ಮನೆ- ಮನವ ಬೆಳಗುವ ದೀಪಾವಳಿ…

ಲೇಖಕರು- ಭಾಗ್ಯಶ್ರೀ ಐತಾಳ್ ಕರಂಬಳ್ಳಿ

(ಉಡುಪಿ ಟೈಮ್ಸ್ ವಿಶೇಷ ಲೇಖನ) ಅಜ್ಙಾನದ ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಜ್ಙಾನದ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಭಾರತೀಯ ಪಂಚಾಗದ ಪ್ರಕಾರ  ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯದ ತನಕ ದೀಪಾವಳಿಯನ್ನು ಆಚರಿಸಲಾಗುತ್ತಿದೆ.            ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ದೀಪಾವಳಿಗೆ ಅದರದ್ದೇ ಆದ ಮಹತ್ವವಿದೆ ಹಾಗೂ ಅವರದ್ದೆ ಆದ ಕೆಲವು ಸಂಪ್ರದಾಯಗಳು ಇರುತ್ತದೆ. ಕೆಲವರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ತಮ್ಮ ಹಬ್ಬವನ್ನು ಆಚರಿಸುತ್ತಾರೆ.ಆಚರಣೆಯ ಮಹತ್ವ: 

 ತ್ರಯೋದಶಿ ಆಚರಣೆ: ಮೊದಲ ದಿನ ಮುಸ್ಸಂಜೆ ಸಮಯದಲ್ಲಿ  ಶುಚಿರ್ಭೂತವಾಗಿ ತುಳಸಿ ಕಟ್ಟೆಯ ಹತ್ತಿರ   ಎಳ್ಳೆಯೆಣ್ಣೆಯ ದೀಪವನ್ನು ದಕ್ಷಿಣಾಭಿಮುಖವಾಗಿ ಯಮನಾಮಗಳೊಂದಿಗೆ ಹಚ್ಚಬೇಕು. ಇದನ್ನು ಯಮ ದೀಪ ಎಂದು ಕರೆಯುತ್ತಾರೆ.       ಅದೇ ದಿನ ಸಂಜೆ ಗಂಗಾದಿ ತೀರ್ಥಗಳನ್ನು ಪ್ರಾರ್ಥಿಸಿ , ತಾಮ್ರದ ಅಲಂಕೃತ ಕೊಡದಲ್ಲಿ ಬಾವಿಯಿಂದ ನೀರನ್ನು ತಂದು ಅಲಂಕೃತ ಹಂಡೆಗೆ ತುಂಬಿಸಿ ಇದಕ್ಕೆ ಹೂವು ಅರಶಿನಕುಂಕುಮಾದಿಗಳನ್ನು ಅರ್ಚಿಸಿ ಪೂಜಿಸಬೇಕು. ಈ ಆಚರಣೆಯನ್ನು ಜಲಪೂರಣ ಎನ್ನುತ್ತಾರೆ. 


ಚತುರ್ದಶಿ ಆಚರಣೆ:  ಹಬ್ಬದ ಮೊದಲ ದಿನ ನರಕಚತುದರ್ಶಿ. ಪುರಾಣದ ಅವಲೋಕನ ಮಾಡಿದಾಗ ಮಹಾವಿಷ್ಣು ತನ್ನ ವರಾಹಾವತಾರದಲ್ಲಿದ್ದಾಗ ಅವನ ಶರೀರದಿಂದ ಒಂದು ತೊಟ್ಟು ಬೆವರು ಭೂಮಿಗೆ ಬೀಳಲಾಗಿ ಭೂದೇವಿಯಲ್ಲಿ ನರಕಾಸುರ ಜನಿಸುತ್ತಾನೆ. ಇದರಿಂದಾಗಿ ಅವನಿಗೆ ಭೌಮಾಸುರ, ಭೂಮಿಪುತ್ರ ಎಂಬ ಹೆಸರುಗಳೂ ಉಂಟು. ಭೂದೇವಿ ವಿಷ್ಣುವನ್ನು ಬೇಡಿ ತನ್ನ ಮಗ ನರಕಾಸುರನಿಗೆ ವೈಷ್ಣವಾಸ್ತ್ರವನ್ನು ವರವಾಗಿ ಕೊಡಿಸುತ್ತಾಳೆ. ಇದರಿಂದ ಬಲಿಷ್ಠನಾದ ನರಕಾಸುರ ಲೋಕಕಂಠಕನಾಗುತ್ತಾನೆ. ಇಂದ್ರ ಮತ್ತು ಅವನ ತಾಯಿ ಅಧಿತಿಯನ್ನೂ ಬಿಡದೆ ಕಾಡತೊಡಗಿದಾಗ ಇಂದ್ರ, ಶ್ರೀಕೃಷ್ಣನ ಮೊರೆಹೋಗುತ್ತಾನೆ.ನರಕಾಸುರನ ದುಷ್ಟತನ ತಾಯಿ ಭೂದೇವಿಗೂ ಸಹಿಸದಾದಾಗ ಈ ದುಷ್ಟ ಮಗನನ್ನು ಕೊಂದು ಲೋಕವನ್ನು ಕಾಪಾಡುವಂತೆ ಭೂದೇವಿ ಶ್ರೀಕೃಷ್ಣನಿಗೆ ಹೇಳಿದಾಗ, ಅಶ್ವಯುಜಕೃಷ್ಣ ಚತುರ್ದಶಿಯ ಕಗ್ಗತ್ತಲಿನಲ್ಲಿ ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸುತ್ತಾನೆ. ಆ ದಿನವೇ ನರಕ ಚತುರ್ದಶಿ. 

ಆ ದಿನ ಬ್ರಾಹ್ಮಿಮೂಹುರ್ತದಲ್ಲಿ  ಮೊದಲಿಗೆ ತೈಲ ಅಭ್ಯಂಗನ ಸ್ನಾನ ಮಾಡುವ ಸಂಪ್ರದಾಯ ಇದೆ.  ಮನೆಯ ಹಿರಿಯರು ಕಿರಿಯರಿಗೆ ದೇವರ ಎದುರಲ್ಲಿ ಗರಿಕೆ ಹುಲ್ಲನ್ನು ಬಳಸಿ ತೈಲವನ್ನು ಹಚ್ಚಿ ಆಶೀರ್ವದಿಸುತ್ತಾರೆ. ತದನಂತರ ಅಭ್ಯಂಗನ ಸ್ನಾನ ಮಾಡಲಾಗುತ್ತದೆ.  ಇದಕ್ಕೆ ಕಾರಣ ಸಮುದ್ರಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ. ಮುಂಚಿನ ದಿನ ತುಂಬಿಸಿದ  ಸ್ನಾನದ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬುದು ನಂಬಿಕೆ. ಈ ನೀರಿನಿಂದ ಸ್ನಾನಮಾಡಿದರೆ ಆಯುರಾರೋಗ್ಯ ಆಯಸ್ಸು ವೃದ್ಧಿಸುವುದೆಂದೂ ಮತ್ತು ಸಕಲ ಪಾಪಗಳೂ ನಿವಾರಣೆಯಾಗುವುದೆಂಬ ನಂಬಿಕೆಯಿದೆ. 

ಇನ್ನೊಂದು ಪೌರಾಣಿಕ ಹಿನ್ನಲೆಯಲ್ಲಿ  ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣ ಕೂಡ ಈ ದಿನ ಎಣ್ಣೆಸ್ನಾನ ಶಾಸ್ತ್ರ ಮಾಡಿದ್ದನು ಎಂದು ಹೇಳಲಾಗುತ್ತದೆ.    ಈ ಆಚರಣೆಯನ್ನು ವೈಜ್ಞಾನಿಕ ಹಿನ್ನಲೆಯಲ್ಲಿ ಅವಲೋಕಿಸಿದಾಗ ಆಶ್ವಯುಜ ಮಾಸದಲ್ಲಿ ಪ್ರಕೃತಿ ಚಳಿಗಾಲದಿಂದ ತುಂಬಿರುತ್ತಾಳೆ. ಆ ಸಮಯದಲ್ಲಿ ಚರ್ಮವು ಶುಷ್ಕವಾಗಿರುತ್ತದೆ. ಈ ದಿನದಲ್ಲಿ ತೈಲಾಭ್ಯಂಗನ ಸ್ನಾನವು ಚರ್ಮಕ್ಕೆ ಪೋಷಣೆ ನೀಡುತ್ತದೆ.       

ದುಷ್ಟ ಸಂಹಾರದ ಸಂಕೇತವಾಗಿ ಆ ದಿನ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯದ ನಗೆಯಲ್ಲಿ ಎಲ್ಲರೂ ಖುಷಿಪಡುತ್ತಾರೆ. ಹಾಗೆಯೇ ನರಕಾಸುರನನ್ನು ಕೊಂದು ಅವನ ಬಂಧನದಲ್ಲಿದ್ದ ಸಾವಿರಾರು ಕನ್ಯೆಯರನ್ನು ಶ್ರೀಕೃಷ್ಣ ಬಂಧಮುಕ್ತಗೊಳಿಸಿದ್ದರಿಂದಾಗಿ ಕನ್ಯಾಸೆರೆ ಬಿಡಿಸಿದ ಶ್ರೀಕೃಷ್ಣ ಸ್ವರೂಪಿಯಾದ ಅಳಿಯಂದಿರನ್ನು ಕನ್ಯಾಪಿತೃಗಳು ಈ ಹಬ್ಬದಂದು ತಮ್ಮ ಮನೆಗೆ ಆಹ್ವಾನಿಸಿ ವಿಶೇಷವಾಗಿ ಆಧರಿಸಿ ಉಪಚರಿಸುವ ಸಂಪ್ರದಾಯವನ್ನು ಕೂಡ ಕಾಣಬಹುದಾಗಿದೆ.       

ಸಂಜೆ ಗದ್ದೆಯಲ್ಲಿ ಬೆಳೆದ ಧಾನ್ಯಗಳನ್ನು ಹಬ್ಬದ ಮುಂಚೆಯೆ ಮನೆಗೆ ತಂದಿರುತ್ತಾರೆ. ಭೂತಾಯಿಯನ್ನು ಸ್ಮರಿಸುವ ಸಲುವಾಗಿ ಗದ್ದೆಗೆ ಕೊಲ್ನಾಣೆ ದೀಪವನ್ನು ಇಟ್ಟು” ಓ ಬಲೀಂದ್ರ ಬಲಿ ಕೊರ್ಪೆ ಪುಲಿ ಕೊರ್ಲ ಕೂ” ಎಂದು ಬಲೀಂದ್ರನನ್ನು ಸ್ಮರಿಸುತ್ತಾರೆ. ಅವತ್ತು ಬಲಿಚಕ್ರವರ್ತಿ ಭೂಲೋಕ ಸಂಚಾರ ಮಾಡುತ್ತಾನೆ ಎಂಬ ನಂಬಿಕೆಯೂ ಇದೆ. ಅಂದು ಬಲೀಂದ್ರಪೂಜೆಯೂ ನಡೆಯುತ್ತದೆ. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು, ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದು ಎರಡು ಹೆಜ್ಜೆಗಳಲ್ಲಿ ಆಕಾಶ-ಭೂಮಿಗಳನ್ನು ಅಳೆದುಕೊಂಡು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. ಆಗ ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಅಂದು ಬಲಿ ಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ತುಳಸಿ ಕಟ್ಟೆಯ ಎದುರು ಬಲೀಂದ್ರನ ಚಿತ್ರವನ್ನು ಬಿಡಿಸಿ ಆತನಿಗೆ ಕೇಪಳ ಹೂವಿಂದ  ಅರ್ಚಿಸಿ ಅವಲಕ್ಕಿ ಸಮರ್ಪಿಸಿ ಬಲೀಂದ್ರಪೂಜೆ ನಡೆಯುತ್ತದೆ.   

ಮನೆಯಲ್ಲಿ ಧನ ಧಾನ್ಯ ಸಮೃಧ್ದಿಯಾಗಲಿ ಎಂಬ ಆಶಯದಲ್ಲಿ ತಟ್ಟೆಯಲ್ಲಿ ಭತ್ತವನ್ನು ಹರಡಿ, ವೀಳ್ಯದೆಲೆ ಯ ಮೇಲೆ ಐದು ದೀಪಗಳನ್ನು ಹಚ್ಚಿ ತುಳಸಿ ಕಟ್ಟೆ, ಸೆಗಣಿ, ಬಾವಿಕಟ್ಟೆ, ಗೋಮಾತೆಗೆ, ಮನೆಯಲ್ಲಿರುವ ಧನ ಕನಕಗಳಿಗೆ, ಧಾನ್ಯಗಳಿಗೆ ಯಂತ್ರಗಳಿಗೆ, ದೇವರಿಗೆ ಅದರಿಂದ ಆರತಿ ಎತ್ತುತ್ತಾರೆ ಇದಕ್ಕೆ ತೊಡರಾರತಿ‌ ಎಂದು  ಕರೆಯುತ್ತಾರೆ.        ಸಂಜೆ ಆಕಾಶದೀಪದೊಂದಿಗೆ ಮನೆಯಲ್ಲಿ ಸಹಸ್ರ ದೀಪವನ್ನು ಬೆಳಗುತ್ತಾರೆ.


ಅಮಾವಾಸ್ಯೆ ಆಚರಣೆ:      ನರಕ ಚತುರ್ದಶಿಯ ಮಾರನೆಯ ದಿನ ದೀಪಾವಳಿ ಅಮಾವಾಸ್ಯೆಯಾಗಿದ್ದು, ಅವತ್ತು ಲಕ್ಷ್ಮಿಪೂಜೆ ಮಾಡಲಾಗುತ್ತದೆ. ಮಹಾವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷ್ಮಿಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮೀ ಪೂಜೆ. ಸಮುದ್ರ ಮಥನದಿಂದ ಲಕ್ಷ್ಮೀ ಉದಯಿಸಿದ ದಿನವೂ ಹೌದು.  ಹಾಗಾಗಿ ಅತ್ಯಂತ ಸಂತೋಷದಿಂದ ಕಾರ್ತಿಕ ಮಾಸದ ಆರಂಭದ ಈ ಅಮಾವಾಸ್ಯೆಯ ಮಹಾರಾತ್ರಿಯಲ್ಲಿ ಮಹಾಲಕ್ಷ್ಮೀಗೆ ಮಹದಾನಂದದಿಂದ ದೀಪಾರಾಧನೆಯೊಡನೆ ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ.           ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲಪಾಡ್ಯಮಿ ಶ್ರೀಕೃಷ್ಣನು ಇಂದ್ರನನ್ನು ಸೋಲಿಸಿದ ದಿನವೂ ಹೌದು.

ಇಂದ್ರನ ದಾಳಿಯಿಂದ ತನ್ನ ಗೋಸಮೂಹವನ್ನು ರಕ್ಷಿಸಲು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಅಂದು ಗೋಪೂಜೆ ಮತ್ತು ಗೋವರ್ಧನಪೂಜೆಯನ್ನು ಆಚರಿಸಲಾಗುತ್ತದೆ. ಕೆಲವೆಡೆ ರೈತರು ಇದನ್ನು ಹಟ್ಟಿಹಬ್ಬವೆಂದು ಆಚರಿಸುತ್ತಾರೆ.  ವರ್ಷದ ಗಾಡಾಂಧಕಾರ ಕತ್ತಲೆಯು ನಮ್ಮಲ್ಲಿ ಅಧೈರ್ಯವನ್ನು ತುಂಬುತ್ತದೆ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.  ಉತ್ತಮ ಮನದಿಂದ ಹಚ್ವಿದ ದೀಪವು ಭರವಸೆಯ ಬೆಳಕನ್ನು ಬೆಳಗಿ ಮನಸ್ಸಿನಲ್ಲಿರುವ ಮಲಿನತ್ವ ದೂರವಾಗಿ ಚಿತ್ತ ಶುದ್ದಿಯಾಗಲಿ ಸರ್ವರಿಗೂ ಶುಭವಾಗಲಿ. ದೀಪಾವಳಿ ಶುಭವ ತರಲಿ

ಲೇಖಕರು- ಭಾಗ್ಯಶ್ರೀ ಐತಾಳ್ ಕರಂಬಳ್ಳಿ

Leave a Reply

Your email address will not be published. Required fields are marked *

error: Content is protected !!