ಉಡುಪಿ: ದೀಪಾವಳಿಗೆ ಕಳೆಗಟ್ಟಿದ ಮಾರುಕಟ್ಟೆ, ವ್ಯಾಪಾರಸ್ಥರ ಮೊಗದಲ್ಲಿ ಮಂದಹಾಸ

ಉಡುಪಿ( ಉಡುಪಿ ಟೈಮ್ಸ್ ವಿಶೇಷ ವರದಿ) : ದೀಪಗಳ ಹಬ್ಬ ದೀಪಾವಳಿ ಬಂತೆಂದರೆ ಸಾಕು, ದೇಶದೆಲ್ಲೆಡೆ ಸಂಭ್ರಮವೋ ಸಂಭ್ರಮ. ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡಿನಂತೆ, ದೀಪಗಳು ಕತ್ತಲೆಯನ್ನು ಕರಗಿಸಿ ಬೆಳಕನ್ನು ನೀಡುವ ಮಹಾನ್ ಶಕ್ತಿ. ದೀಪವೆಂದರೆ ಅಜ್ಞಾನವನ್ನು ನೀಗಿಸಿ, ಜ್ಞಾನವನ್ನು ನೀಡುವಂತಹ ಸಂಕೇತ. ದೀಪಾವಳಿ ದಿನ ಬಂಧು ಬಳಗದವರೊಂದಿಗೆ ಮನೆಯಲ್ಲಿ ದೀಪಗಳನ್ನು ಹಚ್ಚಿ ಸಂಭ್ರಮಿಸುವ ಕ್ಷಣ. ಎಣ್ಣೆ ಸ್ನಾನವನ್ನು ಮಾಡಿ, ಬಲೀಂದ್ರನಿಗೆ ಪೂಜೆಯನ್ನು ಸಲ್ಲಿಸಿ, ಗೋ ಮಾತೆಯನ್ನು ಪೂಜಿಸಿ, ಲಕ್ಷ್ಮಿದೇವಿಯ ಕೃಪಾಕಟಾಕ್ಷಕ್ಕೆ ಪಾತ್ರವಾಗುವಂತಹ ಈ ಹಬ್ಬ, ಹಿಂದೂಗಳ ಪಾಲಿಗೆ ಅತ್ಯಂತ ಸಂತೋಷದ ಹಬ್ಬ.

ಈ ಬಾರಿ ಕೋರೊನ ಮಹಾಮಾರಿಯ ಅಟ್ಟಹಾಸದಿಂದ ಹಬ್ಬಗಳು ಮೌನವಾಗಿದೆ. ದಸರಾ, ಗಣೇಶೋತ್ಸವನ್ನು ನಿರಾಶಾದಾಯಕವಾಗಿ ಆಚರಿಸಿರುವ ಜನತೆಗೆ, ದೀಪಾವಳಿ ಎಲ್ಲೋ ಒಂದು ಕಡೆ ಸಣ್ಣ ಬೆಳಕಿನ ಆಶಾಕಿರಣವನ್ನು ನೀಡಿತ್ತು. ಉದ್ಯಮ ಗಳ ಪಾಲಿಗೆ ದೀಪಾವಳಿಯ ಮೇಲೆ ಅತ್ಯಂತ ನಿರೀಕ್ಷೆ ಇತ್ತು. ಎಲ್ಲಿ ನೋಡಿದರಲ್ಲಿ ರಿಯಾಯಿತಿ ದರದ ಬ್ಯಾನರ್ ಗಳು ರಾರಾಜಿಸುತ್ತಿವೆ. ಹೆಚ್ಚಿನ ಮಳಿಗೆಗಳಲ್ಲಿ ರಿಯಾಯಿತಿ ದರಗಳು, ಖಚಿತ ಉಡುಗೊರೆಗಳು, ಅದೃಷ್ಟಶಾಲಿ ಕೂಪನ್ ಗಳು, ಹೀಗೆ ದೀಪಾವಳಿಯ ಹಬ್ಬಕ್ಕೆ ಜನರನ್ನು ತನ್ನತ್ತ ಸೆಳೆಯಲು ಉದ್ಯಮಿಗಳು ಹರಸಾಹಸಪಡುತ್ತಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ.

ಮತ್ತೆ ಚಿಗುರುತ್ತಿರುವ ಉಡುಪಿ ಮಾರುಕಟ್ಟೆ: ಕಣ್ಣು ಹಾಯಿಸಿದಷ್ಟು ದೂರ ಜಗಮಗಿಸುವ ಬೆಳಕಿನ ಬಣ್ಣಗಳ ವಿದ್ಯುತ್ ದೀಪಗಳು, ರಂಗು ರಂಗಿನ ರಿಯಾಯಿತಿ ಮಾರಾಟದ ಬೋರ್ಡ್ – ಬ್ಯಾನರ್ ಗಳು, ಶೋರೂಮ್ ನಲ್ಲಿ ಥಳಥಳಿಸುವ ಡಿಸ್ ಪ್ಲೇಗಳು ಹೀಗೆ ದೀಪಾವಳಿ ಬಂತೆಂದರೆ ಸಾಕು ಪ್ರತಿ ವರ್ಷ ಉಡುಪಿಯ ಮಾರುಕಟ್ಟೆ ಮದುವಣಗಿತ್ತಿಯಂತೆ ಸಿಂಗರಿಸಿಗೊಳ್ಳುತ್ತದೆ. ಆದರೆ ಈ ಬಾರಿ ಕೊರೋನಾ ರಾಕ್ಷಸನ ಹೊಡೆತಕ್ಕೆ ಸಿಲುಕಿ ಇಲ್ಲಿಯವರೆಗೆ ಎಲ್ಲಾ ಹಬ್ಬಗಳು ಮಂಕಾಗಿರುವುದನ್ನು ಕಂಡು, ಈ ಬಾರಿಯ ದೀಪಾವಳಿ ಏನೋ ಎಂಬಂತಾ ಪ್ರಶ್ನಾರ್ಥಕ ಚಿಹ್ನೆ ಎಲ್ಲರ ಮುಖದಲ್ಲಿಯೂ ಮೂಡಿತ್ತು. ಆದರೆ ಈ ಬಾರಿ ವ್ಯಾಪಾರಿಗಳ ಮುಖದಲ್ಲಿ ಕೊಂಚ ಮಂದಹಾಸ ಮೂಡಿದೆ. ಕಾರಣ ದೀಪಾವಳಿಯ ಸೇಲ್ ಭರ್ಜರಿಯಾಗಿಯೇ ಉಡುಪಿಯಲ್ಲಿ ನಡೆಯುತ್ತಿದೆ. ಪ್ರತಿ ಅಂಗಡಿ ಮುಂಗಟ್ಟುಗಳ ಮುಂದೆ ದೀಪದಿಂದ ಅಲಂಕಾರಗೊಂಡು ತಮ್ಮ ಗ್ರಾಹಕರನ್ನು ಸ್ವಾಗತಿಸಲು ಸಜ್ಜಾಗಿದೆ. ದೀಪಾವಳಿಯ ನಂತರ ಮಾರುಕಟ್ಟೆ ಚೇತರಿಸಿಕೊಳ್ಳಬಹುದು ಎಂಬ ಆಸೆ ಮೂಡಿದೆ.

ದೀಪಾವಳಿಗೆ ಮೊಬೈಲ್ ಸಂಸ್ಥೆಗಳ ಭರ್ಜರಿ ಗಿಫ್ಟ್ : ಶಾಲೆಗಳ ಆನ್ಲೈನ್ ಕ್ಲಾಸಿಗೆ ವಿವಿಧ ಕಂಪೆನಿಯ ಪೂರಕವಾಗಿವೆಂಬಂತೆ ಈ ಬಾರಿ ದೀಪಾವಳಿಗೆ ಮೊಬೈಲ್ಸ್ ಮಳಿಗೆಗಳು ತಾ ಮುಂದು, ನಾ ಮುಂದು ಎಂಬಂತೆ ಮೊಬೈಲ್ ಖರೀದಿಯ ಮೇಲೆ ಭಾರೀ ರಿಯಾಯಿತಿಯನ್ನು ನೀಡಿದೆ. ಅದರ ಜೊತೆಗೆ ಅನೇಕ ಖಚಿತವಾದಂಥ ಉಡುಗೊರೆಗಳನ್ನೂ ಕೂಡ ಈ ಸಂದರ್ಭದಲ್ಲಿ ತಮ್ಮ ಗ್ರಾಹಕರಿಗೆ ನೀಡುತ್ತಿದ್ದಾರೆ. ನಗರದ ಪ್ರತಿಷ್ಠಿತ ಮೊಬೈಲ್ ಸಂಸ್ಥೆಗಳಾದ ವಿಕ್ಕಿ ಮೊಬೈಲ್ಸ್, ಬಲ್ಲಾಳ್ ಮೊಬೈಲ್ಸ್, ವಿಶಾಲ್ ಮೊಬೈಲ್ಸ್, ಸಂಸ್ಥೆಗಳಲ್ಲಿ ಅತ್ಯಾಕರ್ಷಕ ದರಗಳಲ್ಲಿ ಎಲ್ಲಾ ಉತ್ಕೃಷ್ಟ ಕಂಪೆನಿಯ ಮೊಬೈಲ್ ಗಳು ದೊರೆಯುತ್ತಿವೆ. ಅತಿ ಕಡಿಮೆ ಬಡ್ಡಿದರದ ಸಾಲ, ಪ್ರತಿ ಖರೀದಿಗೆ ಖಚಿತ ಉಡುಗೊರೆಗಳು, ಅದೃಷ್ಟವಂತರಿಗೆ ಬಹುಮಾನಗಳ ಕೊಡುಗೆ ಹೀಗೆ ಹತ್ತು ಹಲವು ಯೋಜನೆಗಳೊಂದಿಗೆ ಮೊಬೈಲ್ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. 

ದೀಪಗಳ ಹಬ್ಬಕ್ಕೆ ಬಟ್ಟೆಗಳ ಮೆರುಗು: ಹಬ್ಬ ಹರಿದಿನಗಳು ಬಂತೆಂದರೆ ಭಾರತದಲ್ಲಿ ಹೊಸ ಬಟ್ಟೆಗಳನ್ನು ಖರೀದಿಸುವುದು ಅದೇನೋ ಆನಂದ. ಅದರಲ್ಲೂ ದೀಪಾವಳಿಯಂದು ಹೊಸ ಬಟ್ಟೆಗಳನ್ನು ಧರಿಸಿಕೊಂಡು ದೀಪಗಳನ್ನು ಹಚ್ಚುವುದೆಂದರೆ ಕಿರಿಯರಿಂದ ಹಿರಿಯರವರೆಗೂ ಸಂಭ್ರಮ. ತಮ್ಮ ಗ್ರಾಹಕರ ಮನಸ್ಸಿಗೆ ಒಪ್ಪುವಂತಹ, ಅವರ ಕೈಗೆಟಕುವ ದರಗಳಲ್ಲಿ ಜವಳಿ ಮಳಿಗೆಗಳು ದೀಪಾವಳಿಗೆಂದೆ ಹೊಸ ಸ್ಟಾಕ್ ಸಿದ್ಧಪಡಿಸಿದ್ದಾರೆ. ಹೊಸ ವಿನ್ಯಾಸದ ಕಲರ್ ಫುಲ್ ಬಟ್ಟೆಗಳು, ಎಲ್ಲಾ ವಯೋಮಾನದವರಿಗೆ ದೊರಕುವ ಫ್ಯಾಮಿಲಿ ಶಾಪ್ ಬಟ್ಟೆಗಳು ಕರಾವಳಿ ಕರ್ನಾಟಕದ ಪ್ರಖ್ಯಾತ ಮಳಿಗೆಗಳಾದ ಉದ್ಯಾವರದ ಜಯಲಕ್ಷ್ಮಿ ಸಿಲ್ಕ್ಸ್, ಉಡುಪಿಯ ಗೀತಾಂಜಲಿ ಸಿಲ್ಕ್ಸ್, ಬ್ರೈಡಲ್ ವರ್ಲ್ಡ್, ಶಿರ್ವದ ಅಲೆಕ್ಸ್ ಟೆಕ್ಸ್ ಟೈಲ್ ಮಳಿಗೆಗಳಲ್ಲಿ ಲಭ್ಯವಿವೆ. ಸುಮಾರು 5% ರಿಂದ 55% ರವರೆಗೆ ರಿಯಾಯಿತಿ ದರದಲ್ಲಿ ಬಟ್ಟೆಗಳು ಸಿಗುತ್ತಿದ್ದು, ಗ್ರಾಹಕರು ತಮ್ಮ ಇಚ್ಛೆಯಂತೆ ಹೊಸ ಹೊಸ ಫ್ಯಾಶನ್ ವಸ್ತುಗಳಿಗಾಗಿ, ಈ ಮಳಿಗೆಗೆ ತೆರಳಿ ದೀಪಾವಳಿ ಸಂಭ್ರಮವನ್ನು ಆಚರಿಸಲು ಸಿದ್ಧರಾಗಿದ್ದಾರೆ.

ಗೃಹೋಪಕರಣಗಳ ಮೇಲೆ ಬಿಗ್ ಆಫರ್ ಸೇಲ್: ನಿಮ್ಮ ಕನಸಿನ ಮನೆಯ ಅಲಂಕಾರಿಕ, ಗೃಹೋಪಕರಣ, ಎಲೆಕ್ಟ್ರಿಕಲ್ ವಸ್ತುಗಳು  ರಿಯಾಯಿತಿ ದರದಲ್ಲಿ ನಗರದಲ್ಲಿ ದೊರೆಯುತ್ತಿವೆ. ಉತ್ಕೃಷ್ಟ ಗುಣಮಟ್ಟದ ಎಲ್ಲಾ ಕಂಪೆನಿಗಳ ಉಪಕರಣಗಳು ನಗರದ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್, ಕುಬೇರ ಎಲೆಕ್ಟ್ರಾನಿಕ್ಸ್ ಗಳಲ್ಲಿ ಎಲ್ಲ ಬ್ರ್ಯಾಂಡ್ ನ ಉಪಕರಣಗಳು ರಿಯಾಯಿತಿ ದರಗಳಲ್ಲಿ ದೊರೆಯುತ್ತಿದ್ದು, ಗ್ರಾಹಕರಿಗೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಅವಕಾಶವಿದ್ದು, ಅದೃಷ್ಟವಂತರಿಗೆ ಬಂಪರ್ ಬಹುಮಾನ ದೊರೆಯಲಿದೆ.

ರಾರಾಜಿಸುತ್ತಿರುವ ಗೂಡುದೀಪ, ನಿಶ್ಯಬ್ದವಾದ ಪಟಾಕಿ: ಪ್ರತಿ ವರ್ಷ ದೀಪಾವಳಿಗೆ ಭಾರೀ ಶಬ್ದದ, ಬಣ್ಣ ಬಣ್ಣಗಳ ಪಟಾಕಿಗಳದ್ದೇ ಕಾರುಬಾರು ನಡೆಯುತ್ತಿತ್ತು. ಆದರೆ ಈ ಬಾರಿ ಪಟಾಕಿಗಳ ಶಬ್ದವನ್ನು ಸೈಲೆಂಟ್ ಮಾಡಲಾಗಿದೆ. ಕೋರೋನಾ ಭಯದ ಮಧ್ಯದಲ್ಲಿ, ಪಟಾಕಿಯ ಹೊಗೆಯಿಂದ ಕೋರೊನಾ ಜಾಸ್ತಿಯಾಗಬಹುದು ಎಂಬ ಆತಂಕದಿಂದ ಈ ಬಾರಿ ಪಟಾಕಿಗಳನ್ನು ಸರ್ಕಾರ ಬ್ಯಾನ್ ಮಾಡಿದೆ. ಜನತೆಯ ಸಂಭ್ರಮಕ್ಕೆ ತೊಡಕಾಗದಿರಲೆಂದು ಹಸಿರು ಪಟಾಕಿ ಗೆ ಅವಕಾಶ ನೀಡಿದೆ. ನಗರದಲ್ಲಿ ಅಲ್ಲಲ್ಲಿ ಪಟಾಕಿ ಅಂಗಡಿಗಳು ತೆರೆದಿದ್ದು, ಗ್ರಾಹಕರ ಸಂಖ್ಯೆ ವಿರಳವಾಗಿದೆ. ಸರಕಾರ ಪಟಾಕಿ ಬ್ಯಾನ್ ಘೋಷಣೆ ಮಾಡುವ ಮೊದಲೇ, ಹಲವಾರು ಕನಸುಗಳನ್ನು ಕಟ್ಟಿಕೊಂಡು ಪಟಾಕಿ ಉದ್ಯಮಿಗಳು ಪಟಾಕಿಗಳನ್ನು ಖರೀದಿಸಿಯಾಗಿತ್ತು. ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ. ನಗರದೆಲ್ಲೆಡೆ ವಿವಿಧ ಆಕರ್ಷಕ ವಿನ್ಯಾಸಗಳ ಗೂಡುದೀಪಗಳು ರಾರಾಜಿಸುತ್ತಿದೆ. ಬಣ್ಣ ಬಣ್ಣದ ಗೂಡು ದೀಪಗಳು ಸ್ವರ್ಗಕ್ಕೆ ದಾರಿ ತೋರಿಸುವಂತೆ ಭಾಸವಾಗುತ್ತಿದೆ.

ಸಿಹಿ ತಿಂಡಿಗಳಿಂದ ತುಂಬಿ ತುಳುಕುತ್ತಿರುವ ಬೇಕರಿಗಳು : ದೀಪಾವಳಿ ಹಬ್ಬ ಸರ್ವರಿಗೂ ವಿಶೇಷ ಹಬ್ಬ. ವಿವಿಧ ಬಗೆಯ ಸಿಹಿ ಸಿಹಿಯಾದ ಸ್ವೀಟ್ಸ್ ಗಳನ್ನು ಖರೀದಿಸಿ ಸ್ನೇಹಿತರಿಗೆ, ಆಸುಪಾಸಿನವರಿಗೆ ವಿತರಿಸಿ ಸಂಭ್ರಮಿಸುವ ಹಬ್ಬವಿದು. ಕಳೆದ ಕೆಲವು ಸಮಯಗಳಿಂದ ಮುಂದೇನು ಮಾಡುವುದೆಂಬ ಚಿಂತೆಯಲ್ಲಿದ್ದ ಬೇಕರಿ ಉತ್ಪನ್ನಗಳು, ದೀಪಾವಳಿಹಬ್ಬಕ್ಕೆ ಮರುಜೀವ ಪಡೆಯುತ್ತಿದೆ. ಉಡುಪಿಯ ಪ್ರತಿಷ್ಠಿತ ಬೆಕ್ ಸ್ಟುಡಿಯೋ, ಆಲ್ವಿನ್ ಬೇಕರಿ, ಜ್ಯೋತಿ ಸ್ವೀಟ್ಸ್, ಬೇಕ್ ಲೈನ್ ಮೂಡುಬೆಳ್ಳೆ ನಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ಜತೆಗೆ ಗಿಫ್ಟ್ ಕೂಪನ್ ಸಹಿತ ವಿವಿಧ ಬಗೆಯ ಸಿಹಿ ಸಿಹಿಯಾದ ಸ್ವೀಟ್ಸ್ ಗಳು ತಯಾರಿಯಾಗಿವೆ. ಜನರು ಸುಲಭವಾಗಿ ದೊರಕುವ ಬೇಕರಿ ಉತ್ಪನ್ನಗಳಿಗೆ ಮನಸೋತು ವಿವಿಧ ಬಗೆಯ ಸ್ವೀಟ್ಸ್ ಗಳನ್ನು ಖರೀದಿಸುತ್ತಿದ್ದಾರೆ.

ಏನೇ ಇರಲಿ ಕೊರೋನಾ ಮಹಾಮಾರಿಯಿಂದ ಬಳಲಿದ ಮಾರುಕಟ್ಟೆ ಸ್ವಲ್ಪ ಚೇತರಿಸಿ ಕೊಳ್ಳುತ್ತಿದೆ. ಪೂರಕವೆಂಬಂತೆ ಗ್ರಾಹಕರಿಗೆ ಹೆಚ್ಚು ರಿಯಾಯಿತಿ ದರಗಳನ್ನು ನೀಡುವುದರೊಂದಿಗೆ, ನಗರದ ಮಳಿಗೆಗಳು ತಮ್ಮ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.

ನಿತ್ಯ ಮಂಗಳವಿರಲಿ ನಿತ್ಯ ಸಂತಸವಿರಲಿ,

ನಿತ್ಯ ವೆದೆಯಿರಲಿ ತಾಳಲಿಕೆ -ತಳ್ಳಲಿಕೆ

ಸತ್ಯ ನಿನಗಂತರಾತ್ಮ, ಜ್ಯೋತಿ ದೂರ ಬೆಳಗಲಿ

ಸತ್ಯ ಜಯ – ಮರುಳ ಮುನಿಯ ಎಂಬಂತೆ ಪ್ರತಿ ದಿನವೂ ಶುಭ, ಒಳಿತಾಗಲಿ. ಪ್ರತಿದಿನವೂ ಸಂತೋಷವಾಗಲಿ. ಈ ಜಗತ್ತಿನ ಎಲ್ಲ ಕೆಲಸ ಕಾರ್ಯಗಳನ್ನು ಎದುರಿಸುವ ಶಕ್ತಿ ನೀಡಲಿ. ಅಂತರಾತ್ಮದ ಜ್ಯೋತಿ ಪರಮಾತ್ಮನ ಹೊಳೆಯುತ್ತಿರಲಿ ಎಂಬ ಕವನ ಈಗಿನ ಪರಿಸ್ಥಿತಿಗೆ ಒಪ್ಪಿದಂತಿದೆ.  ಸಾಂಕ್ರಾಮಿಕ ರೋಗದ ಕಷ್ಟಗಳನ್ನೆಲ್ಲ ನಾವು ಹಚ್ಚುವ ದೀಪಗಳಲ್ಲಿ ಕರಗಲಿ. ಒಟ್ಟಿನಲ್ಲಿ ಈ ದೀಪಾವಳಿಯ ಬೆಳಕು, ಸಾಂಕ್ರಮಿಕ ರೋಗದ ಅಂಧಕಾರವನ್ನು ಕಳೆಯುವಲ್ಲಿ ಯಶಸ್ವಿಯಾಗಲಿ ಎಂಬ ಹಾರೈಕೆ ನಮ್ಮದು.

Leave a Reply

Your email address will not be published. Required fields are marked *

error: Content is protected !!