ಭಗವದ್ಗೀತೆಯ ಶ್ಲೋಕಾರ್ಥ: ಅರ್ಜುನ ವಿಷಾದಯೋಗ ಶ್ಲೋಕ- 12
ಸಂಜಯ ಉವಾಚ…
ತಸ್ಯ ಸಂಜಯನ್ ಹರ್ಷಂ ಕುರುವೃದ್ಧ: ಪಿತಾಮಹ:|
ಸಿಂಹನಾದಂ ವಿನೋದ್ಯೋಚ್ಚೈ ಶಂಖಂ ದಧ್ಮೌಂ ಪ್ರತಾಪವಾನ್ ||
ದುರ್ಯೋಧನ ತನ್ನ ಗುರುಗಳಾದ ದ್ರೋಣಾಚಾರ್ಯರ ಬಳಿ, ಎಲ್ಲರೂ ಸೇರಿ ಭೀಷ್ಮಾಚಾರ್ಯರನ್ನು ರಕ್ಷಣೆ ಮಾಡಿ ಎನ್ನುವ ಮೂಲಕ , ಭೀಷ್ಮರ ಪ್ರತಾಪದ ಮೇಲೂ ಸಂಶಯ ಹೊಂದಿರುವುದು ತಿಳಿಯುತ್ತದೆ. ಈಗಾಗಲೇ ವಯಸ್ಸಾದ ಸೇನಾಧಿಪತಿ , ತನ್ನ ಸೇನೆಯ ಮುಂದಾಳತ್ವ ವಹಿಸಲು ಒಲ್ಲದ ಮನದಿಂದಲೇ ಬಂದಿದ್ದಾರೆ ಎಂಬುದು ಅವನ ಮನದ ಅಳಲು .. ಅವನು ಹೇಳುವ ರೀತಿಯಿಂದ ಭೀಷ್ಮರ ಮನಸ್ಸು ಬಹುವಾಗಿ ನೊಂದಿದೆ.. ಇಡೀ ಕುರು ಕುಲಕ್ಕೆ ಹಿರಿಯ ಪಿತಾಮಹರಾದಂತಹ, ಜ್ಞಾನ ವೃದ್ದರಾಗಿರುವ, ಬಹಳ ಪ್ರತಾಪಶಾಲಿಗಳಾದ ಭೀಷ್ಮಾಚಾರ್ಯರು ತಮ್ಮ ಮನಸ್ಸಿಗೆ ವಿರುದ್ಧವಾಗಿ, ಕುರುಕುಲದ ಸಿಂಹಾಸನದ ಉಳಿವಿಗಾಗಿ, ಅಧರ್ಮ ಎಂದು ತಿಳಿದಿದ್ದರೂ ಅನ್ನದ ಋಣಕ್ಕೆ ಪ್ರಾಮಾಣಿಕವಾಗಿ ಹೋರಾಡಲು ನಿಂತರೆ… ದುರ್ಯೋಧನ ಕುಹಕವಾಡಿ ಅವನ ಮನಸ್ಸಿಗೆ ನೋವುಂಟು ಮಾಡಿದ್ದಾನೆ ..ಭೀಷ್ಮಾಚಾರ್ಯರು ಆ ಕಾಲದಲ್ಲಿ ಎಂತಹ ವೀರರಾಗಿದ್ದರೆಂದರೆ , ಜರಾಸಂದನೂ ಸಹ ಅವರ ವಿರುದ್ಧ ಹೋರಾಟಕ್ಕೆ ಇಳಿದಿರಲಿಲ್ಲ …ಅಂತಹ ಭೀಷ್ಮರು , ದುರ್ಯೋಧನನ ಮಾತನ್ನು ಕೇಳಿ, ಬೇಸರಗೊಂಡರೂ ಸಹ , ಅವನ ಮನಸ್ಸಿಗೆ ಆನಂದ ಉಂಟುಮಾಡುವ ಸಲುವಾಗಿ , ತಾವು ಯುದ್ಧಕ್ಕೆ ಸಿದ್ದರಿದ್ದೇವೆ ಎಂಬುದನ್ನು ತಿಳಿಸುವ ಸಲುವಾಗಿ ತಮ್ಮ ಶಂಖನಾದವನ್ನು ಮಾಡಿದರು . ಇಲ್ಲಿ ಗಮನಿಸಬೇಕಾದ ಅಂಶ ..ಮಹಾ ಶೂರರೂ, ಅಜ್ಜನ ಸ್ಥಾನದಲ್ಲಿ ಇರುವ ಭೀಷ್ಮಾಚಾರ್ಯರಿಗೂ ಎಂತಹ ಪರಿಸ್ಥಿತಿ ಬಂತೆಂದರೆ , ಅವರು ದುಷ್ಟ ದುರ್ಯೋಧನನ ಪ್ರೀತಿಗೆ ಶಂಖನಾದ ಮಾಡಿದರೇ ಹೊರತು ಭಗವಂತನ ಪ್ರೀತಿಗಾಗಿ ಮಾಡಲಿಲ್ಲ. ಹಾಗಾಗಿ ಬಹಳ ಪರಾಕ್ರಮಿಗಳಾದರೂ ಸೋತು ಹೋದರು .. ಸಿಂಹನಾದ ಮಾಡುವ ಮೂಲಕ ಎರಡೂ ಸೇನೆಗಳಿಗೂ ಯುದ್ಧದ ಆರಂಭದ ಸೂಚನೆಯಿತ್ತ , ಭೀಷ್ಮಾಚಾರ್ಯರ ಮಾನಸಿಕ ಸ್ಥೈರ್ಯವೂ ಮೆಚ್ಚಲರ್ಹ .. ದುಷ್ಟರ ಮನದಲ್ಲಿ ಭಯ ಮೂಡಿಸುವ ಸಲುವಾಗಿ, ತಮ್ಮ ಆತ್ಮ ವಿಶ್ವಾಸ ತೋರಿಸುವ ಸಲುವಾಗಿ ಶಂಖನಾದ ಮಾಡುವುದು ವಾಡಿಕೆ.. ಇಲ್ಲಿ ದುರ್ಯೋಧನನ ಎದುರು ಕುರುಕುಲ ವೃದ್ಧರು ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಮತ್ತು ಅದರಿಂದ ಅವನ ಮನಸ್ಸಿಗೆ ಮುದ ನೀಡಲು ಶಂಖನಾದ ಮಾಡಿದರು .
✍️ ಸುನೀತಾ ಉಡುಪ ಜನ್ನಾಡಿ..ಬಿದ್ಕಲ್ ಕಟ್ಟೆ





