ಪೊಡವಿಗೊಡೆಯನಿಗೆ ಅಷ್ಟಮಿಯ ಸಂಭ್ರಮ

ಉಡುಪಿ ಟೈಮ್ಸ್ ಸಂಪಾದಕೀಯ

ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ ,ದೇವಕಿ ಪರಮಾನಂದಂ ಕೃಷ್ಣಾಂ ವಂದೇ ಜಗದುಗುರುಮ್
ವಸುದೇವನ ಪುತ್ರನಾದ ಶ್ರೀ ಕೃಷ್ಣ ಮಾವ ಕಂಸನಿಗೆ ದುಃಸ್ವಪ್ನನಾಗಿದ್ದ. ತಾಯಿ ದೇವಕಿಯ ಮುದ್ದಿನ ಕಂದ ಬೆಳೆದದ್ದು ಯಶೋಧೆಯ ಮಡಿಲಲ್ಲಿ. ದುಷ್ಟ ಶಿಕ್ಷಕನಾಗಿ, ಶಿಷ್ಟ ರಕ್ಷಕನಾಗಿ ಧರ್ಮ ಅಧರ್ಮದ ಯುದ್ಧದಲ್ಲಿ ಧರ್ಮ ಗೆಲ್ಲಿಸಿದ ಮುಕುಂದನಿಗೆ ಇಂದು ಜನ್ಮಾಷ್ಟಮಿಯ ಸಂಭ್ರಮ.


ಕೃಷ್ಣ ನಗರಿಯಾದ ಉಡುಪಿ ಅಷ್ಟಮಿಯಂದು ಮದುಮಗಳಂತೆ ಸಿಂಗಾರಗೊಳ್ಳುತ್ತದೆ. ಕೃಷ್ಣನೆಲವೀಡಿಗೆ ದೇಶ ವಿದೇಶಗಳಿಂದ ಭಕ್ತಾದಿಗಳು ಮುದ್ದು ಪೊಡವಿಗೊಡೆಯನ ನೋಡಿ ಪುನೀತರಾಗುತ್ತಾರೆ.

ಉಡುಪಿಗೆ ಬಂದ ಪುಣ್ಯಾತ್ಮ : ಕೃಷ್ಣ ಉಡುಪಿ ಗೆ ಬರಲು ಒಂದು ಪುರಾಣ ಕಥೆಯಿದೆ ಉಡುಪಿಯ ಕೃಷ್ಣನನ್ನು ದ್ವಾಪರ ಯುಗದಲ್ಲಿ ದ್ವಾರಕೆಯಲ್ಲಿ ರುಕ್ಮಿಣಿ ಪೂಜಿಸಲ್ಪಡುತ್ತಿದ್ದು ದೇವಶಿಲ್ಪಿ ವಿಶ್ವಕರ್ಮನಿಂದ ರಚಿಸಲ್ಪಟ್ಟಿದೆ ಎಂಬ ಪುರಾಣವಿದೆ. ಯತಿ ಮಧ್ವರಿಗೆ ಗೋಪಿಚಂದನದಲ್ಲಿ ಸಾಗರದಲ್ಲಿ ಕೃಷ್ಣನ ವಿಗ್ರಹ ಸಿಕ್ಕಿತೆಂಬ ನಂಬಿಕೆ.

ಅಷ್ಟ ಮಠಗಳಿಂದ ಆರಾಧಿಸಲ್ಪಡುವ ರುಕ್ಮಿಣಿ ರಮಣನಿಗೆ ಇಂದು ಜನ್ಮಾಷ್ಠಮಿಯ ಸಂಭ್ರಮ. ಪರಿಮಳ ಪುಷ್ಪಗಳಿಂದ ಮುದ್ದು ಕೃಷ್ಣನಿಗೆ ಮನಮೋಹಕ ಅಲಂಕಾರ, ಬಗೆ ಬಗೆಯ ಉಂಡೆ, ಚಕ್ಕುಲಿ ಪರಿಮಳ ಕೃಷ್ಣ ಮಠದ ಸುತ್ತ ಮುತ್ತ ಪಸರಿರುತ್ತದೆ.
ಗುರುವಾರ ಪರ್ಯಾಯ ಸ್ವಾಮೀಜಿ ಶ್ರೀ ಈಶ ಪ್ರಿಯ ಯವರಿಂದ ಶ್ರೀಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಚನೆ, ರಾತ್ರಿ 9 ಗಂಟೆಗೆ ವಿಶೇಷ ಪೂಜೆ, ಮಧ್ಯರಾತ್ರಿ 12.16 ಕ್ಕೆ ಅರ್ಘ್ಯ ಪ್ರದಾನ ಮಾಡಲಿರುವರು. ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮದಲ್ಲಿ ಗೊಲ್ಲರು ಮಠದ ಸುತ್ತ ಗುಜ್ಜಿಗಳಿಗೆ ಅಳವಡಿಸಿದ ಮಡಿಕೆಗಳನ್ನು ಒಡೆಯುವ ಸಂಪ್ರಾದಯ ನಡೆಯಲಿದೆ.


ಅಷ್ಟಮಿಯಂದು ಉಡುಪಿಯಲ್ಲಿ ಹೆಜ್ಜೆಹಾಕುವ ಹುಲಿಗಳು : ಅಷ್ಟಮಿ ಬಂದರೆ ಟಸ್ಸೆಯ ಶಬ್ದಕ್ಕೆ ಮೈ ರೋಮಾಂಚನ ಗೊಳ್ಳುತ್ತದೆ. ಉಡುಪಿ ನಗರದ ಬೀದಿ ಬೀದಿಯಲ್ಲಿ ಹುಲಿವೇಷದ ಶಬ್ದ ಮನಸ್ಸಿಗೆ ತಲುಪುತ್ತದೆ. ಹುಲಿವೇಷಕ್ಕಾಗಿ ಹಲವು ದಿನಗಳವರೆಗೆ ಊಟ ನಿದ್ದೆ ತೊರೆದು ಹವ್ಯಾಸಕ್ಕಾಗಿ , ದೇವರ ಸೇವೆ ಎಂಬ ನಂಬಿಕೆಯಿಂದ ವಯಸ್ಸಿನ ಅಂತರವಿರದೆ ಹುಲಿವೇಷ ಧರಿಸಿ ಹೆಜ್ಜೆ ಹಾಕುತ್ತಾರೆ, ಇತ್ತೀಚಿನ ದಿನಗಳಲಿ ಹೆಣ್ಣು ಹುಲಿಗಳ ಸಂಖ್ಯೆಯು ಉಡುಪಿಯಲ್ಲಿ ಜಾಸ್ತಿಯಾಗಿರುವುದು ಸಂತಸ. ಹುಲಿವೇಷಕ್ಕೆ ಅಪಾರ ಪ್ರೋತ್ಸಹ ಕೊಡುತ್ತಿದ್ದ ಶಿರೂರು ಶ್ರೀಗಳ ನೆನಪು ಪ್ರತಿವರ್ಷ ವೇಷಧಾರಿಗಳನ್ನ ಕಾಡುತ್ತದೆ. ಆದರೆ ಈ ಬಾರಿ ವಿಟ್ಲಪಿಂಡಿಯಂದು ಎಲ್ಲರ ಮನ ರಂಜಿಸುತ್ತಿದ್ದ ಹುಲಿವೇಷ ಸಹಿತ ಎಲ್ಲ ವೇಷ ಹಾಕುವುದಕ್ಕೆ ಜಿಲ್ಲಾಡಳಿತ ನಿರ್ಬಂದಿಸಿದೆ.


ಅಷ್ಟಮಿಯ ಮುನ್ನಾದಿನದಿಂದ ಉಡುಪಿಯ ದಾರಿ ಬದಿಗಳಲ್ಲಿ ಬಗೆಬಗೆಯ ಹೂವು , ಮೂಡೆ ಓಲಿಗಳು ಮಾರಾಟಕ್ಕೆ ಇಡಲಾಗುತ್ತದೆ.


ಕೊರೋನಾದ ಬಿಸಿಯಲ್ಲಿ ಈ ಬಾರಿ ಅಷ್ಟಮಿ : ಕೊರೊನಾ ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆಯನ್ನು ರದ್ದುಗೊಳಿಸಲಾಗಿದೆಂದು ಮಠದ ಪ್ರಕಟಣೆ ತಿಳಿಸಿದೆ. ಈ ಬಾರಿಯ ಜನ್ಮಾಷ್ಟಮಿಯ ಸಂಭ್ರಮವನ್ನು ಭಕ್ತರು ಆನ್ ಲೈನ್‌ನಲ್ಲಿ ಮೂಲಕ ನೋಡುವ ವ್ಯವಸ್ಥೆಯನ್ನು ಶ್ರೀಕೃಷ್ಣ ಮಠ ಮಾಡಿದೆ.
ಮನೆಯಲ್ಲಿ ಕುಳಿತು ಈ ಬಾರಿ ಅಷ್ಟಮಿಯನ್ನು ಆನ್ ಲೈನ್ ಮೂಲಕ ನೋಡಿ ಆನಂದಿಸಿ , ಮನೆಯವರೊಂದಿಗೆ ಹಬ್ಬ ಆಚರಿಸಿ ಶ್ರೀ ಕೃಷ್ಣನ ಅನುಗ್ರಹದಿಂದ ಕೊರೋನಾ ಮುಕ್ತವಾಗುವಂತೆ ಮಾಡಲಿ ಎಂಬ ಹಾರೈಕೆ ಯೊಂದಿಗೆ ಎಲ್ಲರಿಗೂ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು.

ಉಡುಪಿ ಟೈಮ್ಸ್ ಸಂಪಾದಕೀಯ

Leave a Reply

Your email address will not be published. Required fields are marked *

error: Content is protected !!