ಭಗವದ್ಗೀತೆಯ ಶ್ಲೋಕಾರ್ಥ-೨೨

ಪ್ರಥಮೋಧ್ಯಾ:
ಅರ್ಜುನ ವಿಷಾದಯೋಗ
ಶ್ಲೋಕ ..

ಅರ್ಜುನ ಉವಾಚ…

ಯಾವದೇತಾನ್ನಿರೀಕ್ಷೆsಹಂ ಯೋದ್ಧುಕಾಮಾನವಸ್ಥಿತಾನ್|
ಕೈರ್ಮಯಾ ಸಹ ಯೋದ್ಧವ್ಯವಸ್ಮಿನ್ ರಣಸಮುದ್ಯಮೇ ||

ಕೆಲವೊಮ್ಮೆ ಅಹಂಕಾರ ಮತ್ತು ಮಮಕಾರ ಮಹಾ ಜ್ಞಾನಿಗಳ ಮನಸ್ಸನ್ನೂ ಪ್ರಭಾವಿಸಿ , ವಿಕಾರಗೊಳಿಸುವುದಿದೆ .. ಇದಕ್ಕೆ ಉದಾಹರಣೆಯಾಗಿ ಅರ್ಜುನನ ಈಗಿನ ಮನಸ್ಥಿತಿ ಇದೆ.. ತನ್ನ ರಥದಲ್ಲಿ ಕುಳಿತಿರುವುದು ತನಗಿಂತ ಬಲಶಾಲಿಯಾದ , ಭಗವಂತ ಎಂಬುದನ್ನೂ ಮರೆತು , “ನಮ್ಮ ರಥ” ಎನ್ನುವ ಬದಲು ನನ್ನ ರಥವನ್ನು ಎರಡು ಸೇನೆಗಳ ಮಧ್ಯೆ ನಿಲ್ಲಿಸು ಎಂದು ಆದೇಶಿಸುತ್ತಿದ್ದಾನೆ ..ನಮಗೂ ಬದುಕಿನಲ್ಲಿ ಎಷ್ಟೋ ಬಾರಿ ಈ “ನಾನು” ಎಂಬ ಅಹಂಕಾರ , “ನನ್ನದು” ಎಂಬ ಮಮಕಾರ ಮನಸ್ಸನ್ನು ಬಾಧಿಸಿ , ಭಗವಂತನ ಮರೆವನ್ನು ತರಿಸುವುದು. ದೇಹ ಎಂಬ ರಥದಲ್ಲಿ ಭಗವಂತನಿದ್ದು ನಡೆಸುವನು ಎಂಬ ಭಾವವನ್ನು ಮರೆತು , “ನಾನೇ ಮಾಡಿದೆ” ಎಂಬ ಕೃತೃತ್ವ ಭಾವ ತಾಳುವೆವು ..ಹಾಗೇ “ನನ್ನದು ಎಂಬ ಮಮಕಾರದಲ್ಲಿ ಮೋಹ ಪರವಶರಾಗಿ ಎಲ್ಲದಕ್ಕೂ ಕೊರಗುತ್ತಾ , ಮರುಗುತ್ತಾ ಸಂಕಟ ಪಡುವೆವು..ಮನಸ್ಸಿನ ಈ ಭಾವ ವಿಕಾರವನ್ನು ತೊಲಗಿಸಿ, ಭಗವಂತನ ಅರಿವು ಜಾಗೃತಗೊಳಿಸುವುದು , ಕರ್ಮ ಮಾಡುವ ಕ್ರಮ , ಆ ಕರ್ಮದ ಫಲ ತ್ಯಾಗದ ಅರಿವು ಮೂಡಿಸುವುದು ಗೀತೆಯ ಉದ್ದೇಶ.

ಈ ಶ್ಲೋಕದಲ್ಲಿ  ಅರ್ಜುನ  ಕೃಷ್ಣನ ಬಳಿ , ತಾನು ಯುದ್ಧರಂಗದಲ್ಲಿ ಯಾರೊಂದಿಗೆ ಹೋರಾಡಬೇಕು ಎನ್ನುವುದನ್ನು ನೋಡಬೇಕೆಂದು ಹೇಳುವನು ..ಇಲ್ಲಿ ನೆರೆದೆರುವ ಯಾರ ಯಾರ ಜೊತೆಗೆ ತಾನು ಯುದ್ಧ ಮಾಡಬೇಕೆಂದು ಗಮನಿಸುವ ತನಕ ರಥವನ್ನು ನಿಲ್ಲಿಸು ..ಎಂದು ಕೃಷ್ಣನಿಗೆ ಅಧಿಕಾರ ವಾಣಿಯಿಂದ ಹೇಳುವನು .. ಅರ್ಜುನನ ಮನಸ್ಸಿನಲ್ಲಿ ಈಗಾಗಲೇ, ತಾನು ಎಲ್ಲರನ್ನೂ ಮುಗಿಸಿ ಬಿಡುವ ತಾಕತ್ತಿರುವವನು  ಎಂಬ ಉತ್ಸಾಹ ಬಹಳಷ್ಟಿದೆ..ಇದೇ ಯುದ್ದೋನ್ಮಾದದಲ್ಲಿ  ಇನ್ನು ಏನೇನು ಹೇಳಿದ ನಾಳೆ ನೋಡೋಣ 🙏 

✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!