ಅಕ್ಷಯ ತೃತೀಯಾ ಅದರ ಬಗ್ಗೆ ಸ್ವಲ್ಪ ಮಾಹಿತಿ ನಿಮಗಾಗಿ

ವೈಶಾಖ ಮಾಸದ ಶುಕ್ಲಪಕ್ಷದ ತದಿಗೆಯನ್ನು ಅಕ್ಷಯತದಿಗೆ ಎಂದು ಆಚರಿಸಲಾಗುತ್ತಿದೆ.
ಅಕ್ಷಯ ಎಂದರೆ ಕ್ಷಯಿಸದೆ,
ವೃದ್ಧಿಯಾಗುವುದು ಎಂದು ಅರ್ಥ.
ಈ ದಿನ ಸೂರ್ಯ–ಚಂದ್ರರು ತಮ್ಮ ಗರಿಷ್ಠಮಟ್ಟದ ಕಾಂತಿಯನ್ನು ಹೊಂದಿರುವುದರಿಂದ ಈ ದಿನವಿಡೀ ಯಾವುದೇ ಶುಭ ಕಾರ್ಯಕ್ಕೆ ಮಂಗಳಕರವಾದುದು.!

ಅಕ್ಷರಾಭ್ಯಾಸ, ಮದುವೆ,ಉಪನಯನ, ಗೃಹಪ್ರವೇಶ, ಹೊಸ ವ್ಯವಹಾರ ಆರಂಭ, ಎಲ್ಲದಕ್ಕೂ ಸುಮುಹೂರ್ತದ,
ಪಂಚಾಂಗಶುದ್ಧಿಯ ದಿನವೆಂದು ಪರಿಗಣಿಸಲ್ಪಟ್ಟಿದೆ.

ಈ ದಿನಕ್ಕೆ ಕೆಲವೊಂದು ಘಟನೆಗಳು ಪುರಾಣಗಳಲ್ಲಿವೆ.
ಅಕ್ಷಯತದಿಗೆ ದಿನದಂದೇ ಮಹರ್ಷಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಲೇಖನ ಕಾರ್ಯವನ್ನು ಆರಂಭಿಸಿದರು.
ಶ್ರೀ ಮಹಾವಿಷ್ಣುವು ಪರಶುರಾಮನಾಗಿ ಅವತಾರವೆತ್ತಿದ್ದು ಇದೇ ದಿನ.
ಶ್ರೀಕೃಷ್ಣನ ಅಣ್ಣ ಬಲರಾಮ ಜನಿಸಿದ್ದು ಅಕ್ಷಯತದಿಗೆಯಂದು.

ಶ್ರೀಕೃಷ್ಣನು ಪಾಂಡವರಿಗೆ ಅಕ್ಷಯ ಪಾತ್ರೆಯನ್ನಿತ್ತ ಸುದಿನ ಅಕ್ಷಯ ತದಿಗೆ.
ಜನ್ಮಾಂತರಗಳ ಪಾಪ, ದೋಷಗಳನ್ನು ನಿವಾರಿಸುವ ಗಂಗಾಮಾತೆಯು ಪವಿತ್ರನದಿಯಾಗಿ ಸ್ವರ್ಗದಿಂದ ಧರೆಗಿಳಿದ ದಿನವಿದು.
ಸಂಪತ್ತಿನ ಒಡೆಯ, ದೇವತೆಗಳಲ್ಲಿಯೇ ಅತಿ ಶ್ರೀಮಂತ, ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಯಕ್ಷರಾಜನಾದ ಕುಬೇರನು ಮಹಾಲಕ್ಷ್ಮಿಯನ್ನು ಪೂಜಿಸುವ ಶುಭದಿನ ಅಕ್ಷಯತೃತೀಯ.

ತ್ರೇತಾಯುಗ ಆರಂಭವಾದುದು ಇದೇ ದಿನದಂದು ಎಂಬ ನಂಬಿಕೆ ಜನಮಾನಸದಲ್ಲಿದೆ.
೧೨ನೇ ಶತಮಾನದ ಮಹಾಪುರುಷ ಜಗಜ್ಯೋತಿ ಬಸವೇಶ್ವರರು ಜನಿಸಿದ್ದು ಇದೇ ದಿನದಂದು.
ಪರಮ ಪವಿತ್ರಳಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ತಾನು ಪರಿಶುದ್ಧಳು ಎಂಬುದನ್ನು ಜವತ್ತಿಗೆ ಪ್ರಕಟಿಸಿದ್ದೂ ಅಕ್ಷಯತದಿಗೆಯ ದಿನ

ಲಂಕಾನಗರವು ಯಾರದು? ಎಂದು ಕೕೆಳಿದರೆ ಸಾಮಾನ್ಯವಾಗಿ ಎಲ್ಲರೂ ಕೊಡುವ ಉತ್ತರ ರಾವಣ, ಎಂದು.ವಾಸ್ತವವೆಂದರೆ ಲಂಕೆಯನ್ನು ನಿರ್ಮಿಸಿದವನು ಕುಬೇರ,ರಾವಣನ ಅಣ್ಣ.
ರಾವಣ ಅಣ್ಣನಿಂದ, ಲಂಕಾನಗರವನ್ನು
ವಶಪಡಿಸಿಕೊಂಡು,
ಕುಬೇರನನ್ನು ಉತ್ತರದಿಕ್ಕಿಗೆ ಓಡಿಸಿ ತಾನು ಲಂಕೇಶನಾದ. ಕುಬೇರನು ಲಂಕಾನಗರವನ್ನು ನಿರ್ಮಾಣ ಮಾಡಿಸುವಾಗ ಅಕ್ಷಯತೃತಿಯದಂದು ಸುವರ್ಣ ವಿಶ್ವಕರ್ಮರಿಂದ ಭೂಮಿಪೂಜೆಯನ್ನು ಮಾಡಿಸಿದ್ದನು.
ಇದರಿಂದ ಲಂಕಾನಗರವು ಸ್ವರ್ಣಲಂಕೆಯಾಯಿತು ಎಂದು ರಾಮಯಣದಲ್ಲಿ ಹೇಳಿದೆ.

ಅಕ್ಷಯ

ಕ್ಷಯ ಅಂದರೆ ನಾಶ. ನಾಶವಿಲ್ಲದ್ದು ಅಕ್ಷಯ.
ನಾಶವಾಗುವದು ತಾತ್ಕಾಲಿಕ. ನಾಶವಾಗದ್ದು ಶಾಶ್ವತ. ಮಾಡುವ ಕೆಲಸವಿರಲಿ, ಬೇಡುವ ಫಲವಿರಲಿ. ಎಲ್ಲದರಲ್ಲಿಯೂ ಎರಡು ವಿಧ. – ಕ್ಷಯ ಮತ್ತು ಅಕ್ಷಯ.

ಲೌಕಿಕ ಸಾಧನೆ, ಲೌಕಿಕ ಫಲ – ಎರಡೂ ಕ್ಷಯ – ತಾತ್ಕಾಲಿಕ.

ಪಾರಮಾರ್ಥಿಕ ಸಾಧನೆ, ಪರಮ ಪುರುಷಾರ್ಥ ಫಲ – ಈ ಎರಡೂ ಅಕ್ಷಯ. ನಾಶವಾಗದ ಸಾಧನೆ, ಮತ್ತು ಮೋಕ್ಷವೆಂಬ ಶಾಶ್ವತ ಸುಖಕ್ಕೆ ಕಾರಣ.

ಅಕ್ಷಯ ತೃತಿಯಾ – ಬಂಗಾರ ಕೊಂಡಿಟ್ಟುಕೊಳ್ಳಿ ಎನ್ನುತ್ತಾರೆ ಮನೆಯಲ್ಲಿ ಹಿರಿಯರು.
ಏನದು ಬಂಗಾರ? ಎಂಥ ಬಂಗಾರ?
ಮತ್ತೆ ಆಭರಣದ ಬಂಗಾರವಾದರೆ – ಅದು ತಾತ್ಕಾಲಿಕ.

ಇಂದು ನಮ್ಮದು, ನಾಳೆ ಮತ್ತೊಬ್ಬರದು. ಶಾಶ್ವತ, ನಾಶವಾಗದ ಬಂಗಾರ ಕೊಳ್ಳಿ ಎನ್ನುತ್ತಾರೆ ಜ್ಞಾನಿಗಳು.

‘ ರಂಗನಾಥನ ದಿವ್ಯ ಮಂಗಳ ನಾಮವೆಂಬ ಬಂಗಾರವಿಡಬಾರೆ’ ಇದು ನಿನಗೊಪ್ಪುವ ಬಂಗಾರ.

ಇದನ್ನೇ ಇಡು, ತೊಡು. ಶಾಶ್ವತ ಸುಖ ಸೂರಾಡು.- ಎನ್ನುತ್ತಾರೆ ಪುರಂದರವಿಠಲನಿಗೆ ಅತಿ ಪ್ರಿಯದಾಸರು.

ಹರಿನಾಮ ತಂದು ಕೊಡುವಂಥ ಸುಖವೇ ನಿಜವಾದ ಬಂಗಾರದಂಥ ಸುಖ. ಅದಕ್ಕೂ ಮಿಗಿಲೂ ಹೌದು. ಯಾಕೆ?
ಕಲಿಯುಗದಲ್ಲಿ ಹರಿನಾಮವೇ ಸಾಧಕ, ಮತ್ತೆ ತಾರಕ.

ಶರೀರ ನಾಶವಾಗುತ್ತದೆ. ಅದಕ್ಕಾಗಿ ಶರೀರ ವಿರುವವರೆಲ್ಲಾ ಕ್ಷರರು. ಲಕ್ಷ್ಮೀದೇವಿ ಅಪ್ರಾಕೃತ ಶರೀರೆ. ನಾಶವಿಲ್ಲ ಅವಳ ಶರೀರಕ್ಕೆ.ಅವಳು ‘ಅಕ್ಷರ’ಳು. ಈ ಕ್ಷರ ಅಕ್ಷರರಿಗಿಂತ ನಾನು ಉತ್ತಮ, ಪುರುಷೋತ್ತಮ. ಎಂದು ಸರ್ವೋತ್ತಮ ಶ್ರೀ ಕೃಷ್ಣ ಗೀತೆಯಲ್ಲಿ ಸಾರುತ್ತಾನೆ.

ಶ್ರೀ ಹರಿಯೇ ಕೃಷ್ಣ. ಅದಕ್ಕಾಗಿ ಹರಿನಾಮವೇ ಶ್ರೇಷ್ಠ. ಅದುವೇ ಬಂಗಾರ. ಅದಕ್ಕಾಗಿ ಈ ಬಂಗಾರ ಕೊಂಡುಕೊಳ್ಳಿ.ಹರಿನಾಮ ನಾಲಿಗೆ ಮೇಲಿರಲಿ ಎನ್ನುತ್ತಾರೆ ಹಿರಿಯರು.
ಮತ್ತೆ ಅಕ್ಷಯ ಫಲ ಕೊಡುವವನು ಶ್ರೀ ಹರಿಯೇ. ನಾವು ಪರಮಾತ್ಮನಿಗೆ ಕೊಡುವದು ಕ್ಷಯ ಮತ್ತು ಮಿತ. ಅದೂ ಅವನದೇ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ

ಆದರೆ ಆತನು ಕೊಡುವದು – ಅಕ್ಷಯ, ಅಮಿತ. ಅದಕ್ಕಾಗಿ ದಾಸರು ಹೇಳಿದ್ದು – ಕೊಟ್ಟಿದುದ ಅನಂತ ಮಡಿ ಮಾಡಿ ಕೊಡುವ.
ಆಪತ್ತಿನಲ್ಲಿ ದ್ರೌಪದಿ ಕೊಟ್ಟದ್ದೇನು? ಭಕ್ತಿ ಪುಷ್ಪ. ಕೃಷ್ಣ ಮರಳಿ ಕೊಟ್ಟದ್ದು ಅಕ್ಷಯ ವಸ್ತ್ರ.

ತೊಳೆದಿಟ್ಟ ಅಕ್ಷಯಪಾತ್ರೆಯಿಂದ ಅಕ್ಷಯ ಅಡಿಗೆ, ದ್ರೌಪದಿಗೆ ದೊರಕಿಸಿ ಕೊಟ್ಟಿದ್ದು ಶ್ರೀ ಕೃಷ್ಣನೇ.
ಒಪ್ಪಿಡಿ ಅವಲಕ್ಕಿಗೆ, ಕುಚೇಲನಿಗೆ ಅಖಿಳಾರ್ಥವ ಕೊಟ್ಟ ಕರುಣಾನಿಧಿ.
ತರಳ ಧ್ರುವರಾಯನಿಗೆ, ಭಕ್ತ ವಿಭೀಷಣನಿಗೆ ಅಕ್ಷಯ ಪಟ್ಟವನ್ನಿತ್ತ.

ಅಹಲ್ಯೆ ಅಕ್ಷಯ ಸೌಭಾಗ್ಯ, ಶಬರಿ ಸದ್ಗತಿ, ಪಡೆದರು. ಹನುಮಂತ ದೇವರು ಬೇಡಿ ನಿಜ ಭಕುತಿ ಪಡೆದವರು. ಜಯ ವಿಜಯರು ಅಕ್ಷಯ ಸುಖದ ಸದ್ಗತಿ ಪಡೆದರು.
ಅಕ್ಷಯ ದಾತನಿಂದ, ಅಕ್ಷಯ ಸುಖ ಪಡೆದವರ ಪಟ್ಟಿ ಅಕ್ಷಯವಾಗಿ ಬೆಳೆಯುತ್ತದೆ.
ಕೊನೆಗೆ ಮುಕ್ತರಿಗೆ ಯಾರು ಗತಿ?

ಶ್ರೀ ಮದಾಚಾರ್ಯರು ಹೇಳುತ್ತಾರೆ –
‘ ಆನಂದದಶ್ಚ ಮುಕ್ತಾನಾಂ ಸ ಏವ ಏಕೋ ಜನಾರ್ದನಃ’
ಏಕಮೇವ ಅದ್ವೀತೀಯ ಜನಾರ್ಧನ –
ಶ್ರೀ ವಿಷ್ಣುವೇ ಮುಕ್ತರಿಗೆ ಶಾಶ್ವತ ಅಕ್ಷಯ ಆನಂದ ಕೊಡುವವನು.

ಹಿರಿಯರು ಹೇಳಿದಂತೆ ಇಂದು ಬಂಗಾರ ಕೊಳ್ಳೋಣ. ಕೂಡಿಸಿ ಉಳಿಸಿ ಬೆಳೆಸೋಣ. ಹರಿನಾಮವೆಂಬ. ೨೪ ಕ್ಯಾರೆಟ್ ಗೂ ಅನಂತಮಡಿ ಮಿಗಿಲಾದ, ದಿವ್ಯ ಬಂಗಾರ – ಉಚ್ಛರಿಸಿದವರಿಗೆ ಅಕ್ಷಯ ಸುಖ ಕೊಡುವ. ಲಕ್ಷ್ಮೀ ನರಸಿಂಹನ ನಾಮ
ವೆಂಬ ಚೊಕ್ಕಬಂಗಾರ ಕೊಂಡಿಟ್ಟು, ಹೃದಯದಲ್ಲಿ ಉಳಿಸಿ ಬೆಳೆಸೋಣ.

ಅಕ್ಷಯತೃತಿಯ ದಿನ ಸ್ವರ್ಣವನ್ನ ಖರೀದಿಸಿದರೆ ಸುಖ ಸಮೃದ್ದಿ, ಐಶ್ವರ್ಯಸಮೃದ್ದಿಯಾಗುವುದು ಎಂಬ ನಂಬಿಕೆ ಜನರಲ್ಲಿ ಇತ್ತೀಚಿಗೆ ಬಂದಿದೆ.
ಮನೆಯಲ್ಲಿ ಬಂಗಾರವೂ ಅಕ್ಷಯವಾಗಲಿ ಎಂಬ ಚಿನ್ನದ ವ್ಯಾಮೋಹದ ಪರಿಣಾಮವಿದು.

ಬಹುಮುಖ್ಯವಾಗಿ_ಮಾಡಬೇಕಾದದ್ದು ದಾನ

ಮಾವಿನ ಹಣ್ಣಿನಕಾಲ ತಾಂಬೂಲ ದಕ್ಷಿಣೆಯೊಂದಿಗೆ ನಿಮ್ಮ ಕೈಲಾದಷ್ಟು ಬಡವರಿಗೆ ವಸ್ತ್ರಾಹಾರ ದಾನಮಾಡಿದರೆ
ಅದು ನಿಜವಾಗಿ ಲಕ್ಷ್ಮೀನಾರಾಯಣರಿಗೆ ತಲುಪಿ ಅವರ ಕೃಪಾಕಟಾಕ್ಷ ನಿಮ್ಮ ಮೇಲೆ ಅಕ್ಷಯವಾಗುವುದರಲ್ಲಿ ಯಾವ ಸಂಶಯವೂ ಇರುವುದಿಲ್ಲ
#ಅನುಕೂಲವಿದ್ದವರು_ಚಿನ್ನಬೆಳ್ಳಿಕೊಳ್ಳಿ ಇಲ್ಲದಿದ್ದರೂ ಶ್ರೀ ಲಕ್ಷ್ಮೀನಾರಾಯಣರಪೂಜೆ ಕುಬೇರನ ಸ್ಮರಣೆ ಸಮೇತ ಮಾಡಿ ಗುರುಗಳ ದಿವ್ಯ ದರ್ಶನ ಮಾಡಿ , ದಾನಧರ್ಮ ಮಾಡಿ ಎಲ್ಲರೂ ಅಧಿಕಸ್ಯ ಅಧಿಕ ಫಲವನ್ನು ಅಕ್ಷಯಗಳಿಸಿಕೊಳ್ಳಿ

ಅಕ್ಷಯ ತದಿಗೆಯು ಸರ್ವರಿಗೂ ಸುಖ-ಸಂತೋಷ-ಶಾಂತಿ-ಆರೋಗ್ಯ-ಸಂಪತ್ತು-ಸ್ನೇಹ-ಪ್ರೀತಿಗಳನ್ನು ಅಕ್ಷಯವಾಗಿಸಲಿ.
ಶುಭವಾಗಲಿಸರ್ವೇ ಜನಾಃ ಸುಖಿನೋ ಭವಂತು.ಈ ಅಕ್ಷಯ ಎಲ್ಲರ ಪಾಲಿಗೆ ಆರೋಗ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿ ಎಲ್ಲವನ್ನೂ ಕೊಡಲಿ ಅದೆಲ್ಲಾ ಅಕ್ಷಯವಾಗಲಿ

ಸಾಧ್ಯ ಆದರೆ ಅಂದು ವಿಷ್ಣು ಸಹಸ್ರನಾಮ ಮತ್ತು ಲಕ್ಷ್ಮಿ ಅಥವಾ ಲಲಿತ ಸಹಸ್ರ ನಾಮ ಪಠನೆ ಮಾಡಿದರೆ ಸಕಲ ಸೌಭಾಗ್ಯ ನಿಮದಾಗುತ್ತದೆ.

Leave a Reply

Your email address will not be published. Required fields are marked *

error: Content is protected !!