ಏತಕೆ ಮಳೆ ಹೊದವೋ ಶಿವ ಶಿವ……..

ಇದೀಗ ಜೂನ್ ಮುಗಿಯಲಿದೆ, ಮುಂಗಾರುಮಳೆ ವಿಜೃಂಭಿಸಿ ಆಷಾಡಿ ವಡ್ಡರಿಸಬೇಕಿತ್ತು. ಆದರೆ ಈಗ ಸುಡು ಬಿಸಿಲು. ಎಲ್ಲಿಗೆ ಹೋಯಿತು ಮಳೆ, ಇನ್ನೂ ಮಳೆಯ ಸೂಚನೆಯೇ ಇಲ್ಲದಂತೆ ಸೆಖೆ. ಇದೇನಾಗುತ್ತಿದೆ. ಎಲ್ಲೆಲ್ಲೂ ನೀರಿಗೆ ಹಾಹಾಕಾರ. ಕೆಲವೇ ದಿನ ಬಂದ ಮಳೆ ನೀರು ಉಜೆಯನ್ನು ಸೃಷ್ಟಿಸಿಲ್ಲ, ಬಾವಿ, ಕೆರೆ ತಳ ಕಂಡುದುದು ಹಾಗೇ ಬತ್ತಿಕೊಂಡಿದೆ. ಇದೇನಾಗುತ್ತಿದೆ ಪ್ರಕೃತಿಯಲ್ಲಿ ? ಅದೇಕೆ ಇಷ್ಟು ಮುನಿಸಿಕೊಂಡಿರುವಳು ಭುವಿ ನಮ್ಮಮೇಲೆ?

ಭಾರತಕ್ಕೆ ಮುಂಗಾರೆಂಬ ವರ:

ಮಾರ್ಚ್ 21 ರಿಂದ ಸೂರ್ಯ ಭೂಮಧ್ಯ ರೇಖೆ ಯಿಂದ ಉತ್ತರ ಉತ್ತರಕ್ಕೆ ಸರಿಯುತ್ತಿದ್ದಂತೆ ಇಡೀ ಭಾರತದಲ್ಲಿ ಬಿಸಿ ಎರುತ್ತಾ ಮೇ ಅಂತ್ಯದ ಹೊತ್ತಿಗೆ ಮದ್ಯ ಹಾಗೂ ಉತ್ತರ ಭಾರತ ಸುಡುವ ಕುಲುಮೆಯಂತಾಗುತ್ತದೆ. ಆಗ ಭಾರತದ ವಾಯುವ್ಯದಲ್ಲಿರುವ ತಂಪಾದ ಅರಬೀ ಸಮುದ್ರದಿಂದ ತಂಪಾದ ಮಾರುತ ಬೀಸಲು ಪ್ರಾರಂಭ. ಇದೇ ಮುಂಗಾರು.ಒಮ್ಮೆ ಈ ಪ್ರಕ್ರಿಯೆ ಪ್ರಾರಂಭವಾಯಿತೋ , ಸುಡುವ ಸೂರ್ಯ ಜೂನ್ 21ರವರೆಗೂ ಉತ್ತರ ಉತ್ತರಕ್ಕೇ ಸರಿಯುವಾಗ ಮುಂಗಾರು ಜೋರಾಗಿ ವಿಜೃಂಭಿಸುವುದು. ಜೂನ್ 21 ದಕ್ಷಿಣಾಯನ ದಿಂದ ಸೆಪ್ಟಂಬರ್ 21 ರವರೆಗೂ ಸೂರ್ಯನ ಪ್ರಭಾವದಿಂದ ಸೋನೆ ಮಳೆ ಇಡೀ ಭಾರತಕ್ಕೆ.ಆದರೀಗ ಇದೆಲ್ಲಾ ಹಳೆಯ ಕಥೆಯಾಗುತ್ತಿದೆ.

ಅರಬ್ಬಿ ಸಮುದ್ರ ಬಿಸಿ:

ಇತ್ತೀಚಿನ ಕೆಲ ವರ್ಷಗಳಲ್ಲಿ ತಂಪಾದ ಅರಬೀ ಸಮುದ್ರ ಬಿಸಿಯಾಗಿದೆ. ಈ ಸಮುದ್ರದ ಉಷ್ಣತೆ ಈಗ 31 ಡಿಗ್ರಿ. ಇತ್ತೀಚಿನ ಕೆಲ ವರ್ಷಗಳ ಮೊದಲು 28 ಡಿಗ್ರಿಕಿಂತ ಕಡಿಮೆ ಇದ್ದು , ಬಂಗಾಳ ಕೊಲ್ಲಿ ಸಮುದ್ರಕ್ಕಿಂತ ಉಷ್ಣತೆ ಕಡಿಮೆಯಿದ್ದು ತಂಪಾಗಿತ್ತು. ಹೀಗಿದ್ದಾಗ ಅರಬೀ ಸಮುದ್ರದಲ್ಲಿ ಚಂಡಮಾರುತಗಳು ಬಲು ಅಪರೂಪ . ಆದರೀಗ ಅರಬೀಸಮುದ್ರ ಚಂಡಮಾರುತಕ್ಕೆ ಬೇಕಾಗುವ ಉಷ್ಣತೆ ಮೀರಿ ಏರಿರುವುದರಿಂದ ಮೇ , ಜೂನ್ ಗಳಲ್ಲೇ ಚಂಡಮಾರತ ಸೃಷ್ಟಿಯಾಗುತ್ತಿದೆ.
ನಮ್ಮೀ ಪರಶುರಾಮ ಸೃಷ್ಟಿಯ ಅವಿಭಜಿತ ದಕ್ಷಿಣ ಕನ್ನಡಕ್ಕೆ ವರ ಭವ್ಯವಾದ ವೆಸ್ಟರ್ನ್ ಘಾಟ್ , ಪಶ್ಚಿಮ ಘಟ್ಟ. ಇದೊಂದು ತಡೆ ಗೋಡೆ. ಹಾಗಾಗಿ , ಕೇರಳಕ್ಕೆ ಸಮನಾಗಿ ನೇರ ಪಶ್ಚಿಮ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗಿ ನೇರ ನಮ್ಮಕಡೆಗೆ ನುಗ್ಗಲು ಮುಂದಾದಾಗ ಪಶ್ಚಿಮ ಘಟ್ಟ ತಡೆದು ಉತ್ತರಕ್ಕೆ ತಿರುಗಿಸಿ ಗುಜರಾತ್ ಕಡೆಗೆ ಓಡಿಸುತ್ತದೆ. ಮೊನ್ನಿನ ಬಿಪರ್ಜಾಯಿ ಚಂಡಮಾರುತ ಹಾಗೇ ಆಯ್ತು.ಹಾಗಾಗಿ ನಾವು ಮುಂಬಯಿ, ಗುಜರಾತ್ ಗಳಿಗಿಂತ ಈ ತಡೆ ಗೋಡೆಯಿಂದ ಆರಾಮ.

ಮೊನ್ನೆಯ ದುರಂತ ಮುಂಗಾರು ಕಿಡ್ನಾಪ್:
ಆದರೆ ಮೊನ್ನೆ ಹಾಗೆ ಉತ್ತರಕ್ಕೆ ತಿರುಗಿದ ಬಿಪರ್ಜಾಯ್ ಚಂಡಮಾರುತ ಅರಬೀ ಸಮುದ್ರದಲ್ಲಿ ಮಾಮೂಲಿನಂತೆ ಆಗತಾನೇ ಪ್ರಾರಂಭವಾದ ಮುಂಗಾರಿನ ಮೋಡಗಳನ್ನೂ ಹಾರಿಸಿಕೊಂಡೇ ಹೊಯ್ತು. ಗುಜರಾತ್ ಪಾಕಿಸ್ತಾನದ ಕರಾಚಿ ಸಂಪೂರ್ಣ ಜಲಾವೃತ.

ಇನ್ನು ಪುನಃ ನಮ್ಮ ಅರಬೀ ಸಮುದ್ರದಲ್ಲಿ ಮುಂಗಾರು ಪ್ರಾರಂಭವಾಗಲು ಮದ್ಯ ಹಾಗೂ ಉತ್ತರ ಭಾರತ ಪುನಃ ಬಿಸಿಏರಿ ಮುಂಗಾರನ್ನು ಕರೆಯಬೇಕು. ನಾವು ಕಾಯಬೇಕು , ಕಾದರೂ ಮಾಮೂಲಿನ ಅಷ್ಟೇ ಮಳೆ ನಿರೀಕ್ಷಿಸುವಹಾಗಿಲ್ಲ. ಕಾರಣ ಸೂರ್ಯ ದಕ್ಷಿಣಕ್ಕೆ ಹೊರಳಿಯಿತು.

ಇದಕ್ಕೆಲ್ಲ ಮುಖ್ಯ ಕಾರಣ:

ಅರಬೀಸಮುದ್ರ ಬಿಸಿಯಾಗಲು ಕಾರಣ ನಮ್ಮ ಪರಿಸರದಲ್ಲಿ ಅರಣ್ಯನಾಶ, ಹಾಗೂ ಪಶ್ಚಿಮ ಘಟ್ಟ್ದ ಭವ್ಯ ಕಾಡು ನಾಶವೇ. ಇನ್ನಾದರೂ ಇವೆಲ್ಲವನ್ನೂ ಮೊದಲೇ ಊಹಿಸಿ ನಾವೆಲ್ಲ ಎಚ್ಚೆತ್ತುಕೊಳ್ಳಬೇಕು, ಜನರ ನೀರಿನ ಬವಣೆಗೆ ಶಾಶ್ವತ ಪರಿಹಾರ ಹುಡುಕಬೇಕು. ಇಲ್ಲವಾದರೆ ಬೊಬ್ಬೆ ಮಾತ್ರವಾದೀತು.

ಡಾ. ಎ . ಪಿ. ಭಟ್ , ಉಡುಪಿ.

Leave a Reply

Your email address will not be published. Required fields are marked *

error: Content is protected !!