ಗಾನ ಗಾರುಡಿಗ ನಾವುಡರ ನೆನಪುಗಳು

ಯಕ್ಷಗಾನ ಲೋಕದಲ್ಲಿ ಇತಿಹಾಸವನ್ನು ಸ್ರಷ್ಟಿಸಿ ಇತಿಹಾಸವಾದ ಮಹಾನುಭಾವನ ಜೀವನಗಾಥೆಯಿದು. ಕೇವಲ ಕರಾವಳಿಗೆ ಸೀಮಿತವಾಗಿದ್ದ ಯಕ್ಷಗಾನ ಕಲೆಯನ್ನು ಸಾಗರದಾಚೆಗೆ ಕೊಂಡೊಯ್ದ ಕಲಾ ಪ್ರೇಮಿಯ ನೈಜ ಕಥೆಯಿದು. ಭಾಗವತಿಕೆಗೆ ಆಧುನಿಕ ಚೌಕಟ್ಟು ಹಾಕಿಕೊಟ್ಟ ಭಾಗವತನ ಬದುಕಿನ ಸತ್ಯ ಕಥೆಯಿದು.

ಶ್ರೀಮತಿ ಪದ್ಮಾವತಿ ಮತ್ತು ಶ್ರೀ ರಾಮಚಂದ್ರ ನಾವುಡ ದಂಪತಿಗಳ ಪುತ್ರರಾಗಿ ಕಾಳಿಂಗ ನಾವುಡರು 1958ರ ಜೂನ್ 6ನೇ ತಾರೀಕಿನಂದು ಉಡುಪಿ ಜಿಲ್ಲೆಯ ಕೋಟ ಸಮೀಪದ ಗುಂಡ್ಮಿ ಎಂಬಲ್ಲಿ ಜನಿಸಿದರು. ನಾವುಡರು ಚಿಕ್ಕ ಪ್ರಾಯದಲ್ಲಿ ಇರುವಾಗ ತಮ್ಮ ತಂದೆಯಿಂದ ಯಕ್ಷಗಾನ ಕ್ಷೇತ್ರದ ಕಡೆಗೆ ಆಕರ್ಷಿತರಾಗಿದ್ದರು. ಇವರ ಅಭಿರುಚಿಯನ್ನು ಗಮನಿಸಿದ ತಂದೆ ಮಗನನ್ನು ನಾರಣಪ್ಪ ಉಪ್ಪುರರ ಹತ್ತಿರ ಸೇರಿಸಿದರು. ನಾರಣಪ್ಪ ಉಪ್ಪುರರ ಹತ್ತಿರ ರಾಗ ತಾಳ ಶ್ರುತಿ ಅಭ್ಯಾಸ ಮಾಡಿ ಭಾಗವತಿಕೆ ಕಲಿತು ಯುವ ಭಾಗವತರಾದರು. ನಾವುಡರು ತಮ್ಮ 14 ನೇ ವಯಸ್ಸಿನಲ್ಲಿ ಮುಖ್ಯ ಭಾಗವತರಾಗಿ ಭಾಗವತಿಕೆ ಮಾಡಿದ್ದೂ ಸಾರ್ವಕಾಲಿಕ ದಾಖಲೆಯೇ ಸರಿ. ಚಿಕ್ಕ ವಯಸ್ಸಿನಲ್ಲಿ ಅಸಾಧ್ಯವಾದದನ್ನು ಮಾಡಿ ತೋರಿಸಿದ ಹೆಗ್ಗಳಿಕೆ ಕಾಳಿಂಗ ನಾವುಡರದ್ದು. ತಮ್ಮ ಮಾಂತ್ರಿಕ ಧ್ವನಿಯ ಮೂಲಕ ಅತಿಬೇಗ ಕರಾವಳಿಯಾಧ್ಯಂತ ಚಿರಪರಿಚಿತರಾದರು. ನಾರಣಪ್ಪ ಉಪ್ಪುರರ ಗರಡಿಯಲ್ಲಿ ಬೆಳೆದ ಶಿಷ್ಯ ಕೋಟಿಯಲ್ಲಿ ಕಾಳಿಂಗ ನಾವುಡರು ಒಂದು ಅಪರೂಪದ ಮಾಣಿಕ್ಯ ಎಂದರೆ ತಪ್ಪಾಗಲಾರದು.

ಪ್ರಾಪ್ತ ವಯಸ್ಸಿಗೆ ಬಂದಾಗ ನಾವುಡರು ವಿಜಯಶ್ರೀ ಎನ್ನುವ ವಧುವನ್ನು ಮದುವೆಯಾಗಿ ಆಗ್ನೇಯ ನಾವುಡ ಎನ್ನುವ ಪುತ್ರನನ್ನು ಪಡೆದು ಸುಖ ಸಂಸಾರ ನಡೆಸುತ್ತಿದ್ದರು.
ನಾವುಡರು 1972 ರಲ್ಲಿ ಕೋಟ ಅಮೃತೇಶ್ವರಿ ಮೇಳದಿಂದ ಭಾಗವತರಾಗಿ ತಮ್ಮ ಯಕ್ಷ ಸೇವೆ ಆರಂಭಿಸಿದರು.1977ರಲ್ಲಿ ವಿಜಯಶ್ರೀ ಮೇಳ(ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೇರ್ಡೂರು) ನಂತರ 1978 ರಿಂದ 1990 ತನಕ ಶ್ರೀ ಗುರು ಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮದಲ್ಲಿ ಕಲಾ ಸೇವೆ ಮಾಡಿದರು.

ಕಾಳಿಂಗ ನಾವುಡರು ಪಾಠ ಶಾಲೆಗೆ ಹೋಗಿ ಕಲಿತ ಪಾಠಕ್ಕಿಂತ ಜೀವನ ಎಂಬ ಪಾಠ ಶಾಲೆಯಲ್ಲಿ ಕಲಿತ ಪಾಠ ಬಹಳ ಹೆಚ್ಚು. ಯಕ್ಷಗಾನ ರಂಗದ ದ್ರುವತಾರೆ ಕರಾವಳಿಯ ಗಾನ ಕೋಗಿಲೆ ಯಕ್ಷಗಾನ ಕಲಾ ಕ್ಷೇತ್ರದಲ್ಲಿ ತನ್ನದೇ ಆದ ಶೈಲಿಯಲ್ಲಿ ಯಕ್ಷಕಲಾ ಕೃಷಿಮಾಡಿ ಯಕ್ಷಗಾನ ಕ್ಷೇತ್ರದ ಮೇರು ಪರ್ವತದಂತೆ ಇದ್ದವರು ಶ್ರೀಯುತ ಕಾಳಿಂಗ ನಾವುಡರು. ಪ್ರತಿಭಾವಂತರಾದ ನಾವುಡರು ತಮ್ಮ ಎಳೆಯ ವಯಸ್ಸಿನಲ್ಲಿಯೇ ಯಕ್ಷಗಾನದ ಒಳ ತೇಳವನ್ನು ತಿಳಿದುಕೊಂಡು ಗ್ರಾಮೀಣ ಕಲೆಗೆ ತಮ್ಮ ಗಾಯನದ ಮೂಲಕ ಹೊಸತನವನ್ನು ಸ್ರಷ್ಟಿಸಿದ ಕೀರ್ತಿ ಈ ಗಾನ ಗಾರುಡಿಗನಿಗೆ ಸಲ್ಲುತ್ತದೆ.

ಪೌರಾಣಿಕ ಕಥಾ ಸಾಗರದಿಂದ ಮಥಿಸಿ ತಂದ ನವನೀತದಂತಾ ಕಥಾ ವಸ್ತುಗಳನ್ನು ಪ್ರೇಕ್ಷಕಾಭಿಮನಿಗಳ ಮುಂದೆ ಪ್ರಸ್ತುತ ಪಡಿಸುವುದು ಯಕ್ಷಗಾನ ಕಲೆಯ ಹೀರಿಮೆ. ರಾಮನ ನೀತಿ ಭರತನ ಪ್ರೀತಿ ಜೀಮೂತನ ಆದರ್ಶ ಕರ್ಣನ ದಾನ ಕೃಷ್ಣನ ತಂತ್ರ ಇಲ್ಲಿ ಎಲ್ಲವೂ ಆದರ್ಶಮಯ. ಪ್ರತಿಯೊಬ್ಬರ ಜೀವನಕ್ಕೆ ಕನ್ನಡಿಯಂತೆ,ಸನ್ನಡೆತೆಯನ್ನು ಕಲಿಸಿ ಕೊಡುತ್ತವೆ ನಮ್ಮ ಪುರಾಣಗಳು.

ಅಮೃತಮತಿ, ಕಾಂಚನಶ್ರೀ, ವಿಜಯಶ್ರೀ, ರೂಪಶ್ರೀ, ಭಾಗ್ಯಶ್ರೀ, ನಾಗಶ್ರೀ, ಎನ್ನುವ ಸಾಮಾಜಿಕ ಪ್ರಸಂಗಗಳನ್ನು ಛಂದೋ ಬದ್ದವಾಗಿ ರಚಿಸಿ ಜನ ಮನ್ನಣೆ ಗಳಿಸಿದರು. ಅದರಲ್ಲೂ ನಾವುಡ ವಿರಚಿತ ನಾಗಶ್ರೀ ಪ್ರಸಂಗ ಆ ಕಾಲದಲ್ಲಿ 2000ಕ್ಕೂ ಹೇಚ್ಚು ಪ್ರದರ್ಶನ ಕಂಡಿರುವುದು ನಾವುಡರ ಕಲಾ ಚಮತ್ಕಾರಕ್ಕೆ ಹಿಡಿದ ಕೈಗನ್ನಡಿ. ನಾವುಡರು ತಾವೇ ರಚಿಸಿ ತಮ್ಮ ಸುಮದುರ ಧ್ವನಿಯಿಂದ ಹಾಡಿದ ನೀಲ ಗಗನದೊಳು ಮೇಘಗಳ ಕಂಡಾಗಲೇ ನವಿಲು ಕುಣಿಯುತ್ತಿದೆ ನೋಡ….. ಹಾಗೂ ಎಲ್ಲೆಲ್ಲೂ ಸೊಬಗಿದೆ ಎಲ್ಲೆಲ್ಲೂ ಸೊಗಸಿದೆ ಮಾಮರವು ಕೂತಿದೆ ಸೊಬಗೇರಿ ನಿಂತಿದೆ ಎನ್ನುವ ಪದ್ಯಗಳು ಅಂದಿಗೂ ಹಿಟ್ ಇಂದಿಗೂ ಹಿಟ್ ಎಂದೆಂದಿಗೂ ಹಿಟ್. ಯಾವುದೇ ಉನ್ನತ ಶಿಕ್ಷಣವಿಲ್ಲದ ನಾವುಡರು ಶಿವರಂಜಿನಿ, ಚಕ್ರವಾಕ, ರೇವತಿ, ಕಲಾವತಿ, ಚಾಂದ್, ಬಿಹಾಗ್ ಮುಂತಾದ ರಾಗಗಳನ್ನು ಯಕ್ಷಗಾನಕ್ಕೆ ಅಳವಡಿಸಿ ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆದರು.

ಯಕ್ಷಗಾನದ ಇತಿಹಾಸದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿ ಕಂಚಿನ ಕಂಠ ಸಿರಿಯಾ ವಿನೂತನ ಆಲೋಚನೆಗಳ ಆಗರವಾಗಿರುವ ತನ್ನ ರಕ್ತದ ಕಣ ಕಣದಲ್ಲೂ ಯಕ್ಷಗಾನ ಕಲೆಯನ್ನು ತುಂಬಿಕೊಂಡ ಕರಾವಳಿಯ ಯಕ್ಷ ಕಲೆಯ ಕೀರ್ತಿ ಕಳಶದಂತೆ ಇದ್ದವರು ಶ್ರೀಯುತ ನಾವುಡರು.

1988 ಬ್ಯಾರಿನ್ ನಲ್ಲಿ ನಡೆದ ಕನ್ನಡ ಕೂಟ ಸಮಾರಂಭದಲ್ಲಿ ನಾವುಡರ ಭಾಗವತಿಕೆ ನೆರೆದವರ ಮನ ಸೂರೆ ಗೊಂಡಿತ್ತು. ಕಾಳಿಂಗ ನಾವುಡರು ಹಾಗೂ ಚಿಟ್ಟಾಣಿ ರಾಮಚಂದ್ರ ಹೆಗ್ಗಡೆ ಅವರು ಆ ಕಾಲದಲ್ಲಿ ಮುಂಬೈನಲ್ಲಿ ಒಂದೇ ವರ್ಷದಲ್ಲಿ ಭಸ್ಮಾಸುರ ಮೋಹಿನಿ ಪ್ರಸಂಗವನ್ನು 40ಕ್ಕೂ ಹೇಚ್ಚು ಬಾರಿ ಪ್ರದರ್ಶಿಸಿದ್ದಾರೆ ಎಂದು ನಾವುಡರ ಸಮಕಾಲೀನರು ಹೇಳುತ್ತಾರೆ.

ಪೌರಾಣಿಕ ಪ್ರಸಂಗದ ಪದ್ಯಗಳನ್ನು ಹೇಗೆ ಹಾಡಬೇಕು ಎನ್ನುವುದನ್ನು ಹಾಡಿ ತೋರಿಸಿದವರು ನಾವುಡರು. ನಾವುಡರು ನಮ್ಮನ್ನು ಅಗಲಿ 28 ವರ್ಷಗಳು ಕಳೆದರು ನಾವುಡರ ಹಾಡುಗಳು ಇಂದಿಗೂ ಯಕ್ಷರಂಗದಲ್ಲಿ ನಿತ್ಯ ನೂತನ.
19ನೇ ಶತಮಾನದ ಯಕ್ಷಗಾನದ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಕಾಲ ಅದು ನಾವುಡರು ಕರಾವಳಿಯ ಪ್ರತಿ ಮನೆ ಮನೆಯಲ್ಲೂ ಕೂಡ ಮನೆ ಮಗನಾಗಿ,ಮನೆಮಾತಾಗಿದ್ದರು. ನಾವುಡರು ತಾವು ಬೆಳೆದರು ಯಕ್ಷಗಾನ ಕಲೆಯನ್ನು ಬೆಳೆಸಿದರು. ನಾವುಡರು ಯಕ್ಷ ಮಾತೆಯ ಮುತ್ತಿನ ಮೂಗುತಿಯಂತೆ ಮಿನುಗಿದ ಶ್ರಾವಣ ಕಾಲವದು.

ಹೀಗೆ ಯಕ್ಷಗಾನ ಲೋಕದಲ್ಲಿ ಅಲ್ಪ ಕಾಲದಲ್ಲಿ ದೊಡ್ಡ ಹೆಸರು ಮಾಡಿದ ಯಕ್ಷ ದ್ರುವತಾರೆ ರಸ ರಾಗ ಚಕ್ರವರ್ತಿಯ ಬಂಗಾರದ ಬಾಳಿಗೆ ಅದ್ಯಾರ ಕೆಟ್ಟ ದ್ರಷ್ಟಿ ಬಿತ್ತೋ ತಿಳಿಯದು. ರಾಜ್ಯ ದೇಶ ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ ಯಕ್ಷಗಾನದ ಮೇರು ಭಾಗವತನ ಬದುಕಿಗೆ ಮಹಾನ್ ಕಂಟಕ ಒದಗಿ ಬಂದೇ ಬಿಟ್ಟಿತು. ಕಾಳಿಂಗ ನಾವುಡರು ಅತೀ ಚಿಕ್ಕ ವಯಸ್ಸಿನಲ್ಲಿ ಅಂದರೆ ತಮ್ಮ ಒಟ್ಟು ಬದುಕಿನ 32 ನೇ ವಯಸ್ಸಿನಲ್ಲಿ ಮೇ 27 1990 ರಂದು ರಸ್ತೆ ಅಪಘಾತದಲ್ಲಿ ವಿಧಿವಶರಾದರು. ಎಲ್ಲಾ ಪತ್ರಿಕೆಗಳ ಮುಖ ಪುಟದಲ್ಲಿ ನಾವುಡರ ಸಾವಿನ ಸುದ್ದಿ ಬಿತ್ತರಗೊಂಡಿತು.

ಮೇ 27ನೇ ತಾರೀಕು 1990ನೇ ಇಸವಿ ಸದಾ ಕಂಚಿನ ಕಂಠದ ನಾವುಡರ ಗಾನ ಕೇಳುತಿದ್ದ ಕಿವಿಗಳಿಗೆ ನಾವುಡ ಸಾವಿನ ಸುದ್ದಿ ಬರ ಸಿಡಿಲಿನಂತೆ ಅಪ್ಪಳಿಸಿತು. ಯಕ್ಷಗಾನದ ಕೀರ್ತಿಯ ಕಳಶ ಕಳುಚಿ ಬಿದ್ದ ದಿನವದು. ಯಕ್ಷಗಾನ ಹೃದಯ ಸಾಮ್ರಾಟ ಶ್ರೀಯುತ ಕಾಳಿಂಗ ನಾವುಡರ ಹೃದಯ ಬಡಿತ ನಿಂತು ಹೋದ ದಿನ. ಯಕ್ಷಗಾನವನ್ನು ಉಸಿರಾಗಿಸಿಕೊಂಡ ಯಕ್ಷಗಾನ ಕಲಾ ಭೂಷಣ ನಾವುಡರ ಆತ್ಮ ಯಕ್ಷ ಮಾತೆಯ ಮಡಿಲು ಸೇರಿದ ದಿನ. ಮೇ ತಿಂಗಳ ಕೊನೆಯಲ್ಲಿ ಆರಂಭವಾದ ಮುಂಗಾರು ಎಲ್ಲರ ಮುಖದಲ್ಲಿ ಹರ್ಷ ತರುವ ಬದಲು ನಾವುಡರ ಸಾವಿನ ಸೂತಕ ಹೊತ್ತು ತಂದಿದಂತೂ ನಿಜ. ಲಕ್ಷ ಲಕ್ಷ ಪ್ರದರ್ಶನ ಮಾಡಿ ಕೋಟಿ ಕೋಟಿ ಅಭಿಮಾನಿಗಳ ಆರಾಧ್ಯ ದೈವವಾಗಿದ್ದ ಕಾಳಿಂಗ ನಾವುಡರ ದಿವ್ಯಾತ್ಮ ಪರಮಾತ್ಮನ ಪಾದ ಸೇರಿದ ದಿನವದು. ಸಪ್ತ ಸ್ವರಗಳನ್ನು ಸುಲಲಿತವಾಗಿ ನುಡಿಸುತ್ತಿದ್ದ ಧೀಮಂತ ಭಾಗವತನ ಧ್ವನಿ ಮೌನವಾದ ದಿನ. ಎಂದೂ ಮರೆಯದ ಮಾಣಿಕ್ಯ ಯಕ್ಷರಂಗದಿಂದ ಮರೆಯದ ದಿನ. ಒಟ್ಟಾರೆ ಹೇಳಬೇಕೆಂದರೆ ಯಕ್ಷಗಾನ ಇತಿಹಾಸದಲ್ಲಿ 1990 ಮೇ 27 ನೇ ತಾರೀಕು “ಕಪ್ಪು ದಿನ” ನಾವು ನಮ್ಮ ನಾವುಡರನ್ನು ಕಳೆದುಕೊಂಡ ದುಃಖದ ದಿನ.

ನಾವುಡರ ದುರ್ಮರಣದಿಂದ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅಂದು ನಾವುಡರ ಸುಮಧುರವಾದ ಭಾಗವತಿಕೆಯನ್ನು ಆಸ್ವಾದಿಸಿದ ಜನರು ಮತ್ತೋಮ್ಮೆ ನಾವುಡರು ಹುಟ್ಟಿ ಬರಲಿ ಮತ್ತೆ ಕರಾವಳಿಯ ಮಣ್ಣಿನಲ್ಲಿ ನಾವುಡರ ಗಾಯನ ಮಾರ್ದನಿಸಲಿ ಎಂದು ಕಾಯುತ್ತಿದ್ದಾರೆ. ಕಾಳಿಂಗ ನಾವುಡರ ಕಾಯ ಅಳಿದಿರಬಹುದು ಆದರೆ ಅವರ ಕೀರ್ತಿ ಅಜರಾಮರ,ಪ್ರತಿಯೊಬ್ಬ ಯಕ್ಷಪ್ರೇಮಿಯ ಹೃದಯದ ಬಡಿತದೊಂದಿಗೆ ಕಾಳಿಂಗ ನಾವುಡರು ಎಂದೆಂದಿಗೂ ಅಮರ.

Leave a Reply

Your email address will not be published. Required fields are marked *

error: Content is protected !!