ಕೃಷ್ಣಾಂತರಂಗ
ಅಷ್ಟಮಿ ದಿನದಿ ಶಿಷ್ಟಪಾಲಕನ
ಇಷ್ಟದಿಂದಲಿ ಭಜಿಸೋಣ,
ದುಷ್ಟ ಶಿಕ್ಷಕನ ಅಭೀಷ್ಟ ದಾಯಕನ
ನಿಷ್ಠೆಯಿಂದ ನಾವು ಸ್ಮರಿಸೋಣ..
ಉಂಡೆ ಚಕ್ಕುಲಿಯ ಭಕ್ಷ್ಯ ಭೋಜನ
ಚಂಡೆ ಮದ್ದಲೆಯ ಬಾರಿಸಿ ಗಾಯನ,
ತಂಡತಂಡದಲಿ ಹುಲಿವೇಷದ ನರ್ತನ
ಕಂಡು ಭಜಿಸೋಣ ಉಡುಪಿ ಕೃಷ್ಣನಾ..
"ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಮ್.. ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ".. ಸಜ್ಜನರನ್ನು ರಕ್ಷಿಸಿ,ದುರ್ಜನರನ್ನು ಶಿಕ್ಷಿಸಿ,ಧರ್ಮವನ್ನು ಸಂಸ್ಥಾಪನೆ ಮಾಡಲು ಪ್ರತಿ ಯುಗಯುಗದಲ್ಲೂ ಅವತರಿಸಿ ಬರುವೆ..ಎಂಬುದು ಕೃಷ್ಣನ ಅಭಯವಾಣಿ.. ಮಹಾವಿಷ್ಣು ಜಗತ್ತಿನ ಪಾಲನೆ ಪೋಷಣೆಯ ಭಾರ ಹೊತ್ತವನಾಗಿ,ಭೂದೇವಿಗೆ ದುಷ್ಟರಿಂದ ಸಂಕಟ ಬಂದಾಗೆಲ್ಲಾ, ನಾನಾ ಅವತಾರ ಎತ್ತಿಬಂದು ಸಂಕಟದಿಂದ ಪಾರು ಮಾಡುವನು.. ದ್ವಾಪರದಲ್ಲಿ ವಸುದೇವ- ದೇವಕಿಯರ ಅಷ್ಟಮ ಗರ್ಭದಲ್ಲಿ ಅಷ್ಟಮಿಯ ಪುಣ್ಯ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಕೃಷ್ಣನಾಗಿ ಅವತರಿಸಿ ಬಂದ ಭಗವಂತ ಎಲ್ಲರನ್ನೂ ತನ್ನೆಡೆಗೆ ಆಕರ್ಷಿಸುವವನು.. ಆದರೆ ಕೃಷ್ಣನ ಬದುಕನ್ನು ತಪ್ಪಾಗಿ ಅರ್ಥೈಸಿ,ಅವನನ್ನು ಜಾರ, ಚೋರ ಎಂದು ಜರಿಯುವವರು ಕೃಷ್ಣಾಂತರಂಗ ಅರಿಯದ ಮತಿಹೀನರು.. ಕೃಷ್ಣಜನ್ಮಾಷ್ಟಮಿಯ ಇಂದಿನ ಶುಭ ಸಂಧರ್ಭದಲ್ಲಿ ಕೃಷ್ಣನ ಜೀವನದ ಕೆಲವು ಘಟನೆಗಳ ಹಿಂದಿನ ತತ್ವಚಿಂತನೆ ಮಾಡೋಣ..
ರಾಮಾವತಾರದಲ್ಲಿ ಭಗವಂತ ಏಕ ಪತ್ನೀ ವ್ರತಸ್ಥನಾದರೆ ಕೃಷ್ಣಾವತಾರದಲ್ಲಿ ಹದಿನಾರು ಸಾವಿರದ ನೂರೆಂಟು ಮಡದಿಯರ ವಲ್ಲಭನಾದ .. ಈ ನಿಟ್ಟಿನಲ್ಲಿ ಕೃಷ್ಣನನ್ನು ದೊಡ್ಡ ಸ್ತ್ರೀ ಲೋಲ ಎಂದು ದೂರುವವರು ಕೃಷ್ಣನ ಕಥೆಯನ್ನು ಸರಿಯಾಗಿ ಓದಬೇಕು.. ಅವರೆಲ್ಲರೂ ಕೃಷ್ಣನೇ ತನ್ನ ಪತಿಯಾಗಬೇಕೆಂದು ಬಯಸಿದರೇ ವಿನಃ ಕೃಷ್ಣ ಅವರ ಹಿಂದೆ ಹೋಗಿದ್ದಲ್ಲ...ಕೃಷ್ಣ ನರಕಾಸುರನ ಸೆರೆಯಲ್ಲಿದ್ದ ಸಾವಿರಾರು ಹೆಣ್ಣು ಮಕ್ಕಳನ್ನು ವಿವಾಹ ಆಗದೇ ಇದ್ದಿದ್ದರೆ,ಅವರೆಲ್ಲರ ಬದುಕೂ ಹಾಳಾಗುತ್ತಿತ್ತು.. ದುಷ್ಟನ ಅಂಕೆಯಲ್ಲಿದ್ದವರನ್ನು ಮದುವೆ ಆಗಲು ಯಾರು ತಾನೇ ಬರುತ್ತಾರೆ??.ಆಕಾಲದಲ್ಲಿ ಬಹು ಪತ್ನಿತ್ವ ಸಮ್ಮತವಾಗಿತ್ತು. ಕೃಷ್ಣನನ್ನು ಕಾಮುಕನೆಂದು ದೂರುವವರದ್ದೇ ಕಾಮುಕ ದೃಷ್ಟಿ ಹೊರತು ಕೃಷ್ಣ ಕಾಮನನ್ನೇ ಜಯಿಸಿದವನು.. ಕಾಮದೇವ ಮನ್ನಥನ ಜನಕನೇ ಅವನಲ್ಲವೇ!!.. ಭಗವಂತ ಪರಮ ಪುರುಷ..ಅವನ ದೃಷ್ಟಿಯಲ್ಲಿ ಹೆಣ್ಣು ಗಂಡೆಂಬ ಭೇದವಿಲ್ಲ.. ಎಲ್ಲರೂ ದೇಹಧಾರಿ ಆತ್ಮರಷ್ಷೇ..ಹಾಗಾಗಿ ಎಲ್ಲಾ ಜೀವರೂ ಸ್ತ್ರೀಯರು...ಆ ಪರಮ ಪುರುಷನೊಂದಿಗೆ ಸಂಯೋಗ ಹೊಂದುವ ಅಪೇಕ್ಷೆ ಇಟ್ಟು ಸದಾ ಅವನ ಧ್ಯಾನ ಮಾಡಿದರೆ ಅನಾಯಾಸವಾಗಿ ಹುಟ್ಟು ಚಕ್ರದ ಬಂಧನದಿಂದ ಮುಕ್ತರಾಗಬಹುದು ಎಂಬುದು ಈ ಘಟನೆಯ ಹಿಂದಿನ ತತ್ವಾರ್ಥ.
ಗೋಪಿಕೆಯರ ವಸ್ತ್ರಾಪಹರಣ ಮಾಡಿದ ಸಮಯ ಕೃಷ್ಣ ಏಳೆಂಟು ವರ್ಷದ ಬಾಲಕ. ನದಿಯಲ್ಲಿ ಬೆತ್ತಲಾಗಿ ಸ್ನಾನ ಮಾಡಿದ ಒಂದು ತಪ್ಪಿಗಾಗಿ ಅವರ ಅಷ್ಟು ದಿನದ ವ್ರತಾಚರಣೆ ವ್ಯರ್ಥವಾಗ ಬಾರದೆಂದು ಕೃಷ್ಣ ಹಾಗೆ ನಡೆದುಕೊಂಡನು. ಹಾಗೇ ಭಗವಂತ ಭಕ್ತರ ಮೊರೆ ಕೇಳಬೇಕಾದರೆ ಅವನ ಮುಂದೆ ಸಂಪೂರ್ಣ ಶರಣಾಗಬೇಕು .. ಯಾವಾಗ ದ್ರೌಪದಿ ಮತ್ತು ಗೋಪಿಕೆಯರು ಸಂಪೂರ್ಣ ಕೃಷ್ಣನ ಮೇಲೇ ತಮ್ಮ ರಕ್ಷಣೆಯ ಜವಾಬ್ದಾರಿ ವಹಿಸಿ, "ಕೃಷ್ಣಾ,ನೀನೇ ಗತಿ " ಎಂದು ಎರಡೂ ಕರಗಳನ್ನೆತ್ತಿ ಬೇಡಿದರೋ , ಆಗ ಕೃಷ್ಣ ಅವರನ್ನು ಉದ್ಧರಿಸಿದನು.... ಹಾಗಾಗಿ ಇದರಿಂದ ನಾವು ಕಲಿಯ ಬೇಕಾದ್ದು , ಭಗವಂತನ ಮೇಲೆ ಸಂಪೂರ್ಣ ಶ್ರದ್ಧೆ ನಂಬಿಕೆ ಇಟ್ಟು,"ಅನ್ಯಥಾ ಶರಣಂ ನಾಸ್ತಿ"..ಎಂಬ ಭಾವದಿಂದ ಬದುಕಿದಾಗ ಅವನೂ "ಯೋಗಕ್ಷೇಮಂ ವಹಾಮ್ಯಹಂ"ಎಂದಂತೆ ಭಕ್ತನ ಯೋಗಕ್ಷೇಮ ನೋಡುವನು ..
ಇನ್ನು ಕೃಷ್ಣ ಕರ್ಣ,ದ್ರೋಣ, ದುರ್ಯೋಧನಾದಿಗಳನ್ನು ಮೋಸದಿಂದ ಕೊಲ್ಲಿಸಿದ ಎಂದು ದೂರುವವರಿದ್ದಾರೆ. ..ಆದರೆ ಧರ್ಮಕ್ಕೆ ಸೋಲಾಗಲು ಬಿಡಬಾರದೆಂಬ ಒಂದೇ ಕಾರಣಕ್ಕೆ ಕೃಷ್ಣ ಸಜ್ಜನರಾದ ಪಾಂಡವರ ಪರ ನಿಂತು ಸಾರಥ್ಯ ವಹಿಸಿದ. ಕೃಷ್ಣ ಅಧರ್ಮಿಗಳಾದ ಹಲವು ದುಷ್ಟ ರಾಜರ ಸಂಹಾರ ಮಾಡಿದರೂ,ಅಲ್ಲಿನ ಸಿಂಹಾಸನಕ್ಕೆ ಆಸೆ ಪಡದೆ ಆಯಾಯ ರಾಜ್ಯದ ಉತ್ತರಾಧಿಕಾರಿಗಳಿಗೆ ಪಟ್ಟಕಟ್ಟಿ ಅಲ್ಲಿನ ಪರಂಪರೆಯನ್ನೆ ಮುಂದುವರಿಯುವಂತೆ ಮಾಡಿ, ತಾನು ಕೊನೆತನಕ ಸಾರಥಿಯಾಗಿಯೇ ಉಳಿದನು .ಇದು ಅಧಿಕಾರ ಲಾಲಸೆ ಇಲ್ಲದ ಕೃಷ್ಣಾಂತರಂಗ.
ಕೃಷ್ಣ ಧರ್ಮಕ್ಕೆ ಗ್ಲಾನಿಯಾಗುವ ಸಂದರ್ಭ ಬಂದರೆ ತನ್ನವರೆಂಬ ಭಾವವನ್ನೂ ಮೀರಿ ನಿರ್ಮೋಹಿಯಾಗಿ ಹೆಜ್ಜೆ ಇಡುವನೆಂಬುದಕ್ಕೆ ಸಾಕ್ಷಿ ಭೀಮನ ಮೊಮ್ಮಗ ಬರ್ಬರೀಕನ ಪ್ರಾಣ ಹರಣದ ಘಟನೆ ..ಬರ್ಬರೀಕ ಪಡೆದ ವರದಿಂದಾಗಿ ಪಾಂಡವರಿಗೆ ಸೋಲಾಗುವ ಸಂಭವವಿತ್ತು..ಅವನು ಒಂದೇ ಬಾಣದಿಂದ ಎಲ್ಲಾ ಶತ್ರುಗಳನ್ನು ಕೊಲ್ಲುವಷ್ಟು ಪರಾಕ್ರಮಿ .. ಇವನ ಪರಾಕ್ರಮವೇ ಮುಂದೆ ಸಮಾಜಕ್ಕೆ ಕಂಟಕವಾಗಬಹುದೆಂಬ ಭಯದಿಂದ ಇವನ ಗುರುಗಳು ., ಅವನಿಂದ ಗುರುದಕ್ಷಿಣೆಯಾಗಿ ಎರಡು ಶಪಥ ಪಡೆದರು .."ಯಾರಿಗಾದರೂ ಮಾತು ಕೊಟ್ಟರೆ ಅದನ್ನು ಮೀರದಂತೆ ಹಾಗೂ ಯುದ್ಧದಲ್ಲಿ ದುರ್ಬಲ ಪಕ್ಷದ ಪರ ನಿಲ್ಲುವಂತೆ " ಕೇಳಿದ್ದರು. ಹಾಗಾಗಿ ಬರ್ಬರೀಕ ಯುದ್ಧಕ್ಕೆ ಬಂದರೆ ಪಕ್ಷ ಬದಲಾಯಿಸುತ್ತಾ ಹೋಗಿ ಕಡೆಗೆ ಎರಡೂ ಸೇನೆಗೂ ಕಷ್ಟವಾಗುತ್ತಿತ್ತು ..ಇದನ್ನು ಮನಗಂಡು ಕೃಷ್ಣ ಅವನ ಬಳಿ ಧರ್ಮದ ಉಳಿವಿಗೆ ಅವನ ಪ್ರಾಣವನ್ನೇ ಕೇಳಿದ ..ಬರ್ಬರೀಕ ಖುಷಿಯಿಂದಲೇ ಧರ್ಮ ರಕ್ಷಣೆಗೆ ತನ್ನನ್ನು ಅರ್ಪಿಸಿ, ಕೃಷ್ಣನಿಂದ ದೈವತ್ವದ ವರ ಪಡೆದು ಇಂದಿಗೂ ಪೂಜಾರ್ಹನಾದನು.. ಹೀಗೆ ಕೃಷ್ಣ ಯಾರ ಪರವೂ ಅಲ್ಲಾ..ಅವನು ಕೇವಲ ಧರ್ಮದ ಪರ .
ಬೆಣ್ಣೆ ಕದಿಯುವ ಮೂಲಕ ತಾನು ಕೇವಲ ಬೆಣ್ಣೆಯಂತೆ ಶುದ್ದವಾದ,ಮೃದುವಾದ ಮನಸ್ಸಿಗೆ ಒಲಿಯುವವನೆಂದು ತೋರಿಸಿದ ರಂಗನ ಅಂತರಂಗ ಅರಿಯುವುದು ಸಾಮಾನ್ಯ ಜನರಿಗೆ ಕಷ್ಟ .."ಯಾವುದೇ ಫಲಾಪೇಕ್ಷೆ ಇಲ್ಲದೇ ನಿಮ್ಮ ನಿಮ್ಮ ಪಾಲಿನ ಕೆಲಸವನ್ನು ನನ್ನ ಪ್ರೀತಿಗಾಗಿ ಮಾಡಿ ..ಅದರಿಂದಲೇ ನಿಮಗೆ ನಾನು ನನ್ನ ಪರಮಪದವಿ ಕೊಡುವೆ " ಎಂದು ಅತಿ ಸುಲಭದ ಮೋಕ್ಷ ಮಾರ್ಗ ಹೇಳಿದ ಕೃಷ್ಣನಿಗೆ ಶರಣಾಗೋಣ .. ಕೃಷ್ಣಂ ವಂದೇ ಜಗದ್ಗುರುಂ.
✍️ಸುನೀತಾ ಉಡುಪ





