ಕನ್ನಡ ರಾಜ್ಯೋತ್ಸವ ಕೇವಲ ಹಬ್ಬವಲ್ಲ ಇದು ನಮ್ಮ ಹೆಮ್ಮೆಯ ಸಂಸ್ಕೃತಿ…

ಉಡುಪಿ ನ.1(ಉಡುಪಿ ಟೈಮ್ಸ್ ವರದಿ): ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ಎಷ್ಟು ಅದ್ಬುತವಾದ ಸಾಲುಗಳು ಅಲ್ವಾ… ಕನ್ನಡವನ್ನು ಆರಾಧಿಸುವ ಪ್ರತಿಯೊಬ್ಬ ಕನ್ನಡಿಗನೂ ಈ ಸಾಲುಗಳನ್ನು ಅನುಭವಿಸಬಲ್ಲ. ಕನ್ನಡಕ್ಕಿರುವ ಶಕ್ತಿಯೇ ಅಂತಹದ್ದು. ಕನ್ನಡ ಅದು ಪ್ರತಿಯೊಬ್ಬ ಕನ್ನಡಿಗನ ಉಸಿರು.

ಇಂದು ನವೆಂಬರ್ ಒಂದು ಕನ್ನಡ ರಾಜ್ಯೋತ್ಸವ. ನಾಡಿನ ಸಮಸ್ತ ಜನತೆಗೆ 67ನೇ ವರ್ಷದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಈ ದಿನ ಕರ್ನಾಟಕದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಇರುವ ಕನ್ನಡಿಗರು ಸಂಭ್ರಮದಿಂದ ಆಚರಿಸುವ ನಾಡ ಹಬ್ಬ, ಅದು ಕನ್ನಡದ ಹಬ್ಬ, ಕನ್ನಡ ರಾಜ್ಯೋತ್ಸವ. ಇದು ಕೇವಲ ಹಬ್ಬವಲ್ಲ ಇದು ನಮ್ಮ ಹೆಮ್ಮೆಯ ಸಂಸ್ಕೃತಿ.

ಮೈಸೂರು ರಾಜ್ಯವು (ಈಗಿನ ಕರ್ನಾಟಕ) 1956 ರ ನವೆಂಬರ್ 1ರಂದು ನಿರ್ಮಾಣವಾದುದರ ಸಂಕೇತವಾಗಿ ಈ ದಿನವನ್ನು ಕನ್ನಡ ರಾಜ್ಯೋತ್ಸವವಾಗಿ ಪ್ರತೀ ವರ್ಷ ನಾಡಿನಾದ್ಯಂತ ಆಚರಿಸುತ್ತಾ ಬರುತ್ತಿದ್ದೇವೆ. ಈ ಬಾರಿ 67 ನೇ ವರ್ಷದ ಕನ್ನಡ ರಾಜ್ಯೋತ್ಸವ. ಈ ಸುಧೀರ್ಘ ಅವಧಿಯಲ್ಲಿ ಕನ್ನಡ ಭಾಷೆ ಕಂಪು ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು ಗುರುತಿಸಿಕೊಳ್ಳುತ್ತಿದೆ. ಕಲೆ, ಸಾಂಸ್ಕೃತಿಕವಾಗಿ, ವೈದ್ಯಕೀಯ, ಸಿನಿಮಾ, ಕ್ರೀಡೆ , ರಾಜಕೀಯ, ಶೈಕ್ಷಣಿಕ ಹೀಗೆ ವಿವಿಧ ಕ್ಷೇತ್ರದಲ್ಲಿ ಕನ್ನಡಿಗರ ಸಾಧನೆ ಇಂದು ನಾಡು ಮಾತ್ರವಲ್ಲದೆ ದೇಶದ ಗಡಿಯಾಚೆಗೆ ಪಸರಿಸಿದೆ.

ಇಂದು ಎಲ್ಲೆಡೆ ತಮ್ಮ ಸಾಹಿತ್ಯ, ಬರವಣಿಗೆ ಮೂಲಕ ಕನ್ನಡವನ್ನು ಬೆಳಿಸಿದ ಮಹಾನ್ ವ್ಯಕ್ತಿಗಳನ್ನು ನಾವು ಸ್ಮರಿಸುತ್ತೇವೆ. ಕನ್ನಡ ನಾಡಿನ ಉಳಿವಿಗಾಗಿ ಶ್ರಮಿಸಿದವರನ್ನು ಕನ್ನಡ ಗೀತೆಗಳನ್ನು ಹಾಡುವ ಮೂಲಕ ಗೌರವಿಸುತ್ತೇವೆ. ಇದು ನಮ್ಮೆಲ್ಲೆರ ಕರ್ತವ್ಯಕೂಡಾ ಹೌದು. ಹಿಂದೆಲ್ಲಾ ಕನ್ನಡ ರಾಜ್ಯೋತ್ಸವ ಎಂದರೆ ಆ ಕಾರ್ಯಕ್ರಮದಲ್ಲಿ ಕರುನಾಡಿನ ವೈಭವಗಳು ಮೇಳೈಸುತ್ತಿತ್ತು. ಈಗಿನ ಕಾರ್ಯಕ್ರಮದಲ್ಲೂ ನಾಡಿನ ವೈಭವಗಳು, ಕನ್ನಡ ಭಾಷೆಯ ವೈಶಿಷ್ಟ್ಯತೆಗಳು ಇಡೀ ಪ್ರಪಂಚಕ್ಕೆ ಸಾರುವಂತಿರುತ್ತದೆ. ಆದರೆ ಈಗಿನ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂಬ ಕೂಗುಗಳು ಕೇಳುತ್ತಿರುವುದು ಮಾತ್ರ ನಿಜಕ್ಕೂ ಬೇಸರದ ಸಂಗತಿ.

ಒಂದೆಡೆ ಹೊರ ನಾಡಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡದ ಕಂಪನ್ನು ವಿದೇಶದ ನೆಲದಲ್ಲಿ ಹರಡುತ್ತಿದ್ದರು ಮತ್ತೊಂದೆಡೆ ಈಗಿನ ಅನಿವಾರ್ಯ ಪರಿಸ್ಥಿತಿಯಲ್ಲಿ ಕನ್ನಡ ನಾಡಿನಲ್ಲೇ ಕನ್ನಡವನ್ನು ಉಳಿಸುವ ಅಗತ್ಯತೆಗೆ ಆಧ್ಯತೆ ನೀಡಬೇಕಾಗಿದೆ. ಇದು ನಿಜಕ್ಕೂ ಅವಶ್ಯಕವಾಗಿದೆ ಇಲ್ಲವಾದಲ್ಲಿ ಮುಂದೊಂದು ದಿನ ಕನ್ನಡ ಭಾಷೆ ಕೇವಲ ಪುಸ್ತಕಗಳ ಬರವಣಿಗೆಗೆ ಸೀಮಿತವಾಗಬಹುದು. ಅದಕ್ಕಾಗಿ ಕನ್ನಡದ ಉಳಿವಿನ ನಿಟ್ಟಿನಲ್ಲಿ ಎಲ್ಲಾ ಕನ್ನಡಿಗೂ ಕೈಜೋಡಿಸಬೇಕಿದೆ.

ನಮ್ಮಲ್ಲಿ ಕನ್ನಡ ಮಾತನಾಡುವವರು, ಕನ್ನಡವನ್ನು ಉಸಿರಾಗಿಸಿಕೊಂಡಿರುವವರು ಇದ್ದಾರೆ. ಆದರೆ ಇವರ ನಡುವೆ ಇರುವ ಇತರ ಕೆಲವರಿಗೆ ಆಂಗ್ಲ ಭಾಷೆಯೂ ಸೇರಿದಂತೆ ಭಾಷೆಗಳ ವ್ಯಾಮೋಹವೋ ಅಥವಾ ಕನ್ನಡ ಕಡೆಗಣೆಯೋ ಗೊತ್ತಿಲ್ಲ ಆದರೆ ಕನ್ನಡ ಬಳಕೆ ಕಡಿಮೆ ಆಗಿರೋದಂತು ಸತ್ಯ.

ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಬಲಿಯಾಗುತ್ತಿರುವ ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ನಿಜಕ್ಕೂ ಇದೆ. ಆದರೆ ಇದು ಕನ್ನಡದ ಬಗ್ಗೆ ಉದ್ದೂದ್ದ ಭಾಷಣ ಮಾಡುವುದರಿಂದ ಸಾಧ್ಯವಾಗುವುದಿಲ್ಲ. ಕನ್ನಡ ಭಾಷೆಯ ಬಳಕೆ ಆದಾಗ ಮಾತ್ರ ಅದು ಉಳಿದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಕನ್ನಡದ ಭಾಷೆಯನ್ನು ಪ್ರತಿಯೊಬ್ಬರೂ ಬಳಸುವಂತಾಗಬೇಕು. ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವುದು ಪ್ರಥಮ ಆಧ್ಯತೆ ಆಗಿರಬೇಕು.

ನಾವು ಕನ್ನಡಿಗರು ವಿಶಾಲ ಹೃದಯದವರಲ್ಲವೇ…. ನಮ್ಮಲ್ಲಿ ಬಹುತೇಕರು ಅಲ್ಲ ಅಂದರೂ ಕೆಲವರು, ಇತರ ರಾಜ್ಯ, ದೇಶಗಳಿಂದ ಕರ್ನಾಟಕಕ್ಕೆ ಬರುವವರೊಂದಿಗೆ ಕಷ್ಟಪಟ್ಟಾದರೂ ಅವರ ಭಾಷೆಯನ್ನು ಕಲಿತು ಅವರೊಂದಿಗೆ ಮಾತನಾಡುತ್ತೆವೆಯೇ ವಿನಃ ನಮ್ಮ ಬಾಷೆ ಕನ್ನಡದಲ್ಲಿ ಅವರೊಂದಿಗೆ ಮಾತನಾಡುವ ಪ್ರಯತ್ನ ಮಾಡುವುದಿಲ್ಲ. ಮೊದಲು ನಾವು ನಮ್ಮ ರಾಜ್ಯಕ್ಕೆ ಬರುವ ಇರತ ರಾಜ್ಯಗಳ ದೇಶಗಳ ಭಾಷೆಗೆ ಹೊಂದಿಕೊಳ್ಳುವ ಅಭ್ಯಾಸವನ್ನು ನಿಲ್ಲಿಸಬೇಕು. ಕಷ್ಟವಾದರೂ ಅವರಿಗೂ ಅಗತ್ಯ ವ್ಯವಹಾರಕ್ಕೆ ಕನ್ನಡ ಬಳಕೆ ಮಾಡುವಂತೆ ಕರ್ನಾಟಕದಲ್ಲಿ ಕನ್ನಡ ಮಾತನಾಡುವಂತೆ ಮಾಡಬೇಕು. ಅವರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು. ಸದ್ಯ ಇದು ತುಂಬಾ ಅಗತ್ಯವಾಗಿದೆ. ಆದರೆ ನಾವು ಯಾರಿಗೆ ಬೇಕು ಇದೆಲ್ಲ ಅವರು ಬಂದು ಹೋಗುತ್ತಾರೆ ಎನ್ನೂ ಆಲಸ್ಯವನ್ನು ಬೆಳೆಸಿಕೊಳ್ಳುತ್ತೇವೆ. ಇದರ ಪರಿಣಾಮವೇ ಇಂದು ಕೆಲವೆಡೆ ಕನ್ನಡ ಬಳಕೆ ಕಡಿಮೆ ಆಗುವುದು ಅಂದರೆ ತಪ್ಪಾಗಲಾರದು.

ಸದ್ಯದ ಪರಿಸ್ಥಿತಿಯಲ್ಲಿ ಶಾಲೆ ಕಾಲೇಜಿಗೆ ಹೋಗುವ ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಇಂಗ್ಲಿಷ್ ನಲ್ಲಿಯೇ ಮಾತಮಾಡುವುದು ಕಂಡಾಗ ಕನ್ನಡ ಎಲ್ಲಿ ಹೋಗುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಈ ನಿಟ್ಟಿನಲ್ಲಿ ಡಾ. ರಾಜ್ ಕುಮಾರ್ ಅವರು ಹಾಡಿರುವ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟ ಬೇಕು ಎಂಬ ಹಾಡಿನಲ್ಲಿ ಬರುವ ಒಂದು ಸಾಲು ನೆಮಪಿಗೆ ಬರುತ್ತದೆ. ಅದುವೇ ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೆ ಭಾಷೆ ಕನ್ನಡ… ಕನ್ನಡ ಅನ್ನೋ ಸಾಲು. ಈ ಸಾಲು ಯಾವ ಕಾಲಕ್ಕೂ ಪ್ರಸ್ತುತವಾದದ್ದು.

ಇತರ ರಾಜ್ಯ, ದೇಶದ ಭಾಷೆಯ ಅರಿವು, ತಿಳುವಳಿಕೆ ಇರುವುದೂ ಅಗತ್ಯವಿದೆ ಯಾಕೆಂದರೆ ನಾವು ಇತರ ಕಡೆಗಳಿಗೆ ಹೋದಾಗ ಅಲ್ಲಿ ಇತರರೊಂದಿಗೆ ವ್ಯವಹರಿಸಲು ಅದು ಅಗತ್ಯವಾಗಿದೆ. ಇತರೆ ರಾಜ್ಯದ, ದೇಶಗಳ ಭಾಷೆಯ ಬಗ್ಗೆ ಒಲವು ತೋರುವುದು ತಪ್ಪಲ್ಲ. ಅದೂ ಬೇಕೂ ಆದರೆ ಅದಕ್ಕಿಂತ ನೂರುಪಟ್ಟು ಹೆಚ್ಚು ನಮ್ಮ ಕನ್ನಡದ ಮೇಲೆ ನಮಗೆ ಹೆಮ್ಮೆ ಇರಬೇಕು. ಅದೇ ಅಲ್ಲವೇ ಕುವೆಂಪು ಅವರು ಹೇಳಿದ್ದು ‘ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡ ವಾಗಿರು ಎಂದು.

ಹೌದು ಕನ್ನಡವನ್ನು ಉಳಿಸುವ ಹಾದಿಯಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ಅದು ಸ್ಥಳೀಯ ಮಟ್ಟದಲ್ಲಿ ಆಗುವ ಜೊತೆಗೆ ಸರಕಾರಿ ಮಟ್ಟದಲ್ಲೂ ಆಗಬೇಕಿದೆ. ರಾಜ್ಯಕ್ಕೆ ಸಂಬಂಧಿಸಿದ ಕೆಲವೊಂದು ಆದೇಶಗಳು ಆಂಗ್ಲ ಭಾಷೆಯಲ್ಲಿಯೇ ಇರುತ್ತದೆ. ಅದರೆ ಈ ಆದೇಶಗಳನ್ನು ಕನ್ನಡಲ್ಲಿಯೇ ನೀಡುವಂತಾಗಬೇಕು. ಮಕ್ಕಳಿಗೆ ಕನ್ನಡ ಬಗ್ಗೆ ಮಾಹಿತಿ ಇದ್ದರೆ ಸಾಲದು ಅದರ ಅರಿವು ಇರಬೇಕು. ಕಾಲೇಜುಗಳಲ್ಲಿ ಕಾರ್ಯಕ್ರಮಗಳಲ್ಲಿ ಅಗತ್ಯವಿದ್ದರೆ ಮಾತ್ರ ಆಂಗ್ಲಭಾಷೆಗೆ ಆಧ್ಯತೆ ನೀಡಿ. ಆಂಗ್ಲ ಭಾಷೆ ಅನಿವಾರ್ಯ ಇಲ್ಲದ ಕಾರ್ಯಕ್ರಮಗಳನ್ನು ಕನ್ನಡದಲ್ಲಿಯೇ ನಿರ್ವಹಿಸುವಂತಹ ಕಾರ್ಯಗಳು ಆಗಬೇಕಿದೆ. ಇಂದೊಂದು ದಿನ ಮುಂಜಾನೆಯಿಂದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದರೆ ಸಾಲದು. ಕನ್ನಡವನ್ನು ಪ್ರತಿನಿತ್ಯ ಬಳಸುವಂತಾಗಬೇಕು. ಇದರ ಪ್ರಯತ್ನ ನನ್ನಿಂದಲೇ ಆಗಬೇಕು ಎಂಬ ಆಲೋಚನೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕು.

ಇಂದು ಒಂದು ದಿನಕ್ಕೆ ಈ ಕನ್ನಡ ಭಾಷಾಭಿಮಾನ ಸೀಮಿತವಾಗಿಸದೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಕನ್ನಡದ ಕಂಪು ಎಲ್ಲೆಡೆ ಪಸರಿಸಲು ಸಾಧ್ಯ. ಇನ್ನೊಬ್ಬರಿಗೆ ಕನ್ನಡ ಕುರಿತು ಭಾಷಣ/ಉಪದೇಶ ಮಾಡುವ ಬದಲು ನಾವು ನಮ್ಮ ಜೀವನದಲ್ಲಿ ಕನ್ನಡವನ್ನು ರೂಢಿಸಿಕೊಳ್ಳೋಣ. ಅದುವೇ ನಾವು ಕನ್ನಡಕ್ಕೆ ನೀಡುವ ನಿಜವಾದ ಗೌರವ, ಕೊಡುಗೆ.

Leave a Reply

Your email address will not be published. Required fields are marked *

error: Content is protected !!