SMOKING KILLS… Whom…?

ಈ ದೇಶದ ಅತೀ ದೊಡ್ಡ ಸಂಪನ್ಮೂಲ ಯಾವುದು? ಮತ್ತು ಈ ದೇಶದ ಅತೀ ದೊಡ್ಡ ಸೋಲು ಅಥವಾ ನಷ್ಟ ಯಾವುದು? ಎಂಬ ಪ್ರಶ್ನೆಯನ್ನು ದೇಶದ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಮುಂದಿಟ್ಟಾಗ ಅವರು ನೀಡಿದಂತಹಾ ಉತ್ತರ ” The most valuable resource of the country is youth or youngstar But the biggest failure is not utilizing there talents”ಖಂಡಿತವಾಗಿಯೂ ಈ ದೇಶದ ಅತ್ಯಂತ ದೊಡ್ಡ ಸಂಪನ್ಮೂಲ, ಆಸ್ತಿ ಎಂದರೆ ಅದು ಈ ದೇಶದ ಯುವಜನಾಂಗವಾಗಿದೆ. ಆ ಸಂಪನ್ಮೂಲವನ್ನು ಯೋಗ್ಯರೀತಿಯಲ್ಲಿ ವ್ಯಯಿಸಿದರೆ ದೇಶವು ಅಭಿವೃದ್ಧಿಯ ಉತ್ತುಂಗಕ್ಕೇರುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂದಿನ ನಮ್ಮ ಯುವಜನಾಂಗವು ತಮ್ಮ ಜೀವನದ ಆರಂಭಿಕ ಘಟ್ಟದಲ್ಲಿಯೇ ಎಡವುತ್ತಿದ್ದಾರೆ. ಕಂಡದ್ದೆಲ್ಲವನ್ನೂ ಆಕರ್ಷಿಸುವ ಹದಿಹರೆಯದಲ್ಲಿ ಸಿಗರೇಟು, ಗುಟ್ಕಾ, ಪಾನ್ ಪರಾಗ್ ನಂತಹ ಮಾದಕ ವ್ಯಸನಕ್ಕೆ ಬಲಿಯಾಗಿ ತಮ್ಮಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಮಾದಕದ್ರವ್ಯಗಳ ಅಟ್ಟಹಾಸವು ಮಿತಿಮೀರಿ ಹೋಗಿದೆ. ಮಾತ್ರವಲ್ಲ ಪ್ರಸ್ತುತ ದಿನಗಳಲ್ಲಿ ಮದ್ಯಪಾನ, ಧೂಮಪಾನದಂತಹ ಅಮಲು ಪದಾರ್ಥಗಳ ಸೇವನೆ ಜಗತ್ತಿನಾದ್ಯಂತ ಒಂದು ಫ್ಯಾಶನ್ ಆಗಿ ಬೆಳೆದುಬಿಟ್ಟಿದೆ. ಸಮಾಜದಲ್ಲಿ ತಾನೊಬ್ಬ ಗಣ್ಯವ್ಯಕಿಯೆಂದೋ, ಶ್ರೀಮಂತನೆಂದೋ ಗುರುತಿಸಬೇಕಾದರೆ ಮದ್ಯಪಾನದಂತಹ ಮಾದಕ ದ್ರವ್ಯಗಳ ಸೇವನೆ ಜರೂರು ಎಂಬಷ್ಟರ ಮಟ್ಟಿಗೆ ಈ ಅಮಲು ಪದಾರ್ಥಗಳು ಇಂದು ಸಮಾಜದಲ್ಲಿ ಬೆಳೆದುನಿಂತಿದೆ. ಮಾತ್ರವಲ್ಲ ಈ ಎಲ್ಲಾ ವ್ಯಸನದ ಜೊತೆಗೆ ‘ಡ್ರಗ್ಸ್’ ಎಂಬಂತಹ ಮಹಾ ಪಿಡುಗು ಕೂಡ ಇಂದು ಸಮಾಜದಲ್ಲಿ ಆವರಿಸಿಕೊಂಡಿದೆ. ಡ್ರಗ್ಸ್ ಎಂಬ
ಮಾಯಾಜಾಲದಲ್ಲಿ ಸಿಲುಕಿ ನರಳುತ್ತಿರುವವರ ಸಂಖ್ಯೆ ಇಂದು ಗಣನೀಯವಾಗಿ ಏರಿಕೆಯಾಗಿದೆ. ಡ್ರಗ್ಸ್, ಗಾಂಜಾದಂತಹ ಮಾದಕದ್ರವ್ಯಗಳು ಇಂದು ದೇಶದ ಒಂದು ಅತೀ ದೊಡ್ಡ ಸಾಮಾಜಿಕ ಪಿಡುಗಾಗಿ ಕಾಡುತ್ತಿದೆ. ದೇಶದ ಅಭಿವೃದ್ಧಿಗೆ ತೊಡಕಾಗಿರುವ ಈ ಒಂದು ವಿಷವರ್ತುಲವು ಇಂದು ಸಾವಿರಾರು ಯುವಜನಾಂಗದ, ವಿದ್ಯಾರ್ಥಿಗಳ ಭವಿಷ್ಯತ್ತನ್ನು ಕಸಿದುಕೊಳ್ಳುತ್ತಿದೆ. ಕ್ಷಣಿಕ ಸುಖಕ್ಕಾಗಿ ಇದರ ಹಿಂದೆ ಬಿದ್ದು ನೂರಾರು ಜನರು ತಮ್ಮ ಜೀವನವನ್ನು ಬರಡಾಗಿಸಿ ಕೊಳ್ಳುತ್ತಿದ್ದಾರೆ.

ಈ ಒಂದು ಡ್ರಗ್ಸ್ ಅಥವಾ ಮಾದಕ ದ್ರವ್ಯಗಳ ಜಾಲ ಇಂದು ಎಷ್ಟರಮಟ್ಟಿಗೆ ಹರಡಿಕೊಂಡಿದೆ ಎಂದರೆ ಇಂದು ಶಾಲಾ-ಕಾಲೇಜುಗಳಲ್ಲಿ, ಕ್ಯಾಂಪಸ್ ಗಳಲ್ಲಿ ಈ ಅಮಲುಪದಾರ್ಥಗಳು ಅತ್ಯಂತ ಸುಲಭವಾಗಿ ವಿದ್ಯಾರ್ಥಿಗಳ ಕೈ ತಲುಪುತ್ತಿದೆ. ಈ ವ್ಯಸನಕ್ಕೆ ಬಲಿಯಾಗುತ್ತಿರುವವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ. ಕಾಲೇಜು ಕ್ಯಾಂಪಸ್ಗಳು ಇಂದು ಮಾದಕ ಪದಾರ್ಥ, ಪಾನೀಯಗಳ ಬಹುಮುಖ್ಯ ಮಾರ್ಕೆಟ್ ಆಗಿ ಬೆಳೆಯುತ್ತಿದೆ. ಇನ್ನು ಈ ವ್ಯಸನವು ವಿದ್ಯಾರ್ಥಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳು ಸೇರಿದಂತೆ ದೇಶದ ಬಹುಪಾಲು ಜನರ ಮೇಲೆ ತನ್ನ ಪ್ರಭಾವವನ್ನು ಬೀರಿ ದೇಶದ ಅಭಿವೃದ್ಧಿಗೆ ಅತಿದೊಡ್ಡ ತೊಡಕಾಗಿ ಕಾಡುತ್ತಿದೆ. ಇಲ್ಲಿ ಕೆಲವರು ತಮ್ಮ ಒತ್ತಡವನ್ನು ಕಡಿಮೆಗೊಳಿಸಲು, ಮನಸ್ಸಿನಲ್ಲಿರುವ ದುಗುಡವನ್ನು ಶಮನಗೊಳಿಸಲು ಬೇಕಾಗಿ ಅಮಲು ಪದಾರ್ಥಗಳನ್ನು ಬಳಸಿಕೊಂಡರೆ, ಇನ್ನು ಕೆಲವರು ಮೋಜು-ಮಸ್ತಿಗಾಗಿ ಮತ್ತು ಕೆಲವರು ಫ್ಯಾಷನ್ಗಾಗಿ ಇದರ ಹಿಂದೆ ಬಿದ್ದು ತಮ್ಮ ಜೀವನವನ್ನು ನಾಶಪಡಿಸಿಕೊಳ್ಳುತ್ತಿದ್ದಾರೆ. ಸಾವಿರಾರು ಯುವಜನರು ಇಂದು ತಮಗರಿವಿಲ್ಲದೆಯೇ ಈ ಮಾಯಾಜಾಲದಲ್ಲಿ ಬಿದ್ದು ನರಳಾಡುತ್ತಿದ್ದಾರೆ.

ಇನ್ನು ಈ ಮಾದಕ ವ್ಯಸನಿಗಳು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುವುದಲ್ಲದೆ.ಸಮಾಜಕ್ಕೂ ಬಹುದೊಡ್ಡ ಸವಾಲಾಗಿ ಕಾಡುತ್ತಿದ್ದಾರೆ.ಇಂದು ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ,ಕೊಲೆ, ಸುಲಿಗೆಗಳಲ್ಲಿ ಮಾದಕ ದ್ರವ್ಯಗಳ ಪಾಲೂ ಬಹಳಷ್ಟಿದೆ ಎಂಬುದು ನಿಸ್ಸಂಶಯ. ಮಾದಕ ಪದಾರ್ಥಗಳ ವ್ಯಸನಕ್ಕೆ ಬಿದ್ದು ಪುಟ್ಟ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಸುದ್ದಿಯನ್ನು ಓದಬೇಕಾದ ಗತಿಕೇಡು ನಮ್ಮ ಸಮಾಜಕ್ಕೆ ಬಂದು ಮುಟ್ಟಿದೆ. ಇನ್ನು ಈ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸಬೇಕಾದ ಇದರ ದುಷ್ಪರಿಣಾಮಗಳ ಬಗ್ಗೆ ಯುವ ಜನತೆಗೆ ಅರಿವು ಮೂಡಿಸ ಬೇಕಾದ ಸಮಾಜದ ಗಣ್ಯ ವ್ಯಕ್ತಿಗಳೂ, ವೈದ್ಯರು, ಶಿಕ್ಷಕರು ಸೇರಿದಂತೆ ಬಹಳಷ್ಟು ಜನರ ಮೇಲೆ ಈ ವ್ಯಸನವು ವೈರಸ್ನಂತೆ ಹರಡಿ ನಿಂತಿದೆ. ಈ ಅಮಲು ಪದಾರ್ಥಗಳ ಸೇವನೆಯಿಂದಲೇ ಇಂದು ಮಾನವನು ಮಾನವೀಯತೆ ಮರೆತು ರಾಕ್ಷಸನಾಗುತ್ತಿದ್ದಾನೆ.

ಅಮಲು ಪದಾರ್ಥಗಳ ಮೋಜಿನಲ್ಲಿ ಮೈಮರೆತು ಪ್ರಾಣಿಗಳಿಗಿಂತಲೂ ಕೀಳಾಗಿ ವರ್ತಿಸುತ್ತಿದ್ದಾನೆ. ಇಂದು ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ,ಕೊಲೆ, ಸುಳಿಗೆ ಗಳೆಲ್ಲವೂ ಈ ಮಾದಕದ್ರವ್ಯಗಳ ಪ್ರಭಾವದಿಂದಲೇ ನಡೆಯುತ್ತಿದೆ ಎಂಬುದು ಕಟು ಸತ್ಯ.ಮಾತ್ರವಲ್ಲ ಇಂದು ಮಾನವನು ಮಾದಕ ದ್ರವ್ಯಗಳ ದಾಸನಾಗಿ ಜೀವನದ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ.ಅದೆಷ್ಟೋ ಕುಟುಂಬಗಳು ಈ ಕಾರಣದಿಂದಾಗಿ ಬೀದಿಗೆ ಬಿದ್ದಿದೆ. ಅದೆಷ್ಟೋ ವಿವಾಹ ವಿಚ್ಛೇದನಗಳ ಹಿಂದೆಯೂ ಕೂಡ ಈ ಮಾದಕ ದ್ರವ್ಯಗಳ ಪಾಲು ಬಹಳಷ್ಟಿದೆ.

ಮಾದಕ ವ್ಯಸನದ ಚಕ್ರವ್ಯೂಹದೊಳಗೆ ಸಿಲುಕಿ ಅದರಿಂದ ಹೊರಬರಲಾಗದೆ ಭವಿಷ್ಯತ್ತನ್ನು ಕಳಕೊಂಡು ಆತ್ಮಹತ್ಯೆ ಮಾಡಿಕೊಂಡವರ ನೂರಾರು ನಿದರ್ಶನಗಳು ನಮ್ಮ ಮುಂದಿವೆ. ವಿಶ್ವಸಂಸ್ಥೆಯ ಅಧಿಕೃತ ವರದಿಯ ಪ್ರಕಾರ ಪ್ರತಿವರ್ಷ ಸುಮಾರು ಎರಡು ಲಕ್ಷದಷ್ಟು ಮಂದಿ ಮಾದಕ ವ್ಯಸನದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಾದಕದ್ರವ್ಯಗಳು ಆರಂಭದಲ್ಲಿ ಪರಮ ಸುಖವನ್ನು ನೀಡುತ್ತದೆ. ಅದುವೇ ಒಂದು ರೋಚಕ ಜಗತ್ತು ಎಂದೆನಿಸುತ್ತದೆ. ಆದರೆ ಕಾಲಕ್ರಮೇಣ ಅದೊಂದು ನರಕಯಾತನೆ ಎಂದು ಮನದಟ್ಟಾಗುವ ಅಷ್ಟರಲ್ಲಿ ಸಮಯ ಕೈ ಮೀರಿಹೋಗಿರುತ್ತದೆ. ಜೀವನದ ಅತೀ ಮುಖ್ಯ ಘಟಕವಾದ ವಿದ್ಯಾರ್ಥಿ ಜೀವನವು ಇಂದು ಮಾದಕ ವ್ಯಸನಗಳ ಕಾರಣದಿಂದ ನಾಶಹೊಂದುತ್ತಿವೆ.ಈ ಮೂಲಕ ಮಾದಕ ದ್ರವ್ಯಗಳು ಇಂದು ಪ್ರತಿಯೊಬ್ಬ ವ್ಯಸನಿಯ ಜೀವನವನ್ನೂ, ಕುಟುಂಬದ ನೆಮ್ಮದಿಯನ್ನೂ, ಸಮಾಜದ ಶಾಂತಿಯನ್ನೂ, ಸುಂದರ ಸಂಸಾರಗಳನ್ನೂ, ವಿದ್ಯಾರ್ಥಿಗಳ ಭವಿಷ್ಯತ್ತನ್ನೂ ಕೊಳ್ಳುತ್ತಿದೆ. ಆದ್ದರಿಂದ ಇಂತಹ ಮಾದಕದ್ರವ್ಯದ ಜಾಲಗಳ ಕಬಂಧಬಾಹುಗಳಿಂದ ಯುವಜನತೆಯನ್ನು, ಸಮಾಜವನ್ನು ಮುಕ್ತಿಗೊಳಿಸಿ ಆರೋಗ್ಯಕರ ಸ್ವಸ್ಥ ನಾಗರಿಕ ಸಮಾಜವನ್ನು ನಿರ್ಮಿಸಬೇಕಿದೆ. ದೇಶದ ಅಭಿವೃದ್ಧಿಗೆ ತೊಡಕಾಗಿರುವ,ಸಮಾಜದ ಶಾಂತಿಯನ್ನು ಕದಡುತ್ತಿರುವ, ಕುಟುಂಬಗಳ ನೆಮ್ಮದಿಯ ಜೀವನಕ್ಕೆ ಅಡಚನೆಯಾಗಿರುವ ಇಂತಹ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಸ್ವಸ್ಥ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ದೇಶದ ಪ್ರಬುದ್ಧ ನಾಗರಿಕರು ನಾಂದಿ ಹಾಡಬೇಕಿದೆ.
✍🏻
ಮಹಮ್ಮದ್ ಮುಸ್ತಾಫ ಇಹ್ಸಾನಿ ಮದ್ದಡ್ಕ
(ಅಲ್ ಇಹ್ಸಾನ್ ದಅವಾ ಕಾಲೇಜು ಮುಳೂರು ಉಡುಪಿ)

Leave a Reply

Your email address will not be published. Required fields are marked *

error: Content is protected !!