ಡೇಂಜರ್ ಮನುಷ್ಯ ಹೊರಟೇ ಹೋದ…

ಹೌದು; ಈತ ಒಬ್ಬ ಇಂಟಲೆಕ್ಟುವಲ್ ಮನುಷ್ಯ. ಕೈಕಾಲು ಸರಿ ಇದ್ದಾಗ ಎಲ್ಲರ ಕೈಕಾಲುಗಳಿಗೆ ನಡುಕ ಬರಿಸಿದವನೇ. ಪಾಲಿಟಿಶಿಯನ್ನರಂತೂ ಇವನ ಸ್ವರ ಕೇಳಿ ಮೈಲು ದೂರ ಓಡ್ಹೋಗುತ್ತಿದ್ದರು. ಸರಕಾರಿ ವ್ಯವಸ್ಥೆಯ ಕಥೆ ಹಾಗಿರಲಿ; ನ್ಯಾಯ ದೇವತೆ ಎಂಬಂತ್ತಿದ್ದ ಹೈಕೋರ್ಟೇ ಈತನ ಮೇಲೆ ‘ಡೋಂಟ್ ಟಾಕ್’ ಎಂಬ ಹುಕುಂ ಜಾರಿಗೊಳಿಸಿತ್ತು

ಅದೂ ನಮ್ಮೂರಿನ ಮಣಿಪಾಲಕ್ಕೆ ಬಂದಿದ್ದಾಗ! ಆಗಲೂ ವಿಚಲಿತನಾದ ಈ ಐಎಎಸ್ ಅಧಿಕಾರಿ ಸ್ಟೇಜಿನ ಮೇಲೆ ಮೂಕನಂತೆ ಕುಳಿತಿದ್ದರೂ, ವೇದಿಕೆಯಿಂದ ಕೆಳಗಿಳಿಯುತ್ತಲೇ ಮಾತಿನ ಸುರಿಮಳೆ ಗೈದಿದ್ದಾನೆ. ಇಷ್ಟಕ್ಕೂ ಈ ಮನುಷ್ಯ ಮಾಡಿದ ಸಮಾಜೋದ್ದಾರದ ಕೆಲಸವಾದರೂ ಏನು? ಜನರಿಗೆ ಈತ ಒಳಿತನ್ನು ಮಾಡಿದನಾ? ಕೆಡುಕು ಮಾಡಿದನಾ? ಖುಲ್ಲಂಖುಲ್ಲಾ ಸತ್ಯ ಸಂಗತಿಗಳು ಇಲ್ಲಿದ್ದಾವೆ.


ಇವತ್ತಿಗೆ ನಾವೆಲ್ಲಾ ಓಟು ಹಾಕಬೇಕಾದರೆ ವೋಟರ್ ಐಡಿ ಎಂಬುದೊಂದು ಬೇಕೇ ಬೇಕು. ಆದರೆ ಅಂಥದ್ದೊಂದು ಅಗತ್ಯತೆಯ ಬಗ್ಗೆ ಹೇಳಿದವರು ಕಾಂಗ್ರೆಸ್ಸಿಗರೂ ಅಲ್ಲ; ಬಿಜೆಪಿಯವರೂ ಅಲ್ಲ; ಜೆಡಿಎಸ್ಸು-ಕಮ್ಯುನಿಸ್ಟು-ಶಿವಸೇನೆ-ಸಮಾಜವಾದಿ ಇವರ್‍ಯಾರೂ ಅಲ್ಲವೇ ಅಲ್ಲ. ಇವತ್ತಿಗೆ ಇಪ್ಪತ್ತೊಂಬತ್ತು ವರುಷಗಳ ಹಿಂದೆ ಐಎಎಸ್ ಅಧಿಕಾರಿಯೊಬ್ಬ ಜಾರಿಗೆ ತಂದ ರೂಲ್ಸು ಭಾರತೀಯರಲ್ಲಿ ಹೊಸ ಜಾಗೃತಿಯನ್ನೇ ಎಬ್ಬಿಸಿಬಿಟ್ಟಿದೆ. ನೀವು-ನಾವು ಎಲ್ಲರೂ ಮೊನ್ನೆ ತನಕ ಆ ಮನುಷ್ಯನನ್ನ ಮರೆತೇ ಬಿಟ್ಟಿದ್ದೆವು. ಇವತ್ತ್ಯಾಕೋ ನೆನಪಾಗುತ್ತಿದ್ದಾನೆ. ವಿಚಾರವಾದಿ ಅಂತಲೇ ಗುರುತಿಸಿಕೊಂಡ ಈತ ಓಟುದಾರರಿಗೆ ನಿಯಮ ಜಾರಿಗೊಳಿಸಿದ್ದಷ್ಟೇ ಅಲ್ಲ; ಎಲೆಕ್ಷನ್ನಿಗೆ ನಿಂತ ಕ್ಯಾಂಡಿಡೇಟುಗಳ ಖರ್ಚು-ವೆಚ್ಚಗಳಿಗೂ ಕಡಿವಾಣವನ್ನು ಹಾಕಿದ್ದು ಸುಳ್ಳೇನಲ್ಲ.


ಈತ ಬೇರಾರೂ ಅಲ್ಲ; ತಿರುನೆಲ್ಲೈ ನಾರಾಯಣ ಶೇಷನ್! 1955 ರ ಬ್ಯಾಚ್‌ನ ಐ.ಎ.ಎಸ್ ಅಧಿಕಾರಿ.

1990 ರಿಂದ 1996 ರ ಅವಧಿಯಲ್ಲಿ ಎಲ್ಲೆಲ್ಲೂ ಇವರದ್ದೇ ಹೆಸರು ಪ್ರತಿಧ್ವನಿಸುತ್ತಿತ್ತು. ದಿನ ಬೆಳಗಾದರೆ ಸಾಕು; ಅದ್ಯಾವ ಸ್ಟೇಟ್‌ಮೆಂಟು ಕೊಡ್ತಾರಾ? ಅದೇನನ್ನು ಅನೌನ್ಸ್ ಮಾಡ್ತಾರಾ? ಅದ್ಯಾರ ಬಗ್ಗೆ ಹೇಳ್ತಾರಾ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿದ್ದಂತೂ ಸುಳ್ಳಲ್ಲ.
ಇಂಥ ಶೇಷನ್ ಇವತ್ತಿಗೆ 29 ವರ್ಷಗಳ ಹಿಂದೆ ಭಾರತದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಅದೆಂಥ ಅಟ್ಟಹಾಸ ಮಾಡಿದ್ದಾರೆಂಬುದಕ್ಕೆ ನೂರಾರು ಸಾಕ್ಷ್ಯಗಳಿದ್ದಾವೆ. ಭಾರತೀಯ ಮತದಾರನಿಗೆ ವೋಟರ್ ಐಡಿ ಎಂಬುದು ಕಡ್ಡಾಯಗೊಳಿಸಿದ್ದೇ ಈ ಮನುಷ್ಯ. ಆ ದಿನಗಳಲ್ಲಿ ಶೇಷನ್‌ರು ಕಟ್ಟುನಿಟ್ಟು ಜಾರಿಗೊಳಿಸಿದ ನಿಯಮಗಳು ಜಾರಿಯಾಗಲು ಕೆಲವು ವರುಷಗಳೇ ಬೇಕಾಗಿ ಬಂತು.
ಹಾಗಂತ ಮುಖ್ಯ ಚುನಾವಣಾ ಆಯುಕ್ತರಾದ ಪ್ರಥಮ ವ್ಯಕ್ತಿ ಶೇಷನ್‌ರೇನಲ್ಲ. ಅವರಿಗಿಂತ ಮೊದಲು ಒಂಬತ್ತು ಜನ ಈ ಗಾದಿಯಲ್ಲಿ ಕುಳಿತು ಇಳಿದವರೇ. ಆದರೆ ಈ ಸಾಂವಿಧಾನಿಕ ಹುದ್ದೆಯನ್ನು ಅವರೆಲ್ಲರೂ ಎಂಜಾಯ್ ಮಾಡಿದರೇ ವಿನಹ ಶೇಷನ್‌ರಂತೆ ಕೆಲ್ಸ ಮಾಡ್ಲಿಕ್ಕೆ ಹೋಗಲೆ ಇಲ್ಲ.


ಹಾಗೆ ಹೇಳಲು ಹೊರಟರೆ, ಮುಖ್ಯ ಚುನಾವಣಾ ಆಯುಕ್ತರ ಪವರ್ ಏನೆಂಬುದನ್ನು ತೊರಿಸಿಕೊಟ್ಟವರೇ ಟಿ.ಎನ್.ಶೇಷನ್. ಇವರು ಮಾಡಿದ ಮತ್ತೊಂದು ಮಹತ್ತರ ಕಾರ್ಯವೇನೆಂದರೆ, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ವೆಚ್ಚ ನಿಗದಿಪಡಿಸಿದ್ದು. ಇದು ರಾಷ್ಟ್ರಾದ್ಯಂತ ಕೋಲಾಹಲವನ್ನೇ ಎಬ್ಬಿಸಿಬಿಟ್ಟಿತ್ತು. ಪ್ರತಿಯೊಬ್ಬ ಅಭ್ಯರ್ಥಿ ಅಳತೆ ತೂಗಿ ಖರ್ಚು ಮಾಡುವ ಸ್ಥಿತಿಗೆ ತಲುಪಿದ್ದಿದ್ದರೆ ಅದರ ಕೀರ್ತಿ ಸಲ್ಲಬೇಕಾದ್ದು ಶೇಷನ್‌ರಿಗಲ್ಲದೇ ಬೇರಾರಿಗೂ ಅಲ್ಲ.
ಆದರೆ ಈಗ್ಗೆ ಏನಾಗಿ ಹೋಗಿದೆ? ಕಾಂಗ್ರೆಸ್ಸಿಗರು ಅಧಿಕಾರದಲ್ಲಿದ್ದಾಗ ಬಿಜೆಪಿ ಅಭ್ಯರ್ಥಿಗಳ ಮೇಲೆ ದಾಳಿ ಮಾಡಿಸಿದರೆ, ಈಗ ಅಧಿಕಾರದಲ್ಲಿರುವ ಬಿಜೆಪಿಯು ಕಾಂಗ್ರೆಸ್ಸಿನ ಕ್ಯಾಂಡಿಡೇಟುಗಳ ಮೇಲೆ ರೇಡು ಮಾಡಿಸುತ್ತಿದ್ದಾರೆ. ಶೇಷನ್‌ರಂಥ ಎದೆಗಾರಿಕೆಯ ಒಬ್ಬನೇ ಒಬ್ಬ ಗಂಡಸು ಆ ಸ್ಥಾನದಲ್ಲಿ ಇಲ್ಲದಿರುವುದೇ ರಾಜಕೀಯ ದಾಳವಾಗಿ ಶೇಷನ್‌ರ ಕಾನೂನು ಪರಿವರ್ತಿತವಾಗಲು ಕಾರಣವಾಯ್ತು.
ಇವತ್ತಿಗೆ ಮುಖ್ಯ ಚುನಾವಣಾ ಆಯುಕ್ತ ಎಂಬ ಈ ಸ್ಥಾನವು ಆಡಳಿತಾರೂಢ ಪಕ್ಷಗಳ ಆಡಂಬೋಲವಾಗಿ ಪರಿಣಮಿಸಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರಿಗೆ ಬೇಕಾದವರನ್ನೇ ಅವರಿಗೆ ಬೇಕಾದವರನ್ನೇ ಈ ಪೀಠಕ್ಕೆ ತಂದು ಕೂರಿಸಿದ್ದರೆ, ನರೇಂದ್ರ ಮೋದಿಯವರು ಅದೇ ಪಥದಲ್ಲಿ. ಹಾಗೆ ನೋಡಲು ಹೋದರೆ ಅಟಲ್ ಬಿಹಾರಿ ವಾಜಪೇಯಿ ಇದ್ದಾಗ ಮಾತ್ರ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಮಾಡಿರಲಿಲ್ಲ. ಮಿಕ್ಕುಳಿದವರೆಲ್ಲಾ ತಮ್ಮ ಕೈಗೊಂಬೆಗಳನ್ನೇ ಆ ಸ್ಥಾನಕ್ಕೆ ತಂದು ಕೂರಿಸಿದ್ದು ರಹಸ್ಯವೇನೂ ಅಲ್ಲ.

ಪ್ರಾಯಶಃ ಹೊಲಸು ರಾಜಕಾರಣದ ಇವತ್ತಿನ ದಿನಗಳಲ್ಲಿ ಶೇಷನ್‌ರಂತಹ ಅಧಿಕಾರಿ ಇರುತ್ತಿದ್ದರೆ ಇವಿಎಂನ ಬಗ್ಗೆ ಸಂದೇಹಗಳೇ ಕೇಳಿ ಬರುತ್ತಿರಲಿಲ್ಲ. ಒಂದು ವೇಳೆ ಹಾಗೇನಾದರೂ ಯಾರಾದರೊಬ್ಬ ರಾಜಕಾರಣಿ ಕಾಂಟ್ರಾವರ್ಸಿ ಸ್ಟೇಟ್‌ಮೆಂಟ್ ಕೊಡುತ್ತಿದ್ದರೆ ಆತನನ್ನು ಜೈಲಿಗೆ ಕಳುಹಿಸುತ್ತಿದ್ದವರಲ್ಲಿ ಶೇಷನ್‌ರೇ ಮೊಟ್ಟ ಮೊದಲಿಗರಾಗಿರುತ್ತಿದ್ದರು.

ಆದರೆ ಇವತ್ತಿಗೆ ಚುನಾವಣಾ ವ್ಯವಸ್ಥೆ ಅದೆಷ್ಟು ಹದಗೆಟ್ಟಿದೆ ಅಂದರೆ ಎಲೆಕ್ಷನ್ ಕಮೀಷನರ್‌ರಿಗೆ ಚುನಾವಣಾ ದಿನಾಂಕ ಹಾಗೂ ವೇಳಾಪಟ್ಟಿಯನ್ನು ಅನೌನ್ಸ್ ಮಾಡಲು ಪ್ರಧಾನಿಯ ಹುಕುಂ ಬೇಕೇ ಬೇಕು. ಪ್ರಾಯಶಃ ತಾನು ಬದುಕಿದ್ದಾಗಲೇ ತಾನು ಸೃಷ್ಠಿಸಿದ ವಿನೂತನ ಕಾಯ್ದೆ ಇಂತಹ ವಿಪರ್ಯಾಸಕ್ಕೆ ಒಳಗಾಯ್ತಲ್ಲ ಎಂಬ ಚಿಂತೆಯಿಂದಲೇ ಬೇಗ ಹೊರಟು ಹೋದರು ಎಂಬುದಂತೂ ಸುಳ್ಳೇನಲ್ಲ.

ಖೈರ್ನಾರ್, ಮೀನಾರೂ ಫುಟ್‌ಬಾಲ್‌ಗಳಂತಾದರು…
ಟಿ.ಎನ್.ಶೇಷನ್‌ರಂತೆಯೇ ಸ್ವಚ್ಛ, ದಕ್ಷ, ನಿರ್ಭೀತ ಅಧಿಕಾರ ನಡೆಸಿದವರ ಸಾಲಿನಲ್ಲಿ ಕೇಳಿಬರುವ ಇನ್ನೊಂದು ಹೆಸರೇ ಖೈರ್ನಾರ್. ಬೃಹತ್ ಮುಂಬಯಿ ಮಹಾನಗರ ಪಾಲಿಕೆಯ ಕಮೀಷನರ್ ಆಗಿದ್ದ ಖೈರ್ನಾರ್ ಮಾಯಾನಗರಿ ಮುಂಬಯಿಯ ಬಹುತೇಕ ಅಕ್ರಮ ಬಹುಮಹಡಿ ಕಟ್ಟಡಗಳನ್ನು ನೆಲಸಮ ಮಾಡಿದ್ದರು. ಇಂಥ ಕೆಲಸವನ್ನು ಖೈರ್ನಾರ್ ಹೊರತುಪಡಿಸಿ ಇನ್ಯಾರೂ ಮಾಡಿದ್ದೇ ಇಲ್ಲ.

ಮೊನ್ನೆ ತನಕ ಮುಂಬಯಿಯನ್ನು ಆಳಿದ ಭಾರತೀಯ ಜನತಾ ಪಕ್ಷವಿರಲಿ, ಇಲ್ಲಿ ಹಿಂದೊಮ್ಮೆ ವೈಭವೋಪೇತ ಮೆರೆದಾಡಿದ ಕಾಂಗ್ರೆಸ್ಸಾಗಿರಲಿ, ಶರದ್ ಪವಾರ್‌ರ ಎಸ್‌ಸಿಪಿ ಆಗಿರಲಿ ಅಥವಾ ಮುಂಬಯಿಯ ನಾಡಿಮಿಡಿತ ಅರಿತಿರುವ ಶಿವಸೇನೆಯಾಗಿರಲಿ ಯಾರೂ ಖೈರ್ನಾರ್‌ರ ದಿಟ್ಟ, ನಿರ್ದಾಕ್ಷಿಣ್ಯ ಕ್ರಮದಂತಹ ಆಕ್ಷನ್ನಿಗೆ ಮುಂದಾಗಲೇ ಇಲ್ಲ. ಕೇವಲ ನೋಟೀಸು ನೀಡುತ್ತಿದ್ದರು. ಒಂದಿಷ್ಟು ಗಿಟ್ಟಿಸಿಕೊಳ್ಳುತ್ತಿದ್ದರು ಅಷ್ಟೇ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನಾಳಿದ ಜಿಲ್ಲಾಧಿಕಾರಿ ಭರತ್‌ಲಾಲ್ ಮೀನಾರೂ ಇದೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಮಂಗಳೂರಿನ ರೋಡುಗಳಲ್ಲಿ ಇವತ್ತಿಗೆ ವಾಹನಗಳು ಓಡಾಡುವಂತಾಗಿದ್ದರೆ ಅದರ ಋಣ ಸಂದಾಯ ಮಾಡಬೇಕಾದ್ದು ಭರತ್‌ಲಾಲ್ ಮೀನಾರಿಗೇ. ಅದ್ಯಾವ ದಿನದಂದು ಅವರು ಉಡುಪಿ ಕಲ್ಸಂಕ ಸೇತುವೆ ಸನಿಹಕ್ಕೆ ಬಂದು ರಸ್ತೆ ಅಗಲೀಕರಣಕ್ಕೆ ಟಾರ್ಚ್‌ಲೈಟ್ ಹಾಕಿದರೋ ಅದೇ ಹೊತ್ತಿಗೆ ಮೀನಾರ ಟ್ರಾನ್ಸ್‌ಫರ್ ಆಗೇ ಬಿಡ್ತು. ಹೀಗೆ ಆಡಳಿತಾರೂಢರು ಐಎಎಸ್ ಅಧಿಕಾರಿಯವರನ್ನು ತಮ್ಮ ಕುಣಿಕೆಗೆ ತಕ್ಕಂತೆ ಕುಣಿಯದಿದ್ದರೆ ಅದ್ಯಾವ ಸೀಮೆಗೆ ತಳ್ಳುತ್ತಾರೆ ಎಂಬುದಕ್ಕೆ ಜೀವಂತ ನಿದರ್ಶನಗಳಿವು.

.ಎಸ್ಸೆನ್ ಕೆ

ಕಾದು ನೋಡಿ…
ಎಲ್ಲೀ ಮರೆಯಾದೆ.. ಯಾಕೇ ದೂರಾದೇ.. ಇದು ನಮ್ ನಿಮ್ ವಿಷ್ಯ ಅಲ್ಲ; ಡಿಸ್ಟ್ರಿಕ್ಟ್ ಮಿನಿಸ್ಟರ್ ಬೊಮ್ಮಯಿದ್ದು.. ರಿಯಾಲಿಟಿ ವಿಥ್ ಪ್ರೂಫ್ ನಿರೀಕ್ಷಿಸಿ…

Leave a Reply

Your email address will not be published. Required fields are marked *

error: Content is protected !!