ಇವರು ಮುಂಡಾಸು ಸುತ್ತಿ ಭಾಗವತರ ಪೀಠಕ್ಕೇರಿದರೆ ಮಂತ್ರಮುಗ್ದಗೊಳಿಸುವ ಕಂಠ…

ಯಕ್ಷಗಾನದಲ್ಲಿ ಭಾಗವತನನ್ನು ಸೂತ್ರಧಾರ, ಮೊದಲನೆ ವೇಷಧಾರಿ ಎಂದು ಗುರುತಿಸುತ್ತಾರೆ. ಆತನೇ ಯಕ್ಷಗಾನದ ನಿರ್ದೇಶಕನೂ ಹೌದು. ಭಾಗವತನಾದವನಿಗೆ ಪ್ರಸಂಗದ ನಡೆ, ಕಲಾವಿದರ ಸಾಮರ್ಥ್ಯ, ಮನಸ್ಥಿತಿ, ಪ್ರೇಕ್ಷಕರ ನಾಡಿಮಿಡಿತ, ಪಾತ್ರಗಳ ಔಚಿತ್ಯ, ಸಮಯಪ್ರಜ್ಞೆ ಇವುಗಳೆಲ್ಲದರ ಕುರಿತು ತಿಳುವಳಿಕೆ ಇರಬೇಕಾದುದು ಅನಿವಾರ್ಯ. ಇವೆಲ್ಲ ಗುಣಗಳು ಭಾಗವತನಲ್ಲಿ ಮೇಳೈಸಿರಬೇಕಾದುದು ಒಂದು ಪ್ರದರ್ಶನ ಯಶಸ್ವಿಯಾಗುವುದಕ್ಕೆ ಬೇಕಾದ ಅಂಶಗಳು.

ಇಂತಹ ಅಂಶಗಳನ್ನು ಮೈಗೂಡಿಸಿಕೊಂಡ ಭಾಗವತರಲ್ಲಿ ಸುಧೀರ್ ಭಟ್, ಪೆರ್ಡೂರು ಕೂಡ ಒಬ್ಬರು. ಬಹುಶಃ ಇವರ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಪ್ರಚಾರದಿಂದ ದೂರವಿರುವ ಇವರು ಸರಳತೆ, ಸಜ್ಜನಿಕೆಯ ಸಾಕಾರ ಮೂರ್ತಿ. ಸಹನೆ ಹಾಗೂ ಕಠಿಣ ಪರಿಶ್ರಮಕ್ಕೆ ಮತ್ತೊಂದು ಹೆಸರೇ ಇವರು ಎಂದರೆ ತಪ್ಪಾಗಲಿಕ್ಕಿಲ್ಲ. ಇವರು ತಾನಾಯಿತು, ತನ್ನ ಕೆಲಸವಾಯಿತು ಎನ್ನುವ ಮನೋಭಾವನೆಯುಳ್ಳವರು. ಇವರು ಕೈಯಲ್ಲಿ ತಾಳ ಹಿಡಿದು, ಮುಂಡಾಸು ಸುತ್ತಿ ರಂಗವೇರಿ ’ವಿಘ್ನೇಶಾಯ ಸರಸ್ವತೈ’ ಎಂದು ಭಾಗವತಿಕೆ ಪ್ರಾರಂಭಿಸಿದರೆಂದರೆ ಎಂತವರೂ ಕೂಡ ಒಮ್ಮೆ ನಿಂತು ಮತ್ತೂ ಕೇಳಬೇಕೆನ್ನಿಸುವಷ್ಟು ಸುಮಧುರವಾದ ಕಂಠ. ಯಾವುದೇ ರಾಗವನ್ನು, ಯಾವುದೇ ತಾಳವನ್ನು ಬಹಳ ಸುಲಲಿತವಾಗಿ, ಭಾವಪೂರ್ಣವಾಗಿ ಹಾಡಬಲ್ಲರು.

17ನೇ ಜನವರಿ 1983 ರಲ್ಲಿ ಮಾಧವ ಶ್ಯಾನುಭಾಗ್ ಹಾಗೂ ಮೀನಾಕ್ಷೀ ಅಮ್ಮನವರ ನಾಲ್ಕು ಮಕ್ಕಳಲ್ಲಿ ಮೂರನೆಯವರಾಗಿ ಜನಿಸಿದರು. ಇವರು ಪೆರ್ಡೂರಿನ ಅನಂತ ಪದ್ಮನಾಭ ದೇವಸ್ಥಾನದ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪೂರೈಸಿದರು. ಇವರ ಅಜ್ಜ ಪುಟ್ಟಯ್ಯ ಶ್ಯಾನುಭಾಗರು ಶಾಲಾ ಶಿಕ್ಷಕರು ಹಾಗೂ ಹವ್ಯಾಸಿ ಭಾಗವತರು. ಚಿಕ್ಕಂದಿನಲ್ಲಿ ಅಜ್ಜನ ಭಾಗವತಿಕೆ ಹಾಗೂ ಸುತ್ತಮುತ್ತಲಿನ ಯಕ್ಷಗಾನ ಪರಿಸರದಿಂದ ಪ್ರೇರಿತರಾಗಿ ತಮ್ಮ 18 ನೆಯ ವಯಸ್ಸಿನಲ್ಲಿ ನಗರ ಸುಬ್ರಹ್ಮಣ್ಯ ಆಚಾರ್ ಇವರಿಂದ ಯಕ್ಷಗಾನ ಭಾಗವತಿಕೆಯನ್ನು ಕಲಿಯುವುದಕ್ಕೆ ಪ್ರಾರಂಭಿಸಿದರು. ಚೆಂಡೆ ಮತ್ತು ಮದ್ದಳೆಯನ್ನು ಕೃಷ್ಣಮೂರ್ತಿ ಬಗ್ವಾಡಿಯವರಲ್ಲಿ ಅಭ್ಯಸಿಸಿದರು.

ಉಡುಪಿಯ ಯಕ್ಷಗಾನ ಕೇಂದ್ರದ ಗುರು ಸಂಜೀವ ಸುವರ್ಣರಿಂದ ಯಕ್ಷಗಾನ ನಾಟ್ಯಾಭ್ಯಾಸವನ್ನೂ ಕಲಿತುಕೊಂಡು ಹಿಮ್ಮೇಳದ ಎಲ್ಲಾ ಅಂಗಗಳಲ್ಲಿ ಪರಿಣತಿ ಸಾಧಿಸಿದರು. ಆದರೆ ಇವರನ್ನು ಹೆಚ್ಚು ಆಕರ್ಷಿಸಿದ್ದು ಭಾಗವತಿಕೆ. ಶೃಂಗೇರಿಯ ಮೆಣಸೆ ಎಂಬಲ್ಲಿ ನಡೆದ ಮೀನಾಕ್ಷಿ ಕಲ್ಯಾಣ ಪ್ರಸಂಗದಲ್ಲಿ ಭಾಗವತಿಕೆಯನ್ನು ಮಾಡುವುದರ ಮೂಲಕ ತಮ್ಮ ಯಕ್ಷಗಾನ ಜೀವನಕ್ಕೆ ಮುನ್ನುಡಿಯನ್ನು ಬರೆದರು. ಮೈಸೂರು, ಬಿಜಾಪುರ, ಬೆಂಗಳೂರು, ಮಂಗಳೂರು, ಹಾಸನ, ತುಮಕೂರು, ರಾಣಿಬೆನ್ನೂರು, ಬೆಳಗಾವಿ, ಬಾಗಲಕೋಟೆ, ಹಂಪಿ, ಮಂಡ್ಯ ಹೀಗೆ ಕರ್ನಾಟಕದ ವಿವಿಧೆಡೆಗಳಲ್ಲಿ ಹಾಗೂ ಹೈದರಾಬಾದ್ ಮತ್ತು ಚೆನ್ನೈನ ಯಕ್ಷಗಾನ ಪ್ರೇಕ್ಷಕರಿಗೆ ತಮ್ಮ ಮಧುರ ಕಂಠಸಿರಿಯ ಪರಿಚಯವನ್ನು ಮಾಡಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 700 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನಾಡಿನಾದ್ಯಂತ ನೀಡಿರುವ ಇವರ ಪ್ರತಿಭೆಯನ್ನು ವೆಂಕಟೇಶ್ವರ ಯಕ್ಷಗಾನ ಮಂಡಳಿ, ಹೊನ್ನವಳ್ಳಿ ಹಾಗೂ ರೋಟರಿ ಕ್ಲಬ್, ಪೆರ್ಡೂರು ಇವರು ಗುರುತಿಸಿ ಸಂಮಾನಿಸಿದ್ದಾರೆ.

ಮಡದಿ ರಶ್ಮಿ ಹಾಗೂ ಮಗಳು ಪರ್ವಧಿಯೊಂದಿಗೆ ಸದ್ಯ ಉಡುಪಿಯಲ್ಲಿ ವಾಸವಾಗಿರುವ ಇವರು ಸಾರ್ಥಕ ಜೀವನವನ್ನು ನಡೆಸುತ್ತಿದ್ದಾರೆ. ಇವರ ಮಡದಿ ರಶ್ಮಿಯವರೂ ಕೂಡ ಯಕ್ಷಗಾನ ಕಲಾವಿದೆಯಾಗಿ, ಸಂಘಟಕಿಯಾಗಿ, ನಿರೂಪಕಿಯಾಗಿ, ವಾಗ್ಮಿಯಾಗಿ ಗುರುತಿಸಿಕೊಂಡಿದ್ದಾರೆ. 4ನೇ ತರಗತಿಯಲ್ಲಿ ಓದುತ್ತಿರುವ ಮಗಳು ಪರ್ವಧಿಯೂ ಕೂಡ ಯಕ್ಷಗಾನದಲ್ಲಿ ಮುದ್ದಾದ ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿರುವ ಎಳೆ ಪ್ರತಿಭೆ. ಅಪ್ಪನ ಭಾಗವತಿಕೆಗೆ ನಾಡಿನ ಹಲವೆಡೆ ಹೆಜ್ಜೆ ಹಾಕಿ ಕುಣಿದಿದ್ದಾಳೆ, ನಲಿದಿದ್ದಾಳೆ.

ಮೊದಲು ಹವ್ಯಾಸಿ ಭಾಗವತರಾಗಿದ್ದ ಸುಧೀರ್ ಭಟ್, ಪೆರ್ಡೂರು ಇವರು ಈಗ ಕಳೆದೆರಡು ವರ್ಷಗಳಿಂದ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳದಲ್ಲಿ ಭಾಗವತರಾಗಿ ತಮ್ಮ ಗಾನಸುಧೆಯನ್ನು ಪ್ರೇಕ್ಷಕರಿಗೆ ಉಣಿಸುವ ಮೂಲಕ ವೃತ್ತಿ ಭಾಗವತರಾಗಿಯೂ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಇವರ ಗಾಯನಕ್ಕೆ ಮನಸೋತ ಹಲವು ಸಂಘ ಸಂಸ್ಥೆಗಳು ಇವರೇ ಬೇಕೆಂದು ಕರೆಸಿ ಹಲವಾರು ಕಡೆ ಇತರ ಪ್ರಸಿದ್ಧ ಭಾಗವತರ ಜೊತೆ ಗಾನ ವೈಭವ ಕಾರ್ಯಕ್ರಮ ಏರ್ಪಡಿಸಿದ್ದಿದೆ. ಅಷ್ಟರ ಮಟ್ಟಿಗೆ ಅವರು ತಾನೊಬ್ಬ ಸಮರ್ಥ ಭಾಗವತ ಎಂಬುದನ್ನು ತನ್ನ ಕೃತಿಯಲ್ಲಿ ಸಾಬೀತುಪಡಿಸಿದ್ದಾರೆ. ಯಕ್ಷಗಾನದ ಮೇಲಿನ ವಿಪರೀತ ಆಸಕ್ತಿಯಿಂದ ಇತ್ತೀಚೆಗೆ ತನ್ನನ್ನು ಸಂಪೂರ್ಣವಾಗಿ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ವೃತ್ತಿ ಹಾಗೂ ವೃತ್ತಿಬಾಂಧವರ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ಇವರು ಸಹೋದ್ಯೋಗಿಗಳ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಸಹೃದಯಿ. ಹಿತಮಿತ ಮಾತು, ಗಂಭೀರ ನಡೆನುಡಿಯ ಮೂಲಕ ಎಲ್ಲರ ಪ್ರೀತಿಗೆ ಗೌರವಕ್ಕೆ ಪಾತ್ರರಾಗಿದ್ದಾರೆ.

ಸುಧೀರ್ ಭಟ್, ಪೆರ್ಡೂರು ಕಲಾವಿದ ಸ್ನೇಹಿ ಭಾಗವತರಾಗಿದ್ದು ಹಲವು ಪ್ರಸಿದ್ಧ ಕಲಾವಿದರನ್ನು ಸಮರ್ಥವಾಗಿ ರಂಗದಲ್ಲಿ ಕುಣಿಸಿದ ಹಿರಿಮೆ ಇವರದ್ದು. ಸುಧೀರ್ ಭಟ್, ಪೆರ್ಡೂರು ಅವರಂತಹ ಭಾಗವತರು ಪ್ರಸ್ತುತ ಯಕ್ಷಗಾನ ಕ್ಷೇತ್ರಕ್ಕೆ ಮುಖ್ಯ. ಇಂತಹವರ ಸಂಖ್ಯೆ ಅಧಿಕವಾಗಲಿ. ಇವರನ್ನು ಪ್ರಶಸ್ತಿ, ಗೌರವ, ಸಂಮಾನಗಳು ಅರಸಿ ಬರಲಿ. ಭವಿಷ್ಯ ಉಜ್ವಲವಾಗಲಿ ಎಂದು ಆಶಿಸುವೆ.

Leave a Reply

Your email address will not be published. Required fields are marked *

error: Content is protected !!