ಭಗವದ್ಗೀತೆಯ ಶ್ಲೋಕಾರ್ಥ-೨೪
ಭಗವದ್ಗೀತೆಯ ಶ್ಲೋಕಾರ್ಥ
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಶ್ಲೋಕ ..೨೪
ಸಂಜಯ ಉವಾಚ…
ಏವಮುಕ್ತೋ ಹೃಷೀಕೇಶೋ ಗುಡಾಕೇಶೇನ ಭಾರತ|
ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಮ್||
ಅರ್ಜುನ ಕೃಷ್ಣನ ಬಳಿ ತನ್ನ ರಥವನ್ನು ಎರಡು ಸೇನೆಯ ನಡುವೆ ನಿಲ್ಲಿಸಲು ಹೇಳಿ , ತಾನು ಯಾರೊಂದಿಗೆ ಯುದ್ಧ ಮಾಡಬೇಕೆಂದೂ ಮತ್ತು ದುಷ್ಟ ದುರ್ಯೋಧನನಿಗೂ ಸಹಾಯ ಮಾಡಲು ಬಂದವರನ್ನೂ ನೋಡಬೇಕೆಂಬ ಅಪೇಕ್ಷೆ ಇದೆ ಎಂದು ತಿಳಿಸಿದನು ….ದಿವ್ಯ ದೃಷ್ಟಿಯಿಂದ ಇದೆಲ್ಲವನ್ನೂ ನೋಡಿ ಧೃತರಾಷ್ಟ್ರನಿಗೆ ತಿಳಿಸುತ್ತಿದ್ದ ಸಂಜಯ ನುಡಿಯುತ್ತಾನೆ..”ಹೇ ಭಾರತ , ಗುಡಾಕೇಶನಾದ ಅರ್ಜುನನು ಹೃಷಿಕೇಶನ ಬಳಿ ಹೀಗೆ ಹೇಳಿದಾಗ , ಕೃಷ್ಣನು ಎರಡೂ ಸೇನೆಗಳ ಮಧ್ಯೆ ಅಗ್ನಿ ದೇವ ಕರುಣಿಸಿದ ಉತ್ತಮವಾದ ದೊಡ್ಡ ರಥವನ್ನು ತಂದು ನಿಲ್ಲಿಸಿದನು” .. ಇಲ್ಲಿ ಅರ್ಜುನನನ್ನು” ಗುಡಾಕೇಶ” ಎಂದು ಸಂಭೋಧಿಸಲಾಗಿದೆ..ಗುಡಾಕ ಎಂದರೆ ‘ನಿದ್ರೆಯನ್ನು ಗೆದ್ದವನು’.. ಎಂದರ್ಥ. ನಿದ್ರೆಯನ್ನು ಗೆದ್ದವನು ಜ್ಞಾನಿಯಾದವನು ಮಾತ್ರವೇ ಹೊರತು ಸಾಮಾನ್ಯ ಜನರಿಗೆ ಅಸಾಧ್ಯ. ಇಂತಹ ಜ್ಞಾನಿಯಾದ ಅರ್ಜುನನ ಮನಸ್ಸೂ ಸಹ ಕ್ಷಣ ಕಾಲ ಕೃಷ್ಣನನ್ನು ಅಂದರೆ ಭಗವಂತನ ಮರೆವನ್ನು ತಂದು ಕೊಂಡು ಅಹಂಕಾರ ಪಟ್ಟಿತ್ತು ..ಅದರಿಂದಲೇ ಗೀತೆಯ ಬೆಳಕು ಎಲ್ಲರಿಗೂ ದಕ್ಕಿತು…ನಾವೂ ಅಷ್ಟೇ.. ಬದುಕಿನಲ್ಲಿ ಆಗಾಗ್ಗೆ ಭಗವಂತನ ಮರೆವು ತಂದು ದುಃಖ, ಆವೇಶ , ಕೋಪ ಮುಂತಾದ ವಿಕಾರದಿಂದ ಮನಸ್ಸನ್ನು ಕಲುಷಿತಗೊಳಿಸಿ ಕೊಳ್ಳುತ್ತೇವೆ. ನಮ್ಮೊಳಗೇ ಇರುವ ದೇವರ ಇರುವನ್ನು ಮರೆತು ಪಾಪ ಕರ್ಮ ಮಾಡುತ್ತೇವೆ ..ಆದರೆ ಭಗವಂತ ಎಲ್ಲವನ್ನೂ ಬಲ್ಲವನು ..ಏಕೆಂದರೆ ಅವನು ಹೃಷೀಕೇಶ …”ಹೃಷೀಕ” ಎಂದರೆ ಇಂದ್ರಿಯಗಳು …ಆ ಇಂದ್ರಿಯಗಳ ಒಡೆಯನೇ ಭಗವಂತ ..ಅವುಗಳು ಸರಿಯಾಗಿ ಕೆಲಸ ಮಾಡಲು ಭಗವಂತನೇ ಕಾರಣ .. ಅವನು ಇಂದ್ರಿಯಗಳ ಒಡೆಯನಾದ್ದರಿಂದ ಎಲ್ಲರ ಅಂತರಂಗ ಅರಿತವನು ..ಅದರಂತೆ ಫಲ ಕೊಡುವನು. ಹಾಗೇ ಇಲ್ಲಿ ಸಂಜಯ ಧೃತರಾಷ್ಟ್ರನನ್ನು ” ಭಾರತ” ಎಂದು ಸಂಭೋಧಿಸಿದ್ದಾನೆ.”.ಭಾ” ಎಂದರೆ ಜ್ಞಾನ , “ರತ “ಎಂದರೆ ತಿಳಿಯುವವನು..ಅಂದರೆ ಮುಂದೆ ಧೃತರಾಷ್ಟ್ರನಿಗೆ ಸಹ ಸಂಜಯನ ಮೂಲಕ ಜ್ಞಾನದ ಉಪದೇಶ ತಿಳಿಯುವುದಿದೆ .ಅವನು ಎಷ್ಟೇ ಪುತ್ರ ವ್ಯಾಮೋಹದಲ್ಲಿ ಸಿಲುಕಿದ್ದರು ಸಹ ಜ್ಞಾನದಲ್ಲಿ ಆಸಕ್ತಿ ಇರುವವನು ..ಆದ್ದರಿಂದ ಅವನು ಭಾರತ ..ಹಾಗೇ ಭರತ ವಂಶದಲ್ಲಿ ಬಂದ ರಾಜನಾದುದರಿಂರಲೂ ಅವನು ಭಾರತ .
✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





