ಕೋವಿಡ್ ಸೋಂಕು ತಗುಲದಿರಲು ಬಿಸಿ ನೀರು, ಕಷಾಯ ಸೇವನೆ: ಸ್ವ-ಚಿಕಿತ್ಸೆ ಕುರಿತು ವೈದ್ಯರ ಎಚ್ಚರಿಕೆ!

ಕೊರೋನಾ ಮಹಾಮಾರಿ ವೈರಸ್ ನಮ್ಮ ಜೀವನದ ಮೇಲೆ ಪರಿಣಾಮ ಬೀರಿದಾಗಿನಿಂದಲೂ, ನಿತ್ಯ ಅನೇಕ ಮನೆಗಳಲ್ಲಿ ಕಷಾಯ, ಶಕ್ತಿವರ್ಧಕ ಪಾನೀಯಗಳು, ಬಿಸಿ ನೀರು ಕುಡಿಯುವ ದಿನಚರಿಯನ್ನು ಅನುಸರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಾಕಷ್ಟು ಪೋಸ್ಟ್ ಗಳೂ ಕೂಡ ಹರಿದಾಡುತ್ತಿವೆ. ಆದರೆ, ಅತಿ ಆದರೆ, ಅಮೃತವೂ ವಿಷ ಎಂಬಂತೆ ಇವುಗಳನ್ನು ಅತಿಯಾಗಿ ಕುಡಿಯವದರಿಂದಲೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. 

ದೊಡ್ಡವರ ಜೊತೆಗೆ ಮನೆಯಲ್ಲಿರುವ ಮಕ್ಕಳಿಗೂ ಕಷಾಯ ನೀಡುವ ಬೆಳವಣಿಗೆಗಳು ಕಂಡು ಬರುತ್ತಿದ್ದು, ಮಕ್ಕಳಿಗೆ ಇವುಗಳನ್ನು ಹೆಚ್ಚಾಗಿ ನೀಡುವುದರಿಂದ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ. 

ಕೋವಿಡ್-19 ಸೋಂಕಿನಿಂದ ದೂರ ಉಳಿಯಲು ಮತ್ತು ‘ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಜನರು ಬಿಸಿನೀರು ಅಥವಾ ಕಷಾಯವನ್ನು ಹೆಚ್ಚಾಗಿ ಕುಡಿಯುತ್ತಿದ್ದಾರೆ. ಇದರ ಪರಿಣಾಮ ಇತ್ತೀಚಿನ ದಿನಗಳಲ್ಲಿ ಅನ್ನ ನಾಳ ಹಾನಿಯಾಗಿರುವುದು, ಫುಡ್ ಪೈಪ್ ಸುಟ್ಟುಹೋಗಿರುವ, ಗ್ಯಾಸ್ಟ್ರೋಎಂಟರೈಟಿಸ್ ಸಮಸ್ಯೆಗಳಿರುವ ಸಾಕಷ್ಟು ಜನರು ಆಸ್ಪತ್ರೆಗಳಿಗೆ ಬರುತ್ತಿದ್ದಾರೆ, ಇದರಲ್ಲಿ ವಯಸ್ಕರೇ ಹೆಚ್ಚಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. 

ಅತಿಯಾದ ಕಷಾಯ ಸೇವನೆಯಿಂದಾಗಿ ಮಕ್ಕಳಲ್ಲಿ ಮಲಬದ್ದತೆ, ಆ್ಯಸಿಡಿಟಿ ಸಮಸ್ಯೆಗಳು ಉಂಟಾಗುತ್ತಿದ್ದು, ಬೆಂಗಳೂರಿನಲ್ಲಿಯೂ ಈ ಸಮಸ್ಯೆ ಹೇಳಿಕೊಂಡು ಆಸ್ಪತ್ರೆಗೆ ಬರುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. 

ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದ್ದು, ಇದು ಪೋಷಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ಹೀಗಾಗಿ ಮಕ್ಕಳಿಗೆ ಬಲವಂತವಾಗಿ ಬಿಸಿ ನೀರು ನೀಡುತ್ತಿದ್ದಾರೆ. ದಿನಕ್ಕೆ ಮೂರು ಬಾರಿ ಕಷಾಯಗಳನ್ನು ಕುಡಿಸುತ್ತಿದ್ದಾರೆ. ಇದರಿಂದ ಮಕ್ಕಳದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಎದುರಾಗುತ್ತಿದೆ. ಅತಿಯಾದ ಕಷಾಯ ಸೇವನೆಯಿಂದಾಗಿ ಕೆಲ ಮಕ್ಕಳ ಮೂಗಿನಲ್ಲಿ ರಕ್ತ, ಬಾಯಿಯಲ್ಲಿ ಗುಳ್ಳೆಗಳು, ಆ್ಯಸಿಡಿಟಿ, ಅಜೀರ್ಣ ಸಮಸ್ಯೆಗಳು ಕಂಡು ಬಂದಿವೆ ಎಂದು ಶಾಂತಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ವೈದ್ಯ ಡಾ.ಸಂಜಯ್ ಗುರುರಾಜ್ ಅವರು ಹೇಳಿದ್ದಾರೆ. 

ಸುಟ್ಟು ಹೋಗಿರುವ ಅನ್ನನಾಳ, ಗುದನಾಳದಲ್ಲಿ ರಕ್ತಸ್ರಾವ, ಜಠರದುರಿತ, ಎದೆಯುರಿ, ಮಲಬದ್ಧತೆ ಸಮಸ್ಯೆಗಳಿಂದ ಬಳಲುತ್ತಿರುವ ಸಾಕಷ್ಟು ಜನರು ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆಂದು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗಳ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ನಿರ್ದೇಶಕ ಡಾ.ರವೀಂದ್ರ ಬಿ.ಎಸ್ ಅವರು ಹೇಳಿದ್ದಾರೆ. 

ದಿನಕ್ಕೆ 6-7 ಬಾರಿ ಕಷಾಯ, ನಿಯಮಿತವಿಲ್ಲದಂತೆ ಬಿಸಿ ನೀರು ಕುಡಿಯುವುದು, ವೈದ್ಯರ ಸಲಹೆ ಪಡೆಯದೆಯೇ ಸ್ಟಿರಾಯ್ಡ್ ಸೇರಿದಂತೆ ಸಿಕ್ಕ ಸಿಕ್ಕ ಔಷಧಿ ಸೇವನೆ ಮಾಡುವುದರಿಂದ ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಸ್ಟಿರಾಯ್ಡ್ ಗಳ ಬಳಕೆ ಮಲಬದ್ಧತೆ, ಆ್ಯಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಸೃಷ್ಟಿಸುತ್ತವೆ ಎಂದು ತಿಳಿಸಿದ್ದಾರೆ. 

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೊರೋನಾ ನಿಯಮಗಲನ್ನು ಪಾತನೆ ಮಾಡಿದರೆ, ಮಕ್ಕಳನ್ನು ಸೋಂಕಿನಿಂದ ದೂರ ಉಳಿಯವಂತೆ ಮಾಡಬಹುದು ಎಂದು ಮಕ್ಕಳ ವೈದ್ಯರು ಸಲಹೆ ನೀಡಿದ್ದಾರೆ. 

ಚಂದ್ರಮ್ ದಯಾನಂದ ಸಾಗರ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಪೀಡಿಯಾಟ್ರಿಕ್ಸ್ ವಿಭಾಗದ ಡಾ.ಆಶಾ ಬೆನಕಪ್ಪ ಅವರು ಮಾತನಾಡಿ, ಕೊರೋನಾ ನಿಯಂತ್ರಿಸುವಲ್ಲಿ ಕಷಾಯದ ಯಾವುದೇ ಪಾತ್ರವಿಲ್ಲ. ಇದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುವುದಿಲ್ಲ. ಇನ್ನು ಬಿಸಿನೀರು ಕುಡಿಯುವುದರಿಂದ ವೈರಸ್ ಸಾಯುವುದಿಲ್ಲ. 2023ರವರೆಗೂ ನಾವು ಈ ವೈರಸ್ ಜೊತೆಗೆ ಬದುಕಲೇ ಬೇಕಿದೆ. ಆದ್ದರಿಂದ ಇಂತಹ ಗೊಂದಲಗಳಿಗೆ ಸಿಲುಕಿಕೊಳ್ಳದಿರಿ ಎಂದು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!