ಸಪ್ಟೆಂಬರ್ 8 : ಮಾತೆ ಮರಿಯಮ್ಮನವರ ಹುಟ್ಟುಹಬ್ಬ “ಮೋಂತಿ ಹಬ್ಬ”

ಇತಿಹಾಸದತ್ತ ಒಂದು ನೋಟ

ಗೋವಾದಿಂದ ಮಂಗಳೂರಿನವರೆಗೆ ಸಕಲ ಕೊಂಕಣಿ ಕೆಥೋಲಿಕ್ ಕ್ರೈಸ್ತರು ಮೋಂತಿ ಹಬ್ಬವನ್ನು ಆಚರಿಸುತ್ತಾರೆ. ಅದರಲ್ಲೂ ಮಂಗಳೂರಿನಿಂದ ಹೊನ್ನಾವರದವರೆಗೆ ಹರಡಿರುವ ಮಂಗಳೂರು ಕೊಂಕಣಿ ಕೆಥೋಲಿಕ್ ಕ್ರೈಸ್ತರು ಇದನ್ನು ಬಹಳ ವಿಜ್ರಂಭನೆಯಿಂದ ವಿಶಿಷ್ಠವಾಗಿ ಆಚರಿಸುವುದು ಒಂದು ವಿಶೇಷ.

ಮಂಗಳೂರು, ಕಾರವಾರ, ಗೋವಾ, ಸಿಂಧುದುರ್ಗ ಕೆಥೋಲಿಕ್ ಧರ್ಮ ಪ್ರಾಂತ್ಯಗಳಲ್ಲಿ ಸಪ್ಟೆಂಬರ್ 8ರಂದು ಮರಿಯಮ್ಮರ ಹುಟ್ಟು ಹಬ್ಬವಾಗಿ ಮೋಂತಿಹಬ್ಬದ ಆಚರಣೆಯಾದರೆ ದೇಶದ ಇತರ ಭಾಗಗಳಲ್ಲಿ ವಾಸಿಸುವ ಮೂಲ ಕೊಂಕಣಿ ಕ್ರೈಸ್ತರು ಸಪ್ಟಂಬರ್ 8ರ ನಂತರದ ದಿನಗಳಲ್ಲಿ ತಮ್ಮ ಅನುಕೂಲತೆಯಂತೆ ಜತೆಸೇರಿ ಆಚರಿಸುವುದು ಇನ್ನೊಂದು ವಿಶೇಷ.

ಮಂಗಳೂರು ಕೊಂಕಣಿ ಕ್ರೈಸ್ತರು ಮತ್ತು ದಕ್ಷಿಣ ಮಹಾರಾಷ್ಟ್ರ ಕೊಂಕಣಿ ಕ್ರೈಸ್ತರು ಆಚರಿಸುವ ಮೋಂತಿ ಹಬ್ಬದ ಪದ್ಧತಿಯಲ್ಲಿ ಹೆಚ್ಚಿನ ವ್ಯತ್ಯಾಸ ಕಾಣುವುದಿಲ್ಲ. ಈ ಎರಡು ವಿಭಿನ್ನ ಕೊಂಕಣಿ ಸಮುದಾಯಗಳಲ್ಲೂ ಇಗರ್ಜಿಗಳಲ್ಲಿ ನವಜಾತ ಮರಿಯಮ್ಮನವರಿಗೆ ಹೂವಿನ ಅಭಿಷೇಕ, ಹೊಸ ತೆನೆಯ ಪವಿತ್ರೀಕರಣ ಮತ್ತು ಸಮರ್ಪನೆಯೊಂದಿಗೆ ಮನೆಯಲ್ಲಿ ಪೂರ್ವಿಕರನ್ನು ನೆನೆದು ಕಳೆದು ಹೋದವರ ಬಗ್ಗೆ ಪ್ರಾರ್ಥಣೆ, ಕುಟುಂಬ ಸಮೇತ ಹೊಸ ತೆನೆ ಸೇರಿಸಲ್ಪಟ್ಟ ಸಸ್ಯಾಹಾರಿ ಭೋಜನ ಸೇವನೆಯು ಹಬ್ಬದ ಪ್ರಮುಖ ಭಾಗ. ಆದರೆ ಅಭ್ಯಾಸ ಬಲದಿಂದಲೊ ಅಥವಾ ಬಾಯಿಯ ಚಪಲದಿಂದಲೋ ಕೆಲವು ಕುಟುಂಬಗಳಲ್ಲಿರುವ ಮೀನಿನ ಉಪಯೋಗವನ್ನು ಅಲ್ಲಗಳೆಯಲಾಗದು. ನಮ್ಮ ಮಂಗಳೂರು ಕ್ರೈಸ್ತರು ನವಜಾತ ಮರಿಯಮ್ಮನವರ (ಮರಿಯಾ ಬೊಂಬಿನಾ) ವಿಗ್ರಹವನ್ನು ಆರಾಧಣೆಗೆ ಬಳಸಿದರೆ ಮಹಾರಾಷ್ಟ್ರದ ಕಡೆಯವರು ಬಳಸುವುದು ನವಜಾತೆಯನ್ನು ಹಿಡಿದಿರುವ ಮರಿಯಮ್ಮನವರ (ಮೌಂಟ್ ಮೇರಿ) ವಿಗ್ರಹ.

ಮೋಂತಿ ಹಬ್ಬದ ಮೂಲವು ನಮ್ಮ ಪೂರ್ವಿಕರ ಗೋವಾದಿಂದ ಆರಂಭವಾಗುತ್ತದೆ. ಮೂಲತಃ ಅವರು ಹಿಂದುಗಳಾದುದರಿಂದ ಹತ್ತು ಹಲವು ಹಬ್ಬಗಳ ಆಚರಣೆ ಅವರಲ್ಲಿತ್ತು. ಅದರಲ್ಲಿ ಬೇಳೆದ ಹೊಸ ಫಸಲನ್ನು ದೇವರಿಗೆ ಸಮರ್ಪಿಸಿ ಹೊಸ ತೆನೆಯನ್ನು ಮನೆಗೆ ತಂದು ಬೆಳೆದ ಹೊಸ ತರಕಾರಿಗಳಿಂದ ವಿವಿಧ ಭಕ್ಷಗಳನ್ನು ತಯಾರಿಸಿ ಕುಟುಂಬದ ಎಲ್ಲರ ಸಹಬೋಜನವು ಒಂದಾಗಿತ್ತು. ಅದನ್ನವರು ಒಂಬತ್ತು ದಿನಗಳ ಉತ್ಸವವಾಗಿ ಆಚರಿಸುತ್ತಿದ್ದರು.

1510ರಲ್ಲಿ ಪೋರ್ಚುಗೀಸರು ಗೋವಾದಲ್ಲಿ ರಾಜ್ಯಭಾರ ಆರಂಭಿಸಿದ ನಂತರ ಅಲ್ಲಿಯ ಜನರನ್ನು ಸಾರ್ವತ್ರಿಕವಾಗಿ ಮತಾಂತರಿಸಲು ಆರಂಭಿಸಿದರು. ಆದರೆ ಹೀಗೆ ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದವರನ್ನು ತಮ್ಮ ಸ್ಥಳೀಯ ಸಂಸ್ಕೃತಿಯ ರೀತಿ ನೀತಿಗಳಿಂದ ಮತ್ತು ಆಚರಿಸುತ್ತಿದ್ದ ಹಬ್ಬಗಳಿಂದ ಬೇರ್ಪಡಿಸಲು ಸಾದ್ಯವಾಗಲಿಲ್ಲ. ಆವಾಗಿನ ಪೋರ್ಚುಗೀಸ್ ಪಾದ್ರಿಗಳು ಕಂಡುಕೊಂಡ ಉಪಾಯದಂತೆ ಕೆಲವು ಹಬ್ಬ ಹರಿದಿನಗಳ ಆಚರಣೆಗಳನ್ನು ಕ್ರೈಸ್ತ ಸಂತರ ಮತ್ತು ಮರಿಯಮ್ಮನವರ ಹಬ್ಬಗಳಿಗೆ ಗೌರವಪೂರ್ವಕವಾಗಿ ಸಮೀಕರಣಗೊಳಿಸಲಾಯಿತು. ಹಾಗೆ ಪ್ರಸ್ತುತ ನಾವು ಆಚರಿಸುತ್ತಿರುವ ಕೆಲವು ಆಚಾರ ವಿಚಾರಗಳ ರೀತಿಗಳಿಗೆ ಮತ್ತು ನಮ್ಮ ಗೌಡ ಸಾರಸ್ವತ ಬ್ರಾಹ್ಮಣ ಭಾಂದವರು ಆಚರಿಸುತ್ತಿರುವ ರೀತಿ ನೀತಿಗಳಿಗೆ ಸಾಮ್ಯತೆ ಕಾಣುತ್ತೇವೆ. ಉದಾಃಹರಣೆಗೆ ಮೋಂತಿ ಹಬ್ಬದ ಹೊಸ ತೆನೆ, ಕಬ್ಬು, ಪಿತೃಗಳ ಹಬ್ಬದಂದು ದೋಸೆಯ ಸಮರ್ಪಣೆ, ಇನ್ನೊಂದು ಹಬ್ಬಕ್ಕೆ ತೆಂಗಿನ ಹುರಿ ಬೆಲ್ಲದ ಕಡುಬು ಇತ್ಯಾದಿಗಳು.

ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದ ಹೊಸ ಕ್ರೈಸ್ತರನ್ನು ಅವರ ಪೂರ್ವಾಶ್ರಮದ ಸಂಪ್ರದಾಯಗಳಿಂದ ಬೇರ್ಪಡಿಸಲು ಮತ್ತು ಅವರು ನಂಬಿಕೊಂಡಿದ್ದ ಪೋರ್ಚುಗೀಸ್ ಪಾದ್ರಿಗಳ ಪ್ರಕಾರದ ಮೂಢನಂಬಿಕೆಗಳಿಂದ ಪೂರ್ತಿಯಾಗಿ ದೂರವಿರಿಸಲು ಪೋರ್ಚುಗೀಸ್ ಪಾದ್ರಿಗಳಿಗೆ ತುಂಬಾ ಕಷ್ಟವಾಯ್ತು. ಹೇಗಾದರೂ ಮಾಡಿ ಮತಾಂತರಿಸಿದವರನ್ನು ಕ್ರೈಸ್ತ ಸಿದ್ಧಾಂತಗಳಲ್ಲಿ ದೃಢ ವಿಶ್ವಾಸ ಮೂಡುವಂತೆ ಮಾಡುವ ಉದ್ಧೇಶದಿಂದ 1560ರಲ್ಲಿ ಗೋವಾ ಇನ್‍ಕ್ವಿಜಿಶನ್ ಕಾನೂನನ್ನು ಪೋರ್ಚುಗೀಸರು ಜಾರಿಗೆ ತಂದರು. 1774 – 1778ರ ಕಿರು ಅವಧಿ ಬಿಟ್ಟಲ್ಲಿ ಈ ಕರಾಳ ಕಾನೂನು 1812ರ ವರೆಗೂ ಜಾರಿಯಲ್ಲಿತ್ತು. ಗೋವಾದಲ್ಲಿ ಸಾಕಷ್ಟು ಪೋರ್ಚುಗೀಸ್ ಪಾದ್ರಿಗಳು ಸೇವೆಯಲ್ಲಿದ್ದರು. ಅವರಿಗೆ ಗೋವನರು ಮಾತನಾಡುತ್ತಿದ್ದ ಕೊಂಕಣಿ ಭಾಷೆ ಅರ್ಥವಾಗುತ್ತಿರಲಿಲ್ಲ. ಹಬ್ಬಗಳ ಆಚರಣೆಯಲ್ಲಿದ್ದ ಸ್ಥಳೀಯ ಸಂಸ್ಕೃತಿ, ತೆನೆ ಸಮರ್ಪಣೆ ಮತ್ತಿತರ ಆಚರಣೆಗಳನ್ನು ಅವರು ಮೂಢನಂಬುಗೆಯೆಂದು ತಿಳಿದರು. ತಮಗೆ ತಿಳಿಯುವ ಪೋರ್ಚುಗೀಸ್ ಭಾಷೆಯಲ್ಲೆ ಜನರು ಮಾತನಾಡಬೇಕೆಂದು 1684ರಲ್ಲಿ ಕೊಂಕಣಿ ಭಾಷೆ ನಿಶೇಧ ಮತ್ತು ಪೋರ್ಗೀಸ್ ಭಾಷೆ ಜಾರಿ ಆದ್ಯಾದೇಶವನ್ನು ಜಾರಿಗೆ ತರುವ ಮೂಲಕ ಗೋವನರ ದೇಶೀಯ ಆಚಾರ ವಿಚಾರ ಸಂಪ್ರದಾಯಗಳಿಗೆ ತಿಲಾಂಜಲಿ ನೀಡಲಾಯ್ತು.

ಗೋವನರು ಕ್ರೈಸ್ತ ಶುಭವಾರ್ತೆಗಳಿಂದ ಆಕರ್ಶಿತರಾಗಿ ಮತಾಂತರವಾಗುವುದು ಸುಲಭವಾದರೂ ತಮ್ಮ ಸಾಂಸ್ಕೃತಿಕ ರೀತಿ ನೀತಿ, ಆಚಾರ ವಿಚಾರ ಮತ್ತು ಮುಖ್ಯವಾಗಿ ತಮ್ಮ ಮಾತೃ ಭಾಷೆ ಕೊಂಕಣಿಯನ್ನು ಬಿಟ್ಟು ಕೊಡುವುದು ಅಷ್ಟು ಸುಲಭವಾಗಿರಲಿಲ್ಲ. ಸಂಪ್ರದಾಯವನ್ನು ಮುಂದುವರಿಸಿದ ಗೋವನ್ ಕ್ರೈಸ್ತರನ್ನು ಇನ್‍ಕ್ವಿಜಿಶನ್ ಕಾನೂನಿನಂತೆ ಮೂಢನಂಬುಗೆ ಆಚರಣೆಯ ಅಪಾದನೆ ಹೊರಿಸಿ ಕಠಿಣ ಶಿಕ್ಷೆ ವಿಧಿಸಲಾಯ್ತು. ಆಗ ಅವರಿಗೆ ತಮ್ಮ ಭಾಷೆ, ಸಂಸ್ಕೃತಿ ಉಳಿಸಲು ಉಳಿದದ್ದು ಒಂದೇ ದಾರಿ; ಅದು ಗೋವಾದಿಂದ ಪಲಾಯನ.

ಹಾಗೆ ಪಲಾಯನಗೈದ ಬಹಳಷ್ಟು ಜನ ನಮ್ಮ ಪೂರ್ವಜರು ಸಮುದ್ರ ಮಾರ್ಗವಾಗಿ ದಕ್ಷಿಣಕ್ಕೆ ಸಾಗಿ ಬಂದು ಕಾರವಾರ, ಕುಂದಾಪುರ, ಉಡುಪಿ, ಮಂಗಳೂರು ಮಾತ್ರವಲ್ಲದೆ ಕೆಲವರು ದೂರದ ಕೊಚ್ಚಿವರೆಗೂ ತಲಪಿದರು. ಉತ್ತರದತ್ತ ಓಡಿದವರು ಕುಡಾಲ್, ಸಾವಂತವಾಡಿ ಮತ್ತು ರತ್ನಗಿರಿಯಲ್ಲಿ ತಮ್ಮ ವಾಸ್ತವ್ಯ ಕಂಡುಕೊಂಡರು. ಪರ ಊರಿನಲ್ಲಿ ವಾಸ್ತವ್ಯ ಕಂಡು ನೆಲೆಯಾದವರು ಪಡೆದುಕೊಂಡ ಕ್ರೈಸ್ತ ಮತವನ್ನೂ ಪಾಲಿಸಿದರು, ಜತೆ ಜತೆಗೆ ಉಳಿಸಿಕೊಂಡಷ್ಟು ಭಾಷೆ, ಸಂಸ್ಕೃತಿಯನ್ನೂ ಮುಂದುವರಿಸಿದರು.

ಮುಂಬಾಯಿಯ ಬೆಂಡ್ರಾದಲ್ಲಿ ಮೌಂಟ್ ಮೇರಿ ಹಬ್ಬದ ಉತ್ಸವವನ್ನು ಮೋಂತಿ ಹಬ್ಬದ ಮುಂದಿನ ಭಾನುವಾರದಿಂದ ಎಂಟು ದಿವಸ ಅದ್ದೂರಿಯಿಂದ ಆಚರಿಸಲಾಗುತ್ತದೆ. ಈ ಉತ್ಸವವು ಜೆಸ್ಸುಯಿಟ್ ಮೇಳದ ಪಾದ್ರಿಗಳಿಂದ 1556ರಲ್ಲಿ ಆರಂಭವಾಗಿತ್ತು. ಬೆಂಡ್ರಾದ ಗುಡ್ಡದ ತುದಿಯಲ್ಲಿ ಈ ಕ್ರೈಸ್ತ ದೇವಾಲಯವಿರುವುದರಿಂದ ಇಲ್ಲಿ ಆರಾಧಿಸಲ್ಪಡುವ ಮರಿಯಮ್ಮನವರಿಗೆ  “ಮೌಂಟ್ ಮೇರಿ” ಎಂದು (ಬೆಟ್ಟದ ಮರಿಯಮ್ಮ) ಶುಭನಾಮವಿಟ್ಟು ಕರೆಯಲಾರಂಬಿಸಿದರು. ಮುಂದೆ ಅದೊಂದು ಪುಣ್ಯ ಕ್ಷೇತ್ರವಾಗಿ ಸಾವಿರಾರು ಭಕ್ತರ ಆಕರ್ಶಣೆಗೆ ಕಾರಣವಾಯ್ತು. ಆವಾಗ ಮುಂಬಾಯಿಯಿಂದ ಗೋವಾಕ್ಕೆ ಉತ್ತಮ ಸಂಪರ್ಕವಿದ್ದುದರಿಂದ ಗೋವಾದ ಪೋರ್ಚುಗೀಸ್ ಪಾದ್ರಿಗಳು ಈ ಹಬ್ಬವನ್ನು ಹೊಸ ಬೆಳೆಯ ಹೊಸ ಫಸಲಿನ ಹಬ್ಬದೊಂದಿಗೆ ಸಂಯೋಜಿಸಿದರು. ಇಂಗ್ಲಿಷ್ ಭಾಷೆಯ “ಮೌಂಟ್” ಪದವು ಪೋರ್ಚುಗೀಸ್ ಭಾಷೆಯಲ್ಲಿ “ಮೋಂತೆ” ಪದವಾಗುತ್ತದೆ. ಅದನ್ನೇ ಕೊಂಕಣಿ ಭಾಷೆಗೆ “ಮೋಂತಿ” ಎಂದು ಅನ್ವಯಿಸಲಾಯ್ತು; ಹಾಗೆ ಕೋಕಣಿಯಲ್ಲಿ ಈ ಹಬ್ಬಕ್ಕೆ “ಮೋಂತಿ ಸಾಯ್ಬಿಣಿಚೆಂ ಫೆಸ್ತ್” (ಮೋಂತಿ ಮಾತೆಯ ಹಬ್ಬ) ಎಂದು ಕರೆಯಲಾರಂಭವಾಯ್ತು. ಹೊಸ ಬೆಳೆಯ ಉತ್ಸವವು ಒಂಬತ್ತು ದಿವಸಗಳದ್ದಾದುದರಿಂದ ಒಂಬತ್ತು ಮೋಂತಿ ಹಬ್ಬದ ಪೂರ್ವಭಾವಿಯಾಗಿ “ನೊವೆನಾ” (ಒಂಬತ್ತು ದಿವಸದ ಆರಾಧಣಾ ವಿಧಿ) ಆರಂಭಿಸಲಾಯ್ತು. ಹೊಸ ಬೆಳೆಯ ಹಬ್ಬವು ನಮ್ಮ ಪೂರ್ವಜರು ಆಚರಿಸುತ್ತಿದ್ದ ಹಬ್ಬವಾದುದರಿಂದ ಕೊಂಕಣಿ ಕ್ರೈಸ್ತರು ಸಂಯೋಜಿತಗೊಂಡ ಮೋಂತಿ ಮಾತೆಯ ಹಬ್ಬವನ್ನು ಹುರುಪಿನಿಂದ ಅದ್ದೂರಿಯಾಗಿ ಆಚರಿಸಲಾರಂಭಿಸಿದರು.

ಕುಡಾಲ್, ರತ್ನಗಿರಿಯಲ್ಲಿರುವ ಕೊಂಕಣಿ ಕ್ರೈಸ್ತರು ಈಗಲೂ ಈ ಹಬ್ಬವನ್ನು ಮೋಂತಿ ಮಾತೆಯ ಹಬ್ಬವೆಂದೇ ಆಚರಿಸುತ್ತಾರೆ. ಪುಷ್ಪಗಳನ್ನು ಮಾತೆಗೆ ಸಮರ್ಪಿಸುವ ವಿಧಾನ, ಹೊಸ ಬೆಳೆಯ ಫಸಲನ್ನು ದೇವರಿಗೆ ಸಮರ್ಪಿಸಿ ಆಶೀರ್ವದಿಸುವುದು, ಪೂರ್ವಜರನ್ನು ನೆನೆದು ಹೊಸ ಬೆಳೆಯನ್ನು ಕುಟುಂಬದೊಂದಿಗೆ ಸಹಭೋಜನದಲ್ಲಿ ಸೇವನೆ ಇವೆಲ್ಲಾ ನಾವು ಮಂಗಳೂರು ಕೊಂಕಣಿ ಕೆಥೋಲಿಕರು ಆಚರಿಸುವ ಪದ್ಧತಿಗೆ ಬಹಳ ಹತ್ತಿರದ ಸಾಮ್ಯತೆ ಇದೆ. ಮೋಂತಿ ಹಬ್ಬದಂದು ಹೊಸ ಬೆಳೆಯ ಸೇವನೆಗೆ ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಪದ್ಧತಿಗಳನ್ನು ಅನುಸರಿಸುತ್ತಾರೆ. ಹೊಸ ಬೆಳೆಯನ್ನು ಸಾಂಕೇತಿಕವಾಗಿ ಭತ್ತದ ತೆನೆಯ ರೂಪದಲ್ಲಿ ದೇವರಿಗೆ ಸಮರ್ಪಿಸಿ, ಕ್ರೈಸ್ತ ವಿಧಿಗಳ ಪ್ರಕಾರ ಆಶೀರ್ವಧಿಸಿ ಪವಿತ್ರೀಕರಣಗೊಳಿಸುವುದು ಮತ್ತು ಭಕ್ತ ಜನರೆಲ್ಲರಿಗೆ ಹಂಚುವುದೆಲ್ಲ ಕ್ರೈಸ್ತ ದೇವಾಲಯಗಳಲ್ಲಿ ನಡೆಯುತ್ತದೆ. ತೆನೆಯಲ್ಲಿರುವ ಭತ್ತದ ಹೊಟ್ಟು ಪ್ರತ್ಯೇಕಿಸಿದ ಅಕ್ಕಿಯನ್ನು ಮನೆಯಲ್ಲಿ ಪರಿವಾರದ ಸದಸ್ಯರು ಹಾಲಿನೊಂದಿಗೆ, ತೆಂಗಿನ ಹಾಲಿನೊಂದಿಗೆ, ಪಾಯಸದೊಂದಿಗೆ ಮತ್ತು ಬೆಲ್ಲ ಅವಲಕ್ಕಿಯೊಂದಿಗೆ ಸೇವಿಸುವ ವಿಧಾನಗಳಿವೆ. ಮಹಾರಾಷ್ಟ್ರದ ಕುಡಾಲ್ ಪರಿಸರದಲ್ಲಿ ಬೆಲ್ಲ ಅವಲಕ್ಕಿಯೊಂದಿಗೆ ಹೊಸ ತೆನೆಯ ಅಕ್ಕಿಯನ್ನು ಬೆರೆಸಿ ನೆರೆಕೆರೆಯವರೊಂದಿಗೆ ಹಂಚಿ ಸೇವಿಸುವ ಪದ್ಧತಿ ಇದೆ. ಅಲ್ಲಿಗೂ ನಮ್ಮ ಇಲ್ಲಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ ಅಲ್ಲಿ ಅವರು ನಮಿಸುಸುವುದು “ಮೌಂಟ್ ಮೇರಿ” ವಿಗ್ರಹಕ್ಕಾದರೆ ಇಲ್ಲಿ ನಾವು ನಮಿಸುವುದು ನವಜಾತೆ ಮರಿಯಮ್ಮನವರ “ಮರಿಯಾ ಬೊಂಬಿನಾ” ವಿಗ್ರಹಕ್ಕೆ.

ಹಾಗಾದರೆ ನಮ್ಮಲ್ಲಿ ಮೋಂತಿ ಮಾತೆಯ ಹಬ್ಬಕ್ಕೆ ನವಜಾತೆ ಮರಿಯಮ್ಮನವರ ವಿಗ್ರಹದ ಪ್ರವೇಶ ಹೇಗಾಯ್ತು?

ನಮ್ಮ ಕೊಂಕಣಿ ಕೆಥೋಲಿಕ್ ಕ್ರೈಸ್ತರ ಮೋಂತಿ ಮಾತೆಯ ಹಬ್ಬದ ಆಚರಣೆಯಲ್ಲಿ ರೂಡಿಯಲ್ಲಿರುವ ನವಜಾತೆ ಮರಿಯಮ್ಮನವರ ವಿಗ್ರಹಕ್ಕೆ ಮರಿಯಾ ಬೊಂಬಿನಾ ಅನ್ನುವರು. ಆ ವಿಗ್ರಹವನ್ನು ಮೊದಲಿಗೆ 1735ರಲ್ಲಿ ಇಟೆಲಿ ದೇಶದ ಟೋಡಿಯಲ್ಲಿರುವ ಫ್ರಾನ್ಸಿಸ್ಕನ್ ಕನ್ಯಾಸ್ತ್ರೀಯರ ಸಂಘಟನೆಯ ಮುಖ್ಯಸ್ಥೆಯಾಗಿದ್ದ ಸಿಸ್ಟರ್ ಇಜಬೆಲ್ಲಾರವರು ಮೇಣದಲ್ಲಿ ತಯಾರಿಸಿದ್ದಾಗಿತ್ತು. ಅದನ್ನು ವರ್ಷಕ್ಕೊಮ್ಮೆ ಸಪ್ಟೆಂಬರ್ ಎಂಟರಂದು ಮಾತ್ರ ಭಕ್ತರ ದರ್ಷನಕ್ಕಿಡಲಾಗುತ್ತಿತ್ತು ಮತ್ತು ಇದರಿಂದ ಸಾಕಷ್ಟು ಭಕ್ತರಿಗೆ ಅವರ ಇಷ್ಟಸಿದ್ಧಿ ಪ್ರಾಪ್ತಿಯಾದ ಸಾಕ್ಷಿಯ ಬಗ್ಗೆ ಪ್ರಚಾರವಾಯ್ತು. ಹಾಗೆ ಪ್ರಪಂಚದಲ್ಲೆಡೆ ಮರಿಯಾ ಬೊಂಬಿನಾ ವಿಗ್ರಹವು ಪವಾಡದ ವಿಗ್ರಹವೆಂದೆ ಪ್ರಸಿದ್ಧಿ ಪಡೆಯಿತು. ಈ ವಿಗ್ರಹವನ್ನು 1856ರಲ್ಲಿ ಚ್ಯಾರಿಟಿ ಕನ್ಯಾಸ್ತ್ರೀಯರ ಮಿಲನ್ ನಗರದಲ್ಲಿರುವ ಮದರ್ ಹೌಸಿಗೆ ಸ್ಥಳಾಂತರಿಸಲಾಯ್ತು. ಇಂದಿಗೂ ಮರಿಯಾ ಬೊಂಬಿನಾ ಮೂಲ ಪ್ರತಿಮೆಯು ಚ್ಯಾರಿಟಿ ಕನ್ಯಾಸ್ತ್ರೀಯರ ಸುಪರ್ಧಿಯಲ್ಲಿದೆ. ಇದರ ಬಗ್ಗೆ ಸವಿಸ್ತಾರ ವಿವರಗಳು www.mariabambina.org ಅಂತರ್ಜಾಲದಲ್ಲಿ ದೊರೆಯುತ್ತವೆ.

1568ರಲ್ಲಿ ಫ್ರಾನ್ಸಿಸ್ಕನ್ ಪಾದ್ರಿಗಳು ಅರ್ಕುಳದಲ್ಲಿ ಸಂತ ಫ್ರಾನ್ಸಿಸ್ ಆಸಿಸಿಯವರ ದೇವಾಲಯವನ್ನು ನಿರ್ಮಿಸಿದರು. ಮಂಗಳೂರು ಪರಿಸರದಲ್ಲಿ ಆರಂಭಿಸಿದ ಮೂರು ಕ್ರೈಸ್ತ ದೇವಾಲಯಗಳ ಪೈಕಿ ಇದು ಒಂದಾಗಿದೆ. ಇಲ್ಲಿರುವ ನದಿಯನ್ನು ಉಪಯೋಗಿಸಿ ಪೋರ್ಚುಗೀಸರು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಕಾರಣ ಫರಂಗಿಯವರು ವ್ಯಾಪಾರ ಮಾಡುವ ಇಲ್ಲಿಯ ಸ್ಥಳವು ಫರಂಗಿಪೇಟೆಯಾಯ್ತೆಂದು ಪ್ರತೀತಿ ಇದೆ.

1759 – 1762 ವರ್ಷಗಳ ಅವಧಿಯಲ್ಲಿ ಗಂಗೊಳ್ಳಿಯಲ್ಲಿ ಧಾರ್ಮಿಕ ಸೇವಾನಿರತ ಫಾ| ಜೋಕಿಮ್ ಮಿರಾಂದಾರವರು ಮುಂದೆ ಪರಂಗಿಪೇಟೆಯ ಕ್ರೈಸ್ತ ದೇವಾಲಯಕ್ಕೆ ವರ್ಗವಾಗಿ ಬಂದು 1763ರಲ್ಲಿ ಪಾದ್ರಿಯಾಗುವವರಿಗೆ ಧಾರ್ಮಿಕ ಶಿಕ್ಷಣ ಕೊಡುವ “ಮೊಂತೆ ಮರಿಯಾನಾ” ಸೆಮಿನರಿಯನ್ನು ಆರಂಭಿಸಿದರು. ಅವರೋರ್ವ ಜನಪ್ರಿಯ ಕ್ರೈಸ್ತ ಪಾದ್ರಿಯಾಗಿದ್ದರು. ಆ ವೇಳೆ ಇಟೆಲಿಯಲ್ಲಿ ಫ್ರಾನ್ಸಿಸ್ಕನ್ ಕನ್ಯಾಸ್ತ್ರೀಯಿಂದ ನಿರ್ಮಿಸಲ್ಪಟ್ಟ ನವಜಾತೆ ಮರಿಯಮ್ಮನವರ (ಮರಿಯಾ ಬೊಂಬಿನಾ) ವಿಗ್ರಹದ ಪ್ರಭಾವದಿಂದಾಗಿ ಆ ವಿಗ್ರಹದತ್ತ ತುಂಬಾ ಆಕರ್ಶಿತರಾದರು. ಅದೇ ಪ್ರೇರೇಪಣೆಯಿಂದಾಗಿ ಅವರು ಮೋಂತಿ ಮಾತೆಯ ಹಬ್ಬಕ್ಕೆ ನವಜಾತೆ ಮರಿಯಮ್ಮನವರ ವಿಗ್ರಹವನ್ನು ಪರಿಚಯಿಸಿ ಹಬ್ಬದ ಆಚರಣೆಗೆ ಹೊಸ ಹುರುಪು ತಂದರು. ಆದುದರಿಂದ ಮೋಂತಿ ಮಾತೆಯ ಹಬ್ಬದ ಆಚರಣೆಯನ್ನು ಫಾ| ಜೋಕಿಮ್ ಮಿರಾಂದಾರವರು ಆರಂಭಿಸಿದರೆಂಬ ತಪ್ಪು ಅಭಿಪ್ರಾಯವು ಪ್ರಚಲಿತವಿದೆ. ಒಂದು ವೇಳೆ ಅವರಿಂದ ಫರಂಗಿಪೇಟೆಯಲ್ಲೆ ಈ ಹಬ್ಬದ ಆಚರಣೆಯು ಆರಂಭವಾಗಿದ್ದಲ್ಲಿ ದೂರದ ಸಾವಂತವಾಡಿ, ಕುಡಾಲ್, ರತ್ನಗಿರಿಯಲ್ಲಿ ಮೋಂತಿ ಹಬ್ಬವಿರುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಕಂಡಿತವಾಗಿಯೂ ಮೋಂತಿ ಮಾತೆಯ ಹಬ್ಬದ ಆರಂಭವಾದುದು ಗೋವಾದಿಂದ ಆದರೆ ಚಾರಿತ್ರಿಕ ಕಾರಣಗಳಿಂದಾಗಿ ಗೋವಾದಲ್ಲಿ ಈ ಹಬ್ಬದ ಆಚರಣೆಯು ಸಾರ್ವತ್ರಿಕವಾಗಿ ಜನಪ್ರಿಯವಾಗಲಿಲ್ಲ.

ಪಾಶ್ಚಾತ್ಯ ಸಂಸ್ಕೃತಿಗೆ, ಪಾಶ್ಚಾತ್ಯ ಆಚರಣೆಗಳಿಗೆ ನಾವೆಲ್ಲಾ ಮಾರು ಹೋಗಿದ್ದೇವೆ. ನಮ್ಮ ಪೂರ್ವಜರ ತ್ಯಾಗ, ಅವರು ಶತಮಾನಗಳಿಂದ ರಕ್ಷಿಸಿಕೊಂಡು ಬಂದ ರೀತಿ ನೀತಿ, ಆಚಾರ ವಿಚಾರಗಳಿಗೆ ಎಂದೋ ಎಳ್ಳು ನೀರು ಬಿಟ್ಟಿದ್ದೇವೆ. ಆದರೂ ಎಲ್ಲಾ ಗತ ಸಂಗತಿಗಳ ಇತಿಹಾಸವನ್ನು ನೆನಪಿಸಲು ನಮಗಿರುವುದು ಒಂದೇ ಹಬ್ಬ; ಅದು ಮೋಂತಿ ಮಾತೆಯ ಹಬ್ಬ.

ಸರ್ವರಿಗೂ ಮೋಂತಿ ಮಾತೆಯ ಹಬ್ಬದ ಶುಭಾಶಯಗಳು.

ಅಲ್ಫೋನ್ಸ್, ಪಾಂಗ್ಳಾ (ಮೂಲ ಲೇಖನ: ಆನ್ಸಿ, ಪಾಲಡ್ಕಾ)

ಕನ್ನಡಕ್ಕೆ: ಸ್ಟೀವನ್ ಜೆ ಆಳ್ವ

Leave a Reply

Your email address will not be published. Required fields are marked *

error: Content is protected !!