ನಿಮ್ಮ ಬದುಕಿನ ಮಧುರವಾದ ಕ್ಷಣಗಳನ್ನು ಸ್ಮರಣೀಯ ಮಾಡಿದ ಆ ಛಾಯಾಚಿತ್ರಕಾರರಿಗೆ ಇಂದು ಶುಭಾಶಯ ಹೇಳಿ ಆಯ್ತಾ…

ಇಂದು ಫೋಟೋಗ್ರಾಫಿ ದಿನ.

ಇಡೀ ಜೀವನದಲ್ಲಿ ಇಂಜೆಕ್ಷನ್ ಚುಚ್ಚಿಸಿಕೊಳ್ಳದವರು ಇಲ್ಲದೆ ಇರಬಹುದು. ಆದರೆ ಒಮ್ಮೆಯಾದರೂ ಫೋಟೋ ತೆಗೆಸಿಕೊಳ್ಳದವರು ಯಾರೂ ಇಲ್ಲ ಎಂದು ನನ್ನ ಅನಿಸಿಕೆ. ನಿಮ್ಮ ಬದುಕಿನ ಅತೀ ಮಧುರವಾದ, ಕೆಲವೊಮ್ಮೆ ಅತ್ಯಂತ ದುಃಖದ ಕ್ಷಣಗಳನ್ನು ದಾಖಲು ಮಾಡಿ ನಿಮ್ಮ ಬದುಕನ್ನು ಸುಂದರ ಮಾಡಿದ, ನಿಮ್ಮ ಭಾವಕೋಶವನ್ನು ಶ್ರೀಮಂತ ಮಾಡಿದ ಆ ಎಲ್ಲ ಫೋಟೋಗ್ರಾಫರಗಳಿಗೆ ಒಂದು ಥ್ಯಾಂಕ್ಸ್ ಹೇಳಲು ಇಂದು ಒಂದು ಅವಕಾಶ ನಿಮಗೆ ದೊರೆತಿದೆ.

ಹೌದು, ಇಂದು ವಿಶ್ವ ಫೋಟೋಗ್ರಾಫಿ ಡೇ…!
2010ರಿಂದ ಈ ದಿನವನ್ನು ಜಗತ್ತಿನಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಅದಕ್ಕೆ ಪ್ರೇರಣೆ ನೀಡಿದವರು ಇಬ್ಬರು ವಿದೇಶಿ ಛಾಯಾಚಿತ್ರ ಲೆಜೆಂಡ್ಸ್. ಒಬ್ಬರು ಲೂಯಿಸ್ ಡಾಗ್ವೆರೆ (Luis Daguerre) ಮತ್ತು ಜೋಸೆಫ್ ನೈಸ್ ಫೋರೆ (Joseph Nice phore).

ಅವರು ಆಗಿನ ಕಾಲದ ರೀಲ್ ಕ್ಯಾಮೆರಾದಲ್ಲಿ ಫೋಟೋ ತೆಗೆದು ನಂತರ ಅದನ್ನು ಡಾರ್ಕ್ ರೂಮಲ್ಲಿ ಡೆವೆಲಪ್ ಮಾಡಿ ಫೋಟೋ ತೆಗೆದವರು (1837).
ಈಗಿನ ಡಿಜಿಟಲ್ ಕ್ಯಾಮೆರಾ ಯುಗದಲ್ಲಿರುವ ನಮಗೆ ಆ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವುದು ತುಸು ಕಷ್ಟವೇ ಆಗಬಹುದು. ಅದರಲ್ಲೂ ಆರಂಭದ ಎಷ್ಟೋ ವರ್ಷಗಳಲ್ಲಿ ಫೋಟೋಗಳು ಕಪ್ಪು ಬಿಳುಪು ಮಾತ್ರ ಆಗಿದ್ದವು. ವರ್ಣಚಿತ್ರಗಳ ಯುಗ ಆರಂಭವಾದದ್ದು ಇತ್ತೀಚೆಗೆ. ಡಿಜಿಟಲ್ ತಂತ್ರಜ್ಞಾನ ಬಂದ ನಂತರ ಫೋಟೋಗ್ರಾಫಿ ಸುಲಭ ಆಯಿತು. ಫೋಟೋಗ್ರಾಫರಗಳ ಸಂಖ್ಯೆ ಹೆಚ್ಚಾಯಿತು. ಡಿಜಿಟಲ್ ತಂತ್ರಜ್ಞಾನ ಬಂದ ನಂತರ ಫೋಟೋಗ್ರಾಫಿಯು ಸ್ವಲ್ಪ ಸುಲಭ ಆಗಿದೆ ಮತ್ತು ಹೆಚ್ಚು ಆಧುನಿಕ ಆಗಿದೆ.

ಹಿಂದಿನ ಕಾಲದಲ್ಲಿ ಡಾರ್ಕ್ ರೂಮಲ್ಲಿ ಇರುತ್ತಿದ್ದ ಸವಾಲುಗಳು ನೂರಾರು. ಆ ಫೋಟೋಗಳಿಗೆ ಆಯಸ್ಸು ಕಡಿಮೆ. ಎಷ್ಟೋ ಬಾರಿ ಹಲವು ಒಳ್ಳೆಯ ಫೋಟೋಗಳು ಹುಟ್ಟುವ ಮೊದಲೇ ಕಣ್ಣು ಮುಚ್ಚಿದ ಉದಾಹರಣೆಗಳು ಇವೆ.

ನಾವೆಲ್ಲರೂ ಅದೇ ಡಾರ್ಕ್ ರೂಮ್ ಕಾಲದಿಂದ ಬಂದವರು. ಒಮ್ಮೆ ಏನಾಗಿತ್ತು ಎಂದರೆ ಒಂದು ಮದುವೆಯ ಪೂರ್ತಿ ಕ್ಷಣಗಳನ್ನು ಕ್ಲಿಕ್ ಮಾಡಿದ ಒಬ್ಬ ಫೋಟೋಗ್ರಾಫರ್ ಯಾವುದೋ ತಾಂತ್ರಿಕ ಕಾರಣಕ್ಕೆ ಕ್ಯಾಮೆರಾ ರೋಲ್ ಇಡೀ ತಪ್ಪು ಎಕ್ಸಪೋಸ್ ಆಗಿ ಒಂದೇ ಒಂದು ಫೋಟೋ ಕೂಡ ಮದುಮಕ್ಕಳಿಗೆ ಕೊಡಲಿಕ್ಕೆ ಆಗದೇ ಹೋದಾಗ ಆ ಫೋಟೋಗ್ರಾಫರ್ ಬವಣೆ ಹೇಗಿರಬೇಡ? ಅಂತಹ ಸವಾಲುಗಳನ್ನು ಕೂಡ ಗೆದ್ದ ಹಳೆಯ ಕಾಲದ ನನ್ನ ಫೋಟೋಗ್ರಾಫರ್ ಗೆಳೆಯರಿಗೆ ನನ್ನ ಅಭಿನಂದನೆ ಹೇಳಬೇಕು. ಇಂದಿಗೂ ಹಳೆಯ ಕ್ಯಾಮೆರಾ ಹಿಡಿದುಕೊಂಡು ಅದ್ಭುತ ಫೋಟೋ ಕ್ಲಿಕ್ಕಿಸುವ ಅತ್ಯುತ್ತಮ ಫೋಟೋಗ್ರಾಫರಗಳು ನಮ್ಮ ನಡುವೆ ಇದ್ದಾರೆ. ಅವರೆಲ್ಲರೂ ಮಹಾ ಕಲಾವಿದರು.

ಸವಿ ನೆನಪುಗಳು ಬೇಕು ಸವಿಯಲೀ ಬದುಕು…

ಜೀವನದ ಪ್ರತೀಯೊಂದು ಹಂತದ ಫೋಟೋಗಳನ್ನು ತಮ್ಮ ಗೂಗಲ್ ಡ್ರೈವ್ ಅಥವಾ ಮೊಬೈಲ್ ಫೈಲಲ್ಲಿ ಸಂಗ್ರಹ ಮಾಡಿ ಇಡುವ ನನ್ನ ಹಲವು ಸ್ನೇಹಿತರು ಇದ್ದಾರೆ. ‘ ಸವಿ ನೆನಪುಗಳು ಬೇಕು ಸವಿಯಲೀ ಬದುಕು’ ಎಂಬ ಹಳೆಯ ಹಾಡಿನಂತೆ ಅವರು ಬಿಡುವು ಮಾಡಿಕೊಂಡು ಮತ್ತೆ ಮತ್ತೆ ಆ ಎಲ್ಲ ಫೋಟೋಗಳನ್ನು ರಿವೈಂಡ್ ಮಾಡಿಕೊಂಡು ನೋಡಿ ತಮ್ಮ ಖುಷಿಯನ್ನು ಹೆಚ್ಚು ಮಾಡುವ ರೀತಿ ಅದು ಅದ್ಭುತ. ನಮ್ಮ ಬದುಕಿನ ಸ್ಮರಣೀಯ ಕ್ಷಣಗಳನ್ನು ಬೇರೆ ಬೇರೆ ಆಲ್ಬಂಗಳಲ್ಲಿ ಸಂಗ್ರಹ ಮಾಡಿ ಆ ಆಲ್ಬಂನ ಪುಟಗಳನ್ನು ಆಗಾಗ ತಿರುವಿ ಖುಷಿ ಪಡುವ ಮಂದಿಯೂ ತುಂಬಾ ಹೆಚ್ಚಾಗಿದ್ದಾರೆ. ತಮ್ಮ ಬಾಲ್ಯದ ಫೋಟೋಗಳನ್ನು ರಿವೈಂಡ್ ಮಾಡಿಕೊಂಡು ನೋಡುವ, ಶೇರ್ ಮಾಡುವ ಖುಷಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತಮ್ಮ ಬದುಕಿನಲ್ಲಿ ಗತಿಸಿಹೋದ ಹಲವರನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ಹೃದಯದ ಭಾರವನ್ನು ಇಳಿಸಲು ಆ ಫೋಟೋಗಳೇ ಸಹಾಯ ಮಾಡುತ್ತವೆ. ನಮ್ಮ ಗೆಳೆತನ, ಸಂಬಂಧಗಳು, ಪ್ರವಾಸಗಳು, ಸಭೆ, ಸಮಾರಂಭಗಳು, ಸುಂದರವಾದ ಪ್ರವಾಸೀ ತಾಣಗಳು, ಪ್ರಶಸ್ತಿ ಪಡೆದ ಕ್ಷಣಗಳು, ಭಾಗವಹಿಸಿದ ಕಾರ್ಯಕ್ರಮಗಳು, ವಾರ್ಷಿಕೋತ್ಸವದ ಕ್ಷಣಗಳು, ಪಾರ್ಟಿಗಳು, ಪ್ರಕೃತಿಯ ಮಡಿಲಲ್ಲಿ ಬೆಚ್ಚಗೆ ಕಳೆದ ನೆನಪುಗಳು, ನಿಮ್ಮ ಪ್ರೀತಿಪಾತ್ರರ ಜೊತೆಗೆ ನೀವು ಕಳೆದ ಅತ್ಯಂತ ಮಧುರ ಕ್ಷಣಗಳು, ಸಂದರ್ಭಗಳು, ಪತ್ರಿಕಾ ವರದಿಯ ಫೋಟೋಗಳು….ಇವನ್ನೆಲ್ಲ ದಾಖಲು ಮಾಡಿಟ್ಟು ನಿಮ್ಮ ಭಾವಕೋಶವನ್ನು ಶ್ರೀಮಂತ ಮಾಡಿದ ಆ ಫೋಟೋಗ್ರಾಫರ್ ಎಂಬ ಕಲಾವಿದನನ್ನು ಮರೆಯುವುದು ಹೇಗೆ?

ಫೋಟೋಗ್ರಾಫಿ ಇಂದು ಬಹಳ ದೊಡ್ಡ ಉದ್ಯಮವಾಗಿದೆ

ಇಂದು ಅತ್ಯಾಧುನಿಕ ಕ್ಯಾಮೆರಾಗಳು, ಲೆನ್ಸ್ ಗಳು, ಮಾರ್ಕೆಟಿಗೆ ಬಂದಿವೆ. ಮೊಬೈಲ್ ಮೂಲಕ ಕೂಡ ಅದ್ಭುತವಾದ ಫೋಟೋ ಕ್ಲಿಕ್ ಮಾಡಿ ಎಡಿಟ್ ಮಾಡಿ ಸೌಂದರ್ಯ ಹೆಚ್ಚಿಸುವ ಛಾಯಾಚಿತ್ರ ಕಲಾವಿದರೂ ಇದ್ದಾರೆ. ಯಾವುದೇ ಸಭೆ, ಸಮಾರಂಭಗಳಲ್ಲಿ ಸಾಂಪ್ರದಾಯಿಕ ಫೋಟೋಗಳನ್ನು ತೆಗೆಯದೆ ಕ್ಯಾಂಡಿಡ್ ಫೋಟೋಸ್ ತೆಗೆದು ತನ್ನ ಗ್ರಾಹಕರನ್ನು ಖುಷಿ ಪಡಿಸುವ ಕ್ರಿಯೇಟಿವ್ ಫೋಟೋಗ್ರಾಫರ್ಸ್ ಇದ್ದಾರೆ. ಒಂದು ಮದುವೆಯನ್ನೇ ದೊಡ್ಡ ಮಾರ್ಕೆಟ್ ಮಾಡಿ ಪ್ರಿವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಮಾಡಿ ಗ್ರಾಹಕರನ್ನು ಹೆಚ್ಚು ಖುಷಿ ಪಡಿಸುವ ಆಧುನಿಕ ಫೋಟೋ ಬ್ರಹ್ಮರು ಇಂದು ಎಲ್ಲ ಕಡೆಗಳಲ್ಲಿಯೂ ಗೆಲ್ಲುತ್ತಾರೆ. ಫೋಟೋ ಶೂಟ್ ಮೂಲಕ ತಮ್ಮನ್ನು ಮಾರ್ಕೆಟ್ ಮಾಡಿಕೊಳ್ಳುವ ಸೆಲೆಬ್ರಿಟಿಗಳು, ಸಿನೆಮಾ ತಾರೆಯರು, ಮಾಡೆಲ್ಲುಗಳು ಇಂದು ಹೆಚ್ಚಾಗುತ್ತಿದ್ದಾರೆ. ನೇಚರ್ ಫೋಟೋಗಳು, ವೈಲ್ಡ್ ಲೈಫ್ ಫೋಟೋಗಳು ಇಂದಿಗೂ ಹೆಚ್ಚು ಬೆಲೆ ಬಾಳುತ್ತವೆ. ತಾನು ಚಂದ ಇಲ್ಲ ಎಂದು ಕೀಳರಿಮೆಯಿಂದ ಬಳಲುತ್ತಿರುವ ಹಲವರನ್ನು
‘ಇಗೊಳ್ಳಿ, ನೀವೆಷ್ಟು ಚಂದ ಇದ್ದೀರಿ!’ ಎಂದು ತೋರಿಸಿ ಅವರ ಮುಖದಲ್ಲಿ ನಗು ತುಂಬಿಸುವ ಫೋಟೋಗ್ರಾಫರ್ ಒಬ್ಬ ಅದ್ಭುತ ವಿಕಸನ ಪಟುವೂ ಆಗಿರುತ್ತಾರೆ. ಫೋಟೋಗ್ರಾಫರ್ ಗೆಳೆಯರು ನಮ್ಮ ‘ ಫೇಸ್ ವ್ಯಾಲ್ಯೂ’ ಹೆಚ್ಚು ಮಾಡಿದ್ದನ್ನು ನಾವು, ನೀವು ಒಪ್ಪಿಕೊಳ್ಳಲೇಬೇಕು.

ಫೋಟೋಗ್ರಾಫರ್ ಮುಂದಿವೆ ಹಲವು ಸವಾಲುಗಳು.

‘ಸ್ಮೈಲ್ ಪ್ಲೀಸ್ ‘ ಎಂದು ಜಗತ್ತನ್ನು ಸದಾ ನಗಿಸುವ ನಮ್ಮ ಫೋಟೋಗ್ರಾಫರ್ ಗೆಳೆಯರ ಬದುಕು ಇಂದು ಹಲವು ಸವಾಲುಗಳಿಂದ ಕೂಡಿದೆ. ಈ ಉದ್ಯಮದಲ್ಲಿ ಇಂದು ಹೆಚ್ಚು ಸ್ಪರ್ಧೆ ಇದೆ. ವ್ಯಾಪಾರೀ ದೃಷ್ಟಿಯಿಂದ ಅಡ್ಡದಾರಿಗಳನ್ನು ಹಿಡಿಯುವ ಕೆಲವು ಮಂದಿ ಕೂಡ ನಮ್ಮ ನಡುವೆ ಇದ್ದಾರೆ. ಒಬ್ಬ ಫೋಟೋಗ್ರಾಫರ್ ಪ್ರತೀ ಕ್ಷಣವೂ ಅಪ್ಡೇಟ್ ಆಗಬೇಕಾದ ಸವಾಲು ಇದೆ. ಅದಕ್ಕೆ ಪೂರಕವಾದ ಪಠ್ಯ, ತರಬೇತಿಗಳು ಹೆಚ್ಚು ದೊರೆಯುತ್ತಿಲ್ಲ.

ಒಂದು ಮದುವೆ ಸಮಾರಂಭದಲ್ಲಿ ಪೆಂಡಾಲೀನಿಂದ ಹೊರಗೆ ಬರುವಾಗ ಎಲ್ಲರ ಪೇಮೆಂಟ್ ಮಾಡುವ ಮದುವೆ ಪಾರ್ಟಿಯವರು ಫೋಟೋಗ್ರಾಫರ್ ದುಡ್ಡು ಮಾತ್ರ ಬಾಕಿ ಇಟ್ಟು ಕುಣಿಸುವ ಮಂದಿ ಈಗಲೂ ಇದ್ದಾರೆ! ಅಲ್ಲೆಲ್ಲ ಸಂತ್ರಸ್ತ ಆಗುವುದು ಫೋಟೋಗ್ರಾಫರ್ ಮಾತ್ರ! ಇತ್ತೀಚೆಗೆ ಅವರ ಬಲಿಷ್ಠ ಸಂಘಟನೆಗಳು ರಚನೆಯಾಗಿ 90% ಫೋಟೋಗ್ರಾಫರಗಳು ಸುರಕ್ಷಿತ ಆಗಿದ್ದಾರೆ. ಇದೆಲ್ಲವೂ ಒಳ್ಳೆಯ ಬೆಳವಣಿಗೆಗಳು.

ಭರತ ವಾಕ್ಯ

ನನ್ನ ಅಭಿಪ್ರಾಯದ ಪ್ರಕಾರ ಫೋಟೋಗ್ರಾಫರ್ ಒಬ್ಬ ಅದ್ಭುತ ಕಲಾವಿದ, ವಿಕಸನ ಪಟು, ಸೌಂದರ್ಯದ ಉಪಾಸಕ, ನಮ್ಮೆಲ್ಲರ ಅತ್ಯುತ್ತಮ ಗೆಳೆಯ ಎಲ್ಲವೂ ಆಗಿದ್ದಾರೆ. ಅವರಿಗೆ ನಮ್ಮ ಶುಭಾಶಯಗಳು.

ರಾಜೇಂದ್ರ ಭಟ್ ಕೆ.

Leave a Reply

Your email address will not be published. Required fields are marked *

error: Content is protected !!