ್ನೇನು ಅವಸ್ಥೆ ಅರ್ಜುನನದ್ದು ಎಂದು ನಾಳೆ ನೋಡೋಣ 🙏
✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





