ಪ್ರಥಮೋಧ್ಯಾಯ:ಅರ್ಜುನ ವಿಷಾದಯೋಗಶ್ಲೋಕ..೧೫
ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯ:|
ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರ:||
ಕೌರವರ ಸೇನೆಯ ಶಂಖನಾದಕ್ಕೆ ಉತ್ತರವಾಗಿ ಪಾಂಡವರ ಕಡೆಯಿಂದ ಮೊದಲು ಶ್ರೀ ಕೃಷ್ಣ ತನ್ನ ‘ಪಾಂಚಜನ್ಯ’ ಶಂಖವನ್ನು ಊದಿದನು..ಹಾಗೇ ಅರ್ಜುನ” ದೇವದತ್ತ “ಎಂಬ ಶಂಖವನ್ನು, ಭೀಮಸೇನ ‘ಪೌಂಡ್ರ ‘ಎಂಬ ಮಹಾ ಶಂಖವನ್ನು ಊದಿದರು .. ಬಿಳಿಯ ಕುದುರೇಗಳಿಂದ ಕಟ್ಟಲ್ಪಟ್ಟ, ದೊಡ್ಡ ರಥದಲ್ಲಿ ಕುಳಿತ ಶ್ರೀಕೃಷ್ಣ ಮೊದಲು ಪಾಂಚಜನ್ಯ ಶಂಖವನ್ನು ಊದಿ , ಕೌರವ ಸೇನೆಗೆ, ‘ಪಾಂಡವರ ಪಕ್ಷದಿಂದ ಧರ್ಮದ ಉಳಿವಿಗಾಗಿ ಯುದ್ಧ ಮಾಡುವವನು ತಾನೇ” ಎಂಬುದನ್ನು ತೋರಿಸಿದನು . ಧರ್ಮದ ಹಾದಿಯಲ್ಲಿ ಇರುವ ಪಾಂಡವರೇ ತನಗೆ ಪ್ರಿಯರು .. ಹಾಗಾಗಿ ತಾನೇ ಮುಂಚೂಣಿಯಲ್ಲಿದ್ದು ಕೌರವರ ಎಲ್ಲಾ ಮೋಸದ ನಡೆಗೆ ಉತ್ತರ ಕೊಡುವನೆಂಬುದನ್ನು ಕೃಷ್ಣ ಇಲ್ಲಿ ಸಾಬೀತು ಪಡಿಸುತ್ತಿದ್ದಾನೆ .ಯಾಕೆಂದರೆ ಪಾಂಡವರು ಪ್ರಿಯರಾಗಲು ಕಾರಣ ಅವರು ತನ್ನ ಭಕ್ತರು ..ಹಾಗೇ ತನ್ನ ಭಕ್ತರನ್ನು ನಾಶವಾಗಲು ತಾನು ಎಂದಿಗೂ ಬಿಡಲಾರೆ ಎಂಬುದು ಕೃಷ್ಣನ ಪ್ರತಿಜ್ಞೆ…ಹಾಗಾಗಿ ಧರ್ಮರಾಯ ಕೇಳುವ ಮೊದಲೇ ತನ್ನನ್ನು ನಂಬಿದವರ ರಕ್ಷಣೆಗಾಗಿ ಶಂಖನಾದ ಮಾಡಿದನು . ಇಲ್ಲಿ ಕೃಷ್ಣನನ್ನು” ಹೃಷಿಕೇಶ “ಎಂದು ಸಂಭೋದಿಸಲಾಗಿದೆ .”.ಹೃಷೀಕ” ಎಂದರೆ “ಇಂದ್ರಿಯಗಳು” ..ಇಂದ್ರಿಯಗಳಿಗೆ ಒಡೆಯ ಭಗವಂತನೇ ..ಹುಟ್ಟುವಾಗ ಎಲ್ಲರ ಇಂದ್ರಿಯಗಳೂ ಶುದ್ಧವಾಗಿಯೇ ಇರುತ್ತದೆ..ಆದರೆ ನಂತರ ಇಂದ್ರಿಯಗಳು ನಮ್ಮ ಹತೋಟಿ ಮೀರಿ ಪ್ರಾಪಂಚಿಕ ವಿಷಯಭೋಗಗಳಲ್ಲಿ ಮುಳುಗಿ ಮಲಿನವಾಗುತ್ತವೆ ..ಆದರೆ ಶರೀರವೆಂಬ ರಥದಲ್ಲಿ ನಾವೂ ಅರ್ಜುನನಂತೆ , ಸ್ವಚ್ಛ ಮನಸ್ಸಿನವರಾದರೆ… ಕೃಷ್ಣ ಪರಮಾತ್ಮ ನಮ್ಮ ಬುದ್ಧಿಯಲ್ಲಿ ಬಂದು ಸಾರಥಿಯ ಹಾಗೆ ಕುಳಿತುಕೊಳ್ಳುವನು ..ಆಗ ನಮಗೂ ಬದುಕಿನಲ್ಲಿ ಸೋಲಿರದ ಹಾಗೇ ನಮ್ಮ ದೇಹದ ರಥವನ್ನು ನಡೆಸುವನು . ಹಿಂದಿನ ಶ್ಲೋಕದಲ್ಲಿ “ಮಾಧವ” ಎಂದೂ ಕೃಷ್ಣನನ್ನು ಸಂಭೋದಿಸಲಾಗಿತ್ತು..ಮಾಧವ ಶಬ್ದದ ಅರ್ಥ..”ಮಾ” ಎಂದರೆ “ಲಕ್ಷ್ಮಿ,” ..ಮಾಯೆಯ ಒಡತಿಯಾದ ಲಕ್ಷ್ಮಿ ಪತಿ ಮಾಧವ ಇನ್ನು ಕೆಲವೇ ಕ್ಷಣಗಳಲ್ಲಿ ಅರ್ಜುನನ ಬುದ್ದಿಗೆ ಮಾಯೆ ಕವಿಯುವಂತೆ ಮಾಡುವನು . ಎದುರಾಳಿ ಸೇನೆಯ ಮನಸ್ಸನ್ನೂ ಟೊಳ್ಳಾಗಿಸುವನು ..ಭಯಭೀತಗೊಳಿಸುವನು .
ಧನಂಜಯ ಎಂದು ಅರ್ಜುನನ್ನು ಸಂಬೋಧಿಸಲಾಗಿದೆ .. ಅರ್ಜುನ ಗೆದ್ದಂತಹ ಧನ, ಜ್ಞಾನ, ಭಕ್ತಿ ,ವೈರಾಗ್ಯ ..ಇವೇ ಶ್ರೇಷ್ಠ ಧನವೇ ಹೊರತು ಲೌಕಿಕ ಭೋಗದ ಧನಕನಕವಲ್ಲಾ. ಹಾಗಾಗಿಯೇ ಭಗವಂತನಾದ ಕೃಷ್ಣ ಅವನ ರಥದಲ್ಲಿ ಬಂದು ಸಾರಥ್ಯ ಮಾಡಿದ ..ನಾವೂ ಸಹ ಈ ಧನವನ್ನು ಸಂಪಾದಿಸಿದರೆ ಮಾತ್ರ ಕೃಷ್ಣ ನಮ್ಮೊಳಗೂ ಸಾರಥಿಯಾಗುವನು .ಇಲ್ಲಿ ಧನಂಜಯ ಊದಿದ ಶಂಖ, ದೇವತೆಗಳಿಗೆ ಯುದ್ಧದಲ್ಲಿ ಸಹಾಯ ಮಾಡಿದ್ದಕ್ಕಾಗಿ ಇಂದ್ರನೇ ಕೊಟ್ಟಿದ್ದರಿಂದ ಮೊದಲು ಊದಲಾಯಿತು.
ಹಾಗೇ ಭೀಮಸೇನ ಪೌಂಡ್ರ ಎಂಬ ಶಂಖವನ್ನು ಊದಿ ತನ್ನ ಬಲವನ್ನು ತೋರಿದನು ..ಇಲ್ಲಿ ಅರ್ಜುನ ಭೀಮನಿಗಿಂತಲೂ ಚಿಕ್ಕವ ..ಆದರೂ ಶಂಖನಾದ ಮೊದಲು ಮಾಡಲು ಕಾರಣ ಇಂದ್ರನ ಮಗನೆಂದು ಮಾತ್ರವಲ್ಲ . , ಕೃಷ್ಣನ ಜೊತೆಗೆ ಅವನಿರುವುದರಿಂದ ಅವನಿಗೆ ಬಲ ಜಾಸ್ತಿ…ಹಾಗೇ ಅವನಲ್ಲಿ ಭಗವಂತನ ಅವತಾರವಾದ “ನರ ನಾರಾಯಣ” ರಲ್ಲಿ ಅರ್ಜುನ “ನರ”ನಾ ಅಂಶವೂ ಹೌದು . ಹಾಗೇ ಧರ್ಮರಾಯನಿಗಿಂತಲೂ ಭೀಮಸೇನ ಸಣ್ಣವನಾದರೂ ಸಹ ಅವನು ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆಯಲ್ಲಿ ಆರು ಅಕ್ಷೋಹಿಣಿ ಸೇನೆಯನ್ನು ತಾನೊಬ್ಬನೇ ಸದೆಬಡಿದ ಮಹಾ ಪರಾಕ್ರಮಿ..ಬೇರೆ ಯಾರಿಗೂ ಮಾಡಲು ಅಸಾಧ್ಯವಾದ ಕೆಲಸವನ್ನು ಭೀಮಸೇನ ಮಾಡುತ್ತಿದ್ದುದರಿಂದ ಅರ್ಜುನನ ನಂತರ ಅವನೇ ಶಂಖನಾದ ಮಾಡಿದನು .ಪೌಂಡ್ರ ದೇಶದಿಂದ ತಂದ
ಬೃಹತ್ ಶಂಖವಾದ್ದರಿಂದ ಪೌಂಡ್ರ ಎಂದೇ ಹೆಸರಾಯಿತು
ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





