ಗೀತೋಪದೇಶ -ಶ್ಲೋಕಾರ್ಥ -1
ಭಗವದ್ಗೀತೆಯ ಶ್ಲೋಕಾರ್ಥ
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಶ್ಲೋಕ ..೧
ಧೃತರಾಷ್ಟ್ರ ಉವಾಚ…
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವ:|
ಮಾಮಕಾ: ಪಾಂಡವಾಶ್ಚೈವ ಕಿಮ ಕುರ್ವತ ಸಂಜಯ||
ಮಹರ್ಷಿ ಶ್ರೀವೇದವ್ಯಾಸರಿಂದ ವಿರಚಿತ "ಮಹಾಭಾರತ" ಕಥೆಯಲ್ಲಿ ಪಾಂಡವರು ಮತ್ತು ಕೌರವರ ನಡುವೆ ಯುದ್ಧ ನಡೆಯುವುದು ನಿಶ್ಚಿತವಾಗುತ್ತದೆ..ಎಲ್ಲರ ಸಂಧಾನವೂ ವಿಫಲವಾದಾಗ, ದುರ್ಯೋಧನ ಯಾರಮಾತನ್ನೂ ಕೇಳದೆ ಪಾಂಡವರಿಗೆ ಐದು ಗ್ರಾಮವನ್ನೂ ಸಹ ಕೊಡಲು ಒಪ್ಪಲಿಲ್ಲ. ಹಾಗಾಗಿ ಯುದ್ಧವೇ ಅಂತಿಮ ತೀರ್ಮಾನವಾಯಿತು.ಪಾಂಡವರ ಏಳು ಅಕ್ಷೋಹಿಣಿ ಸೇನೆ ಹಾಗೂ ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆ ಕುರುಕ್ಷೇತ್ರದ ರಣಭೂಮಿಯಲ್ಲಿ ಜಮಾಯಿಸಿತು.ಹುಟ್ಟುಕುರುಡನಾದ ಧೃತರಾಷ್ಟ್ರನಿಗೆ ಸಂಜಯನೇ ಮಧ್ಯವರ್ತಿಯಾಗಿ, ಮಹಾಮುನಿ ಶ್ರೀವೇದವ್ಯಾಸರು ನೀಡಿದ ದಿವ್ಯದೃಷ್ಟಿಯ ಮೂಲಕ ಯುದ್ಧ ಭೂಮಿಯ ಆಗುಹೋಗುಗಳನ್ನು ತಿಳಿಸುವ ಮಾಧ್ಯಮವಾದ..ಇಂದಿನ ಯಾಂತ್ರಿಕ ಯುಗದಲ್ಲಿ ವೀಡಿಯೋ ಟೆಕ್ನಾಲಜಿ ದೃಶ್ಯ ವಾಹಕವಾದಂತೆ ಅಂದು ಮಂತ್ರ ಶಕ್ತಿಯೇ ಮಾಯಾಜಾಲವಾಗಿ ಅಲ್ಲಿನ ದೃಶ್ಯ ಗೋಚರವಾಗಿರಬಹುದು. ಈ ಶ್ಲೋಕದಲ್ಲಿ ಧೃತರಾಷ್ಟ್ರ ಸಂಜಯನ ಬಳಿ ಕೇಳುತ್ತಿದ್ದಾನೆ....ಧರ್ಮಭೂಮಿಯಾದ ಕುರುಕ್ಷೇತ್ರದಲ್ಲಿ ಯುದ್ಧಾಪೇಕ್ಷಿಗಳಾದ ನನ್ನವರು ಹಾಗೂ ಪಾಂಡವರು ಏನು ಮಾಡಿದರು?? ಇನ್ನೊಂದು ಅರ್ಥದಲ್ಲಿ ನಮ್ಮ ಜೀವನವೇ ಒಂದು ಧರ್ಮಸ್ಥಾನವಾದ ಕುರುಕ್ಷೇತ್ರ. ಇಲ್ಲಿ ಎಲ್ಲರೂ ಕುರುಡ ಧೃತರಾಷ್ಟ್ರನಂತೆ,'ನನ್ನವರು' ಎಂಬ ಮೋಹಪಾಶದಲ್ಲಿ ಸಿಲುಕಿದ್ದೇವೆ. ಇಷ್ಟೇ ಅಲ್ಲದೆ ನಮ್ಮೊಳಗೇ ಪಾಂಡವರ ಒಳ್ಳೆಯ ಯೋಚನೆಗಳೂ ಇವೆ. ಹಾಗೇ ಆಗಾಗ್ಗೆ ಕೌರವನ ಕ್ರೌರ್ಯ, ಕೆಟ್ಟಆಲೋಚನೆಗಳು ಇಣುಕುವುದಿದೆ. ಕೃಷ್ಣನನ್ನು ಅಂತರಂಗದ ಗೆಳೆಯನಾಗಿ ಮಾಡಿಕೊಂಡರೆ..,ಹೇಗೆ ಅರ್ಜುನನ ಸಂಕಟ ಪರಿಹರಿಸಿ,ಮಾಯೆಯಿಂದಉದ್ಧರಿಸಿದನೋ,ಹಾಗೇ ನಮ್ಮನ್ನೂ ಈ ಭವ ಬಂಧನದಿಂದ ಬಿಡಿಸುವನು.
✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ






