ರಜಾತಾದ್ರಿಯಲ್ಲಿ ಪರ್ಯಾಯ ಸಂಭ್ರಮ

” ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ ಪ್ರಣತ ಕ್ಲೇಷ ನಾಶಾಯ ಗೋವಿಂದಾಯ ನಮೋ ನಮಃ” ಕೃ ಷ್ಣಂ ವಂದೇ ಜಗದ್ಗುರು. ರಜತಪೀಠಪುರ ಉಡುಪಿ ಶ್ರೀ ಕೃಷ್ಣನ ನೆಲೆವೀಡು. ವಾಯುದೇವರವತಾರವಾದ ಮದ್ವಚಾರ್ಯರಿಂದ ಪ್ರತಿಷ್ಠಾಪನೆಗೊಂಡು ಅಷ್ಠಮಠದ ಯತಿಗಳಿಂದ ಕರಾರ್ಚಿತನಾದ ಶ್ರೀ ಕೃಷ್ಣನ ನಗರಿ. ಪ್ರಸಿದ್ದ  ಕೀರ್ತನಾಕಾರಾರಾದ ಕನಕದಾಸರಿಗೆ ಒಲಿದ ಹೃಷಿಕೇಶನ ಪುಣ್ಯಕ್ಷೇತ್ರ. ಜಗದ್ವಿಖ್ಯಾತವಾದ ಸರ್ಮೋತ್ತಮ ಕ್ಷೇತ್ರವಾದ ಉಡುಪಿ ಆಸಕ್ತರಿಗೆ ಶ್ರದ್ದಾ ಭಕ್ತಿಗಳ ಕೇಂದ್ರಬಿಂದು. ಉಡುಪಿಯಲ್ಲಿನ ಕೃಷ್ಣಮಠದ ಪಾರಂಪರ್ಯತೆಯನ್ನು ಅವಲೋಕನ ಮಾಡಿದಾಗ ದೇಶ ವಿದೇಶಿಗರ ಭಕ್ತಿಯ ಕೇಂದ್ರವಾದ ಉಡುಪಿಯ ಕೃಷ್ಣಮಠ ಸರಿಸುಮಾರು 13ನೇ ಶತಮಾನದಲ್ಲಿ ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿದೆ. ಇಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಶ್ರೀ ಕೃಷ್ಣ ದ್ವಾಪರಯುಗದಲ್ಲಿ ದ್ವಾರಕೆಯಲ್ಲಿ ರುಕ್ಮಿಣಿ ಪೂಜಿಸುತ್ತಿದ್ದ ದೇವಶಿಲ್ಪಿ ವಿಶ್ವಕರ್ಮನಿಂದ ವಿರಚಿತವಾದ ವಿಗ್ರಹವಾಗಿದೆ ಎಂಬ ಐತಿಹ್ಯವಿದೆ.   

ಅಷ್ಟ ಮಠದ ಇತಿಹಾಸ:ಒಮ್ಮೆ ದ್ವಾರಕೆಯಿಂದ ಬರುತ್ತಿದ್ದ ಹಡುಗು ಕಡಲ ಕಿನಾರೆಯಲ್ಲಿ ಬಿರುಗಾಳಿಗೆ ತತ್ತರಿಸಿ ಮುಳುಗುತ್ತಿದ್ದಾಗ ಅಲ್ಲೇ ಸಮುದ್ರ ತಟದಲ್ಲಿ ಧ್ಯಾನಸಕ್ತರಾಗಿದ್ದ ಮದ್ವಚಾರರ್ಯರು ತಮ್ಮ ಕಾವಿ ಶಾಟಿಯನ್ನು ಬೀಸಿ ಮುಳುಗದಂತೆ ತಡೆದರು. ಆಗ ಹಡುಗಿನ ಮಾಲಿಕ ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಯಾವ ವಸ್ತುವನ್ನು ಕೇಳುವಂತೆ ಬಿನ್ನವಿಸಿದಾಗ ಅವರು ಹಡಗಿನಲ್ಲಿದ್ದ ಗೋಪಿ ಚಂದನದ ಮುದ್ರೆಯನ್ನು ಕೇಳಿ ಉಡುಪಿಗೆ ತರುವಾಗ ಅದು ಮಾರ್ಗಮದ್ಯದಲ್ಲಿ ಒಡೆದು ಅದರಲ್ಲಿ “ಶಿಖಾ ಬಂಧ ತ್ರಯೋಪೇತಂ” ಎಂಬಂತೆ ಬಲಗೈಯಲ್ಲಿ ಕಡಗೋಲು, ಎಡಗೈಯಲ್ಲಿ ಮೊಸರ ಕಡೆಯುವ ಹಗ್ಗ ಪಿಡಿದ ಮೂರು ಜಟೆಯುಳ್ಳ ಸುಂದರವಾದ ಮುಡಿ ಹೊಂದಿದ ಸುಂದರವಾದ ಬಾಲಕೃಷ್ಣನ ಮೂರ್ತಿಯು ದೊರಕಿ ಅದನ್ನು ಉಡುಪಿಯಲ್ಲಿ ಪ್ರತಿಷ್ಟಾಪಿಸಿದರು. ಕೃಷ್ಣ ಪಕ್ಷದಲ್ಲಿ ಜನಿಸಿದ ಶ್ರೀ ಕೃಷ್ಣ ಎಲ್ಲರನ್ನೂ ಅಕರ್ಷಿಸುವ ಗುಣವನ್ನು ಹೊಂದಿದ್ದಾನೆ. ಈ ಕೃಷ್ಣನ  14 ವಿಧಧ ಪೂಜಾ ಕೈಂಕರ್ಯಕ್ಕಾಗಿ ಎಂಟು ಬಾಲ ಯತಿಗಳು, ಅಷ್ಟಮಠಗಳ ಪ್ರತಿಷ್ಠಾಪನೆ ಮಾಡಿದರು. “ಸಂಪ್ರದಾಯ ಪದ್ದತಿ” ಎಂಬ ಗ್ರಂಥದಲ್ಲಿ ತಿಳಿಸಿದಂತೆ ಮದ್ವಚಾರ್ಯರು ಕಣ್ವ ತೀರ್ಥದಲ್ಲಿ 8ಬಾಲಯತಿಗಳನ್ನು 4ಗುಂಪುಗಳಾಗಿ ವಿಂಗಡಿಸಿ ಪ್ರತಿಯೊಂದು ಜೋಡಿಗೂ ಬೇರೆ ಬೇರೆ ಮಂತ್ರ ಕ್ರಿಯಾವಿಧಿ ಪೂಜೆಗಳನ್ನು ಭೋಧಿಸಿ ಅಮಠಗಳನ್ನು ದ್ವಂದ್ವ ಮಠವೆಂದುಕರೆಯಲಾಗಿದೆ.

ಮದ್ವಚಾರ್ಯರ ಶಿಷ್ಯವರ್ಗದಲ್ಲಿ ಮೊದಲಿಗರಾದ ಹೃಷಿಕೇಶ ತೀರ್ಥಹಾಗೂ ಇತರ ಯತಿಗಳು ಜೊತೆಯಾಗಿ ಮಾದ್ವ ಸಂಪ್ರದಾಯಗಳನ್ನು ಭಕ್ತರಲ್ಲಿ ಭಕ್ತಿ ಭಾವವನ್ನು ಬಿತ್ತರಿಸುತ್ತಾ ಸಂಪ್ರದಾಯದ ಮುಂದುವರಿಕೆಯಾಯಿತು.         ಧಾರ್ಮಿಕ ಆಧ್ಯಾತ್ಮಿಕತೆಗೆ ಭವ್ಯತಾಣವಾದ ಉಡುಪಿ ಪುರಾತನ ಐತಿಹ್ಯಗಳನ್ನು ತನ್ನ ಒಡಲಲ್ಲಿಟ್ಟುಕೊಂಡು ಧಾರ್ಮಿಕ ಚಿಂತನೆಗಳನ್ನು ಭಕ್ತರ ಮನದಲ್ಲಿ ಬಿತ್ತುತ್ತಿದೆ. ಪ್ರಾಚೀನ ಕಾಲದಿಂದಲೂ ಧರ್ಮ ಪೀಠವನ್ನು ಧರ್ಮ ಪೀಠಾಧಿಪತಿಗಳು ಅಲಂಕರಿಸುತ್ತಾರೆ. “ಗಹನಾ ಕರ್ಮಣೋ ಗತಿ ” ಎಂಬಂತೆ ಜನರಲ್ಲಿ ಕರ್ಮದ ಮಹತ್ವವನ್ನು ಬಿತ್ತುತ್ತಾ ಜನರಲ್ಲಿ ಸದ್ಬಾವನೆಯನ್ನು ಬೆಳೆಸುತ್ತಿವೆ. ಇಂತಹ ಅಷ್ಠಮಠದ ಪೂಜಾ ಕೈಂಕರ್ಯ ಚಕ್ರದ 33ನೇ ಸುತ್ತು ಈಗೀನ ಅದಮಾರು ಪರ್ಯಾಯದೊಂದಿಗೆ ಪ್ರಾರಂಭವಾಗಿದೆ. 2020 ಜನವರಿ 18ರಂದು  ಅದಮಾರು ಮಠದ ಕಿರಿಯ ಯತಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ.

ಕೃಷ್ಣನಗರಿಯಲ್ಲಿ ಪರ್ಯಾಯ ತಯಾರಿ:    ಕೃಷ್ಣನಗರಿ ಅದ್ದೂರಿ ಐತಿಹಾಸಿಕ ಪರ್ಯಯೋತ್ಸವಕ್ಕೆ ಮದುಮಗಳಂತೆ ಸಿಂಗಾರಗೊಂಡಿದೆ. ನಗರದ ಜೋಡುಕಟ್ಟೆಯಿಂದ ಉಡುಪಿ ರಥಬೀದಿಯವರೆಗೂ ಹಳೆಯ ಸಂಪ್ರದಾಯದಂತೆ ಬೃಹದಾಕಾರದ ಸ್ವಾಗತಕಮಾನು ಅತಿಥಿಗಳನ್ನು ಕೈ ಬೀಸಿ ಕರೆಯುತ್ತಿದೆ. ಬಣ್ಣ ಬಣ್ಣದ ವಿದ್ಯುತ್ ಅಲಂಕಾರ, ಸಾಲಾಗಿ ಜೋಡಿಸಿದ ಗೂಡುದೀಪ ಬಟ್ಟೆಯ ಬ್ಯಾನರ್ ಗಳು ನೋಡುಗರ ಕಣ್ಮನ ಸೆಳೆಯುತ್ತಿದೆ. ಮೆರವಣಿಗೆ ಸಾಗಿ ಬರುವ ದಾರಿಯಲ್ಲಿ ಗುರುಪರಂಪರೆಯ ನೆನಪಿಗೊಸ್ಕರ ಗುರುಗಳ ನಾಮದೇಯದಲ್ಲಿ ಸಣ್ಣ ಸಣ್ಣ ಕಮಾನುಗಳನ್ನು ರಚಿಸಿ ತಮ್ಮ ಹಿಂದಿನ ಯತಿಗಳಲ್ಲುಲಿ ಧ್ಯಾನಸಕ್ತರಾಗಿ ಆಶೀರ್ವಾದ ಪಡೆಯುವಂತೆ ಮಾಡಲಾಗಿದೆ. ಇಡೀ ನಗರವೇ ಜನಜಂಗುಳಿಯಿಂದ ತುಂಬಿ ತುಳುಕುತ್ತಿದೆ.     ಒಟ್ಟಿನಲ್ಲಿ ದೇವಾಲಯದ ತವರೂರಾಗಿದ್ದ ಉಡುಪಿ ಈಗ ಧಾರ್ಮಿಕ ಹಾಗೂ ಸಾಂಸ್ಕೃತಿಕ ರಾಜಧಾನಿಯಾಗಿ ಬಿಂಬಿಸಲ್ಪಟ್ಟಿದೆ. ಇದರ ಮೂಲ ಕಾರಣ ಈ ಪರ್ಯಾಯ ಉತ್ಸವ. ಪ್ರತಿ ಪರ್ಯಾಯದ ಕಟ್ಟು ಪಾಡುಗಳು ವಿಭಿನ್ನವಲ್ಲ,ಸಂಪ್ರದಾಯಗಳಲ್ಲಿ ವ್ಯತ್ಯಾಸವಿಲ್ಲ 750ವರ್ಷಗಳಿಂದಲೂ ಸುಸಂಸ್ಕೃತವಾಗಿ ಸುಲಲಿತವಾಗಿ ನಡೆದು ಬರುತ್ತಿರುವ ಪರ್ಯಾಯ ಉತ್ಸವಕ್ಕೆ ಧಾರ್ಮಿಕ ಚಾರಿತ್ರಿಕ, ಸಾಂಪ್ರದಾಯಿಕ ಮಹತ್ವವಿದ್ದು ಜನರು ಭಕ್ತಿ ಭಾವದಿಂದ ಅಸ್ವಾದಿಸುತ್ತಾ ಕಣ್ಮನ ತುಂಬಿಕೊಳ್ಳುತ್ತಿದ್ದಾರೆ.     

ಭಾಗ್ಯಶ್ರೀ ಐತಾಳ್ ಕರಂಬಳ್ಳಿ, ಉಪನ್ಯಾಸಕರು     

Leave a Reply

Your email address will not be published. Required fields are marked *

error: Content is protected !!