ಹಾಡುವ ಬಂಗಾರದ ಹಕ್ಕಿ: ಪದ್ಮಶ್ರೀ ಸುಕ್ರಿ ಅಜ್ಜಿ

ಉಡುಪಿ ಟೈಮ್ಸ್ ವಿಶೇಷ ಲೇಖನ

ವನ ಮಾತೆ ಹಸಿರು ಸೀರೆಯನ್ನ ಹೊದ್ದು ಮಲಗಿದಂತಿರುವ ಪಶ್ಚಿಮ ಘಟ್ಟಗಳ ಸಾಲು, ಅಲ್ಲಲಿ ಬಿಳಿ ಹಾಲಿನ ನೊರೆಯಂತೆ ಕಾಣುವ ಝರಿಗಳು, ಕಣ್ಣು ಹಾಯಿಸಿದಷ್ಟು ದೂರದವರೆಗೆ ಕಾಣುವ ಗದ್ದೆಗಳು, ನೇಸರನೊಂದಿಗೆ ಚೆಲ್ಲಾಟವಾಡಿ ಸಂಜೆ ಕೆಂಪಾಗುವ ನದಿಗಳು, ಸಾಗಿದಷ್ಟು ಮುಗಿಯದ ರಸ್ತೆ, ಕರಾವಳಿಯ ಅಂದವನ್ನು ಬಣ್ಣಿಸಲು ಪದಗಳು ಸಾಕಾಗದು ಅಂತ ಸೊಬಗಿನ ಊರಿನ ಗಟ್ಟಿಗಿತಿಯ ಕಥೆ ಇದು.

ಅಂಕೋಲದಿಂದ ಕೂಗಳತೆಯ ದೂರದಲ್ಲಿ ಇರುವ ಊರಿನಲ್ಲಿ ತನ್ನ ಜೀವನವನ್ನು, ಜೀವವನ್ನು ತನ್ನವರಿಗಾಗಿ ಸವೆಸಿದ ಸುಕ್ರಿ ಅಜ್ಜಿಯನ್ನು ಉಡುಪಿ ಟೈಮ್ಸ್ ನಲ್ಲಿ ಮಾತಾಡಿಸಬೇಕೆಂಬ ಹಂಬಲ ಹೆಚ್ಚಾದಂತೆ ಪರಿಸರ ಪ್ರೇಮಿ ದಿನೇಶ್ ಹೊಳ್ಳರವರಲ್ಲಿ ನಮ್ಮ ತಂಡ ಕೇಳಿಕೊಂಡಾಗ, ನಮ್ಮ ಜೊತೆ ಅಜ್ಜಿ ಮನೆಗೆ ಹೊರಡಲು ಹೊಳ್ಳರು ಅನುವಾದರು. ದಾರಿ ಉದ್ದಕ್ಕೂ ಅಜ್ಜಿ ಬಗ್ಗೆ ಹೊಳ್ಳರು ಆಡಿದ ಮಾತುಗಳು ಅಜ್ಜಿಯನ್ನ ನೋಡುವ ಸಿಹಿ ಆಸೆಗೆ ಜೇನು ಸುರಿಯಿತು, ಬಯಕೆ ಇನ್ನಷ್ಟು ಹೆಚ್ಚಿಸಿತ್ತು.
ಜೀವನದ ಪಯಣದ ಮುಸ್ಸಂಜೆಯಲ್ಲಿ ನಿಂತ ಅಜ್ಜಿಯ ಜೀವನೋತ್ಸಹ ಎಂಥಹ ತರುಣಿಯರನ್ನು ನಾಚಿಸುವಂಥದು. ಮಾಡಿದ ಸಾಧನೆಗೆ ಸಿಕ್ಕ ಗೌರವಗಳು ಕಡಿಮೇನೇ ಅಂದರೂ ಒಪ್ಪಲೇ ಬೇಕಾದ ಸತ್ಯ.

ಸೂರ್ಯ ತನ್ನ ದಿನನಿತ್ಯದ ಕೆಲಸ ಮುಗಿಸಿ ವಿರಮಿಸುವ ಸಮಯಕ್ಕೆ ನಾವು ಅಜ್ಜಿ ಮನೆ ತಲುಪಿದೆವು. ಮನೆ ಬಾಗಿಲಿನ ಮೆಟ್ಟಿಲ ಮೇಲೆ ಹಾಲಕ್ಕಿ ಸಮುದಾಯ ಉಡುಗೆಯಲ್ಲಿ ಒಂದು ಹಿರಿಯ ಜೀವ ಕತ್ತು ಉದ್ದ ಮಾಡಿ ನಮ್ಮನೆ ನೋಡುತ್ತಿದ್ದಂತೆ ನಮಗೆ ಅನಿಸಿತ್ತು. ಅವರ ಕಣ್ಣಲಿ ಪರ ಊರಿಗೆ ಹೋದ ಮನೆಮಂದಿ ಮರಳಿ ಮನೆಗೆ ಬಂದಾಗ ಆಗುವ ತೃಪ್ತಿ ಕಾಣಿಸಿತು ಅಲ್ಲಿಯವರೆಗೆ ಹೊಳ್ಳರ ಬಾಯಲ್ಲಿ ಕೇಳಿದ ಅಜ್ಜಿಯ ವ್ಯಕ್ತಿತ್ವ ಮೇರು ಚಿತ್ರಣ ನಮ್ಮ ಕಣ್ಣಮುಂದೆ ನಿಂತಂತೆ ಭಾಸವಾಯಿತು.


ಅಜ್ಜಿ ತಾನೇ ಎಲ್ಲರನ್ನು ಬರ ಮಾಡಿಕೊಂಡರು. ಚಂದದ ಮನೆಯಲ್ಲಿ ಸೊಸೆ ಮೊಮ್ಮಕ್ಕಳೊಂದಿಗೆ ಅಜ್ಜಿಯ ಜೀವನ. ಮನೆಯೊಳಗೇ ಅಡಿ ಇಡುತ್ತಿದ್ದಂತೆ ಕಣ್ಣು ಸುಸ್ತಾಗುವಷ್ಟು ಪ್ರಶಸ್ತಿ ಫಲಕಗಳು, ಅಜ್ಜಿಗೆ ಸಿಕ್ಕ ಪದ್ಮಶ್ರೀ ಮನೆಯ ಚಾವಡಿಯಲ್ಲಿ ಉಳಿದ ಪ್ರಶಸ್ತಿಯೊಂದಿಗೆ ವಿರಾಜಮಾನವಾಗಿತ್ತು. ನಾಳಿನ ತಲೆಮಾರಿಗಾಗಿ ಆಸ್ತಿ ಮಾಡಿಡುವ ಜನರ ಮದ್ಯೆ ಅಜ್ಜಿ ಒಬ್ಬಂಟಿ, ದಿನೇಶ್ ಹೊಳ್ಳ ರು ಹೇಳುವಂತೆ “ನಿನ್ನೆಯ ಹಾಗು ನಾಳಿನ ಚಿಂತೆ ಬಿಟ್ಟವ ಸುಖಿ” ಎಂಬ ಮಾತು ಅಜ್ಜಿ ಜೀವನಕ್ಕೆ ಹೇಳಿದಂತಿತ್ತು.


“ಮಂಗಳ ನೀರು ತಂದು ಕೊಡೆ” ಎಂದು ಹಾಲಕ್ಕಿ ಭಾಷೆಯಲ್ಲಿ ಹೇಳುತ್ತಿದಂತೆ ಸೊಸೆ ತನ್ನ ಎಲ್ಲಾ ಕೆಲಸ ಬದಿಗಿಟ್ಟು ಬಂದವರಿಗೆ ಸತ್ಕಾರ ಮಾಡುತ್ತಾರೆ. ಇದು ಅವರ ನಿತ್ಯ ಕಾಯಕ ಕಾರಣ ಅಜ್ಜಿಯನ್ನ ನೋಡಲು ಅದೆಷ್ಟೋ ಜನರು ಬಂದು ಹೋಗುತ್ತಾರೆ, ಅಜ್ಜಿಯ ಬಳಿ ಸಹಾಯ ಕೇಳಿಕೊಂಡು , ಅಜ್ಜಿಯ ಹಾಡು ಕೇಳಲು , ಅಜ್ಜಿಯನ್ನು ನೋಡಲು, ಹೀಗೆ ಹತ್ತು ಹಲವು ಕಾಯಕಕ್ಕೆ ಬರುವ ಜನರೆಲ್ಲಾ ಅಜ್ಜಿಯ ದೃಷ್ಟ್ಟಿಯಲ್ಲಿ ಒಂದೇ, ಅಜ್ಜಿ ಅವರೆಲ್ಲರ ಬಳಿ ತನ್ನ ನೆನಪಿನ ಬುತ್ತಿಯನ್ನ ತೆರೆದಿಡುತ್ತಾರೆ. ಇರುವಷ್ಟು ದಿನ ಇನ್ನೊಬರಿಗೆ ಉಪಕಾರಕ್ಕೆ ಆಗಬೇಕು ಎನ್ನುವ ಅಜ್ಜಿಗೆ ಅಜ್ಜಿಯೇ ಸಾಟಿ.

ರಾತ್ರಿ ಅಜ್ಜಿಯನ್ನ ನಾವು ಮಾತಿಗೆಳೆದೆವು ಮಹಾಭಾರತ ,ರಾಮಾಯಣ, ಹಾಲಕ್ಕಿ ಸಮುದಾಯದ ಹುಟ್ಟು ಎಲ್ಲ ಅಜ್ಜಿ ಬಾಯಿಯಲ್ಲಿ ಮುತ್ತಿನ ತೋರಣದಂತೆ ಹಾಡಿನೊಂದಿಗೆ ಪದಗಳು ಸೇರಿಕೊಂಡು ಕಿವಿಗೆ ಇಂಪಾದವು.

ಇವರದ್ದು ಇದ್ದೂದರಲ್ಲೇ ತೃಪ್ತಿ ಪಡುವ ಜೀವನ, ಯಾವುದೇ ಪ್ರಚಾರ, ಹಣದ ವ್ಯಾಮೋಹ ಇಲ್ಲದ ಸರಳ ಜೀವನ ಕ್ರಮವೇ ಇವರ ವೈಶಿಷ್ಠ್ಯ. ಇವರು ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸಮುದಾಯದ ಜನ, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಕುಮಟ, ಹೊನ್ನಾವರ ತಾಲ್ಲೂಕುಗಳಲ್ಲಿ ಕಂಡು ಬರುವ ಇವರಿಗೆ ಕೃಷಿಯೇ ಜೀವನಾಧಾರ. ತಮ್ಮದೇ ಆದ ವಿಭಿನ್ನ ಜೀವನ ಶೈಲಿ, ಸಂಪ್ರದಾಯ ಪದಗಳು ಹಾಲಕ್ಕಿ ಸಮುದಾಯದ ಗರಿಮೆಗೆ ಮತ್ತೊಂದು ಕಿರೀಟ ಹಾಲಕ್ಕಿ ಹಾಡುಗಳ ಕೋಗಿಲೆ ಎಂದೇ ಪ್ರಸಿದ್ಧಿ ಪಡೆದಿರುವ ಜನಪದ ಸಾಧಕಿ ಸುಕ್ರಿ ಬೊಮ್ಮ ಗೌಡ.


ಸುಕ್ರಜ್ಜಿ ಎಂದೇ ಕರೆಸಿಕೊಳ್ಳುವ ಹಾಲಕ್ಕಿ ಸಮುದಾಯದ ಸುಕ್ರಬೊಮ್ಮ ಗೌಡ ಇವರು ಉತ್ತರ ಕನ್ನಡದಲ್ಲಿ ಒಂದು ಅದ್ಬುತ ಕ್ರಾಂತಿ ಮಾಡಿರುವ ಮಹಾನ್ ಶಕ್ತಿ. ಇವರು ಜನಪದ ಗೀತೆಗಳನ್ನು ಹಾಡಲು ಮುಂದಾದ್ರೆ ಓರ್ವ ಅದ್ಬುತ ಹಾಡುಗಾರ್ತಿ, ಪರಿಸರದ ಮೇಲೆ ಅಪಾರ ಪ್ರೀತಿ ಹೊಂದಿರುವ ಇವರು ಪರಿಸರ ಪ್ರೇಮಿ, ಪರಿಸರ ಹೋರಾಟ ಗಾರ್ತಿ, ಸಮಾಜದ ಕೆಡುಕುಗಳ ನಿರ್ಮೂಲನೆಗೆ ಟೊಂಕ ಕಟ್ಟಿ ನಿಲ್ಲುವ ಛಲಗಾರ್ತಿ ಈ ಹೋರಾಟ ಗಾರ್ತಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಡಾ. ಕುಸುಮಾ ಸೊರಬ ಅವರ ಸಹಕಾರದೊಂದಿಗೆ ಮಧ್ಯಪಾದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಈ ಸುಕ್ರಿ ಅಜ್ಜಿ. ತನಗೆ ತಾನು ಆರ್ಥಿಕವಾಗಿ ಹಿಂದುಳಿದಿದ್ದೇನೆ ಎಂಬ ಬಗ್ಗೆ ಕಿಂಚಿತ್ತೂ ಬೇಸರವಿಲ್ಲ. ” ನಾನು ಸಂತಸದಿಂದ ಇದ್ದೇನೆ, ಊಟ ತಿಂಡಿಗೇನು ಕಮ್ಮಿ ಇಲ್ಲ ಮತ್ಯಾಕೆ ಹಣ, ಹಣದ ಅಭಿಲಾಷೆ ಇದ್ದವರ ಬಳಿ ಹೆಣದ ವಾಸನೆ ಬರುತ್ತದೆ” ಎನ್ನುತ್ತಾರೆ ಸುಕ್ರಜ್ಜಿ

ಶಾಲೆಯ ಅಕ್ಷರಾಭ್ಯಾಸ ಇಲ್ಲದಿದ್ದರೂ ಹಿರಿಯರಿಂದ ಬಾಯಿಯಿಂದ ಬಾಯಿಗೆ ಹರಡಿರುವ ಹಾಡುಗಳನ್ನು ನೆನೆಪಿನಲ್ಲಿಟ್ಟುಕೊಂಡು ಹಾಡುವ ಇವರು ಇದುವರೆಗೂ ಸುಮಾರು 4000 ಹಾಡುಗಳನ್ನು ಹಾಡಿದ್ದಾರೆ. ಇವರ ಜಾನಪದ ಗೀತೆಗಳ ಹಾಡುಗಾರಿಕೆಗೆ ಇವರಿಗೆ 2017‌‌ ರಲ್ಲಿ ಪದ್ಮಶ್ರೀ ಪ್ರಶಸ್ತಿಯೂ ಲಭಿಸಿದೆ.ನಾಡೋಜ ಪ್ರಶಸ್ತಿ ಇವರ ಸಾಧನೆಗೆ ಸಂದ ಇನ್ನೊಂದು ಗೌರವ. ತಮ್ಮ ನಿತ್ಯದ ಮಾತುಗಳನ್ನೇ ಹಾಡಿನ ರೂಪದಲ್ಲಿ ಹಾಡಿ ಅದಕ್ಕೆ ಜೀವ ತುಂಬುವ ಸುಕ್ರಜ್ಜಿ ಸ್ಥಳದಲ್ಲಿಯೇ ಹಾಡುಗಳನ್ನು ಕಟ್ಟಬಲ್ಲರು ಮತ್ತು ಆ ಹಾಡನ್ನು ಯಾವಗ ಬೇಕಾದರೂ ಮತ್ತೆ ಹಾಡಬಲ್ಲರು. ಅಕ್ಷರ ಜ್ಞಾನ ಇಲ್ಲದಿದ್ದರೂ ಸ್ಮರಣ ಶಕ್ತಿಯೇ ಇವರ ಸಂಪತ್ತು. ಮರುದಿನ ತನ್ನ ಸಂಗಡಿಗರೊಂದಿಗೆ ಸುಕ್ರಿ ಅಜ್ಜಿ ಹಾಡಲು ಆರಂಭಿಸಿದರು. ಸಂಗಡಿಗರಿಗೆ ಹೆಜ್ಜೆ ಹಾಕಿ ಕಾಲು ನೋವಾಯಿತೇ ಹೊರತು ಅಜ್ಜಿಗೆ ಸುಸ್ತ್ ಆಗಲೇ ಇಲ್ಲ.ಸುಕ್ರಿ ಅಜ್ಜಿಯ ನೆನಪೇ ಹಾಗೆ ತೆಗೆದಷ್ಟು ಖಾಲಿಯಾಗದ ಅಕ್ಷಯ ಪಾತ್ರೆ. ಇವರ ಒಡಲಲ್ಲಿ ಅದೆಷ್ಟೊ ಸಾಮಾಜಿಕ ಸಂದೇಶ ಸಾರುವ ಹಾಡುಗಳಿವೆ. ಇವರ ಹಾಡುಗಳು ಈಗಾಗಲೆ ಆಕಾಶವಾಣಿಯಲ್ಲಿ ಧ್ವನಿ ಮುದ್ರಿತಗೊಂಡಿವೆಯಾದರೂ ಯಾವುದೇ ದಾಖಲೀಕರಣ ಇಲ್ಲ ಎಂಬುದೇ ಬೇಸರದ ಸಂಗತಿ.

ತನ್ನ ಊರಲ್ಲಿ ತನ್ನ ಕಣ್ಣೆದುರೇ ತನ್ನ ತಾಂಡ್ಯದ ಮಕ್ಕಳು ಸಾರಾಯಿ ಕುಡಿದು ಹಾಳಾಗುವುದು ನೋಡಿದ ಅಜ್ಜಿಗೆ ಈ ಸಾರಾಯಿ ವ್ಯಾಪಾರಕ್ಕೆ ಫುಲ್ ಸ್ಟಾಪ್ ಹಾಕಲೇಬೇಕೆಂಬ ಹಠ ತೊಟ್ಟರು. ಸಾರಾಯಿ ಅಂಗಡಿಗಳನ್ನು ತನ್ನ ಹಳ್ಳಿಯಲ್ಲಿ ನಿಲ್ಲಿಸಲು ಅಜ್ಜಿ ದೊಡ್ಡ ಕ್ರಾಂತಿಯನ್ನೇ ಮಾಡಿದರು.

ಸಂಪ್ರದಾಯ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುವ ಇವರು ಇವುಗಳು ಮುಂದಿನ ಪೀಳಿಗೆಗೆ ಉಳಿಯ ಬೇಕಾದರೆ ಪುಸ್ತಕ ರೂಪದಲ್ಲಿ ದಾಖಲಾಗಬೇಕು ಎಂಬುದು ಸುಕ್ರಜ್ಜಿಯ ಆಶಯ. ಇವರ ಹಾಡುಗಳು ಪರಿಸರ, ಮಹಿಳೆ ಮೇಲಾಗು ದೌರ್ಜನ್ಯಗಳು, ಮಹಿಳೆ ಮತ್ತು ಪುರುಷ ಸಮಾಜ, ಮದುವೆಯ ಹಾಡುಗಳು ಇವೇ ಮೊದಲಾದ ಅಂಶಗಳನ್ನು ಒಳಗೊಂಡಿದೆ.
ನೂರಾರು ವರುಷಗಳ ಹಳೆಯ ಹಾಡುಗಳನ್ನು ನೆನಪಿನಲ್ಲಿಟ್ಟುಕೊಂಡು ಹಾಡುವ ಇವರಿಗೆ ಈ ಹಾಡುಗಳನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡಬೇಕು ಎನ್ನುವ ಸದುದ್ದೇಶವನ್ನು ಹೊಂದಿದ್ದಾರೆ. ಅದೆಷ್ಟೇ ಪ್ರಶಸ್ತಿಗಳು, ಸನ್ಮಾನಗಳು ಸ್ವೀಕರಿಸುವಾಗಲೂ, ಕಾಡಿಗೆ ಹೋದರೂ, ನಾಡಿಗೆ ಹಾಡಲು ಹೋದರೂ, ಚಳುವಳಿಗೆ ಹೋದರು, ಪ್ರಶಸ್ತಿ ಸ್ವೀಕರಿಸಲು ದೇಶದ ಯಾವುದೇ ಮೂಲೆಗೆ ಹೋದರೂ ಅದೇ ಮೊಣಕಾಲಿನ ವರೆಗಿನ ಸೀರೆ, ಮಣಿಸರ ಉಟ್ಟು ಹೋಗುವ ಶುದ್ದ ಸಂಸ್ಕೃತಿಯ ಸುಕ್ರಜ್ಜಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ತನ್ನೊಂದಿಗೆ ತನ್ನಂತೆ ಇರುವ ಒಂದಿಷ್ಟು ಜನರನ್ನು ಕರೆದುಕೊಂಡು ಹೋಗುವುದು ಅಜ್ಜಿ ಕಾಯಕ, ನಿಖರವಾದ ಮಾತಿನ ಮದ್ಯೆ ತಿಳಿ ಹಾಸ್ಯ, ಇನ್ನಷ್ಟ್ಟು ಸಾಧನೆ ಮಾಡಬೇಕು ಎಂದು ಹಪ ಹಪಿಸುವ ಕಣ್ಣುಗಳು, ನೆರಿಗೆ ಬಿದ್ದ ಮುಖ, ತಲೆಯ ಬೆಳ್ಳಿಯ ಕೂದಲು ಅಜ್ಜಿಯ ಸಾಧನೆಯ ಪರಿಚಯ ಮಾಡಿಸಿದಂತಿದೆ. ತನ್ನ ಸಮುದಾಯವನ್ನ ಪರಿಶಿಷ್ಟ ಜಾತಿಗೆ ಸೇರಿಸಿದಲ್ಲಿ ನನ್ನ ಹೋರಾಟಕ್ಕೆ ಜಯ ದೊರೆತಂತೆ ಅನ್ನುವ ಅಜ್ಜಿ ತಾನು ಈ ಕೆಲಸ ಮಾಡಿಯೇ ತೀರುತ್ತೇನೆ ಎನ್ನುವ ಛಲಗಾತಿ ,ಅಜ್ಜಿಯ ಈ ಬೇಡಿಕೆಗೆ ಸರಕಾರ ಸ್ಪಂದಿಸಿದರೆ ಅಜ್ಜಿಗೆ ನೀಡುವ ಹಿರಿಯ ಗೌರವವಿದು.

Leave a Reply

Your email address will not be published. Required fields are marked *

error: Content is protected !!