ಮೇ 20ರಂದು ವಿಶ್ವ ಜೇನು ದುಂಬಿ ದಿನ- ಕೃಷಿಯ ಮೌನ ಶಕ್ತಿ ಜೇನುನೊಣಗಳು

ಜೇನು ಸಾಕಾಣಿಕೆಗೆ ಕೇಂದ್ರದ ವಿಶೇಷ ಉತ್ತೇಜನ; ಮಹಿಳಾ ಗುಂಪುಗಳಿಗೆ ಆದ್ಯತೆ

ಮೇ 20ರಂದು ಆಚರಿಸಲಾಗುವ ವಿಶ್ವ ಜೇನು ದುಂಬಿ ದಿನದ ಅಂಗವಾಗಿ ಜೇನುನೊಣಗಳ ಮಹತ್ವ ಮತ್ತೊಮ್ಮೆ ಗಮನ ಸೆಳೆಯುತ್ತಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಪರಾಗಸ್ಪರ್ಶ ಕ್ರಿಯೆಗೆ ಜೇನುನೊಣಗಳ ಕೊಡುಗೆ ಅಪಾರವಾಗಿದೆ. ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ, ಬೆಳೆಗಳ ಗುಣಮಟ್ಟ ಸುಧಾರಿಸುವಲ್ಲಿ ಮತ್ತು ಪರಿಸರ ಸಮತೋಲನ ಕಾಪಾಡುವಲ್ಲಿ ಜೇನುನೊಣಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ಈ ಹಿನ್ನೆಲೆ ಭಾರತ ಸರ್ಕಾರ “ರಾಷ್ಟ್ರೀಯ ಜೇನು ಸಾಕಾಣಿಕೆ ಮತ್ತು ಜೇನು ಮಿಷನ್‌ (NBHM)” ಯೋಜನೆಯನ್ನು ಜಾರಿಗೆ ತಂದಿದ್ದು, ವೈಜ್ಞಾನಿಕ ಜೇನು ಸಾಕಾಣಿಕೆಗೆ ಉತ್ತೇಜನ ನೀಡುತ್ತಿದೆ. ತೋಟಗಾರಿಕೆ ಇಲಾಖೆಯ ಮೂಲಕ ಜೇನುಗಾರಿಕೆಯ ಸಮಗ್ರ ಅಭಿವೃದ್ಧಿ, ಗುಣಮಟ್ಟದ ಜೇನು ಉತ್ಪಾದನೆ ಹಾಗೂ ಜೇನು ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ.

ರೈತರಿಗೆ ಬಾಡಿಗೆ ಆಧಾರದಲ್ಲಿ ಜೇನುನೊಣ ಕಾಲೋನಿ

ಪರಾಗಸ್ಪರ್ಶ ಕ್ರಿಯೆ ಪರಿಣಾಮಕಾರಿಯಾಗಲು ರೈತರಿಗೆ ಜೇನುನೊಣ ಕಾಲೋನಿಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸುವ ಉದ್ದೇಶದಿಂದ “ಜೇನು ಸಾಕಾಣಿಕೆ ಕಸ್ಟಮ್ ಹೈರಿಂಗ್ ಸೆಂಟರ್”ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ತೋಟಗಾರಿಕೆ ಬೆಳೆಗಳ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಳವಾಗಲಿದೆ ಎಂದು ಇಲಾಖೆ ನಿರೀಕ್ಷಿಸಿದೆ.

ಮಹಿಳಾ ಗುಂಪುಗಳಿಗೆ ವಿಶೇಷ ನೆರವು

ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಆದಿವಾಸಿ ಮಹಿಳಾ ಗುಂಪುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಹಿಳೆಯರಿಗೆ ವೈಜ್ಞಾನಿಕ ಜೇನು ಸಾಕಾಣಿಕೆ ತರಬೇತಿ ನೀಡುವ ಮೂಲಕ ಸ್ವಾವಲಂಬನೆಗೆ ಉತ್ತೇಜನ ನೀಡಲಾಗುತ್ತದೆ.

ಹೊಸ ಮಹಿಳಾ ಗುಂಪುಗಳ ರಚನೆಗೆ ಪ್ರತಿ ಗುಂಪಿಗೆ ₹20 ಸಾವಿರ ಸಹಾಯಧನ ನೀಡಲಾಗುತ್ತದೆ. ಜೊತೆಗೆ ಚಟುವಟಿಕೆ ನಿರಂತರವಾಗಿರಲು ಕಾರ್ಯನಿಧಿಯಾಗಿ ₹50 ಸಾವಿರವರೆಗೆ ಅನುದಾನ ಒದಗಿಸಲಾಗುತ್ತಿದೆ.

ಗುಣಮಟ್ಟದ ಜೇನು ಉತ್ಪಾದನೆಗೆ ಒತ್ತು

ಯೋಜನೆಯಡಿ ವಿವಿಧ ಜೇನುನೊಣಗಳ ಗುಣಮಟ್ಟದ ನ್ಯೂಕ್ಲಿಯಸ್ ಸ್ಟಾಕ್ ಹಾಗೂ ರಾಣಿ ಜೇನುನೊಣ ಉತ್ಪಾದನೆಗೆ ಸಹಾಯಧನ ನೀಡಲಾಗುತ್ತಿದೆ. ಜೇನು ಮತ್ತು ಇತರೆ ಜೇನು ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ಪ್ರಾದೇಶಿಕ ಜೇನು ಪರೀಕ್ಷಾ ಪ್ರಯೋಗಾಲಯಗಳನ್ನು ಬಲಪಡಿಸುವ ಕ್ರಮವೂ ಕೈಗೊಳ್ಳಲಾಗಿದೆ.

ಜಿಲ್ಲಾ ಮಟ್ಟದಲ್ಲಿಯೂ ಸಣ್ಣ ಜೇನು ಪರೀಕ್ಷಾ ಪ್ರಯೋಗಾಲಯ ಗಳನ್ನು ಸ್ಥಾಪಿಸುವ ಯೋಜನೆ ಜಾರಿಯಲ್ಲಿದ್ದು, ಇವು ಪ್ರಾದೇಶಿಕ ಪ್ರಯೋಗಾಲಯಗಳಿಗೆ ಉಪಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ.

ರೋಗ ಪತ್ತೆಗೆ ವಿಶೇಷ ಪ್ರಯೋಗಾಲಯ

National Bee Board ವತಿಯಿಂದ ಜೇನುನೊಣಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ರೋಗಗಳು ಹಾಗೂ ಸೋಂಕುಗಳ ತ್ವರಿತ ಪತ್ತೆಗಾಗಿ ರೋಗ ನಿರ್ಣಯ ಪ್ರಯೋಗಾಲಯಗಳ ಸ್ಥಾಪನೆಗೂ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಯಂತ್ರೋಪಕರಣಗಳಿಗೆ ಸಹಾಯಧನ

ಉನ್ನತ ಮೌಲ್ಯದ ಜೇನು ಉತ್ಪನ್ನಗಳ ಉತ್ಪಾದನೆಯಲ್ಲಿ ದುಬಾರಿ ಯಂತ್ರೋಪಕರಣಗಳ ಬಳಕೆ ದೊಡ್ಡ ಸವಾಲಾಗಿರುವುದರಿಂದ ಸರ್ಕಾರ ಹಲವು ಸಾಧನಗಳಿಗೆ ಸಹಾಯಧನ ನೀಡುತ್ತಿದೆ. ಪೋಲನ್ ಟ್ರೇ, ರಾಯಲ್ ಜೆಲ್ಲಿ ಉತ್ಪಾದನಾ ಕಿಟ್, ಬೀ ವೆನಮ್ ಎಕ್ಸ್ಟ್ರಾಕ್ಟರ್, ಕಾಂಬ್ ಹನಿ ಉತ್ಪಾದನಾ ಉಪಕರಣಗಳು ಹಾಗೂ ಪ್ರೋಪೊಲಿಸ್ ಉತ್ಪಾದನಾ ಸಾಧನಗಳಿಗೆ ಸಹ ಅನುದಾನ ಲಭ್ಯವಿದೆ.

ಪರಿಸರ ಸಂರಕ್ಷಣೆಯಲ್ಲೂ ಮಹತ್ವದ ಪಾತ್ರ

ಜೇನುನೊಣಗಳ ಸಂಖ್ಯೆ ಕುಸಿಯುವುದು ಜಾಗತಿಕ ಮಟ್ಟದಲ್ಲಿ ಆತಂಕದ ವಿಷಯವಾಗಿದೆ. ಹವಾಮಾನ ಬದಲಾವಣೆ, ರಾಸಾಯನಿಕಗಳ ಅತಿಯಾದ ಬಳಕೆ ಹಾಗೂ ಅರಣ್ಯ ನಾಶದಿಂದ ಜೇನುನೊಣಗಳ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜೇನು ಸಾಕಾಣಿಕೆಯನ್ನು ಕೇವಲ ಉದ್ಯಮವಾಗಿ ಮಾತ್ರವಲ್ಲದೆ ಪರಿಸರ ಸಂರಕ್ಷಣೆಯ ಭಾಗವಾಗಿಯೂ ಪರಿಗಣಿಸುವ ಅಗತ್ಯ ಹೆಚ್ಚಾಗಿದೆ.

ಜೇನು ಸಾಕಾಣಿಕೆಯಿಂದ ರೈತರಿಗೆ ಹೆಚ್ಚುವರಿ ಆದಾಯ ದೊರೆಯುವುದರ ಜೊತೆಗೆ ಕೃಷಿ ಉತ್ಪಾದಕತೆ ಹೆಚ್ಚುವ ಪ್ರಯೋಜನವೂ ಇರುವುದರಿಂದ ಗ್ರಾಮೀಣ ಆರ್ಥಿಕತೆಯಲ್ಲಿ ಇದು ಭರವಸೆಯ ಕ್ಷೇತ್ರವಾಗಿ ಬೆಳೆಯುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಜಿಲ್ಲಾ ಮಟ್ಟದಲ್ಲಿ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ದೂರವಾಣಿ ಸಂಖ್ಯೆ 0820 253 1950

Leave a Reply

Your email address will not be published. Required fields are marked *

error: Content is protected !!