ಭರತನಾಟ್ಯದ ಪವಿತ್ರತೆ ಹಾಗೂ ದಾಖಲೆಗಳ ಪ್ರಚಾರ
“ಭರತನಾಟ್ಯ – ಇದು ಕೇವಲ ಒಂದು ನೃತ್ಯವಲ್ಲ, ದೈವೀಸಾಧನೆಯ ಫಲ. ಶರೀರ, ಮನಸ್ಸು ಮತ್ತು ಆತ್ಮವನ್ನು ಒಂದೇ ಸಮನಾಗಿ ಬೆಳೆಸುವ ಅಪೂರ್ವವಾದ ಕಲೆ. ನೂರಾರು ವರ್ಷಗಳಿಂದ ನಮ್ಮ ಗುರುಪರಂಪರೆಯ ಆಶೀರ್ವಾದದಿಂದ, ಶ್ರಮದಿಂದ, ತಪಸ್ಸಿನಿಂದ ಬೆಳೆದ ಈ ನೃತ್ಯವನ್ನು ಇಂದಿನ ಪೀಳಿಗೆ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಮುಂತಾದ ದಾಖಲೆಗಳ ಹೆಸರಿನಲ್ಲಿ ಹಾಳುಮಾಡುತ್ತಿದ್ದಾರೆ.
ನಿಜವಾದ ಭರತನಾಟ್ಯ ಕಲಿಯಲು ವರ್ಷಗಳ ಶ್ರಮ, ತಾಳ್ಮೆ, ಶಿಸ್ತು ಮತ್ತು ದೇಹ-ಮನಸ್ಸಿನ ನಿಯಂತ್ರಣ ಬೇಕು. ಪ್ರತಿಯೊಂದು ಭಂಗಿ, ಪ್ರತಿಯೊಂದು ಅಡವು, ಪ್ರತಿಯೊಂದು ಅಭಿನಯ – ದೇವರಿಗೆ ಸಮರ್ಪಿಸಿದ ಹೂವಿನಂತೆ. ಅಷ್ಟು ಪವಿತ್ರವಾದ ಈ ಕಲೆಯನ್ನು ಇಂದೀಗ ಕೆಲವರು ಕೇವಲ ದಾಖಲೆಗಾಗಿ ಕೂತು ಕೈ ಕಾಲುಗಳನ್ನು ಅಲುಗಿಸಿ ‘ನಾವು ನೃತ್ಯ ಮಾಡಿದ್ದೇವೆ’ ಎಂದು ಪ್ರಚಾರ ಪಡೆಯುತ್ತಿದ್ದಾರೆ.
ಇದು ನೃತ್ಯವಲ್ಲ, ಇದು ಭರತನಾಟ್ಯದ ಅವಮಾನ.. ಭರತನಾಟ್ಯದ ದೈವಿಕತೆ, ಗಂಭೀರತೆ, ತತ್ತ್ವ, ಸೌಂದರ್ಯ – ಯಾವುದೂ ಇದರಲ್ಲಿ ಇಲ್ಲ. ಇಂಥ ದಾಖಲೆಗಳ ಹಿಂದೆ ಓಡುತ್ತಿರುವವರು ಕೇವಲ ಪ್ರಸಿದ್ಧಿ ಬೇಕೆಂದು ಈ ಪವಿತ್ರ ಕಲೆಯನ್ನು ಕುಗ್ಗಿಸುತ್ತಿದ್ದಾರೆ.
ಪ್ರತಿದಿನ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿಶ್ವಮಟ್ಟದ ಕಲಾವಿದರು, ಅದ್ಭುತ ಪ್ರತಿಭೆಗಳು ತಮ್ಮ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ನೀಡುತ್ತಾರೆ. ಅಂತಾರಾಷ್ಟ್ರೀಯ ಕಲಾವಿದರು ಸಹ ಅಲ್ಲಿ ವೇದಿಕೆ ಹಂಚಿಕೊಳ್ಳುತ್ತಾರೆ. ಆದರೆ ಅವುಗಳನ್ನು ನೋಡಲು ಜನ ಬರುವುದೇ ಕಡಿಮೆ. ಆದರೆ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಎಂಬ ಹೆಸರಿನಲ್ಲಿ ಕೂತು ಕೈಕಾಲು ಅಲುಗಿಸಿದರೆ ಅದನ್ನು ಮಹೋನ್ನತ ಸಾಧನೆ ಎಂದು ಜನರು ನೋಡುತ್ತಾರೆ. ಇದು ಕೇವಲ ಭರತನಾಟ್ಯದ ಅವಮಾನವಲ್ಲ – ನಮ್ಮ ಕಲಾ ಸಂಸ್ಕೃತಿಗೆ ಧಕ್ಕೆ.”
ನಾನು ಯಾರನ್ನೂ ನೋಯಿಸಲು ಬಯಸುವುದಿಲ್ಲ. ಆದರೆ ಈಗ ಸಮಯ ಬಂದಿದೆ–ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ಗಂಭೀರವಾಗಿ ಆಲೋಚಿಸಬೇಕು. ನನ್ನಂತೆಯೇ ಎಲ್ಲಾ ನೃತ್ಯಗುರುಗಳು ಸಹ ಇದೇ ಅಭಿಪ್ರಾಯ ಹೊಂದಿರುತ್ತಾರೆ ಎಂಬುದು ನನ್ನ ದೃಢ ನಂಬಿಕೆ. ವಾಸ್ತವವಾಗಿ ನನ್ನ ಕೆಲ ವಿದ್ಯಾರ್ಥಿಗಳು ಸಹ ‘ಇದೇನಾ ಭರತನಾಟ್ಯ?’ ಎಂದು ಪ್ರಶ್ನಿಸಿದರೆಂಬುದು ನನಗೆ ನೋವುಂಟುಮಾಡಿತು.
ಅತ್ಯಂತ ಕಳವಳಕರ ಸಂಗತಿ ಏನೆಂದರೆ- ಭರತನಾಟ್ಯದ ಬಗ್ಗೆ ಹೆಚ್ಚು ಅರಿವು ಇಲ್ಲದ ಜನರು, ‘ಇದೇ ಭರತನಾಟ್ಯ’ ಎಂದು ತಪ್ಪಾಗಿ ಭಾವಿಸಬಹುದು. ಹೀಗೆ ಮಾಡಿದರೆ ನಾವು ಮುಂದಿನ ತಲೆಮಾರುಗಳಿಗೆ ತಪ್ಪಾದ ಸಂದೇಶವನ್ನು ನೀಡುತ್ತಿರುವಂತಾಗುತ್ತದೆ.
ನಾವು ಭರತನಾಟ್ಯವನ್ನು ದೇವರ ಸಮರ್ಪಣೆಯಾಗಿ ನೋಡಬೇಕು, ರೆಕಾರ್ಡ್ ಪುಸ್ತಕದಲ್ಲಿ ಹೆಸರು ಬರೆಯುವ ಸಾಧನವಾಗಿ ಅಲ್ಲ. ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಹೆಸರು ಬರಿಸಿದರೂ ಅದು ಕ್ಷಣಿಕ. ಆದರೆ ಭರತನಾಟ್ಯದ ತತ್ತ್ವವನ್ನು ಉಳಿಸಿದರೆ ಅದು ಶಾಶ್ವತ. ನಮ್ಮ ಕರ್ತವ್ಯ ಈ ದೈವೀಕಲೆಯ ಗೌರವವನ್ನು ಕಾಪಾಡುವುದು.
✍️ ವಿದುಷಿ ಶ್ರೀಮತಿ ವೈದೇಹಿ ಸುಭಾಷಿತ್






You are right. Records are temporary. Today’s record will be broken by someone else tomorrow. It will be a continuous process. Education and learning any art should not be with a motive to make records.
Then it will be like competition hub and will never be a Traditional learning.
Learned and highly qualified professional from this field must make awareness programmes