ಯಕ್ಷಗಾನ, ಕೋಲ, ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಡೆ- ಜನಪತ್ರಿನಿಧಿಗಳು‌ ಮಧ್ಯಪ್ರವೇಶಕ್ಕೆ ಆಗ್ರಹ

ಉಡುಪಿ:ಸುಪ್ರೀಂಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ರಾತ್ರಿ ಹತ್ತುಗಂಟೆಯ ನಂತರ ಧ್ವನಿವರ್ಧಕ ಬಳಕೆಗೆ (50ಡಿಸಿಬಲ್‌ಗಿಂತ ಹೆಚ್ಚಿನ) ಸರಕಾರ ಹಾಕಿದ ನಿರ್ಬಂಧದಿಂದಾಗಿ ರಾತ್ರಿಹೊತ್ತು ಸ್ಥಳೀಯ ಸಂಪ್ರದಾಯಗಳಿಗೆ ಅನುಗುಣವಾಗಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮಗಳಾದ ದೈವರಾದನೆ, ಭೂತಾರಾಧನೆ–ಕೋಲ,ನಾಗರಾಧನೆ ಜಾತ್ರಾ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಯಕ್ಷಗಾನ,ನಾಟಕ,ಸಂಗೀತ –ನೃತ್ಯ… ಹೀಗೆ ಹಲವಾರು ವೈವಿಧ್ಯದ  ಕಾರ್ಯಕ್ರಮ–ಸಮಾರಂಭಗಳಿಗೆ ತೊಂದರೆ ಆಗುತ್ತಿದೆ 

ದೇಗುಲಗಳ ಜಾತ್ರೆ ಸಹಿತ ಕೆಲವು ಧಾರ್ಮಿಕ ಕಾರ್ಯಕ್ರಮಗಳು, ಯಕ್ಷಗಾನ, ದೈವರಾಧನೆ – ಭೂತರಾಧನೆ, ಕೋಲ, ನಾಗಾರಾಧನೆ ಮುಂತಾದ ಹಲವು ಧಾರ್ಮಿಕ ಕಾರ್ಯಕ್ರಮಗಳು ರಾತ್ರಿಯಿಂದ ಬೆಳಗಿನವರೆಗೆ ನಡೆಯುತ್ತಿತ್ತು. ಈ ಎಲ್ಲಾ ಕಾರ್ಯಕ್ರಮಗಳು ಒಂದೇ ಸ್ಥಳದಲ್ಲಿ ಪ್ರತಿನಿತ್ಯ ನಡೆಯುವ ಕಾರ್ಯಕ್ರಮಗಳಲ್ಲ. ಬೇರೆ ಬೇರೆ ಸ್ಥಳಗಳಲ್ಲಿ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ನಡೆಯುವ ಕಾರ್ಯಕ್ರಮಗಳು. ಅಲ್ಲದೆ ಇಂತಹ ಕಾರ್ಯಕ್ರಮಗಳಿಗೆ ಡಿ ಜೆ ತರಹದ ಅಬ್ಬರದ ಧ್ವನಿವರ್ಧಕ ಉಪಯೋಗಿಸುವುದಿಲ್ಲ ಸಣ್ಣ ಮಟ್ಟಿಗೆ ಧ್ವನಿವರ್ಧಕ ಉಪಯೋಗಿಸುವಂತಹದ್ದು ಇದರ ಶಬ್ದದ ವ್ಯಾಪ್ತಿ ಸಾಧಾರಣ 100ರಿಂದ 150 ಮೀಟರ್ ಇರಬಹುದು.

ಹಲವಾರು ವರ್ಷಗಳಿಂದ ಇಡೀ ರಾತ್ರಿ  ನಡೆಯುತ್ತಿದ್ದ  ಯಕ್ಷಗಾನ ಕಾರ್ಯಕ್ರಮಗಳು ಮನೋರಂಜನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮವು ಆಗಿದೆ.ಭಕ್ತರಿಗೆ ಕಷ್ಟ ಬಂದಾಗ ಹರಕೆ ಹೊತ್ತು ಸಂಕಷ್ಟ ಪರಿಹಾರ ಆದ ನಂತರ  ಯಕ್ಷಗಾನವನ್ನು ಆಡಿಸುವವರಿದ್ದಾರೆ.ಅವಿಭಜಿತ ದ.ಕ.ಜಿಲ್ಲೆಯಲ್ಲಿ ಯಕ್ಷಗಾನ,ನಾಟಕದ ಹಲವಾರು ತಂಡಗಳಲ್ಲಿ ಸಾವಿರಾರು ಕಲಾವಿದರು ಜಾತಿ-ಮತ ಭೇದವಿಲ್ಲದೆ ಇದನ್ನೇ  ವೃತ್ತಿಯನ್ನಾಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಯಕ್ಷಗಾನ-ನಾಟಕಕ್ಕೆ ಬೇಕಾದ ಶಾಮಿಯಾನ,ಆಸನದ ವ್ಯವಸ್ಥೆ  ಧ್ವನಿವರ್ಧಕ ಸಹಿತ ಅಗತ್ಯದ ಸೌಲಭ್ಯಗಳ ಒದಗಿಸುವಿಕೆ… ಹೀಗೆ ಸಾವಿರಾರುಜನ ಇದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಲಕ್ಷಾಂತರ  ಬಂಡವಾಳ ಹಾಕಿದ ಯಕ್ಷಗಾನ ನಾಟಕದ ಮಾಲಕರು,ವ್ಯವಸ್ಥಾಪಕರುಗಳ ಜೊತೆಗೆ ಅದರಲ್ಲಿ ದುಡಿಯುವ ಕಾರ್ಮಿಕರು ಕೂಡಾ ಧ್ವನಿವರ್ಧಕದ ಈ ನಿಯಮದಿಂದಾಗಿ ತುಂಬಾತೊಂದರೆ ಅನುಭವಿಸುತ್ತಿದ್ದಾರೆ.ಅಲ್ಲದೇ ಈ ಕಾರ್ಯಕ್ರಮಗಳಲ್ಲಿ ಸಣ್ಣಪುಟ್ಟ ಸಂಚಾರಿ ಅಂಗಡಿಗಳನ್ನು ಇಟ್ಟುಕೊಂಡು ತಮ್ಮ ದಿನದ ಬದುಕಿನ ಅನ್ನ ಸಂಪಾದನೆಯ ದಾರಿ ಹುಡುಕಿ ಬದುಕುತ್ತಿರುವ ಕೆಲವು ವ್ಯಾಪಾರಿ ವರ್ಗಕ್ಕೂ ಇಂತಹ ಕಾರ್ಯಕ್ರಮಗಳಿಲ್ಲದೇ ಹೊಟ್ಟೆಗೆ ತಣ್ಣಿರು ಬಟ್ಟೆಹಾಕಿಕೊಂಡು ಬದುಕಬೇಕಾದ ಪರಿಸ್ಥಿತಿ ಉಂಟಾಗಿದೆ.

ನಮ್ಮ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಸರಕಾರ ಧ್ವನಿವರ್ಧಕ ನಿಷೇಧದಿಂದ ಆಗುತ್ತಿರುವ ಈ ಎಲ್ಲಾ ಸಮಸ್ಯೆಗಳನ್ನು ಗಮನಿಸಿ, ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಆದಷ್ಟು ಬೇಗ ಇದಕ್ಕೊಂದು ಪರಿಹಾರ ಕಲ್ಪಿಸಿಕೊಡಬೇಕಾಗಿ ಕಳಕಳಿಯ ವಿನಂತಿ

ಕಲೆ ಸಂಸ್ಕೃತಿ ಉಳಿಯಬೇಕು ಬೆಳೆಯಬೇಕು ಬೆಳೆಸಬೇಕು ಎನ್ನುವ ಆಶಯದೊಂದಿಗೆ ರಾಘವೇಂದ್ರ ಪೈ ಬನ್ನಂಜೆ ಉಡುಪಿ

Leave a Reply

Your email address will not be published. Required fields are marked *

error: Content is protected !!