ಭಗವದ್ಗೀತೆಯ ಶ್ಲೋಕಾರ್ಥ-೨೯
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಶ್ಲೋಕ ..೨೯
ಅರ್ಜುನ ಉವಾಚ…
ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ|
ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ||
ಎರಡೂ ಸೇನೆಗಳ ನಡುವೆ ನಿಂತು, ಎದುರಿನಲ್ಲಿ ತನ್ನವರನ್ನು ನೋಡಿದಾಗ ಅರ್ಜುನನ ಮನದ ಭಾವನೆಯೇ ಬದಲಾಗಿ ,ಅದುವರೆಗೆ ಇದ್ದ ಯುದ್ಧೊನ್ಮಾದದ ಜಾಗದಲ್ಲಿ,” ನಾನು ಮತ್ತು ನನ್ನ” ಎಂಬ ಅಹಂಕಾರ ಮತ್ತು ಮಮಕಾರದ ಭಾವ ಎದ್ದು ನಿಂತಿತು. ಅಧರ್ಮಿಗಳಿಗೆ ಸಹಕಾರ ಮಾಡುವ ಎಲ್ಲರನ್ನೂ ಹೊಡೆದುರುಳಿಸುವೆ ಎಂದು ತನ್ನ ಗಾಂಢೀವ ಎತ್ತಿ ಹಿಡಿದು ಬಂದ ಅರ್ಜುನ ಈಗ ಕೃಷ್ಣನ ಬಳಿ ಹೇಳುತ್ತಾನೆ..” ಹೇ ಕೃಷ್ಣಾ!! ಯುದ್ಧರಂಗದಲ್ಲಿ ಹೋರಾಟಕ್ಕೆ ನಿಂತಿರುವ ಈ ಎಲ್ಲಾ ನನ್ನ ಬಂಧು ಬಾಂಧವರನ್ನು ನೋಡಿ ನನ್ನ ಅವಯವಗಳು ಸೊರಗಿ ಹೋಗುತ್ತಿವೆ ..ಬಾಯಿಯೂ ಸಹ ಒಣಗಿ ಹೋಗುತ್ತಿದೆ ..ನನ್ನ ಇಡೀ ಶರೀರವು ಕಂಪಿಸುತ್ತಿದೆ..ಹಾಗೇ ರೋಮಾಂಚನದ ಅನುಭವವಾಗುತ್ತಿದೆ” . ಇಲ್ಲಿ ಅರ್ಜುನನ ಅವಸ್ಥೆ ಹೇಗಾಗಿದೆಯೆಂದರೆ , ನ್ಯಾಯ ಕೊಡಬೇಕಾದ ನ್ಯಾಯಾಧೀಶನ ಎದುರು ಅವನ ಮಗನೇ ತಪ್ಪು ಮಾಡಿ ಬಂದು ನಿಂತಾಗ , ಅವನು ಮಗನ ವ್ಯಾಮೋಹದಲ್ಲಿ ನ್ಯಾಯ ಕೊಡಲಾಗದೇ ಪರಿತಪಿಸಿದಂತೆ…ಹಾಗೇ ಬದುಕಿನಲ್ಲಿ ನಾವೂ ಸಹ ಇದನ್ನು ಅನುಭವಿಸುತ್ತೇವೆ ….ಎಲ್ಲೋ ಒಂದು ಕೆಟ್ಟ ಘಟನೆ ನಡೆದಾಗ ನಾವು ನೀಡುವ ಪ್ರತಿಕ್ರಿಯೆಗೂ , ನಮ್ಮ ಪ್ರೀತಿ ಪಾತ್ರರಾದ ಬಂಧುಗಳಿಗೆ ಕೆಟ್ಟದ್ದು ಘಟಿಸಿದಾಗ ನಾವು ನೀಡುವ ಪ್ರತಿಕ್ರಿಯೆಗೂ ವ್ಯತ್ಯಾಸ ಇದೆ ..ಯಾರಿಗೋ ಏನೋ ಆದರೆ ಸ್ವಲ್ಪ ದಯೆ ತೋರಿಸಿ ಮರುಗುವ ನಾವು ನಮ್ಮವರಿಗೆ ಏನಾದರೂ ಆದಾಗ ಹೀಗೆ ಅರ್ಜುನನಂತೆ ವರ್ತಿಸುತ್ತೇವೆ ..ಏಕೆಂದರೆ ಅಲ್ಲಿ ” ನನ್ನ ” ಎಂಬ ಮಮಕಾರ ಜಾಗೃತ ಹಾಗೂ” ನಾನು” ಎಂಬ ಅಹಂಕಾರ ಜಾಗೃತ ಆಗಿರುವುದು ..ಈ ನಾನು ನನ್ನದು ಎಂಬುದನ್ನು ಹೇಗೆ ದಾಟಿ ಹೋಗಿ , ಭಗವಂತನ ಚಿಂತನೆಯಲ್ಲಿ ಬದುಕನ್ನು ನೆಮ್ಮದಿಯಿಂದ ಬದುಕಬಹುದು ಎಂಬುದನ್ನು ತಿಳಿಸುವುದೇ ಗೀತೆಯ ಉದ್ದೇಶ .. ಅದುವೇ ಕೃಷ್ಣನ ಸಂದೇಶ . ಅರ್ಜುನನ ಅವಸ್ಥೆ ಮುಂದೇನಾಗುತ್ತದೆ?? ನಾಳೆ ನೋಡೋಣ 🙏
✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





