ವಧುವಿನಂತೆ ಸಿಂಗಾರಗೊಂಡಿದೆ ಮುಕುಂದನ ಊರು

ಉಡುಪಿ: ಎರಡು ವರ್ಷಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವಕ್ಕೆ ಪೊಡವಿಗೊಡೆಯನ ಊರು ಸಜ್ಜಾಗಿದೆ . ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಉಡುಪಿ ನಗರವೇ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಉಡುಪಿಯ ರಸ್ತೆಯುದ್ದಕ್ಕೂ ಸಿಗುವ ಸ್ವಾಗತ ಗೋಪುರಗಳು ಕೃಷ್ಣ ಪ್ರಿಯರನ್ನ ಸ್ವಾಗತಿಸುತ್ತಿದ್ದೆ.

ಈಶಪ್ರಿಯ ತೀರ್ಥರ ಜನಪ್ರಿಯ ಸಂಕಲ್ಪ : ತಮ್ಮ ಗುರುಗಳ ಆಶಯದಂತೆ
ಅದಮಾರು ಮಠದ ಈಶಪ್ರಿಯ ತೀರ್ಥರ ಪರಿಸರ ಕಾಳಜಿ ಭಕ್ತ ಸಮೂಹದ ಮೆಚ್ಚುಗೆಗೆ ಪಾತ್ರವಾಗಿದೆ. ಗೋಪುರ ಹಾಗೂ ಕಮಾನುಗಳ ನಿರ್ಮಾಣಕ್ಕೆ ಪ್ಲಾಸ್ಟಿಕ್ ಬಳಕೆ ಮಾಡಿಲ್ಲ. ಬದಲಿಗೆ ಬಟ್ಟೆಯ ಬ್ಯಾನರ್‌ಗಳು ಹಾಗೂ ಮರದ ಉಪಕರಣಗಳನ್ನು ಬಳಸಲಾಗಿದೆ. ಕರಾವಳಿಯ ಸಂಸ್ಕೃತಿ, ಜಾನಪದ ಸೊಗಡು ಹಾಗೂ ತುಳುನಾಡ ಕಲಾ ಶ್ರೀಮಂತಿಕೆಯನ್ನು ಗೋಪುರಗಳ ಮೇಲೆ ಸುಂದರವಾಗಿ ಚಿತ್ರಿಸಲಾಗಿದೆ.ಮನೆಗಳಲ್ಲಿ ಉಪಯೋಗಿಸುವ ವಸ್ತುಗಳನ್ನ ಉಪಯೋಗಿಸಿ ಕಮಾನುಗಳನ್ನ ರಚಿಸಲಾಗಿದೆ.

ಅದಮಾರು ಮಠದ ಗುರು ಪರಂಪರೆ ಸ್ಮರಣೆ : ಅದಮಾರು ಮಠದ ಗುರು ಪರಂಪರೆಯನ್ನು ನೆನಪಿಸುವ ಮಠದ 32 ಯತಿಗಳ ಹೆಸರನ್ನು 32 ಮಂಟಪಗಳಲ್ಲಿ ಅಚ್ಚೊತ್ತಲಾಗಿದೆ. ನಗರದ ಪ್ರಮುಖ ಹಾಗೂ ಆಯಕಟ್ಟಿನ ಜಾಗಗಳಲ್ಲಿ 42 ದೊಡ್ಡ ಹಾಗೂ ಸಣ್ಣ ಕಮಾನುಗಳನ್ನು ಶ್ರೀ ಕೃಷ್ಣಸೇವಾ ಬಳಗ ನಿರ್ಮಿಸಿದೆ.

ಮಣಿಪಾಲ–ಉಡುಪಿ ಮುಖ್ಯರಸ್ತೆ, ಕಲ್ಪನಾ,ಜೋಡುಕಟ್ಟೆ. ಅಂಬಾಗಿಲು, ಬನ್ನಂಜೆ, ಕಡಿಯಾಳಿ, ಕಲ್ಸಂಕ, ಕೋರ್ಟ್ ರಸ್ತೆ ಹೀಗೆ ಉಡುಪಿಯು ಸ್ವಾಗತ ಗೋಪುರದಿಂದ ಕಂಗೊಳಿಸುತ್ತಿದ್ದೆ. ರಥಬೀದಿ ಧರೆಗಿಳಿದ ಸ್ವರ್ಗದಂತೆ ಕಂಗೊಳಿಸುತ್ತಿದ್ದೆ . ಕೃಷ್ಣನ ದೇವಸ್ಥಾನ, ಮಧ್ವಸರೋವರ, ಅನಂತೇಶ್ವರ, ಚಂದ್ರಮೌಳೇಶ್ವರ ದೇವಸ್ಥಾನ ಹಾಗೂ ಅಷ್ಟಮಠಗಳು ವಿದ್ಯುತ್ ದೀಪಾಲಂಕಾರಗಳಿಂದ ಭಕ್ತರನ್ನು ಮಂತ್ರಮುಗ್ದಗೊಳಿಸಿದೆ . ರಥಬೀದಿಯ ಇಕ್ಕೆಲಗಳಲ್ಲೂ ದೀಪಾಲಂಕಾರ ಮಾಡಲಾಗಿದ್ದು ಆಕರ್ಷಣೀಯವಾಗಿದೆ.

ಕಣ್ಮನ ಸೆಳೆಯಲಿರುವ ಗೂಡು ದೀಪ: ರಥಬೀದಿಯಿಂದ ಜೋಡುಕಟ್ಟೆಯವರೆಗೂ ಈ ಬಾರಿ 800 ಗೂಡುದೀಪಗಳನ್ನು ತೂಗು ಹಾಕಲಾಗುತ್ತಿದೆ. ಎರಡು ದಿನದೊಳಗೆ ಈ ಕಾರ್ಯ ಮುಗಿಯಲಿದೆ ಎಂಬುದಾಗಿ ತಿಳಿಸಿದ್ದಾರೆ.ಪರ್ಯಾಯ ಅದಮಾರು ಮಠ ಸುಣ್ಣ ಬಣ್ಣಗಳಿಂದ ಸಿಂಗಾರವಾಗಿದೆ. ಮಠದ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಸಾಂಪ್ರದಾಯಿಕ ವಿನ್ಯಾಸಕ್ಕೆ ಧಕ್ಕೆಯಾದಂತೆ ಜೀರ್ಣೋದ್ಧಾರ ಮಾಡಲಾಗಿದೆ. ಮಣ್ಣಿನ ಗೋಡೆಗಳಿಗೆ ಬಣ್ಣ ಬಳಿದು ಅಂದವನ್ನು ಹೆಚ್ಚಿಸಲಾಗಿದೆ. ನೂರಾರು ವರ್ಷಗಳಷ್ಟು ಹಳೆಯ ಮರದ ಕಂಬಗಳಿಗೆ ಪಾಲಿಶ್‌ ಮಾಡಲಾಗಿದ್ದು, ಗಮನ ಸೆಳೆಯುತ್ತಿವೆ. ಪರ್ಯಾಯದ ಅವಧಿಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಠಕ್ಕೆ ಭೇಟಿನೀಡುವ ಹಿನ್ನೆಲೆಯಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಕಣ್ಮನ ಸೆಳೆವ ಕಾಷ್ಠ ಶಿಲ್ಪ: ಕಾಷ್ಠ ಶಿಲ್ಪದ ಸೊಬಗಿನಿಂದ ಅದಮಾರು ಮಠ ಕಣ್ಮನ ಸೆಳೆಯುತ್ತಿದೆ. ಮಠದ ಪ್ರವೇಶದ್ವಾರ, ಒಳಾವರಣ, ಪಟ್ಟದ ದೇವರ ಗುಡಿಗಳಲ್ಲಿ ಕಾಷ್ಠ ಶಿಲ್ಪಗಳ ವೈಭವ ಎದ್ದು ಕಾಣುತ್ತಿದ್ದು, ಸಾಗುವಾನಿ ಮರದ ತೊಲೆಗಳಲ್ಲಿ ಮೂಡಿರುವ ಕಲಾತ್ಮಕ ಕೆತ್ತನೆ ಗಳು ವಾಹ್ ಎನಿಸುತ್ತಿದ್ದೆ ,

ಅದಮಾರು ಮಠದ ಪರ್ಯಾಯ ಇದೇ ಜ.18ರಿಂದ ಆರಂಭವಾಗಿ ಜ.17 2022ಕ್ಕೆ ಮುಕ್ತಾಯವಾಗಲಿದೆ. ಪರ್ಯಾಯದ ಪೂರ್ವಭಾವಿಯಾಗಿ ಈಗಾಗಲೇ ಅದಮಾರು ಮಠದ ಈಶಪ್ರಿಯ ತೀರ್ಥರು ಲೋಕಸಂಚಾರ ಮುಗಿಸಿ ಈಗಾಗಲೇ ಪುರಪ್ರವೇಶ ಮಾಡಿದ್ದಾರೆ. 18ರಂದು ಪರ್ಯಾಯ ಪೀಠಾರೋಹಣ ನೆರವೇರಲಿದ್ದು, ಅಂದು ಬೆಳಗಿನ ಜಾವ 1.20ಕ್ಕೆ ಈಶಪ್ರಿಯ ತೀರ್ಥರು ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ. 1.50ಕ್ಕೆ ಜೋಡುಕಟ್ಟೆ ಮಂಟಪದಲ್ಲಿ ಪಟ್ಟದೇವರ ಪೂಜೆ ನೆರವೇರಿಸಿ, 4.50ಕ್ಕೆ ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿ, ಬಳಿಕ ಅನಂತೇಶ್ವರ, ಚಂದ್ರಮೌಳೇಶ್ವರನ ದರ್ಶನ ಪಡೆಯಲಿದ್ದಾರೆ. 5.30ಕ್ಕೆ ಕೃಷ್ಣಮಠ ಪ್ರವೇಶಿಸುವ ಯತಿಗಳು, 5.57ಕ್ಕೆ ಅಕ್ಷಯಪಾತ್ರೆ ಸ್ವೀಕರಿಸಿ ಪವಿತ್ರ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. 10ಕ್ಕೆ ಮಹಾಪೂಜೆ ಬಳಿಕ, ಅನ್ನ ಸಂತರ್ಪಣೆ ಹಾಗೂ ಮಧ್ಯಾಹ್ನ 2.30ಕ್ಕೆ ರಾಜಾಂಗಣದ ನರಸಿಂಹ ವೇದಿಕೆಯಲ್ಲಿ ಪರ್ಯಾಯ ದರ್ಬಾರ್ ನಡೆಯಲಿದೆ.

₹ 11 ಕೋಟಿ ಅನುದಾನ ; ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಕೆ

ಪರ್ಯಾಯ ಮಹೋತ್ಸವಕ್ಕೆ ರಾಜ್ಯ ಸರ್ಕಾರ ₹3 ಕೋಟಿ, ಜಿಲ್ಲಾಡಳಿತ, ನಗರಸಭೆಯಿಂದ ಒಟ್ಟು ₹11 ಕೋಟಿ ಅನುದಾನ ನೀಡಲಾಗಿದ್ದು, ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ.

ಪರ್ಯಾಯಕ್ಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಮೊಬೈಲ್‌ ಶೌಚಾಲಯಗಳ ನಿರ್ಮಾಣ ಹಾಗೂ ಸಂಚಾರ ವ್ಯವಸ್ಥೆ, ರಸ್ತೆಗಳ ದುರಸ್ತಿ, ದಾರಿ ದೀಪಗಳನ್ನು ರಿಪೇರಿ ಮಾಡಿಸಲಾಗಿದೆ. ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ನಗರದ 12 ಸ್ಥಳಗಳಲ್ಲಿ 30ಕ್ಕಿಂತ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!