ಯಶಸ್ಸಿನ ಮೆಟ್ಟಿಲೇರುತ್ತಿರುವ ಉಡುಪಿಯ ಬಾಲ ಪ್ರತಿಭೆ ಯಶಸ್ ಪಿ. ಸುವರ್ಣ

ಬಾಲ್ಯದಲ್ಲಿ ಹಿರಿಯರ ಪ್ರೇರಣೆ ಮಕ್ಕಳ ಬಾಳಿನ ಆಶಾಕಿರಣವಾಗಿ ಹೊಮ್ಮಿ ಅವರ ಆಸಕ್ತಿ, ಹವ್ಯಾಸಗಳಿಗೆ ಹುಮ್ಮಸ್ಸು ನೀಡಿ ಭವಿಷ್ಯದ ಚಿಂತನೆಗೆ ಹಾದಿಯಾಗಿ, ಈ ಹಾದಿಯಲ್ಲಿ ಗುರು- ಹಿರಿಯರು ದಾರಿ ದೀಪಗಳಾಗಿ ಮಕ್ಕಳ ಬಾಳು ಬೆಳಗಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕಾಗಿದೆ. ಕೋವಿಡ್ ಪರಿಣಾಮದಿಂದ ಶಾಲೆ ಪ್ರಾರಂಭವಾಗದೆ ಸಮಯ ಹಾಳು ಮಾಡುತ್ತಿದ್ದಾರೆ, ತಂತ್ರಜ್ಞಾನಕ್ಕೆ ಆಕರ್ಷಿತರಾಗುತ್ತಿದ್ದಾರೆ ಎಂದು ಕೇಳಿಬರುತ್ತಿರುವ ಹೆತ್ತವರ ಮಾತುಗಳ ಮಧ್ಯೆ ತಮಗೆ ದೊರೆತ ಸಮಯವನ್ನು ಉತ್ತಮವಾಗಿ ಉಪಯೋಗಿಸುತ್ತಿರುವ ಬಾಲಪ್ರತಿಭೆ ಯಶಸ್ ಪಿ. ಸುವರ್ಣ.

ಸಾಮಾಜಿಕ ಜಾಲತಾಣಗಳಲ್ಲಿ ಈ ಬಾಲಕನ ಹಾಡು ಮತ್ತು ಕೊಳಲ ನಿನಾದ ಪಸರಿಸುವುದರೊಂದಿಗೆ, ಯು ಟ್ಯೂಬ್ ಮೂಲಕ ಸಂಗೀತದ ಜ್ಞಾನವನ್ನು ವೃದ್ಧಿಸುವತ್ತದ ಆಸಕ್ತಿಗೆ ಗಮನ ನೀಡಿ ಅದನ್ನು ಪರಿಪೂರ್ಣವಾಗಿಸುವತ್ತ ಒಂದಷ್ಟು ಸಮಯವನ್ನು ಮೀಸಲಿಟ್ಟುಕೊಂಡು ತನ್ನ ಗುರಿಗೆ ಸಾಧನೆಯ ಗರಿಯನ್ನು ಮೂಡಿಸಬೇಕೆಂದು ಪಣತೊಟ್ಟಿದ್ದಾರೆ. ಪತ್ರಕರ್ತ, ರಾಷ್ಟ್ರ ಪ್ರಶಸ್ತಿ ವಿಜೇತ ಟೆಲಿಚಿತ್ರ ನಿರ್ದೇಶಕರಾದ ಪ್ರಕಾಶ್ ಸುವರ್ಣ ಕಟಪಾಡಿ ಮತ್ತು ಪ್ರೀತಿ ಪಿ. ಸುವರ್ಣ ದಂಪತಿಯ ಮಗನಾಗಿದ್ದಾರೆ. ಯಶಸ್ ರವರ ನೆಚ್ಚಿನ ಹವ್ಯಾಸ ಕೊಳಲು ವಾದನ ಮತ್ತು ಹಾಡುಗಾರಿಕೆ. ಕೊಳಲು ವಾದನದಲ್ಲಿ ಮುಕುಂದ ಕೃಪಾ ಸಂಗೀತ ಶಾಲೆಯ ಬಾಲಕೃಷ್ಣರವರು, ಹಾಡುಗಾರಿಕೆಯಲ್ಲಿ ಹಿಂದೂಸ್ತಾನಿ ಸಂಗೀತವನ್ನು ತುಳಸಿದಾಸ್ ಮತ್ತು ಕರ್ನಾಟಕ ಸಂಗೀತವನ್ನು ನಾದ ವೈಭವಂ ವಾಸುದೇವ ಭಟ್ ಗುರುಗಳ ಪ್ರೋತ್ಸಾಹವಿದೆ. ಸಿನಿಮಾ ಹಾಡುಗಾರಿಕೆಯಲ್ಲೂ ಆಸಕ್ತಿಯುಳ್ಳ ಇವರ ಕೊಳಲುವಾದನ ಮತ್ತು ಹಾಡುಗಾರಿಕೆಯನ್ನು ಗುರುತಿಸಿ ಹಲವು ಕಡೆಗಳಲ್ಲಿ ಗೌರವಿಸಲ್ಪಟ್ಟಿದ್ದಾರೆ. ಉಡುಪಿಯ ಪರ್ಯಾಯ ಮತ್ತು ಉಡುಪಿಯ ಅಮೃತಾನಂದಮಯಿ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಇವರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ಸ್ಕೇಟಿಂಗ್ ಮತ್ತು ಫುಟ್ಬಾಲ್ ಅಚ್ಚುಮೆಚ್ಚು. ಈಗಾಗಲೇ ಉಡುಪಿಯ ಸಾರ್ವಜನಿಕ ಗಣೇಶೋತ್ಸವ, ಉಡುಪಿಯಲ್ಲಿ ಜರಗಿದ ಪವರ್ ಪರ್ಬ 2019, ಮಕ್ಕಳ ದಿನಾಚರಣೆ ಪ್ರಯುಕ್ತ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಉಡುಪಿಯವರ ಕಾರ್ಯಕ್ರಮದಲ್ಲಿ, ಮಾರ್ಕೆಟ್ ಫ್ರೆಂಡ್ಸ್ ವೇದಿಕೆ ಉಡುಪಿ, ಬಾಲಭವನ ಬಾಲಪ್ರತಿಭಾ ಪ್ರದರ್ಶನ ಉಡುಪಿ-2020, ಸ್ವಾತಂತ್ರೋತ್ಸವ ಕಾರ್ಯಕ್ರಮ, ಉಡುಪಿಯ ಶಾಮಿಲಿ ಸಭಾಂಗಣದಲ್ಲಿ ಜರಗಿದ ಮಹಿಳಾ ಸಮಾವೇಶ-2020, ಸೈಂಟ್ ಮೇರಿಸ್ ಶಾಲೆಯ ಸಂಸ್ಕೃತಿ ಹಬ್ಬ, ಕಾಪು ಪ್ರೆಸ್ ಕ್ಲಬ್ ಕಾರ್ಯಕ್ರಮದಲ್ಲಿ, ಕೋಟೆ ಪಂಡರಿನಾಥ ಭಜನಾ ಮಂದಿರದ ಉತ್ಸವದಲ್ಲಿ ಹೀಗೆ ಹಲವಾರು ವೇದಿಕೆಗಳಲ್ಲಿ ತನ್ನ ಪ್ರತಿಭೆಯನ್ನು ತೋರ್ಪಡಿಸಿದ್ದಾರೆ. ತನ್ನದೇ ಸಂಗೀತ ತಂಡವಿರುವ, ಸ್ವತ: ಹಾಡುಗಾರರಾಗಿರುವ ತಂದೆ ಪ್ರಕಾಶ್ ಸುವರ್ಣರು ಯಶಸ್ ರವರ ಮೊದಲ ಸಂಗೀತ ಗುರುಗಳು ಎಂದರೆ ತಪ್ಪಾಗದು.

ಶಾಲಾ ಮುಖ್ಯ ಶಿಕ್ಷಕರು, ಗುರುವೃಂದದ ಬೆಂಬಲವಿದೆ ಎಂಬ ಹೆಮ್ಮೆ ಈ ಬಾಲಕನಿಗಿದೆ. ಉಡುಪಿಯ ಕನ್ನರಪಾಡಿ ಸೈಂಟ್ ಮೆರೀಸ್ ಆಂಗ್ಲಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯಾಗಿ ಕಲಿಕೆಯ ಜೊತೆಗೆ ಶಾಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮುಂದುವರಿಯುತ್ತಿರುವ ಯಶಸ್ ಪಿ. ಸುವರ್ಣರವರಿಗೆ ಶುಭವಾಗಲಿ .

Leave a Reply

Your email address will not be published. Required fields are marked *

error: Content is protected !!